Saturday, October 23, 2021

ಭಾವಯಾನ

 


ಬೆಳಗ್ಗೆ...ಬೇಗ ಎದ್ದು ಶಾಲೆಗೆ ಹೊರಡ ಬೇಕಿದ್ದ ಲಕ್ಷ್ಮಿ ಯಾಕೋ....ಇನ್ನು ಎದ್ದಿರಲಿಲ್ಲ...ಹಾಸಿಗೆಯಲ್ಲಿ ಹೊರಳಾಡಿ ಕೊರಗುತಿದ್ದಳು...

ಅಷ್ಟೊತ್ತಿಗಾಗಲೇ ಅವರ ಅಮ್ಮ....

ಲಕ್ಕಿ....ಲಕ್ಕಿ ....ಹೊತ್ತು ನೋಡಲ್ಲಿ.....ಶಾಲೆಗ್ ಹೋಗಲ್ವ ಮರಿ......ಬೇಗ ಎದ್ದೇಳು... ಬೇಗ.....ಎನ್ನುತ್ತಲೇ....ಹತ್ತಿರ ಬಂದವರೆ..ತಟ್ಟಿ ಎಬ್ಬಿಸಲು ಹೋದರು .....

ಮೈ ಬಿಸಿ ಇದ್ದಂತೆ ಕಂಡಿತು ಕೂಡಲೆ....ಲಕ್ಕಿ ಎದ್ದೇಳು ಮರಿ ಎಂದು ಕುತ್ತಿಗೆ ಬಾಗಕ್ಕೆ ..ಹಣೆ ಗೆ ಕೈ ಇಟ್ಟು ನೋಡಿ....ಅಯ್ಯೋ ಏನೇ ಇದು ಪುಟ್ಟಕ್ಕ....ಜ್ವರ ಇಷ್ಟೊಂದು ಬೆಂದ್ ಹೋಗ್ತಿದಿಯಲೇ...

ಎನ್ನುತ್ತಾ ರೂಮಿಂದ ಗೊಣಗುತ್ತಲೇ....ಛತ್ರಿ ತಕ್ಕೊಂಡ್ ಹೋಗ್ ಅಂದ್ರೇ ಕೇಳಲ್ಲ....ತಗೋಂಡ್ ಹೋದ್ರೆ ಎಲ್ಲಿ ಬೇಕ್ ಅಲ್ಲೇ ಮರ್ತ್ಕೊಂಡ್ ಬಿಟ್ ಬರೋದ್....ನೋಡಿಲ್ಲಿ ಈಗ ಜ್ವರ....ಎಲ್ಲಾ ನನ್ ಕರ್ಮ....ಎಂದು ತಲೆ ಚೆಚ್ಚೆಕೊಳ್ಳುತ್ತ...ರೂಮಿಂದ ಹೊರ ಬಂದು....ಇನ್ನೇನು ಸೀದೋಗುತಿದ್ದ ರೊಟ್ಟಿ ಯನ್ನ.....ಓಡಿ ಹೋಗಿ ಮಗುಚಿದರು..


ಅದಾಗ ಮಳೆಗಾಲ....ಮಲೆನಾಡಲ್ಲಿ ಮಳೆಗಾಲದಲ್ಲಿ ಕೇಳಬೇಕೆ...ಬಿಡುವಿಲ್ಲದಂತೆ ಸುರಿಯುತ್ತದೆ....

ಬಿಡುವು ಕೊಟ್ಟಾಗ ಕೆಲಸ ಮಾಡಿಕೊಳ್ಳಬೇಕಷ್ಟೆ....

ಶಾಲೆ ಗಳು ಪ್ರಾರಂಭ ಆಗೋದು ಈ ಮಳೆಗಾಲದ ಸಮಯದಲ್ಲೇ....

ಲಕ್ಷ್ಮಿ  8 ನೇ ತರಗತಿ ಓದುತಿದ್ದ ಹುಡುಗಿ...ಹೈಸ್ಕೂಲ್ ಗೆ

ಕೆಂಚನಹಳ್ಳಿ....ಯಿಂದ ....ಮಾವಿನ ಕೊಪ್ಪಲಿನ ವರೆಗೂ ನೆಡೆದು ಸಾಗಬೇಕಿತ್ತು.. ಪ್ರಾಥಮಿಕ ಶಾಲೆ ಕೆಂಚನಹಳ್ಳಿಯಲ್ಲೇ....ಇದೆ.


ಎರಡು ವರ್ಷದಿಂದ ಹೀಗೊಂದು ಸುದ್ದಿ ಊರಿನಲ್ಲಿ ಹಬ್ಬಿತ್ತು ....

ಮಕ್ಕಳು ಕಳ್ರು....ಊರೋಳಗ್ ಬಂದಿದರಾಂತೆ....

ಕೆಂಪು ಕಾರಲ್ಲೇ ಬರ್ತಾರಂತೆ....

ಈ ಚಾಕಲೇಟ್ ....ಐಸ್ ಕ್ರೀಮ್ ಲಿ ಮೂರ್ಚೆ ಹೋಗೋ ಔಷಧಿ ಹಾಕಿ ಎತ್ಕಂಡ್ ಹೋಗ್ತಾರಂತೆ...ಕಿಡ್ನಿ ...ಹೃದಯ ಮಾರ್ಕೋತರಂತೆ.....


ಈ ಸುದ್ದಿ ಗೆ ಬೆದರಿದ ಎಷ್ಟೋ ಕುಟುಂಬ ಗಳು ತಮ್ಮ ತಮ್ಮ ಮಕ್ಕಳನ್ನ .. ಹೆಣ್ಣು ಮಕ್ಕಳನ್ನು ಹೈಸ್ಕೂಲ್ ಮೆಟ್ಟಿಲನ್ನೇ ಹತ್ತಿಸಲಿಲ್ಲ....ಗಂಡು ಮಕ್ಕಳನ್ನ ಕಳಿಸೋಕೆ ಭಯವೇನೊ ಇದ್ದರು ಗಂಡು ಕೂಸಲ್ಲವೇ ಗಟ್ಟಿಯಾಗಿರ್ತದೆ ...ಹೇಗಾದರು ಅನಾಹುತ ತಪ್ಪಿಸಿ ಕೊಳ್ತದೆ ಅನ್ನೋ ದೈರ್ಯದಲ್ಲಿ ಕಳುಹಿಸುತಿದ್ದರು...


ಆದರೆ ಲಕ್ಷ್ಮಿ ಅಪ್ಪ ಅಮ್ಮ ರಮೇಶಪ್ಪನದು ...ವಿಶಾಲಾಕ್ಷಮ್ಮ ನದು ಬಲು ಗಟ್ಟಿ ಮನಸ್ಸು....ಯಾರ್ ಎತ್ಕಂಡ್ ಹೋಗ್ತಾರೆ....ಎಲ್ಲೋ ಒಂದೆರಡ್ ಕಡೆ ಆಯ್ತು ಅಂತ ಎಲ್ಲಾ ಕಡೆ ಆಗುತ್ತಾ....

ಆ ಕಾರಣ ಕೊಟ್ಟು ಮಕ್ಳು ಓದದ್ನ ತಪ್ಪಿಸ್ ಬಾರ್ದು ನಾವೇ ದೈರ್ಯಗೆಟ್ಟರೆ ಹೆಂಗೆ.....ಎಂದು ಪ್ರಶ್ನೆ ಮಾಡಿ ನಿಲ್ಲೋ ವರ್ಚಸ್ಸು..

ಊರಿನವರು ಭಯ ಪಡಲು ಕಾರಣವಿತ್ತು...

   ಆಗಾಗಾ ಊರಿನಲ್ಲಿ ಕೆಂಪು ಕಾರುಗಳು ಓಡಾಡುತಿದ್ದವು....


ಹೀಗೇ ಒಂದು ದಿನ.....


ಊರಿಗೆ ಆಗಾಗಾ ಬೇಸಿಗೆಯಲ್ಲಿ ಬರುತಿದ್ದ....ಏಸ್ ಕ್ರೀಂ

ರಂಗಣ್ಣ ಒಮ್ಮೆ ಲಕ್ಷ್ಮಿ ಮನೆಯ ಪಕ್ಕದ ಮನೆಯ ತನ್ವಿತ 

3 ವರ್ಷದ ಹುಡುಗಿ....

ರಂಗಣ್ಣ ನ ಐಸ್ ಕ್ರೀಂ  ಸೈಕಲ್ ಟ್ರಿಣ್.... ಟ್ರೀಣ್ ... ಪಾಂಕು ....ಪಾಂಕು ಎಂದು ಶಬ್ಧ ಮಾಡಿದೊಡನೆ...ಓಡಿ ಬಂದು ಚಿಕ್ಕವಳಿದ್ದಾಗಿನಿಂದ ಐಕೀಮು ಐಕೀಮು ಎಂದು ಕುಣಿಯುತಿದ್ದಳು... ಮಕ್ಕಳಿಲ್ಲದ ರಂಗಣ್ಣ ನಿಗೂ ತನ್ವಿತಾಳನ್ನ ಕಂಡರೆ ಎಲ್ಲಿಲ್ಲದ...ಪ್ರೀತಿ


ಒಂದು ಬೇಸಿಗೆಯ ಮಧ್ಯಾಹ್ನ ತನ್ವಿತ ತನ್ನ ಮನೆ ಮುಂದಿನ  ಮಣ್ಣಿನ ರಾಶಿಯಲ್ಲಿ ಆಡುತಿದ್ದಳು....

 

ರಂಗಣ್ಣ ಅದೇ ಸಮಯಕ್ಕೆ...ತನ್ನ ಐಸ್ ಕ್ರೀಂ ಹೊತ್ತುತಂದ ಸೈಕಲ್ ಸದ್ದು ಮಾಡುತ್ತ....ಬಂದ...


    ಸದ್ದು ಕೇಳಿದೊಡನೆ....ರಂಗಣ್ಣನ ಬಳಿಗೆ ಓಡಿದಳು....

      ರಂಗು ಮಾಮ....ರಂಗು ಮಾಮ....ಐಸ್ ಕ್ರೀಮು...ಎಂದು ಕುಣಿಯುತಿತ್ತು...


ಅಪ್ಪ ಎಲ್ಲಿ ಹೋದ್ರು ಪುಟ್ಟಿ...ಎಂದು ಕೇಳುತ್ತಾ...

ಐಸ್ ಕ್ರೀಂ ತುಂಬಿ ಕೊಟ್ಟ .....

ಅಪ್ಪ....ಕೆಲಸಕ್ಕೆ ಹೋಗಿದೆ....

ಅಮ್ಮ...ಒಳಗಿದೆ...ಎಂದವಳೇ...ಐಸ್ ಕ್ರೀಂ ಸವಿಯುತ್ತ ಕುಣಿದಾಡುತಿತ್ತು....


ಇದಾದ ಅರ್ಧ ಗಂಟೆ ನಂತರ 


ತನ್ವಿತಾಳ ಅಮ್ಮ ದಾಕ್ಷಾಯಿಣಿ ..... ತನ್ವಿತಾ .... ತನ್ವಿತಾ....

ಎಲ್ಲಿದಿಯಾ ಪುಟ್ಟಿ...ಎಂದು ಕೂಗಿದರು ... ತನ್ವಿತಾ ಎಲ್ಲೂ ಕಾಣಲಿಲ್ಲ....ಗಾಬರಿಗೊಂಡ ಅಮ್ಮ....ಅಕ್ಕ ..ಪಕ್ಕದ ಮನೆಗೆ ಹೋಗಿರಬಹುದೆಂದು ಎಲ್ಲಾ ಕಡೆ ವಿಚಾರಿಸಿದರು.

  ಸಮೀಪದಲ್ಲೇ ಇದ್ದ ಅಂಗನವಾಡಿ ಕಡೆಯೂ ಹೋಗಿ ಬಂದರು....

 ಮೂರು ರಸ್ತೆ ಕೂಡುವ ಸರ್ಕಲ್ ಬಳಿಯೂ ಹೋಗಿ ಬಂದರು. ಇವರ ಗಾಬರಿ ಕಂಡು ....ಸರ್ಕಲ್ ನಲ್ಲೇ ಇರುವ ಅಂಗಡಿಯ ರಾಮಣ್ಣ ನ ಬಳಿ ಬಂದರು ....ಏನಾಯ್ತಮ್ಮ....ಯಾಕ್ ಹೀಗ್ ಗಾಬರಿ ಆಗಿದ್ದೀರಿ....

   ರಾಮಣ್ಣ  ಮಗಳು ಕಾಣಿಸ್ತಿಲ್ಲ....ಚಾಕಲೇಟು ಅದು ಇದು ಅಂತ ಏನಾದ್ರು ತಗೋಳಕ್ ಬಂದಿದ್ಲಾ....


ಇಲ್ಲ ಪುಟ್ಟಿ ಸರ್ಕಲ್ ವರ್ಗೂ ಒಬ್ಳೇ ಬರಲ್ಲ....ಯಾವತ್ತೂ ಬಂದೂ ಇಲ್ಲ....

ರಾಮಣ್ಣ ನ ಪತ್ನಿ ಓಡಿ ಬಂದು ವಿಷಯ ತಿಳಿದು....ಅಯ್ಯೋ ಎಲ್ಲೋಯ್ತಪ್ಪ ಈ ಪುಟ್ಟಕ್ಕ.......

 ಆಗ್ಲಿಂದಾ ಯಾವ್ದೋ ಕೆಂಪ್ ಕಾರು ಬೇರೆ ಮ್ಯಾಕೆ - ಕೆಳಿಕೆ ಓಡಾಡ್ತಿತ್ತು ಎಂದ ರಾಮಣ್ಣ  ಅಂಗಡಿಯಿಂದ ಅಂಗಳಕ್ಕೆ ಬಂದು ತಲೆ ಮೇಲೆ ಕೈ ಹೊತ್ತು.....ಎಲ್ಲೋಯ್ತಪ್ಪ ಈ ಮಗ...ಏನಾಯ್ತಪ್ಪ ಮಗೀಗೇ..ಎಂದು ಮನದಲ್ಲೇ ನೊಂದು ಗುನುಗಿದ.


ಕೆಂಪು ಕಾರು ಎಂದೊಡನೆ ತನ್ವಿತಾಳ ಅಮ್ಮ ದಾಕ್ಷಾಯಿಣಿ  ಮತ್ತಷ್ಟು ಗಾಬರಿಗೊಂಡರು....ಸರಸರನೆ ಮನೆಗೆ ಓಡಿ ...ಲ್ಯಾಂಡ್ ಲೈನ್ ನಿಂದ ಗಂಡನಿಗೆ ಫೋನ್ ಮಾಡಿದರು...

ಗಂಡನಿಗೆ ವಿಷಯ ತಿಳಿಸಿದಾಗ .....ಬೇಗ ಬರುವುದಾಗಿ ತಿಳಿಸಿದರು.


 ಮನಸ್ಸು ತಡೆಯದೇ ತಾಯಿ ಹೃದಯ ನನ್ ಮಗ ಎಲ್ಲೋಯ್ತೋ ಕಾಣುಸ್ತಿಲ್ವಲಪ್ಪ....ಅಯ್ಯೋ ದೇವ್ರೇ.....ಎಂದು ಬೀದಿಯ ಬದಿಯಲ್ಲಿ ಅರಚಿಕೊಳ್ಳುತಿದ್ದಳು...


ಎದುರು ಮನೆಯ ಸೀತಮ್ಮಜ್ಜಿ...ನಿದ್ದೆ ಹೋಗಿದ್ದು ...ಗಲಾಟೆ ಕೇಳಿಸಿ ಎಚ್ಚರ ಗೊಂಡು..ಹೊರಬಂತು..


 ಏನಾಯ್ತೇ.. ??


  ಅಜ್ಜಿ ನನ್ ಮಗು ಕಾಣುಸ್ತಿಲ್ಲ ಕಣಜ್ಜಿ....ಎಲ್ ಹೋಯ್ತೋ ಏನೋ....ಅಯ್ಯೋ...ದೇವ್ರೇ...ಎಂದು ಅಳಲು ಶುರು ಮಾಡಿದಳು...


ಸುಮ್ಕಿರೇ....ಅತ್ರೆ  ಮಗ ಬರುತ್ತಾ....ಹುಡ್ಕನ ಸುಮ್ಕಿರು....


ನಿನ್ ಗಂಡ ಬರ್ನಿಲ್ವ....?? ಎಂದೊಡನೆ...

 ರಸ್ತೆಯಲ್ಲಿ ಎಂ ಎ ಟಿ ಗಾಡಿ ಶಬ್ದವಾಯಿತು...


ಬಂದವನೆ..... ಏನಾಯ್ತೇ....ಎಲ್ ಹೊದ್ಲೇ ಪಾಪು..ಎಂದಾಗ....

 ನೆಡೆದದ್ದನೆಲ್ಲ...ದಾಕ್ಷಾಯಿಣಿ ಗಂಡನಿಗೆ ಹೇಳಿದಳು...


ರಂಗು ಅಣ್ಣ...ನ ಐಸ್ ಕ್ರೀಂ ಎಂದೊಡನೆ ...ದಾಕ್ಷಾಯಿಣಿ ಗಂಡ ಹೀಗೆಂದ


ದಾಕ್ಷಿ ನೆನಪಿದಿಯಾ !!

 ಹಿಂದೆ ಒಂದ್ಸಲ...

ರಂಗಣ್ಣ ಯಾವ ಜಲ್ಮದ ಶಾಪನೋ ನಂಗ್ ಮಕ್ಳಿಲ್ಲ.. ನಿಮ್ಮ ಪುಟ್ಟಿ ನ ನಂಗ್ ಕೊಡಿ ಸ್ವಾಮಿ ಸಾಕೋತಿನಿ  ಎಂದು ...ಅಯ್ಯೋ ಈ ಮುದ್ದು ಕಂದಮ್ಮ ನಾ ನೀವ್ ಕೊಡಿ ಅಂದ್ರೇ ಕೊಟ್ ಬಿಡ್ತೀರಾ.........ಹೋಗ್ಲಿ ಮನೆಗಾದ್ರು ಕರ್ಕೊಂಡ್ ಹೋಗಿ ನಮ್ಮನೆಯವ್ಳ್ ಜೊತೆ ಒಂದ್ ದಿನ ಆಟ ಆಡ್ಕೊಂಡ್ ಬರ್ತಾ ..ನಾಳೆ ವಾಪಾಸ್ ಕರ್ಕೊಂಡ್ ಬರ್ತಿನಿ ಎಂದಾಗ...


ನೀನು ಇಲ್ಲ ಕಳ್ಸಲ್ಲ.... ಎಂದಿದ್ದೆ....

 

ಸರಿ ಬಿಡಿ ಮಕ್ಳಿಲ್ಲದ ನಂಗೆ....ನಿಮ್ ಮಗಳಲ್ಲಿ ಮಕ್ಕಳ ಪ್ರೀತಿ ಕಾಣ್ತಿದಿನಿ....ಚೆನ್ನಾಗಿರು ಮಗಳೆ ಎಂದು ತನ್ವಿತಾಳಾ ಕೆನ್ನೆ ಸವರಿ....ಬೇಸರದಿಂದ ಹೋಗಿದ್ದ....


ಆ ನೆನಪಾಗಿ ...ಅದರಲ್ಲು ಸ್ವಲ್ಪ ಸಮಯದ ಮೊದಲು ರಂಗಣ್ಣ ನ ಐಸ್ ಕ್ರೀಂ ಗಾಡಿ ಬಂದು ಹೋದದ್ದರ ಬಗೆಗೆ ಅಕ್ಕ ಪಕ್ಕದ ಮನೆಯವರು ನೀಡಿದ ಮಾಹಿತಿ ಮೇರೆಗೆ ....ತಲೆಗೆ ಥಟ್ ಎಂದು ಏನೋ ಹೊಳೆದವನಂತೆ ...ತನ್ನ ಹೆಂಡತಿಗೆ

ಸರಿ ಮನೆ ಬಾಗಿಲಿಗೆ ಬೀಗ ಹಾಕಿ ಬ‍ಾ ...ಹಾಗೇ ಪಾಪು ದು ಒಂದು ಫೋಟೋ ನು ತಗೋ.


 ಸರಿ ರೀ...ಎಂದು ಒಳಗೆ ಹೋಗಿ ಹತ್ತು ನಿಮಿಷದೊಳಗೆ ಮನೆ ಬಾಗಿಲಿಗೆ ಬೀಗ ಜಡಿದು ಓಡುತ್ತಾ ಬಂದು ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಳು..


ರಂಗಣ್ಣ ನ ಮನೆ ಬೀದಿ ಚೆನ್ನಾಗಿ ಪರಿಚಯವಿದ್ದರಿಂದ ಅರ್ಧ ಗಂಟೆಯಲ್ಲಿ ರಂಗಣ್ಣ ನ ಮನೆಗೆ ತಲುಪಿದ್ದ....


ತನ್ವಿತಾ ...ರಂಗಣ್ಣ ಹಾಗೂ ಅವರ ಪತ್ನಿಯೊಡನೆ ಆಡುತ್ತ ನಲಿಯುತಿದ್ದದನ್ನು ರಂಗಣ್ಣನ ಮನೆಯ ಗೇಟಿನ ಬಳಿಯಿಂದಲೇ ಕಾಣಿಸಿತು ....

ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.. 

    ಆ ದೃಶ್ಯ  ಎಷ್ಟು ನೆಮ್ಮದಿ ನೀಡಿತ್ತೆಂದರೆ ತಕ್ಷಣಕ್ಕೆ ಒಳಗೆ ಹೋಗದೆ ...ಅಲ್ಲೇ ನಿಂತು ರಂಗಣ್ಣ  ಆವನ ಹೆಂಡತಿ ಶಾಂತಮ್ಮ ತನ್ವಿತಾಳೊಂದಿಗೆ ತಾವು ಮಗುವಾಗಿ ಆಡುತ್ತಿರೋದು ಕಂಡು ತನ್ವಿತಾಳ ಅಪ್ಪ  ಸದಾನಂದ ನಿಗೆ ತನ್ನ ತಂದೆ ತಾಯಿ ಬದುಕಿದ್ದರೆ ಮೊಮ್ಮಗಳೊಂದಿಗೆ ಹೀಗೇ ಆಟ ಆಡ್ತಿದ್ರು ಎಂದು ನೆನೆಸಿಕೊಂಡು ಕಣ್ಣಂಚಲಿ ಬಂದ ನೀರನ್ನು ವರೆಸಿಕೊಂಡ....ನಡಿ ದಾಕ್ಷು ಎಂದು ಗೇಟು ತೆಗೆದು ಒಳ ಹೋದರು ....ರಂಗಣ್ಣ ದಂಪತಿಗೆ ಇತ್ತ ಪರಿವೇ ಇಲ್ಲ...ಮಗುವಿನೊಂದಿಗೆ ಆಟದಲ್ಲೇ ಮಗ್ನರಾಗಿದ್ದರು...

ಸ್ವಲ್ಪ ಹೊತ್ತಿನ ನಂತರ ಸದಾನಂದ ನೇ...ರಂಗಣ್ಣ  ಎಂದಾಗ....ರಂಗ ಗಾಬರಿಯಿಂದ ಹಿಂದೆ ತಿರುಗಿ ನೋಡಿದರೆ  ತನ್ವಿತಾಳ ಅಪ್ಪ ಸದಾನಂದ ....ತಪ್ಪಿತಸ್ಥ ಭಾವದಿಂದ  ಸದಾನಂದನ  ಕಾಲು ಹಿಡಿಯಲು ಹೋದಾಗ ಸದಾನಂದ ...ಅಯ್ಯೋ ನೀವು ನನ್ನ ತಂದೆ ವಯಸ್ಸಿನವರು ಹೀಗೆ ಮಾಡೋದು ಸರಿ ಅಲ್ಲ....ಯಾಕ್ ಹೀಗ್ ಮಾಡ್ದೆ ರಂಗಣ್ಣ ಮಗು ನ ಹೇಳ್ದೇ ಕೇಳ್ದೇ ಹೀಗೆ ಕರ್ಕೊಂಡು ಬಂದಿದಿಯಲ್ಲ ತಪ್ಪಲ್ವ..

  

ತಪ್ಪೆ  ಸದಾನಂದು ...ನಂದು ತಪ್ಪೆ...

ನನ್ನ ಕರ್ಮ .... ಆ ದೇವರು ನಂಗೆ ಮಕ್ಳು ಕೊಡ್ನಿಲ್ಲ...ನಿನ್ ಮಗು ನೋಡಿ ನನಗೆ ಮಕ್ಕಳಿಲ್ಲ  ಅನ್ನೋ ಬೇಜಾರ್ ಕಳಿತಿದ್ದೇ...ಅಷ್ಟು ಪ್ರೀತಿ ಆ ಮಗೀನ ಕಂಡ್ರೆ...ಅದ್ನೆ ದಿನಾ ‍ಮನೆಗೆ ಬಂದಾಗ ನನ್ ಹೆಂಡತಿಗೆ ಹೇಳ್ತಿದ್ದೆ ನಾನೇನೋ ಊರೂ ರು ಸುತ್ತೋನು ನನ್ನ ಸುತ್ತ ಮಕ್ಕಳೇ ಸುತ್ತಾಡ್ತಾವೆ...ಆದರೆ ನನ್ ಹೆಂಡತಿಗೆ ಮಕ್ಳಂದ್ರೆ ಆಸೆ ಮಗುನಾ ನೋಡ್ಬೇಕು ಅಂದ್ಲು ...ಕೇಳಿದ್ರೆ ನೀವು ಕಳ್ಸಕಿಲ್ಲ ಅಂದ್ರಿ....ಮಗು ನಾ ಒಂದು ಸ್ವಲ್ಪ ಹೊತ್ತು ಮನೆಗೆ ಕರ್ಕೊಂಡ್ ಬಂದು ಆಟ ಅಡಿ ಕಳ್ಸಣ ಅಂತ ಕರ್ಕೊಂಡ್ ಬಂದೆ....ತಪ್ಪಾಯ್ತು ಸದಾನಂದಪ್ಪ....ತಪ್ಪಾತು....😪


ಅವರ ದೈನ್ಯತೆ ಗೆ ಮರುಗಿದ ಸದಾನಂದ...ಸಂಜೆವರೆಗೂ ಅವರ ಮನೆಯಲ್ಲೇ ಇದ್ದು ಸಂಜೆ ಹೊರಟರು...

ಹೊರಡುವಾಗ ನಿಮ್ಮ ಮನೆಗೆ ಮಗು ಕಳ್ಸಲ್ಲ ಎಂದಿದ್ದ ದಾಕ್ಷಾಯಿಣಿ ....ರಂಗಣ್ಣ  ನೀವು ಇನ್ಮೇಲೆ ಮಗುನ ಮನೆಗೆ ಕರ್ಕೋಂಡು ಹೋಗ್ಬೇಕು ಅನ್ಸುದ್ರೆ ನಮಗೆಲ್ಲ ಹೇಳ್ಬಿಟ್ಟೇ ಕರ್ಕೋಂಡ್ ಹೋಗಿ...ಎಂದು ಹೊರಟಳು..


ಈ ಘಟನೆಯಾದ ಮೇಲೆ ರಂಗಣ್ಣ ನ ಮೇಲೆ ಪ್ರೀತಿ ವಿಶ್ವಾಸ ಮೂಡಿತ್ತು.... ಆದರೂ ಮಗು ಕಾಣೆಯಾದ ದಿನದ ತಾಯಿ ತಂದೆಯ ಪರದಾಟವನ್ನು ...ವೇದನೆಯನ್ನು ಅಕ್ಕ ಪಕ್ಕದವರು ಕಣ್ಣಾರೆ ಕಂಡವರಾಗಿದ್ದರು... ಹಾಗಾಗಿ ಸಹಜವಾದ ಭಯದ ಪೊರೆಯೊಂದು ಮನಸ್ಸಲ್ಲಿ ಅಚ್ಚೊತ್ತಿತ್ತು...ಆ ಭಯವೇ ಕೆಂಪು ಕಾರ್ ಕಳ್ಳರ ಬಗೆಗೆ ಭಯ ಹುಟ್ಟಿಸಿತ್ತು..🚛


ಲಕ್ಷ್ಮಿಗೆ ಶುಂಠಿ ಕಶಾಯ ಕುಡಿದ ಮೇಲೆ ಸ್ವಲ್ಪ ತಲೆ ನೋವು ಕಡಿಮೆ ಎನಿಸಿತಾದರು ಜ್ವರ ಬಿಟ್ಟಿರಲಿಲ್ಲ..

ಬಚ್ಚಲಿಗೆ ಹೋಗಿ ಶೌಚ ಮುಗಿಸಿ..ಸ್ನಾನ ಮಾಡ್ಬೇಡ ಕಣೇ  ಜ್ವರ ಹೆಚ್ಚಾದಿತು ಅಂದಿದ್ದರು ಅಮ್ಮ..... ಅದಕ್ಕೆ ಲಕ್ಷ್ಮಿ  ಮುಖ ತೊಳೆದು ಬಂದು ಮನೆ ಮುಂದಿನ ಜಗಲಿಯಲ್ಲಿ ಕುಳಿತಿದ್ದಳು...

ಹಳೇ ಕಾಲದ ಕಂಬದ ಮನೆ ಮುಂದೆ ವಿಶಾಲವಾದ ಜಗಲಿ ನಾಲ್ಕು ಕಂಬ ಸೂರನ್ನು ಹೊತ್ತು ನಿಂತಿವೆ ಗೋಡೆಗೆ ರಾಮ ಕೃಷ್ಣ  ಹನುಮಂತನ ಫೋಟೋಗಳನ್ನು ತೂಗು ಹಾಕಿದೆ...ಅಪ್ಪ ಅಲ್ಲೇ ಕುರ್ಚಿ ಮೇಲೆ ಕುಳಿತು ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ನಲ್ಲಿ ಯಾವುದೋ ದಿನಾಂಕಕ್ಕೆ ಗುರುತಿಗೆ ಸುರುಳಿ ಸುತ್ತುತಿದ್ದಾರೆ....

ಲಕ್ಷ್ಮಿ ಸಣ್ಣಗೆ ಪಿರಿ ಪಿರಿ ಎಂದು ಬರುತಿದ್ದ ತುಂತೂರು ಮಳೆಯನ್ನ ಜಗಲಿ ಮೇಲೆ ಕೂತು ನೋಡುತ್ತಾ ಕುಳಿತಿದ್ದಳು...ಮನೆಯಿಂದ ಸ್ವಲ್ಪ ದೂರವೇ ಮನೆ ಗೇಟು....

ಇಲ್ಲಿಂದ ನೋಡಿದರೆ ರಸ್ತೆಯಲ್ಲಿ ಹೋಗುವವರು ಕಾಣುತ್ತಾರೆ....ಕೆಲವೊಮ್ಮೆ ಅಪ್ಪ ರಸ್ತೆಯಲ್ಲಿ ಹೋಗೋರನ್ನ ಕೂಗಿ ಕರೆದು ಮಾತಾಡ್ಸ್ತಿರ್ತಾರೆ....ಯಾರೋ ಪ್ಲಾಸ್ಟಿಕ್‌ ಗುಪ್ಪೆಯನ್ನ ಹೊದ್ದು  ಗೇಟು ತೆಗೆದು ನಮ್ಮ ಮನೆಯ ಕಡೆಗೆ ಬರುತಿದ್ದಾರೆ ಮುಖ ಪ್ಲಾಸ್ಟಿಕ್‌ ಗುಪ್ಪೆಯಲ್ಲಿ ಮರೆಯಾಗಿದೆ ....ಹತ್ತಿರ ಬಂದಂತೆ ಅದು ನನ್ನ ಗೆಳತಿ ಸೌಮ್ಯ ಎಂದು ಗುರುತಿಸಿ ..

ನೀನ್ಯಾಕೆ ಈ ಮಳೆಯಲ್ಲಿ ಬರೋಕೋದೆ....ಬಾ ಬಾ....ಎಂದು ಒಳಗೆ ಕರೆದೊಯ್ದಳು...ತಲೆ ವರೆಸಿಕೊಳ್ಳಲು ಟವಲ್ ಕೊಟ್ಟು ...ಮಾತಿಗೆ ಕುಳಿತರು..

  

ಯಾಕೆ ಸ್ಕೂಲ್ ಗೆ  ಹೋಗಿಲ್ವ ಎಂದಳು ಲಕ್ಷ್ಮಿ ...

ಸೌಮ್ಯ ಇನ್ನೆಲ್ಲಿ ಸ್ಕೂಲ್ ನಮ್ಮಪ್ಪ ಅಮ್ಮಂದು ಒಂದೇ ಗೋಳು ನೆನ್ನೆ ಅದೇ ನಾವು ಸ್ಕೂಲ್ ಗೆ ಹೋಗೋ ದಾರಿಯಲ್ಲಿ ಸುಶೀಲನ ಮನೆ ಇದ್ಯಲ್ಲ ಅಲ್ಲಿಗೆ ಯಾರೋ ನಾಲ್ಕು ಜನ ಸುಶೀಲನ ಅಕ್ಕ ನ ಪಾಪು ನ ಎತ್ಕೊಂಡು ಹೋದ್ರಂತೆ ಅದಕ್ಕೆ ಅಪ್ಪ ಸ್ಕೂಲ್ ಗೆ ಹೋಗೋದು ಬೇಡ ....ಏನೂ ಬೇಡ ಮನೇಲೇ ನಮ್ ಕಣ್ ಮುಂದೆನೇ ಇರು ....ಅಂತಿದ್ದಾರೆ...ಏನ್ ಮಾಡೋದೇ ...ನಾನ್ ಇನ್ ಮುಂದೆ ಸ್ಕೂಲಿಗೆ ಹೋಗೋದು ಕನಸೇನೋ ಅನ್ನುಸ್ತಿದೆ...ಎಂದು ಕಣ್ಣಲ್ಲಿ ಕಣ್ಣೀರು ಜಿನುಗಿತು...


ಲಕ್ಷ್ಮಿ ಮತ್ತು ಸೌಮ್ಯ ಬಾಲ್ಯದಿಂದ ಗೆಳತಿಯರು ಒಟ್ಟಿಗೆ ಅಡುಗೆ ಗುಡುಗೆ ..ಕಣ್ಣಾ ಮುಚ್ಚಾಲೆ...ಕುಂಟೇ ಬಿಲ್ಲೆ ಆಡಿ ಬೆಳೆದವರು ...ಒಟ್ಟಿಗೆ ಶಾಲೆಗೆ ಸೇರಿ ಒಟ್ಟಿಗೆ ಏಳನೇ ತರಗತಿವರೇಗೂ ಓದಿದವರು ....

ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಹಿಸಿ ಕೊಂಡದ್ದೇ ಇಲ್ಲ ಆದರೆ ಧಿಡೀರನೇ ಶಾಲೆ ಬಿಡಿಸೋ ಆಲೋಚನೆ ಲಕ್ಷ್ಮಿ ಗೆ ಸೌಮ್ಯ ಳಿಗೆ ಒಂಟಿಯಾಗುವ ಭಾವನೆ ತೋರಿತು...

ಲಕ್ಷ್ಮಿ ತನ್ನ ಅಪ್ಪನಿಗೆ ಹೇಳಿ ಸೌಮ್ಯಾಳ ಅಪ್ಪನೊಂದಿಗೆ ಮಾತನಾಡುವಂತೆ ಹೇಳಿದಳಾದರು ...ಮನಸ್ಸಿನಲ್ಲಿ ಒಂಟಿ ಆದಂತೆ ಭಾವನೆ ಬಂದು ಕೂತಿತ್ತು..

   ಸ್ವಲ್ಪ ಸಮಯಕ್ಕೆ ಆಲೋಚನೆಯನ್ನು ಬೇರೆಡೆಗೆ ಹೊರಳಿಸಿ.. ಲಕ್ಷ್ಮೀ ಗೆ ಜ್ವರ ಹೇಗಿದೇ ಎಂದು ವಿಚಾರಿಸಿ ಇಬ್ಬರು ಮಾತನಾಡುತ್ತ ಕುಳಿತರು...

ಸೌಮ್ಯ ಲೇ ನಿಂಗ್ ನೆನಪಿದ್ಯಾ ? ನಮ್  ಸ್ಕೂಲ್ ಹಿಂದೆ ಒಂದು ಮರ ಇತ್ತಲ್ಲ ನೆಲ್ಲಿ ಕಾಯಿದ್ದು ಅದರಲ್ಲಿ ನೆಲ್ಲಿ ಕಾಯಿ ಕೀಳೋಕೆ ನಾವು ಪಡ್ತಿದ್ದ ಕಷ್ಟ ಒನ್ನೊಂದಲ್ಲ ನನ್ನ ಹೆಗಲ ಮೇಲೆ ನಿನ್ನ ಕೂರುಸ್ಕೊಂಡು ನಾನು ಭಾರ ತಡಿಲಾರದೆ ನಿನ್ನ ಕೆಳಗೆ ಬೀಳ್ಸಿದ್ನಲ್ಲ.....ಎಂದು ಹೇಳಿಕೊಳ್ಳುತ್ತ ನಕ್ಕರು...

ನಗುವಿನಲ್ಲಿ ಸಂತೋಷದ ಭಾವವಿರಲಿಲ್ಲ...


ಮಳೆ ನಿಂತಂತೆ ತೋರಿತು ....ಸೌಮ್ಯ ಹೊತ್ತಾಗುತ್ತೆ ಹೋಗ್ತೀನಿ ಎಂದು ಹೊರಟು  ನಿಂತಳು...ಸರಿ ಎಂದು ಲಕ್ಷ್ಮೀ ಸೌಮ್ಯಾಳನ್ನ ಬೀಳ್ಕೊಟ್ಟಳು...


ಸುಮಾರು ಹದಿನೈದು ವರ್ಷಗಳ ನಂತರ


ಅಮ್ಮಾ ...ಅಮ್ಮಾ....

ಏನೇ...ಕಂದಮ್ಮ ...ಎಂದು ತನ್ನ ಮಗುವಿನ ಹತ್ತಿರ ಬಂದಳು ಸೌಮ್ಯ..

ಅಮ್ಮ‍ಾ...ಲಕ್ಷ್ಮೀ ಆಂಟಿ ಮಗಳು ಸುಗುಣ ಬಂದಿದಾಳೆ.. ಆಟ ಆಡೋಕೆ ಹೋಗ್ತೀನಮ್ಮಾ...ಎಂದು ಅಂಗಲಾಚಿದಳು......ಸರಿ ಹೋಗ್ ಬಾ ... ಲಕ್ಷ್ಮೀ ಆಂಟಿ ನ ಮನೆಗೆ ಕರಿ....

ಖುಷಿಯಿಂದ ಓಡುತ್ತಾನೆ ಆಯ್ತಮ್ಮಾ ....ಎಂದು ಉತ್ತರಿಸಿದಳು...


ಇತ್ತ ಎಂದಿನಂತೆ ಮನೆ ಜಗಲಿಯಲ್ಲಿ ಕುಳಿತು ಬೀಡಿ ಕಟ್ಟಲು  ಅಣಿಗೊಳಿಸುತ್ತಾ ಬೀಡಿ ಎಲೆಯನ್ನು ನೀರಿಗೆ ಅದ್ದಿ ತೆಗೆದಳು...ಬೀಡಿ ಎಲೆ ಕತ್ತರಿಸಲು ಕತ್ತರಿ.....ಅಳತೆಗೆ ಎಲೆ ಕತ್ತರಿಸಲು ಆಯತಾಕಾರದ ತಗಡಿನ ಪೀಸ್ ತೆಗೆದು ಕೊಂಡಳು...

ಬೀಡಿ ಒಳಗೆ ತುಂಬುವ ಹೊಗೆ ಸೊಪ್ಪನ್ನು ಜೊತೆಯಲ್ಲಿರಿಸಿಕೊಂಡು  ಜಗಲಿ ಮೇಲೆ ಕೂತು ಬೀಡಿ ಎಲೆ ಕತ್ತರಿಸಿ ಅದರೊಳಗೆ ಹೊಗೆ ಸೊಪ್ಪಿನ ಪುಡಿ ತುಂಬಿ ಎರಡು ಕೈ ಸಹಾಯದಿಂದ ಸುರುಳಿ ಸುತ್ತಿ ಬೀಡಿಯ ಎರಡು ತುದಿಯನ್ನ ಚಿಮುಟದಂತಹ ಕಡ್ಡಿಯಿಂದ ಮಡಿಸಿ ಹೊಗೆಸೊಪ್ಪು ಉದುರದಂತೆ ಮಾಡಿ ಸುತ್ತಿದ ಬೀಡಿ ಎಲೆ ಸುರುಳಿಗೆ  ಕೆಂಪು ನೂಲು ಸುತ್ತಿದಳು..ಹೀಗೇ ಹತ್ತು ಬೀಡಿ ಕಟ್ಟುವಷ್ಟರಲ್ಲಿ ಆಲೋಚನೆ ಲಕ್ಷ್ಮಿ ಕಡೆಗೆ ಹರಿಯಿತು 

 ...ಲಕ್ಕಿ ಬಂದಿದಾಳಂತೆ...ನಮ್ ಮನೆಗೆ  ಬರ್ತಾ ಳೋ ಇಲ್ವೋ...ಈಗ ಹೇಗಿರ್ಬೋದು ಡುಮ್ಮಿ ಆಗಿರ್ತಾಳೆ...ಸುಮಾರು ಐದು ವರ್ಷ ಕಳೀತು ಅವಳನ್ನ ನೋಡಿ...

ಕೆಲಸ ಸಿಗ್ತು ಸ್ಕೂಲ್ ಟೀಚರ್ ಆಗಿದ್ದೀನಿ ಎಂದು ಹೇಳಿ ಸಿಹಿ ತಿನಿಸಿದ್ದಳು.... ಆಗ ಸಣ್ಣ ಕೆ ಸುಂದರವಾಗಿ ಕಾಣ್ತಿದ್ದಳು ...ನನಗೂ ಆಗ ಮದುವೆ ಆದ ಹೊಸ ದಿನಗಳು ...ಸಿಹಿಗೆ ಎಂದು ಅವಳು ಕೊಟ್ಟ ಕೊಬ್ಬರಿ ಮಿಠಾಯಿಯನ್ನೇ ಅರ್ಧ ಮುರಿದು ತಿನಿಸಿ ನನ್ನ ಸಂತೋಷವನ್ನೂ ಹಂಚಿಕೊಂಡೆ....ನಾನು ಶಾಲೆಗೆ ಹೋಗಿದ್ದರೆ ನನ್ನ ಸ್ಕೂಲು ಅರ್ಧಕ್ಕೆ ನಿಲ್ಲದೇ ಹೋಗಿದ್ದರೆ.. ಎಂದು ಹಿಂದಿನ ದಿನಗಳನ್ನೆಲ್ಲ ನೆನಪಿಸಿಕೊಳ್ಳುತ್ತ  ....

ಅಂದು ಸೌಮ್ಯ ..ಲಕ್ಷ್ಮಿ ಗೆ ಜ್ವರ ವಿಚಾರಿಸಿ ಮನೆಗೆ ವಾಪಸ್ಸಾದಾಗಿನಿಂದ ಮನೆಯಲ್ಲಿ ನೆಡೆದ ಘಟನೆಯನ್ನ ನೆನಪಿಸಿಕೊಂಡಳು...

ಮಳೆ ನಿಂತು ಮನೆಗೆ ಹೋದ ಮೇಲೆ ಸೌಮ್ಯಾಳ ಮನೆಯಲ್ಲಿ ಅಪ್ಪ ಜಗುಲಿಯಲ್ಲೇ ಕುರ್ಚಿ ಮೇಲೆ ಕುಳಿತಿದ್ದರು....ಈ ಮಳೆಲಿ ಎಲ್ಲಿ ಹೋಗಿದ್ದೆ ಪುಟ್ಟಕ್ಕ ..ಮೊದಲೇ ಕಳ್ಳರ ಕಾಟ ಆ ಸುಶೀಲನ ಮನೆ ಸಣ್ಣ ಮಗುನ ಎತ್ಕೊಂಡ್ ಹೋಗಿ ಅದೇನ್ ಮಾಡುದ್ರೋ ದೇವರೇ ಬಲ್ಲ...ಒಬ್ಬೊಬ್ಳೆ ಹೋಗ್ಬೇಡ ಪುಟ್ಟಿ...


ಲಕ್ಷ್ಮಿ ಮನೆಗೆ ಹೋಗಿದ್ದೆ  ಅಪ್ಪ ಲಕ್ಷ್ಮಿ ಶಾಲೆಗೆ  ಹೋಗಿದ್ದಾಳೋ ಇಲ್ವೋ ನೋಡ್ಕೋ ಬರೋಕೆ....

ಸೌಮ್ಯಾಳ ತಂದೆ ಸ್ವಲ್ಪ ಸಿಟ್ಟಿನಿಂದ ನಾನು ಬೆಳಗ್ಗೆ ಹೇಳಿದ್ದೇನು...?

 ಈ ಸ್ಕೂಲು ಗೀಲು ಎಲ್ಲ ಸಾಕ್ ಮಾಡು ನೀನ್ ಓದಿ ನಮ್ಮನ್ನೆಲ್ಲ ಸಾಕೋದೇನಿಲ್ಲ....ಎಷ್ಟು ಓದಿದ್ರು ಗಂಡನ ಮನೆ ಸೇರಿದ್ಮೇಲೆ ಪಾತ್ರೆ ತೊಳಿಯೋದೆ ಮಿಕ್ಕೋದು....ಆ ಸುಪ್ಪತ್ತಿಗೆಗೆ ಎಂತಕೆ ಬೇಕು ಓದು..ಸುಮ್ಮನೆ ಹೇಳಿದ್ ಕೇಳು ...ಎಂದು ಒಳಗೆ ನಡೆದರು...

ಇತ್ತ ಲಕ್ಷ್ಮೀ  ಮದ್ಯಾಹ್ನ ಊಟದ ಸಮಯದಲ್ಲಿ ಅಪ್ಪ ಅಮ್ಮ ನೊಂದಿಗೆ ಸೌಮ್ಯ ಹೇಳಿದ ಸುಶೀಲನ ಅಕ್ಕನ ಮಗುವನ್ನ ಕಳ್ಳರು ಎತ್ಕೊಂಡು ಹೋದ ವಿಷಯವನ್ನ ಮಾತನಾಡಿದಳು ...ಲಕ್ಷ್ಮೀ ಅಪ್ಪ ನಿಗೆ ಆ ವಿಷಯವೇನೋ ತಿಳಿದಿತ್ತು ಆದರೆ ಮನೆಯವರಿಗೆ ತಿಳಿಸಿದರೆ ಗಾಬರಿ ಆಗ ಬಹುದೆಂದು ಮಗಳ ಮುಂದೆ ಮಾತನಾಡಿರಲಿಲ್ಲ....ಈಗ ಮಗಳೇ ವಿಷಯ ಪ್ರಸ್ತಾಪಿಸಿದ ಮೇಲೆ ಅಪ್ಪ ಮಾತನ್ನೆತ್ತಿದರು....ಹೌದು ಮಗಳೇ ಸ್ಕೂಲಿಗೆ ಹೋಗುವಾಗ ಜಾಗ್ರತೆ ಇರಬೇಕು...ಯಾರು ಏನೇ ತಿಂಡಿ ತಿನ್ನೋಕೆ ಕೊಟ್ರು ತಿನ್ಬಾರ್ದು...ಎಂದು ಹೇಳಿ.....

ತಟ್ಟೆಯಲ್ಲಿದ್ದ ಅನ್ನವನ್ನ ತುತ್ತು ಕಲಸಿ ಬಾಯಿಗಿಟ್ಟರು..


ಅಪ್ಪ ನಾನು ಶಾಲೆಗೆ ಹೋಗೋಕೆ  ಬೇಡ ಅಂತಿರೇನೋ ಅಂತ ಭಯ ಪಟ್ಕೊಂಡಿದ್ದೆ....ನನ್ ಫ್ರೆಂಡ್ ಸೌಮ್ಯಾ ಮನೇಲಿ ಅವಳು ಸ್ಕೂಲಿಗೆ ಹೋಗೋದು ಬೇಡ ಮನೇಲೇ ಇರು ಅಂದ್ರಂತೆ ಅವ್ರ್ ಅಪ್ಪ ಅಮ್ಮ....ನಂಗೂ ಹಾಗೇ ಹೇಳ್ತೀರೇನೋ ಅಂತ ಭಯ ಪಟ್ಕೊಂಡಿದ್ದೇ.....ಈಗ ನೆಮ್ಮದಿ ಆಯ್ತು...ಜ್ವರ ವಿದ್ದದರಿಂದ ಅಮ್ಮನ ಒತ್ತಾಯಕ್ಕೆ ಗಂಜಿ ಕುಡಿದು ಮೇಲೆದ್ದಳು....ಮನಸ್ಸಿನಲ್ಲಿ ಶಾಲೆಗೆ ಹೋಗಬಹುದೆಂಬ ಸಂತಸವಿದ್ದರು ಜೊತೆಗಾತಿ ಸೌಮ್ಯ ಶಾಲೆಗೆ ಬರೋದಿಲ್ಲ ಎಂಬ ಬೇಸರ ಹೆಚ್ಚಿತ್ತು...ನಾನು ಅವರಪ್ಪನೊಂದಿಗೆ ಮಾತನಾಡಿ ಸೌಮ್ಯಾಳನ್ನ ಸ್ಕೂಲಿಗೆ ಕಳಿಸುವಂತೆ ಕೇಳೋಣವೆಂದರೆ ವಯಸ್ಸಿನಲ್ಲಿ ಚಿಕ್ಕವಳು....ಎಂದೆಲ್ಲ ಯೋಚಿಸುತ್ತ ಮಲಗಿದ್ದಾಗ ನಿದ್ದೆ ಆವರಿಸಿತು..

ಇತ್ತ ಸೌಮ್ಯ ಅಮ್ಮ ಅಡುಗೆ ಮನೆಯಲ್ಲಿ ಸಾಂಬಾರಿಗೆ ತಯಾರಿ ನೆಡೆಸುತಿದ್ದಳು...ತರಕಾರಿ ಹೆಚ್ಚಲು ಇಳಿಗೆ ಮಣೆ ಮೇಲೆ ಕುಳಿತು...ಶಾಲೆಯ ದಿನಗಳನ್ನ ನೆನೆಸಿಕೊಳ್ಳುತ್ತ...ತರಕಾರಿ ಹೆಚ್ಚುತಿದ್ದಳು...ತರಕಾರಿ ಹೆಚ್ಚುವಾಗ ಆಲೋಚನೆ ತಪ್ಪಿ ಕೈ ಕುಯ್ದುಕೊಂಡಳು..

ಬೆರಳಿಗೆ ಚಿಕ್ಕದಾಗಿ ಪೆಟ್ಟಾಯಿತು ....ಅಮ್ಮಾ ಎಂದು ಅರಚಿದಳು ....ಅಮ್ಕ‍‍ಾ ಗಾಬರಿಯಿಂದ ಇದೇನ್ ಮಾಡ್ಕೊಂಡ್ಯೇ...ಸೌಮ್ಯ...ಎಂದು ಅರಿಶಿಣ ಪುಡಿಯನನ್ನು ಗಾಯಕ್ಕೆ ಮೆತ್ತಿ ಒತ್ತಿ ಹಿಡಿಯುವಂತೆ ಹೇಳಿದರು...ಹಾಗೇ ಬೆರಳು ಒತ್ತಿ ಹಿಡಿದು  ಚೇರನ್ನು ಒರಗಿ ಕೂತಿದ್ಹಳು...ಆಯಾಸಕ್ಕೋ ಬೇಸರಕ್ಕೋ ಸುಸ್ತೆನಿಸಿ ಅಲ್ಲೇ ಚೇರ್ ಒರಗಿ ನಿದ್ರೆ ಹೋದಳು....


ಆ ದಿನ ರಾತ್ರಿ ಊಟಕ್ಕೆ ಕುಳಿತಾಗ ಸೌಮ್ಯಾಳ  ಅಪ್ಪ ಇನ್ನು ಸೌಮ್ಯ ಸ್ಕೂಲಿಗೆ ಹೋಗೋದು ಬೇಡ ನಿನಗೆ ಅಡುಗೆ ...ಬೀಡಿ ಕಟ್ಟೋಕೆ ಸಹಾಯ ಮಾಡ್ಕೊಂಡು ಮನೇಲೇ ಇರ್ಲಿ ಎಂದವರೆ...ಯಾರಿಗೂ ಮಾತಿಗೆ ಅವಕಾಶ ನೀಡದೆ ಊಟ ಮುಗಿಸಿ ಎದ್ದರು....

ಮರುದಿನ ಸೌಮ್ಯಾಳ ಅಪ್ಪ ಎಷ್ಟು ಹೊತ್ತಾದರು ಎದ್ದಿರಲಿಲ್ಲ ....ಸೌಮ್ಯ ಅಪ್ಪಾ ..ಅಪ್ಪಾ...ಏಳಿಸಲು ಯತ್ನಿಸಿದರು ಅಲುಗಾಡಲಿಲ್ಲ ಮಾತಾಡಲಿಲ್ಲ...ರಾತ್ರಿ ಎದೆನೋವು ಹೆಚ್ಚಾಗಿ ಬೆಳಗ್ಗೆ  ಆಗುವಷ್ಟರಲ್ಲಿ ಕಣ್ಮುಚ್ಚಿದ್ದರು ....

ಸೌಮ್ಯಾಳ ಮನೆಗೆ ಧಿಡೀರ್ ಎಂದು ಬಂದೆರಗಿದ ದುಃಖ ಮರೆಯುವುದರಲ್ಲೇ ಒಂದು ತಿಂಗಳು ಕಳೆದಿತ್ತು....  

 ಲಕ್ಷ್ಮೀ ಧೀಡೀರನೇ ಸೌಮ್ಯಾ ಮನೆಗೆ ಬಂದು ನಾವು ಟೌನ್ ನಲ್ಲಿ ಬಾಡಿಗೆ ಮನೆಗೆ ಹೊಗ್ತಿದಿವಿ ಕಣೇ...ಎಂದಳು...

ಆಸರೆಗೆ ಇದ್ದ ಸುಖ ದುಃಖ ಹೇಳಿಕೊಳ್ಳಲು ಇದ್ದ ಒಂದು ಜೀವವು ದೂರ ಹೋದರೆ ನಾನು ಒಬ್ಬಂಟಿಯೇ ಎಂದು ತಕ್ಷಣದ ಯೋಚನೆ ಬಂದು ಮಂಕು ಕವಿಯಿತು...

ಯಾಕೆ ಎಲ್ಲಿಗೆ ಹೋಗ್ತೀರಾ?? ಯಾಕ್ ಹೋಗ್ತೀರಾ?? ಎಂದಾಗಾ..?

 ಲಕ್ಷ್ಮೀ ಹೀಗೆಂದಳು ನಮ್ಮೂರು ಮೊದಲೇ ಕಾಫಿ ತೋಟದ ಕಣಿವೆ....

ಕೆಂಚನ ಹಳ್ಳಿಯಿಂದ ಮಾವಿನ ಕೊಪ್ಪಲಿನ ವರೆಗೂ ಒಂದು ಮನೆಯೂ ಇಲ್ಲ...ಆ ರಸ್ತೆಯಲ್ಲಿ ಜನರು ಓಡಾಡೋದು ಕಡಿಮೆ ನಾನು ನೀನು ಇಬ್ಬರೂ ನಮ್ಮೂರಿಂದ ಹೋಗ್ತಿದ್ವಿ ಈಗ ನೀನು ಕೂಡ ಬರೋದಿಲ್ಲ...ಹುಡುಗರು ಸೈಕಲ್ ಹತ್ತಿ ಬೇಗ ಹೋಗಿ ಬಿಡ್ತಾರೆ ನಾನೊಬ್ಬಳೇ ಹೋಗೋಕೆ ಎಷ್ಟು ಭಯ ಆಗುತ್ತೆ ಗೊತ್ತಾ...?

ಅದಕ್ಕೆ ಅಪ್ಪ...ನನ್ನ ಓದು ಮುಗಿಯೋ ವರೆಗೂ ಮೂಡಿಗೆರೆಯಲ್ಲಿ ಬಾಡಿಗೆ ಮನೆ ಮಾಡೋಣ ಅಂದಿದ್ದಾರೆ. ಅದಕ್ಕೆ ಹೋಗ್ತಾ ಇದಿವಿ...ಹೋಗುಕು ಮೊದಲು ನಿಂಗ್ ಹೇಳಿ ಹೋಗೋಕೆ ಬಂದೆ...ಎಂದಳು


ಸೌಮ್ಯಾಳ ಕಣ್ಣಂಚಲ್ಲಿ ನೀರು...ಈ ಘಟನೆಗಳೆಲ್ಲ ಘಟಿಸಿ ಎಷ್ಟೋ ವರುಷಗಳೇ ಕಳೆದಿವೆ..ಈಗ ಕಣ್ಣಂಚಲಿ ನೀರು ತಂದು ಬೀಡಿ ಎಲೆಯನು ನೆನೆಸಿವೆ...ಕಣ್ಣೊರೆಸಿಕೊಂಡು  ಮತ್ತಷ್ಟು ಧೀರ್ಘ ಆಲೋಚನೆಯಲ್ಲಿ ಮನಸ್ಸು ಮುಳುಗಿತು...

ಜೊತೆಯಾಗಿದ್ದ ಲಕ್ಷ್ಮೀಯು ಹೋದ ಮೇಲೆ...ನನಗೆ ಇನ್ಯಾರು ಜೊತೆ...ನನ್ನ ನೋವು ನಲಿವುಗಳಿಗೆ ಸ್ಪಂದಿಸುವರ್ಯಾರು...ಒಬ್ಬಂಟಿಯಾಗಿ ಹೋಗಿದ್ದೆ ಅಂದು...ಇತ್ತ ಕಡೆ ಮನೆಗೆ ಆಧಾರವಾಗಿದ್ದ ಅಪ್ಪ ತೀರಿಕೊಂಡರು....

ಅತ್ತ ಕಡೆ ನನ್ನ ಓದು ಅರ್ಧಕ್ಕೆ ನಿಂತಿತು...ಅಮ್ಮ ಒಬ್ಬಂಟಿ ಹೆಂಗಸು ಮನೆಯನ್ನ ಹೇಗೆ ಸಾಗಿಸಿಯಾಳು ನಾನು ಅವಳಿಗೆ ಜೊತೆಯಾಗದೆ ಹೋಗಿದ್ದರೆ ಅವಳು ಈ ಸಂಸಾರದ ನೊಗವನ್ನ ಹೇಗೆ ಸಾಗಿಸುತಿದ್ದಳು....ಆದರೂ ಅಮ್ಮ ನನ್ನನ್ನ ಶಾಲೆಗೆ ಕಳಿಸ ಬಹುದಿತ್ತು ದುಡಿಯೋದು ಯಾರಿಗಾಗಿ ನಮ್ಮಿಬ್ಬರಿಗಾಗಿ ನನಗೆ ಮದ್ಯಾಹ್ನದ ಬಿಸಿ ಊಟ ಅಲ್ಲೇ ಆಗುತಿತ್ತು ಬೆಳಗ್ಗೆ ಉಪವಾಸ ಮಾಡಿಯಾದರು ದಿನಕ್ಕೆ ಎರಡು ಹೊತ್ತಿನಂತೆ ತಿಂದಾದರು ಶಾಲೆ ಓದುತಿದ್ದೆ ..ಅಮ್ಮ ನನ್ನನ್ನ ಬೇಳಗ್ಗೆ ಬೆಳಗ್ಗೆಯೇ ಹಸಿವಿನಿಂದ ಹೋಗಲು ಬಿಡುತಿದ್ದಳೇ ಬೆಳೆವ ಹುಡುಗಿ ಎಂದು ತನಗಿದ್ದ ಎರಡು ತುತ್ತನ್ನು ಸೇರಿಯೇ ತಿನಿಸುತಿದ್ದಳು ಅಷ್ಟು ಪ್ರೀತಿ ಅಮ್ಮನಿಗೆ ನಾನೆಂದರೆ ....

ಅಷ್ಟು ಪ್ರೀತಿ ಇದ್ದವಳು ಮಗಳು ಶಾಲೆ ಕಲಿತು ಮುಂದೆ ದೊಡ್ಡ ಆಫೀಸರ್ ಆಗಲಿ ಅನ್ನೋ ‌ಆಸೆ ಯಾಕಿರಲಿಲ್ಲ ಅಮ್ಮನಿಗೆ

 ....ಅವಳಾದರು ಏನು ಮಾಡಿಯಾಳು ಕಲ್ಲಿನಂಥ ಅಪ್ಪನ ಗುಂಡಿಗೆಯೇ ಈ ಕಳ್ಳರ ವಿಷಯಕ್ಕೆ ನಡುಗಿರುವಾಗ ಅಮ್ಮ ಇನ್ನು ಮೃದು ಸ್ವಭಾವದವಳು ಅವಳು ಇನ್ನೂ ಹೆದರುತ್ತಾಳೆ...ಲಕ್ಷ್ಮೀ ನನ್ನ ಓದಿನ ಬಗ್ಗೆ ನನ್ನನ್ನೂ ಟೌನ್ ಗೆ ಕರೆದುಕೊಂಡು ಹೋಗುವ ಬಗ್ಗೆ ಅವಳ ‌ಅಪ್ಪನೊಂದಿಗೆ ಮಾತನಾಡ ಬಹುದಿತ್ತು....‍ಅಯ್ಯೋ... ನಮ್ಮ ಮನೆಯವರಿಗೆ ಇಲ್ಲದ ಕಾಳಜಿ ಅವರಿಗೆ ಇರಬೇಕಿತ್ತು ಎನ್ನುವುದು ನನ್ನ ಮೂರ್ಖತನ....

ನನ್ನಮ್ಮನಿಗೆ ನನ್ನ ಕಂಡರೆ ಅಷ್ಟು  ಪ್ರೀತಿ ಇತ್ತು ಆದರೆ ಅಷ್ಟು ಬೇಗ ಮದುವೆ ಮಾಡೋ ಅಗತ್ಯ ಏನಿತ್ತು....ಅವನ್ಯಾರೋ ಮಂಗಳೂರಿನ ಮಾವನಂತೆ ಅಪ್ಪ ಸತ್ತ ಎರಡು ವರ್ಷಕ್ಕೆ ಬಂದ ಅಮ್ಮನೊಂದಿಗೆ ಮಂಗಳೂರಿನ ಭಾಷೆಯಲ್ಲಿ ಎಂಥಾ ಮರಾಯಿತಿ ನಿನ್ನ ಮಗಳನ್ನ ಮದುವೆ ಮಾಡುದಿಲ್ವೇನೇ...ದಿನ ದಿನಕ್ಕೆ ಮಗು ಬೆಳೀತಿದೆ ಬೆಳೆದ ಮಗಳು ಮನೆಯಲ್ಲೇ ಇಟ್ಟುಕೊಂಡ್ರೆ ಮಡಿಲಿನಲ್ಲಿ ಕೆಂಡ ಇಟ್ಟು ಕೊಂಡಂತೆ ತಿಳೀತಾ...

ನನಗೆ ಒಬ್ಬ ಗೊತ್ತು ನಮ್ಮವನೇ ಲಾಯಕ್ಕಾದ ಜೋಡಿ ಅವನದು ಸೌಮ್ಯಾ ದು ......ಎಂಥಾ ಮದುವೆ ಮಾತು ಕತೆ ಮಾಡೋದಾ? ಎಂದ...

ಅಮ್ಮನೋ  ನೀವು ದೊಡ್ಡವರು ನೀವು ಹೇಳಿದಂತೆ ಆಗ್ಲೀ ಎಂದು ಬಿಟ್ಟಳು ಆ ವಯ್ಯನಿಗೋ ಒಪ್ಪಿಗೆಯೇ ಸಿಕ್ಕಿದಂತೆ ಅದರ ಮುಂದಿನ ಮೂರು ತಿಂದಳಲ್ಲಿ ವರ ನ ಸಮೇತಾ ಮನೆಗೆ ಬಂದರು...ನನ್ನನ್ನ ಒಪ್ಪಿಗೆ ಕೇಳಿದಂತೆ ಕೇಳಿದರಷ್ಟೇ....ಒಳ್ಳೆಯದು ಕೆಟ್ಟದ್ದು ಆ ಮಗುಗೆ ಏನು ಗೊತ್ತಾಗುತ್ತೆ ಅಂಥ ಅವರೆ ತೀರ್ಮಾನ ಮಾಡಿ ಬಿಟ್ಟರು..."ಒಪ್ಪಿಗೆ ಕೊಡೋಕೇ ನಾನು ಮಗು ವಾಗಿದ್ದೆ ಅದರೆ ಮದುವೆ ಆಗೋಕೆ ಬೆಳೆದು ನಿಂತ ಮರವಾಗಿದ್ದೆ."..

ದೂರದ ಮಂಗಳೂರಿಂದ ಬಂದಿದಾರೆ ಮತ್ತೆ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗೋದು ಸರಿ ಕಾಣ್ಸೋಲ್ಲ ಅಂತ ಅಂದೇ ಶಾಸ್ತ್ರ ಕ್ಕೆ ತಾಂಬೂಲ ಬದಲಿಸಿ ...ಉಪ್ಪಿಟ್ಟು ಕಾಫಿ ತಿಂದು ಹೊರಟರು...ಅದಾದ ಒಂದು ತಿಂಗಳಲ್ಲಿ ಮದುವೆ ನಮ್ಮೂರಿನ ಆಂಜನೇಯನ ಗುಡಿಯಲ್ಲಿ...

 ಮದುವೆ ಆಗಿ ಒಂದು ಎರಡು ತಿಂಗಳು ಅಷ್ಟೇ ನನ್ನ ಬದುಕು ನೆಮ್ಮದಿ ಕಂಡದ್ದು ಅಷ್ಟರೊಳಗೆ ನನ್ನ ಗಂಡನ ರೂಪಿನೊಂದಿಗೆ ಗುಣವು ಬಯಲ‍ಾಗುತ್ತಾ ಬಂತು...ದಿನಾ ರಾತ್ರಿ ಕುಡಿದು ತೂರಾಡುತ್ತಾ ಎಷ್ಟೋ ಗಂಟೆಗೆ ಬರುವುದು....ಎಲೆ ಅಡಿಕೆ ಜಗಿದು ಎಲ್ಲೆಂದರಲ್ಲಿ ಉಗುಳಿ ಮನೆ ರಂಪ ಗೊಳಿಸುತಿದ್ದುದು...ಬೆಳಗ್ಗೆ ಮಾತ್ರ ಅವನಷ್ಟು ಸಭ್ಯ ಯಾರು ಇಲ್ಲ ಅನ್ನುವಂತೆ ಅಂತ ನಡತೆ....ಕೆಲಸಕ್ಕೆಂದು ಹೋಗೋದು ಇಸ್ಪೀಟು ...ಕುಡಿತಗಳಲ್ಲೇ ಮೈ ಮರೆತು ಎಷ್ಟೋ ಗಂಟೆಗೆ ಮನೆ ಸೇರೋದು.... ಒಂದು ವರ್ಷ ಕಳೆವಷ್ಟರಲ್ಲಿ ನಾನು ಅರೋ ...ಏಳೋ ತಿಂಗಳ ಗರ್ಭಿಣಿ ಇನ್ನೆರಡು ತಿಂಗಳಲ್ಲಿ ಕೂಸು ಕೈಗೆ ಬರುವುದರಲ್ಲಿತ್ತು ಬರುವ ಮಗುವಿನ ಕನಸಲ್ಲಿ ಇಷ್ಟವಿಲ್ಲದ ಗಂಡನೊಂದಿಗಿನ ಬದುಕು ಹೇಗೋ ತಳ್ಳುತಿದ್ದೆ...ಆ ರಾತ್ರಿ ವಿಪರೀತ ಹೊಟ್ಟೆ ನೋವು ಎಂದು ಕಿರುಚಿದರು ಮನೆಯಲ್ಲಿ ಯಾರು ಇಲ್ಲ...ಹೆರಿಗೆ ಗೆ ಅಮ್ಮನ ಮನೆಗೆ ಹೋಗುತ್ತೇನೆಂದರು ಕಳುಹಿಸಲಿಲ್ಲ ಈ ಗಂಡಸು....ನೋವು ಎಂದರು ಗಮನಿಸೋ ಹುಳುವು ಇಲ್ಲ ಈ ಮನೆಯಲ್ಲಿ....ಈ ಇವನ ದುರ್ಬುದ್ದಿ ಕಂಡೇ ಏನೋ ಅವನ ತಂದೆ ತಾಯಿ ಇವನಿಗಿಂತ ಮುಂಚೆ ಕಣ್ಮುಚ್ಚಿದ್ದು..

ಅಯ್ಯೋ ಅಮ್ಮ ಎಂಬ ಕಿರುಚಾಟ ಕೇಳಿ ಪಕ್ಕದ ಮನೆಯ ಅಜ್ಜಿ ಬಂದು ಹೆರಿಗೆ ಮಾಡಿಸಿತು...ಇಲ್ಲದಿದ್ದರೆ...ನನ್ನ ಬದುಕೇನಾಗುತಿತ್ತೋ...

ಇತ್ತ ನನ್ನ ಮಗು ಹುಟ್ಟಿತು...ಅತ್ತ ಕುಡಿದ ಮತ್ತಿನಲ್ಲಿ ಯರೊಂದಿಗೋ ಜಗಳಕ್ಕೆ ಹೋಗಿ ತಳ್ಳಾಟದಲ್ಲಿ ಕೆಳಕ್ಕೆ ಬಿದ್ದು ತಲೆ ಕಲ್ಲಿಗೆ ಬಡಿದು ಅವರು ಸತ್ತರು ..."ಒಂದೇ ದಿನ ವಿದವೆ ಎಂಬ ತಾಯಿ ಎಂಬ ಪಟ್ಟ ಸಿಕ್ಕವು."..ಎಂದು ಕಣ್ಣೀರಿಟ್ಟಳು ... 

ನನ್ನ ಮಗಳ ಬದುಕು ತನ್ನಂತೆ ಆಗ ಬಾರದು ಅವಳನ್ನ ಓದಿಸಿ ದೊಡ್ಡ ಆಫೀಸರ್ ಮಾಡ್ಸೇ ಮಾಡುಸ್ತೀನಿ....ಅಷ್ಟರಲ್ಲಿ ಆಟ ಮುಗಿಸಿ ಲಕ್ಷ್ಮೀ ಆಂಟಿಯೊಂದಿಗೆ ಮನೆಗೆ ಬಂದ ಮಗು ಅಮ್ಮನ ಕಣ್ಣೀರು ನೋಡಿ ಕಣ್ಣೋರೆಸಿತು....ಅಮ್ಮಾ ಲಕ್ಷ್ಮೀ ಆಂಟಿ ಬಂದಿದಾರೆ ಬಾ.....ಎಂದು ಕೈ ಹಿಡಿದು ಎಳೆಯಿತು....


ರಚನೆ 

ಶ್ಯಾಮ್ ಪ್ರಸಾದ್ ಭಟ್



 




Saturday, July 31, 2021

ಸಮರ ಅಮರ ಭಾಗ ೨

 ಇಂದು ರಾಮುವಿನ ಹುಟ್ಟುಹಬ್ಬ ಆದರೆ ಮನೆಯಲ್ಲಿ ಸಂಭ್ರಮವಿಲ್ಲ..

ಶಾಂತ ಇನ್ನು ಎದ್ದಿಲ್ಲ....ಹಾಸಿಗೆಯಲ್ಲೇ ಮಲಗಿ ಅತ್ತು ಅತ್ತು ದಿಂಬು ಒದ್ದೆಯಾಗಿತ್ತು..

ಅಜ್ಜಿ ಜೊತೆ ಮಲಗಿದ್ದ ರಾಮು ಅಮ್ಮ... ಅಮ್ಮ.. ಎಂದು ಅಮ್ಮನಿದ್ದ  ರೂಮಿಗೆ ಬಂದು ..

ಅಮ್ಮ ಇವತ್ತು ನನ್ ಬರ್ತಡೇ ಅಂತೇ ಹೌದೇನಮ್ಮ....

ಶಾಂತಗೆ ಇನ್ನು ದುಃಖ ಉಮ್ಮಳಿಸಿ ಬಂತು ಎದ್ದು ಮಗನನ್ನು ತಬ್ಬಿ ಅತ್ತಳು.... ಹೌದು ಕಂದಮ್ಮ..

ಅಮ್ಮನ ದುಃಖದ ಕಾರಣ ತಿಳಿಯದ ಮಗು ಪಿಳಿ ಪಿಳಿ ಕಣ್ಣು ಬಿಟ್ಟು ಅಮ್ಮನನ್ನೇ ದಿಟ್ಟಿಸಿನೋಡಿತು...ಅಜ್ಜಿಯ ಹತ್ತಿರ ಓಡಿತು ...

ಅಜ್ಜಿ ಸ್ನಾನ ಮುಗಿಸಿ ..ಅಳಿಯನ ಫೋಟೋವನ್ನ ಒದ್ದೆ ಬಟ್ಟೆಯಲ್ಲಿ ವರೆಸಿ ...ಹಣಿಗೆ ಕುಂಕುಮ ಇಟ್ಟು...ತಂದಿದ್ದ ಹೊಸ ಹಾರ ಹಾಕಿ...ಊದುಬತ್ತಿ ಹಚ್ಚುತಿದ್ದರು...

ಅಲ್ಲಿಗೆ ಬಂದ ರಾಮು ಅಜ್ಜಿ ಅಪ್ಪನ ಫೋಟೋಗೆ ಯಾಕ್ ಪೂಜೆ ಮಾಡ್ತಿದಿಯ‍ಾ ಇವತ್ತು ಅಪ್ಪನ ಬರ್ತಡೇ ನಾ ಅಂತ ಕೇಳಿದ ರಾಮುಗೆ ಉತ್ತರ ಹೇಳುವುದೇನು.....ನಿನ್ನ ಅಪ್ಪ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಉದಾತ್ತ ವಿಷಯ ಮಗುವಿಗೆ ಹೇಳಿದರೆ ತಿಳಿದೀತೇ..

ಶಾಂತಳು ಹಾಸಿಗೆಯಿಂದೆದ್ದು ಸ್ನಾನ ಮುಗಿಸಿ ಗಂಡನಿಗೆ ದೀಪ ಹಚ್ಚಿ ಊದುಬತ್ತಿ ಬೆಳಗಿದಳು...

ಕಣ್ಣಂಚಿನ ನೀರಲ್ಲಿ ದೀಪದ ಬೆಳಕು ಮಿಂಚಿ ಮರೆಯಾಯಿತು..

ಅವರು ತೀರಿಕೊಂಡು ಮೂರು ವರ್ಷವಾಯಿತು..ಕಳೆದ ಎರಡು ವರ್ಷ ಮಗು ಮಾತು ಕಲಿಯುತಿದ್ದರಿಂದ ಅದರ ಪ್ರಶ್ನೆ ಕುತೂಹಲ ಕೆರಳಿರಲಿಲ್ಲ...ಈಗ ಮಾತು ಮೂಡಿ ವಾಕ್ಯಮಾಡಿ ಪ್ರಶ್ನೆ ಕೇಳುತ್ತಾನೆ ಏನು ಉತ್ತರ ಹೇಳಲಿ...

ಅವರು ಅಲ್ಲಿ ಉಸಿರು ಬಿಟ್ಟರು ....ಇಲ್ಲಿ ಇವನು ಉಸಿರಾಡಿದ ಅವರೇ ಹುಟ್ಟಿದರು ಅನ್ನೋ ಸಂಭ್ರಮ ಪಡಲೋ...ಅವರಿಲ್ಲದ ಜಗತ್ತಲ್ಲಿ ಯಾರು ಇದ್ದರೇನು ಎಂದು ದುಃಖ ಪಡಲೋ...ತಾಯ್ತನ ಕೊಟ್ಟು ಕರುಳಕುಡಿ ಅನ್ನೋ ಸಂಬಂಧ ಇಟ್ಟು ಈ ಜಗತ್ತಿಗೂ ನನಗೂ ಬಂಧ ಬೆಸೆದು ಕಟ್ಟಿ ಹಾಕಿದ್ದಾನೆ ಭಗವಂತ ...ನಾನು ಈ ಕೊಂಡಿ ಕಳಚಿಕೊಳ್ಳಲಾರೆ...

ಹೀಗೇ ಅವಳ ಆಲೋಚನೆ ಎಲ್ಲೆಲ್ಲೋ ಸುಳಿದಾಡಿ ಗಂಡನ ಫೋಟೋ ದಿಟ್ಟಿಸುತ್ತ ಆರ್ಮಿ ಯುನಿಫಾರಂ ಧರಿಸಿ ನಗು ಮುಖದಲ್ಲಿದ್ದ ತನ್ನ ಗಂಡನನ್ನು ನೆನೆದು ದುಃಖ ಉಮ್ಮಳಿಸಿ...ಬಾಯಿಗೆ ಸೀರೆ ಸೆರಗು ಹಿಡಿದು ಕೊಂಡು ಹೊರ ಜಗಲಿಗೆ ಬಂದು ಕೂತಳು 

ಹಿಂದಿನಿಂದ ಬಂದ ರಾಮು  ಅಮ್ಮ...ಕೇಕ್ ತರ್ತಾರಾ ತಾತಾ...

ಸೆರಗಿನಿಂದ ಕಣ್ಣೊರೆಸಿಕೊಂಡು ...ಹುಂ ಕಣೋ ತರ್ತಾರೆ...ಎಂದಳು..

ಆ ದಿನ ಪೂರ್ತಿ ಮಗನ ಹುಟ್ಟುಹಬ್ಬದ ಸಂಭ್ರಮಕ್ಕಿಂತ ಗಂಡನ ನೆನಪುಗಳೇ ಕಾಡಿ ಕಂಗೆಡಿಸದವು...

   ಸಂಜೆ ವೇಳೆಗೆ ತಾತಾ ತಂದ ಬರ್ತಡೇ ಕೇಕ್ ಕಟ್ ಮಾಡಿಸಿ ಅಕ್ಕ ಪಕ್ಕದ ಮನೆಯವರ ಸಮಕ್ಷಮದಲ್ಲಿ ಸಂಭ್ರಮಪಟ್ಟರು ದುಃಖ ಸಂತೋಷಗಳ ಮಿಶ್ರಣ ಭಾವದಲ್ಲಿ..

 ರಾಮು ದಿನದಿಂದ ದಿನಕ್ಕೆ ಬೆಳೆಯುತಿದ್ದಾನೆ ಒಳ್ಳೆ ಶಾಲೆಗೆ ಸೇರಿಸಿ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದರೆ

ಒಂದು ಒಳ್ಳೆ ಕೆಲಸ ಅಂತ ಆಗ್ಬಿಟ್ರೆ ...ಅವರ ಸಾವಿಗೆ ಬಂದಿದ್ದ ಎಷ್ಟೋ ಜನ ಅವರು ಬಾರ್ಡರ್ ನಲ್ಲಿ ವೈರಿಗಳ ಮೋಸದ ಗುಂಡಿಗೆ ಬಲಿಯಾದಾಗ ಅವರ ಜೊತೆಯವರೇ ತಮ್ಮ ಗೆಳೆಯನ ದೇಹವನ್ನ ಪೆಟ್ಟಿಗೆಯಲ್ಲಿರಿಸಿ ತಂದರು.

 ರಾಷ್ಟ್ರ ದ್ವಜ  ಹೊದ್ದು ಬಂದ ಅವರ ದೇಹವನ್ನ ನಾನು ತಬ್ಬಿ ಬಿಕ್ಕಳಿಸಿ ಅತ್ತರೂ ಅವರು ಎದ್ದೇಳಲಿಲ್ಲ...ಪ್ರೀತಿಯಿಂದ ಶಾಂತು ಎನ್ನಲಿಲ್ಲ...ಬಂಗಾರದಂತ ಮಗ ಅವನ ರೂಪದಲ್ಲೇ ಹುಟ್ಟಿದಾನೆ ಅವನನ್ನು ಸೈನ್ಯಕ್ಕೆ ಸೇರಿಸಿ ಬಿಡು ಅಂದಿದ್ದರು ಅಕ್ಕ ಪಕ್ಕದವರು ...

ನಿಮ್ ಮಕ್ಕಳು ಚೆನ್ನಾಗಿ ನಿಮ್ ಕಣ್ಣಮುಂದೇನೆ ದುಡಿತಾ ಇರ್ಬೇಕು ನಾನು ನನ್ನ ಮಗನ್ನ ನನ್ನ ಗಂಡ ಹೋದ್ ಜಾಗಕ್ಕೆ ಕಳುಸ್ಬೇಕಾ ಹೋಗಿ ...ಹೋಗಿ ...

ಅಂತ ದುಃಖದಲ್ಲಿ ಬೈದು ಕಳಿಸಿದ್ದೆ....

ಹೌದಲ್ವ...!! ಎಷ್ಟು ಜನಕ್ಕೆ ದೇಶ ಸೇವೆ ಮಾಡೋ ಭಾಗ್ಯ ಸಿಗುತ್ತೆ ನನ್ನ ಗಂಡ ಪುಣ್ಯವಂತ ನನ್ನ ಮಗನಿಗೂ ಆ ಪುಣ್ಯ ಸಿಗಲಿ ಸೈನ್ಯಕ್ಕೆ ಕಳುಸ್ತೀನಿ..‍ಅಂತ ಅವಳಲ್ಲಿ ಯೋಚನೆ ಬಂತಾದರು ....ಮತ್ತೇ ಪೆಟ್ಟಿಗೆಯಲ್ಲಿ ಹೊತ್ತು ತಂದ ತನ್ನ ಗಂಡನ ಮುಖ ನೆನಪಾಗಿ ಇಲ್ಲ ಇಲ್ಲ...ನನ್ ಕಣ್ಣು ಮುಂದೇನೆ ಇರ್ಲಿ ಇವನು...ನಾನು ಮತ್ತೆ ಅದೇ ಸಂಧರ್ಭನ ಎದುರಿಸೋ ಗಟ್ಟಿತನ ನಂಗಿಲ್ಲ..ಎಂದು ಕೊಂಡು ಎದ್ದಳು..

ರಾಮುವಿಗೆ ಈಗ ಆರು ವರ್ಷ ಮೂಡಿಗೆರೆಯಲ್ಲೇ ಶಾಲೆಗೆ ಸೇರಿಸಿದಳು...

ಅಜ್ಜಿ ತಾತನ ...ಅಮ್ಮನ ಅಕ್ಕರೆಯಲ್ಲಿ ...ವರ್ಷಗಳು ದಿನಗಳಂತೆ ಕಳೆದವು....

ರಾಮುವಿಗೆ ಓದಿನ ಕಡೆ ಗಮನ ಕಡಿಮೆಯೇ..

 ಹೈಸ್ಕೂಲಿನ ಕೊನೆ ವರ್ಷ ಹತ್ತನೇ ತರಗತಿ ಹತ್ತಿದರೆ ಕಾಲೇಜಿನ ಮೆಟ್ಟಿಲು ಹತ್ತಬಹುದು ಅಂತ ಕಷ್ಟ ಬಿದ್ದು ಓದಿ ಜಸ್ಟ್ ಪಾಸ್ ಆದ ಈಗ ರಾಮುವಿನ ಮುಖದಲ್ಲಿ ಆಗ ತಾನೇ ಚಿಗುರು ಮೀಸೆ ಮೂಡುತಿತ್ತು...

ಕಾಲೇಜಿಗೆ ಹಾಸನಕ್ಕೆ  ಸೇರ್ಕೋತಿನಿ ಅಂತ ಹಠ ಮಾಡಿ  ಹಾಸ್ಟೆಲ್ ಸೇರಿ ಕಾಲೇಜು ಓದು ಆರಂಭವಾಯ್ತು ...

ಇತ್ತ ಕಡೆ ಮನೆಯವರಲ್ಲಿ ರಾಮುವಿನ ಮೇಲೆ ಹೊಸ ಹೊಸ ಕನಸುಗಳನ್ನ ಹೆಣೆಯುತ್ತ ಮನೆಯಲ್ಲಿ  ಶಾಂತ ರಾಮು ಓದು ಮುಗಿದ ಮೇಲೆ...ಒಂದು ಕೆಲಸ .. ಮದುವೆ ಅಂತ ಆಗ್ಬಿಟ್ರೆ ನನ್ನ ಜವಾಬ್ದಾರಿ ಮುಗಿಯುತ್ತೆ ಎಂದೆಲ್ಲ...ಯೋಜನೆ ರೂಪಿಸುತಿದ್ದಳು..

ಇತ್ತ ಕಡೆ ಸಹವಾಸ ಸರಿ ಇಲ್ಲದೆ...ರಾಮು ಸಿಗರೇಟು ....ಕುಡಿತ ಮೈಗೆ ಅಂಟಿಸಿಕೊಂಡಿದ್ದ...ರಜಾ ದಿನಕ್ಕೆ ಮನೆಗೆ ಬಂದಾಗ ಮಗನ ಪ್ಯಾಂಟನ್ನು ತೊಳಿವಾಗ ಜೋಬಿನಲ್ಲಿ ಸಿಗರೇಟ್ ಪ್ಯಾಕ್ ನೋಡಿ ಬೆಚ್ಚಿ ಬಿದ್ದಿದ್ದಳು ಶಾಂತ...

ರಾಮು ಕರೆದು ವಿಚಾರಿಸಿದಾಗ ಅದು ನಂದಲ್ಲ...ಏನೋ ಒಂದು ಸುಳ್ಳು ಹೇಳಿ ನುಸುಳಿಕೊಂಡಿದ್ದ...

    ಇನ್ನೊಂದು ವಾರದಲ್ಲಿ ಅವನ ಬರ್ತಡೇ ....ಮಗನಿಗೆ ಹದಿನೇಳು ತುಂಬುತ್ತೇ...ಅನ್ನೋ ಸಂತೋಷದಲ್ಲಿ ಆ ದಿನಕ್ಕೆ ಸಿಹಿ ತಿಂಡಿಗಳನ್ನ ಮಾಡಬೇಕು ಅನ್ನೋ ಯೋಜನೆ ಹಾಕಿದ್ದಳು....ಆ ದಿನ ಆಡಿದಂತೆ ಬಂತು ಗಂಡನಿಗೆ ದೀಪ ಹಚ್ಚಿಟ್ಟು .. ಮಗನಿಗೆ ಇಷ್ಟವಾಗುತ್ತೆ ಅಂತ ಕೊಬ್ಬರಿ ಮಿಠಾಯಿ ಪಾಯಸ ಮಾಡಿದ್ದಳು ...

 ಅವತ್ತು ಬೆಳಗ್ಗೆ ಸ್ನೇಹಿತರಿಗೆ ಪಾರ್ಟಿ ಕೊಡುಸ್ಬೇಕು ಅಂತ ಐನೂರು ರೂಪಾಯನ್ನ ತಾತನಿಂದ ಕೇಳಿ ತಗೊಂಡು ಹೋದವನು ಸಂಜೆ  ಏಳು ಸರಿದರು ಬಂದಿಲ್ಲ...ತಾತಾ ಕೇಕ್ ಎಲ್ಲಾ ತಂದು ಅವನ ಬರುವಿಕೆಗೆ ಕಾಯುತ್ತಾ ಇದ್ದರಾದರು ...ಗಂಟೆ ಒಂಬತ್ತು ಬಡಿದಾಗ ಬಂದ ತೂರಾಡುತ್ತ ....ಬಾಗಿಲು ಹಿಡಿದು ದೂಡಿ ರೂಮಿಗೆ ಹೋದ ..

ಇದೇನು ತನ್ನ ಮಗನ ಅವಸ್ಥೆ ಎಂದು ಗಾಬರಿಯಾಗಿ ಅವನಿದ್ದ ರೂಮಿಗೆ ಹೋಗಿ ಅವನನ್ನ ಎಳೆದು ಕರೆತಂದಳು ಏನೋ ಕುಡಿಯೋದು ಯಾವಾಗ್ಲೋ ಶುರು ಮಾಡ್ಕೊಂಡೆ ....ಅಯ್ಯೋ ಅಯ್ಯೋ ದೇವರೇ....ಎಂದು ದುಃಖದಿಂದ ಅತ್ತಳು

ಎಂಥಾ ಅಪ್ಪನಿಗೆ ಎಂಥಾ ಮಗ ....ಓದ್ತಿದಾನೆ ಮಗ ಅಂತ ಕಳಿಸಿ ನೆಮ್ಮದಿಯಾಗಿದ್ದೆ...ನೀನು ಚಟ ಕಲ್ತ್ಕೊಂಡು ಬಂದಿದಿಯಲ್ಲೋ ....ಎಂದು ಬೈದು...ಮಗ ಅಪ್ಪನಂತೆ ಅಗ್ತಾನೆ...ಅಂತ ಆಸೆ ಪಟ್ಟೆ...ಆದರೆ ನೀನು ಛೇ....ಎಂಥಾ ಅಪ್ಪನಿಗೆ ಎಂಥಾ ಮಗ...

ಅಮ್ಮನ ಮಾತೆಲ್ಲ ಕೇಳಿಸಿಕೊಂಡು ಕೋಪದಲ್ಲಿ ಕುಡಿದ ಮತ್ತಲ್ಲಿ ನಾನು ಎಲ್ಲರು ತರಾ ಬರ್ತಡೇ ಮಾಡ್ಕೋ ಬೇಕು ಅಂತ....ನನ್ನ ಬರ್ತಡೇ ಅಂತ ಖುಷಿ ಈ ಮನೆಲಿ ಎಲ್ಲಿರುತ್ತೆ ಅದ್ಕೆ ಫ್ರೆಂಡ್ಸ ಜೊತೆ ಹೋಗಿದ್ದೆ ಸ್ವಲ್ಪ ಜಾಸ್ತೀನೆ ಕುಡುದೆ ತಪ್ಪಾ.....

 ಅಪ್ಪನಂತಾಗ್ಲಿಲ್ಲ...ಅಪ್ಪನಂತಾಗ್ಲಿಲ್ಲ....ನಾನು ಫೋಟೋ ಆಗ್ಬೇಕಿತ್ತಾ ಅಪ್ಪನ ತರಾ...?..

ಹೋ..ದೇಶ ಸೇವೆ ....ಸೈನಿಕ ಅನ್ನುಸ್ಕೋ ಬೇಕಿತ್ತಾ? ದೇಶ ಸೇವೆ ಮಾಡ್ಬೇಕಿತ್ತಾ...? ಸಂಬಳ ಕೊಡ್ತಾರೆ ಸೇರ್ಕೊಂಡ್ರು ...ದೇಶ ಸೇವೆ ಅಂತ ಸೇರ್ಕೊಂಡ್ರಾ..? ಹೀಗೆಲ್ಲ..ಮನಸ್ಸಿಗೆ ಬಂದ ...ಬಾಯಿಗೆ ಬಂದ ಮಾತೆಲ್ಲ ಆಡಿ ರೂಮಿಗೆ ಹೋಗಿ ಧಡಾರನೇ ಬಾಗಿಲು ಮುಚ್ಚಿ ಮಲಗಿದ...

ಶಾಂತಾಳಿಗೆ ಮಗನ ವರ್ತನೆ ಮಾತು ಮತ್ತಷ್ಟು ದುಃಖ ಹೆಚ್ಚಾಯಿತು....

ತನ್ನ ಗಂಡನಂತೆ ನೂರಾರು ಜನ ದೇಶದ ಗಡಿ ಭಾಗದಲ್ಲಿ ಛಳಿ ...ಗಾಳಿ .ಮಳೆ ಲೆಕ್ಕಿಸದೆ ದೇಶ ಕಾಯೋದು ಕೇವಲ ದುಡ್ಡಿಗೋಸ್ಕರನಾ....ತನ್ನ ತಂದೆಯ ವೃತ್ತಿ ಮೇಲೆ ಮಗನಿಂದ ಅದೆಷ್ಟು ಅಗೌರವದ ಮಾತು....

ದುಡ್ಡು ಸಿಗುತ್ತೆ ಅಂತ ಪ್ರಾಣ ಕೂಡ ಲೆಕ್ಕಿಸದೇ ದೇಶ ಕಾಯೋಕಾಗುತ್ತಾ...ಪ್ರಾಣಕ್ಕಿಂತ ದೊಡ್ಡದೇ ಈ ದುಡ್ಡು?

 ನನ್ನ ಗಂಡನ ಬಲಿದಾನವನ್ನ ದೇಶದವರೆಲ್ಲ ಕೊಂಡಾಡಿದ್ದರು ವೀರ ಸ್ವರ್ಗ ಸೇರ್ತಾರೆ....ತಾಯಿ ಭಾರತಿ ಸೇವೆ ಮಾಡೋದು ಮಹಾ ಭಾಗ್ಯ ಅಂತೆಲ್ಲ...ಅದನ್ನ ದುಡ್ಡಿನಲ್ಲಿ ಅಳೆದು ಬಿಟ್ಟನಲ್ಲ...ಅವರದೇ ರಕ್ತದ ಮಗ....


                                          ರಚನೆ 

                              ಶ್ಯಾಮ್ ಪ್ರಸಾದ್ ಭಟ್ 



Tuesday, July 27, 2021

ಹಳೆಯದೆ...ಹೊಸಬರಿಗೆ ಹೊಸತು

 


ನಮ್ಮ ಬದುಕೆಲ್ಲ ಹಾಸಿಗೆ ಹಿಡಿದಿದೆ..ಖಾಯಿಲೆ ಅಂತಲ್ಲ...ಕೆಲಸವಿಲ್ಲ ಅಂತ..

ಕೆಲಸ ಇಲ್ಲ ಅಂದ್ರೆ ಕೆಲಸ ಇಲ್ಲ ಅಂತ ಅಲ್ಲ ಕೆಲಸ ಇದೆ ಆದರೆ ಇಷ್ಟ ಪಟ್ಟ ಕೆಲಸ ಇಲ್ಲ ಅಂತ....ಅಂದರೆ ಬೇರೆ ಕೆಲಸ ಇಷ್ಟ ಇಲ್ಲ ಅಂತಲ್ಲ...ಅದರೆ ಅದನ್ನ ಮಾಡೋಕೆ ಮೈ ...ಮನಸ್ಸು ಬಗ್ಗೊಲ್ಲ ಅಂತ.. ನಮ್ಮದನ್ನ ಬಿಡು ಕೆಲಸ ಇಲ್ಲ ಅಂತ ಹೇಳೋದೇ ಕೆಲಸ...ನಿನ್ನದ್ ಹೇಳು ಹೊಸ ಕೆಲಸ ಹೊಸತನ ಹೇಗಿದೆ...?.

ಎಲ್ಲಾ ಹೊಸತನವು ಹೊಸತರಲ್ಲಿ ಹೊಸತೆ...ಹೊಸ ಮನೆ ...ಹೊಸ ಹೆಂಡತಿ...ಹೊಸ ಗಾಡಿ...ಎಲ್ಲವೂ ಹೊಸತರಲ್ಲಿ ಹೊಸತೇ...ಹಳೆಯದಾಗ್ತಾ ಮನೆ ಬಣ್ಣ ಮಾಸುತ್ತೆ...ಹೆಂಡತಿ ಮಾತು ಕಿರಿ ಕಿರಿ.ಅನ್ಸುತ್ತೆ...

ಗಾಡಿ ಸ್ಟಾರ್ಟ್ ಆಗಲ್ಲ  ಅನ್ನುತ್ತೆ...ದೇಹ ವಯಸ್ಸಾಯ್ತು ಅನ್ನುತ್ತೆ....ಕಾಲು ಕೋಲು ಬೇಕು ಅನ್ನುತ್ತೆ..ಎಲ್ಲಾ...ಹೀಗೇನೆ..

Friday, March 26, 2021

ದೀಣೆಯ ನೆನಪು




ಚೊಟ್ಟೆ ಹಣ್ಣು  

                                    ನೇರಳೆ ಹಣ್ಣು
                                        

ದೀಣೆಯ ನೆನಪು...

ನಮ್ಮೂರು ಮೊದಲೇ ಕಾಫಿ ಕಾಡು
 ... ಆಗ ಜಮೀನು ಇದ್ದವರು ಕೂಡ ಕಾಫಿ ತೋಟ ಮಾಡಲು ತುಂಬಾ ಹಣ ಬೇಕಾದ್ದರಿಂದ ಕಾಫಿ ತೋಟ ಮಾಡಲು ಸಾದ್ಯವಾಗದೆ ...ಹಾಗೆ ಪಾಳು ಬಿಟ್ಟಿರುತಿದ್ದರು...

ನಮ್ಮ ಮನೆಯ ಹಿಂಬಾಗ......ಸ್ವಲ್ಪ ಎತ್ತರದ ಜಾಗ....ಬಹಳಾ... ಹಿಂದೆ ನಾವು ಈಗ ಮನೆ ಮಾಡಿ ವಾಸವಿರುವ ಸ್ಥಳವೆಲ್ಲ ಕಾಡು ಪ್ರದೇಶ....ಆದರೆ ಮನೆಗಳಾದಂತೆ....ಕಾಡು ಮಾಯವಾಗಿ ನಾಡಾಯಿತು....

ಆದರೆ ನಮ್ಮ ಮನೆಯ ಹಿಂಬದಿ ಇದ್ದ ಕಾಡು ಹಾಗೇ ಇತ್ತು....ನಾವು ಅದಕ್ಕೆ ದೀಣೆ ಎಂದು ಕರೆಯುತಿದ್ದೆವು....ಅಲ್ಲಿ ಹಲವು ಹಣ್ಣಿನ ಮರಗಳು....ಕಾಡು ಜಾತಿಯ ಮರಗಳು....ಕುರುಚಲು ಗಿಡಗಳಿಂದ ತುಂಬಿ ಹೋಗಿತ್ತು ....ಹಕ್ಕಿಗಳ ವಾಸಸ್ಥಾನವಾಗಿತ್ತು....ಹಾಗೇ ಅಲ್ಲಿ ಕಾಡು ಕೋಳಿಗಳು ಬರುತ್ತಿದ್ದರಿಂದ ...ಅಕ್ಕ ಪಕ್ಕದವರು ....ಜಮೀನಿನ ಒಡೆಯರು ಎಲ್ಲಾ ಕಾಡು ಕೋಳಿ ಹಿಡಿಯಲು ಬಲೆ ಹೆಣೆದು ....ಸ್ವಲ್ಪ ಅಕ್ಕಿ ಚೆಲ್ಲಿ ಬಂದಿರುತಿದ್ದರು....
.
ನಮ್ಮ ಊರಿಗೆ ಆಗ ಶೌಚಾಲಯ ಇನ್ನು ದಾಳಿ ಇಟ್ಟಿರಲಿಲ್ಲ....ಅಕ್ಕ ಪಕ್ಕದ ಮನೆ....ನಮ್ಮ ಮನೆ...ಯ
ಬೆಳಗಿನ ಶೌಚದ ಸ್ಥಳ ಅದೇ ಆಗಿತ್ತು....

ನಾನು ಗೆಳೆಯರೊಡನೆ...ಹಣ್ಣು ಕೀಳಲು ಹೋದಾಗ....ಆಗಾಗಾ ಪಕ್ಕದ ಮನೆಯವರೊಡನೆ.... ..ಕಾಡುಕೋಳಿಗೆ ಬಲೆ ಹೆಣೆಯುವುದನ್ನು ನೋಡಲೆಂದೇ    ಹೋಗುತಿದ್ದೆ...

ನಮಗೆ ಬೇಸಿಗೆ ರಜೆಯಲ್ಲಿ ನಾವು ದೀಣೆ ಗೆ ಹೋಗುವುದೆಂದರೆ ಶಿಕಾರಿಗೆ ಹೋದ ಅನುಭವವೇ....ಸರಿ......ಪಕ್ಕದ ಮನೆಯ ಗೆಳೆಯ ಆಗಾಗಾ ದೀಣೆಯಲ್ಲಿ  ಬಲೆ ಹೆಣೆದು ....ಕಾಡು ಕೋಳಿ ಬೇಟೆಯಾಡುತಿದ್ದರು..
ಸೆರೆಸಿಕ್ಕ ಕೋಳಿಯು....ಮೊಟ್ಟೆ ಇಟ್ಟರೆ... ಇತರ ಕೋಳಿಗಳೊಡನೆ...ಕಾವು ಕೊಡಿಸಿ ಮರಿ ಮಾಡಿಸಿ ...ಸಾಕು ಕೊಳಿಗಳ ಮಧ್ಯೆ ಬೆಳೆಸುತಿದ್ದರು...

ಒಂದು ದಿನ ಬೆಳಗ್ಗೆ...ನಾನು ದೀಣೆಗೆ ಶೌಚಕ್ಕೆಂದು ಹೋದಾಗ....ಗೆಳೆಯ ನನಗಿಂತ ಮೊದಲೇ ಬಂದು ಶೌಚ ಮುಗಿಸಿ ಕಾಡು ಕೋಳಿಗೆ ಬಲೆ ಹೆಣೆಯುತಿದ್ದ....ಅದನ್ನು ಕಂಡ ನಾನು ನೋಡುತ್ತಾ....ಅಲ್ಲೇ ಕುಳಿತು....ವಾಪಸ್ಸಾಗುವಾಗ....
ಒಂದು ಪಕ್ಷಿಯ ಧ್ವನಿ ಕೇಳುತಿತ್ತು.......ನೋಡಿದರೆ....ಹಕ್ಕಿಯ ಗೂಡಿನಲ್ಲಿದ್ದ ಮರಿಯೊಂದು ಕೆಳಗೆ ಬಿದ್ದು...ಅಳುತಿತ್ತು....ಅದನ್ನು ನೋಡಿದ ಗೆಳೆಯ...ಕೂಡಲೆ...ಅದನ್ನು ...
ಜೋಪಾನವಾಗಿ ಎತ್ತಿ....ಗೂಡು ಸೇರಿಸಿದ....

""ವಿಶೇಷವೆಂದರೆ ಒಂದು ಪಕ್ಷಿಯ ಪ್ರಾಣ ತೆಗೆಯಲು...ಬಲೆ ಹೆಣೆದು ಬಂದ ಗೆಳೆಯ ಮತ್ತೊಂದು ಪಕ್ಷಿಯ ಪ್ರಾಣ ಉಳಿಸಿದ್ದ.... ""

ನಾನು ಶಾಲೆ ಮುಗಿಸಿ ಬಂದ ಕೂಡಲೆ
ಬ್ಯಾಗನ್ನು....ಬಿಸಾಡಿ....

 ಗೆಳೆಯನ ಮನೆಗೆ ಓಡಿದೆ...

ಇಬ್ಬರು ಒಟ್ಟಿಗೆ ಸಂಜೆ ವೇಳೆ ಬೇಟೆ ಬಿದ್ದಿದೆಯ ಎಂದು ನೋಡಿ ಬರಲು ಹೋದಾಗ...ಒಂದು ಕಾಡು ಕೋಳಿ ಮರಿ ಸೆರೆ ಬಿದ್ದಿತ್ತು... ಗೆಳೆಯ ಅದನ್ನು ಎತ್ತಿಕೊಂಡು ಅವರ ಮನೆಯ ಸಾಕು ಕೋಳಿಗಳ ಗುಂಪಿಗೆ ಬೆಳೆಯಲು ಬಿಟ್ಟರು...

ನಾನು ಮರುದಿನ ಬೆಳಗ್ಗೆ  ಶೌಚಕ್ಕೆಂದು ....ಕುರುಚಲು ಗಿಡಗಳ ಮಧ್ಯೆ ಹೋದಾಗ...ಬೇರೊಬ್ಬರು ಕಾಡು ಕೋಳಿಗೆ  ಹೆಣೆದ ಬಲೆಗೆ ಕಾಲು ಸಿಕ್ಕಿಕೊಂಡ ಅನುಭವ...ಕಣ್ಣ...ಮುಂದೆ ಇನ್ನೂ ಹಸಿರಾಗಿವೆ....

ಬೇಸಿಗೆಯಲ್ಲಿ....ಗೆಳೆಯರೊಡನೆ...ದೀಣೆಗೆ ಹೋಗಿ   ಹಣ್ಣುಗಳ ಬೇಟೆಯಾಡಿ ಹಂಚಿ ತಿಂದು ....ವಾಪಸ್ಸಾಗುತಿದ್ದೆವು....

ಅಲ್ಲಿ  ಬಗೆ ಬಗೆಯ ಮರಗಳು....ನೇರಳೆ...ಸೀಬೆ....ಈಗ ಅಪರೂಪವಾಗಿರುವ ಚೊಟ್ಟೆ ಹಣ್ಣು..ದೊರೆಯುತಿತ್ತು

ಹಾಗೆಯೇ...ಹಲಸಿನಹಣ್ಣು..ಜ್ಯೂಸ್ ಹಣ್ಣು ...ಸಿಗುತಿತ್ತು...ಗೆಳೆಯರೊಡನೆ ಹೋದಾಗ ನಮಗೆ ಬೇಸಿಗೆ ರಜೆ ಸಿಗುತಿದ್ದದ್ದ ..... ಸಮಯದಲ್ಲಿ...ಈ ಹಣ್ಣುಗಳು ಹೇರಳವಾಗಿ ದೊರೆಯುತಿದ್ದವು....ನೇರಳೆ ಮರ ಹತ್ತಿ....ಗೊಂಚಲನ್ನೇ ಮುರಿದು ...ಹಣ್ಣನ್ನು...ಕಿತ್ತಾಡಿ ತಿನ್ನುತಿದ್ದೆವು....ಹಲಸಿನಹಣ್ಣನ್ನು...ಹಂಚಿ ಸವಿಯುತಿದ್ದೆವು....

ಆದರೆ ಈಗ ...ನಾಲ್ಕು  ವರ್ಷ ಗಳ ಹಿಂದೆ ....ಕಾಡು ಮರಗಳನ್ನೆಲ್ಲ ದೈತ್ಯ ಜೆ.ಸಿ.ಬಿ...ದ್ವಂಸ ಗೊಳಿಸಿ ...ಕಾಫಿ ಗಿಡಗಳನ್ನು ನೆಟ್ಟು....ಮುಳ್ಳಿನ ಬೇಲಿಯನ್ನು....ತಮ್ಮ....ತೋಟದ ಸುತ್ತ...ಹಾಕಿದ ಮೇಲೆ...ನಮಗೂ ಆ ಸ್ಥಳಕ್ಕೂ...ಸಂಪರ್ಕ ಸಂಬಂಧವೇ ಇಲ್ಲದಂತಾಗಿದೆ...

ನಾನು ರಜೆಗೆಂದು ನೆನ್ನೆ ಮನೆಗೆ ಬಂದೆ....ನನ್ನ ಚಿಕ್ಕಮ್ಮನ ಮನೆಗೆ ಹೋದಾಗ....ತಿನ್ನಲು ಬಟ್ಟಲು ತುಂಬ  ನೇರಳೆ ಕೊಟ್ಟರು....ಎಲ್ಲಿಂದ ತಂದಿರಿ....ಎಂದಾಗ.....
ಮಾರುಕಟ್ಟೆಯಿಂದ ಎಂದಾಗ ......ಒಂದು ಕ್ಷಣ....ಈ ನೆನಪುಗಳೆಲ್ಲ....ತೇಲಿ ಬಂದವು....

ಕಾಡಿನಲ್ಲಿ ಸುತ್ತಾಡಿ ಕಿತ್ತಾಡಿ ತಿಂದ ಅನುಭವ ಕಲಿಸಿದ ಪಾಠ....

ಅಪ್ಪನ ಬೈಕ್ ಏರಿ ...ಮಾರುಕಟ್ಟೆಗೆ ಹೋಗಿ ಕೇಳಿದಷ್ಟು ಬೆಲೆ ತೆತ್ತು....ತಂದದ್ದರಲ್ಲಿ....ಸಿಕ್ಕೀತೆ....

                  ಅನುಭವ ಕಥನ.
                       ರಚನೆ
          ಶ್ಯಾಮ್ ಪ್ರಸಾದ್ ಭಟ್






ಕಿಲಾಡಿ ತಾತ....

ಇಂದು ನಾನು ಹೇಳ ಬೇಕಿರುವುದು ಒಬ್ಬ ಕಿಲಾಡಿ ಅಜ್ಜನ ಬಗೆಗೆ...
ಮುಂಗಾರು ಪ್ರಾರಂಭವಾದದ್ದರಿಂದ ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಎಡೆ ಬಿಡದೆ ಸುರಿವ ಮಳೆ.....

ಕೊಡೆ ಇಲ್ಲದೆ ಎಲ್ಲಿಗೂ ಹೊರಡೋಕೆ ಆಗಲ್ಲ ಅಂತ ಹಿಂದಿನ ದಿನವೇ ಮನೆಗೆ ಫೋನ್ ಮಾಡಿದಾಗ ತಿಳಿದಿತ್ತು....

ಆದರೆ ಮುಂಗಾರು ನನ್ನೂರು ಇಷ್ಟವೆಂದೋ ಏನೋ..... ಅಲ್ಲೇ ....ಜಾಂಡ ಊರಿತ್ತು
ಇನ್ನೂ ಮೈಸೂರಿಗೆ ಬಂದಿರಲಿಲ್ಲ....
ಬರುವ ಮುನ್ಸೂಚನೆಯನ್ನ ಆಗಾಗಾ ತುಂತೂರು ರಾಯಭಾರಿಗಳನ್ನ ಕಳುಹಿಸಿ ತಿಳಿಸುತಿತ್ತು ಇನ್ನು ಬಂದಿರಲಿಲ್ಲ......

ಶುಕ್ರವಾರ ಬೆಳಗ್ಗೆ ಸ್ವಲ್ಪ ಸೋಮಾರಿತನದಿಂದಲೇ....ತಡವಾಗಿ ಎದ್ದು ....ಮನೆಯಲ್ಲಿ ಎರಡು ದಿನದ ಮಟ್ಟಿಗೆ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡು ....ಸ್ನಾನಕ್ಕೆ ಹೋಗೋಣ
ಅಂತ ಹೊರಟೆ.....ಅ‍ಷ್ಟರಲ್ಲಾಗಲೇ 8 ಗಂಟೆ ಸರಿದಿತ್ತು....

ಬೆಳಗ್ಗಿನ ತರಗತಿಗೆ ಬೇಗ ಹೊರಡಬೇಕಿದ್ದರಿಂದ ಹಾಸ್ಟೆಲ್ ಕೊಠಡಿಯ ಸಹವಾಸಿ ರೋಹಿತ್ ಆಗಲೇ ಕೆಳಗಿನ ಉಪಹಾರ ಮಂದಿರದಿಂದ ತಿಂಡಿ ಮುಗಿಸಿ ಮೇಲೆ ಬಂದ....

ಭಟ್ರೇ ನಿಮಗಿಷ್ಟವಾದ ತಿಂಡಿ ಮಾಡಿದಾರೆ ಹೋಗಿ ಎಂದ .....

   ವಿದ್ಯಾರ್ಥಿ ನಿಲಯದ  ಊಟ ತಿಂಡಿ ಬಗೆಗೆ ವಿದ್ಯಾರ್ಥಿ ನಿಲಯದ ವಾಸಿಗಳಿಗೆ ಗೊತ್ತಿರುತ್ತದೆ......ಚನ್ನಾಗಿ ಮಾಡಿದರೆ ತುಸು ಹೆಚ್ಚು ಹಾಕಿಸಿಕೊಂಡಾರು ಎಂದೇ....ಉಪ್ಪು ಇದ್ದರೆ ಖಾರ ಇರೊಲ್ಲ....ಖಾರ ಇದ್ದರೆ ಉಪ್ಪು ಇರೋಲ್ಲ.......
ಯಾವ್ದಪ್ಪ ಅದು ನನಗಿಷ್ಟವಾದ ತಿಂಡಿ ಎಂದೆ ಪುಳಿಯೋಗರೆ ಎಂದ.....
ಪುಳಿಯೋಗರೆ ಅಲ್ಲ ಕಣೋ ಅದು ಹುಳಿಯೋಗರೆ ಎಂದು ತಮಾಷೆ ಮಾಡಿ ನಕ್ಕೆವು....ಹಾಗೇ ಇಡ್ಲಿ ಗೆ ಡೆಡ್ಲಿ ಎನ್ನುತ್ತೇವೆ.
ಹಾಸ್ಟೆಲ್ ಪುಳಿಯೋಗರೆ ತಿಂದು ತಿಂದು ಕೆಲವೋಮ್ಮೆ ಮನೆಗೆ ಹೋದಾಗ ಅಮ್ಮ ಪುಳಿಯೋಗರೆ ಮಾಡ್ಲೇನೋ ಎಂದಾಗ .....ಅಮ್ಮ ಬೇಡ್ವೇ ಬೇಡ ಅಂದದ್ದು ಉಂಟು....

ಎಲ್ಲಾ ತಯಾರಿ ಮಾಡಿಕೊಂಡು  ಹೊರಗೆ ತಿಂಡಿ ಮಾಡಿಕೊಂಡರಾಯ್ತೆಂದು ಕೊಂಡು ಹೊರಟೆ...
ತ್ರಿವೇಣಿ ವೃತ್ತದ ಬದಿಯಲ್ಲೇ ಇರುವ ವಿಷ್ಣು ಭವನದಲ್ಲಿ ತಿಂಡಿ ಮುಗಿಸಿ ಹೊರಟೆ....

ಮೈಸೂರು ಚಿಕ್ಕಮಗಳೂರು  ಬಸ್ಸು ಹತ್ತಿ ಕುಳಿತಾಗ ಸುಮಾರು 11:00 ರ ಸಮಯ...ಬೇಲೂರಿಗೆ ಸರಿ ಸುಮಾರು 4 : 00 ರ ಸುಮಾರಿಗೆ ತಂದಿಳಿಸಿದ ...

ಅಲ್ಲಿಂದ ಮುಂದಕ್ಕೆ....ಬೇಲೂರಿನಿಂದ ಮೂಡಿಗೆರೆ ಕಡೆಗೆ ಹೋಗುವ ಬಸ್ಸು ಹತ್ತಿ ಹೋಗ ಬೇಕಿತ್ತು...ಮಳೆ ಎಡೆಬಿಡದೆ ಸುರಿಯುತ್ತಿತ್ತು..
ಬಸ್ಸು ಹತ್ತಿ ಕಿಟಕಿ ಬಳಿಯ ಸೀಟು ಹಿಡಿದು ಕುಳಿತೆ...
   ಬಸ್ಸು ಹೊರಡೋದು ಸ್ವಲ್ಪ ತಡವಾಗುತ್ತದೆ ಎಂದು ತಿಳಿಯಿತು....
ಮುಂದಿನ ಸೀಟಿನಲ್ಲಿ....ತಾಯಿ ತನ್ನ ಮಗುವಿಗೆ ಬೈಯುತಿದ್ದದ್ದು ಹೀಗೆ...
ಹಾಳಾದೋನು ಮಳೆಲ್ ‍ಆಟ ಆಡೋಕ್ ಹೋಗ್ಬೇಡ ಅಂದ್ರು ಹೋಗೋದು ....ನೋಡೀಗ ಶೀತ ಜ್ವರ ಬಂದಿದೆ ....ಒಂದ್ ವಾರ ಸ್ಕೂಲಿಗೆ ರಜಾ ಬ ಆಯ್ತು....

ಈ ಮಾತನ್ನು ಕೇಳಿ ಬಾಲ್ಯದಲ್ಲಿ ನಾವು ಆಡುತಿದ್ದ   ಮಳೆ ನೀರಿನಲ್ಲಿ ಪೇಪರ್ ದೋಣಿ ಮಾಡಿ ಬಿಡುತಿದ್ದದ್ದು....ಗಾಳಿಗೆ ಬಿದ್ದ ಜೀರಿಗೆ ಮಾವಿನ ಹಣ್ಣನ್ನು ಸೀಬೇಹಣ್ಣನ್ನು  ಹೆಕ್ಕಿ ತಂದು ಸವಿದದ್ದು...ಜ್ವರ ಬಂದು ಮಲಗಿದ್ದು....ಎಲ್ಲವು ರಪ್ಪನೆ ಕಣ್ಮುಂದೆ ಬಂದಂತಾಯಿತು...
ನದಿ ದಡದಲ್ಲಿರುವ ದೇವಾಲಯಗಳಲ್ಲಿ ಯಾವ ಪಾಪ ಗಳಿದ್ದರು ರೋಗ ರುಜಿನ ವಿದ್ದರು ಮಿಂದೆದ್ದರೆ ವಾಸಿಯಾಗುವುದೆಂದು ನಂಬಿಕೆ...
ಗಂಗಾ ಯಮುನ ಗೋದಾವರಿ ಸರಸ್ವತಿ ನರ್ಮದ ಸಿಂಧೂ ಕಾವೇರಿ ಈ ಎಲ್ಲಾ ಪುಣ್ಯ ನದಿಗಳ ನೀರನ್ನು ಹೀರಿಕೊಂಡು ಮೋಡವಾಗಿ ಸುರಿವ ಮಳೆ ಇನ್ನೆಷ್ಟು...ಪವಿತ್ರ ಪುಣ್ಯ...ಎಂಬೆಲ್ಲ ಆಲೋಚನೆಗಳಲ್ಲಿ ಮುಳುಗಿರುವಾಗ
ಬಸ್ಸು ಜೋರು ಶಬ್ದ ಮಾಡಿ ಹೊರಟಿತು....
ಬೇಲೂರು ಟೌನ್ ಮುಗಿಯುತಿದ್ದಂತೆ ಕಂಡಕ್ಟರ್ ಟಿಕೆಟ್ ಹರಿಯಲು ಶುರು ಮಾಡಿದ....
ನನ್ನ ಪಕ್ಕದಲ್ಲಿ...ಒಬ್ಬ ಅಜ್ಜ ಕುಳಿತಿದದ್ದರು...
ಕಂಡಕ್ಟರ್ ಟಿಕೇಟ್ ಎಂದಾಗ.....ನಾನು ಟಿಕೇಟ್ ತೆಗೆದು ಕೊಂಡೆ....ಪಕ್ಕದಲ್ಲಿದ್ದ ಅಜ್ಜ ಮುಂದೆ ಬರುವ ಬಳ್ಳೂರಿನಲ್ಲಿ ಇಳಿಯುವವರು..  ..ಒಂದ್ ಬಳ್ಳೂರಿಗ್ ಕೊಡಪ್ಪ ಅಂತ ನೂರರ ನೋಟನ್ನು ಕೊಟ್ಟರು ....ಕಂಡಕ್ಟರ್ ಟಿಕೇಟ್ ಹರಿದು ಉಳಿದ 80 ರೂ ಪಾಯಿ ಚಿಲ್ಲರೆ ಯನ್ನು ಕೊಟ್ಟುರು ಅದರಲ್ಲಿ 50 ರ ನೋಟು ಒಂದು ಮೂರು ಹತ್ತು ರೂಪಾಯಿ ನೋಟುಗಳು....
ಆ ಹತ್ತರ ನೋಟುಗಳಲ್ಲಿ ಒಂದು ಭಾಗಶಃ ಹರಿದಿತ್ತು....ಅದನ್ನು ನಾನೂ ಗಮನಿಸಿದೆ....
ಅಜ್ಜ ರೀ ಕಂಡಕ್ಟರೇ....ಇದು ಹರ್ದೋಗಿದೆ ಬೇರೇ ನೋಟ್ ಕೊಡಿ ಎಂದಾಗ
ಇರೋದ್ ಅದೇ ನಿಮಿಗ್ ಕೊಡೋಕ್ ಹೊಸ ಪ್ರಿಂಟ್ ಮಾಡ್ಲಾ....20 ರುಪಾಯಿ ಟಿಕೇಟ್ ಗೆ ನೂರ್ ರುಪಾಯಿ ಕೊಟ್ಟು....ನಿಮ್ದೇ ಮಾತು....ಇಲ್ಲ 20 ರುಪಾಯಿ ಕೊಡಿ..ಎಂದ...
ಅಜ್ಜನ ಬಳಿ ಇಪ್ಪತ್ತು ರುಪಾಯಿ ಚಿಲ್ಲರೆ ಇದ್ದಿದ್ದರೆ ಅವರ್ಯಾಕೆ ನೂರರ ನೋಟು ಕೊಡುತಿದ್ದರು....
ಈ ಕಂಡಕ್ಟರ್ಗಳು ಹೀಗೇ ಹರಿದ ನೋಟುಗಳನ್ನು ಹೀಗೆ ಸಾಗಿಸಿ ಬಿಡ್ತಾರೆ.....
ಅಜ್ಜ ಸುಮ್ಮನಿರಲಿಲ್ಲ....ತಕ್ಷಣ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ತನ್ನ ಊರಿನವನೇ ಆದ ಒಬ್ಬನನ್ನು ಕೂಗಿ...ಅವನ ಬಳಿ ಇದ್ದ 10 ರ ಒಳ್ಳೆ ನೋಟಿಗೆ ಬದಲಿಗೆ ಕಂಡಕ್ಟರ್ ಕೊಟ್ಟ ಹರಿದ  ನೋಟು ಕೊಟ್ಟು ....ತಗೋ ಇದನ್ನೇ ಕೊಡು ಟಿಕೆಟ್ಗೆ ಅಂತ ಹೇಳಿದರು....
ಇದನ್ನೆಲ್ಲ....ಗಮನಿಸುತಿದ್ದ ಕಂಡಕ್ಟರ್ ಪೆಚ್ಚಾದ....
ಹಿಂಬದಿ ಸೀಟಿನ ಅಜ್ಜನ ಗುರುತಿನವ ಹಾಗೇಯೇ ಮಾಡಿದ....
ಈಗ ಕಂಡಕ್ಟರ್ಗೆ ಏನೂ ಹೊಳೆಯಲಿಲ್ಲ...ಬೇರೆ ನೋಟು ಕೊಡಿ ಅಂತ ಹೇಳಲಾಗೊಲ್ಲ....ಏಕೆಂದರೆ ತಾನೇ ಬೇರೆಯವರಿಗೆ ಕೊಟ್ಟ ನೋಟಿದು....
ಮರು ಮಾತಾಡದೆ ಟಿಕೇಟ್ ಹರಿದು ...ಮುಂದೆ ಸಾಗಿದ....
ಬುದ್ದಿವಂತಿಕೆಯಿಂದ ಎಂತಹ ಸಂದರ್ಭವನ್ನು ನಮಗೆ ಅನುಕೂಲವಾಗುವಂತೆ ಮಾಡಿಕೊಳ್ಳಬಹುದೆಂಬ ಸಂದೇಶ ಸದ್ದಿಲ್ಲದೆ....ಸಾರಿತ್ತು...
ಮುಂದೆ ನನ್ನ ಸ್ಟಾಪ್ ಬಂದಾಗ ಇಳಿದು ....
ನನ್ನ ಮನೆಗೆ
   ಬಸ್ ಇಳಿವ ಸ್ಟಾಪ್ ನಿಂದ 2 ಕಿ ಮೀ
ನೆಡೆದು ಅಥವಾ ಆಟೋದಲ್ಲಿ ಸಾಗಬೇಕು....
ಮಳೆ ಕಾರಣ....ಆಶ್ರಯಕ್ಕೆಂದು ಹತ್ತಿರದ ಹೊಟೆಲ್ ನಲ್ಲಿ ನಿಂತು ಬಿಸಿ ಬಿಸಿ ಕಾಫಿ.....ಜೊತೆಗೆ ಬಜ್ಜಿ ಸವಿದೆ....ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ ತಿನ್ನುವ ಮಜವೇ ಬೇರೆ...
ಸ್ವಲ್ಪ ಸಮಯದ ನಂತರ ಮಳೆ ಕಡಿಮೆಯಾಯಿತು ಮನೆಗೆ ಆಟೋ ಹಿಡಿದು....ಹೊರಟೆ....
                             ರಚನೆ
                  ಶ್ಯಾಮ್ ಪ್ರಸಾದ್ ಭಟ್



ಜೀವ ನದಿ



ತೊಡರುಗಳ ನಡುವೆ ಜನಿಸಿದ ಪುಟ್ಟ ನದಿ
ಪಯಣದಿ ಸ್ನೇಹಿತರ ಕೂಡುತ್ತ
ತನ್ನ ಒಗ್ಗಟ್ಟಿನ ವಿಸ್ತಾರವ ಹಿಗ್ಗಿಸುತ್ತ
ಶರಧಿ ಕಾಣುವ ತವಕದಿ ಸಾಗಿದಳು ಭರದಿ

ಕಾಡು ನಾಡಿನ ಜೀವಿಗಳ ಜೀವನಾಡಿ
ಜೀವ ತುಂಬುವ ಜೀವ ನದಿ

ವರ್ಷ ಋುತುವಿನಲಿ ಪುಟ್ಟ ಹನಿಯಾಗಿ
ಭುವಿಗೆ ಬರುವೆ.....
ಭುವಿಯ ಗೆಳೆಯರ ಕೂಡಿ
ಭೋರ್ಗರೆದು ಹರಿವೆ.....

ವರ್ಷ ಋುತುವಿನಲಿ ರೌದ್ರ ರೂಪವ ತಾಳುವೆ
ಮಾನವ ಪಾಪ ಕೂಪಗಳ ಕೊಚ್ಚಿ ತೊಳೆವೆ
ಮುಂಜಾವು ಸಂಧ್ಯಾ ಕಾಲದಿ ಚಿನ್ನದ ರೂಪದಿ ಹೊಳೆವೆ
ನಿನ್ನ ಮಡಿಲ ತೀರದಿ ಮಲಗಿ ನನ್ನೇ ನಾ ಮರೆವೆ...

ನಿನ ಮುಂದೆ ನಾನಲ್ಲ ಶೂರ
ಬದುಕಿದ ಇತಿಹಾಸವುಂಟೆ ನೀರ ಕುಡಿಯದ ವೀರ..

                               ರಚನೆ   
                  ಶ್ಯಾಮ್ ಪ್ರಸಾದ್ ಭಟ್


ಪೋಸ್ಟ್     ಪೋಸ್ಟ್ 

 ನನ್ನ ಗೆಳೆಯನಿಗೊಂದು ಪುಸ್ತಕ ಕಳುಹಿಸುವ ಸಲುವಾಗಿ ಪೋಸ್ಟ್ ಆಫೀಸಿಗೆ ಹೋಗಿದ್ದೆ....


  ಆಫೀಸಿನ ಹೊರಬ‌ಾಗಿಲಲ್ಲಿ....ಕೆಂಪನೆ ಪೋಸ್ಟ್  ಡಬ್ಬವೊಂದು ಕಾಣಿಸಿತು...


ಅದನ್ನು ಕಂಡಾಗಲೆಲ್ಲ...ನನ್ನ ಬಾಲ್ಯದ ನೆನಪಿಗೆ ಜಾರುತ್ತೇನೆ..


ಒಂದು ಪ್ರಸಂಗವನ್ನು ನಾನು ಹೇಳಲೇ ಬೇಕು...


ನಾನು ಆಗ ಆರನೇ ತರಗತಿ ಓದುತಿದ್ದ ಸಮಯ....ನಮಗೆ ಕನ್ನಡ ಮೇಷ್ಟ್ರು ಪತ್ರ ಬರೆಯುವ ಮಾದರಿ ವಿಧಾನಗಳನ್ನು ಹೇಳಿಕೊಡುತಿದ್ದರು ....


ವ್ಯವಹಾರಿಕ ಪತ್ರ ಬರೆಯುವ ವಿಧಾನ ಹಾಗೂ ..ವೈಯಕ್ತಿಕ  ಪತ್ರ ಬರೆಯುವ ಭಿನ್ನ ಭಿನ್ನ ವಿಧಾನವನ್ನು ಹೇಳಿಕೊಟ್ಟರು.....

ಹಾಗೆಯೇ ಎಲ್ಲರೂ ತಮ್ಮ  ಪ್ತೀತಿ ಪಾತ್ರರಿಗೆ.. ಬಂಧುಗಳಿಗೆ ಪತ್ರ ಬರೆದು ಅಂಚೆಯ ಉಪಯೋಗ ಪಡೆಯ ಬೇಕೆಂದು ಹೇಳಿದರು ....


ನನಗೋ ಹುಡುಗಾಟ ...ಕುತೂಹಲದ ಬುದ್ದಿ ಸರಿ ಇವತ್ತು ಸಂಜೆಯೇ ಮನೆಗೆ ಹೋದವನೇ ಅಪ್ಪನಿಗೆ ಕಾಟ ಹಾಕ ಹಠ ಹಿಡಿದು ಚೀಕನಹಳ್ಳಿ ಪೋಸ್ಟ್ ಆಫಿಸಿಗೆ ಹೋದೆವು ....ಬಾಗಿಲು ಬೀಗ ಜಡಿದಿತ್ತು...


ಅಲ್ಲೆ ಪಕ್ಕದಲ್ಲೆ ಪೋಸ್ಟ್ ಮಾಸ್ಟರ್ ನಾರಾಯಣಣ್ಣ ನ ಮನೆ ....ಪರಿಚಯ ಇದ್ದದದರಿಂದ ಒಂದು ಅಂಚೆ ಕಾರ್ಡು ಪಡೆದು ....ಮನೆಗೆ ಬಂದೆವು ...


ರಾತ್ರಿ ಅಮ್ಮ ...ಅಪ್ಪನನ್ನು ಒಟ್ಟಿಗೆ ಕರೆದು ....ಸೀಮೇ ಎಣ್ಣೆ ದೀಪದ ಸುತ್ತ ಕುಳಿತು ....ಅಜ್ಜಿ ಮನೆಗೆ ...ಅಂದರೆ ನನ್ನ  ‍ಅಮ್ಮನ ಅಮ್ಮ ನ ಮನೆಗೆ ಪತ್ರ ಬರೆಯೋದೆಂದು ನಿರ್ಧಾರವಾಯಿತು ....


ಸರಿ ನಾನು ನನ್ನ ಕಾಗೇ ಕಾಲು ..ಗೂಬೇ ಕಾಲು ಅಕ್ಷರದಲ್ಲಿ ....ಒಂದಷ್ಟು ಗೀಚಿದೆ ...‍ಅಜ್ಜಿ ...ಚನ್ನಾಗಿದಿರಾ ಮಾವ ...ಚಿಕ್ಕಮ್ಮ ಹೇಗಿದ್ದಾರೆ ಎಲ್ಲವೂ ಆಯಿತು ಆಂಗಳದಲ್ಲಿರುವ ಇಟ್ಟಿಗೆಗಳು ಹಾಗೇ ಇರಲಿ ರಜೆಗೆ ಬಂದಾಗ ಮನೆ ಮಾಡಿ ಗಣಪತಿ ಕೂರ್ಸೋಕೆ ಬೇಕು .. ಹಾಗೇ ಹೀಗೆ ಒಂದಷ್ಟು ಮಾತು ಬರೆದೆ..ಅಮ್ಮನ ಮಾತು  ಒಂದಷ್ಟು ಪುಟ ತುಂಬಿತು...


ಸರಿ ಎಂದು ಮಡಿಸಿ ಕವರ್ ನೊಳಗೆ ಹಾಕಿ ಅದರ ಮೇಲೆ ತಲುಪಿಸಬೇಕಾದ ವಿಳಾಸ ಹಾಗೂ ನಮ್ಮ ವಿಳಾಸ ಎಲ್ಲಾ ಬರೆದು ....ಮುಂದಿನ ದಿನ ಪೋಸ್ಟ್ ಮಾಡಲು ಅಪ್ಪನ ಬಳಿ ಕೊಟ್ಟು  ...ನಾನು ಶಾಲೆಗೆ ಹೊರಟೆ....


ಆಗ ನಮ್ಮನೆಯಲ್ಲಿ ಫೋನ್ ಇರಲಿಲ್ಲ....ಮಾತನಾಡಬೇಕಾದರೆ ಅಂಗಡಿಯಲ್ಲಿಟ್ಟಿದ್ದ ಹಳದಿ ಬಣ್ಣದ ಕಾಯನ್ ಬೂತ್ ಗೆ ಹೋಗಬೇಕಿತ್ತು...


...ಇಷ್ಟಾದ ಮೇಲೆ ಶಾಲೆಯಿಂದ ಮನೆಗೆ ಬಂದವನೆ ಪೋಸ್ಟ್ ಮಾಡಿದೆಯ ....ಆ ಡಬ್ಬಿ ಒಳಗೆ ಕವರ್ ಹಾಕಿರುವ ಬಗ್ಗೆ  ಖಚಿತ ಪಡಿಸಿಕೊಂಡೆ ...


     ಕೆಲ ದಿನಗಳು ಕಳೆದ ಮೇಲೆ ...

ಪರೀಕ್ಷೆಯು ಮುಗಿಯಿತು ...ಪರೀಕ್ಷೆ ಗೆ ಪತ್ರ ಬರೆಯುವ ಬಗ್ಗೆ ಗೆಳಯನಿಗೆ ಒಂದು ಪತ್ರ ಬರೆಯಿರಿ ಎಂಬ ಪ್ರಶ್ನೆ ಗೆ ನಾನು ಬರೆದ ಪತ್ರ ನೆನೆದು ...ಪರೀಕ್ಷೆ ಮುಗಿಸಿದೆ...


ಪರೀಕ್ಷೆ ಮುಗಿದ ಮೇಲೆ ನಮ್ಮ ಕೆಲಸ ದಾರಿ ಕಾಯುವುದು ಮಾವ ಬಂದು ನಮ್ಮನ್ನೆಲ್ಲ ಅಜ್ಜಿ ಮನೆಗೆ ಕರೆದು ಕೊಂಡು ಹೋಗುವುದು ...ಬೇಸಿಗೆ ರಜೆ ಮುಗಿಯುವ ವರೆಗೂ ನಮ್ಮ ಠಿಕಾಣಿ ಅಲ್ಲೆ...


ಪತ್ರದ ಕುರಿತು ವಿಚಾರಿಸಿದೆ....ಬಂದಿಲ್ಲ...ಎಂಬ ಉತ್ತರ ಮಾವನಿಂದ ಹೊರಬಿತ್ತು....ನನ್ನ ಅಪ್ಪನನ್ನೇ ದೂರಿಕೊಂಡು ಸರಿಯಾಗಿ ಪೋಸ್ಟ್ ಮಾಡಿಲ್ಲ ಅದಕ್ಕೆ ಬಂದಿಲ್ಲ....ಎಂದು ಕೊಂಡು ಅಜ್ಜಿ ಮನೆಗೆ ಹೋದೆ...

ಅಲ್ಲಿಯ ಗೆಳೆಯರೊಂದಿ ಆಟದಲ್ಲಿ ಕಾಲ ಕಳೆದು ಕೆಲ ದಿನಗಳು ಕಳೆಯಿತು....

 ನಮ್ಮ ಅಜ್ಜಿಗೆ ವಯಸ್ಕರ ಪೆನ್ಷನ್ ಪೋಸ್ಟ್ ಆಫೀಸಿಗೆ  ಬರುತಿತ್ತು ....ಹಾಗಾಗಿ ತಟ್ಟೇಕೆರೆ ಪೋಸ್ಟ್ ಆಫೀಸಿಗೆ ಹೋಗಿ ಮನೆಗೆ ಬರುವಾಗ ...ಒಂದು ಕಾರ್ಡ್ ನ್ನು ತಂದು ನನ್ನ ಕೈಗೆ ಕೊಟ್ಟು ಓದಲು ಹೇಳಿದರು ....


ವಿಪರ್ಯಾಸ ಅಂದರೆ ಇದೇ ಅಲ್ಲವೇ .....ನಾನು ಬರೆದ ಕ್ಷೇಮ ಸಮಾಚಾರದ ಕಾರ್ಡು ನನ್ನ ಕೈಯಲ್ಲಿತ್ತು...ಅಯ್ಯೋ ದೇವ್ರೇ ....ಎಂದುಕೊಂಡು ಓದಲು ನಾಚಿಕೊಳ್ಳುತ್ತ...


.ಆ ಕಾರ್ಡ್ ನ್ನು ಅಲ್ಲೇ ಇಟ್ಟು ಗೆಳೆಯರೊಂದಿಗೆ ಆಡಲು ಓಡಿದೆ....

ಇದು ನನ್ನ ಪೋಸ್ಟ್ ಆಫೀಸಿನ ಹಳೇ ಸಂಬಂಧದ ಮಾತು.


ಆದರು ಈ ಕೆಂಪು ಪೆಟ್ಟಿಗೆ ಸಾಮಾನ್ಯ ವೆಂದು ತಿಳಿಯ ಬೇಡಿ ....ಸ್ವಾತಂತ್ರ್ಯ ಹೋರಾಟಗಾರರ ಪತ್ರಗಳು ಸಂಚರಿಸಿದ ಪೆಟ್ಟಿಗೆ ....ಎಷ್ಟೋ ಸುಖ : ದುಃಖ ಗಳ ಪತ್ರಗಳನ್ನು ತನ್ನೊಡಲಲ್ಲಿ ಹೊತ್ತು....ಸಂಬಂಧಪಟ್ಟವರಿಗೆ ತಲುಪಿಸಿದ ಪೆಟ್ಟಿಗೆ ..

ಎಷ್ಟೋ ಪ್ರೇಮಿಗಳಿಗೆ ಪ್ರೇಮ ಕಥೆಗಳಿಗೆ ಲವ್ ಗುರು ಎನಿಸಿಕೊಂಡ ಪೆಟ್ಟಿಗೆ ....ಇಂದು ಮೊಬೈಲ್ ಗಳು ಸಾಕಷ್ಟು ಸಂಪರ್ಕ ಮಾಧ್ಯಮಗಳು ಬಂದರು ತನ್ನ ಕರ್ತವ್ಯ ನಿಷ್ಠೆ ಬಿಟ್ಟುಕೊಡದ  ಅನಿವಾರ್ಯ ವಾಗಿರುವ ಪೆಟ್ಟಿಗೆ ..

ಪೋಸ್ಟ್ ಆಫೀಸನ್ನು ....ಪೋಸ್ಟ್ ಬಾಕ್ಸನ್ನು ಬಳಸಿ..ಉಳಿಸಿ...

ತಾತನಿಗೆ ಮುಪ್ಪಾದರು ...ತಾತನ ಅನುಭವದ ಕಥೆಗಳಿಗೆ ಮುಪ್ಪಿಲ್ಲ

                                      ಇಂತಿ ನಿಮ್ಮ ಪ್ರೀತಿ ಪಾತ್ರ 

                                      ಶ್ಯಾಮ್ ಪ್ರಸಾದ್ ಭಟ್

Thursday, August 20, 2020

ಮೃಗವಾಣಿ

 



ಮೃಗವಾಣಿ


ಕ್ರೂರತೆಯ ಕೊರಳಿನಲ್ಲಿ ತೊಟ್ಟು

ನಗದ ಮೊಗದ ಗಂಭೀರವನಿಟ್ಟು

ಜಗ್ಗದ ಕುಗ್ಗದ ಹೆಜ್ಜೆಯನಿಟ್ಟು

ನೆಡೆದು ಬಂದ ಕಾಡಿನ ಕಂಠೀರವ

ಇವನ ಘರ್ಜನೆ ಅತಿ ರೌರವ


ರಕ್ಷೆಗೆ ಸಿಂಹವ ಕೂರಿಸಿ

ಯುಕ್ತಿಗೆ ನರಿಯ ನೇಮಿಸಿ

ಕಾಡ ಮೃಗಗಳೆಲ್ಲವು ನಮಿಸಿ

ಪಟ್ಟಾಭಿಷೇಕವ ಪೂರೈಸಿದವು

ಪ್ರಭುವೇ ನಮ್ಮ ಮೊರೆಯ ಕೇಳಿ

ನೂರ್ಕಾಲ ನಮ್ಮನಾಳಿ ಎಂದು ಹರಸಿದವು


ಸಿಂಹ ರಾಜ್ಯದಿ ಮರುದಿನದಿ

 

ಹಸಿದ ಸಿಂಹವು ಹಲ್ಲ ಮಸೆದು

ಬಡ ಪ್ರಾಣಿಯ ರಕ್ತ ಸವಿದು

ಬಡ ಪ್ರಾಣಿಗಳೆಲ್ಲ ಗುಂಪು ಸೇರಿ

ಸಿಂಹದ ಅನ್ಯಾಯವ ಸಾರಿ


 ಬಡ ಮೊಲದ ಕೂಗು ಧ್ವನಿಸಿತು

   ಸಿಂಹದ ನೇಮಕ ನಮ್ಮ ರಕ್ಷಣೆಗೋ?

         ನಮ್ಮೆಲ್ಲರ ಭಕ್ಷಣೆಗೋ...?


ಉತ್ತರ ???   ಮೌನ

                                  ರಚನೆ 

                     ಶ್ಯಾಮ್ ಪ್ರಸಾದ್ ಭಟ್




Friday, January 10, 2020

ಹಾಗೇ ಸುಮ್ಮನೆ



ಮೈಸೂರಿನಿಂದ ಕಾಲೇಜಿಗೆ ೨ದಿನಗಳ ರಜೆ ಎಂದು ಮನೆಗೆ ಹೋಗಿದ್ದೆ....

ಮನೆ ತಲುಪುವಷ್ಟರಲ್ಲಿ...ಕತ್ತಲೆ ಆವರಿಸುತಿದ್ದ ಸಂಜೆ ಸಮಯ...ಧೀರ್ಘ ಪಯಣದಿಂದ ಸುಸ್ತಾಗಿದ್ದರಿಂದ .....ಮನೆ ತಲುಪಿ ಊಟ ಮಾಡಿ ಮಲಗಿದೆ....

    ಮರುದಿನ ಬೆಳಗ್ಗೆ....

ಏಳೋ ಮೇಲೆ ... ಕಾಫಿ ಇಟ್ಟೀದಿನ್ ನೋಡು ಟೇಬಲ್ ಮೇಲೆ  ತಗೋ...
   ಕಣ್ಣುಜ್ಜುತ್ತ...ರೂಮಿನಿಂದ ಹೊರ ಬಂದು....
ಹಾಲ್ ನಲ್ಲಿ ತೂಗು ಹಾಕಿದ್ದ ಲಕ್ಷ್ಮೀ ವೆಂಕಟೇಶನ ಫೋಟೋ ನೋಡಿ ಕೈ ಮುಗಿದು....
ಸೋಫಾ ಮೇಲೆ ಧುಪ್ ಎಂದು ಕುಳಿತೆ....
ಕಾಫಿ ಕಪ್ ಕೈಗೆತ್ತಿಕೊಂಡು....ಪಕ್ಕದಲ್ಲೇ ಇದ್ದ ಅಪ್ಪ ಓದಿ ಸುಕ್ಕು ಸುಕ್ಕಾಗಿ ಮಡಚಿಟ್ಟ ಅಂದಿನ ನ್ಯೂಸ್ ಪೇಪರ್ ಕೈಗೆತ್ತಿಕೊಂಡೆ...

ಸುದ್ದಿಗಳನ್ನು ಓದುತಿದ್ದಾಗ ನನ್ನ ಕಣ್ಣನ್ನ ಸೆಳೆದದ್ದು...ಪುಟ್ಟ ಕಾಲಂನಲ್ಲಿ ಪ್ರಕಟವಾದ.....ಲೇಖನ
ಅದನ್ನು ಓದೋಣವೆಂದು ಕೈಗೆತ್ತಿಕೊಂಡಾಗ ಅಮ್ಮನೂ ಕಾಫಿ ಕಪ್ ನೊಂದಿಗೆ ಹಾಲ್ ನಲ್ಲೇ ಬಂದು ಕುಳಿತರು
  ಪಟಕ್ಕನೇ ಟಿ.ವಿ ರಿಮೋಟ್ ಎತ್ತಿಕೊಳ್ಳುತಿದ್ದವರು ಸುಮ್ಮನೇ ಕುಳಿತಿದ್ದರು...ಕಾರಣ ಕರೆಂಟ್ ಇರಲಿಲ್ಲ...

ನಾನು ಗುನ ಗುನ ಎಂದು ಲೇಖನ ಓದುತಿದ್ದಾಗ
ಅದೇನ್ ಜೋರಾಗ್ ಓದು ನಾನು ಕೇಳ್ಸ್ಕೋತಿನಿ...ಎಂದಾಗ ಜೋರಾಗಿ ಓದಾಗಿ ಪ್ರಾರಂಭಿಸಿದೆ...

ಲೇಖನ:-
"ಆರ್ಮಿ ಜನರಲ್ ಆಗಿ ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ
ಕರ್ನಾಟಕದ ಹಾಸನದ ಮಂಜುನಾಥ್ ನೆನ್ನೇ ರೇಡಿಯೋ ಕಾರ್ಯಕ್ರಮದಲ್ಲಿ ಹಂಚಿಕೊಂಡ ಮಾತುಗಳಿವು
ನಾನು ಕೆಲಸ ಮಾಡುವ ಗಡಿ ಭಾಗದಲ್ಲಿ ಯಾವಾಗ ಘರ್ಷಣೆ ಪ್ರಾರಂಭವಾಗುತ್ತೋ ಹೇಳೋದು ಕಷ್ಟ ...
ಬೆಳಗ್ಗೆ ಶಾಂತಿಯಿಂದ ಇದ್ದ ಜನರು...ಮದ್ಯಾಹ್ನದೊತ್ತಿಗಾಗಲೆ ಕಲ್ಲು ಹಿಡಿದು ನಿಂತಿರುತ್ತಾರೆ....
ಕೆಲವೊಮ್ಮೆ ಕೆಲಸದ ಒತ್ತಡ.....ಈ ನಮಗೆ ಕೊಟ್ಟಿರುವ ಕಾರ್ಡ್ ಲೆಸ್ ಫೋನ್ ನಲ್ಲಿ....ನಮ್ಮ ನಮ್ಮ ತುಕಡಿಗಳನ್ನ ಸಂಪರ್ಕ ಮಾಡಬಹುದೇ ಹೊರತುಪಡಿಸಿ ಮನೆಗೆ ಫೋನ್ ಮಾಡಿ ಸಮಾಚಾರ ವಿಚಾರಿಸುವ ಫೋನ್ ಅಲ್ಲ....

ಮನೆಗೆ ಫೋನ್ ಮಾಡಬೇಕೆಂದರೆ ಆರ್ಮಿ ಕ್ಯಾಂಪ್ ಗೆ ಹೋಗ್ಬೇಕಿತ್ತು....ಅದಕ್ಕೆ ನಾನೇನ್ ಮಾಡ್ತಿದ್ದೆ...ನನ್ನ ರೂಮಿಗೆ ಸಮೀಪವೇ ಇದ್ದ ATM ಗೆ ಹೋಗಿ ದಿನಕ್ಕೆ ನೂರು ರುಪಾಯಿಯಂತೆ ಹಣ ಡ್ರಾ ಮಾಡುತಿದ್ದೆ....ಅದನ್ನ ಗಮನಿಸಿದ ನನ್ನ ಜೂನಿಯರ್ ಸಹೋದ್ಯೋಗಿ ರಾಮ್...ಸರ್ ನೀವ್ಯಾಕ್ ದಿನಾ ನೂರು ರುಪಾಯಿ ತಗೋತಿರಾ ಬದ್ಲಾಗಿ....ಒಂದೇ ಸಲ ತಿಂಗಳಿಗಾಗೋ ಅಷ್ಟು ಡ್ರಾ ಮಾಡ್ಬೋದಲ್ವ ಎಂದು ವಿಚಾರಿಸಿದರು....ಅದಕ್ಕೆ ನಾನೆಂದೆ...ಕಾರಣವಿದೆ ಮೈ ಡಿಯರ್....ರಾಮ್...ಪ್ರತಿ ದಿನ ಫೋನ್ ಮಾಡಿ ಫ್ಯಾಮಿಲಿ ಜೊತೆ ಮಾತಾಡೋದು ಎಷ್ಟು ಕಷ್ಟ ಅಂತ ನಿಂಗೇ ಗೊತ್ತಿರೋ ವಿಷ್ಯ...ಹಾಗಾಗಿ ನಾನು ಇಲ್ಲಿ ಹಣ ಡ್ರಾ ಮಾಡಿದ್ರೆ....ಅಮ್ಮನ ಮೊಬೈಲ್ ಗೆ ಮೆಸೆಜ್ ಹೋಗತ್ತೆ .....ಅಮ್ಮನಿಗೆ ನಾನು ಕೊಡೋ ಸಂದೇಶ ಅದು ನನಗೇನು ಆಗಿಲ್ಲ....ನಾನು ಜೀವಂತವಾಗಿಯೇ ಇದ್ದೇನೆ ಎಂಬುದರ ಸೂಚಕ ಆ ಮೆಸೇಜ್ ....ಎಂದೆ....

   ಸರ್....ur great sir...ಒಳ್ಳೆ ಉಪಾಯ ಮಾಡಿದಿರಾ ....ಎಂದವನೆ...ಒಂದು ಸಲ್ಯೂಟ್ ಕೊಟ್ಟು .... ಬರ್ತೀನಿ ಸರ್ ಎಂದು ಹೊರಟ...."

 ಹೀಗೆ ಲೇಖನ ಓದಿದ ಮೇಲೆ....

ಅಮ್ಮ...ಚನ್ನಾಗಿದೆ ಅಲ್ವ ಅವ್ನ ಮಾಡಿರೋ ಐಡಿಯಾ ಎಂದರು ....
ಹುಂ ಎಂದೆ...
ಅಮ್ಮ....ನಾನು ದೂರದ ಮೈಸೂರಲ್ಲಿ ಇರೋದು ...ನನ್ನ ಕಾಲೇಜಿನ ಓದು ಬರಹದ ಒತ್ತಡದಲ್ಲಿ ದಿನವೂ ಕಾಲ್ ಮಾಡಲು ಕಷ್ಟವೇ...ಹಾಗೇ 2 ದಿನಕ್ಕೊಮ್ಮೆ ಕಾಲ್ ಮಾಡಿ ಬೈಸ್ಕೋತಿರ್ತಿನಲ್ವ...

ಅದ್ಕೆ ನಾನು ಹೀಗೆ....ದಿನಾ ನೂರು ರುಪಾಯಿ  ATM ನಲ್ಲಿ ....ಡ್ರಾ ಮಾಡ್ತಿನಿ....ನಿಂಗ್ ಡ್ರಾ ಮಾಡಿರೋ ಮೆಸೇಜ್ ಬಂದ್ರೆ ನಾನ್ ಚನಾಗಿದಿನಿ ಅಂತಾ....ಅಂದ್ಕೋ
ಎಂದು..ಜೋರಾಗಿ ನಕ್ಕುಬಿಟ್ಟೆ..

ಹೊ.... ಹೊ ....ನೀನ್ ಯಾವ್ ದೇಶ ಕಾಯ್ತಿದಿಯಪ್ಪಾ...
ಬೇಡ ನೂರು ರುಪಾಯಿ ಕರೆನ್ಸಿ ನನ್ ಮೊಬೈಲ್‌ ಗೆ ಹಾಕ್ಸು....ನಾನೇ ದಿನ ಫೋನ್ ಮಾಡ್ತೀನಿ....

  ಯಪ್ಪಾ...ನೀನು ‍ಆ ಆರ್ಮಿ ಅವ್ನ್ ಗಿಂತ ಬ್ರಿಲಿಯಂಟು ಬಿಡಮ್ಮಾ...ಎಂದು ..... ಜೋರಾಗಿ ಇಬ್ಬರು ನಕ್ಕೆವು...

                                     ರಚನೆ
                        ಶ್ಯಾಮ್ ಪ್ರಸಾದ್ ಭಟ್


   


Sunday, December 22, 2019

ಅನ್ನದಾತ




                                      

ನಾನು ನಿಮ್ಮ ಊರಿನ ರೈತ
ಗೌರವದಿ ಕರೆವರೆನ್ನ ಅನ್ನದಾತ
ನೆಚ್ಚಿ ಬದುಕಿಹೆ ಈ ನೇಗಿಲ
ಭೂ ತಾಯ, ಮಾಳಿಗೆ ಮುಗಿಲ

ಉತ್ತು ಬೆಳೆವೆ ಬೆಳೆಯ
ಕಿತ್ತೆಸೆದು ಬೇಡದ ಕಳೆಯ
ಹೇ ದೇವ ಸುರಿಸು ಭುವಿಗೆ ಮಳೆಯ
ನಾ ನಿನ್ನನ್ನೇ  ನಂಬಿರುವ ಗೆಳೆಯ

ಹೆಸರಿಗೆ ನಾನಂತೆ ದೇಶದ ಬೆನ್ನಲುಬು
ಊರಿಗೆ ನನದಂತೆ ಬಡ ಕಸುಬು
ಬೇದ ಮಾಡದೆ ಉಣುವಿರಿ ನಾ ಕೊಟ್ಟ ಅನ್ನದಲಿ
ಬೇದ ತೋರುವಿರೇಕೆ ನಾ ತೊಟ್ಟ ಬಟ್ಟಿಯಲಿ

ಯಾರೇನೆ ಹೊಗಳಲಿ ತೆಗಳಲಿ
ಉಳುವುದೇ ನನ ಕುಲ ಕಸುಬು
ಶತಮಾನಗಳು ಉರುಳಿದರು ನಾನೇ ದೇಶದ ಬೆನ್ನೆಲುಬು

                ರಚನೆ
       ಶ್ಯಾಮ್ ಪ್ರಸಾದ್  ಭಟ್
            ಮೂಡಿಗೆರೆ


Thursday, November 28, 2019

ಅರ್ಥ ದ ಅನರ್ಥ


 


ಒಮ್ಮೆ ವಿಜ್ಞಾನ ಬೋದಿಸುವ ಮೇಡಮ್...ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು...ಮಕ್ಕಳಿಗೆ ಸೆಮಿನಾರ್ ಮಾಡಲು ವಿಷಯ ಗಳನ್ನು ಮಕ್ಕಳಿಗೆ ಹಂಚುತಿದ್ದರು...
 
ಅಟೆಂಡೆನ್ಸ್ ಪ್ರಕಾರ topics ಬರ್ಕೋಳಿ
  ಅಮೀಬಾ
  ಹೃದಯ
ಕಣ್ಣಿನ ರಚನೆ
‌ ಏಡ್ಸ್
ರೇಬಿಸ್
ಮಲೇರಿಯಾ.....etc

ಹೀಗೆ ಎಲ್ಲರಿಗೂ topics ಹಂಚಿಕೆಯಾದ ಮೇಲೆ....ಮೇಡಂ ಯಾರ್ಯಾರಿಗೆ ಯಾವ್ಯಾವ ವಿಷಯ ಬಂದಿದೇ ಹೇಳ್ತಾ ಹೋಗಿ...
  ಮಹೇಶ ಎದ್ದು ನಂಗ್ ಅಮೀಬಾ ಮಿಸ್

ರಮೇಶ ನಂಗ್ ಹೃದಯ ಮಿಸ್ ಎಂದ

ರೋಹಿತ್ ನಂಗ್ ಕಣ್ಣು ಮಿಸ್ ಎಂದ
  ಮುಂದಿನವ ರಾಮು...

  ರಾಮು ಎದ್ದು ನಂಗ್ ಏಡ್ಸ್ ಮಿಸ್ ಎಂದು ಬಿಟ್ಟ

 ಹೀಗೆ ಭಾಷೆ ಸರಿಯಾಗಿ ಬಳಕೆ ಯಾದಾಗ ಮಾತ್ರ ಅರ್ಥಪೂರ್ಣವಾಗುತ್ತದೆ....ಇಲ್ಲವಾದಾಗ ಅರ್ಥ ದ ಅರ್ಥ ಕೆಟ್ಟು ಅನರ್ಥವಾಗುತ್ತದೆ....
       
           
                 ರಚನೆ
     ಶ್ಯಾಮ್ ಪ್ರಸಾದ್ ಭಟ್

ನಿವಾಸ

ನಿವಾಸ


                                           


 ಮನೆಗೆ ಹೆಸರಿಡುವುದು ಇತ್ತೀಚೆಗೆ..... ಒಂದು ಸಂಪ್ರದಾಯವಾಗಿದೆ..
ಬಹಳ ಹಿಂದಿನಿಂದ ಜನರ ಜಾತಿ ...ಸಮಾಜದಲ್ಲಿನ ಸ್ಥಾನ ಮಾನ ಆಧಾರಿತವಾಗಿ ..
ಪಟೇಲರ ಮನೆ ....ಶೆಟ್ಟರ ಮನೆ ....ಭಟ್ಟರ ಮನೆ....ಕೆಳಗಿನ ಮನೆ....ತೊಟ್ಟಿ ಮನೆ ಹೀಗೆ ಸ್ವಯಂ ಆಕಾರಕ್ಕೋ....ಯಜಮಾನನ ಸ್ಥಾನ ಮಾನ ...ಆಧಾರಿತವಾಗಿಯೇ ಮನೆಗೆ ಹೆಸರು ಬಂದಿರುತಿತ್ತು....

ಆದರೆ ಹಳ್ಳಿ ಬದಲಾಗಿ ಬಡಾವಣೆಯಾದ ಮೇಲೆ ಎಲ್ಲಾ ಒಂದೇ ರೀತಿ ಕಾಂಕ್ರಿಟ್ ಕಟ್ಟಡಗಳ ನಡುವೆ ತನ್ನ ಮನೆಯನ್ನು ಗುರುತಿಸಲು ಅದಕ್ಕೊಂದು ಹೆಸರು...ಮುನ್ಸಿಪಲ್ ನವರು ಮನೆ ಏಣಿಸಿ ಹಾಕಿದ ನಂಬರು...ಇರುವುದು....ಸಹಜವಾಗಿ ಬಿಟ್ಟಿದೆ....
ನಗರದಲ್ಲಿ ಒಬ್ಬರ ಮುಖ ಒಬ್ಬರಿಗೆ ಪರಿಚಯಿಸಿಕೊಳ್ಳಲು ಒಪ್ಪದವರು...ಅಥವಾ ಸಮಯವಿಲ್ಲದವರನ್ನ...ಸ್ವಯಂ ಆಗಿ ಅವರ ಸ್ಥಾನ ಮಾನ ದಿಂದ ಮನೆಗೆ ಹೆಸರು ತಂದು ಕೊಡುವುದು ಕಷ್ಟ ವೆಂದೋ ಏನೋ...ಕಟ್ಟಡ ಕಟ್ಟಿದ ನಂತರ ತಾವೇ ಒಂದು ಚಂದದ ಹೆಸರಿಡುತ್ತಾರೆ......


ಹಳ್ಳಿಯವನಾದ ನಾನು ಒಮ್ಮೆ ನಗರಕ್ಕೆ ಬಂದಾಗ ಒಂದು ಬಡಾವಣೆಯಲ್ಲಿ ನೆಡೆದು ಹೋಗುವಾಗ ಗಗನದೆತ್ತರಕ್ಕೆ ಎದ್ದು ನಿಂತ ಮನೆಗಳನ್ನು ಗಮನಿಸುತ್ತಾ ಸಾಗಿದೆ...
ಒಂದೊಂದು ಮನೆಗೂ ಒಂದೊಂದು ಹೆಸರು   ನಾನು ಈ ಕಡೆ ಯಿಂದ ಆ ಬೀದಿಗೆ ಹೋಗುವಾಗ ಕಂಡ ಮನೆಗಳ ಹೆಸರುಗಳು ....ಮೊದಲನೆ ಮನೆ ಶಾಂತಿ ನಿವಾಸ....ಎರಡನೆ ಮನೆ " ನೆಮ್ಮದಿ "ನಿವಾಸ...
"ಕರ್ಮ "ನಿವಾಸ

ಜೇನು ಗೂಡು.... ದುಂಬಿ ನಿಲಯ
  ಹೀಗೆ ಅನೇಕ ಮನೆಗಳ ಹೆಸರು ಕಂಡು ಪಕ್ಕದ ಬೀದಿಯಲ್ಲಿ ನನ್ನ ಕೆಲಸ ಮುಗಿಸಿ  ಅದೇ ಬೀದಿಯಲ್ಲಿ ಹೊರಟೆ ಇತ್ತ ಕಡೆಯಿಂದ ಹೊರಟಾಗ ಮೊದಲ ಮನೆ  ದುಂಬಿ ನಿಲಯ .....ದ ಬಳಿ ಹೊಗುತಿದ್ದಂತೆ...ಮನೆಯ ಒಳಗೆ ಸಣ್ಣದಾಗಿ ಜಗಳದ ಸದ್ದು ಕೇಳಿಸಿತು ....ಆಗ ನನ್ನ ಮನದಲ್ಲೆ ಇದು ದುಂಬಿ ನಿಲಯವಲ್ಲ ದೊಂಬಿ ನಿಲಯ ಎಂದು ಕೊಂಡು .... ಮುಂದೆ ಸಾಗಿದೆ ....ಮುಂದಿನ ಮನೆ ಜೇನು ಗೂಡಲ್ಲಿ ...ಇದ್ದದ್ದು ಗಂಡ - ಹೆಂಡತಿ ದಂಪತಿಗಳು ಮಾತ್ರ....

ಮುಂದೆ ಸಾಗಿದೆ....ಕರ್ಮ ನಿವಾಸ
ಅರ್ಥ ವೇ ಗೊಂದಲಕ್ಕೀಡು ಮಾಡಿತು.....ಇದು ಯಾವ ಕರ್ಮ ಎಂದು ....ತಿಳಿಯದೆ
ಹಾಗೇ ಮುಂದೆ ಸಾಗಿದೆ ....
 ನೆಮ್ಮದಿ ನಿಲಯದ ಮುಂದೆ ಪಕ್ಕದ ಶಾಂತಿ ನಿಲಯದ ಮನೆಯವರ ನಡುವೆ ಯಾವುದೋ ಸಣ್ಣ  ವಿಚಾರಕ್ಕೆ ಶಾಂತಿ ನೆಮ್ಜಮದಿಗಳಿಗೆ ಜಗಳವಾಗುತಿತ್ತು...

ಆಗ ನನಗನ್ನಿಸಿದ್ದು...

ಈ ನಗರದಲ್ಲಿ ಮನೆಯಲ್ಲಿ ಯಾವುದು ಇಲ್ಲವೋ  ಅದನ್ನೇ  ಮನೆಯ ಹೆಸರಾಗಿಟ್ಟಿರುತ್ತಾರೆ ಎಂಬುದು....
 ಹೊಲ ಗದ್ದೆ  ಮಾರಿ ಕಟ್ಟಿದ ಮನೆಗೆ   ಐಶ್ವರ್ಯ ನಿವಾಸ..

 ಮನೆಗೆ ತೆರಳುವಾಗ ನನ್ನ ಹಳ್ಳಿಯ ಬೀದಿಯಲ್ಲಿ ಹೋಗುವಾಗ .....ಬೀರೇಶ್ವರ ನಿಲಯ....ವೇಂಕಟೇಶ್ವರ ನಿಲಯ...
   ಮಾದೇಶ್ವರ ನಿವಾಸ...
ಎಲ್ಲಾ ದೇವರ ಹೆಸರುಗಳೇ....ಹೌದು ಹಳ್ಳಿ ಗರಾದ ನಮಗೆ....ಶಾಂತಿ...ನೆಮ್ಮದಿ ..
ಐಶ್ವರ್ಯ ...ಎಲ್ಲಾ....ಭಗವಂತನೇ...ಎಂಬುದು....

                              ರಚನೆ...
             ಶ್ಯಾಮ್ ಪ್ರಸಾದ್ ಭಟ್

Monday, October 7, 2019

ಅರಿವು



ಟೆರೇಶಿಯನ್ ವೃತ್ತದಿಂದ ನನ್ನ ಕಾಲೇಜಿಗೆ...5 ರುಪಾಯಿ ಟಿಕೇಟ್

 ಬಸ್ ಹತ್ತಿದ ಹತ್ತು ನಿಮಿಷದಲ್ಲಿ ನನ್ನ ಕಾಲೇಜು ತಲುಪುತ್ತೇನೆ....

ಪಾಸ್ ಇಲ್ಲದ ಕಾರಣ ಟಿಕೆಟ್ ತೆಗೆದು ಕೊಳ್ಳೋಣ ಎಂದು 5 ರುಪಾಯಿ ನೀಡಿದೆ...
5 ರುಪಾಯಿ ತೆಗೆದು ಜೋಬಿಗಿಳಿಸಿದ ಕಂಡಕ್ಟರ್ ಟಿಕೆಟ್ ಕೊಡದೆ ಮುಂದಕ್ಕೆ ಸಾಗಿದರು....

ಸಾರ್ ಟಿಕೆಟ್
 ಎಂದೆ...

ಹೇ...ಮುಂದಿನ್ ಸ್ಟಾಪ್ ಅಲ್ವ ಬಿಡಿ ಎಂದ...

ಸರಿ ಎಂದು ಸುಮ್ಮನಾದೆ....

ಹೀಗೆ ಎರಡು ದಿನಗಳಾಯಿತು ....ಆತ್ಮೀಯತೆ ಬೆಳೆಸಿಕೊಂಡು ನನ್ನ ಗುರುತಿಟ್ಟುಕೊಂಡಿದ್ದ....

ನಂತರ ಒಂದು ದಿನ.....ಅದೇ ಬಸ್ಸು ಅವನೇ ಕಂಡಕ್ಟರ್ .....ಟಿಕೆಟ್ ಎಂದ
5 ರುಪಾಯಿ ಚಿಲ್ಲರೆ ಇಲ್ಲ....ಎಂದೆ...ಮುಂದಿನ್ ಸ್ಟಾಪ್ ಅಲ್ವ ಬಿಡಿ ಸಾರ್ ಎಂದೆ.....
ಅದ್ಹೇಗ್ ಆಗತ್ತೆ ಟಿಕೆಟ್ ತಗೊಳ್ದೇ ಬಸ್ ಲಿ ಪ್ರಯಾಣಿಸೋದ್ ಅಪರಾಧ...ಎಂದು ಬರೆದಿದ್ದ ಬೋರ್ಡ್‌ ತೋರಿಸಿದ...

ಸಾರ್ ದುಡ್ಡು ಕೊಟ್ರು ಟಿಕೆಟ್ ಕೊಡ್ತಿರ್ಲಿಲ್ವಲ ಅದೇನು ಸಾರ್
....ಅಪರಾಧ ಅಲ್ವ???  ಎಂದೆ..

ಪೆಚ್ಚಾಗಿ ನಿಂತ...

5 ರುಪಾಯಿ ಕೊಟ್ಟು ಟಿಕೇಟ್ ಪಡೆದು ನನ್ನ ಸ್ಟಾಪ್ ನಲ್ಲಿ ಇಳಿದು...ಮುಂದೆ ಸಾಗಿದೆ...

                       ರಚನೆ
              ಶ್ಯಾಮ್ ಪ್ರಸಾದ್ ಭಟ್
 
 

Sunday, August 11, 2019

ಮೌನಾನುರಾಗ



 
ಅಮ್ಮಾ ಹೋಗ್ ಬರ್ತೀನಿ.......

ಛತ್ರಿ ತಗೊಂಡ್ಯೇನೆ...?

ಹ.....ತಗೊಂಡಿದಿನಿ.....ಎಂದವಳೆ ರಾಜು ಮನೆ ಗೇಟಿನ ಬಳಿ ಬಂದು

ಲೋ ರಾಜು ....ರಾಜು ...ಹೊರ್ಟ್ಯೇನೋ...ಎಂದಳು ಅಮೂಲ್ಯ ..

ಪಕ್ಕದ ಮನೆಯ ರಾಜು ಹೊರ ಬಂದು ಬೇಲಿಯ ಬಳಿ ಲೇ ಇಲ್ಲ ಕಣೇ....ಅಮ್ಮ ಇನ್ನು ತಿಂಡಿ ಮಾಡ್ತಿದಾರೆ....

ಸರಿ ನಾನ್ ಹೋಗ್ತಿರ್ತಿನಿ ಬಾ ಹಾಗಾದ್ರೆ...ಎಂದು ಹೊರಟೇ ಬಿಟ್ಟಳು ಅಮ್ಮು.

ಇತ್ತ ರಾಜು ನೋಡಮ್ಮ ...ಆಗ್ಲೇ ಅಮ್ಮು  ಹೋದ್ಲು .. ಬೇಗ...ಕೊಡು ಇಲ್ಲಂದ್ರೆ ನಾನಲ್ಲೇ ಸ್ಕೂಲ್ ಹತ್ರ ಏನಾದ್ರು ತಿಂಕೊತೀನಿ...ಬಿಡು.

ಎಂದು ಬ್ಯಾಗ್ ಹೆಗಲಿಗೇರಿಸಿ....ಹೊರಬಂದ

ಹೊರಬಂದರೆ ಜಿಟಿ ಜಿಟಿ ಮಳೆ ಸುರಿಯುತಿತ್ತು...ಮಲೆನಾಡಲ್ಲಿ ಮಳೆಗಾಲದಲ್ಲಿ ಅದು ಸಾಮಾನ್ಯ ದೃಶ್ಯ  ಒಳಗೋಡಿ ಛತ್ರಿ ತಂದು ....ಚಪ್ಪಲಿ ಮೆಟ್ಟಿ ಒಂದೇ ಉಸಿರಿನಲಿ ಓಡಲು ಶುರು ಮಾಡಿ ....
ಅಮೂಲ್ಯ ತನ್ನಿಂದ ನಾಲ್ಕು ಹೆಜ್ಜೆ ದೂರವಿರುವಾಗಲೆ...ಓಟದ ವೇಗ ನಿಧಾನ ಮಾಡಿ ಬೆಕ್ಕಿನಂತೆ ಹೆಜ್ಜೆ ಇಟ್ಟು ಹಿಂದೆಯಿಂದ   ಭೂಂ ಎಂದು ಅರಚಿದ ....ಅರಚಿದ ಸದ್ದಿಗೆ ಅಮೂಲ್ಯ  ಬೆಚ್ಚಿ ಬಿದ್ದು ....ತನ್ನ ಛತ್ರಿ ತುದಿಯಿಂದ ರಾಜು ತಲೆಗೆ ಚುಚ್ಚಿ ನಕ್ಕಳು...

ಸ॥ ಹಿ॥ಪ್ರಾ॥ಶಾಲೆ ಕಂಚಿನಕಟ್ಟೆ ಗೆ ಇಬ್ಬರೂ ತನ್ನೂರಾದ ಬೆಟ್ಟದ ಪುರದಿಂದ ನೆಡೆದು ಕೊಂಡೆ ಹೋಗಬೇಕಿತ್ತು..ಅದು
ಸುಮಾರು 3 ಮೈಲಿ ದೂರದ ದಾರಿ...

ಅಮೂಲ್ಯ ಮತ್ತು ರಾಜು ಇಬ್ಬರೂ ಚಿಕ್ಕಂದಿನಿಂದ ಜೊತೆಯಲ್ಲೇ ಆಡುತ್ತ ಬೆಳೆದವರು ....
ಅಮೂಲ್ಯ ಳ ತಂದೆ ಮಂಜಪ್ಪ ಗೌಡ ತಾಯಿ ವಿಶಾಲಮ್ಮ..
ವೃತ್ತಿಯಲ್ಲಿ ಗ್ರಾಮಲೆಕ್ಕಿಗ...
ರಾಜುವಿನ ತಂದೆ ರಾಮಪ್ಪ ಕರೆಂಟ್ ಆಫೀಸಿನಲ್ಲಿ ಪ್ರಥಮ ದರ್ಜೆ ಸಹಾಯಕರು...ತಾಯಿ ಸೀತಮ್ಮ..

ರಾಮಪ್ಪ..ಮಂಜಪ್ಪ ಇಬ್ಬರೂ ಬಾಲ್ಯ ಸ್ನೇಹಿತರು..SSLC ಮುಗಿದೊಡನೆ ಮನೆ ಬಾಗಿಲಿಗೆ ಕೆಲಸ ಹುಡುಕಿಕೊಂಡು ಬಂದಿತು ...

ರಾಜು ಮತ್ತು ಅಮ್ಮು ಇಬ್ಬರದ್ದು  5 ನೇ ತರಗತಿ ನೆಡೆಯುತಿತ್ತು..

ಮರುದಿನ ಬೆಳಗ್ಗೆ....

ಭಾನುವಾರ ವಾದ್ದರಿಂದ ಸ್ವಲ್ಪ ತಡವಾಗೇ ಎದ್ದು ರಾಜು ಕಣ್ಣುಜ್ಜುತ್ತ ಹೊರಬಂದ
ಹಜಾರದಲ್ಲಿ ಚಾಪೆಯ ಮೇಲೆ...ಅಮೂಲ್ಯ ಳ ಅಪ್ಪ ಹಾಗೂ ರಾಜು ಅಪ್ಪ ಏನೋ ಮಾತಾಡುತ್ತಾ ಕುಳಿತಿದ್ದರು...
ಒಳಗಿನಿಂದ ಅಮ್ಮ...ಸರ್ಕಾರಿ ಕೆಲ್ಸ ಅಂದ್ಮೇಲೆ ಊರೂರು ತಿರ್ಗೊದ್ ಇದ್ದಿದ್ದೇಯಾ...ಎಂದು ಗೊಣಗುತಿದ್ದರು

ರಾಜು ಅಮ್ಮನ ಬಳಿ ಹೋಗಿ ....ಏನ್ ಮಾಡಿದಿಯಮ್ಮ ತಿಂಡಿ ...ಎಂದ...
ಉಪ್ಪಿಟ್ಟು ಕಣೋ ಹೋಗ್ ಮುಸುಡಿ ತೊಳ್ದು ಸ್ನಾನ ಮಾಡು ....ಇಷ್ಟೋತ್ತು ಎಮ್ಮೆ ಬಿದ್ದಂಗ್ ಬಿದ್ದಿದಾನೆ....

ಹೇ....ಸುಮ್ನಿರಮ್ಮ....

ಏನುಕ್ ಮಂಜಪ್ಪ ಮಾಮ ಬಂದಿದರಲ...ಎಂದ

ಅವ್ರ್ ಗೆ ಬೇರೆ ಕಡೆ ಟ್ರಾನ್ಸಫರ್ ಅಗಿದಿಯಂತೆ....ಇಲ್ಲಿಂದ ಬಿಟ್ಟು ಹೋಗ್ತಾರೆ...ಅದ್ಕೇ ಮಾತಾಡ್ಕೊಂಡ್ ಹೋಗೋಕ್ ಬಂದಿದಾರೆ....ಎಂದಳು ಅಮ್ಮ.

ಮಂಜಪ್ ಮಾಮ ಒಬ್ರೆ ಹೋಗ್ತಾರಾ?

ಒಬ್ರೆ ಹೋಗಿ ಏನ್ ಮಾಡ್ತಾರೆ...ಎಲ್ರು ಹೋಗ್ತಾರೆ...

ಅಮ್ಮ ಅಮ್ಮೂ ನೂ ಹೋಗ್ತಾಳ...??

ಹುಮ್ ಕಣೋ....ಮರಾಯ...ತಲೆ ತಿನ್ಬೇಡ ಹೋಗ್ ಆ ಕಡೆ ಅವ್ರ ಮದ್ಯಾಹ್ನ ಕ್ಕೆ ಊಟಕ್ಕೆ ಬರ್ತಾರೆ...ಸಿದ್ಧ ಮಾಡ್ಕೋ ಬೇಕು...ಬಾಯಿಲ್ಲಿ ....ತಗೋ ಹತ್ರುಪಾಯಿ  ಬೇಗ ಓಡೀ ಹಾಲ್ ತಗೋ ಬಾ...ಹಾಲು ತರಲು ಹೋಗದೇ

ರಾಜು ಅಮೂಲ್ಯ ಮನೆ ಕಡೆಗೆ ಓಡಿದ ....

ಅಮ್ಮು ಅಮ್ಮು ಎಂದು ಕೂಗಿದ.....ರೂಮಿನಲ್ಲಿ ಬಟ್ಟೆ ಮಡಿಸಿಟ್ಟು ಕೊಳ್ಳುತ್ತ .....ಕುಳಿತಿದ್ದವಳು ರಾಜುವನ್ನು ನೋಡಿದೊಡನೆ ಭಾವುಕವಾಗಿ ಕಣ್ಣು ತುಂಬಿ ಕೊಂತು...

ರಾಜು ಹೋಗ್ತಿದಿಯಂತೆ ಎಂದ....

ಮೌನವೇ ಉತ್ತರ...ಭಾವುಕತೆಯೇ ಮಾತಾಗಿತ್ತು...

ಮರುದಿನ ರಾಜು ಒಬ್ಬನೆ ಶಾಲೆಗೆ ಹೊರಟ...
ಜೊತೆಗೆ ತರ್ಲೆ ಮಾಡಲು ಗೆಳತಿ ಇಲ್ಲ....ಒಬ್ಬನೇ..ಆದ್ದರಿಂದ ಬೇಗ ಶಾಲೆ ತಲುಪಿದ..

ಸುಮಾರು 11:00 ರ ಸಮಯ .....ಅಮೂಲ್ಯ ಮತ್ತು ಅವರಪ್ಪ...ಜೊತೆಯಾಗಿ ಬಂದದ್ದು ರಾಜುವಿಗೆ ಕ್ಲಾಸ್ ರೂಮಿನ ಕಿಟಕಿಯಲ್ಲೆ ಕಾಣಿಸಿತು...

ಎದ್ದು ಹೋಗಿ ಮಾತಾಡಿಸುವ ತವಕ ....
 ಅಡ್ಡ ಬಂತು ಗಣಿತ ಮಾಸ್ತರಿನ ಮುಖ....

ಮರುದಿನ ಶಾಲೆಗೆ ಹೊರಡುವಾಗ ....ಅಮ್ಮು ಮನೆ ಮುಂದೆ ದೊಡ್ಡ ವ್ಯಾನ್ ಬಂದು ನಿಂತಿತ್ತು....
ನೋಡಿಯು ನೋಡದಂತೆ....ಸುಮ್ಮನೇ...ಹೋದ...ಅದೇ ಭಾವುಕತೆ....

ದಾರಿ ಸಾಗುತಿದ್ದಂತೆ
ದಾರಿಯಲ್ಲಿ ಸಿಗುವ ಮಾವಿನ ಮರಗಳಲ್ಲಿ ಮಾವಿನ ಹಣ್ಣು ಕಿತ್ತು ತಿಂದದ್ದು....ಮಳೆಗಾಲದಲ್ಲಿ ರಸ್ತೆ ಯ ಗುಂಡಿಯಲ್ಲಿ ನಿಂತ ನೀರಲ್ಲಿ ಆಡಿದ್ದು....
ಎಲ್ಲಾ ನೆನಪಾಗಿ ....ಕಣ್ಣು ತುಂಬಿಬಂತಾದರು ಮಳೆ ಹನಿ ಅದ ಮರೆಸಿತ್ತು....

2 ವರ್ಷ ಹೇಗೋ ಪ್ರಾಥಮಿಕ ಶಿಕ್ಷಣ ಮುಗಿಸಿ....ಹೈಸ್ಕೂಲ್ ಗೆ   ಭಿಮಾಪುರ ತಾಲ್ಲೋಕು ಗೆ ಸೇರಿಸಬೇಕೆಂದು ಹಠ ಹಿಡಿದು ಸೇರಿಕೊಂಡ....ಅದಕ್ಕೂ ಕಾರಣ ಇತ್ತು....

ಮಂಜಪ್ಪ ರಾಜಕೀಯ ಮಾಡಿಸಿ ...ತನ್ನೂರ ತಾಲ್ಲೂಕಿಗೆ ವರ್ಗ ಮಾಡಿಸಿ ಕೊಂಡಿದ್ದರು...

ಸಿಟಿ ಜೀವನ ಒಗ್ಗಿದಂತಾಗಿ ...ಊರಿಗೆ ಬರದೇ ಭೀಮಾಪುರದಲ್ಲೆ..ನೆಲೆ ನಿಂತಿದ್ದರು...ಆಗಾಗಾ ತನ್ನೂರಿಗೆ ಬಂದಾಗ ರಾಜು ಅಪ್ಪನ ಬಳಿ ಈ ವಿಷಯ ಹೇಳಿದ್ದರು...ಅದು ರಾಜು ಕಿವಿಗೂ ಬಿದ್ದಿತ್ತು..

ಇಲ್ಲಿಂದ ಹೋದ ಮೇಲೆ....ಮಂಜಪ್ಪ ಒಬ್ಬರೇ ಊರಿಗೆ ಬಂದು ಹೋಗುತಿದ್ದರು .......

ಭೀಮಾಪುರದ ಹೈಸ್ಕೂಲು...ಅಲ್ಲೆ...ಅಮ್ಮು ನೂ ಓದ್ತಿರೋದು ....
ಮೊದಲನೇ ದಿನ ಹೈಸ್ಕೂಲಿಗೆ ಹೋದಾಗ ಮೊದಲು ಕಣ್ಣು  ಹುಡುಕಿದ್ದೆ ಅಮ್ಮುವನ್ನು
ಮತ್ತೆ ಅಮ್ಮು ನನ್ನ ಮರೆತಿರ್ತಾಳ....ಎಂಬ ಭಯ...ಹೊಸ ಹೊಸ ಸ್ನೇಹಿತರು ಸಿಕ್ಕಿರ್ತಾರೆ....ಎಂದು ಕೊಂಡೆ ....ಬಂದ ...

ಆಶ್ಚರ್ಯ ಕಾದಿತ್ತು.

ಅಮ್ಮು ಬೆಳಗ್ಗೆ ಬೇಗ ಬಂದು ಕಾಯ್ತೀದ್ದದು...
ಕಾಣಿಸಿತು...ರಾಜು ತನ್ನ ಶಾಲೆಗೆ ಸೇರಿರೋ ವಿಷಯ ಅಪ್ಪನಿಂದ ತಿಳಿದಿತ್ತು

ಕಳೆದದ್ದು ಕೇವಲ ಎರಡು ವರ್ಷವಾದ್ದರಿಂದ ಗುರ್ತಿಸಲು ಅಸಾಧ್ಯವೆನಿಸಲಿಲ್ಲ...

ರಾಜು ಹತ್ತಿರ ಬಂದು ಅಮ್ಮು ಎಂದೊಡನೆ ಮುಗುಳ್ನಕ್ಕು...ಲೋ ತಿಮ್ಮ...ಹೆಂಗಿದಿಯೋ....ಎಂದು ಪ್ರೀತಿಯ ಮಾತು...ರಾಜು ತುಂಬಾ ಸಂತಸದಿಂದ ಚೆನ್ನಾಗಿದ್ದೀನೀ...ನೀನು ?
...ಹೀಗೆ ಇಡೀ ದಿನವೆಲ್ಲ...ಒಟ್ಟಿಗೆ ಮಾತಿನಲ್ಲೆ ಕಳೆದರು
ಹಳೇ ನೆನಪುಗಳನ್ನು ಮೆಲುಕು ಹಾಕಿ..

ಎರಡು ವರ್ಷ ಕಳೆದಂತೆ ಇಬ್ಬರು ಮೊದಲಿನಂತಿರಲಿಲ್ಲ...ಆಟದ ಸಮಯ ಕಳೆದು ಇಬ್ಬರ ಬುದ್ಧಿ ಬೆಳವಣಿಗೆಯಾಗಿತ್ತು...ಇಬ್ಬರ ನಡುವೆ ಬಾಂಧವ್ಯ ಬಿಗಿಯಾಗ ತೊಡಗಿತ್ತು....8 ರಿಂದ 9 ಜಿಗಿದು ದಾಗಿ ಇಬ್ಬರು 9 ರಿಂದ 10ನೇ ತರಗತಿಗೆ ತೇರ್ಗಡೆಯಾದರು

ಗೆಳೆಯರ ಬಳಗ ಹೆಚ್ಚಿದ್ದರಿಂದ ರಾಜು ಅಮೂಲ್ಯಳೊಂದಿಗೆ ಸಮಯ ಕಳೆಯಲು ಸಾದ್ಯವಾಗುತ್ತಿರಲಿಲ್ಲ....ಅಮೂಲ್ಯಳೊಂದಿಗೆ ಮಾತನಾಡುತ್ತ ಕುಳಿತಾಗಲೆಲ್ಲ ...ರಾಜು ಗೆಳೆಯರು ಯಾವಾಗಲು ಹುಡ್ಗೀರ್ ಜೊತೆ ಇರ್ತಿಯಲ್ಲೋ...ಬಾ ಹೋಗಣ ....ಎಂದು ಎಳೆದೊಯ್ಯುತಿದ್ದರು....

ಅಮ್ಮು ಗೆ ರಾಜು ತನ್ನನ್ನು ಬಿಟ್ಟು ಬೇರೆ ಹುಡುಗಿಯರ ಜೊತೆ ಮಾತನಾಡಿದರೆ ಸಹಿಸುತ್ತಿರಲಿಲ್ಲ...

ಒಂದು ಮದ್ಯಾಹ್ನದ ಸಮಯ

ಬಾ ಸ್ವಲ್ಪ ಮಾತಾಡ್ಬೇಕು...ಎಂದು ಕರೆದವಳೆ....ಬ್ಯಾಗ್ ತಗೋ...
ಎಂದು ಮದ್ಯಾಹ್ನ ರಜೆ ಹಾಕಿ ...ಶಾಲೆಯಿಂದ ಸ್ವಲ್ಪ ದೂರ ನೆಡೆದರೆ ರಾಮುಹಳ್ಳಿ ಗೆ ಹೋಗೋ ದಾರಿ ದೊಡ್ಡ ಆಲದ ಮರ ...ದ ಬಳಿ ಇರುವ ರಾಮೇಶ್ವರ ದೇವಾಲಯ ಆ ಬಹಳ ಪುರಾತನವಾದ ದೇವಾಲಯದ ಬಳಿ ಕರೆದೊಯ್ದು...

ಮಾತಾಡುತ್ತ ಕುಳಿತಳು....

ಅಮ್ಮ ಹೇಗಿದರೋ....??
ರಾಜು ಪ್ರತಿಯಾಗಿ ಹಮ್ ಚನ್ನಾಗಿದರೆ ....ನಿನ್ನ ಕೇಳ್ತಿರ್ತಾರೆ....ಒಂದ್ಸಲ ಆದ್ರೂ ಊರಿಗ್ ಬರ್ಬೇಕು ತಾನೆ...ಊರ್ ನೋಡೋಕ್ ಆಸೆ ಇಲ್ವ...ಇದನ್ ಕೇಳೋಕ್ ಇಲ್ಲಿಗ್ ಕರ್ಕೊಂಡ್ ಬಂದ್ಯ....ಸ್ಕೂಲ್ ಲೇ ಕೇಳಿದ್ರೆ ಹೇಳ್ತಿರ್ಲಿಲ್ವ...

ಹು ಹೇಳ್ತಿದ್ದೆ ಹೇಳ್ತಿದ್ದೆ.....
ನಾನ್ ಮಾತಾಡ್ಸಿದ್ರು ನಿಲ್ಲಲ್ಲ......ಎಂದವಳೆ....

ಏನ್ ಸಿಂಚನ ಜೊತೆ ಅಷ್ಟೊತ್ತು ಕಥೆ ಹೊಡಿತಾ ಕೂತಿದ್ದೆ...ಏನ್ ಸಮಾಚಾರ..

ನಾನ್ ಊರ್ ನೋಡ್ಬೇಕು .....ಮುಂದಿನ ಭಾನುವಾರ ನಾನು ಅಪ್ಪನ ಜೊತೆ ಊರಿಗ್ ಬರ್ತಿನಿ ಎಂದಳು

ರಾಜು ಸಂತಸಕ್ಕೆ ಪಾರವೇ ಇಲ್ಲ....
ನಿಜ ನಾ....!!??

ಸರಿ ಹಾಗಾದ್ರೆ ಅಮ್ಮಂಗೆ ಇವತ್ತೇ ಹೇಳ್ತೀನಿ ಎಂದ.....
ರಾಜು ಗೆ ಹುಡುಗಿ ಜೊತೆ ಮಾತಾಡುವಾಗ ಸ್ವಲ್ಪ ನಾಚಿಕೆ ಸ್ವಭಾವ ಮೂಡಿತ್ತು....ಚಿಗುರು ಮೀಸೆ ಹುಡುಗನಲ್ವೆ..

ಸರಿ ಹೊರ್ಡೋಣ್ವ ...?? ಎಂದ

ಅದಕ್ಕೆ ಅಮ್ಮು ಸ್ವಲ್ಪ ಹೊತ್ತು ಇದ್ರೆ ನಿನ್ ಗಂಟೇನಾದ್ರು ಹೋಗುತ್ತ ...ಸ್ಕೂಲ್ ಗೆ ಹೇಗಿದ್ರು ರಜೆ ಹಾಕಿಲ್ವ..
ಅಮ್ಮು ಸ್ವಲ್ಪ ಗಟ್ಟಿಗಿತ್ತಿ....ಯಾರಿಗೂ ಹೆದರುವ ಸ್ವಭಾವದವಳಲ್ಲ...

ನನ್ ಜೊತೆ ಬಿಟ್ಟು ಬೇರೆ ಹುಡ್ಗೀರ್ ಜೊತೆ ಮಾತಾಡ್ತಿದ್ದಿದ್ ನೋಡುದ್ರೆ ಗ್ರಹಚಾರ ಬಿಡಿಸ್ತಿನಿ ನಿಂದಲ್ಲ ಅವ್ರುದ್ದು....ಗೊತ್ತಾಯ್ತ??

ರಾಜು ಅರ್ಥವಾದರೂ ಅರ್ಥವಾಗದಂತೆ ಸುಮ್ಮನೆ ಮುಗುಳ್ನಗುತ್ತಾ...ನಿಂತಿದ್ದ

ಹತ್ತನೇ ಕ್ಲಾಸ್ ಮುಗುದ್ ಮೇಲ್ ಯಾವ್ ಕಾಲೇಜ್ ಸೇರ್ಕೋಳೊದೋ....

ರಾಜು ನಂದ್ ಪಾಸ್ ಆಗೋದೇ ಡೌಟು ಅಂತ ಜೋರಗಿ ನಕ್ಕ..
ಅಪ್ಪಿ ತಪ್ಪಿ ಪಾಸ್ ಆದ್ರೆ ನೋಡೋಣ ....

ಅಮ್ಮು ಅದಕ್ಕೆ ಪಾಸ್ ಆಯ್ತು ಅನ್ಕೋ ಎಲ್ ಸೇರ್ಕೋಳಣ ಹೇಳು...ಎಂದಳು..

ಸರ್ಕಾರಿ ಜೂನಿಯರ್ ಕಾಲೇಜು ಭೀಮನಪುರ..ಇದಿಯಲ್ಲ...
ಎಂದ ಇಬ್ಬರು ಜೋರಾಗಿ ನಕ್ಕರು....

ಮುಂದಿನ ಭಾನುವಾರ ಬಂದೇ ಹೋಯ್ತು....

ಮಂಜಪ್ಪ ಮಾಮ....ಅಮ್ಮು ಬರುವ ಸಡಗರ ರಾಜು ಮನೆಯಲ್ಲಿ...
   ಮಂಜಪ್ಪ ಬಂದೊಡನೆ...ರಾಮಪ್ಪನೊಡನೆ...ಮಾತಿಗಿಳಿದರು..
‌ಅಮ್ಮು ...ರಾಜು ಅಮ್ಮನೊಡನೆ ಮಾತಾಡುತ್ತ ಕುಳಿತಿದ್ದಳು...

ರಾಜು...ಮಾತ್ರ ಬೆಕ್ಕಿನಂತೆ ಅವರಿದ್ದ ಜಾಗದಿಂದ ಇವರಿದ್ದ ಜಾಗಕ್ಕೆ ....ಇವರಿದ್ದ ಜಾಗದಿಂದ ಅವರಿದ್ದ ಜಾಗಕ್ಕೆ...ಸುತ್ತುತಿದ್ದ...
   ಸ್ವಲ್ಪ ಸಮಯ ಕಳೆದ ನಂತರ....
ಅಮೂಲ್ಯ ಳೇ...ಅಪ್ಪ ನಾನು ರಾಜು ನಮ್ಮೂರಿನ ದೇವಸ್ಥಾನಕ್ಕೆ ಹೋಗ್ ಬರ್ತೀವಿ ಎಂದಳು...

ಸರಿ ಆಯ್ತಮ್ಮ...ಎಂದು ಮಾಮ ಒಪ್ಪಿಗೆ ಸೂಚಿಸಿದ ಮೇಲೆ..
ಇಬ್ಬರು ಹೊರಟು...ಊರ ಆಂಜನೇಯನ ಗುಡಿ ತಲುಪಿದರು...
ದೊಡ್ಡ...ಹಜಾರ ವಿದ್ದ ದೇವಾಲಯ...
ಅಮ್ಮು ಗೆ ಬಾಲ್ಯದಲ್ಲಿ ಭಜನೆಗೆ ಬರುತಿದ್ದದು ಎಲ್ಲಾ ನೆನಪಾಗಿ ಸಂತಸವಾಯಿತು...ಕಲ್ಯಾಣಿಯ ನೀರಲ್ಲಿ ಆಡಿ
ಮದ್ಯಾಹ್ನ ದ ವರೆಗೂ ಮಾತಾಡಿ ಮನೆಗೆ ವಾಪಸ್ಸಾದರು.

ಮರುದಿನ ಸ್ಕೂಲ್ ಗೆ ಅಮ್ಮು ಬಂದಿರಲಿಲ್ಲ...
ರಾಜುವಿಗೆ  ಕಾರಣ ತಿಳಿಯಲೂ ಇಲ್ಲ....ನೆನ್ನೆ ಇಡೀ ದಿನ ಆಕೆಯೊಂದಿಗೆ ಕಳೆದ ನೆನಪಿನಲ್ಲೆ...ಮಂಕಾಗಿ ಕುಳಿತಿದ್ದ...

ಅಮ್ಮುವನ್ನು ಒಂದು ದಿನ ನೋಡದೇ ಪಡಬಾರದ ಕಾತುರ ಪಟ್ಟ...
ಅವಳು ಜೊತೆಯಲ್ಲಿದ್ದಾಗ ಇಲ್ಲದ ಭಾವನೆ  ಈಗ ಯಾಕೆ...
ಪ್ರಶ್ನೆಗೆ ಮೌನವೇ ಉತ್ತರ...
ಮರುದಿನ ಸ್ಕೂಲ್ ಗೆ ಬಂದ ಅಮ್ಮುವನ್ನು ನೆನ್ನೆ ಬರದ ಕಾರಣ ಕೇಳಿ ನಕ್ಕ....ಜ್ವರ ನಾ....ಸ್ವಲ್ಪ ಹೊತ್ತು ನೀರಲ್ಲಿ ಆಡಿದ್ದಕ್ಕೆ ಜ್ವರ ಬಂತಾ...

ಅಮ್ಮು ಗೂ ರಾಜುವನ್ನು ಕಂಡರೆ ಎಲ್ಲಿಲ್ಲದ ಪ್ರೀತಿ....ಆದರೆ ಅದಕ್ಕೆ...ಪದ ಪೋಣಿಸಿ ಹೇಳಿರಲಿಲ್ಲವಷ್ಟೆ...

SSLC ಯಲ್ಲಿ ಇಬ್ಬರೂ ಉತ್ತಮವಾಗಿ ತೇರ್ಗಡೆ ಹೊಂದಿದರಾದರೂ....ಇಬ್ಬರೂ ಇಷ್ಟ ಪಟ್ಟ ಕಾಲೇಜಿಗೆ ಸೇರಲು ಆಗಲೇ ಇಲ್ಲ....
ಅಮ್ಮುವಿನ ಅಪ್ಪನಿಗೆ ಮೈಸೂರಿಗೆ ಪ್ರೋಮೋಶನ್ ಮೇಲೆ ವರ್ಗವಾದ್ದರಿಂದ....

ಅಮ್ಮು ಮೈಸೂರಿಗೆ ಹೋಗೋ ಹಿಂದಿನ ದಿನ ರಾಜು ಜೊತೆಯೇ ಕಾಲ ಕಳೆದಳು...ಎಲ್ಲದಕ್ಕೂ ರಾಮೇಶ್ವರ ದೇವಾಲಯದ ಕಂಬಗಳು ಸಾಕ್ಷೀಭೂತವಾಗಿವೆ

 ನಾನು ಏನೋ ಹೇಳ್ಬೇಕು.....ಎಂದಳು...

ರಾಜು ಹೃದಯ ಜೋರಾಗಿ ಬಡಿದು ಕೊಳ್ಳಲು ಶುರುವಾಯ್ತು....ಏನು ಏನ್ ಹೇಳ್ಬೇಕು....ಎಂದ

ಏನಿಲ್ಲ ಬಿಡು ಎಂದು ಮೌನವಾದಳು....
ಸ್ವಲ್ಪ ಸಮಯದ ನಂತರ
ನಾನಂದ್ರೆ ನಿಂಗ್ ಇಷ್ಟಾ ನಾ??

ಎಂದು ಕೇಳಿ ನಾಚಿ ತಲೆ ತಗ್ಗಿಸಿ ನಿಂತಾಗ

ರಾಜು ಗೆ ಏನು ಹೇಳಬೇಕೆಂದು ತಿಳಿಯದೇ ....ಸಂತಸದಿ ಮೌನವಾಗಿ ನಿಂತ..

ಅಮ್ಮು ಯಾಕೋ ಇಷ್ಟ ಇಲ್ವ....ಎಂದಾಗ?

ಯಾರ್ ಹೇಳಿದ್ದು ಹಾಗಂತ....ಎಂದ

ಮೌನವೆಲ್ಲ ಮಾತಾಗಿ ಮಾತಾಡಿದ...

ಇಷ್ಟು ದಿನದ ಮೇಲಾದ್ರು ಕೇಳಿದ್ಯಲ್ಲ....ಎಂದ ಮುಂದುವರೆಸಿ
ನಾನೇ ಹೇಳಣ ಅಂತ ಇದ್ದೆ....ಈ ಕಾರಣಕ್ಕೆ ನೀನೆಲ್ಲಿ ಕೋಪ ಮಾಡ್ಕೊಂಡು ದೂರ ಆಗೋಗ್ತಿಯೋ  ಅನ್ನೋ ಭಯ ಆಯ್ತು ಅದಕ್ಕೆ ಮಾತು ನನ್ನಲ್ಲೇ ಇಟ್ಕೊಂಡೆ....

ಮತ್ತೆ ಅಮ್ಮು ಮಾತಾಡಿ ನಾನ್ ಹೋದ್ಮೇಲೆ ಮರ್ತೇ ಬಿಡ್ತೀಯಾ ಅಲ್ವ ಎಂದಳು

ಮರೆಯೋದು ಮರೆಸೋದು ದೂರ ಹೋದವರು....
ಹತ್ತಿರ ಇದ್ದವರು ....ಹೃದಯ ಕ್ಕೆ ಹತ್ತಿರ ಆದವರನ್ನ ಮರೆಯೊಲ್ಲ...
ಎಂದೊಡನೆ....
ರಾಜು ನಂಗ್ ಮೈಸೂರ್ಗೆ ಹೋಗೋಕ್ ಇಷ್ಟ ಇಲ್ಲ.
ಹತ್ತಿರ ಬಂದು ತಬ್ಬಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು ತಬ್ಬಿ ಕೊಂಡೊಡನೆ ತಬ್ಬಿಬ್ಬಾದ ರಾಜು....

ರಾಜು ಗೂ ಕಣ್ಣು ತುಂಬಿಬಂತು ದುಃಖವನ್ನು ಎದೆಯಲ್ಲೆ...ಇಟ್ಟುಕೊಂಡು ಸಂಯಮದಿಂದ.....ವೇದಾಂತಿಯಂತೆ ಹಿತ ನುಡಿ ಹೇಳಿ.....
ಏನ್ ಮಾಡೋಕಾಗುತ್ತೆ ಕೆಲಸಕ್ಕೆ ಅಂತ ಹೋಗ್ಲೇ ಬೇಕಲ್ಲ....

ಅವತ್ತು ಅಮ್ಮು ಗೆ ತನ್ನ ಪ್ರೀತಿ ಹೇಳಿ ಕೊಂಡದ್ದಕ್ಕೆ ಎಲ್ಲಿಲ್ಲದ ಸಂತೋಷ....ಆದರೂ....ಅವಳು ಜೊತೆಯಲ್ಲಿರೊಲ್ಲ...ಅನ್ನೋ ಬೇಸರ...
ಪ್ರೀತಿ ದೂರವಿದ್ದಾಕ್ಷಣ ಕಡಿಮೆಯಾಗೋದಲ್ಲ....
ಮೌನದ ದ್ಯಾನವೇ ಪ್ರೀತಿ ಅಂತೆಲ್ಲ ಫಿಲಾಸಫಿ ಹೇಳಿಕೊಳ್ಳುತಿದ್ದ....

ಅಮ್ಮು ಮೈಸೂರಿಗೆ ಹೋದ....ಒಂದು ವಾರದಲ್ಲೆ ರಾಜುವಿಗೆ ಕಾಗದ ಬಂದಿತ್ತು....ಅಮ್ಮು ‌ಅದರಲ್ಲೇ ಮೈಸೂರು ಮನೆಯ ವಿಳಾಸ...ಲ್ಯಾಂಡ್ ಲೈನ್ ನಂಬರ್ ನೀಡಿದ್ದಳು
ವಾರಕ್ಕೊಮ್ಮೆ ರಾಜು ಕಾಗದ ಬರೆಯುತಿದ್ದ....ಹೊಸ ಕಾಲೇಜಿನ ಬಗೆಗೆ ಎಲ್ಲಾ ತಿಳಿಸುತಿದ್ದ...

ರಾಜುವಿನ ಮನೆಯಲ್ಲೂ ಲ್ಯಾಂಡ್ ಲೈನ್ ಕೇಬಲ್ ಫೋನ್
ಹಾಕಿಸಿ ಕೊಂಡ ಮೇಲೆ... 2 ದಿನಕ್ಕಮ್ಮೆಯಾದರೂ ಅಮ್ಮು ಫೋನ್ ಮಾಡಿ ಮಾತಾಡುತಿದ್ದಳು.....
ಈ ಬೇಸಿಗೆಗೆ ಊರಿಗೆ ಬರುವುದಾಗಿ ತಿಳಿಸಿದ್ದಳು...
ಕಾಲೇಜಿಗೆ ಹೋಗಿ ಬರಲು ಅಪ್ಪ ಹೊಸ ಬೈಕ್ ಕೊಡಿಸಿದ್ದಾರೆ...ಕಲಿತ್ಕೊಂಡಿದಿನಿ ಪರ್ವಾಗಿಲ್ಲ...ಓಡುಸ್ತಿನಿ...
ಎಂದಿದ್ದಳು ....ಅದಾದ ಮೇಲೆ ಮೂರು ದಿನವಾದರೂ ಫೋನ್ ಬರಲಿಲ್ಲ...ತಾನು ಫೋನ್ ಮಾಡಿದರೂ ಹೋಗಲಿಲ್ಲ...
ಕೇಬಲ್ ಸಮಸ್ಯೆ ಇರಬಹುದು .....ಮಳೆಗಾಲದಲ್ಲಿ ಇದು ಮಾಮೂಲು ಎಂದು ಕೊಂಡು ಸುಮ್ಮನಾದ ರಾಜು....

ಒಂದು ಅನಿರೀಕ್ಷಿತ ಫೋನ್ ರಿಂಗ್

ಮಳೆಗಾಲದ ಒಂದು ದಿನ ಸೋಮವಾರ ವೇ ಇರಬೇಕು
ಆಂಜನೇಯನ ಗುಡಿಯಿಂದ ಸುಪ್ಪಭಾತ ಮೊಳಗುತಿದ್ದ ಮುಂಜಾವು
ಆಗ ತಾನೇ ರಾಜು ಕಾಲೇಜಿಗೆ ಹೊರಡಲು ಸಿದ್ಧನಾಗುತಿದ್ದ..
.
ಅಪ್ಪ ಬಚ್ಚಲಿನಲ್ಲಿ ಗಡ್ಡ ಕೆರೆದುಕೊಳ್ಳುತಿದ್ದರು...

ಫೋನ್ ರಿಂಗಣಿಸಿದೊಡನೆ  ನೆಲ ವರೆಸುತಿದ್ದ  ರಾಜುವಿನ ಅಮ್ಮ
ಸೀತಮ್ಮ...ಫೋನ್ ತೆಗೆದರು....

ಅತ್ತ ಕಡೆಯಿಂದ ರಾಮು ನ???

ಇಲ್ಲ ಅವರ ಮನೆಯವ್ರು !!...ನೀವು ??
ಮಂಜಪ್ಪ ಕಣಮ್ಮ....

ಅಣ್ಣ ಹೇಳಿ??
ಚನ್ನಾಗಿದಿರಾ ಅಮ್ಮ....ರಾಮು ಏನ್ ಮಾಡ್ತಿದಾನೆ....??.

ಅವ್ರು ಬಚ್ಚಲಲಿದರೆ ಕರಿಬೇಕ??

ಹುಮ್...ಕರಿಯಮ್ಮ ಸ್ವಲ್ಪ

ರೀ ರೀ...ಮಂಜಣ್ಣಂದು ಫೋನ್....

ಹ ಬಂದೇ....

ರಾಜು ಗೆ ಆಶ್ಚರ್ಯ ...ಮಂಜಪ್ಪ ಮಾಮ ....ಅಮ್ಮು ಫೋನ್ ಸುದ್ದಿ ಇಲ್ಲ....ತಾನು ಹೋಗಿ ಫೋನ್ ಎತ್ತಿಕೊಳ್ಳುವಷ್ಟರಲ್ಲಿ ಅಪ್ಪ ಫೋನ್ ಬಳಿ ಬಂದು ಫೋನ್ ತೆಗೆದು ಕೊಂಡರು..
.
ಏನೋ ಸಾವ್ಕಾರ....ಸಮಾಚಾರ...ಎಂದು ಮಾತು ಆರಂಭಿಸಿದ ರಾಜು ಅಪ್ಪ....

ಮಂಜಪ್ಪನ ಸಣ್ಣ ಧ್ವನಿ ರಾಮು ಅಮ್ಮು  ಅಕ್ಸಿಡೆಂಟ್ ಆಗಿದೆ ಕಣೋ....ತುಂಬಾ ಪೆಟ್ಟಾಗಿದೆ ಉಳಿಯಲ್ಲ ಅಂತಿದಾರೆ....ನೆನ್ನೆ ಸಾಯಂಕಾಲ ಅವ್ಳ ಫ್ರೆಂಡ್ ಬಂದಿದ್ಲು ...ಫ್ರೆಂಡ್ ಬಿಟ್ಟು ಬರೋಕೆ...
 ಮಳೆಲಿ ಬೈಕ್ ತಗೊಂಡ್ ಹೋಗಿದ್ಲು ....ಅಷ್ಟೇ ಏನಾಯ್ತೋ ಏನೋ ...ಗುಂಡಿ ತಪ್ಸಕ್ಕೋಗಿ ಬೈಕ್ ಬಿತ್ತಂತೆ....ಹಿಂದೆ ಬರ್ತಿದ್ ಕಾರು ಗುದ್ದ್ ತಂತೆ.....ಗೊಳೋ...ಎಂದು ಕಣ್ಣೀರಿಟ್ಟರು....

ಸಮಧಾನ ಮಾಡ್ಕಳೋ ....ಯಾವ್ ಆಸ್ಪತ್ರೆ ನಾನ್ ಬರ್ತಿನಿ ಇವತ್ತೇ....ಹೊರ್ಡ್ತಿನಿ....

ಕೆ ಆರ್ ಆಸ್ಪತ್ರೆ....

ಸರಿ ಆಯ್ತು ಬರ್ತಿನಿ...

ವಿಷಯ ತಿಳಿದ ರಾಜು ಗೆ ದುಃಖ ತಡೆಯಲಾಗಲಿಲ್ಲ ....ರೂಮಿನಲ್ಲಿ ಹೋಗಿ..ಅತ್ತು....

ಅಪ್ಲ ನಾನು ಬರ್ತಿನಿ .....ಎಂದು ಹೊರಟು ಯುನಿಫಾರಂನಲ್ಲೇ ಹೊರಟು ನಿಂತ....

ಮದ್ಯಾಹ್ನ ದ ವೇಳೆಗೆ ಆಸ್ಪತ್ರೆ ತಲುಪಿದರು...

ಆದರೆ ವಿಧಿಯ ಬರಹವೇ ಬೇರೆ ಇತ್ತು....
ಅಮ್ಮು ಗೆ ತಲೆಗೆ ಪೆಟ್ಟು ಬಿದ್ದು ಹೆಚ್ಚು ರಕ್ತ ಹೋಗಿದ್ದರಿಂದ ಬದುಕುಳಿಯಲಿಲ್ಲ.....

ಎಲ್ಲಾ ಕಾರ್ಯ ಮುಗಿಯುವವರೆಗೂ ಜೊತೆಗಿದ್ದು ....
ವಾಪಸ್ಸಾದರು....

  ಒಂದು ತಿಂಗಳು ರಾಜು ಸರಿಯಾಗಿ ಊಟ .....ನಿದ್ರೆ ಇಲ್ಲದೆ...ಮಂಕು ಕವಿದಂತೆ ಮಂಕಾಗಿದ್ದ....
ಎಲ್ಲಿ ಹೋದರು ಜೀವಕ್ಕೆ ಜೀವವಾಗಿದ್ದ ಗೆಳತಿಯದೇ....ಧ್ವನಿ...ಮಾತು....ಹೆಜ್ಜೆ ಗುರುತು....ಮರೆಯಲಾರದೆ....ಒದ್ದಾಡಿ ....
ಸೊರಗಿ ಹೋದ....

ಪ್ರಕೃತಿ ಗೆ ಎಲ್ಲಾ ಬದಲಿಸುವ ಮರೆಸುವ ಶಕ್ತಿ ಇದೆ....
ಸ್ವಲ್ಪ ದಿನ ಮನಕೆ ಕವಿದಿದ್ದ ಮಂಕು ಹರಿಯಿತು...
ಬದುಕು ಅಶಾಶ್ವತ ....ಎಲ್ಲ ಪಾತ್ರಧಾರಿಗಳು ...ಅವರವರ ಪಾತ್ರ ನಿರ್ವಹಿಸಿ ಹೋಗುತ್ತಾರೆಂಬ ನಿರ್ಲಿಪ್ತ ಭಾವಕ್ಕೆ...
ಬೈರಪ್ಪನವರ ಗೃಹಭಂಗ ...ವಂಶವೃಕ್ಷ ಕಾದಂಬರಿ ಓದಿದ ಮೇಲೆ...ಬಂದಿತ್ತು...ಅದೇ ಅವನ ಬದುಕಿಸಿತ್ತು...

           ಮೌನ ಮಾತಾದರೆ ಉಪಾಯ
       ಮಾತು ಮೌನವಾದರೆ ಅಪಾಯ
ಎರಡು ಒಟ್ಟಿಗೆ ಘಟಿಸಿದರು ನಿರುಪಾಯ...

                                  ರಚನೆ
                      ಶ್ಯಾಮ್ ಪ್ರಸಾದ್ ಭಟ್


Thursday, August 1, 2019

KSRTC



ಸರ್ಕಾರಿ ಬಸ್ ಇಳಿವಾಗ  ಬಾಗಿಲಿನ ಮೇಲ್ಬಾಗದಲ್ಲಿ ಕಾಣುವ ಸಾಲು *ವಂದನೆಗಳು* ಎಂದು ಎಲ್ಲರು ಗಮನಿಸಿರುತ್ತೀರ...

ಹಾಗೇ *ಹಿರಿಯನಾಗರೀಕರಿಗೆ* ಎಂಬ ಸಾಲುಗಳು ಇರುತ್ತವೆ ಅವು ಅಳಿಸಿಹೋಗಿ ಕಾಲಕ್ರಮೇಣ ಏನೇನೋ ಅರ್ಥ ಸೂಚಿಸುತ್ತಿರುತ್ತವೆ

*ಅಂಗವಿಕಲರು* ಎಂಬುದು ಅ ಹೋಗಿ *ಲ* ಆಗಿ *ಲಂಗವಿಕಲರು* ಎಂಬ ರೂಪ ಪಡೆದಿರುತ್ತದೆ.

ಹಾಗೇ ಇಂದು ಬಸ್ ಇಳಿವಾಗ ಬಾಗಿಲಿನ ಮೇಲ್ಬಾಗದಲ್ಲಿ ಗಮನಿಸಿದೆ....

*ವಂದನೆಗಳು*...ಎಂಬುದರಲ್ಲಿ...
*'ವಂ'* ಅಳಿಸಿತ್ತು *'ನೆ'* ಎಂಬುದರಲ್ಲಿ ಕೊಂಬು ಅಳಿಸಿ *'ನ'* ಆಗಿತ್ತು ...ಒಟ್ಟುಗೂಡಿಸಿ ಓದಿದಾಗ
*ದನಗಳು* ಎಂದಾಗಿತ್ತು...😄

ಪ್ರಯಾಣಿಕರು ಇಳಿಯುವ ...ಹತ್ತುವ ರಭಸ ನೋಡಿಯೇ ಆ ರೂಪ ಪಡೆದಿತ್ತೋ ಏನೋ..??😄😄😄

             ರಚನೆ
         ಶ್ಯಾಮ್  ಭಟ್

Monday, July 8, 2019

ಪಾಂಡುವಿನ ಪಾಡು




ಗೆಳೆಯನನ್ನು ಬಸ್ಸಿಗೆ ಹತ್ತಿಸಿ ಹಾಯುತ್ತಿರುವಾಗ....

ನನ್ನೂರಿನ ಕಡೆಗೆ ಹೋಗುವ ಬಸ್ಸಿನ ಕಂಡಕ್ಟರ್...ನನ್ನೂರಿನ ಹೆಸರು ಕೂಗುತ್ತ....ಹತ್ತಿ ಹತ್ತಿ ಬೇಗ ಬೇಗ ಎನ್ನುತ್ತಿದ್ದದ್ದನ್ನು ಕಂಡು ....ಒಮ್ಮೆಲೆ...ನನ್ನ ಊರಿನ ಹೆಸರು ಮೈ ರೋಮಾಂಚಿತ ಗೊಳಿಸಿತು ....
ಪರದೇಶದಲ್ಲಿ ಕನ್ನಡಿಗರಿಗೆ ಕನ್ನಡ ಬಲ್ಲವರು ಸಿಕ್ಕಾಗ ಆಗುವ ಅದೇ ತುಮುಲ ನನಗಾಯಿತು....

ಕೆಲಸಕ್ಕೆ ಸೇರಿ 1 ತಿಂಗಳಾಗಿಲ್ಲ..ಅಷ್ಟರಲ್ಲೇ ರಜೆ ಕೇಳಿದರೆ ಏನೆಂದು ಕೊಂಡಾರು....
ಅನಾರೋಗ್ಯದ ನೆಪ ಹೇಳಿ ಬಿಡಲೆ ..ಕೆಲಸಕ್ಕೆ  ಸೇರಿ            2 ತಿಂಗಳಾದರು ಕಳೆಯ ಬೇಕು ರಜೆ ನೀಡಲು...ಸುಳ್ಳು ಹೇಳಿ ಅಷ್ಟರಲ್ಲೇ ವಿಶ್ವಾಸ ಕಳೆದು ಕೊಳ್ಳೋದು ಬೇಡ....ಎಂದೆನಿಸಿ...ಪಾಂಡು ರೂಮಿನೆಡೆಗೆ ನೆಡೆದು ಹೊರಟ 

ಬಿಸಿಲ ಧಗೆ ತಡೆಯದೆ....ಬೀದಿ ಬದಿಯಲ್ಲಿದ್ದ ಕಲ್ಲಂಗಡಿ ಕೆಂಪು ಬಿಡಾರದಲ್ಲಿ ೧ ಪ್ಲೇಟ್ ಹಣ್ಣು ತಿಂದು ಹೊರಟ....ಅರ್ಧ ತಾಸಿನಲ್ಲಿ ರೂಮು ತಲುಪಿ..ಚಾಪೇ ಹಾಸಿ ಕುಳಿತು ಕೊಂಡ....೧ ತಿಂಗಳ ಹಿಂದೆ ಬೆಂಗಳೂರಿಗೆ ಬರುವಂತಾದ ಪ್ರಸಂಗ ನೆನೆಸಿಕೊಂಡ.....ನೆನಪಿನಲ್ಲೇ ಮುಳುಗಿದ....

ಅಮ್ಮನನ್ನು ನೋಡಿ ಇಲ್ಲಿಗೆ ಒಂದು ತಿಂಗಳೇ ಕಳೆದಿದೆ..
ಅಂದು ಮದ್ಯಾಹ್ನ ಪಾಂಡುವಿನ ಕುಟುಂಬದಲ್ಲಿ ನೆಡೆದ ಪ್ರಸಂಗ
ಪಾಂಡುವಿನದು ಒಂದು ಚಿಕ್ಕ ಕುಟುಂಬ ಅಪ್ಪ ರಾಮಾಚಾರಿ ವೃತ್ತಿಯಿಂದ ಬಡಗಿ (ಮರಗೆಲಸ) ತಾಯಿ ವಿಶಾಲಾಕ್ಷಿ
ಪಾಂಡು ತನ್ನ ಡಿಗ್ರಿ ಕಷ್ಟಬಿದ್ದು ಮುಗಿಸಿದ...
ಡಿಗ್ರಿ ಮುಗಿದ ನಂತರ ಊರೂರು ಸುತ್ತೋದು ...ಸುತ್ತಾಡಿ ಮನೆಗೆ ಬಂದು ಮಲಗೋದು
ಡಿಗ್ರಿ ಮುಗಿದ ನಂತರ ಊರೂರು ಸುತ್ತೋದು ...ಸುತ್ತಾಡಿ ಮನೆಗೆ ಬಂದು ಮಲಗೋದು



‌ಟಿ ವಿ ನೋಡುತ್ತಾ ರಿಮೋಟ್ ಹಿಡಿದು ಗಂಟಗಟಲೆ ಕಾಲಕಳೆಯೊದು  ಇದು ನಿತ್ಯ ಕರ್ಮದಂತೆ ಆಗಿತ್ತು...

‌ಅಪ್ಪನಿಗೆ ಸಹಾಯ ಮಾಡಲು ಸಹಾ ಹೋಗದೆ ....ಆ
‌ ಬಡಗಿ ಕೆಲಸದಲ್ಲಿ ಆಸಕ್ತಿ ತೋರದೆ ಸೋಮಾರಿತನದಿಂದ ಕಾಲಕಳೆಯುತಿದ್ದ ಮಗನನ್ನು ಕಂಡು ತಂದೆ ತಾಯಿಗೆ ಬೇಸರವಿತ್ತು..
ಒಂಾದು ದಿನ ರಾತ್ರಿ
ಮಗನ ಈ ವರ್ತನೆಯಿಂದ ಬೆಸತ್ತ ರಾಮಾಚಾರಿ ಮಗನ ಮೇಲೆ ರೇಗಿದರು...ನೀನ್ ಹಿಂಗಾದ್ರೆ ಉದ್ದಾರ ಅಗಲ್ಲ....ತಿನ್ನೋದು ಮಲ್ಗೋದು...ನಾವಿರೋವರ್ಗೂ ನೋಡ್ಕೋಬೋದು....ಅಮೇಲೆ  ನೀನೇ ನಿನ್ ಜೀವನ ನೋಡ್ಕೋಬೇಕು....
ಪಾಂಡು ವಯಸ್ಸಿನಲ್ಲಿ ಹುಮ್ಮಸ್ಸು ...ಕೋಪ ತುಸು ಹೆಚ್ಚೇ...
ನಂಗು ದುಡಿಯೋ ತಾಕತ್ ಇದೆ....ಈಗ ಬೆಂಗಳೂರಿಗ್ ಹೋದ್ರು ನೀನ್ ದುಡಿಯೋಕಿಂತ ಹೆಚ್ಚೇ ದುಡಿತಿನಿ.....
ಅಪ್ಪ ಕೋಪದಿಂದ ....ದುಡಿತಾನೆ ಕಡ್ದು ಎತ್ತಾಕ್ ಬಿಡ್ತಾನೆ ನೀನ್ ತಗಂಡಿರ ಮಾರ್ಕ್ಸಗೆ ಹೋಟ್ಲಲ್ಲಿ ಪ್ಲೇಟ್ ತೊಳಿಬೇಕು ಅಷ್ಟೆಯಾ....
ಪಾಂಡು ಕೋಪದಿಂದ ......ಈ ಮನೆಲಿ ನೆಮ್ದಿನೇ ಇಲ್ಲ....ಎಲ್ಲ‍ದ್ರು ಮನೆಬಿಟ್ಟು ಹೋಗ್ಬುಡ್ಬೇಕು ಅತ್ಲಾಗಿ....
ರಾಮಾಚಾರಿ .....ಹೋಗು...ಮೊದ್ಲು ತೊಲಗು....ಎಂದರು ಕೋಪದಿಂದ
ಇದನ್ನು ಕೇಳಿದ ಪಾಂಡು ಹೋಗ್ತಿನಿ ....ಇಲ್ ನಂಕೈಲಿ ಇರೋಕಾಗೋದೆ ಇಲ್ಲ....
ಅಮ್ಮ....ಅಮ್ಮ....ನಾನ್ ಹೋಗ್ತೀನಿ ಬೆಂಗಳೂರಿಗ್ ಹೋಗಿ ಅಲ್ಲೇ ಏನಾದ್ರು ಕೆಲ್ಸ ಮಾಡ್ತಿನಿ....ದುಡ್ ಕೊಡು...ಎಂದು ತಾನೆ ಅಮ್ಮ ದುಡ್ಡಿಡುತಿದ್ದ ಡಬ್ಬಿಗೆ ಕೈ ಹಾಕಿ ತಾನೆ 500 ರ ನೋಟಿತ್ತು ಅದನ್ನೇ ಕಿಸೆಗಿಳಿಸಿದ....
    ತನ್ನ ಕಾಲೇಜು ಬ್ಯಾಗಿನಲ್ಲಿದ್ದ ಪುಸ್ತಕವೆಲ್ಲ ಹೊರಗೆ ಚೆಲ್ಲಿ...
ಬಟ್ಟೆ ತುಂಬಿಸಿ ಹೊರಟು ನಿಂತ ....
ಅಮ್ಮ....ಲೋ ಈ ಕತ್ಲೇಲಿ ಎಲ್ಲಿಗ್ ಹೋಗ್ತಿಯೋ....ಸುಮ್ನೇ ಬ್ಯಾಗ್ ತೆಗ್ದಿಟ್ಟು....ಕೆಲ್ಸ ನೋಡು.....ಎಂದರು..
ಏನ್ ಕೆಲ್ಸ ನೋಡ್ಲಿ ಏನ್ ಕೆಲ್ಸ ಇದೆ ಇಲ್ ಮಾಡಕೆ...ಹುಳಿ ಸುತ್ಗೆ ತಗಂಡ್ ಕುಟ್ಟಾದ....
ಪಾಂಡು ಚಪ್ಪಲಿ ಮೆಟ್ಟಿ ....ಬ್ಯಾಗ್ ನೇತು ಹಾಕಿಕೊಂಡು ಹೊರಟೆ ನಿಂತ ....ನಾನ್ ಬೆಂಗಳೂರಿಗ್ ರಾಜು ಮನೆಗೋಗ್ತಿನಿ ...ಕೆಲ್ಸ ಹುಡ್ಕಿದ್ರಾಯ್ತು....ಯಾವ್ ಬಡ್ಡಿಮಗ ನಂಗ್ ಕೆಲ್ಸ ಕೊಡಲ್ಲ.....
ಬಿಸಲಲ್ಲಿ ಹುಳಿ ಸುತ್ಗೆ ತಗಂಡ್ ಕುಟ್ಟದಲ್ಲ ಆಫೀಸ್ ಕೆಲ್ಸ....
ಎಂದು ತನ್ನ ತಂದೆಯ ಮುಖ ನೋಡಿ ಮೂದಲಿಸುವಂತೆ ನುಡಿದ....
ರಾಮಾಚಾರಿ ......ತನ್ನ ಕಸುಬಗೆ ಬಯ್ತಿಯೇನ್ಲಾ....ಎಂದು ಮಗನ ಮೇಲೆ  ಕೈ ಎತ್ತಿದರು....
ಪಾಂಡು....ಏಟು ತಪ್ಪಿಸಿ ಕೊಂಡು ...ಅಮ್ಮ ನಾನ್ ಬರ್ತಿನಿ....ಎಂದೇಳಿ ಹೊರಟೇ ಬಿಟ್ಟಾ...
ಪಾಂಡುವಿನ ಊರು....ರಾಮುಗಳ್ಳಿ....ಅಚ್ಚ ಮಲೆನಾಡು...ಚಿಕ್ಕಮಗಳೂರು ಜಿಲ್ಲೆಗೆ ಸೇರುವ ಊರು...
ರಾಮುಹಳ್ಳಿಗೆ ಯಾವ ಬಸ್ಸಿನ ಸೌಕರ್ಯ ಸುಗಮವಾಗಿರಲಿಲ್ಲ ...ಬೆಳಗ್ಗೆ ಒಮ್ಮೆ ಮಾತ್ರ ಬರುವ ಬಸ್ಸು....
ಮತ್ತೆ ರಾಮುಹಳ್ಳಿಯನ್ನು ಮರುದಿನ ಬೆಳಗ್ಗೆ ತಿರುಗು ನೋಡುತಿತ್ತು...
ರಾಮುಹಳ್ಳಿಯಿಂದ 1 ಕಿ ಮೀ ದೂರದ ತುರುವೇ ಕೊಪ್ಪಲಿನ ಹೈ ವೇ ಯಲ್ಲಿ...ಹಾಸನ ....ಮೂಡಿಗೆರೆ..ಮಂಗಳೂರು ...
ಬೆಂಗಳೂರು ಬಸ್ಸುಗಳು ಬರುತ್ತವೆ....ರಾಮುಹಳ್ಳಿಯಿಂದ ತುರುವೇ ಕೊಪ್ಪಲಿನ ದಾರಿ ....ತುಂಬಾ ಕಾಫಿಕಾಡಿನ ದಾರಿ...
ಹಗಲಲ್ಲೇ....ಒಬ್ಬರೆ...ಓಡಾಡೋಕೆ ಭಯವಾಗೋ ದಾರಿ....ಮೂರು ವರ್ಷದ ಹಿಂದೆ ಒಂದು ರಸ್ತೆ ....ಹಾಕಿದರಾದರು....ಮಲೆನಾಡದ್ದರಿಂದ ವಿಪರೀತ ಮಳೆಗೆ ಟಾರು ಕಿತ್ತು ಹೋಗಿ....ಮಣ್ಣಿನ ರಸ್ತೆಯಂತೇ ಆಗಿ ಹೋಗಿತ್ತು....
ಪಾಂಡು...ಸರಿ ತುರುವೆ ಕೊಪ್ಪಲಿಗೆ ಹೋಗಿ...ಬಸ್ಸು ಹತ್ತೋಣ ಅಂತ ನೆಡೆಯಲು ಪ್ರಾರಂಭ ಮಾಡಿದ......ಸಂಜೆ 7 ರ ಸಮಯ ದಾಟಿ....8 ಕ್ಕೆ....ಕಾಲಿಡುತಿತ್ತು...ಸುತ್ತ...ಕತ್ತಲೆ...ಅಗಾಗ ಭಯ ಹುಟ್ಟಿಸಲೆಂದೇ ಬರುತಿದ್ದ....ಕಿರ್ರ್ ಕಿರ್ರ್ ಎಂಬ ....ಹುಳುವಿನ ಶಬ್ಧ....ಎದೆಯ ಬಡಿತ ಹೆಚ್ಚಿಸುತಿತ್ತು....

ನೆಡೆದು ಬಂದಂತೆ ತಿರುವು ಮುಗಿದಂತೆ....ಒಂದು ಎಸ್ಟೇಟ್ ಬೋರ್ಡ್ ಕಾಣಿಸಿತು....ಅದು.. ರಾಮುಹಳ್ಳಿಗೆ ಸ್ತಿತಿವಂತರಾಗಿದ್ದ....ನಂಜುಂಡೇಗೌಡರ ಎಸ್ಟೇಟ್ ಪ್ರಾರಂಭವಾಗುವ ದಾರಿ.... ಅವರ ಎಸ್ಟೇಟ್ ಅಂತು ರಸ್ತೆಯ ಎರಡು ಬದಿಗೂ ಚಾಚಿ ಕೊಂಡಿದೆ....
ದೊಡ್ಡ ಮರದ ಕೊನೆಗಳು ಅರ್ಧ ರಸ್ತೆಯ ಮೇಲೇ ತೂಗುತ್ತವೆ....
ಅವರ ತೋಟವನ್ನೆಲ್ಲ...ಕಾಯಲು ಆಳಿಟ್ಟು ಲೈಟ್ ಹಿಡಿದು ಸುತ್ತುತ್ತಿರುವಂತೆ ಮಿಂಚು ಹುಳುಗಳು ಸುತ್ತುತ್ತವೆ....
ಮುಂದೆ ಸಾಗುತಿದ್ದಂತೆ ಪಾಂಡುಗೆ ಹೆಜ್ಜೆ ಮುಂದಿಡಲು ಭಯ...
ಅವನ ಭಯದ ಕಾರಣ....
ನಂಜುಂಡೇಗೌಡರ ತೋಟದ ಆಳು ರಂಗನಿಗೆ ಒಂದು ಮನೆ ಕಟ್ಟಿಸಿ ಕೊಟ್ಟು ರಂಗ ನ ಸಂಸಾರ ಅಲ್ಲೇ ಇರಲು ವ್ಯವಸ್ಥೆ ಮಾಡಿದ್ದರು ...ರಂಗ ನಿಯ್ಯತ್ತಿನ ಆಳು ಅವನು ಅವನ ಅಪ್ಪ ಅಮ್ಮ ಎಲ್ಲಾ ಗೌಡರ ಎಸ್ಟೇಟಿನಲ್ಲೇ ಆಗಿನ ಕಾಲದಿಂದ ದುಡಿತಾ ಇರೋರೆ....

ರಂಗ ನ ಅಪ್ಪ ಅಮ್ಮ ಅನಿರೀಕ್ಷಿತ ಖಾಯಿಲೆಯಿಂದ ಕಣ್ಣು ಮುಚ್ಚಿದ ಮೇಲೆ....
ಗೌಡರೇ ರಂಗನಿಗೊಂದು ಮದುವೆ ಮಾಡಿದರು ....ಅವಳ ಹೆಸರು ಕೆಂಪಿ.....ಹೆಸರಿಗೆ ತಕ್ಕಂತೆ ಕೆಂಪಗೆ ತೊಂಡೆಹಣ್ಣಿನಂತಿದ್ದಳು....

ರಂಗ ಬೆಳಗ್ಗೆ ಎಸ್ಟೇಟ್ ಗೆ ಹೋದರೆ ಬರೋದು ಸಂಜೆ...
ಕೆಂಪಿ ಬಯಲು ಸೀಮೆಯ ಅರಸೀಕೆರೆ ಕಡೆಯವಳು...ಆದ್ದರಿಂದ ಮಲೆನಾಡಿನ ಕಾಫಿತೋಟದ ಕೆಲಸ ಅಷ್ಟಾಗಿ ತಿಳಿತಿರ್ಲಿಲ್ಲ....
ರಂಗ ಮನೆ ಕೆಲ್ಸಕ್ಕೆ ಅಂತ ಕೆಂಪಿನ ಕರ್ಕೊಂಡ್ ಹೋಗಿದ್ದಾಗ

ಗೌಡರೇ..."ಲೋ ರಂಗ ಹೊಸ್ದಾಗ್ ಮದ್ವೆ ಅಗಿರ ಮಗೀನೆ ಕೆಲ್ಸಕ್ ಕರ್ಕ ಬಂದಿಯಲ್ಲ....."
ಒಂದ್ ವರ್ಷ ಕಳಿಲಿ ಅಮೇಕೆ ಕೆಲ್ಸ ಕಲ್ತ್ಕಂಡಿರ್ತದೆ ಮಾಡ್ತದೆ......ನಿನ್ ಮನೆ ಕೆಲ್ಸನೇ ಬೇಕಾದಷ್ಟಿರ್ತದೆ....ಎಂದಾಗ ....
ರಂಗ ಸರಿ ಗೌಡ್ರೆ ...ನೀವ್ ಹೆಂಗ್ ಹೇಳ್ತಿರ ಅಂಗೆ ಕರ್ಕಂಬರಕ್ಲ ಬುಡಿ ಎಂದ....
ಎಸ್ಟೇಟ್ ಮ್ಯಾನೇಜರ್ ಸ್ವಲ್ಪ ಎಡವಟ್ಟಿನವ....ಸ್ಪಲ್ಪ ಹೆಂಗಸರ ಹುಚ್ಚು...
ರಂಗ ಎಸ್ಟೇಟ್ ಕಡೆ ಹೋದದ್ದನ್ನು ನೋಡಿಯೇ....ರಂಗನ ಮನೆಗೆ ಹೋಗಿ ರಂಗ ಇಲ್ವ ....ಎಂದು ಕೇಳಿ....ಕಾಫೀ ಹೀರಿ ಬರುತಿದ್ದ....
ಹೀಗೆ ....ನೆಡಿತಾ ಇರೋದು ....ರಂಗನಿಗೆ ....ಹೇಗೋ ..ಆಳುಗಳಿಂದ ಗೊತ್ತಾಯ್ತು...


ಎಲಾ ಬಡ್ಡಿ ಮಗ ......ಅವ್ನ ರಕ್ತ ಕುಡಿದೇ ಬುಡಾಕಿಲ್ಲ...ನನ್ ಹೆಡ್ತಿ ಮೇಲೇ ಕಣ್ಣಾಕೌನ ಅವ್ನು....ಎಲಾ ಅವ್ನವ್ವುನ  ಅಂತ  ಹಲ್ಲು ಮಸೆದು...
‌ಮರುದಿನ ಕೆಲಸಕ್ಕೋಗದೆ ದೂರದಲ್ಲಿ ನಿಂತು ಕಾಯ್ದ.....ಅವನು ಅಂದು ಕೊಂಡದ್ದಕ್ಕಿಂತ ತುಸು ಹೆಚ್ಚೇ...ಮುಂದುವರೆದಿತ್ತು...
‌ಇದನ್ನೆಲ್ಲ.....ನೋಡಿದ ರಂಗ
‌ಕೈ ಯಲ್ಲಿದ್ದ.ಕುಡುಗೋಲು ಮಾತನಾಡಿ ಮ್ಯಾನೇಜರ್ ರಕ್ತ ಕಕ್ಕಿಸಿ ಕೊಂದ .....
‌ಅದಾದ ಮೇಲೆ...ರಂಗ ಅದೆಲ್ಲಿ ಹೋದ್ನೋ ಊರೋರಿಗೂ ಗೊತ್ತಿಲ್ಲ....ಕೆಂಪಿ ತವರು ಮನೆ ಸೇರಿದಳು....
‌ಆ ಘಟನೆ ಆದಾಗಿಂದ....ಆ ರಸ್ತೆಲಿ ನೆಡೆದು ಸಾಗೋರು....ಮ್ಯಾನೇಜರಪ್ಪ...ಭೂತ ಆಗಿ ಅಲ್ಲೇ...ಅವ್ನೇ ಮನೆ ಸುತ್ತ ಸುತ್ತುತಾ ಅವ್ನೇ....ಎಂದು ಮಾತಾಡಿದ್ದು....ಪಾಂಡುವು ಕೇಳಿದ್ದ....
‌ಅದನ್ನೆಲ್ಲ...ನೆನೆಸಿ ಕೊಂಡು ನೆಡೆದು ದಾರಿ ಸಾಗಿ..ಆ ಮನೆಯ ದಾರಿ ಸಮೀಪಿಸಿದ್ದ...
‌ಪಾಂಡು ಒಂದೇ ಉಸಿರಿಗೆ......ಓಡಲು ಶುರು ಮಾಡಿದವನು ....ತುರುವೇ ಕೆರೆಗೆ ಬಂದು ನಿಂತ...
‌ಸಮಯ ನೋಡಲು ಕೈ ಗಡಿಯಾರದಲ್ಲಿ....8 :30 ಎಂದು ತೋರಿತು....
‌ಗೆಳೆಯ ರಾಜು .....ಬೆಂಗಳೂರಿಂದ ಮನೆಗೆ ಬಂದಾಗ ....ವಾಪಸ್ಸು ಹೋಗುವ ಗಾಡಿ 11 :00 ರದ್ದು....ಅವನು ಬಂದಾಗಲೆಲ್ಲ.....ಬಸ್ಸು ಹತ್ತಿಸೋಕೆ....ರಾಜು ಅಪ್ಪ ಜೊತೆಗೆ ಪಾಂಡುವು ಹೋಗುತಿದ್ದ....
‌ತುರುವೇ ಕೊಪ್ಪಲಿನ ಹೋಟೆಲ್ ಗಜಲಕ್ಷಿ ಯೇ ಎಲ್ಲರು ಬಸ್ಸು ಕಾಯುವ ಬಸ್ ನಿಲ್ದಾಣ....


‌ಅಲ್ಲೆ...ಕೆಲಸ ಮಾಡುತಿದ್ದ ರಾಮಯ್ಯ ಪರಿಚಯದವ ....ಅವನ ಬಳಿ ಮಾತಾಡುತ್ತ...ಕುಳಿತ....ಮನೆಯಲ್ಲಾದದ್ದು...ಎಲ್ಲಾ  ಹೇಳಿದ... ಅದಕ್ಕೆ ರಾಮಯ್ಯ.....ನೋಡು ಬೆಂಗಳೂರು ನೀನ್ ಅನ್ಕೊಂಡಿರೋ ಸ್ವರ್ಗನು ಅಲ್ಲ.....ನರಕ ನೂ ಅಲ್ಲ....
ತುಂಬಾ ಕಷ್ಟ ಪಡ್ಬೇಕಾಯ್ತದೆ....ಸುಮ್ನೆ ಮನೆಗ್  ನಡಿ....ಎಂದ....

ಅದೇನ್ ಸ್ವರ್ಗವೋ ನರಕವೋ ನಾನು ನೋಡ್ಕಂಡೇ ಬರ್ತೀನಿ...ಎಂದ ಪಾಂಡು....

9:30 ಗೆ ರಾಮಯ್ಯ... ಹೋಟೆಲ್ ಬಾಗಿಲು ಜಗ್ಗಿ ಬೀಗ ಜಗಿದು ಹೊರಟ....
ಹೊಟೆಲ್ ಹೊರಗೆ ಇದ್ದ ಉದ್ದನೆಯ ಬೇಂಚಿನ ಮೇಲೆ....ಪಾಂಡು ಒಬ್ಬನೇ ಕುಳಿತ....
ಬೀದಿ ನಾಯಿಗಳನ್ನ ಬಿಟ್ಟರೆ...ಯಾರು ಇರಲಿಲ್ಲ....
ಪಾಂಡು ಗೆ ಭಯ ಜೊತೆಯಲ್ಲಿ  ನಾಯಿಗಳಿರುವ ದೈರ್ಯ...
ಆಗಾಗ ಬೆಳಕು ಚೆಲ್ಲಿ ಬರುತಿದ್ದ ಗಾಡಿಗಳು....

ಕೈ ಗಡಿಯಾರ ನೋಡಿ ಈಗ ಹತ್ತು ಬೆಂಗಳೂರಿನ ಕೆಂಪು ಬಸ್ಸು  ಬರಲು ಇನ್ನು ಒಂದು ಗಂಟೆ ಬೇಕು ಎಂದು ....ಕುಳಿತಿದ್ದ ಉದ್ದನೆಯ ಬೇಂಚಿನ ಮೇಲೆ....ಮಲಗಿಕೊಂಡ...
ಸೊಳ್ಳೆ ಕಡಿತಕ್ಕೆ....ನಿದ್ರೆ ಹತ್ತಲಿಲ್ಲ....ಮತ್ತೆ ಎದ್ದು ....ನಾಲ್ಕು ಸುತ್ತು ಅಲ್ಲೇ ಸುತ್ತಾಡುತಿದ್ದಂತೆ ಸಮಯ ಕಳೆದು ....ಬಸ್ಸು ಬರುವ ಹೊತ್ತಾಯ್ತು.....ಮರೆಯಲ್ಲಿದ್ದರೆ...ಬಸ್ಸು ನಿಲ್ಲಿಸದೇ ಹೋದಾನು ಎಂದು ....ರಸ್ತೇ  ಬದಿಯೇ ನಿಂತ....
ಅಂತೂ ಕಾದಿದ್ದ ಬಸ್ಸು ಬಂತು....
ಏರಿ.....ಕಿಟಕಿ ಪಕ್ಕದ ಸೀಟು ಹಿಡಿದು  ಕೂತ....
ನಾಳೆ ಬೆಳಗ್ಗೆ ಬೆಂಗಳೂರಿಗೆ ಹೋಗುವ ಉತ್ಸಾಹ....ಮನದಲ್ಲಿ...
ಟಿಕೆಟ್ ಗೆ 250 ರೂಪಾಯಿ ಕೊಟ್ಟು...ಟಿಕೇಟ್ ತೆಗೆದುಕೊಂಡ....ಹಾಗೇಯೆ ಕಿಟಕಿಗೆ ಒರಗಿ ಕನಸಿಗೆ ಜಾರಿ ನಿದ್ರೆ ಹತ್ತಿತು....
ಯಾರೋ ಜೋರಾಗಿ ತಟ್ಟಿದಂತಾಗಿ ಧಡಕ್ಕನೆ ಎದ್ದ....
ಏ ಇಳಿಯಪ್ಪ....ಮೆಜೆಸ್ಟಕ್ ಬಂತು .....

ಹೋ.....ಎಂದು ಗಡಿಯಾರ ನೋಡಿದ....ನಮಯ ಬೆಳಗಿನ ಜಾವ  5 ಗಂಟೆ....ಇನ್ನು ಕತ್ತಲು ಸರಿದಿರಲಿಲ್ಲ....

....ಶೌಚಾಲಕ್ಕೆ ಹೋಗಿ ಶೌಚ ಮುಗಿಸಿ...
ಹೊಟ್ಟೆ ಹಸಿವು ....ಶುರುವಾಯಿತು....
ಇನ್ನು ಹೋಟೆಲ್ ಯಾವು ತೆರೆದಿರಲಿಲ್ಲ....
ಯಾವುದೋ ಒಂದು ಫ್ಲಾಟ್ ಫಾರಂ ನಲ್ಲಿ ಕೂತು....

ಅಮ್ಮ...ಹಸಿವು ಎಂದೊಡನೆ ಊಟ ತರುತಿದ್ದಳು..
ಅಮ್ಮನ ನೆನಪಾಗಿ....ಕಣ್ಣು ಒದ್ದೆಯಾಯಿತು....

ಮತ್ತೆ ವಾಪಾಸ್ ಹೋಗಿ ಬಿಡಲೆ ಎಂದೆನಿಸಿದರು ಅಹಂ ಅಡ್ಡ ಬಂದು ತಡೆಯಿತು....

ರಾಜುವಿಗೆ ಫೋನ್ ಮಾಡೋಣವೆಂದು...ಬ್ಯಾಗಿನಲ್ಲಿಟ್ಟಿದ್ದ ಫೋನ್ ತೆಗೆದು ರಾಜು ನಂಬರ್ ಹುಡುಕಿ ಫೋನ್ ಮಾಡಿದ  ಫೋನ್ ರಿಂಗಾಯ್ತಾದರು ಯಾರೂ ಫೋನ್ ತೆಗೆಯಲಿಲ್ಲ...
ಹಿಂದೊಮ್ಮೆ ರಾಜು ಊರಿಗೆ ಬಂದಾಗ.....ಹೇಳಿದ ಮಾತು ನೆನಪಾಯಿತು....

ಲೋ ಪಾಂಡು ನೀನ್ ಡಿಗ್ರಿ ಮುಗ್ಸಿ ಬೆಂಗಳೂರ್ ಗೆ ಬಾರೋ ನಾನೆಲ್ಲ....ನೋಡ್ಕೊತಿನಿ....ಕೈ ತುಂಬಾ ಸಂಬಳ ತಗೋಂಡ್ ಆರಾಮಾಗಿ ಇರ್ಬೋದು...ಅಂದಿದ್ದ..
ಬರುವಾಗಲೇ ಫೋನ್ ಮಾಡಬೇಕಿತ್ತು ಎಂದು ಕೊಂಡು ಮತ್ತೊಮ್ಮೆ...ಫೋನ್ ಮಾಡಿದ....

ಈ ಬಾರಿ ಫೋನ್ ಎತ್ತಿದ ರಾಜು....ಏನೋ ಪಾಂಡು ಬೆಳಗ್ ಬೆಳಗ್ಗೆ ನೆ ಫೋನ್ ಮಾಡಿದಿಯಾ....??
ಲೋ ರಾಜು ನಾನು ಬೆಂಗಳೂರಿಗ್ ಬಂದಿದಿನೋ...ಬಸ್ ಸ್ಟಾಂಡ್ ಲೇ ಇದಿನಿ......

ಹೋ....ಯಾವಾಗ್ ಬಂದೇ ಏನ್ ವಿಷ್ಯ ಏನ್ ಕತೆ...???

ಎಲ್ಲಾ ಹೇಳ್ತಿನಿ ಬಾ  ಮರಾಯ ಎಂದ......ಪಾಂಡು...

ಸರಿ ಬಂದೆ.....ಅಲ್ಲೇ ಇರು ಬಂದು ಫೋನ್ ಮಾಡ್ತೀನಿ ಎಂದ...

ಇತ್ತ.....ರಾಜು ಗೆಳೆಯ ಬೈಕ್ ಕರೆಸಿಕೊಂಡು ....ಪಾಂಡು
ಕರೆತರಲು ಹೊರಟ....
ಪಾಂಡು ಮತ್ತು ರಾಜು ಇಬ್ಬರು ....ರಾಜುವಿನ ರೂಮನ್ನು ಸೇರಿದರು....
ರಾಜು ಒಬ್ಬನೇ ಇದ್ದದರಿಂದ ಪುಟ್ಟ ರೂಮನ್ನು ಕಡಿಮೆ ಬಾಡಿಗೆಗೆ ಹಿಡಿದಿದ್ದ....
ಪಾಂಡು ನೆಡೆದದ್ದೆನ್ನಲ್ಲ...ತನ್ನ ಪ್ರತಿಜ್ಞೆಯನ್ನು ಹೇಳಿದ...
ಆಷ್ಟರಲ್ಲ‍ಾಗಲೆ ...ಸಮಯ 8 ಎಂದು ತೋರುತಿತ್ತು...
ರಾಜು ಗಡಿ ಬಿಡಿಯಲ್ಲಿ...ಹೊರಟು...
ಪಾಂಡುವಿಗೆ ತಿಂಡಿ ತಂದು ಕೊಟ್ಟು....
ಪಾಂಡು....ಡ್ಯೂಟಿ ಗೆ ಟೈಮ್ ಆಯ್ತು.....ನಾನ್ ಹೊರಡ್ಬೇಕು....ನಿನ್ ಕೆಲ್ಸದ್ ವಿಷ್ಯ ನಾನ್ ನೋಡ್ಕೋತಿನಿ...
ರೂಮ್ ಬಿಟ್ಟು ಎಲ್ಲೂ ಹೋಗ್ಬೇಡ ....ಇದು ನಮ್ಮೂರಲ್ಲ...
ಸಿ ಟಿ....ಹೊರಗ್ ಹೋದ್ರೆ ವಾಪಾಸ್ ಬರೋಕ್ ಗೊತ್ತಾಗಲ್ಲ...ಗಲ್ಲಿ ಗಲ್ಲಿಗೂ ಗಲಿ ಬಿಲಿ ಮಾಡೋ ಅಡ್ಡ..ಉದ್ಧ ರಸ್ತೆಗಳು....ಎಂದ....

ನಮ್ ಅಪ್ಪಗೆ ಫೋನ್ ಮಾಡಿ ಹೇಳ್ತೀನಿ ನೀನ್ ಬಂದಿದಿಯಾ ಅಂತಾ ...ನಮ್ ಅಪ್ಪ ನಿಮ್ ಮನೆ ಕಡೆ ಹೋದಾಗ ಹೇಳ್ತಾರೆ....ತಲೆಕೆಡುಸ್ಕೋ ಬೇಡ...

ಹೂ ಸರಿ ಎಂದ ಪಾಂಡು......
ಮದ್ಯಾಹ್ನ ಹೊತ್ತಾದಂತೆ....ಹಸಿವು ಶುರುವಾಗಿ....ಊಟಕ್ಕೆಂದು ಪಾಂಡು  ರೂಮಿಗೆ ಬೀಗ ಜಡಿದು  ಹೊರಟ....

ಪಕ್ಕದ ಬೀದಿಯಲ್ಲಿದ್ದ....ಹೋಟೆಲ್ ನಲ್ಲಿ ಊಟ ಮುಗಿಸಿ....
ಹಾಗೇ ಸುತ್ತಾಡಿ ಬರೋಣವೆಂದು ಇನ್ನು ಮುಂದಿನ ಬೀದಿಗೆ ಸಾಗಿದ....ನೆಡೆದು ನೆಡೆದು....ತನ್ನ ಬೀದಿಯನ್ನೇ..ಮರೆತ...ಫೋನ್ ಕೂಡ ರೂಮಿನಲ್ಲೇ ಉಳಿದಿತ್ತು....

ಅಯ್ಯೋ ನಾನೇನ್ ಮಾಡ್ಬಿಟ್ಟೆ...ಎಂದು ರಸ್ತೆ ಬದಿಯ ಫೂಟ್ ಪಾತ್ ನಲ್ಲಿ ಕುಳಿತ....

ಹೀಗೆ ಕೂತರೆ ಪ್ರಯೋಜನವಿಲ್ಲ.....ಎಲ್ಲಾ ಬೀದಿ ಸುತ್ತಿದರೂ ಸರಿಯೇ..ನನ್ನ ರೂಮಿನ ಬೀದಿ ಹುಡುಕ ಬೇಕೆಂದು ಸುತ್ತಿ ಸುತ್ತಿ....ವಿನಯ ನಗರ ತಲುಪಿದ....

ದಣಿವಾರಿಸಿ ಕೊಳ್ಳಲು ಕುಳಿತಿದ್ದಾಗ...ದೊಡ್ಡ ಬ್ಯಾಗು ಹೊತ್ತು ಒಂದು ಮನೆಯಿಂದ ಆಚೆ ಬಂದ ವ್ಯಕ್ತಿ ಯನ್ನು ಗಮನ ವಿಟ್ಟು...ನೋಡಿದಾಗ ಪರಿಚಯದವನಂತೆ ತೋರಿ ಹತ್ತಿರ ಹೋದ...
ನೋಡಿದರೆ....ರಾಜು.....
ಪಾಂಡು ಗೆ ಜೀವವೇ ಮರಳಿ ಬಂದಂತಾಯಿತು...

ಆದರೆ ರಾಜುವಿಗೆ ಮುಜುಗರ.....
ಕಾರಣ...ತಾನು ಊರಿನಲ್ಲೆಲ್ಲ.....ಕಂಪನಿಯಲ್ಲಿ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ...
ನೀನ್ಯಾಕೋ ಇಲ್ಲಿಗ್ ಬಂದೆ.....ನಾನ್ ಹೇಳಿರ್ಲಿಲ್ವ....ರೂಮ್ ಬಿಟ್ಟು ಬರ್ಬೇಡ ಅಂತಾ.....ಎಂದ ರಾಜು....
ಪಾಂಡು      ಹಾಗೇ ಸುತ್ತಾಡಿ ಬರೋಣ ಅಂತ ಬಂದು ಹೀಗಾಗೋಯ್ತು....ಎಂದ...

ಸರಿ....ಬಾ ನನ್ ಜೊತೆ ಲಿ ಎಂದು ರಾಜು ತನ್ನ ಆಫೀಸಿ ಗೆ ಕರೆದು ಕೊಂಡು ಹೋದ.....ಆ ಆಫೀಸಿನ ಮ್ಯಾನೇಜರ್ ಜೊತೆ ಮಾತನಾಡಿ ಹೇಗೋ...ಪಾಂಡುವಿಗೂ ಕೆಲಸ ದೃಢಪಡಿಸಿದ....

ನಾಳೆ ಬರುವಾಗ ಡಾಕ್ಯುಮೆಂಟ್ ತರಲು ಹೇಳಿದರು...
ಕೆಲಸಕ್ಕೆ ಸೇರಿದ ಮೊದಲ ದಿನ......ಸೇಲ್ಸ ಮ್ಯಾನ್ ಕೆಲಸವನ್ನು  ವಿವರವಾಗಿ ತಿಳಿಸಿ...ತಿಂಗಳಿಗೆ 5000 ಕೊಡುವುದಾಗಿ....ಕೆಲಸದ  ಕ್ಷಮತೆ ಮೇಲೆ....ನಿಮಗೆ...ಹೆಚ್ಚಿನ ಬೋನಸ್ ಕೊಡುವುದಾಗಿ...ಹೇಳಿದರು...

ಬಿಸಿಲಿನಲ್ಲಿ ಹೆಣ ಭಾರದ ವಸ್ತುಗಳು ಬೆನ್ನ ಮೇಲೆ....
   ಸುಮ್ಮನೆ ಕರೆದು ಸಮಯ ಹಾಳು ಮಾಡುವ ಅಪಾರ್ಟ್ ಮೆಂಟ್ ಜನರು.....
ತಿಂಗಳಿನ  5000 ಬಂದಾಗ ಅದರಲ್ಲಿ....ತಿಂಗಳೆಲ್ಲದರ ಬಾಡಿಗೆ ಇಬ್ಬರಾದ್ದರಿಂದ ಬೇರೆ ರೂಮು ತಿಂಗಳಿಗೆ 4000 ಇಬ್ಬರು ಹಂಚಿಕೊಂಡರು..ಊಟ ...ತಿಂಡಿ....ಬಸ್ ಚಾರ್ಜು ಅಂತಾ ನಿರ್ವಹಣೆಗೆ ಮಾಡಿದ್ದ ಸಾಲ ಕಳೆದು ಉಳಿದದ್ದು....500.....ಅದನ್ನು ಮನೆಗೆ ಕಳುಹಿಸಿದರೆ...ಅದಕ್ಕೆ ಅಪ್ಪ 1000 ಸೇರಿಸಿ ನನಗೇ ಕಳುಹಿಸುತ್ತಾರೆಂದು ಕೊಂಡು.....ಸುಮ್ಮನಾದ...


ಅಂದಿಗೆ ಅಪ್ಪ ನ ಶ್ರಮ ...ಬೆವರಿನ ಬೆಲೆ ತಿಳಿದಿತ್ತು....  
  
                                    ರಚನೆ
                               ಶ್ಯಾಮ್ ಪ್ರಸಾದ್ ಭಟ್


Saturday, July 6, 2019


ಕಿಲಾಡಿ ತಾತ....
ಇಂದು ನಾನು ಹೇಳ ಬೇಕಿರುವುದು ಒಬ್ಬ ಕಿಲಾಡಿ ಅಜ್ಜನ ಬಗೆಗೆ...
ಮುಂಗಾರು ಪ್ರಾರಂಭವಾದದ್ದರಿಂದ ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಎಡೆ ಬಿಡದೆ ಸುರಿವ ಮಳೆ.....

ಕೊಡೆ ಇಲ್ಲದೆ ಎಲ್ಲಿಗೂ ಹೊರಡೋಕೆ ಆಗಲ್ಲ ಅಂತ ಹಿಂದಿನ ದಿನವೇ ಮನೆಗೆ ಫೋನ್ ಮಾಡಿದಾಗ ತಿಳಿದಿತ್ತು....

ಆದರೆ ಮುಂಗಾರು ನನ್ನೂರು ಇಷ್ಟವೆಂದೋ ಏನೋ..... ಅಲ್ಲೇ ....ಜಾಂಡ ಊರಿತ್ತು...
ಇನ್ನೂ ಮೈಸೂರಿಗೆ ಬಂದಿರಲಿಲ್ಲ....
ಬರುವ ಮುನ್ಸೂಚನೆಯನ್ನ ಆಗಾಗಾ ತುಂತೂರು ರಾಯಭಾರಿಗಳನ್ನ ಕಳುಹಿಸಿ ತಿಳಿಸುತಿತ್ತು ಆದರೂ ಇನ್ನು ಬಂದಿರಲಿಲ್ಲ......

ಶುಕ್ರವಾರ ಬೆಳಗ್ಗೆ ಸ್ವಲ್ಪ ಸೋಮಾರಿತನದಿಂದಲೇ....ತಡವಾಗಿ ಎದ್ದು ....ಮನೆಯಲ್ಲಿ ಎರಡು ದಿನದ ಮಟ್ಟಿಗೆ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡು ....ಸ್ನಾನಕ್ಕೆ ಹೋಗೋಣ
ಅಂತ ಹೊರಟೆ.....ಅ‍ಷ್ಟರಲ್ಲಾಗಲೇ 8 ಗಂಟೆ ಸರಿದಿತ್ತು....

ಬೆಳಗ್ಗಿನ ತರಗತಿಗೆ ಬೇಗ ಹೊರಡಬೇಕಿದ್ದರಿಂದ ಹಾಸ್ಟೆಲ್ ಕೊಠಡಿಯ ಸಹವಾಸಿ ರೋಹಿತ್ ಆಗಲೇ ಕೆಳಗಿನ ಉಪಹಾರ ಮಂದಿರದಿಂದ ತಿಂಡಿ ಮುಗಿಸಿ ಮೇಲೆ ಬಂದ....ಭಟ್ರೇ ನಿಮಗಿಷ್ಟವಾದ ತಿಂಡಿ ಮಾಡಿದಾರೆ ಹೋಗಿ ಎಂದ .....

   ವಿದ್ಯಾರ್ಥಿ ನಿಲಯದ  ಊಟ ತಿಂಡಿ ಬಗೆಗೆ ವಿದ್ಯಾರ್ಥಿ ನಿಲಯದ ವಾಸಿಗಳಿಗೆ ಗೊತ್ತಿರುತ್ತದೆ......ಚನ್ನಾಗಿ ಮಾಡಿದರೆ ತುಸು ಹೆಚ್ಚು ಹಾಕಿಸಿಕೊಂಡಾರು ಎಂದೇ....ಉಪ್ಪು ಇದ್ದರೆ ಖಾರ ಇರೊಲ್ಲ....ಖಾರ ಇದ್ದರೆ ಉಪ್ಪು ಇರೋಲ್ಲ.......
ಯಾವ್ದಪ್ಪ ಅದು ನನಗಿಷ್ಟವಾದ ತಿಂಡಿ ಎಂದೆ ಪುಳಿಯೋಗರೆ ಎಂದ.....

ಪುಳಿಯೋಗರೆ ಅಲ್ಲ ಕಣೋ ಅದು ಹುಳಿಯೋಗರೆ ಎಂದು ತಮಾಷೆ ಮಾಡಿ ನಕ್ಕೆವು....ಹಾಗೇ ಇಡ್ಲಿ ಗೆ ಡೆಡ್ಲಿ ಎನ್ನುತ್ತೇವೆ.
ಹಾಸ್ಟೆಲ್ ಪುಳಿಯೋಗರೆ ತಿಂದು ತಿಂದು ಕೆಲವೋಮ್ಮೆ ಮನೆಗೆ ಹೋದಾಗ ಅಮ್ಮ ಪುಳಿಯೋಗರೆ ಮಾಡ್ಲೇನೋ ಎಂದಾಗ .....ಅಮ್ಮ ಬೇಡ್ವೇ ಬೇಡ ಅಂದದ್ದು ಉಂಟು....

ಎಲ್ಲಾ ತಯಾರಿ ಮಾಡಿಕೊಂಡು  ಹೊರಗೆ ತಿಂಡಿ ಮಾಡಿಕೊಂಡರಾಯ್ತೆಂದು ಕೊಂಡು ಹೊರಟೆ...

ತ್ರಿವೇಣಿ ವೃತ್ತದ ಬದಿಯಲ್ಲೇ ಇರುವ ವಿಷ್ಣು ಭವನದಲ್ಲಿ ತಿಂಡಿ ಮುಗಿಸಿ ಹೊರಟೆ....
ಮೈಸೂರು ಚಿಕ್ಕಮಗಳೂರು  ಬಸ್ಸು ಹತ್ತಿ ಕುಳಿತಾಗ ಸುಮಾರು 11:00 ರ ಸಮಯ...ಬೇಲೂರಿಗೆ ಸರಿ ಸುಮಾರು 4 : 00 ರ ಸುಮಾರಿಗೆ ತಂದಿಳಿಸಿದ ...

ಅಲ್ಲಿಂದ ಮುಂದಕ್ಕೆ....ಬೇಲೂರಿನಿಂದ ಮೂಡಿಗೆರೆ ಕಡೆಗೆ ಹೋಗುವ ಬಸ್ಸು ಹತ್ತಿ ಹೋಗ ಬೇಕಿತ್ತು...ಮಳೆ ಎಡೆಬಿಡದೆ ಸುರಿಯುತ್ತಿತ್ತು..

ಬಸ್ಸು ಹತ್ತಿ ಕಿಟಕಿ ಬಳಿಯ ಸೀಟು ಹಿಡಿದು ಕುಳಿತೆ...

   ಬಸ್ಸು ಹೊರಡೋದು ಸ್ವಲ್ಪ ತಡವಾಗುತ್ತದೆ ಎಂದು ತಿಳಿಯಿತು....
ಮುಂದಿನ ಸೀಟಿನಲ್ಲಿ....ತಾಯಿ ತನ್ನ ಮಗುವಿಗೆ ಬೈಯುತಿದ್ದದ್ದು ಹೀಗೆ...
ಹಾಳಾದೋನು ಮಳೆಲ್ ‍ಆಟ ಆಡೋಕ್ ಹೋಗ್ಬೇಡ ಅಂದ್ರು ಹೋಗೋದು ....ನೋಡೀಗ ಶೀತ ಜ್ವರ ಬಂದಿದೆ ....ಒಂದ್ ವಾರ ಸ್ಕೂಲಿಗೆ ರಜಾ ಆಯ್ತು....

ಈ ಮಾತನ್ನು ಕೇಳಿ ಬಾಲ್ಯದಲ್ಲಿ ನಾವು ಆಡುತಿದ್ದ   ಮಳೆ ನೀರಿನಲ್ಲಿ ಪೇಪರ್ ದೋಣಿ ಮಾಡಿ ಬಿಡುತಿದ್ದದ್ದು....ಗಾಳಿಗೆ ಬಿದ್ದ ಜೀರಿಗೆ ಮಾವಿನ ಹಣ್ಣನ್ನು ಸೀಬೇಹಣ್ಣನ್ನು  ಹೆಕ್ಕಿ ತಂದು ಸವಿದದ್ದು...ಜ್ವರ ಬಂದು ಮಲಗಿದ್ದು....ಎಲ್ಲವು ರಪ್ಪನೆ ಕಣ್ಮುಂದೆ ಬಂದಂತಾಯಿತು...

ನದಿ ದಡದಲ್ಲಿರುವ ದೇವಾಲಯಗಳಲ್ಲಿ ಯಾವ ಪಾಪ ಗಳಿದ್ದರು ರೋಗ ರುಜಿನ ವಿದ್ದರು ಮಿಂದೆದ್ದರೆ ವಾಸಿಯಾಗುವುದೆಂದು ನಂಬಿಕೆ...
ಗಂಗಾ ಯಮುನ ಗೋದಾವರಿ ಸರಸ್ವತಿ ನರ್ಮದ ಸಿಂಧೂ ಕಾವೇರಿ ಈ ಎಲ್ಲಾ ಪುಣ್ಯ ನದಿಗಳ ನೀರನ್ನು ಹೀರಿಕೊಂಡು ಮೋಡವಾಗಿ ಸುರಿವ ಮಳೆ ಇನ್ನೆಷ್ಟು...ಪವಿತ್ರ ಪುಣ್ಯ...ಎಂಬೆಲ್ಲ ಆಲೋಚನೆಗಳಲ್ಲಿ ಮುಳುಗಿರುವಾಗ

ಬಸ್ಸು ಜೋರು ಶಬ್ದ ಮಾಡಿ ಹೊರಟಿತು....
ಬೇಲೂರು ಟೌನ್ ಮುಗಿಯುತಿದ್ದಂತೆ ಕಂಡಕ್ಟರ್ ಟಿಕೆಟ್ ಹರಿಯಲು ಶುರು ಮಾಡಿದ....

ನನ್ನ ಪಕ್ಕದಲ್ಲಿ...ಒಬ್ಬ ಅಜ್ಜ ಕುಳಿತಿದದ್ದರು...
ಕಂಡಕ್ಟರ್ ಟಿಕೇಟ್ ಎಂದಾಗ.....ನಾನು ಟಿಕೇಟ್ ತೆಗೆದು ಕೊಂಡೆ....ಪಕ್ಕದಲ್ಲಿದ್ದ ಅಜ್ಜ ಮುಂದೆ ಬರುವ ಬಳ್ಳೂರಿನಲ್ಲಿ ಇಳಿಯುವವರು..  ..ಒಂದ್ ಬಳ್ಳೂರಿಗ್ ಕೊಡಪ್ಪ ಅಂತ ನೂರರ ನೋಟನ್ನು ಕೊಟ್ಟರು ....ಕಂಡಕ್ಟರ್ ಟಿಕೇಟ್ ಹರಿದು ಉಳಿದ 80 ರೂ ಪಾಯಿ ಚಿಲ್ಲರೆ ಯನ್ನು ಕೊಟ್ಟುರು ಅದರಲ್ಲಿ 50 ರ ನೋಟು ಒಂದು ಮೂರು ಹತ್ತು ರೂಪಾಯಿ ನೋಟುಗಳು....
ಆ ಹತ್ತರ ನೋಟುಗಳಲ್ಲಿ ಒಂದು ಭಾಗಶಃ ಹರಿದಿತ್ತು....ಅದನ್ನು ನಾನೂ ಗಮನಿಸಿದೆ....
ಅಜ್ಜ ರೀ ಕಂಡಕ್ಟರೇ....ಇದು ಹರ್ದೋಗಿದೆ ಬೇರೇ ನೋಟ್ ಕೊಡಿ ಎಂದಾಗ
ಇರೋದ್ ಅದೇ ನಿಮಿಗ್ ಕೊಡೋಕ್ ಹೊಸ ಪ್ರಿಂಟ್ ಮಾಡ್ಲಾ....20 ರುಪಾಯಿ ಟಿಕೇಟ್ ಗೆ ನೂರ್ ರುಪಾಯಿ ಕೊಟ್ಟು....ನಿಮ್ದೇ ಮಾತು....ಇಲ್ಲ 20 ರುಪಾಯಿ ಕೊಡಿ..ಎಂದ...

ಅಜ್ಜನ ಬಳಿ ಇಪ್ಪತ್ತು ರುಪಾಯಿ ಚಿಲ್ಲರೆ ಇದ್ದಿದ್ದರೆ ಅವರ್ಯಾಕೆ ನೂರರ ನೋಟು ಕೊಡುತಿದ್ದರು....

ಈ ಕಂಡಕ್ಟರ್ಗಳು ಹೀಗೇ ಹರಿದ ನೋಟುಗಳನ್ನು ಹೀಗೆ ಸಾಗಿಸಿ ಬಿಡ್ತಾರೆ.....
ಅಜ್ಜ ಸುಮ್ಮನಿರಲಿಲ್ಲ....ತಕ್ಷಣ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ತನ್ನ ಊರಿನವನೇ ಆದ ಒಬ್ಬನನ್ನು ಕೂಗಿ...ಅವನ ಬಳಿ ಇದ್ದ 10 ರ ಒಳ್ಳೆ ನೋಟಿಗೆ ಬದಲಿಗೆ ಕಂಡಕ್ಟರ್ ಕೊಟ್ಟ ಹರಿದ  ನೋಟು ಕೊಟ್ಟು ....ತಗೋ ಇದನ್ನೇ ಕೊಡು ಟಿಕೆಟ್ಗೆ ಅಂತ ಹೇಳಿದರು....
ಇದನ್ನೆಲ್ಲ....ಗಮನಿಸುತಿದ್ದ ಕಂಡಕ್ಟರ್ ಪೆಚ್ಚಾದ....

ಹಿಂಬದಿ ಸೀಟಿನ ಅಜ್ಜನ ಗುರುತಿನವ ಹಾಗೇಯೇ ಮಾಡಿದ....
ಈಗ ಕಂಡಕ್ಟರ್ಗೆ ಏನೂ ಹೊಳೆಯಲಿಲ್ಲ...ಬೇರೆ ನೋಟು ಕೊಡಿ ಅಂತ ಹೇಳಲಾಗೊಲ್ಲ....ಏಕೆಂದರೆ ತಾನೇ ಬೇರೆಯವರಿಗೆ ಕೊಟ್ಟ ನೋಟಿದು....
ಮರು ಮಾತಾಡದೆ ಟಿಕೇಟ್ ಹರಿದು ...ಮುಂದೆ ಸಾಗಿದ....

ಬುದ್ದಿವಂತಿಕೆಯಿಂದ ಎಂತಹ ಸಂದರ್ಭವನ್ನು ನಮಗೆ ಅನುಕೂಲವಾಗುವಂತೆ ಮಾಡಿಕೊಳ್ಳಬಹುದೆಂಬ ಸಂದೇಶ ಸದ್ದಿಲ್ಲದೆ....ಸಾರಿತ್ತು...
ಮುಂದೆ ನನ್ನ ಸ್ಟಾಪ್ ಬಂದಾಗ ಇಳಿದು ....

ನನ್ನ ಮನೆಗೆ
   ಬಸ್ ಇಳಿವ ಸ್ಟಾಪ್ ನಿಂದ 2 ಕಿ ಮೀ
ನೆಡೆದು ಅಥವಾ ಆಟೋದಲ್ಲಿ ಸಾಗಬೇಕು....
ಮಳೆ ಕಾರಣ....ಆಶ್ರಯಕ್ಕೆಂದು ಹತ್ತಿರದ ಹೊಟೆಲ್ ನಲ್ಲಿ ನಿಂತು ಬಿಸಿ ಬಿಸಿ ಕಾಫಿ.....ಜೊತೆಗೆ ಬಜ್ಜಿ ಸವಿದೆ....ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ ತಿನ್ನುವ ಮಜವೇ ಬೇರೆ...
ಸ್ವಲ್ಪ ಸಮಯದ ನಂತರ ಮಳೆ ಕಡಿಮೆಯಾಯಿತು ಮನೆಗೆ ಆಟೋ ಹಿಡಿದು....ಹೊರಟೆ....

                             ರಚನೆ
                  ಶ್ಯಾಮ್ ಪ್ರಸಾದ್ ಭಟ್