Sunday, August 11, 2019

ಮೌನಾನುರಾಗ



 
ಅಮ್ಮಾ ಹೋಗ್ ಬರ್ತೀನಿ.......

ಛತ್ರಿ ತಗೊಂಡ್ಯೇನೆ...?

ಹ.....ತಗೊಂಡಿದಿನಿ.....ಎಂದವಳೆ ರಾಜು ಮನೆ ಗೇಟಿನ ಬಳಿ ಬಂದು

ಲೋ ರಾಜು ....ರಾಜು ...ಹೊರ್ಟ್ಯೇನೋ...ಎಂದಳು ಅಮೂಲ್ಯ ..

ಪಕ್ಕದ ಮನೆಯ ರಾಜು ಹೊರ ಬಂದು ಬೇಲಿಯ ಬಳಿ ಲೇ ಇಲ್ಲ ಕಣೇ....ಅಮ್ಮ ಇನ್ನು ತಿಂಡಿ ಮಾಡ್ತಿದಾರೆ....

ಸರಿ ನಾನ್ ಹೋಗ್ತಿರ್ತಿನಿ ಬಾ ಹಾಗಾದ್ರೆ...ಎಂದು ಹೊರಟೇ ಬಿಟ್ಟಳು ಅಮ್ಮು.

ಇತ್ತ ರಾಜು ನೋಡಮ್ಮ ...ಆಗ್ಲೇ ಅಮ್ಮು  ಹೋದ್ಲು .. ಬೇಗ...ಕೊಡು ಇಲ್ಲಂದ್ರೆ ನಾನಲ್ಲೇ ಸ್ಕೂಲ್ ಹತ್ರ ಏನಾದ್ರು ತಿಂಕೊತೀನಿ...ಬಿಡು.

ಎಂದು ಬ್ಯಾಗ್ ಹೆಗಲಿಗೇರಿಸಿ....ಹೊರಬಂದ

ಹೊರಬಂದರೆ ಜಿಟಿ ಜಿಟಿ ಮಳೆ ಸುರಿಯುತಿತ್ತು...ಮಲೆನಾಡಲ್ಲಿ ಮಳೆಗಾಲದಲ್ಲಿ ಅದು ಸಾಮಾನ್ಯ ದೃಶ್ಯ  ಒಳಗೋಡಿ ಛತ್ರಿ ತಂದು ....ಚಪ್ಪಲಿ ಮೆಟ್ಟಿ ಒಂದೇ ಉಸಿರಿನಲಿ ಓಡಲು ಶುರು ಮಾಡಿ ....
ಅಮೂಲ್ಯ ತನ್ನಿಂದ ನಾಲ್ಕು ಹೆಜ್ಜೆ ದೂರವಿರುವಾಗಲೆ...ಓಟದ ವೇಗ ನಿಧಾನ ಮಾಡಿ ಬೆಕ್ಕಿನಂತೆ ಹೆಜ್ಜೆ ಇಟ್ಟು ಹಿಂದೆಯಿಂದ   ಭೂಂ ಎಂದು ಅರಚಿದ ....ಅರಚಿದ ಸದ್ದಿಗೆ ಅಮೂಲ್ಯ  ಬೆಚ್ಚಿ ಬಿದ್ದು ....ತನ್ನ ಛತ್ರಿ ತುದಿಯಿಂದ ರಾಜು ತಲೆಗೆ ಚುಚ್ಚಿ ನಕ್ಕಳು...

ಸ॥ ಹಿ॥ಪ್ರಾ॥ಶಾಲೆ ಕಂಚಿನಕಟ್ಟೆ ಗೆ ಇಬ್ಬರೂ ತನ್ನೂರಾದ ಬೆಟ್ಟದ ಪುರದಿಂದ ನೆಡೆದು ಕೊಂಡೆ ಹೋಗಬೇಕಿತ್ತು..ಅದು
ಸುಮಾರು 3 ಮೈಲಿ ದೂರದ ದಾರಿ...

ಅಮೂಲ್ಯ ಮತ್ತು ರಾಜು ಇಬ್ಬರೂ ಚಿಕ್ಕಂದಿನಿಂದ ಜೊತೆಯಲ್ಲೇ ಆಡುತ್ತ ಬೆಳೆದವರು ....
ಅಮೂಲ್ಯ ಳ ತಂದೆ ಮಂಜಪ್ಪ ಗೌಡ ತಾಯಿ ವಿಶಾಲಮ್ಮ..
ವೃತ್ತಿಯಲ್ಲಿ ಗ್ರಾಮಲೆಕ್ಕಿಗ...
ರಾಜುವಿನ ತಂದೆ ರಾಮಪ್ಪ ಕರೆಂಟ್ ಆಫೀಸಿನಲ್ಲಿ ಪ್ರಥಮ ದರ್ಜೆ ಸಹಾಯಕರು...ತಾಯಿ ಸೀತಮ್ಮ..

ರಾಮಪ್ಪ..ಮಂಜಪ್ಪ ಇಬ್ಬರೂ ಬಾಲ್ಯ ಸ್ನೇಹಿತರು..SSLC ಮುಗಿದೊಡನೆ ಮನೆ ಬಾಗಿಲಿಗೆ ಕೆಲಸ ಹುಡುಕಿಕೊಂಡು ಬಂದಿತು ...

ರಾಜು ಮತ್ತು ಅಮ್ಮು ಇಬ್ಬರದ್ದು  5 ನೇ ತರಗತಿ ನೆಡೆಯುತಿತ್ತು..

ಮರುದಿನ ಬೆಳಗ್ಗೆ....

ಭಾನುವಾರ ವಾದ್ದರಿಂದ ಸ್ವಲ್ಪ ತಡವಾಗೇ ಎದ್ದು ರಾಜು ಕಣ್ಣುಜ್ಜುತ್ತ ಹೊರಬಂದ
ಹಜಾರದಲ್ಲಿ ಚಾಪೆಯ ಮೇಲೆ...ಅಮೂಲ್ಯ ಳ ಅಪ್ಪ ಹಾಗೂ ರಾಜು ಅಪ್ಪ ಏನೋ ಮಾತಾಡುತ್ತಾ ಕುಳಿತಿದ್ದರು...
ಒಳಗಿನಿಂದ ಅಮ್ಮ...ಸರ್ಕಾರಿ ಕೆಲ್ಸ ಅಂದ್ಮೇಲೆ ಊರೂರು ತಿರ್ಗೊದ್ ಇದ್ದಿದ್ದೇಯಾ...ಎಂದು ಗೊಣಗುತಿದ್ದರು

ರಾಜು ಅಮ್ಮನ ಬಳಿ ಹೋಗಿ ....ಏನ್ ಮಾಡಿದಿಯಮ್ಮ ತಿಂಡಿ ...ಎಂದ...
ಉಪ್ಪಿಟ್ಟು ಕಣೋ ಹೋಗ್ ಮುಸುಡಿ ತೊಳ್ದು ಸ್ನಾನ ಮಾಡು ....ಇಷ್ಟೋತ್ತು ಎಮ್ಮೆ ಬಿದ್ದಂಗ್ ಬಿದ್ದಿದಾನೆ....

ಹೇ....ಸುಮ್ನಿರಮ್ಮ....

ಏನುಕ್ ಮಂಜಪ್ಪ ಮಾಮ ಬಂದಿದರಲ...ಎಂದ

ಅವ್ರ್ ಗೆ ಬೇರೆ ಕಡೆ ಟ್ರಾನ್ಸಫರ್ ಅಗಿದಿಯಂತೆ....ಇಲ್ಲಿಂದ ಬಿಟ್ಟು ಹೋಗ್ತಾರೆ...ಅದ್ಕೇ ಮಾತಾಡ್ಕೊಂಡ್ ಹೋಗೋಕ್ ಬಂದಿದಾರೆ....ಎಂದಳು ಅಮ್ಮ.

ಮಂಜಪ್ ಮಾಮ ಒಬ್ರೆ ಹೋಗ್ತಾರಾ?

ಒಬ್ರೆ ಹೋಗಿ ಏನ್ ಮಾಡ್ತಾರೆ...ಎಲ್ರು ಹೋಗ್ತಾರೆ...

ಅಮ್ಮ ಅಮ್ಮೂ ನೂ ಹೋಗ್ತಾಳ...??

ಹುಮ್ ಕಣೋ....ಮರಾಯ...ತಲೆ ತಿನ್ಬೇಡ ಹೋಗ್ ಆ ಕಡೆ ಅವ್ರ ಮದ್ಯಾಹ್ನ ಕ್ಕೆ ಊಟಕ್ಕೆ ಬರ್ತಾರೆ...ಸಿದ್ಧ ಮಾಡ್ಕೋ ಬೇಕು...ಬಾಯಿಲ್ಲಿ ....ತಗೋ ಹತ್ರುಪಾಯಿ  ಬೇಗ ಓಡೀ ಹಾಲ್ ತಗೋ ಬಾ...ಹಾಲು ತರಲು ಹೋಗದೇ

ರಾಜು ಅಮೂಲ್ಯ ಮನೆ ಕಡೆಗೆ ಓಡಿದ ....

ಅಮ್ಮು ಅಮ್ಮು ಎಂದು ಕೂಗಿದ.....ರೂಮಿನಲ್ಲಿ ಬಟ್ಟೆ ಮಡಿಸಿಟ್ಟು ಕೊಳ್ಳುತ್ತ .....ಕುಳಿತಿದ್ದವಳು ರಾಜುವನ್ನು ನೋಡಿದೊಡನೆ ಭಾವುಕವಾಗಿ ಕಣ್ಣು ತುಂಬಿ ಕೊಂತು...

ರಾಜು ಹೋಗ್ತಿದಿಯಂತೆ ಎಂದ....

ಮೌನವೇ ಉತ್ತರ...ಭಾವುಕತೆಯೇ ಮಾತಾಗಿತ್ತು...

ಮರುದಿನ ರಾಜು ಒಬ್ಬನೆ ಶಾಲೆಗೆ ಹೊರಟ...
ಜೊತೆಗೆ ತರ್ಲೆ ಮಾಡಲು ಗೆಳತಿ ಇಲ್ಲ....ಒಬ್ಬನೇ..ಆದ್ದರಿಂದ ಬೇಗ ಶಾಲೆ ತಲುಪಿದ..

ಸುಮಾರು 11:00 ರ ಸಮಯ .....ಅಮೂಲ್ಯ ಮತ್ತು ಅವರಪ್ಪ...ಜೊತೆಯಾಗಿ ಬಂದದ್ದು ರಾಜುವಿಗೆ ಕ್ಲಾಸ್ ರೂಮಿನ ಕಿಟಕಿಯಲ್ಲೆ ಕಾಣಿಸಿತು...

ಎದ್ದು ಹೋಗಿ ಮಾತಾಡಿಸುವ ತವಕ ....
 ಅಡ್ಡ ಬಂತು ಗಣಿತ ಮಾಸ್ತರಿನ ಮುಖ....

ಮರುದಿನ ಶಾಲೆಗೆ ಹೊರಡುವಾಗ ....ಅಮ್ಮು ಮನೆ ಮುಂದೆ ದೊಡ್ಡ ವ್ಯಾನ್ ಬಂದು ನಿಂತಿತ್ತು....
ನೋಡಿಯು ನೋಡದಂತೆ....ಸುಮ್ಮನೇ...ಹೋದ...ಅದೇ ಭಾವುಕತೆ....

ದಾರಿ ಸಾಗುತಿದ್ದಂತೆ
ದಾರಿಯಲ್ಲಿ ಸಿಗುವ ಮಾವಿನ ಮರಗಳಲ್ಲಿ ಮಾವಿನ ಹಣ್ಣು ಕಿತ್ತು ತಿಂದದ್ದು....ಮಳೆಗಾಲದಲ್ಲಿ ರಸ್ತೆ ಯ ಗುಂಡಿಯಲ್ಲಿ ನಿಂತ ನೀರಲ್ಲಿ ಆಡಿದ್ದು....
ಎಲ್ಲಾ ನೆನಪಾಗಿ ....ಕಣ್ಣು ತುಂಬಿಬಂತಾದರು ಮಳೆ ಹನಿ ಅದ ಮರೆಸಿತ್ತು....

2 ವರ್ಷ ಹೇಗೋ ಪ್ರಾಥಮಿಕ ಶಿಕ್ಷಣ ಮುಗಿಸಿ....ಹೈಸ್ಕೂಲ್ ಗೆ   ಭಿಮಾಪುರ ತಾಲ್ಲೋಕು ಗೆ ಸೇರಿಸಬೇಕೆಂದು ಹಠ ಹಿಡಿದು ಸೇರಿಕೊಂಡ....ಅದಕ್ಕೂ ಕಾರಣ ಇತ್ತು....

ಮಂಜಪ್ಪ ರಾಜಕೀಯ ಮಾಡಿಸಿ ...ತನ್ನೂರ ತಾಲ್ಲೂಕಿಗೆ ವರ್ಗ ಮಾಡಿಸಿ ಕೊಂಡಿದ್ದರು...

ಸಿಟಿ ಜೀವನ ಒಗ್ಗಿದಂತಾಗಿ ...ಊರಿಗೆ ಬರದೇ ಭೀಮಾಪುರದಲ್ಲೆ..ನೆಲೆ ನಿಂತಿದ್ದರು...ಆಗಾಗಾ ತನ್ನೂರಿಗೆ ಬಂದಾಗ ರಾಜು ಅಪ್ಪನ ಬಳಿ ಈ ವಿಷಯ ಹೇಳಿದ್ದರು...ಅದು ರಾಜು ಕಿವಿಗೂ ಬಿದ್ದಿತ್ತು..

ಇಲ್ಲಿಂದ ಹೋದ ಮೇಲೆ....ಮಂಜಪ್ಪ ಒಬ್ಬರೇ ಊರಿಗೆ ಬಂದು ಹೋಗುತಿದ್ದರು .......

ಭೀಮಾಪುರದ ಹೈಸ್ಕೂಲು...ಅಲ್ಲೆ...ಅಮ್ಮು ನೂ ಓದ್ತಿರೋದು ....
ಮೊದಲನೇ ದಿನ ಹೈಸ್ಕೂಲಿಗೆ ಹೋದಾಗ ಮೊದಲು ಕಣ್ಣು  ಹುಡುಕಿದ್ದೆ ಅಮ್ಮುವನ್ನು
ಮತ್ತೆ ಅಮ್ಮು ನನ್ನ ಮರೆತಿರ್ತಾಳ....ಎಂಬ ಭಯ...ಹೊಸ ಹೊಸ ಸ್ನೇಹಿತರು ಸಿಕ್ಕಿರ್ತಾರೆ....ಎಂದು ಕೊಂಡೆ ....ಬಂದ ...

ಆಶ್ಚರ್ಯ ಕಾದಿತ್ತು.

ಅಮ್ಮು ಬೆಳಗ್ಗೆ ಬೇಗ ಬಂದು ಕಾಯ್ತೀದ್ದದು...
ಕಾಣಿಸಿತು...ರಾಜು ತನ್ನ ಶಾಲೆಗೆ ಸೇರಿರೋ ವಿಷಯ ಅಪ್ಪನಿಂದ ತಿಳಿದಿತ್ತು

ಕಳೆದದ್ದು ಕೇವಲ ಎರಡು ವರ್ಷವಾದ್ದರಿಂದ ಗುರ್ತಿಸಲು ಅಸಾಧ್ಯವೆನಿಸಲಿಲ್ಲ...

ರಾಜು ಹತ್ತಿರ ಬಂದು ಅಮ್ಮು ಎಂದೊಡನೆ ಮುಗುಳ್ನಕ್ಕು...ಲೋ ತಿಮ್ಮ...ಹೆಂಗಿದಿಯೋ....ಎಂದು ಪ್ರೀತಿಯ ಮಾತು...ರಾಜು ತುಂಬಾ ಸಂತಸದಿಂದ ಚೆನ್ನಾಗಿದ್ದೀನೀ...ನೀನು ?
...ಹೀಗೆ ಇಡೀ ದಿನವೆಲ್ಲ...ಒಟ್ಟಿಗೆ ಮಾತಿನಲ್ಲೆ ಕಳೆದರು
ಹಳೇ ನೆನಪುಗಳನ್ನು ಮೆಲುಕು ಹಾಕಿ..

ಎರಡು ವರ್ಷ ಕಳೆದಂತೆ ಇಬ್ಬರು ಮೊದಲಿನಂತಿರಲಿಲ್ಲ...ಆಟದ ಸಮಯ ಕಳೆದು ಇಬ್ಬರ ಬುದ್ಧಿ ಬೆಳವಣಿಗೆಯಾಗಿತ್ತು...ಇಬ್ಬರ ನಡುವೆ ಬಾಂಧವ್ಯ ಬಿಗಿಯಾಗ ತೊಡಗಿತ್ತು....8 ರಿಂದ 9 ಜಿಗಿದು ದಾಗಿ ಇಬ್ಬರು 9 ರಿಂದ 10ನೇ ತರಗತಿಗೆ ತೇರ್ಗಡೆಯಾದರು

ಗೆಳೆಯರ ಬಳಗ ಹೆಚ್ಚಿದ್ದರಿಂದ ರಾಜು ಅಮೂಲ್ಯಳೊಂದಿಗೆ ಸಮಯ ಕಳೆಯಲು ಸಾದ್ಯವಾಗುತ್ತಿರಲಿಲ್ಲ....ಅಮೂಲ್ಯಳೊಂದಿಗೆ ಮಾತನಾಡುತ್ತ ಕುಳಿತಾಗಲೆಲ್ಲ ...ರಾಜು ಗೆಳೆಯರು ಯಾವಾಗಲು ಹುಡ್ಗೀರ್ ಜೊತೆ ಇರ್ತಿಯಲ್ಲೋ...ಬಾ ಹೋಗಣ ....ಎಂದು ಎಳೆದೊಯ್ಯುತಿದ್ದರು....

ಅಮ್ಮು ಗೆ ರಾಜು ತನ್ನನ್ನು ಬಿಟ್ಟು ಬೇರೆ ಹುಡುಗಿಯರ ಜೊತೆ ಮಾತನಾಡಿದರೆ ಸಹಿಸುತ್ತಿರಲಿಲ್ಲ...

ಒಂದು ಮದ್ಯಾಹ್ನದ ಸಮಯ

ಬಾ ಸ್ವಲ್ಪ ಮಾತಾಡ್ಬೇಕು...ಎಂದು ಕರೆದವಳೆ....ಬ್ಯಾಗ್ ತಗೋ...
ಎಂದು ಮದ್ಯಾಹ್ನ ರಜೆ ಹಾಕಿ ...ಶಾಲೆಯಿಂದ ಸ್ವಲ್ಪ ದೂರ ನೆಡೆದರೆ ರಾಮುಹಳ್ಳಿ ಗೆ ಹೋಗೋ ದಾರಿ ದೊಡ್ಡ ಆಲದ ಮರ ...ದ ಬಳಿ ಇರುವ ರಾಮೇಶ್ವರ ದೇವಾಲಯ ಆ ಬಹಳ ಪುರಾತನವಾದ ದೇವಾಲಯದ ಬಳಿ ಕರೆದೊಯ್ದು...

ಮಾತಾಡುತ್ತ ಕುಳಿತಳು....

ಅಮ್ಮ ಹೇಗಿದರೋ....??
ರಾಜು ಪ್ರತಿಯಾಗಿ ಹಮ್ ಚನ್ನಾಗಿದರೆ ....ನಿನ್ನ ಕೇಳ್ತಿರ್ತಾರೆ....ಒಂದ್ಸಲ ಆದ್ರೂ ಊರಿಗ್ ಬರ್ಬೇಕು ತಾನೆ...ಊರ್ ನೋಡೋಕ್ ಆಸೆ ಇಲ್ವ...ಇದನ್ ಕೇಳೋಕ್ ಇಲ್ಲಿಗ್ ಕರ್ಕೊಂಡ್ ಬಂದ್ಯ....ಸ್ಕೂಲ್ ಲೇ ಕೇಳಿದ್ರೆ ಹೇಳ್ತಿರ್ಲಿಲ್ವ...

ಹು ಹೇಳ್ತಿದ್ದೆ ಹೇಳ್ತಿದ್ದೆ.....
ನಾನ್ ಮಾತಾಡ್ಸಿದ್ರು ನಿಲ್ಲಲ್ಲ......ಎಂದವಳೆ....

ಏನ್ ಸಿಂಚನ ಜೊತೆ ಅಷ್ಟೊತ್ತು ಕಥೆ ಹೊಡಿತಾ ಕೂತಿದ್ದೆ...ಏನ್ ಸಮಾಚಾರ..

ನಾನ್ ಊರ್ ನೋಡ್ಬೇಕು .....ಮುಂದಿನ ಭಾನುವಾರ ನಾನು ಅಪ್ಪನ ಜೊತೆ ಊರಿಗ್ ಬರ್ತಿನಿ ಎಂದಳು

ರಾಜು ಸಂತಸಕ್ಕೆ ಪಾರವೇ ಇಲ್ಲ....
ನಿಜ ನಾ....!!??

ಸರಿ ಹಾಗಾದ್ರೆ ಅಮ್ಮಂಗೆ ಇವತ್ತೇ ಹೇಳ್ತೀನಿ ಎಂದ.....
ರಾಜು ಗೆ ಹುಡುಗಿ ಜೊತೆ ಮಾತಾಡುವಾಗ ಸ್ವಲ್ಪ ನಾಚಿಕೆ ಸ್ವಭಾವ ಮೂಡಿತ್ತು....ಚಿಗುರು ಮೀಸೆ ಹುಡುಗನಲ್ವೆ..

ಸರಿ ಹೊರ್ಡೋಣ್ವ ...?? ಎಂದ

ಅದಕ್ಕೆ ಅಮ್ಮು ಸ್ವಲ್ಪ ಹೊತ್ತು ಇದ್ರೆ ನಿನ್ ಗಂಟೇನಾದ್ರು ಹೋಗುತ್ತ ...ಸ್ಕೂಲ್ ಗೆ ಹೇಗಿದ್ರು ರಜೆ ಹಾಕಿಲ್ವ..
ಅಮ್ಮು ಸ್ವಲ್ಪ ಗಟ್ಟಿಗಿತ್ತಿ....ಯಾರಿಗೂ ಹೆದರುವ ಸ್ವಭಾವದವಳಲ್ಲ...

ನನ್ ಜೊತೆ ಬಿಟ್ಟು ಬೇರೆ ಹುಡ್ಗೀರ್ ಜೊತೆ ಮಾತಾಡ್ತಿದ್ದಿದ್ ನೋಡುದ್ರೆ ಗ್ರಹಚಾರ ಬಿಡಿಸ್ತಿನಿ ನಿಂದಲ್ಲ ಅವ್ರುದ್ದು....ಗೊತ್ತಾಯ್ತ??

ರಾಜು ಅರ್ಥವಾದರೂ ಅರ್ಥವಾಗದಂತೆ ಸುಮ್ಮನೆ ಮುಗುಳ್ನಗುತ್ತಾ...ನಿಂತಿದ್ದ

ಹತ್ತನೇ ಕ್ಲಾಸ್ ಮುಗುದ್ ಮೇಲ್ ಯಾವ್ ಕಾಲೇಜ್ ಸೇರ್ಕೋಳೊದೋ....

ರಾಜು ನಂದ್ ಪಾಸ್ ಆಗೋದೇ ಡೌಟು ಅಂತ ಜೋರಗಿ ನಕ್ಕ..
ಅಪ್ಪಿ ತಪ್ಪಿ ಪಾಸ್ ಆದ್ರೆ ನೋಡೋಣ ....

ಅಮ್ಮು ಅದಕ್ಕೆ ಪಾಸ್ ಆಯ್ತು ಅನ್ಕೋ ಎಲ್ ಸೇರ್ಕೋಳಣ ಹೇಳು...ಎಂದಳು..

ಸರ್ಕಾರಿ ಜೂನಿಯರ್ ಕಾಲೇಜು ಭೀಮನಪುರ..ಇದಿಯಲ್ಲ...
ಎಂದ ಇಬ್ಬರು ಜೋರಾಗಿ ನಕ್ಕರು....

ಮುಂದಿನ ಭಾನುವಾರ ಬಂದೇ ಹೋಯ್ತು....

ಮಂಜಪ್ಪ ಮಾಮ....ಅಮ್ಮು ಬರುವ ಸಡಗರ ರಾಜು ಮನೆಯಲ್ಲಿ...
   ಮಂಜಪ್ಪ ಬಂದೊಡನೆ...ರಾಮಪ್ಪನೊಡನೆ...ಮಾತಿಗಿಳಿದರು..
‌ಅಮ್ಮು ...ರಾಜು ಅಮ್ಮನೊಡನೆ ಮಾತಾಡುತ್ತ ಕುಳಿತಿದ್ದಳು...

ರಾಜು...ಮಾತ್ರ ಬೆಕ್ಕಿನಂತೆ ಅವರಿದ್ದ ಜಾಗದಿಂದ ಇವರಿದ್ದ ಜಾಗಕ್ಕೆ ....ಇವರಿದ್ದ ಜಾಗದಿಂದ ಅವರಿದ್ದ ಜಾಗಕ್ಕೆ...ಸುತ್ತುತಿದ್ದ...
   ಸ್ವಲ್ಪ ಸಮಯ ಕಳೆದ ನಂತರ....
ಅಮೂಲ್ಯ ಳೇ...ಅಪ್ಪ ನಾನು ರಾಜು ನಮ್ಮೂರಿನ ದೇವಸ್ಥಾನಕ್ಕೆ ಹೋಗ್ ಬರ್ತೀವಿ ಎಂದಳು...

ಸರಿ ಆಯ್ತಮ್ಮ...ಎಂದು ಮಾಮ ಒಪ್ಪಿಗೆ ಸೂಚಿಸಿದ ಮೇಲೆ..
ಇಬ್ಬರು ಹೊರಟು...ಊರ ಆಂಜನೇಯನ ಗುಡಿ ತಲುಪಿದರು...
ದೊಡ್ಡ...ಹಜಾರ ವಿದ್ದ ದೇವಾಲಯ...
ಅಮ್ಮು ಗೆ ಬಾಲ್ಯದಲ್ಲಿ ಭಜನೆಗೆ ಬರುತಿದ್ದದು ಎಲ್ಲಾ ನೆನಪಾಗಿ ಸಂತಸವಾಯಿತು...ಕಲ್ಯಾಣಿಯ ನೀರಲ್ಲಿ ಆಡಿ
ಮದ್ಯಾಹ್ನ ದ ವರೆಗೂ ಮಾತಾಡಿ ಮನೆಗೆ ವಾಪಸ್ಸಾದರು.

ಮರುದಿನ ಸ್ಕೂಲ್ ಗೆ ಅಮ್ಮು ಬಂದಿರಲಿಲ್ಲ...
ರಾಜುವಿಗೆ  ಕಾರಣ ತಿಳಿಯಲೂ ಇಲ್ಲ....ನೆನ್ನೆ ಇಡೀ ದಿನ ಆಕೆಯೊಂದಿಗೆ ಕಳೆದ ನೆನಪಿನಲ್ಲೆ...ಮಂಕಾಗಿ ಕುಳಿತಿದ್ದ...

ಅಮ್ಮುವನ್ನು ಒಂದು ದಿನ ನೋಡದೇ ಪಡಬಾರದ ಕಾತುರ ಪಟ್ಟ...
ಅವಳು ಜೊತೆಯಲ್ಲಿದ್ದಾಗ ಇಲ್ಲದ ಭಾವನೆ  ಈಗ ಯಾಕೆ...
ಪ್ರಶ್ನೆಗೆ ಮೌನವೇ ಉತ್ತರ...
ಮರುದಿನ ಸ್ಕೂಲ್ ಗೆ ಬಂದ ಅಮ್ಮುವನ್ನು ನೆನ್ನೆ ಬರದ ಕಾರಣ ಕೇಳಿ ನಕ್ಕ....ಜ್ವರ ನಾ....ಸ್ವಲ್ಪ ಹೊತ್ತು ನೀರಲ್ಲಿ ಆಡಿದ್ದಕ್ಕೆ ಜ್ವರ ಬಂತಾ...

ಅಮ್ಮು ಗೂ ರಾಜುವನ್ನು ಕಂಡರೆ ಎಲ್ಲಿಲ್ಲದ ಪ್ರೀತಿ....ಆದರೆ ಅದಕ್ಕೆ...ಪದ ಪೋಣಿಸಿ ಹೇಳಿರಲಿಲ್ಲವಷ್ಟೆ...

SSLC ಯಲ್ಲಿ ಇಬ್ಬರೂ ಉತ್ತಮವಾಗಿ ತೇರ್ಗಡೆ ಹೊಂದಿದರಾದರೂ....ಇಬ್ಬರೂ ಇಷ್ಟ ಪಟ್ಟ ಕಾಲೇಜಿಗೆ ಸೇರಲು ಆಗಲೇ ಇಲ್ಲ....
ಅಮ್ಮುವಿನ ಅಪ್ಪನಿಗೆ ಮೈಸೂರಿಗೆ ಪ್ರೋಮೋಶನ್ ಮೇಲೆ ವರ್ಗವಾದ್ದರಿಂದ....

ಅಮ್ಮು ಮೈಸೂರಿಗೆ ಹೋಗೋ ಹಿಂದಿನ ದಿನ ರಾಜು ಜೊತೆಯೇ ಕಾಲ ಕಳೆದಳು...ಎಲ್ಲದಕ್ಕೂ ರಾಮೇಶ್ವರ ದೇವಾಲಯದ ಕಂಬಗಳು ಸಾಕ್ಷೀಭೂತವಾಗಿವೆ

 ನಾನು ಏನೋ ಹೇಳ್ಬೇಕು.....ಎಂದಳು...

ರಾಜು ಹೃದಯ ಜೋರಾಗಿ ಬಡಿದು ಕೊಳ್ಳಲು ಶುರುವಾಯ್ತು....ಏನು ಏನ್ ಹೇಳ್ಬೇಕು....ಎಂದ

ಏನಿಲ್ಲ ಬಿಡು ಎಂದು ಮೌನವಾದಳು....
ಸ್ವಲ್ಪ ಸಮಯದ ನಂತರ
ನಾನಂದ್ರೆ ನಿಂಗ್ ಇಷ್ಟಾ ನಾ??

ಎಂದು ಕೇಳಿ ನಾಚಿ ತಲೆ ತಗ್ಗಿಸಿ ನಿಂತಾಗ

ರಾಜು ಗೆ ಏನು ಹೇಳಬೇಕೆಂದು ತಿಳಿಯದೇ ....ಸಂತಸದಿ ಮೌನವಾಗಿ ನಿಂತ..

ಅಮ್ಮು ಯಾಕೋ ಇಷ್ಟ ಇಲ್ವ....ಎಂದಾಗ?

ಯಾರ್ ಹೇಳಿದ್ದು ಹಾಗಂತ....ಎಂದ

ಮೌನವೆಲ್ಲ ಮಾತಾಗಿ ಮಾತಾಡಿದ...

ಇಷ್ಟು ದಿನದ ಮೇಲಾದ್ರು ಕೇಳಿದ್ಯಲ್ಲ....ಎಂದ ಮುಂದುವರೆಸಿ
ನಾನೇ ಹೇಳಣ ಅಂತ ಇದ್ದೆ....ಈ ಕಾರಣಕ್ಕೆ ನೀನೆಲ್ಲಿ ಕೋಪ ಮಾಡ್ಕೊಂಡು ದೂರ ಆಗೋಗ್ತಿಯೋ  ಅನ್ನೋ ಭಯ ಆಯ್ತು ಅದಕ್ಕೆ ಮಾತು ನನ್ನಲ್ಲೇ ಇಟ್ಕೊಂಡೆ....

ಮತ್ತೆ ಅಮ್ಮು ಮಾತಾಡಿ ನಾನ್ ಹೋದ್ಮೇಲೆ ಮರ್ತೇ ಬಿಡ್ತೀಯಾ ಅಲ್ವ ಎಂದಳು

ಮರೆಯೋದು ಮರೆಸೋದು ದೂರ ಹೋದವರು....
ಹತ್ತಿರ ಇದ್ದವರು ....ಹೃದಯ ಕ್ಕೆ ಹತ್ತಿರ ಆದವರನ್ನ ಮರೆಯೊಲ್ಲ...
ಎಂದೊಡನೆ....
ರಾಜು ನಂಗ್ ಮೈಸೂರ್ಗೆ ಹೋಗೋಕ್ ಇಷ್ಟ ಇಲ್ಲ.
ಹತ್ತಿರ ಬಂದು ತಬ್ಬಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು ತಬ್ಬಿ ಕೊಂಡೊಡನೆ ತಬ್ಬಿಬ್ಬಾದ ರಾಜು....

ರಾಜು ಗೂ ಕಣ್ಣು ತುಂಬಿಬಂತು ದುಃಖವನ್ನು ಎದೆಯಲ್ಲೆ...ಇಟ್ಟುಕೊಂಡು ಸಂಯಮದಿಂದ.....ವೇದಾಂತಿಯಂತೆ ಹಿತ ನುಡಿ ಹೇಳಿ.....
ಏನ್ ಮಾಡೋಕಾಗುತ್ತೆ ಕೆಲಸಕ್ಕೆ ಅಂತ ಹೋಗ್ಲೇ ಬೇಕಲ್ಲ....

ಅವತ್ತು ಅಮ್ಮು ಗೆ ತನ್ನ ಪ್ರೀತಿ ಹೇಳಿ ಕೊಂಡದ್ದಕ್ಕೆ ಎಲ್ಲಿಲ್ಲದ ಸಂತೋಷ....ಆದರೂ....ಅವಳು ಜೊತೆಯಲ್ಲಿರೊಲ್ಲ...ಅನ್ನೋ ಬೇಸರ...
ಪ್ರೀತಿ ದೂರವಿದ್ದಾಕ್ಷಣ ಕಡಿಮೆಯಾಗೋದಲ್ಲ....
ಮೌನದ ದ್ಯಾನವೇ ಪ್ರೀತಿ ಅಂತೆಲ್ಲ ಫಿಲಾಸಫಿ ಹೇಳಿಕೊಳ್ಳುತಿದ್ದ....

ಅಮ್ಮು ಮೈಸೂರಿಗೆ ಹೋದ....ಒಂದು ವಾರದಲ್ಲೆ ರಾಜುವಿಗೆ ಕಾಗದ ಬಂದಿತ್ತು....ಅಮ್ಮು ‌ಅದರಲ್ಲೇ ಮೈಸೂರು ಮನೆಯ ವಿಳಾಸ...ಲ್ಯಾಂಡ್ ಲೈನ್ ನಂಬರ್ ನೀಡಿದ್ದಳು
ವಾರಕ್ಕೊಮ್ಮೆ ರಾಜು ಕಾಗದ ಬರೆಯುತಿದ್ದ....ಹೊಸ ಕಾಲೇಜಿನ ಬಗೆಗೆ ಎಲ್ಲಾ ತಿಳಿಸುತಿದ್ದ...

ರಾಜುವಿನ ಮನೆಯಲ್ಲೂ ಲ್ಯಾಂಡ್ ಲೈನ್ ಕೇಬಲ್ ಫೋನ್
ಹಾಕಿಸಿ ಕೊಂಡ ಮೇಲೆ... 2 ದಿನಕ್ಕಮ್ಮೆಯಾದರೂ ಅಮ್ಮು ಫೋನ್ ಮಾಡಿ ಮಾತಾಡುತಿದ್ದಳು.....
ಈ ಬೇಸಿಗೆಗೆ ಊರಿಗೆ ಬರುವುದಾಗಿ ತಿಳಿಸಿದ್ದಳು...
ಕಾಲೇಜಿಗೆ ಹೋಗಿ ಬರಲು ಅಪ್ಪ ಹೊಸ ಬೈಕ್ ಕೊಡಿಸಿದ್ದಾರೆ...ಕಲಿತ್ಕೊಂಡಿದಿನಿ ಪರ್ವಾಗಿಲ್ಲ...ಓಡುಸ್ತಿನಿ...
ಎಂದಿದ್ದಳು ....ಅದಾದ ಮೇಲೆ ಮೂರು ದಿನವಾದರೂ ಫೋನ್ ಬರಲಿಲ್ಲ...ತಾನು ಫೋನ್ ಮಾಡಿದರೂ ಹೋಗಲಿಲ್ಲ...
ಕೇಬಲ್ ಸಮಸ್ಯೆ ಇರಬಹುದು .....ಮಳೆಗಾಲದಲ್ಲಿ ಇದು ಮಾಮೂಲು ಎಂದು ಕೊಂಡು ಸುಮ್ಮನಾದ ರಾಜು....

ಒಂದು ಅನಿರೀಕ್ಷಿತ ಫೋನ್ ರಿಂಗ್

ಮಳೆಗಾಲದ ಒಂದು ದಿನ ಸೋಮವಾರ ವೇ ಇರಬೇಕು
ಆಂಜನೇಯನ ಗುಡಿಯಿಂದ ಸುಪ್ಪಭಾತ ಮೊಳಗುತಿದ್ದ ಮುಂಜಾವು
ಆಗ ತಾನೇ ರಾಜು ಕಾಲೇಜಿಗೆ ಹೊರಡಲು ಸಿದ್ಧನಾಗುತಿದ್ದ..
.
ಅಪ್ಪ ಬಚ್ಚಲಿನಲ್ಲಿ ಗಡ್ಡ ಕೆರೆದುಕೊಳ್ಳುತಿದ್ದರು...

ಫೋನ್ ರಿಂಗಣಿಸಿದೊಡನೆ  ನೆಲ ವರೆಸುತಿದ್ದ  ರಾಜುವಿನ ಅಮ್ಮ
ಸೀತಮ್ಮ...ಫೋನ್ ತೆಗೆದರು....

ಅತ್ತ ಕಡೆಯಿಂದ ರಾಮು ನ???

ಇಲ್ಲ ಅವರ ಮನೆಯವ್ರು !!...ನೀವು ??
ಮಂಜಪ್ಪ ಕಣಮ್ಮ....

ಅಣ್ಣ ಹೇಳಿ??
ಚನ್ನಾಗಿದಿರಾ ಅಮ್ಮ....ರಾಮು ಏನ್ ಮಾಡ್ತಿದಾನೆ....??.

ಅವ್ರು ಬಚ್ಚಲಲಿದರೆ ಕರಿಬೇಕ??

ಹುಮ್...ಕರಿಯಮ್ಮ ಸ್ವಲ್ಪ

ರೀ ರೀ...ಮಂಜಣ್ಣಂದು ಫೋನ್....

ಹ ಬಂದೇ....

ರಾಜು ಗೆ ಆಶ್ಚರ್ಯ ...ಮಂಜಪ್ಪ ಮಾಮ ....ಅಮ್ಮು ಫೋನ್ ಸುದ್ದಿ ಇಲ್ಲ....ತಾನು ಹೋಗಿ ಫೋನ್ ಎತ್ತಿಕೊಳ್ಳುವಷ್ಟರಲ್ಲಿ ಅಪ್ಪ ಫೋನ್ ಬಳಿ ಬಂದು ಫೋನ್ ತೆಗೆದು ಕೊಂಡರು..
.
ಏನೋ ಸಾವ್ಕಾರ....ಸಮಾಚಾರ...ಎಂದು ಮಾತು ಆರಂಭಿಸಿದ ರಾಜು ಅಪ್ಪ....

ಮಂಜಪ್ಪನ ಸಣ್ಣ ಧ್ವನಿ ರಾಮು ಅಮ್ಮು  ಅಕ್ಸಿಡೆಂಟ್ ಆಗಿದೆ ಕಣೋ....ತುಂಬಾ ಪೆಟ್ಟಾಗಿದೆ ಉಳಿಯಲ್ಲ ಅಂತಿದಾರೆ....ನೆನ್ನೆ ಸಾಯಂಕಾಲ ಅವ್ಳ ಫ್ರೆಂಡ್ ಬಂದಿದ್ಲು ...ಫ್ರೆಂಡ್ ಬಿಟ್ಟು ಬರೋಕೆ...
 ಮಳೆಲಿ ಬೈಕ್ ತಗೊಂಡ್ ಹೋಗಿದ್ಲು ....ಅಷ್ಟೇ ಏನಾಯ್ತೋ ಏನೋ ...ಗುಂಡಿ ತಪ್ಸಕ್ಕೋಗಿ ಬೈಕ್ ಬಿತ್ತಂತೆ....ಹಿಂದೆ ಬರ್ತಿದ್ ಕಾರು ಗುದ್ದ್ ತಂತೆ.....ಗೊಳೋ...ಎಂದು ಕಣ್ಣೀರಿಟ್ಟರು....

ಸಮಧಾನ ಮಾಡ್ಕಳೋ ....ಯಾವ್ ಆಸ್ಪತ್ರೆ ನಾನ್ ಬರ್ತಿನಿ ಇವತ್ತೇ....ಹೊರ್ಡ್ತಿನಿ....

ಕೆ ಆರ್ ಆಸ್ಪತ್ರೆ....

ಸರಿ ಆಯ್ತು ಬರ್ತಿನಿ...

ವಿಷಯ ತಿಳಿದ ರಾಜು ಗೆ ದುಃಖ ತಡೆಯಲಾಗಲಿಲ್ಲ ....ರೂಮಿನಲ್ಲಿ ಹೋಗಿ..ಅತ್ತು....

ಅಪ್ಲ ನಾನು ಬರ್ತಿನಿ .....ಎಂದು ಹೊರಟು ಯುನಿಫಾರಂನಲ್ಲೇ ಹೊರಟು ನಿಂತ....

ಮದ್ಯಾಹ್ನ ದ ವೇಳೆಗೆ ಆಸ್ಪತ್ರೆ ತಲುಪಿದರು...

ಆದರೆ ವಿಧಿಯ ಬರಹವೇ ಬೇರೆ ಇತ್ತು....
ಅಮ್ಮು ಗೆ ತಲೆಗೆ ಪೆಟ್ಟು ಬಿದ್ದು ಹೆಚ್ಚು ರಕ್ತ ಹೋಗಿದ್ದರಿಂದ ಬದುಕುಳಿಯಲಿಲ್ಲ.....

ಎಲ್ಲಾ ಕಾರ್ಯ ಮುಗಿಯುವವರೆಗೂ ಜೊತೆಗಿದ್ದು ....
ವಾಪಸ್ಸಾದರು....

  ಒಂದು ತಿಂಗಳು ರಾಜು ಸರಿಯಾಗಿ ಊಟ .....ನಿದ್ರೆ ಇಲ್ಲದೆ...ಮಂಕು ಕವಿದಂತೆ ಮಂಕಾಗಿದ್ದ....
ಎಲ್ಲಿ ಹೋದರು ಜೀವಕ್ಕೆ ಜೀವವಾಗಿದ್ದ ಗೆಳತಿಯದೇ....ಧ್ವನಿ...ಮಾತು....ಹೆಜ್ಜೆ ಗುರುತು....ಮರೆಯಲಾರದೆ....ಒದ್ದಾಡಿ ....
ಸೊರಗಿ ಹೋದ....

ಪ್ರಕೃತಿ ಗೆ ಎಲ್ಲಾ ಬದಲಿಸುವ ಮರೆಸುವ ಶಕ್ತಿ ಇದೆ....
ಸ್ವಲ್ಪ ದಿನ ಮನಕೆ ಕವಿದಿದ್ದ ಮಂಕು ಹರಿಯಿತು...
ಬದುಕು ಅಶಾಶ್ವತ ....ಎಲ್ಲ ಪಾತ್ರಧಾರಿಗಳು ...ಅವರವರ ಪಾತ್ರ ನಿರ್ವಹಿಸಿ ಹೋಗುತ್ತಾರೆಂಬ ನಿರ್ಲಿಪ್ತ ಭಾವಕ್ಕೆ...
ಬೈರಪ್ಪನವರ ಗೃಹಭಂಗ ...ವಂಶವೃಕ್ಷ ಕಾದಂಬರಿ ಓದಿದ ಮೇಲೆ...ಬಂದಿತ್ತು...ಅದೇ ಅವನ ಬದುಕಿಸಿತ್ತು...

           ಮೌನ ಮಾತಾದರೆ ಉಪಾಯ
       ಮಾತು ಮೌನವಾದರೆ ಅಪಾಯ
ಎರಡು ಒಟ್ಟಿಗೆ ಘಟಿಸಿದರು ನಿರುಪಾಯ...

                                  ರಚನೆ
                      ಶ್ಯಾಮ್ ಪ್ರಸಾದ್ ಭಟ್


6 comments:

  1. Tooo good... Fabulous story... Sad but heart touching lines...

    ReplyDelete
  2. ಭಟ್ರೇ ಅದ್ಭುತವಾಗಿದೆ...
    ಕತೆ ಓದುತ್ತಿದ್ದರೆ ಒಂದು ಸಿನೆಮಾ ನೋಡಿದಂತೆ ಬಾಸವಾಯಿತು...
    ಹೀಗೆ ನೀವು ನಿಮ್ಮ ಬರವಣಿಗೆಯನ್ನು ಮುಂದುವರೆಸಿ...
    ಶುಭವಾಗಲಿ

    ReplyDelete
  3. Nice story but sad ending bro ...

    ReplyDelete