Friday, March 26, 2021







ಕಿಲಾಡಿ ತಾತ....

ಇಂದು ನಾನು ಹೇಳ ಬೇಕಿರುವುದು ಒಬ್ಬ ಕಿಲಾಡಿ ಅಜ್ಜನ ಬಗೆಗೆ...
ಮುಂಗಾರು ಪ್ರಾರಂಭವಾದದ್ದರಿಂದ ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಎಡೆ ಬಿಡದೆ ಸುರಿವ ಮಳೆ.....

ಕೊಡೆ ಇಲ್ಲದೆ ಎಲ್ಲಿಗೂ ಹೊರಡೋಕೆ ಆಗಲ್ಲ ಅಂತ ಹಿಂದಿನ ದಿನವೇ ಮನೆಗೆ ಫೋನ್ ಮಾಡಿದಾಗ ತಿಳಿದಿತ್ತು....

ಆದರೆ ಮುಂಗಾರು ನನ್ನೂರು ಇಷ್ಟವೆಂದೋ ಏನೋ..... ಅಲ್ಲೇ ....ಜಾಂಡ ಊರಿತ್ತು
ಇನ್ನೂ ಮೈಸೂರಿಗೆ ಬಂದಿರಲಿಲ್ಲ....
ಬರುವ ಮುನ್ಸೂಚನೆಯನ್ನ ಆಗಾಗಾ ತುಂತೂರು ರಾಯಭಾರಿಗಳನ್ನ ಕಳುಹಿಸಿ ತಿಳಿಸುತಿತ್ತು ಇನ್ನು ಬಂದಿರಲಿಲ್ಲ......

ಶುಕ್ರವಾರ ಬೆಳಗ್ಗೆ ಸ್ವಲ್ಪ ಸೋಮಾರಿತನದಿಂದಲೇ....ತಡವಾಗಿ ಎದ್ದು ....ಮನೆಯಲ್ಲಿ ಎರಡು ದಿನದ ಮಟ್ಟಿಗೆ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡು ....ಸ್ನಾನಕ್ಕೆ ಹೋಗೋಣ
ಅಂತ ಹೊರಟೆ.....ಅ‍ಷ್ಟರಲ್ಲಾಗಲೇ 8 ಗಂಟೆ ಸರಿದಿತ್ತು....

ಬೆಳಗ್ಗಿನ ತರಗತಿಗೆ ಬೇಗ ಹೊರಡಬೇಕಿದ್ದರಿಂದ ಹಾಸ್ಟೆಲ್ ಕೊಠಡಿಯ ಸಹವಾಸಿ ರೋಹಿತ್ ಆಗಲೇ ಕೆಳಗಿನ ಉಪಹಾರ ಮಂದಿರದಿಂದ ತಿಂಡಿ ಮುಗಿಸಿ ಮೇಲೆ ಬಂದ....

ಭಟ್ರೇ ನಿಮಗಿಷ್ಟವಾದ ತಿಂಡಿ ಮಾಡಿದಾರೆ ಹೋಗಿ ಎಂದ .....

   ವಿದ್ಯಾರ್ಥಿ ನಿಲಯದ  ಊಟ ತಿಂಡಿ ಬಗೆಗೆ ವಿದ್ಯಾರ್ಥಿ ನಿಲಯದ ವಾಸಿಗಳಿಗೆ ಗೊತ್ತಿರುತ್ತದೆ......ಚನ್ನಾಗಿ ಮಾಡಿದರೆ ತುಸು ಹೆಚ್ಚು ಹಾಕಿಸಿಕೊಂಡಾರು ಎಂದೇ....ಉಪ್ಪು ಇದ್ದರೆ ಖಾರ ಇರೊಲ್ಲ....ಖಾರ ಇದ್ದರೆ ಉಪ್ಪು ಇರೋಲ್ಲ.......
ಯಾವ್ದಪ್ಪ ಅದು ನನಗಿಷ್ಟವಾದ ತಿಂಡಿ ಎಂದೆ ಪುಳಿಯೋಗರೆ ಎಂದ.....
ಪುಳಿಯೋಗರೆ ಅಲ್ಲ ಕಣೋ ಅದು ಹುಳಿಯೋಗರೆ ಎಂದು ತಮಾಷೆ ಮಾಡಿ ನಕ್ಕೆವು....ಹಾಗೇ ಇಡ್ಲಿ ಗೆ ಡೆಡ್ಲಿ ಎನ್ನುತ್ತೇವೆ.
ಹಾಸ್ಟೆಲ್ ಪುಳಿಯೋಗರೆ ತಿಂದು ತಿಂದು ಕೆಲವೋಮ್ಮೆ ಮನೆಗೆ ಹೋದಾಗ ಅಮ್ಮ ಪುಳಿಯೋಗರೆ ಮಾಡ್ಲೇನೋ ಎಂದಾಗ .....ಅಮ್ಮ ಬೇಡ್ವೇ ಬೇಡ ಅಂದದ್ದು ಉಂಟು....

ಎಲ್ಲಾ ತಯಾರಿ ಮಾಡಿಕೊಂಡು  ಹೊರಗೆ ತಿಂಡಿ ಮಾಡಿಕೊಂಡರಾಯ್ತೆಂದು ಕೊಂಡು ಹೊರಟೆ...
ತ್ರಿವೇಣಿ ವೃತ್ತದ ಬದಿಯಲ್ಲೇ ಇರುವ ವಿಷ್ಣು ಭವನದಲ್ಲಿ ತಿಂಡಿ ಮುಗಿಸಿ ಹೊರಟೆ....

ಮೈಸೂರು ಚಿಕ್ಕಮಗಳೂರು  ಬಸ್ಸು ಹತ್ತಿ ಕುಳಿತಾಗ ಸುಮಾರು 11:00 ರ ಸಮಯ...ಬೇಲೂರಿಗೆ ಸರಿ ಸುಮಾರು 4 : 00 ರ ಸುಮಾರಿಗೆ ತಂದಿಳಿಸಿದ ...

ಅಲ್ಲಿಂದ ಮುಂದಕ್ಕೆ....ಬೇಲೂರಿನಿಂದ ಮೂಡಿಗೆರೆ ಕಡೆಗೆ ಹೋಗುವ ಬಸ್ಸು ಹತ್ತಿ ಹೋಗ ಬೇಕಿತ್ತು...ಮಳೆ ಎಡೆಬಿಡದೆ ಸುರಿಯುತ್ತಿತ್ತು..
ಬಸ್ಸು ಹತ್ತಿ ಕಿಟಕಿ ಬಳಿಯ ಸೀಟು ಹಿಡಿದು ಕುಳಿತೆ...
   ಬಸ್ಸು ಹೊರಡೋದು ಸ್ವಲ್ಪ ತಡವಾಗುತ್ತದೆ ಎಂದು ತಿಳಿಯಿತು....
ಮುಂದಿನ ಸೀಟಿನಲ್ಲಿ....ತಾಯಿ ತನ್ನ ಮಗುವಿಗೆ ಬೈಯುತಿದ್ದದ್ದು ಹೀಗೆ...
ಹಾಳಾದೋನು ಮಳೆಲ್ ‍ಆಟ ಆಡೋಕ್ ಹೋಗ್ಬೇಡ ಅಂದ್ರು ಹೋಗೋದು ....ನೋಡೀಗ ಶೀತ ಜ್ವರ ಬಂದಿದೆ ....ಒಂದ್ ವಾರ ಸ್ಕೂಲಿಗೆ ರಜಾ ಬ ಆಯ್ತು....

ಈ ಮಾತನ್ನು ಕೇಳಿ ಬಾಲ್ಯದಲ್ಲಿ ನಾವು ಆಡುತಿದ್ದ   ಮಳೆ ನೀರಿನಲ್ಲಿ ಪೇಪರ್ ದೋಣಿ ಮಾಡಿ ಬಿಡುತಿದ್ದದ್ದು....ಗಾಳಿಗೆ ಬಿದ್ದ ಜೀರಿಗೆ ಮಾವಿನ ಹಣ್ಣನ್ನು ಸೀಬೇಹಣ್ಣನ್ನು  ಹೆಕ್ಕಿ ತಂದು ಸವಿದದ್ದು...ಜ್ವರ ಬಂದು ಮಲಗಿದ್ದು....ಎಲ್ಲವು ರಪ್ಪನೆ ಕಣ್ಮುಂದೆ ಬಂದಂತಾಯಿತು...
ನದಿ ದಡದಲ್ಲಿರುವ ದೇವಾಲಯಗಳಲ್ಲಿ ಯಾವ ಪಾಪ ಗಳಿದ್ದರು ರೋಗ ರುಜಿನ ವಿದ್ದರು ಮಿಂದೆದ್ದರೆ ವಾಸಿಯಾಗುವುದೆಂದು ನಂಬಿಕೆ...
ಗಂಗಾ ಯಮುನ ಗೋದಾವರಿ ಸರಸ್ವತಿ ನರ್ಮದ ಸಿಂಧೂ ಕಾವೇರಿ ಈ ಎಲ್ಲಾ ಪುಣ್ಯ ನದಿಗಳ ನೀರನ್ನು ಹೀರಿಕೊಂಡು ಮೋಡವಾಗಿ ಸುರಿವ ಮಳೆ ಇನ್ನೆಷ್ಟು...ಪವಿತ್ರ ಪುಣ್ಯ...ಎಂಬೆಲ್ಲ ಆಲೋಚನೆಗಳಲ್ಲಿ ಮುಳುಗಿರುವಾಗ
ಬಸ್ಸು ಜೋರು ಶಬ್ದ ಮಾಡಿ ಹೊರಟಿತು....
ಬೇಲೂರು ಟೌನ್ ಮುಗಿಯುತಿದ್ದಂತೆ ಕಂಡಕ್ಟರ್ ಟಿಕೆಟ್ ಹರಿಯಲು ಶುರು ಮಾಡಿದ....
ನನ್ನ ಪಕ್ಕದಲ್ಲಿ...ಒಬ್ಬ ಅಜ್ಜ ಕುಳಿತಿದದ್ದರು...
ಕಂಡಕ್ಟರ್ ಟಿಕೇಟ್ ಎಂದಾಗ.....ನಾನು ಟಿಕೇಟ್ ತೆಗೆದು ಕೊಂಡೆ....ಪಕ್ಕದಲ್ಲಿದ್ದ ಅಜ್ಜ ಮುಂದೆ ಬರುವ ಬಳ್ಳೂರಿನಲ್ಲಿ ಇಳಿಯುವವರು..  ..ಒಂದ್ ಬಳ್ಳೂರಿಗ್ ಕೊಡಪ್ಪ ಅಂತ ನೂರರ ನೋಟನ್ನು ಕೊಟ್ಟರು ....ಕಂಡಕ್ಟರ್ ಟಿಕೇಟ್ ಹರಿದು ಉಳಿದ 80 ರೂ ಪಾಯಿ ಚಿಲ್ಲರೆ ಯನ್ನು ಕೊಟ್ಟುರು ಅದರಲ್ಲಿ 50 ರ ನೋಟು ಒಂದು ಮೂರು ಹತ್ತು ರೂಪಾಯಿ ನೋಟುಗಳು....
ಆ ಹತ್ತರ ನೋಟುಗಳಲ್ಲಿ ಒಂದು ಭಾಗಶಃ ಹರಿದಿತ್ತು....ಅದನ್ನು ನಾನೂ ಗಮನಿಸಿದೆ....
ಅಜ್ಜ ರೀ ಕಂಡಕ್ಟರೇ....ಇದು ಹರ್ದೋಗಿದೆ ಬೇರೇ ನೋಟ್ ಕೊಡಿ ಎಂದಾಗ
ಇರೋದ್ ಅದೇ ನಿಮಿಗ್ ಕೊಡೋಕ್ ಹೊಸ ಪ್ರಿಂಟ್ ಮಾಡ್ಲಾ....20 ರುಪಾಯಿ ಟಿಕೇಟ್ ಗೆ ನೂರ್ ರುಪಾಯಿ ಕೊಟ್ಟು....ನಿಮ್ದೇ ಮಾತು....ಇಲ್ಲ 20 ರುಪಾಯಿ ಕೊಡಿ..ಎಂದ...
ಅಜ್ಜನ ಬಳಿ ಇಪ್ಪತ್ತು ರುಪಾಯಿ ಚಿಲ್ಲರೆ ಇದ್ದಿದ್ದರೆ ಅವರ್ಯಾಕೆ ನೂರರ ನೋಟು ಕೊಡುತಿದ್ದರು....
ಈ ಕಂಡಕ್ಟರ್ಗಳು ಹೀಗೇ ಹರಿದ ನೋಟುಗಳನ್ನು ಹೀಗೆ ಸಾಗಿಸಿ ಬಿಡ್ತಾರೆ.....
ಅಜ್ಜ ಸುಮ್ಮನಿರಲಿಲ್ಲ....ತಕ್ಷಣ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ತನ್ನ ಊರಿನವನೇ ಆದ ಒಬ್ಬನನ್ನು ಕೂಗಿ...ಅವನ ಬಳಿ ಇದ್ದ 10 ರ ಒಳ್ಳೆ ನೋಟಿಗೆ ಬದಲಿಗೆ ಕಂಡಕ್ಟರ್ ಕೊಟ್ಟ ಹರಿದ  ನೋಟು ಕೊಟ್ಟು ....ತಗೋ ಇದನ್ನೇ ಕೊಡು ಟಿಕೆಟ್ಗೆ ಅಂತ ಹೇಳಿದರು....
ಇದನ್ನೆಲ್ಲ....ಗಮನಿಸುತಿದ್ದ ಕಂಡಕ್ಟರ್ ಪೆಚ್ಚಾದ....
ಹಿಂಬದಿ ಸೀಟಿನ ಅಜ್ಜನ ಗುರುತಿನವ ಹಾಗೇಯೇ ಮಾಡಿದ....
ಈಗ ಕಂಡಕ್ಟರ್ಗೆ ಏನೂ ಹೊಳೆಯಲಿಲ್ಲ...ಬೇರೆ ನೋಟು ಕೊಡಿ ಅಂತ ಹೇಳಲಾಗೊಲ್ಲ....ಏಕೆಂದರೆ ತಾನೇ ಬೇರೆಯವರಿಗೆ ಕೊಟ್ಟ ನೋಟಿದು....
ಮರು ಮಾತಾಡದೆ ಟಿಕೇಟ್ ಹರಿದು ...ಮುಂದೆ ಸಾಗಿದ....
ಬುದ್ದಿವಂತಿಕೆಯಿಂದ ಎಂತಹ ಸಂದರ್ಭವನ್ನು ನಮಗೆ ಅನುಕೂಲವಾಗುವಂತೆ ಮಾಡಿಕೊಳ್ಳಬಹುದೆಂಬ ಸಂದೇಶ ಸದ್ದಿಲ್ಲದೆ....ಸಾರಿತ್ತು...
ಮುಂದೆ ನನ್ನ ಸ್ಟಾಪ್ ಬಂದಾಗ ಇಳಿದು ....
ನನ್ನ ಮನೆಗೆ
   ಬಸ್ ಇಳಿವ ಸ್ಟಾಪ್ ನಿಂದ 2 ಕಿ ಮೀ
ನೆಡೆದು ಅಥವಾ ಆಟೋದಲ್ಲಿ ಸಾಗಬೇಕು....
ಮಳೆ ಕಾರಣ....ಆಶ್ರಯಕ್ಕೆಂದು ಹತ್ತಿರದ ಹೊಟೆಲ್ ನಲ್ಲಿ ನಿಂತು ಬಿಸಿ ಬಿಸಿ ಕಾಫಿ.....ಜೊತೆಗೆ ಬಜ್ಜಿ ಸವಿದೆ....ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ ತಿನ್ನುವ ಮಜವೇ ಬೇರೆ...
ಸ್ವಲ್ಪ ಸಮಯದ ನಂತರ ಮಳೆ ಕಡಿಮೆಯಾಯಿತು ಮನೆಗೆ ಆಟೋ ಹಿಡಿದು....ಹೊರಟೆ....
                             ರಚನೆ
                  ಶ್ಯಾಮ್ ಪ್ರಸಾದ್ ಭಟ್



1 comment:

  1. Chikka chikka putta ವಿಷ್ಯ yestu maja ಅಂಥ ಅಂದ್ರೆ adrinda jeevanada pata kuda erutte anodike ede ಉದಾಹರಣೆ 😍

    ReplyDelete