Friday, December 14, 2018

ಶಿಶುಗೀತೆ




                                            ತಾರ

ಹೋದೆಯ ದೂರ
ದೂರದ ತಾರಾ
ಹುಡುಕಲು ನಿನ್ನ
     ಹಗಲಾಯ್ತು

                   ಇರುಳಲಿ ಬರುವೆ
                       ಬೆಳಕನು ತರುವೆ
                           ಕತ್ತಲನು ಸರಿವೆ

ಮೋಡದಿ ನಿನ್ನ ಮುಚ್ಚಿ
ಮಿರ ಮಿರ ಮಿಂಚುವ ಮಿಂಚು
ಬಲ್ಲೆಯ ಅದರ ಸಂಚು
ನಿನ್ನನು ಮುಚ್ಚಿ ತಾನು ಮಿಂಚುವ ಸಂಚು

ಮುಗಿಲಿಗೆ ನೀನೆ ಮುತ್ತಿನ ಓಲೆ
‍ಅಂದವ ಹೆಚ್ಚಿಸೋ ಮುತ್ತಿನ ಮಾಲೆ
ಚಂದ ನಿನ್ನ ಹೊಳಪು
ನಿನ್ನ  ಬಣ್ಣ ಬಿಳುಪು

 ನಿನ್ನ ಮನೆ ಆಗಸದೊಳಗ
ಹೆಚ್ಚು ನಿನ್ನ ಗೆಳೆಯರ ಬಳಗ
ಹಾಡುತ ಹಾಡುತ ಹಗಲಾಯ್ತು
ನಿನ್ನ ಕಳಿಸಲು ಹೊತ್ತಾಯ್ತು...

                                                      ರಚನೆ
                                         ಶ್ಯಾಮ್ ಪ್ರಸಾದ್ ಭಟ್

          

Friday, December 7, 2018

ನಾವೆಷ್ಟು ಕ್ರೂರಿಗಳು..."

                          ನಾವೆಷ್ಟು ಕ್ರೂರಿಗಳು..."




 




ಬೆಳಗ್ಗೆ ಬೇಗ ಅಂದರೆ ೬ ಕ್ಕೆ ಕುಮಾರ್  ದೇಹ ಕರಗಿಸೋಕೆ ವಾಕಿಂಗ್ ಹೋಗೋದು ಅಭ್ಯಾಸ ಎಂದಿನಂತೆ ತನ್ನ ಮುದ್ದು ನಾಯಿ ಸೋನಿ ಯೊಂದಿಗೆ  ಈ ದಿನವು ಹೊರಟ ದಾರಿಯಲ್ಲಿ ಮಂಜು ಕವಿದು...ದಾರಿ ಮುಚ್ಚಿತ್ತು...ಆ ದಾರಿಯಲ್ಲೆ ಚಳಿಯಲ್ಲಿ ನಡುಗುತ್ತ ಸಾಗಿ ಸೋನಿ ನಿತ್ಯಕರ್ಮಗಳನ್ನು ದಾರಿಯಲ್ಲೆ ಮುಗಿಸಿತು..ಸೋನಿಯು ದೊಡ್ಡ ಜಾತಿ ನಾಯಿ ಆದ್ದರಿಂದ  ದೊಡ್ಡ  ದೇಹ ಬೆಳೆಸಿಕೊಂಡಿತ್ತು   ಇವನನ್ನು ಆ ಸೋನಿ ನಿಯಂತ್ರಿಸುತಿತ್ತೋ ಇವನು ಆ ಸೋನಿಯನ್ನು ನಿಯಂತ್ರಿಸುತಿದ್ದನೋ ತಿಳಿಯುತ್ತಿರಲಿಲ್ಲ..  ..ಇವನ..ಆ ಊರಿನ ದೊಡ್ಡ  ಬಂಗಲೆ ಇರುವ ರಸ್ತೆಗೆ ತಿರುಗಿ ಮುಂದೆ ಹೋಗಲು ದೈರ್ಯವಾಗದೆ ಹಿಂತಿರುಗಿ ಬಂದ..ಸೋನಿ ಯನ್ನು ಸಹಾ ಆ ಬಂಗಲೆಯಲ್ಲಿ ಮರಿಯಾಗಿದ್ದಾಗ ತಂದಿದ್ದು.....ನೆನಪಾಯಿತು    ಆ ಬಂಗಲೆಯ ದೊಡ್ಡ ಗೌಡರು ಕಾಫಿಬೆಳೆಗಾರ ಡಿಸೆಂಬರ್ ತಿಂಗಳು ಕಾಫಿ ಕೊಯ್ಲಿಗೆ ಬಂದಿತ್ತು ಅದನ್ನು ಕೊಯ್ದು ಬೇಳೆ ಮಾಡಿಸಿ ಕಣದಲ್ಲಿ ಹರವಿ ಕಾಯಲು ನಾಯಿ ಬಿಟ್ಟಿರ್ತಾರೆ ಹಾಗಾಗಿ ಮುಂದೆ ಹೋಗದೆ ವಾಪಸ್ಸು ತಿರುಗಿ ಬಂದ ಬರುವಾಗ ದಾರಿಯಲ್ಲಿ ಗೆಳೆಯನ ಫೋನ್ ಬಂತು ಗೆಳೆಯ ಗೋಪಿ ಪ್ರಾಣಿ ಸಂಗ್ರಹಾಲಯದಲ್ಲಿ ಕೆಲಸದಲ್ಲಿದ್ದ....ಗೋಪಿ ಬ್ರಹ್ಮಚಾರಿ ಮನೆಯಲ್ಲಿ ಅವನು ಅವನ ತಾಯಿ ಇಬ್ಬರೆ...ತಂದೆ ಗೊಪಿ ಕಣ್ಣು ಬಿಟ್ಟಾಗ ಅವರು ಕಣ್ಮುಚ್ಚಿಕೊಂಡರು....
ಬಾಲ್ಯದ ಗೆಳೆಯ  ಕುಮಾರ  ಸಂಗ್ರಹಾಲಯದಲ್ಲಿ  ಪ್ರಾಣಿಗಳಿಗೆ ಆಹಾರ ಕೊಡುವ ಕೆಲಸ ಅವನದು....
ಆದರೆ ಅವನ ತಾಯಿ ಸೀತಮ್ಮ ಅನಾರೋಗ್ಯದಿಂದ ಬಳಲುತಿದ್ದರು....ಹಾಗಾಗಿ ಕುಮಾರ್ ಗೆ ಇಲ್ಲಿಗೆ ಬಂದರೆ ಸಹಾಯ ಆಗತ್ತೇ...ಅಂತ ಫೋನ್ ಮಾಡಿದ್ದ...
ಕುಮಾರ್ ಕೂಡ ವೃತ್ತಿಯಿಂದ ಕಾಲೇಜು ಉಪನ್ಯಾಸಕ....ಒಂದು ವಾರ ರಜೆ ಹಾಕಿ ಹೋಗಿ ಬರೋದು ಅಂತ ನಿರ್ಧರಿಸಿ....ನಾಳೆ ಬರ್ತೀನಿ ಬಿಡು ಅಂತ ಹೇಳಿದ...
ಮನೆಗೆ ಬಂದು ಅಮ್ಮನಿಗೆ ವಿಷಯ ಹೇಳಿ....
ಕಾಲೇಜಿಗೆ ಒಂದು ರಜೆ ಪತ್ರ ಬರೆದು ಕೊಟ್ಟು ಬಂದ.....
ಮದ್ಯಾಹ್ನ ಹೊರಟು ಸಂಜೆ ಗೋಪಿ ಇದ್ದಲ್ಲಿಗೆ ತಲುಪಿದ ಗುಡ್ಡೇನಹಳ್ಳಿ ಅದು ಹಾಸನದ ಹತ್ತಿರದ ಸ್ವಲ್ಪ ಕಾಡು ಪ್ರದೇಶ.....ಇಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಜಿಂಕೆ...ಚೀಂಪಾಂಜಿ...ಮಂಗಗಳು...ಗಿಳಿಗಳು..ಗೂಬೆ...ಉಡ...ಜಿರಾಫೆ... ಹುಲಿ..ಆನೆ..ಮುಂಗುಸಿ...ಮೊಸಳೆ...ಕಾಡು ಕುರಿ..ಇನ್ನು ಅನೇಕ ಪ್ರಾಣಿ ಪಕ್ಷಿಗಳು  ಇದ್ದವು .ಸಂಗ್ರಹಾಲಯ ಅಭಿವೃದ್ಧಿ ಕಾರ್ಯಗಳು ಇದ್ದರಿಂದ ಕೆಲವು ಚಿಕ್ಕ ಪ್ರಾಣಿಗಳನ್ನು ಬೋನಿನಲ್ಲಿ ಕೂಡಿಹಾಕಿ ಅಲ್ಲೆ ಪ್ರವಾಸಿಗರಿಗೆ ನೋಡಲು ಅನುವು ಮಾಡಿದ್ದರು...ಕುಮಾರ್ ಗೆ ಈ ಹಿಂದೆ ೩ - ೪ ಬಾರಿ ಸಹಾಯಕ್ಕೆ ಬಂದಿದ್ದರಿಂದ ಕೆಲಸದ ಅರಿವಿತ್ತು ...
ಹುಲಿಗೆ...ಸಂಗ್ರಹಾಲಯದ ಜಾವೇದ್ ಮಾಂಸ ಕತ್ತರಿಸಿ ಕೊಡ್ತಾರೆ...ಬೋನಿನ ಬಳಿ ಹೋಗಿ ಇಕ್ಕಳಕ್ಕೆ ಮಾಂಸವನ್ನು ಚುಚ್ಚಿಕೊಂಡು ಹುಲಿಗೆ ಕೊಡಬೇಕು .ಅದೇ ರೀತಿ ಮಾಂಸ ಕೊಟ್ಟು ಜಿರಾಫೆಗೆ ಹುಲ್ಲು ಹಾಕಿ..
ಜಿಂಕೆಗಳಿಗೂ ಹುಲ್ಲು ಕೊಟ್ಟು
ಚಿಂಪಾಜಿ ಬಳಿ  ಬಂದು ಅದು ಕೀಟಲೆ ಸ್ವಭಾವದ್ದು  ಅದು ಅದರ ಮರಿಯನ್ನು ಒಂದೇ ಬೋನಿನಲ್ಲಿಟ್ಟಿದ್ದರು......ಅದನ್ನು ಸ್ವಲ್ಪ ಸಮಯ ಹೊರಗೆ ಆಡಲು ಬಿಡಬೇಕು ಅದನ್ನು ಹೊರ ಬಿಟ್ಟ ನಂತರ....ಅದರ ಮರಿ ಬೋನಿನ ಮೂಲೆಯಲ್ಲಿ ಹಿಂದೆ ಸೇರಿಕೊಂಡಿತ್ತು....ಅದನ್ನು ಹೊರತರಲು ಕುಮಾರ್ ಬೋನಿನ ಒಳ ಹೋದ ....ಅದನ್ನು ನೋಡಿದ ತಾಯಿ ಚೀಂಪಾಂಜಿ ನಿತ್ಯ ತನ್ನ ಒಡೆಯ ತಾನು ಒಳ ಹೋದಂತೆ ಬೋನಿನ ಬಾಗಿಲು ಹಾಕುತ್ತಿದ್ದದ್ದನ್ನು ನೋಡಿಕೊಂಡಿತ್ತು....ಅದು ಕೂಡ ಕುಮಾರ್ ಒಳ ಹೋದಂತೆ ಬೋನಿನ ಬಾಗಿಲು ಹಾಕಿತು.....ಕುಮಾರ್ ಕೂಗಿ ಕೊಂಡರು ಯಾರಿಗೂ ಕೇಳುವಂತಿರಲಿಲ್ಲ....ಜಾವೇದ್ ಬಹಳ ದೂರದಲ್ಲಿದ್ದರು....
ಜಾವೇದ್ ಒಂದು ಸುತ್ತು ಸಂಜೆ ವೇಳೆ ಬರೋದು.. ಕುಮಾರ್ ದು ಸ್ವಲ್ಪ ದೊಡ್ಡ ದೇಹ...ಹಾಗಾಗಿ ಚಿಕ್ಕ ಬೋನಿನಲ್ಲಿ ಮಂಡಿಯೂರಿ ....ಸ್ವಲ್ಪ ಹೊತ್ತು ಕುಳಿತ ....ಚಕ್ಕಂಬಕ್ಕಳ ಹಾಕಿ ಸ್ವಲ್ಪ ಹೊತ್ತು....ಕುಳಿತ ವಿಪರೀತ ಕಾಲು ನೋವು...ಬೆನ್ನು ನೋವು ಕಾಣಿಸಿಕೊಂಡಿತು....ಆಗ ತನ್ನ ಮನದಲ್ಲೇ....
ನಾವು ಮನುಷ್ಯರು ಭೂಮಿಯಲ್ಲಿ ನಾವು ಕೂಡ ಜೀವ ಸಂಕುಲದ ಭಾಗ ...ಪ್ರಾಣಿಗಳು ಕೂಡ ಜೀವ ಸಂಕುಲದ ಭಾಗವೇ....ಆದರೆ ನಾವೇಕೆ ಜೀವಸಂಕುಲದ ಭಾಗವಾದ ನಮ್ಮಷ್ಟೇ....ಬದುಕುವ ಹಕ್ಕಿರುವ ಪ್ರಾಣಿಗಳ ಮೇಲೆ ನಮ್ಮದೇಕೆ ದಬ್ಬಾಳಿಕೆ...ತನ್ನ ಮನೆಯ ಸೋನಿಯನ್ನು....ಸರಪಳಿ ಕಟ್ಟಿ ಎಳೆದೊಯ್ಯುತಿದ್ದದ್ದು....ಅದನ್ನು ಬೆಳೆಗ್ಗೆಯಿಂದ ಸಂಜೆವರೆಗೂ ಸರಪಳಿ ಯಿಂದ  ಕಟ್ಟಿರುತಿದ್ದದು....ನೆನಪಾಯಿತು ಪಾಪವೆನಿಸಿತು...
ಜಾವೇದ್ ಕುಮಾರ್ ಇನ್ನು ವಾಪಾಸ್ ಆಗದ್ದನ್ನು ಕಂಡು ಹುಡುಕುತ್ತ ಬರುವಾಗ ಚೀಂಪಾಜಿ ಮರದ ಬುಡದಲ್ಲಿ ಕುಳಿತದ್ದನ್ನು ಕಂಡು.....ಗಾಬರಿಗೊಂಡು ಬೋನಿನ ಬಳಿ ಬಂದ .....
ಏನ್ ಸಾಬ್ ಏನಾಯ್ತು....
ಬೋನಿನ ಬಾಗಿಲು ತೆಗೆದು ಕುಮಾರ್  ನನ್ನು ಹೊರ ಕರೆದ.....
ಕುಮಾರ್ ನಡೆದ ವಿಷಯ ಜಾವೇದ್ ಗೆ ಹೇಳಿ..
ವಿಶ್ರಮಿಸುವ ಕೊಠಡಿ ಬಳಿ ನೆಡೆದ...
ಅಲ್ಲಿಂದ ಹಿಂತಿರುಗಿದ ಮೇಲೆ....ಸೋನಿಯನ್ನು ಬಂಧನ ಮುಕ್ತವಾಗಿಸಿ....ಸ್ವತಂತ್ರವಾಗಿಸಿದ...
ಮುಂದೆ....ಪ್ರಾಣಿಗಳ ಬಂಧನದ ವಿರುಧ್ಧ ಧ್ವನಿ ಎತ್ತುವ ಪುಸ್ತಕ ಬರೆದ.. ಪುಸ್ತಕದ ಶೀರ್ಷಿಕೆ ---

"ನಾವೆಷ್ಟು ಕ್ರೂರಿಗಳು..."

              ರಚನೆ
  ಶ್ಯಾಮ್ ಪ್ರಸಾದ್ ಭಟ್

Thursday, November 29, 2018

ಚಳಿಗಾಲ

ಚಳಿಗಾಲ




ಪ್ರಾರಂಭ ಡಿಸೆಂಬರ್ ಚಳಿಗಾಲ
ನಡುಗಿಸುತಿಹುದು ಆವರಿಸಿ ಕೈ ಕಾಲ
ಹೊರಗೆ ವಾತಾವರಣ ತುಂಬಾ ಚಳಿ
ಹೊರ ಬರಲಾಗುತ್ತಿಲ್ಲ ಬಿಟ್ಟು ಕಂಬಳಿ

ಮುಂಜಾವು ಹೊರಟೆ ಸುತ್ತಿ ಬರಲು ನಮ್ಮ ಹಳ್ಳಿ
ನೋಡುತ ಸಾಗಿದೆ ಗಿಡ ಮರ ಬಳ್ಳಿ
ಸುಂದರ ನೋಡಲು ಹೊರಗಿನ ಮಂಜು ಮುಸುಕು
ಏನಂದರು ಕಷ್ಟವೇ ತೆಗೆಯುವುದು ಕಂಬಳಿ ಮುಸುಕು

ಮುಂದೆ ಜೊತೆಯಾದ ನನ್ನ ಸ್ನೇಹಿತ ನಾಯರ್
ಜೊತೆಗೆ ಕರೆ ತಂದಿದ್ದ ತನ್ನ ನಾಯಿ ಡಾಬರ್
ಉದಯಿಸುತಿದ್ದ ರವಿ ಮಂಜಿನ ಪರದೆ ಸರಿಸಿ
ಸುತ್ತೆಲ್ಲ ತನ್ನ ಕಿರಣಗಳ ಕಾಂತಿ ಪಸರಿಸಿ

ಸಾಗಿತ್ತಾಗಲೆ ಅರ್ಧ ಸುತ್ತು
ಬಾಲ್ಯದ ನೆನಪುಗಳು ಸುಳಿದಾಡುತಿತ್ತು
ಸುಂದರ ನಮ್ಮ ಹಳ್ಳಿಯ ನೋಟ
ಮರೆಸುವುದು ಒಮ್ಮೆಲೆ ಜೀವನದ ಜಂಜಾಟ
                          ರಚನೆ
        ✍   ಶ್ಯಾಮ್ ಪ್ರಸಾದ್ ಭಟ್

Thursday, November 8, 2018

ಭಟ್ಟರ ದಿನಚರಿ ಪುಟದಿಂದ

 




ತುಂಬಾ ದಿನದಿಂದ ಕೈ ಯಲ್ಲಿ ಬೆವರು ತುರಿಕೆ ಕಾಣಿಸಿ ಕೊಂಡಿತ್ತು ಇಂದೋ ನಾಳೇ ಕಡಿಮೆಯಾಗಬಹುದು ಎಂದು ನಿರ್ಲಕ್ಷ್ಯ ತೋರಿದೆ...ಆದರೆ ಕ್ರಮೇಣ ಕಡಿಮೆಯಾಗುವಂತೆ ತೋರಲಿಲ್ಲ ...ಗೆಳೆಯನಿಗೆ ತೋರಿಸಿದೆ....ಅವನು ಕೂಡ ನನಗೂ  ಮೈಯೆಲ್ಲಾ ಸಣ್ಣ ಸಣ್ಣ ತುರಿಕೆ ಬಂದಿದೆ ಅಂದ  .....

ಎಲ್ಲಿ ನೋಡೋಣ ಎಂದು ಕೈ ಕಾಲು ಗಳನ್ನು ಗಮನಿಸಿದೆ...ಸರಿ ಆಸ್ಪತ್ರೆಗೆ ಹೋಗಿಬರೋಣ ಒಮ್ಮೆ ಅಂತ ನಿರ್ದರಿಸಿ ಹಾಸನದ ಹೊಸ ಸರಕಾರಿ ಆಸ್ಪತ್ರೆಗೆ ಹೋದೆವು ... ಮನೆಯಿಂದ
ಹೊರಟದ್ದು 8 ಕ್ಕೆ...ತಲುಪಿದ್ದು 10ಕ್ಕೆ.....

ಹೊಸಬಸ್ ನಿಲ್ದಾಣದಿಂದ ಆಟೋದಲ್ಲಿ ಆಸ್ಪತ್ರೆ ಕಡೆಗೆ ಹೊರಟೆವು....ನನ್ನ ಗೆಳೆಯ ನಾನು ದೊಡ್ಡ ಆಸ್ಪತ್ರೆಯಲ್ಲಿ ೧೪೦ ರ ಚರ್ಮ ರೋಗದ ಡಾಕ್ಟರ್ ಸಿಗುವ ಕೊಠಡಿ ಹುಡುಕಲು ಹರಸಾಹಸ ಪಟ್ಟು ಹುಡುಕಿದೆವು ....

ಆಗಾಗಲೇ ಜನ ಜಮಾಯಿಸಿ ಸಾಲುಗಟ್ಟಿದ್ದರು ನಾವು ಸಾಲಿನಲ್ಲಿ ಸೇರಿಕೊಂಡೆವು ...
ನನ್ನನ್ನು ಮೊದಲು ಪರೀಕ್ಷೆ ಮಾಡಿದ ಡಾಕ್ಟರ್ ಬೆವರು ತುರಿಕೆಯಿಂಗದ ಹೀಗಾಗಿದೆ ....ಎಂದು permethrin ointment ಬರೆದು ಕೊಟ್ಟರು ರಾತ್ರಿ ವೇಳೆ ಹಚ್ಚಿಕೊಂಡು ಬೆಳಗ್ಗೆ ಸ್ನಾನ ಮಾಡಲು ಹೇಳಿದರು ಸರಿ ಎಂದು ಹೊರ ಬಂದೆ...
ನನ್ನ ಹಿಂದೆ ಇದ್ದ ಗೆಳೆಯ ಒಳ ನೆಡೆದ....
ಆವನನ್ನು ಪರೀಕ್ಷಿಸಿ ಬೇಸಿಗೆಗೆ ಚರ್ಮ ಬಿಳಿಗಟ್ಟಿದ್ದಿರ ಬಹುದು...ಆದರೂ ನೋಡಿ....ICTC blood test ಗೆ ಬರೆದರು ....

ICTC blood Test ವಿಭಾಗ
ಚರ್ಮ ಹಾಗೂ ಲೈಂಗಿಕ ಸಮಸ್ಯೆ ವಿಭಾಗ ಹೊಂದಿಕೊಂಡಂತಿವೆ...

blood test ಕೊಠಡಿಯಲ್ಲಿ
 ಏಡ್ಸ್ ರೋಗದ ಲಕ್ಷಣಗಳ ಬಗೆಗೆ ಪಟ್ಟಿ ತೂಗು ಹಾಕಿದ್ದರು ಅದನ್ನು  ಓದುತಿದ್ದ ಗೆಳೆಯ ಒಮ್ಮೆ ಗಾಬರಿ ಬಿದ್ದ
 ಕಾರಣ..... ಲಕ್ಷ್ಮಣಗಳಲ್ಲಿ ಬಿಳಿ ತುರಿಕೆ ಎಂದಿತ್ತು ....😊
ಗಾಬರಿಗೊಂಡಾಗ ಯೋಚನಾ ಕಾರ್ಯ ಕಡಿಮೆ...
 ಲೋ ಗುರು...ನಂಗೇನೋ ದೊಡ್ಡರೋಗ ಬಂದಿದೆ ಅನ್ಸುತ್ತೆ ನೋಡಲ್ಲಿ ಅಂತ ಆ ಪಟ್ಟಿ ಕಡೆಗೆ ಕೈ ತೋರಿಸಿದ...ನಾನು ಓದಿದೆ...

ಹೌದು ಕಣೋ ಇದ್ದರೂ ಇರಬಹುದು ಅಂತ ಅವನನ್ನ ಇನ್ನಷ್ಟು ಗಾಬರಿಗೊಳಿಸಿದೆ....
ಅಷ್ಟರಲ್ಲಿ ಅವನ ಸರದಿ ಬಂದು ಒಳ ನೆಡೆದ ....
 ರಕ್ತ ಪರೀಕ್ಷಕರು ಅವನ ಮಾಹಿತಿ ಪಡೆದು  ರಕ್ತ ತೆಗೆದು...ಲ್ಯಾಬ್ ಗೆ ಕಳುಹಿಸಿದರು...

ಅವನಿಗೆ ಕಾಲು ಕೈ ನಡುಕ ರಕ್ತ ಪರೀಕ್ಷಕರನ್ನು ಕೇಳೇ ಬಿಟ್ಟ...
ಸರ್ ಇದು ಏಡ್ಸ್ ಇದೆಯೋ ಇಲ್ವೋ ಅಂತ ಚೆಕ್ ಮಾಡಲು ರಕ್ತ ತಗೋಂಡಿದ್ದ ಅಂತ ...

ಪರೀಕ್ಷಕರು ಹೌದು ಎಂದು ಪ್ರತಿಕ್ರಿಯಿಸಿದರು ....
 ಇವನಿಗೆ ಜೀವ ಬಾಯಿಗೆ ಬಂದಂತಾಗಿ......

ಸರ್ ನನಗೇಗೆ ಬಂತು ಸಾರ್ ಈ ಹಾಳಾದ್ ರೋಗ ಎಂದ..
ಅದಕ್ಕೆ
ರಕ್ತ ಪರೀಕ್ಷಕರ ಉತ್ತರ ಚನ್ನಾಗಿತ್ತು....
ತುಸು ಹಾಸ್ಯವಾಗಿ ನಗುತ್ತ....

.ಲೋ ನೀನು ಪೋಲಿಸ್ ಸ್ಟೇಷನ್ ಗೆ ಹೋಗಿರ್ತೀಯ ಸರಕಾರಿ ಕೆಲಸಕ್ಕೆ "ನಡವಳಿಕೆ ಪ್ರಮಾಣ ಪತ್ರ " ತರೋಕೆ....ಪೋಲೀಸ್ ಸ್ಟೇಷನ್ ಲಿ ಇದ್ದೀಯ ಅಂದ ಮಾತ್ರಕ್ಕೆ ನಿನ್ನ ಕಳ್ಳ ಅಂತ ಜೈಲ್ ಗೆ ಹಾಕ್ತಾರ...
ಇಲ್ಲ ಅಲ್ವ ಹಾಗೆ.....ನಿನ್ನ ಪರೀಕ್ಷೆ ಮಾಡಿ ಉತ್ತರ ಹೇಳ್ತೇವೆ...

ಹಾಗೇ....ಲೈಂಗಿಕ ವಿಭಾಗಕ್ಕೆ ಬಂದೋರೆಲ್ಲ ಏಡ್ಸ್ ರೋಗಿಗಳಲ್ಲ....

ವಿದ್ಯಾವಂತ ನೀನೆ ಭಯ ಪಟ್ರೆ...ಹಾಸನದ ಸುತ್ತ ಮುತ್ತ ಇರೋರು ಹಳ್ಳಿಯೋರು ಅವರು ಇನ್ನೆಷ್ಟು ಭಯ ಪಡ್ಬೇಕು....




ಗೆಳೆಯ ತುಸು ಸಮಾಧಾನಗೊಂಡಂತಾದ....


ಹೀಗೆ ಸಮಸ್ಯೆಗಳು ದೊಡ್ಡವಲ್ಲ...
ನಾವು ಅವುಗಳಿಗೆ ಪ್ರತಿಕ್ರಿಯಿಸುವ ರೀತಿಯಿಂದ ಅವು ದೊಡ್ಡವಂತೆ ಭಾಸವಾಗುತ್ತವೆ...

                     ರಚನೆ
✍ ಶ್ಯಾಮ್ ಪ್ರಸಾದ್ ಭಟ್

Monday, November 5, 2018

ದೀಪಾವಳಿ



                                                 
ಕತ್ತಲನು ಅಳಿಸಿ ಬೆಳಕನು ಹರಿಸಿ
ದೂರದ ಸಂಬಂಧಗಳ ಹತ್ತಿರ ಸೇರಿಸಿ
ಮನೆ ಮನಗಳಲಿ ಸಂತಸವನು ಸುರಿಸಿ
ಎಲ್ಲರೊಂದಿಗೆ ಸೇರಿ ಪಟಾಕಿ ಸಿಡಿಸಿ..

ಹಣತೆಯಿಂದ ಹಣತೆ ಹೊತ್ತಿಸಿ ಸಂಭ್ರಮಿಸಿ
ನಿಮ್ಮ ಬಾಳ ಹಣತೆ ಆರೀತು ಪಟಾಕಿ ಸಿಡಿಸಿ
ಧರ್ಮದ ಜ್ಯೋತಿ ನಂದಾ ದೀಪವಾಗಲಿ
ಪಟಾಕಿ ಹಾಗೆ ಸದ್ದು ಮಾಡಿ ನಂದಿಹೋಗದಿರಲಿ

ಎಲ್ಲೆಲ್ಲೂ ಸುಳಿದಿಹುದು ನಾಸ್ತಿಕತೆಯ ಗಾಳಿ
ಆ ಗಾಳಿಗೆ ನಂದದಿರಲಿ ಆಸ್ತಿಕರ ದೀಪಾವಳಿ

                 ರಚನೆ
    ಶ್ಯಾಮ್ ಪ್ರಸಾದ್ ಭಟ್

Thursday, November 1, 2018

ಭಟ್ಟರ ದಿನಚರಿ ಪುಟದಿಂದ




ನಮ್ಮದು ಚಿಕ್ಕಮಗಳೂರಿನ ಮೂಡಿಗೆರೆ....ನಾನು ವೃತ್ತಿಯಿಂದ ದೇವಾಲಯದ ಅರ್ಚಕ..
ಎಂದಿನಂತೆ ಈ ದಿನವು ಕೂಡ ನಿತ್ಯ ಅರ್ಚಿಸುವ ಆಂಜನೇಯನ ಗುಡಿಗೆ ಹೋಗಿ ದಿನ ನಿತ್ಯ ಕರ್ಮದಂತೆ...ದೇವರ ಮೇಲಿನ ಬಾಡಿದ ಹೂ ತೆಗೆದು ...ಶುಧ್ಧೋದಕ ಸ್ನಾನ ಮಾಡಿಸಿ ...ಅಲಂಕಾರ ಮಾಡಿ...ಹನುಮಾನನಿಗೆ ಸಕಲ ಉಪಚಾರ ಪೂಜೆ ಒಪ್ಪಿಸುತ್ತಿರುವಾಗ...
ಮಧ್ಯಪಾನ ಮಾಡಿದ ಪಾನ ಮತ್ತ ಕುಡುಕನೊಬ್ಬ ದೇವಾಲಯ ಪ್ರವೇಶಿಸಿದ...ಬಂದೊಡನೆ...ಹನುಮನಿಗೆ ಧೀರ್ಘದಂಡ ನಮಸ್ಕಾರ ಮಾಡಿ...ಜೋರು ಧ್ವನಿಯಲ್ಲಿ " ದೇವರೇ ನನಗೆ " *ಆಯಸ್ಸು ' ಆರೋಗ್ಯ*" ಕೊಟ್ಟು ಕಾಪಾಡು ತಂದೆ ಎಂದು ಜೋರಾಗಿ ಅರುಚುತ್ತ ಬೇಡಿದ....
 ಗರ್ಭಗುಡಿಯೊಳಗಿದ್ದ ನನಗೆ ನಗು ಬರುವಂತಾಯಿತು....ಆ ಎರಡು ನಿನ್ನ ಕೈಯಲ್ಲೆ ಇದೇ .... ಮಹರಾಯ ಎಂದೆ...

ಹೀಗೆ ಕುಡಿಯುತ್ತಿದ್ದರೇ ಆರೋಗ್ಯ ಹಾಳು..
ಕುಡಿದು ಕುಡಿದು ಆಯಸ್ಸು ವೃದ್ಧಿ ಆಗುತ್ತದೆಯೇ....ಅದು ನಿಗಧಿಗಿಂತ ಬೇಗ ವೇ ವೈಕುಂಠ ವಾಸಿ ಆಗ್ತೀಯ ಅಂದೇ....

ಹೇಳಿದ್ದು ಅವನಿಗೆ ಅರ್ಥ ವಾದಂತೆ ಕಾಣಲಿಲ್ಲ ಆದರು..
ಮರು ನುಡಿದ
"ಎಲ್ಲಾ ಅವನ ಲೀಲೆ ಬುಡಿ ಸ್ವಾಮಿ...ಅಂದ...!!

*ನೆಡೆದದ್ದು ಹಾಸ್ಯವಾದರು ಎಂತಾ ಜೀವನ ಪಾಠ...ಅಲ್ಲವೇ?*

                       *ರಚನೆ*
           *ಶ್ಯಾಮ್ ಪ್ರಸಾದ್ ಭಟ್*

Wednesday, October 31, 2018

ಕನ್ನಡ




ಕನ್ನಡ ಎಂದರೆ....ನನಗಿಟ್ಟ..ಹೆಸರು..ನಾನಾಡೋ ಉಸಿರು...ಮೊದಲು ತೊದಲಿ ನುಡಿದ ನುಡಿ...ನಾನು ಕನಸು ಕಾಣುವ ನುಡಿ...ನಾನು ಮಾತನಾಡುವ ನುಡಿ....ನನ್ನ ನಗಿಸುವ...ಅಳಿಸುವ...ಕಣ್ಣೊರೆಸುವ ನುಡಿ....
ಪರದೇಶದಾಗ ಪರದೇಶಿಯಾಗಿ ಸುತ್ತುವಾಗ...ಯಾವ ನುಡಿ ಕೇಳಿದರ ರಕ್ತ ಬಿಸಿಯಾಗಿ ನಾಡಿ ಮಿಡಿತ ಜೋರಾಗಿ ಬಡಿವಂತೆ ಮಾಡುವುದೇ...ಕನ್ನಡ

ಒಮ್ಮೊಮ್ಮೆ ಇಂದಿನ ಸ್ಥಿತಿಯ ಕಂಡು ಚಿಂತೆ ಮಾಡುವುದು ಉಂಟು....ಹಿಂದಿನ ವೈಭವವ ಕಂಡು ಆಶ್ಚರ್ಯಗೊಂಡದ್ದು ಉಂಟು....

ಬರೆಯಲು ಬಳಪ...ಪೆನ್ನು ...ಪೆನ್ಸೀಲು...ಹಾಳೆ...ಹೀಗೆ ಬರೆದದ್ದ ಪ್ರಕಟ ಮಾಡಲು ಹಲವಾರು ಅವಕಾಶಗಳಿರುವ ಇಂದಿನ ವಾಸ್ತವಿಕ ಸಮಾಜಕ್ಕೂ..
.ಹಿಂದೆ...ಆಶ್ರಯಕ್ಕಾಗಿ ಅಲೆದಾಡಿ ರಾಜನೀಡಿದ ಆಶ್ರಯದ ಕೃತಘ್ನತೆಗಾಗಿ ಒಲ್ಲದ ಮನಸಲಿ ಅವನು ಅಸಮರ್ಥನಾದರು ಸಮರ್ಥ ನೆಂದು ಬಿಂಬಿಸಿ ಬರೆದು....
ಸಮರ್ಥ ರಾಜರ ಇತಿಹಾಸ ಉಳಿಸಿ ಎಳೆಯರ ಬೆಳವಣಿಗೆ ಮಾರ್ಗ ಮಾಡಿಕೊಟ್ಟ ಅದೆಷ್ಟೋ ಕವಿಗಳು ...

ಬರೆಯಲು ಈಗಿರುವ ಅನುಕೂಲವಿರದಿದ್ದರು ತಾಳೆ ಮರದ ಗರಿಯೋ....ಯಾವುದೋ ಮರದ ಎಲೆಯಲ್ಲಿಯೋ ಅವರ ಮೇರು ಪಾಂಡಿತ್ಯ ಅನಾವರಗೊಳ್ಳಿತಿತ್ತು...

ಪಾಂಡಿತ್ಯ ವೆಂದರೆ ಎಂತಹುದು ಕೇವಲ ಗದ್ಯದಂತ ಪದ್ಯ ಬರೆಯುವುದಲ್ಲ....
ಬರೆವ ಪದ್ಯಗಳಿಗೆ...ಕಾವ್ಯ ಗಳಿಗೆ. ....ತಮಗೆ ತಾವೇ ಷಟ್ಪದಿಯ ....ಸಾಂಗತ್ಯದ ...ಛಂದಸ್ಸಿನ ಚೌಕಟ್ಟುಗಳನ್ನು ವಿಧಿಸಿಕೊಂಡು ಅದೇ ಚೌಕಟ್ಟಿನೊಳಗೆ ಬರೆದು ಬಿರುದು ಪಡೆಯುತಿದ್ದರು....

ಈಗ ನಾವು ಗಮನಿಸಿದರೆ ಎರಡಕ್ಷರ ಗೀಚಿದೊಡನೆ...ಅದಕ್ಕೆ ದಕ್ಕಬಹುದಾದ ಬಹುಮಾನದ ಚಿಂತೆ...ಅದನ್ನು ಪ್ರಸಂಶಿಸಬೇಕೆನುವ ಬಿಗುಮಾನತೆಯ ಅಂಶ ಕೆಲವರಲ್ಲಿ ..."ಪುಸ್ತಕದೀ ತಾನ್ ಓದಿ ಮಸ್ತಕಕೆ ಇಳಿಸಿದರೇ ಮತ್ತೆ ಪುಸ್ತಕ ಬರೆಯಲು ಅನುವಾಗುವುದು ತಮ್ಮ"

ಹೀಗೆ ನನ್ನ ಸ್ನೇಹಿತ ಕವನ ಬರೆದಿದಿನಿ ನೋಡೋ ಅಂತ ತಂದು ಕೊಟ್ಟ ಸರಿ ಎಂದು ತೆಗೆದು ಕೊಂಡರೆ ನಾಲ್ಕು ‍ ಪುಟ ....ಅಶ್ಚರ್ಯ ಆಯ್ತು ಕಥೆ ಏನೋ ಅಂದೇ ....ಅಲ್ಲಲೇ ಕವಿತೆ..ಅಂದ
ಹುಮ್ ಸರಿ ಕಾವ್ಯವಸ್ತು ಏನು ಅಂದೇ..
ಅದಕ್ಕೆ ಅವನು ಕಾವ್ಯವಸ್ತು "ಕಾವ್ಯ" ನ ಅಂದ....
ಅರ್ಥ ಆಗ್ಲಿಲ್ಲ ಮೊದಲು ಗದ್ಯಕವಿತೆ ಓದಿದ ಮೇಲೆ ತಿಳಿತು ಕಾವ್ಯವಸ್ತು ಅವನ "ಗೆಳತಿ ಕಾವ್ಯ" ‍ಅಂತ....

ಅವನಿಗೆ ಸಲಹೆ ಕೊಡಬೇಕು ನಾನು ಹೇಗ್ ಕೊಡೊದು ಅಂತ ಯೋಚನೆ ಮಾಡಿ ಕವನದ ರೂಪದಲ್ಲಿಯೇ ಕೊಡೋಣ ಅಂತ ಅವನನ್ನ ತಿದ್ದೋಕೆ ಒಂದ್ ಕವನ ಬರೆದೆ ಅದೇ ಇದು
 ಅದಕ್ಕೆ ಶೀರ್ಷಿಕೆ ಏನಿಡೋದು ಅಂತ ಯೋಚನೆ ಮಾಡಿ...ಅವನನ್ನು ಕವಿ ಅಂದರೆ ಸಂತೋಷಪಡ್ತಾನೆ ಅಂತ "ಯುವ ಕವಿಗೆ ಮನವಿ" ಅಂತ ಶಿರ್ಷಿಕೆ ಕೊಟ್ಟು ಬರೆದೆ...

ಪ್ರಾಸವಿರದ ಕವಿತೆ ಓದಲು ತ್ರಾಸ
ಗದ್ಯದಂತಿದ್ದರೆ ಸಿಗುವುದೇ ರಸ
ಕಾವ್ಯ ಸಂದೇಶ ಸರಳವಾಗಿರಲಿ
ಕವಿ ದ್ವಂದ್ವ ಓದುಗನ ತಲುಪದಿರಲಿ

ವಿಷಯದ ಅರಿವಿರಲಿ
ಅತಿಷಯವಾಗದಿರಲಿ
ಕಾವ್ಯದ ವಸ್ತುವಿನಲಿ
ಕವಿಯ  ಸ್ಲಷ್ಟತೆ ಇರಲಿ

ಮೇಧಾವಿತನ ತೋರಿಸುವ ಭರದಿ
ದಾಟದಿರಲಿ ಕಾವ್ಯ ಶರಧಿಯ ಪರಿಧಿ
ಕಾವ್ಯ  ಕ್ಲಿಷ್ಟಮಾಡಿ ಪಡೆಯದಿರು ಮೆದುಳ ಬಲಿ
ಸರಳ ಕಾವ್ಯವೇನೆಂಬುದ ಕುಮಾರವ್ಯಾಸನ ಕಾವ್ಯದಿಂದ ಕಲಿ...

ಬರೆಯುವ ಮುನ್ನ ಚೆನ್ನಾಗಿ ಓದು
ಬರೆದದ್ದು ಅಚ್ಚಾಗುವ ಮುನ್ನ ಬರೆದದ್ದ ಓದು ಗೆಳೆಯ..

ಇಂದು ಬರೆಯುವವರ ಸಂಖ್ಯೆ ಕಡಿಮೆ ಇದೇ ..ಕಾರಣ -ಓದುವವರ ಸಂಖ್ಯೆ ಕಡಿಮೆಯಾಗಿದೆ...

ದಯಮಾಡಿ ಕನ್ನಡ ಪುಸ್ತಕ ...ಬೇರೆಯಾವುದೇ ಭಾಷೆಯ ಪುಸ್ತಕ  ಓದಿದರು ಸರಿಯೇ...ಬೇರೆ ಭಾಷೆಯಲಿ ಓದಿ ಗ್ರಹಿಸಿದ್ದನ್ನ ಕನ್ನಡದಲ್ಲು ಬರೆದು ಸೀಮಿತವಾಗಿರುವ ಭಾಷೆಯ ವ್ಯಾಪ್ತಿ ವ್ಯಾಪಕವಾಗಲಿ.....ತಮಿಳು ..ತೆಲುಗು ವಿಶ್ವ ವ್ಯಾಪಕವಾಗಿವೆ..ಮಾತನಾಡಲು ಸಾದ್ಯವಿಲ್ಲವೆಂದರು...ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೊಂಡು ಭಾಷೆಯ ಅರಿವು ಮೂಡಿಸುತ್ತಿವೆ....ಕನ್ನಡವು ಆ ಸಾಲಿನಲ್ಲಿ ಮುಂಚುಣಿಯಾಗಬೇಕೆಂಬ ಆಸೆ ಇದೆ...  ಹಾಗೆಯೇ ಕನ್ನಡ ವಿಶ್ವ ವ್ಯಾಪಕವಾಗಲೆಂಬ ಬಯಕೆ

ಕನ್ನಡ ರಾಜ್ಯೋತ್ಸವ ಆಚರಣೆ ಸೀಮಿತವಾಗದೆ....ಸಂಕಲ್ಪದ ದಿನವಾಗಲಿ ....

                 ಇಂತಿ ನಿಮ್ಮ ವಿಶ್ವಾಸಿ
               ಶ್ಯಾಮ್ ಪ್ರಸಾದ್ ಭಟ್

Friday, October 5, 2018

ಬೀದಿ ಬದುಕ ಹಾದಿ



ಬೀದಿ  ಬದಿಯ ಮಗುವು ನಾನು
ಕೇಳುವರಿಲ್ಲ ನನ್ನ ಅಳಲು ಏನು

ನನ್ನ ಮನೆ ರಸ್ತೆ ಬದಿಯ ಗುಡಾರ
ಅಲ್ಲೇ ನಮ್ಮ ತಾತ್ಕಾಲಿಕ ಬಿಡಾರ
ನಾ ಜನಿಸಿದ್ದು ದೊಡ್ಡ ಸಿಮೆಂಟ್ ಕೊಳವೆ ಒಳಗೆ
ಅಂದೇ ನಡುಗಿದ್ದೆ ಮಳೆ ಚಳಿಗಾಳಿಗೆ

ಅಪ್ಪ ಅಮ್ಮ ಹೋಗುವರು ರಸ್ತೆಗೆ ಹಾಕಲು ಟಾರು
ಜೊತೆಯಲಿಲ್ಲ ನನ್ನ ಜೋಪಾನ ಮಾಡೋರ್ಯಾರು
ತಿರುಗಿದರು ಊರಿಂದ ಊರು
ಹಗಲೆಲ್ಲ ಬೆವರು ಸುರಿಸಿ ದುಡಿದರು

ನನ್ನ ಜೊತೆಗಾರರ ಜೊತೆಯೇ ಆಟ
ಯಾವ ಶಾಲೆಯಲ್ಲು ಕಲಿಯಲಿಲ್ಲ ಪಾಠ
ತಿಳಿದಿಲ್ಲ ಬಂದು ಬಳಗ ಯಾರು
ಕಷ್ಟ ಬಂದಾಗ ಕಾಯಬೇಕು ನಾನು ನಂಬಿರೋ ದ್ಯಾವ್ರು

ಆಡಿ ಕೂಡಿ ಬೆಳೆದೆ ದಿವಸ
ಅಪ್ಪನ ಜೊತೆ ಕಲಿತೆ ಕೆಲಸ
ಗುಂಡಿ ರಸ್ತೆಗೆ ಹಾಕುವೆ ಟಾರು
ನನ್ನ ಬಡತನ ಗಡಿಪಾರು ಮಾಡೋರು ಯಾರು?
   
               ರಚನೆ
    ಶ್ಯಾಮ್ ಪ್ರಸಾದ್ ಭಟ್

Tuesday, October 2, 2018

ನಗರ ವಾಸಿ


ತಾಳಲಾರದೆ ಹಳ್ಳಿಯ ಬಡತನದ ಬಿಸಿ
ನಗರ ವಾಸಿಯೆಂದು ನಾನಾದೆ ನಗರವಾಸಿ
ಹಳ್ಳಿಯಲ್ಲಿ ನಾನೆಲ್ಲರಿಗು ಚಿರಪರಿಚಿತ
ನಗರದಲ್ಲಿ ಪರಿಚಿತನಿಗು ನಾ  ಅಪರಿಚಿತ

ನಗರದಿ ಸಾಲದೇ ಸಂಬಳ ಮಲಗಿಹೆ ಹಸಿವಿನಿಂದ
ಹಳ್ಳಿಯಲ್ಲಾದರೆ ಹಸಿವ ನೀಗಿಸುತಿದ್ದೆ ಹಲಸಿನಿಂದ
ಎಷ್ಟೇ ತಿಂದರು ಸಂಪಾದಿಸಿದ ಸ್ವತ್ತಿನಿಂದ
ಸಿಗುವುದೇ ಅಮ್ಮನ ಕೈ ತುತ್ತಿನಾನಂದ

ಹಳ್ಳಿಯ ಸ್ನೇಹ ಸಂಬಂಧ
ಮರ ಬಳ್ಳಿಯ ಬಂಧ
ನಗರದ ಹೊಸತನದ ಆನಂದ
ಸಂಬಂಧ ಸಮಾಧಿಗೆ ಹಚ್ಚಿಟ್ಟ ಗಂಧ

                            ರಚನೆ
               ಶ್ಯಾಮ್ ಪ್ರಸಾದ್ ಭಟ್ 

ಅಳಿವು - ಉಳಿವು



ಕ್ಷಣ ಕ್ಷಣ ನಗು-ನೋವನು ಉಣಿಸಿ
ಜೀವಕೆ ಜೀವನ ತಿಳಿಸಿ ಕಲಿಸಿ
ಕುಗ್ಗಲು ಹೊಸ ಉತ್ಸಾಹವ ತುಂಬಿಸಿ
ನಗುವೆ ಜೀವವ ನಗಿಸಿ - ಅಳಿಸಿ

ಜೀವನಕೆ ಬೇಕಾದ್ದನ್ನು ಒದಗಿಸಿ
ಜೀವಕೆ ಜೀವನವ ಅಳಿಸಿ
ನಿನಗೆ ಬೇಕಾದ್ದಂತೆ ಆಡಿಸಿ
ಅಪಾಯದಿ ಪೊರೆವೆ ರಕ್ಷಿಸಿ

ನೋವಲಿ ನಗುವನು ಸ್ಮರಿಸಿ
ನಗುವಲಿ ನೋವನು ನೆನೆಸಿ
ನಗು ಅಳು ಬಾಳಲಿ ಬೆರೆಸಿ

ನಾ ಸುಮ್ಮನೆ ಅಲೆದೆ ಸುಖವನ್ನೆ ಅರಸಿ
ಎಲ್ಲ ಸಹಿಸುವ ಸಹನೆ ನೀಡು ನೀ
ನನ್ನ ಹರಸಿ

                         ರಚನೆ
            ಶ್ಯಾಮ್ ಪ್ರಸಾದ್ ಭಟ್

Saturday, September 29, 2018

ಮದ್ಯಮ ಮಾಧ್ಯಮ


ನಾನೊಬ್ಬ ಜಗಕೆ ಮದ್ಯಮ ಮಾಧ್ಯಮ
ಒಬ್ಬನ ಭಾವನೆಗಳ ಜಗಕೆ ತಿಳಿಸೋದು  ನನ್ನ ಉದ್ಯಮ

ನೆರವಾಗಿಹೆ ಅನೇಕ ಅಕ್ರಮ ಎಸಗಲು
ನಾ ಮಾಡಿಹೆ ಅನೇಕ ಅಕ್ರಮಗಳ ಬಯಲು
ನನ್ನ ಹೆಸರು ಸಾಮಾಜಿಕ ಮಾದ್ಯಮ
ನನದು ಜಗದು ಜನರ ಒಂದೆಡೆ ಸೇರಿಸೋ ಉದ್ಯಮ

ದೂರದ ಸಂಬಂಧಿಗಳ ಹತ್ತಿರ ಸೇರಿಸಿದೆ
ಸುತ್ತಲ ಹತ್ತಿರ ಸಂಬಂಧಗಳ ದೂರ ಸರಿಸಿದೆ
ಒಬ್ಬಂಟಿಗೀಗ ನಾನೇ ಸಂಬಂಧಿ
ಸಂಬಂಧಗಳ ನಡುವೆ ನನದೇ ಇಬ್ಬಂದಿ

ನನ್ನಿಂದ ದೂರ ಸರಿದರು ಮನೆ ಮಂದಿ
ನನ್ನಿಂದೆ ಬಿದ್ದು ಜನರಾಗಿಹರು ಕುರಿ ಮಂದಿ
ಎಲ್ಲರ ಸೆಳೆಯುವೆ ಬೀಸಿ ಮಾಯಾಜಾಲ
ನನ್ನ ಹೆಸರು ಅಂತರ್ಜಾಲ

             ರಚನೆ
ಶ್ಯಾಮ್ ಪ್ರಸಾದ್ ಭಟ್

Sunday, September 23, 2018

ಬದುಕು ರಸಾಯಣ



ಭ್ರೂಣದ ಗೋಡೆಯೊಡೆದು ಆಚೆ ಬಂದೆ
ವಿಕಾರ ಜಗದ ಮುಂದೆ ಬೆತ್ತಲೆಯಾಗಿ ನಿಂದೆ
ಸಂಬಂಧ ಸಂಕೋಲೆಯ ಕೊಂಡಿಯಾದೆ
ಕೊಂಡಿಗಳ ಸರಪಳಿಯಲಿ ಬಂಧಿಯಾದೆ

ಬಾಲ್ಯದಿಂದೆವ್ವನ ಆಟ-ಪಾಠದಲಿ ಕಳೆದೆ
ಬೇಕು ಬೇಡಗಳ ತಿಳಿಯುತ ಬೆಳೆದೆ
ತುಳಿದೆ ಏಳು ಹೆಜ್ಜೆಗಳ ಪವಿತ್ರ ಬಂಧನ
ನಾನಾದೆ ಪತ್ನಿ ಹಣೆಯಲಿ ಪವಿತ್ರ ಚಂದನ

ಸಾಗಿತು ಬದುಕೆಂಬ ಗಂಡಾಗುಂಡಿ
ಒಂದೇ ವರ್ಷದಿ ಸೇರಿತು ಸರಪಳಿಗೆ ಮತ್ತೊಂದು ಕೊಂಡಿ
ಹೀಗೆ ಸಾಗಿಹುದು ಬದುಕ ಬಂಡಿ
ಸತ್ತಾಗ ನನದೆನುವುದು ಆರಡಿಯ ಗುಂಡಿ

ಬೆತ್ತಲೆಯಾಗಿ ಬಂದೆ
ಬೆತ್ತಲೆಯಾಗಿ ಹೋದೆ
ಸಡುವೆ ಸಹಿಸಬೇಕು ಸರಪಳಿಯ ನಿಂದೆ
ಉಕ್ಕನ್ನಾಗಿಸುತ ನಿನ್ನಯ ಎದೆ
                   
                   ರಚನೆ
      ಶ್ಯಾಮ್ ಪ್ರಸಾದ್ ಭಟ್

Friday, September 21, 2018

ಪುಷ್ಪ ನಮನ



ಕೆಸರಲ್ಲೆ ಕೊಸರಾಡಿ ಅರಳಿದವಳು ನಾನು
ಕೆಸರ ಮೊಸರ ಕಡೆದು ತೆಗೆದ ಬೆಣ್ಣೆ ನಾನು
ಭಾರತಾಂಬೆಯ ಮುಡಿಯ ಅಲಂಕರಿಸಿಹೆ ನಾನು

ಸೀತೆಯ ಮುಖಕೆ ನನ್ನಂದದ ಹೋಲಿಕೆ
ಬೀಳದವರಿಲ್ಲ ನನ್ನ  ಮೋಹದ ಜಾಲಕೆ
ಊರಿಲ್ಲ ಬೇರಿಲ್ಲದೆ ಜನಿಸಿದವಳು ಕೆರೆಯಲ್ಲಿ
ನಿತ್ಯ ವಿಹರಿಸುವೆನು ನನ್ನೆಲೆಯ ತೆಪ್ಪದಲಿ

ನನಗೂ ಸ್ಥಾನವುಂಟು ಸೃಷ್ಟಿಪಾಲನ ದೃಷ್ಟಿಯಲಿ
ಸ್ಥಾನವಿಟ್ಟು ಪೊರೆದಿಹನು ಶ್ರೀ ಹರಿಯ ನಾಭಿಯಲಿ
ಜಗದಾಂಬೆ ಶ್ರೀ ಲಕ್ಷ್ಮಿಯ ಮುಡಿಯಲಿ

ಹುಟ್ಟು  ಕೆಸರಲ್ಲಾದರೇನು
ಭಗವಂತನ ಪರಮ ಪದವ ಅಲಂಕರಿಪ ಸೇವೆ ಹಿರಿದಲ್ಲವೇನು...

                         ರಚನೆ
           ಶ್ಯಾಮ್ ಪ್ರಸಾದ್ ಭಟ್
                     ಮೂಡಿಗೆರೆ  

Thursday, September 20, 2018

ಪ್ರಣಯ ಪಯಣ


ಮನದ ಮಾಳಿಗೆಯಲಿ ಅಡಗಿ ಕುಳಿತ ಅರಗಿಣಿ
ನನ ಮುಂದಿನ ಬಾಳ-ಬದುಕಿನ ಸಹಚಾರಿಣಿ
ನಂದಿ ಬೆಟ್ಟಕೆ ಹತ್ತಿ ನಿನ ಹೆಸರ ಕೂಗುವ ಆಸೆ
ಚಲಿಸುವ ಮೋಡಗಳ ಚದುರಿಸಿ ಚುಂಬಿಸುವಾಸೆ

ಆಸೆಗಳೊಂದಿಗೆ ಚಿಗುರಿಹುದು ನನ ಮೀಸೆ
ಆದರೆ ತಂದೆ ತಾಯಿಗೆ ನಾನಿನ್ನೂ ಕೂಸೆ
ಮದುವೆಯಾಗುವ ಆಸೆಯ ಅಹವಾಲು ಕಳಿಸಿದೆ
ಮನದಿ ಅಡಗಿದ ಮಡದಿಯ ವಿಷಯ ತಿಳಿಸಿದೆ

ಮನಸ್ಸುಗಳು ಒಪ್ಪಿ ನೆಡೆಯಿತು ಮಂತ್ರ ಮಾಂಗಲ್ಯ
ಅಳತೆಗೋಲಿಗೆ ನಿಲುಕುವುದೇ ಅವರ ವಾಂಚಲ್ಯ
ವರ್ಷವಾಗಲು ಬಂದ ಮನೆಗೊಬ್ಬ ಕೂಸು
ನಗು ಮೊಗದಿ ತಣಿಸುತಿಹನು ನಮ್ಮ ಮನಸು

ಹೀಗೆ ಸಾಗಿಹುದು ಬದುಕ ಬಂಡಿ
ನಂಬಿಕೆಯ ತತ್ವದಡಿ ಬದುಕು ಜಟಕಾಬಂಡಿ

                            ರಚನೆ
                    ಶ್ಯಾಮ್ ಪ್ರಸಾದ್ ಭಟ್
                       ಮೂಡಿಗೆರೆ

Monday, September 17, 2018

ಮುಪ್ಪು


ಜೀವನದ ಮಜಲುಗಳ ಕಂಡ ಮುದುಕ
ಉಲ್ಲಾಸಗೊಳ್ಳುತಿದ್ದ ನೆನೆದು ತಾರುಣ್ಯದ ಬದುಕ
ಅನುಭವದ ಬುತ್ತಿ ಬಿಚ್ಚಿ ಉಣಿಸುತಿದ್ದ ಮೊಮ್ಮಗನಿಗೆ
ತಾನೂ ಲೀನನಾಗಿ ವಿಹರಿಸುತಿದ್ದ ಅರೆಗಳಿಗೆ

ಅಂದಿತ್ತು ದೈತ್ಯ ಮರಗಳನ್ನು ಉರುಳಿಸುವ ಮೈಕಟ್ಟು
ಇಂದು ನೆಡೆಯಲಾಗುತ್ತಿಲ್ಲ ಬಿದಿರಿನ ಕಟ್ಟಿಗೆಯ ಬಿಟ್ಟು
ವಿಧಿ ಹಿಡಿದಿಹನು ನಮ್ಮೆಲ್ಲರ ಜುಟ್ಟು
ಅನುಭವಿಸಲೇ ಬೇಕು ಅವನು ಕೊಡುವ ಪೆಟ್ಟು

ಮೊಮ್ಮಗನು ಬಯಸುವನು ತಾತನ ಸಂಗವನು
ಬೇಡವೆನ್ನುವರಾರು ಕಳೆತ ಮಾವಿನ ಸಿಹಿಯನು
ಮೊಮ್ಮಗನು ಜಗದ ವಿಕಾರ ಕಾಣದ ಈಚಲು
ತಾತನು ಜಗದ ವಿಕಾರಗಳಿಗೆ ಮೈಯೊಡ್ಡಿದ ಹಣ್ಣಿನ ಗೊಂಚಲು

ಸಿಹಿಯ ನೀಡುವರು ಈ ಈರ್ವರು
ಮೊಮ್ಮಗನು ಆರಂಭದ ಅರೆಗಳಿಗೆ
ತಾತನು ಜೀವನದ ಕೊನೆ ಘಳಿಗೆ
ತಲೆಗೊಡಲೆ ಬೇಕು ಎಲ್ಲರು ಕಾಲದ ಉರುಳಿಗೆ.....
   
                        ✍ರಚನೆ
                 ಶ್ಯಾಮ್ ಪ್ರಸಾದ್ ಭಟ್

ಸಾಕ್ಷಿ



ಅಂತರಾಳದ ಮುಂಗುರುಳು
ಮುಗುಳು ನಗುತಿಹುದು
ನನ್ನೀ ಅಟ್ಟಹಾಸವ ಕಂಡು
ನಾ ನೀಡಿದ ಎಲ್ಲ ನೋವ ಉಂಡು

ಗುಣದಿ ಅದು ವಿಶಾಲ ಶರಧಿ
ವಿಸ್ತರಿಸಿ ಬೆಳೆದಿಹುದು ತನ್ನೆಲ್ಲ ಪರಿಧಿ
ನನ್ನ ಹೃದಯಂತರಾಳದಿ ಅಡಗಿದ ಪಕ್ಷಿ
ನನ್ನೆಲ್ಲ ಸರಿ ತಪ್ಪುಗಳಿಗೆ ಮೂಕ ಸಾಕ್ಷಿ

ಎಲ್ಲದಕು ಕಾರಣವು ನೀನೇ
'ನಾನು' ಎಂದೆ ಅದ ತಿಳಿಯದೇನೇ
ನಿನಗುಂಟು ಕಟುಕನ ಕುಟುಕುವ ಶಕ್ತಿ
ಯೋಗ್ಯನಿಗೆ ಸರಿದಾರಿ ತೋರುವ ಯುಕ್ತಿ

ನೀನು ನನ್ನಲ್ಲಿ ಶಾಶ್ವತವಲ್ಲ
ಬಂದು ಹೋಗಲು ಯಾವ ಅಶ್ವ ಪಥವು ಇಲ್ಲ
ನೀ ಕಲ್ಪನೆಗೆ ನಿಲುಕದ ಅಂತರಂಗದ ಸಾಕ್ಷಿ
ಸಾಕ್ಷಾತ್ಕಾರದ ಸಾಕ್ಷಿ ಆತ್ಮಸಾಕ್ಷಿ

                       ರಚನೆ
           ಶ್ಯಾಮ್ ಪ್ರಸಾದ್ ಭಟ್

Wednesday, September 12, 2018

ಪ್ರಕೃತಿ



ಪ್ರಕೃತಿ ನಿನ್ನ ವರ್ಣಿಸಿ ಬರೆಯಲೇ ಒಂದು ಕೃತಿ
ನಿನ್ನ ಮಡಿಲಲ್ಲಿ ತೂಗಿದೆ ಕೇಳದೆ ಜಾತಿ
ಅನಾಥರು ನಂಬಿಹರು ನೀನೇ ಎನ್ನ ಮಾತೆ
 ತಿನ್ನುತ್ತಾ ಬೆಳೆದಿರು ನೀನೇ ಕೊಟ್ಟ ಜೋಳದ ಮ್ಯಾತೆ

ಅಳುವ ಕಂದನಿಗೆ ಚಂದಿರನ ಚೆಂಡಾಗಿ ನೀಡಿದೆ
 ಅತ್ತು ಮಲಗಿದ ಕಂದನಿಗೆ ತಂಪು ತಂಗಾಳಿ ಬೀಸಿ ತೂಗಿದೆ
ನಾ ನಿನ್ನ ಮರೆಯಲೆಂತು ಮಾತೆ
 ನಾ ಬೆಳೆದು ನಿನ್ನ ಕತ್ತರಿಸಿ ಮನೆ ಕಟ್ಟಿ ಒಳ ಕೂತೆ

ನಿನ್ನ ಕುರಿತು ಶಾಲೆಯಲ್ಲಿ ಮಾಡಿದೆ ಭಾಷಣ
ನಿನ್ನ ಚಿತ್ರ ಬರೆದು ಪಡೆದ ಹೆಸರ ಕಲಾ ವಿಭೂಷಣ
 ಮುದಿಯಾದ ನಿನ್ನ ಉರುಳಿಸಿ
ನಗುವೇ ಗಿಡ ನೆಟ್ಟು ಹೂವ ಅರಳಿಸಿ
                     ರಚನೆ     
             ಶ್ಯಾಮ್ ಪ್ರಸಾದ್ ಭಟ್