Monday, September 17, 2018

ಮುಪ್ಪು


ಜೀವನದ ಮಜಲುಗಳ ಕಂಡ ಮುದುಕ
ಉಲ್ಲಾಸಗೊಳ್ಳುತಿದ್ದ ನೆನೆದು ತಾರುಣ್ಯದ ಬದುಕ
ಅನುಭವದ ಬುತ್ತಿ ಬಿಚ್ಚಿ ಉಣಿಸುತಿದ್ದ ಮೊಮ್ಮಗನಿಗೆ
ತಾನೂ ಲೀನನಾಗಿ ವಿಹರಿಸುತಿದ್ದ ಅರೆಗಳಿಗೆ

ಅಂದಿತ್ತು ದೈತ್ಯ ಮರಗಳನ್ನು ಉರುಳಿಸುವ ಮೈಕಟ್ಟು
ಇಂದು ನೆಡೆಯಲಾಗುತ್ತಿಲ್ಲ ಬಿದಿರಿನ ಕಟ್ಟಿಗೆಯ ಬಿಟ್ಟು
ವಿಧಿ ಹಿಡಿದಿಹನು ನಮ್ಮೆಲ್ಲರ ಜುಟ್ಟು
ಅನುಭವಿಸಲೇ ಬೇಕು ಅವನು ಕೊಡುವ ಪೆಟ್ಟು

ಮೊಮ್ಮಗನು ಬಯಸುವನು ತಾತನ ಸಂಗವನು
ಬೇಡವೆನ್ನುವರಾರು ಕಳೆತ ಮಾವಿನ ಸಿಹಿಯನು
ಮೊಮ್ಮಗನು ಜಗದ ವಿಕಾರ ಕಾಣದ ಈಚಲು
ತಾತನು ಜಗದ ವಿಕಾರಗಳಿಗೆ ಮೈಯೊಡ್ಡಿದ ಹಣ್ಣಿನ ಗೊಂಚಲು

ಸಿಹಿಯ ನೀಡುವರು ಈ ಈರ್ವರು
ಮೊಮ್ಮಗನು ಆರಂಭದ ಅರೆಗಳಿಗೆ
ತಾತನು ಜೀವನದ ಕೊನೆ ಘಳಿಗೆ
ತಲೆಗೊಡಲೆ ಬೇಕು ಎಲ್ಲರು ಕಾಲದ ಉರುಳಿಗೆ.....
   
                        ✍ರಚನೆ
                 ಶ್ಯಾಮ್ ಪ್ರಸಾದ್ ಭಟ್

1 comment: