ಭಾಗ 1
ನಿದ್ದೆಗಣ್ಣಿನಲ್ಲೇ ....ಅಮ್ಮಾ... ಅಮ್ಮಾ....ಎನ್ನುತ್ತಿದ್ದೇನೆ...
ಲೇ ......ಶ್ರಾವಣಿ ಲೇ ....ಶ್ರಾವಣಿ....ಎದ್ದೇಳೆ ಯಾಕೆ ಕನವರಿಸ್ತಿದಿಯಾ....ಎಂದು ಯಾರೋ ನನ್ನನ್ನು ತಟ್ಟಿ ಎಬ್ಬಿಸುತ್ತಿರುವಂತಾಗಿ ಧಡಕ್ಕನೆ ಎದ್ದು ಕೂತೆ...
ಎದುರಿಗೆ ಸುಮಿತ್ರ ಚಿಕ್ಕಮ್ಮ .....ನಾನು ಏನು ತಿಳಿಯದವಳಂತೆ ಅಮ್ಮ ಎಲ್ಲಿ ಸುಮ್ಮಿ ಎಂದೆ...ಲೇ ಕನಸು ಕಾಣ್ತಿದಿಯೇನೆ...ನಿನ್ನಮ್ಮ ಮೈಸೂರಲ್ಲಿದ್ದಾಳೆ....ನೀನು ಇವಾಗ ಮಂಗಳೂರಲ್ಲಿ ಇದಿಯಾ....ಎಂದು ನಗುತ್ತ ಇರು ಕಾಫಿ ಮಾಡ್ಕೊಂಡು ಬರ್ತೀನಿ ಎಂದು ಅಡುಗೆ ಮನೆಗೆ ಹೋದರು .....ನಿದ್ದಗಣ್ಣಿನಲ್ಲಿದ್ದ ನಾನು ಕಣ್ಣುಜ್ಜುತ್ತ...ಅರೇ ಹೌದಲ್ವ....
( ಹಿಂದಿನ ದಿನ)
ಅಮ್ಮ ಅಮ್ಮ ಸುಮ್ಮಿ ಚಿಕ್ಕಮ್ಮನ ಮನೆಗೆ ಹೋಗ್ಬರ್ತಿನಿ ಇಷ್ಟು ದಿನ ಮನೆ ಬಿಟ್ಟರೆ ಕಾಲೇಜು....ಕಾಲೇಜು ಬಿಟ್ಟರೆ ಮನೆ ಅಂತ ಸಾಕಾಗಿ ಹೋಗಿದೆ ...ಒಂದೆರಡು ದಿನ ಹಾಯಾಗಿ ಸುಮ್ಮಿ ಆಂಟಿ ಮನೆಗೆ ಹೋಗ್ಬರ್ತಿನಿ....ಪ್ಲೀಸ್ ಅಮ್ಮಾ...
ಹೇ ಸುಮ್ನಿರು ಬೇಸಿಗೆ ರಜೆಗೆ ಅವಳೇ ಮಕ್ಕಳನ್ನ ಕರ್ಕೊಂಡು ಇಲ್ಲಿಗೇ ಬರ್ತಾಳೆ ಅವಾಗ್ಲೇ ಕಣ್ತುಂಬ ನೋಡುವಂತೆ ನಿಮ್ ಸುಮಿತ್ರ ಆಂಟಿ ನಾ...
ನೀನ್ ಹೋದ್ರೆ ಎಲ್ಲಾ ಕೆಲಸ ನನ್ನೊಬ್ಬಳ ತಲೆ ಮೇಲೆ ಬೀಳುತ್ತೆ....ನಿಮ್ಮಣ್ಣ ....ನಿಮ್ಮ ಅಪ್ಪ ಕಾಫಿ ಕುಡಿದಿದ್ ಲೋಟ ಆ ಕಡೆಯಿಂದ ಈ ಕಡೆಗಿಡಲ್ಲ....ಅಂಥ ಸೋಮಾರಿಗಳನ್ನ ಕಟ್ಕೊಂಡು ನನ್ನ ಸೊಂಟ ಬಿದ್ದೋಗುತ್ತೆ.....
ಅಮ್ಮಾ ....ಪ್ಲೀಸ್ ಅಮ್ಮಾ......ನಾನ್ ಎಲ್ಲಿಗೂ ಹೋಗಿಲ್ಲ ....ನಾನು ಮನೇಲೇ ಇದ್ದು ಇದ್ದು ....ಬಾವಿಯೊಳಗಿನ ಕಪ್ಪೆ ಅಗೋಗ್ತೀನಿ ಅಷ್ಟೇ....ಅಮ್ಮಾ..... ಅಮ್ಮಾ........
ಸರಿ ಹೋಗು ಮಾರಾಯಿತಿ.....ನನ್ ಜೀವ ತಿನ್ಬೇಡ...ನಿಮ್ ಅಪ್ಪ ಏನಂತಾರೋ ಒಂದು ಮಾತು ಕೇಳು...ಅಪ್ಪಂಗೆ ಗೋಲಿ ಹೊಡಿ ...ನನ್ ಮಾತಿಗೆ ಯಾವತ್ತೂ ಇಲ್ಲ ಅನ್ನಲ್ಲ....ಅವ್ರೇನ್ ನಿನ್ ಥರಾ ನಾ.. ಎಂದೆ.
ಏನಂದೆ...ಎಂದು ಲಟ್ಟಣಿಗೆ ಹುಡುಕುವಷ್ಟರಲ್ಲಿ ನನ್ನ ರೂಮಿಗೆ ಬಂದು ಬಾಗಿಲು ಹಾಕಿಕೊಂಡೆ....ಒಂದು ವಾರಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ತುಂಬಿಟ್ಟು ಕೊಂಡು....
ಅಪ್ಪ ....ಅಪ್ಪಾ....
ಹೊರಗೆ ಕಾಫಿ ಕುಡಿಯುತ್ತಾ ನ್ಯೂಸ್ ಪೇಪರ್ ಹಿಡಿದು ಕುಳಿತಿದ್ದ ಅಪ್ಪನಿಂದ ನ್ಯೂಸ್ ಪೇಪರ್ ಕಸಿದುಕೊಂಡು ಟೇಬಲ್ ಮೇಲಿಟ್ಟೆ....
ಏ ....ಯಾಕೆ ಹುಡುಗಿ ಇಂಪಾರ್ಟೆಂಟ್ ನ್ಯೂಸ್ ಇತ್ತು ಕೊಡಿಲ್ಲಿ ಎಂದು ನ್ಯೂಸ್ ಪೇಪರ್ ತೆಗೆದುಕೊಳ್ಳಲು ಬಾಗಿದರು .....
ನಾನು ಅವರಿಂದ ಇನ್ನೂ ಸ್ವಲ್ಪ ದೂರಕೆ ನ್ಯೂಸ್ ಪೇಪರ್ ಸರಿಸಿ....ಇವಾಗ ನಾನು ಏನೋ ಒಂದು ಕೇಳ್ತೀನಿ ಇಲ್ಲ ಅನ್ಬಾರ್ದು ಸರಿ ನಾ ಅಪ್ಪ...ಎಂದೆ..
ಹುಟ್ದಾಗಿಂದ ಏನೋ ಒಂದು ಕೇಳ್ತೀನಿ ಏನೋ ಒಂದು ಕೇಳ್ತೀನಿ ಅಂತ ಕೇಳಿ ಕೇಳಿ ನೂರೊಂದು ಕೇಳಿದಿಯಾ ಕೆಲಸನೂ ಸಾಧುಸ್ಕೊಂಡಿದಿಯಾ....ಇವಾಗೇನೂ ಹೊಸ ಅಪ್ಲೀಕೇಸನ್ನು.....
ಅಪ್ಪಾ.... ತಮಾಷೆ ಸಾಕು ....ನಾನು ಸುಮ್ಮಿ ಆಂಟಿ ಮನೆ ಗೆ ಹೋಗ್ಬರ್ಲಾ.....
ಯಾರೇ ಅದು ಸುಮ್ಮಿ ಆಂಟಿ ....
ಹೇ ಸುಮಿತ್ರ ಚಿಕ್ಕಮ್ಮ ಕಣಪ್ಪ ....ಹೋ ಸುಮಿತ್ರ ನಾ....ಹಾಗೇ ಲಕ್ಷಣವಾಗಿ ಸುಮಿತ್ರ ಅಂತ ಪೂರ್ತಿ ಹೇಳು ಸುಮ್ಮಿ ..ಡುಮ್ಮಿ ಅಂದ್ರೆ ನಂಗೇನ್ ಗೊತ್ತಾಗುತ್ತೇ...
ಅಪ್ಪಾ....ಜೋಕ್ ಸಾಕು ಇವಾಗೇನ್ ಹೋಗ್ಲಾ ಬೇಡ್ವಾ ಹೇಳು....
ಅಮ್ಮ ಏನಂದ್ಲು ಮಗ್ಳೇ....
ಅಮ್ಮ ಹೋಗು ಅಂದ್ರು ....ಅಪ್ಪನ್ನು ಒಂದ್ ಮಾತು ಕೇಳು ಅಂದ್ರು..... ಹೇಳಿ ಅಪ್ಪ ಹೋಗ್ಲಾ....?
ಹೋಂ ಮಿನಿಸ್ಟರ್ ಓಕೆ ಅಂದಮೇಲೆ ಮುಗೀತು....ಹೋಗ್ ಬಾ....ಜೋಪಾನ....ಯಾವತ್ತೂ ಹೊರ್ಡೋದು?..
ಇವತ್ತೇ ಅಪ್ಪ ಒಂಬತ್ ಗಂಟೆಗೆ ಹೊರ್ಡೋದು...ಸಂಜೆ ಅಷ್ಟ್ರಲ್ಲಿ ಸುಮ್ಮಿ ಮನೆಲಿ ಇರ್ತೀನಿ...ಎಂದು ರೂಮಿಗೆ ಹೋಗಿ ಅವಸರದಲ್ಲಿ ಹೊರಟು.....ಅಮ್ಮ ಮಾಡಿದ್ದ ತಿಂಡಿ ತಿಂದು
ಅಪ್ಪನಿಂದ ಬಸ್ ಸ್ಟಾಪ್ ಗೆ ಡ್ರಾಪ್ ಮಾಡಿಸಿಕೊಂಡು ...ಮೈಸೂರು ಮಂಗಳೂರು ಬಸ್ ಹತ್ತಿ ಕುಳಿತೆ....ಮೈಸೂರು - ಹಾಸನ - ಸಕಲೇಶಪುರ ಶಿರಾಡಿ ಘಾಟಿ ಹಾದು- ಮಂಗಳೂರು ಹಾದಿಯಾಗಿ ಬಸ್ ಸಂಜೆ ವೇಳೆಗೆ ಮಂಗಳೂರು ತಲುಪಿತು ....ಬಸ್ ಸ್ಟಾಪ್ ನಿಂದ ಆಟೋ ಹಿಡಿದು ಚಿಕ್ಕಮ್ಮನ ಮನೆ ತಲುಪಿ ಸರ್ಪ್ರೈಸ್ ಕೊಡೋಣ ಎಂದು ಕೊಂಡರೆ ಅಮ್ಮ ಇಪ್ಪತ್ತು ಸಲ ಚಿಕ್ಕಮ್ಮನಿಗೆ ಕರೆ ಮಾಡಿ ಲಾವಣಿ ಬಂದ್ಲಾ ಎಂದು ವಿಚಾರಿಸಿದ್ದರಿಂದ ...ಮೊದಲೇ ವಿಷಯ ತಿಳಿದಿದ್ದ ಚಿಕ್ಕಮ್ಮ ಅಡುಗೆ ಮಾಡಿ ಕಾದಿದ್ದಳು...ನಾನು ಚಿಕ್ಕಮ್ಮನ ಮನೆ ತಲುಪುವಷ್ಟರಲಿ ರಾತ್ರಿ ಏಳು ಸರಿದು ಎಂಟಾಗುತಿತ್ತು...ಎಲ್ಲರೂ ಒಟ್ಟಿಗೆ ರಾತ್ರಿ ಊಟ ಮಾಡಿ ಮಲಗಿದೆವು....
ಕಾಫಿ ತಗೋಳೇ.
ರಾತ್ರಿ ಒಳ್ಳೆ ನಿದ್ರೆ ಅನ್ಸುತ್ತೆ ಮಹಾರಾಣಿಗೆ ರೂಮಿಂದ ಗೊರಕೆ ಸೌಂಡ್ ಬರ್ತಿತ್ತು ಕಣೇ....
ಹೇ ಸುಮ್ನಿರು ಸುಮ್ಮಿ....ಎಂದು ಕಾಫಿ ಲೋಟ ಹಿಡಿದು ಹೊರ ಬಂದೆ ಸಣ್ಣಗೆ ಸೋನೆ ಮಳೆ ಸುರಿಯುತಿತ್ತು....ಗುಡ್ಡದ ಮೇಲಿನ ಮನೆ....ಸುತ್ತಲೂ ಹೂ ಗಿಡಗಳ ಕೈ ತೋಟ...ಮಳೆ ನೀರಿನಲ್ಲಿ ಮಿಂದೆದ್ದು ಹಸಿರಿನಿಂದ ಕಂಗೊಳಿಸುತ್ತಿದ್ದವು....ಚಿಕ್ಕಮ್ಮ ತಮ್ಮ ಮನೆಯಿಂದ ನಾಲ್ಕೆಜ್ಜೆ ದೂರವಿರುವ ಗುಡ್ಡದ ಕೆಳಗಿನ ಮನೆಯಿಂದ ಪಲ್ಯಕೆ ಕೆಸುವಿನ ಎಲೆ ತರಲು ಹೋಗಿದ್ದರು....ನಾನು ಹಾಗೇಯೇ ಕೈಯಲ್ಲಿ ಕಾಫಿ ಲೋಟ ಹಿಡಿದೇ...ನಾಲ್ಕು ಹೆಜ್ಜೆ ಹಾಕಿದೆ..... ಕೆಳಗಿನ ಮನೆಯ ಅಂಟಿ....ಏನ್ರೀ ಸುಮಿತ್ರ ನಿಮ್ ಮನೆಗೆ ಯಾರೋ ನೆಂಟ್ರು ಬಂದಿದ್ದಾರೆ....ಎಂದರು ಅಕ್ಕನ ಮಗಳು ಶ್ರಾವಣಿ ಅಲ್ವ ಜಾನಕಿ ಅಕ್ಕ ಎಂದರು...
ಅಯ್ಯೋ ಹೌದಾ ಮರಾಯಿತಿ ಗುರುತೇ ಸಿಗ್ಲಿಲ್ಲ...
ನೀವು ಇವಳನ್ನ ಸಣ್ಣ ಮಗುವಿನ ವಯಸ್ಸು ಇದ್ದಾಗ ನೋಡಿದ್ದು ಸುಮಾರು ವರ್ಷಗಳೇ ಕಳೀತಲ್ಲ....ನೀವು ಇಲ್ಲಿ ಇರೋ ಚೆಂದದ ಮನೆ ಬಿಟ್ಟು ಮೈಸೂರಿಗೆ ಕೆಲಸದ ಬೆನ್ನತ್ತಿ ಹೋಗಿದ್ರಿ ಈಗ ಬಂದು ಗೂಡು ಸೇರಿದ್ದೀರಿ....ಹೇಗೆ ಗೊತ್ತಾಗ್ತದೆ ಹೇಳಿ ಎಂದರು ಚಿಕ್ಕಮ್ಮ...
ಹೊಸದಾಗಿ ಪರಿಚಯ ಆದ ಕೆಳಗಿನ ಮನೆಯ ಜಾನಕಿ ಆಂಟಿ ನಗುತ್ತ....ಏನ್ ಒದಿದ್ಯಾ ಮಗಳೇ ಎಂದರು ಬಿಎ ಆಯ್ತು ಈಗ ಬಿ.ಇಡಿ ಮಾಡ್ತಿದೀನಿ ಎಂದೆ......
ಎಲ್ಲಿ ಓದ್ತಿರೋದು ಮಗಳೇ...
ಮೈಸೂರಿನಲ್ಲೇ...ಸರಸ್ವತಿ ಕಾಲೇಜು ಎಂದೆ....
ಅಯ್ಯೋ ಹೌದಾ? ಅಲ್ಲೇ ನನ್ನ ಮಗ ಕೂಡ ಒದ್ತಿರೋದು ಎಂದು ಮುಖವನ್ನರಳಿಸಿದರು....
ಆಶ್ಚರ್ಯದಿಂದ ....ಹೌದಾ? ಹೆಸರೇನು ಎಂದೇ...
ವಿವೇಕ್ ಎಂದರು....
ಹೆಸರು ಕೇಳಿದೊಡನೆ ನನ್ನ ಎದೆ ಬಡಿತ ಜೋರಾಯಿತು....
ವಿವೇಕ ....ಲೋ ವಿವೇಕ ...ಬಾರೋ ಇಲ್ಲಿ .. ನಿನ್ ಕಾಲೇಜಲ್ಲೇ ಒದ್ತಿರೋ ಹುಡುಗಿ ಬಂದಿದಾಳೇ....
ಮುಂದುವರೆಯುವುದು.....
ರಚನೆ
ಶ್ಯಾಮ್ ಪ್ರಸಾದ್ ಭಟ್