Monday, December 27, 2021

ಜಿಮ್ಮಿಯ ನೆನಪು

 


ಅವ್ವಾರೇ.....ಅವ್ವಾರೇ....


ಸೀತಮ್ಮ ಒಳಗಿನಿಂದ ಹೊರಬಂದವಳೇ....

  ಯಾರಪ್ಪ ನೀವು ? ..... ಯಾರು ಬೇಕಿತ್ತು....?


ಅವ್ವಾ.... ಯಜಮಾನ್ರಿಲ್ವೇನವ್ವ...!


ಇದಾರೇ...ತೋಟ ಸುತ್ಕೊಂಡ್ ಬರೋಕೆ ಹೋಗಿದಾರೆ...

 ಯಾಕೆ? ಏನಾದ್ರು ಹೇಳೋದಿತ್ತ?..


ಅಷ್ಟರಲ್ಲಿ.....ಜಿಮ್ಮಿ...ಮನೆಗೆ ಬಂತು...ಸೀತಮ್ಮನ ಕಾಲು ನೆಕ್ಕುತ್ತ....ಮನೆಗೆ ಬಂದಿದ್ದ ಅಪರಿಚಿತರನ್ನು ಕಂಡು ಬೊಗಳಲು ಶುರು ಮಾಡಿತು....

  

ಬೌ .....ಬೌ....ಬೌ...


ಸೀತಮ್ಮ ತಕ್ಷಣ ಎಚ್ಚೆತ್ತು.....ಜಿಮ್ಮಿ ಸುಮ್ನಿರು....ನಡೀ ಗೂಡಿಗೆ....ಎಂದೊಡನೆ ....ದೈತ್ಯಾಕಾರದ ಜಾತಿ ನಾಯಿ ಜಿಮ್ಮಿ....ಬೊಗಳುವುದನ್ನು ನಿಲ್ಲಿಸಿ ಗೂಡಿನೊಳಗೆ ಹೋಗಿ ಮಲಗಿತು....


ತಿಮ್ಮ ಮನಸ್ಸಿನಲ್ಲೇ ಅಂದುಕೊಂಡ ಎಷ್ಟಾದರು ದೊಡ್ಮನೆ ನಾಯಿ ...ದೊಡ್ಮನೆ ನಾಯಿನೇ....ಹೆಂಗ್ ಮಾತ್ ಕೇಳುತ್ತೇ....ಹೆಂಗ್ ಮಾತ್ ಕಲ್ಸವ್ರೆ....ನಮ್ಮನೇ ಕರಿಯಾನು ಇದಾನೆ....ಹೇಳಿದ್ ಒಂದ್ ಮಾತು ಕೇಳಲ್ಲ...ಕೂರು ಅಂದ್ರೆ ನಿಲ್ತಾನೆ...ನಿಲ್ಲು ಅಂದ್ರೆ ಓಡ್ತಾನೆ....ಓಡು ಅಂದ್ರೆ ಮಲಗ್ತಾನೆ....ಎಂದು ಮನದಲ್ಲೇ ಅಂದು ಕೊಂಡ...



ಸೀತಮ್ಮ ಮನೆಗೆ ಬಂದ ತಿಮ್ಮನಿಗೆ...ಹೀಗೆಂದರು. 

ಇರಪ್ಪಾ ನಮ್ಮನೇ ಜಿಮ್ಮಿ ಬಂತು ಅಂದ್ರೆ ಅವ್ರು ಹಿಂದೆ ಬರ್ತಿರ್ತಾರೆ ಅಂತ....ಇನ್ನೇನು ಸ್ವಲ್ಪ ಹೊತ್ತಲ್ಲೇ ಬರ್ತಾರೆ....


ಮಂಡಿವರೆಗಿನ ಬೂಟು ....ತಲೆಗೆ ವೃತ್ತಾಕಾರದ ಟೊಪ್ಪಿ ...ಬಾಯಲ್ಲಿ ಸಿಗರೇಟು...ದಪ್ಪ ಮೀಸೆ ಕೋಲು ಮುಖದ ವ್ಯಕ್ತಿ ತಿಮ್ಮನನ್ನು ಕಂಡು ಸಿಗರೇಟನ್ನು ಹಲ್ಲಿನಿಂದ ಕಚ್ಚಿ ಹಿಡಿದು ನಗುತ್ತ ....ಏನೋ ತಿಮ್ಮಯ್ಯ ನಮ್ಮನೇವರ್ಗೂ ಪಾದ ಬೆಳ್ಸಿದೀಯ...ಏನ್ ಸಮಾಚಾರ ಎಂದರು ....


ತಿಮ್ಮ ಯಜಮಾನ್ರನ್ನ ನೋಡಿದೊಡನೆ ತನ್ನ ಮುವತ್ತೆರಡು ಹಲ್ಲು ಬಿಡುತ್ತ.....ಏನೂ ಇಲ್ಲ ಯಜಮಾನ್ರೇ....ಹೀಗೇ ಒಂದಲ್ಲ ಒಂದು ಸಮಸ್ಯೆ ಬೆನ್ ಹಿಡ್ಕಂಡಾಗ ನಿಮ್ಮತ್ರುಕ್ ಬರ್ದೆ ಇನ್ನೇಲ್ ಹೋಗ್ತಾನೆ ಈ ಬಡ ತಿಮ್ಮ...

ಏನು ನೀನು ಬಡವನೇನೋ...ಅರೇಳೆಕ್ರೆ ಜಮೀನು ಒಡೆಯ....

ಎಲ್ಲಾ ಇಂದ್ರಮ್ಮನ ಕೃಪೆ ಎಂದ ತಿಮ್ಮ..


ಏನೇ..ಸೀತು..

ತಿಮ್ಮಂಗೆ ಒಂದು ಲೋಟ ಕಾಫಿ ನಂಗೂ ಒಂದ್ ಲೋಟ ತಗೋ ಬಾ...ಎಂದು ಬಾಲ್ಕನಿಯಲ್ಲಿ ಇದ್ದ ಕುಶಾನಿನ ಕುರ್ಚಿಯ ಮೇಲೆ ಕುಳಿತು ತಮ್ಮ ಮಂಡಿವರೆಗಿನ ಬೂಟ್ಸ್ ಬಿಚ್ಚಿದರು...ಹೆಬ್ಬೆರಳಿನ ಸಂದಿಯಲಿ ರಕ್ತ... ಒಂದೇ ಸಮನೆ ರಕ್ತ ಸುರಿಯುತಿತ್ತು....ಈ ಮಳೆಗಾಲ ಬಂತು ಅಂದ್ರೆ ಸಾಕು ಕಣಾ ತಿಮ್ಮ....ಈ ಹಾಳಾದ್ ಜಿಗಣೆ ಎಲ್ಲಿರ್ತಾವೋ ನಮ್ ರಕ್ತ ಹೀರಾಕೆ...


ಏನೇ....ಸೀತು.... ಹಂಗೆ ಒಂದ್ ನಿಂಬೇ ಹುಳಿ ತಗಾ ಬಾ....ಹಾಳಾದ್ ಜಿಗಣೆ


ಬೂಟ್ಸನ್ನು ಕೊಡವಿದರು ಅದರಿಂದ ಹೊರಬಿದ್ದ ಜಿಗಣೆ ಕಂಡು ಈ ಹಾಳಾದ್ ಜಿಗಣೆ ನೋಡಿಲ್ಲಿ ರಕ್ತ ಕುಡುದು ಹೊಟ್ಟೆ ತುಂಬುಸ್ಕಂಡ್ ಹೆಂಗ್ ಬಿದ್ಕಂಡದೆ....


ಅಪ್ಪನಿಗೆ ನಿಂಬೆ ಹುಳಿ ತಂದು ಕೊಟ್ಟ ಮಗಳು ಜಾನವಿ

ಅಪ್ಪ ಜಿಗಣೆ ಮೇಲೆ ಹುಳಿ ಹಿಂಡುತಿದ್ದದನ್ನ...ಅದು ಒದ್ದಾಡುತಿದ್ದದನ್ನ ಕೌತುಕದ ಭಾವದಿಂದ ನೋಡುತಿದ್ದಳು...

 ಜಾನವಿ ಇನ್ನು ಆರನೇ ತರಗತಿ ಓದುತಿದ್ದ ಹುಡುಗಿ ಈ ದಿನದ ಹಿಂದಿನ ದಿನ ಜಾನವಿಗೆ ತಮ್ಮ ಸೈನ್ಸ್ ಟೀಚರ್ ಹೇಳಿಕೊಟ್ಟ ಬ್ಲಡ್ ಗ್ರೂಪ್ ಗಳ ಬಗೆಗಿನ ಪಾಠ ತಲೆಗೆ ತಟ್ಟನೆ ಏನೋ ಹೊಳೆದಂತವಳಾಗಿ...


ಅಪ್ಪ ನನ್ ಬ್ಲಡ್ ಗ್ರೂಪ್ O + positive ಅಂತ ಹೇಳಿದ್ದೆ....ನಿಂದ್ಯಾವ್ದಪ್ಪ....? 


ನಂದೂ O positive ಮಗಳೇ....


ಅಪ್ಪಾ....!!

ಈ ಜಿಗಣೆ ಎಲ್ಲಾರ್ ರಕ್ತ ನೂ ಕುಡಿಯುತ್ತಲ್ಲ....

  ಈ ಜಿಗಣೆದು ಯಾವ್ ಬ್ಲಡ್ ಗ್ರೂಪ್ ಅಪ್ಪ...?


ಉತ್ತರ ತಿಳಿಯದೇ ತಬ್ಬಿಬ್ಬಾಗಿ....

   ಹೇ ನಿಂದೊಂದ್ ಪ್ರಶ್ನೆ ನಂಗ್ ಕೆಲ್ಸ ಇದೆ ಹೋಗು ಆಟ ಆಡ್ಕೋ ಹೋಗು....ಮರಿ.. ಎಂದು ಗಂಭೀರದಿಂದ ಉತ್ತರಿಸಿ....


ಮತೇ ಏನ್ ತಿಮ್ಮಯ್ಯ ಬಂದ ಸಮಾಚಾರ...ಎಂದು ತನ್ನ ದೃಷ್ಟಿಯನ್ನ ತಿಮ್ಮನ ಮೇಲೆ ಹಾಯಿಸಿದ


ತಿಮ್ಮ ಯಜಮಾನರನ್ನ ನೋಡಿ ಹೊಸದೇನಿದೇ ಅಯ್ಯ ಅದೇ ಹಳೇ...ವಿಷಯ ನೇ...ನಿಮ್ಮಿಂದ ಮಾತ್ರ ಆಗೋದು...


ಹೋ .... ಏನ್ ಜಮೀನಿಗೆ ಹಂದಿ ನುಗ್ಗಿದವಾ?..


ಹು...ಯಜಮಾನ್ರೇ....ಈ ಹಾಳಾದ್ ಹಂದಿ ಮುಂಡೆಗಂಡುಂದು....ರಾತ್ರೋ ರಾತ್ರಿ ನುಗ್ಗಿ... ಹಾಕಿರಾ ಎಲ್ಲಾ ಫಸಲು ನನ್ನ  ಕೈಗೇ ಬರೋ ಅಷ್ಟರಲ್ಲಿ ಅದು ಕಾಲಲ್ಲಿ ತುಳ್ದಾಕ್ತಾ ಐತೇ....ಏನ್ ಮಾಡದು...


ಹೋ ಹಾಗಾ ಸಮಾಚಾರ ಏನಾರು ಮಾಡನ ತಗಾ...

ಆಷ್ಟರಲ್ಲಿ ಸೀತಮ್ಮ ಕಾಫಿ ತಂದಳು

 ಸೀತಮ್ಮ ತಂದ ಕಾಫಿ ಲೋಟವನ್ನ  ತಿಮ್ಮನಿಗೆ ಕೊಟ್ಟು ಕುಡಿಯಲು ಹೇಳುತ್ತಾ...


ಮತೇ.... ಮಗಳ್ ಮದುವೇ ಏನ್ ಮಾಡುದ್ಯೋ...

 ಅದ್ಯಾವ್ದೋ ಗಂಡು ಗೊತ್ತಾಗಿದೆ ಅಂತಿದ್ದೆ...


ಅಯ್ಯೋ ಅಂತಿದ್ದೆ...ಆಗಾ..

ಆ ಪಾಪಿ ಮುಂಡೇ ಗಂಡನ್ ನಿಜವಾದ್ ಬಣ್ಣ ಗೊತ್ತಾದ್ಮೇಲು ಮಗಳು ಕೊಡಕಾಯ್ತದ....

ಅವುನ್ಗೇ ಈಗಾಗಲೇ ಮದುವೆ ಆಗಿತ್ತಂತೆ ಅದ್ನ ಮುಚ್ಚಿಟ್ಟು ನಂಗಿರೋ ಒಬ್ಳೆ ಮಗುಳ್ನ ಮದ್ವೆ ಆದ್ರೆ ಆಸ್ತಿ ಎಲ್ಲಾ ತನ್ನೆಸ್ರುಗಾಯ್ತದೇ ಅಂತ ಐಡಿರಿಯಾ ಮಾಡಿದ್ನಂತೆ....


ಹೋ ಹೋ ಹಾಗಾ ಸಮಾಚಾರ....ಭಾಳ ಎಚ್ಚರಿಕೆಯಿಂದ ಇರಬೇಕು ಕಣಾ ತಿಮ್ಮಯ್ಯ 

... ಈಗಿನ ಕಾಲದಲ್ಲಿ ಒಳ್ಳೆವ್ನಾರು ಕೆಟ್ಟವನಾರು...ಮುಖನೋಡಿ ಹೇಳಕಾಗುತ್ತ ಹೇಳು...


ಹು ಕಣ್ರ ಅಯ್ಯ ಯಾವ್ ಹುತ್ತದಾಗೇ ಯಾವ ಹಾವಿರ್ತದೇ ತಿಳಿಯಾಕಿಲ್ಲ...


ಸರಿ ಯಜಮಾನ್ರೆ...ಹೊತ್ತು ನೆತ್ತಿಮ್ಯಾಗ್ ಬರೋ ಅಷ್ಟರಲ್ಲಿ ಊರ್ ಸೇರ್ಕತಿನಿ.... ಎಂದ ತಿಮ್ಮಯ್ಯ 


ಅದಕ್ಕೆ ರಮೇಶಪ್ಪ ನಿಮ್ಮೂರಿಗ್ ಹೋಗೋ ದಾರಿ ಲೀ ಕಾಡಿನ ಮರಾನೇ ತುಂಬೋಗಿದವೇ....ಬಿಸಿಲು ಬಂದು ನಿನ್ ನೆತ್ತಿ ಸುಡಾಕೆ ಮದ್ಯಾಹ್ನ ಆಗ್ಬೇಕು..


ಬಾಯ್ ಮಾತಿಗ್ ಹೇಳ್ದೆ ಕಣೇಳಿ

ಬೆಳಗ್ಗೆ ಜಿಂಕೆ ಹಿಂಡು ದಾರಿಲೇ ನಿತಿದ್ವು ಅಂತೀನಿ .. ನನ್ ನೋಡಿದ್ ಕೂಡ್ಲೆ  ಓಟ ಕಿತ್ವು .....ಸರಿ ಅಯ್ಯಾ...ನನ್ ಹಂದಿ ಬಗ್ಗೆ ಸ್ವಲ್ಪ ಇಚಾರ ಮಾಡಿ ಎಂದ ತಿಮ್ಮಯ್ಯ ..


ರಮೇಶಪ್ಪ ನಗುತ್ತ ಅದು ನಿನ್ ಹಂದಿಯಲ್ಲ ಕಣೋ ಕಾಡು ಹಂದಿ...ಅದು ನಮ್ ಕೈನಾಗ್ ಸಿಕ್ ಮೇಲೆ ನಮ್ಮದೇ ಅಲ್ಲುವ್ರ ನೆನುಸ್ಕಂಡ್ರೆ ಬಾಯಿ ನೀರ್ ಸುರುಸ್ತದೆ.. ಎಂದು ನಗುತ್ತಾ...ಬತ್ತೀನಿ....ಬುದ್ದಿ...ಬತ್ತಿನಿ ಕಣ್ರವ್ವ...

ಇಬ್ಬರಿಗೂ ಕೈ ಮುಗಿದು ಹೊರಟ ತಿಮ್ಮಯ್ಯ...


ರಮೇಶಪ್ಪನು ನಗುತ್ತಾ....ಸೀತು...ಸೀತು...ಬಿಸಿ ನೀರು ಕಾದಿದಿಯೇನೇ...ಎಂದು ಮನೆ ಒಳ ನಡೆದ...


ಇತ್ತ ತಿಮ್ಮಯ್ಯ ನೆತ್ತಿ ಮೇಲೆ ಸೂರ್ಯ ಬಂದು ನೆತ್ತಿ ಸುಡೋ ಮೊದ್ಲು ಮನೆ ಸೇರ್ಕಂಬುಡ್ಬೇಕು ...ಈ ಕಾಡು ದಾರೀಲಿ ಸೂರ್ಯ ನೆಲಕ್ಕೆ ತಾಕಕ್ಕಿಲ್ಲಂದ್ರು....ಈ ಕಾಟಿ (ಕಾಡು ಕೋಣ)...ಎಲ್ಲಾ ದಾರಿ ಲೇ ನಿಂತಿರ್ತಾವೆ.. ಅಪ್ಪಿ ತಪ್ಪಿ ಅವುಗಳ್ ಕೈಗೆ ಸಿಕ್ಕಾಕಂಡ್ರೆ...ನನ್ ಕಥೆ ಮುಗುಸ್ತವೆ....ಎಂದು ಗುನಗುತ್ತ ಬೇಗ ಬೇಗ ಹೆಜ್ಜೆ ಇಟ್ಟು ನೆಡೆಯುತ್ತಿದ್ದ...


ಇತ್ತ ಕಡೆ ರಮೇಶಪ್ಪ ಸ್ನಾನ ಮುಗಿಸಿ...ಸೀತಾ ಸೀತಾ ಎಂದು ಹೆಂಡತಿಯನ್ನು ಕರೆದ ....ನಾನ್ ರೂಮಲ್ಲಿದಿನಿ ರೀ ಎಂದಳು... 

ರೂಮಿನ ಬಳಿ ಬಂದು ....ಯಾಕೇ ಸೀತು ಮಲಿಕೊಂಡಿದಿಯಾ...ಯಾಕ್ ಏನಾಯ್ತು..?.


ಬೆಳಗ್ಗೆಯಿಂದ ತಲೆ ಸಿಡಿತಾ ಇದೆ...ಶೀತಾ ..ತಲೆನೋವು..ಆಗ್ತಾ ಇಲ್ಲ...ಎಂದಳು

  ಸರಿ ಸರಿ ಮಲ್ಕೊ ಒಂದ್ಸಲ್ಪ ಶುಂಠಿ ಜಜ್ಜಿ ಕಾಫಿ ಮಾಡ್ತಿನಿ ಕುಡಿವಂತೆ...ಎಂದು ಅಡುಗೆ ಮನೆಗೆ ಹೋದ ರಮೇಶಪ್ಪ...


ಶುಂಠಿ ಜಜ್ಜಿ ..ಜೀರಿಗೆ ಮೆಣಸು ಪುಡಿ ಮಾಡಿ ನೀರಿಗೆ ಬೆರಸಿ ಸ್ವಲ್ಪ ಬೆಲ್ಲ ಹಾಕಿ ಕುದಿಯಲು ಇಟ್ಟ...



ಹೊರಗಿನಿಂದ 

ಸೀತವ್ವರೇ....ಸೀತವ್ವರೇ...


ಒಳಗಿನಿಂದ ರಮೇಶಪ್ಪ....ಯಾರು ..... ಬಂದೇ ..ಬಂದೇ..


ಹೊರ ಬಂದವನೇ ....ಊರಿನ  ಸೇಸಿಯನ್ನು ಕಂಡು.....ಏನ್ ಸೇಸಿ(ಶೇಷಮ್ಮ) ಸಮಾಚಾರ....ಎಂದ 


ಸೇಸಿ ಸೀತಮ್ಮರು ಇಲ್ವಾ ರಮೇಸಪ್ಪ....ಎಂದಳು


ಯಾಕ್ ನಂತವನೇ ಹೇಳು ಏನ್ ವಿಷ್ಯ ಎಂದ....


ಮತ್ತೆ ......ಸೀತಮ್ಮರಿಲ್ವ....ಎಂದಳು ಸೇಸಿ


ನಿಮ್ಮ ಸೀತಮ್ಮ....ಶೀತ ಆಗಿ ಮಲಿಕೊಂಡವ್ರೆ...ಅದೇನ್ ನಂತಾವನೇ ಹೇಳು...


ಸ್ವಲ್ಪ ಎಲೆ ಅಡಿಕೆ ಬೇಕಿತ್ತು....ಎಂದು ತನ್ನ ಎಲೆ ಅಡಿಕೆ ತಿಂದು ತಿಂದು ಕೆಂಪುಗಟ್ಟಿದ್ದ ಹಲ್ಲು ಬಿಟ್ಟು ನಕ್ಕಳು...


ಅಯ್ಯೋ ಅದ್ನೇಳಕೆ ನಿಮ್ ಸೀತಮ್ಮನೇ ಬೇಕಿತ್ತಾ...ಹಿಂದೆ ಹಿತ್ತಲಲ್ಲಿ ಎಲೆ ಬೀಳಿದೆ ಕಿತ್ಕ ಹೋಗು...


ಮತೇ ಅಡ್ಕೆ...ಎಂದಳು ಸೇಸಿ...

   ಅಂಗಳದಲ್ಲಿ ಒಂದೆರಡು ಉಂಡೆ ಅಡ್ಕೆ ತಕಂಡೋಗು...ಅಡ್ಕೆ ರೇಟ್ ಗಗನಕ್ಕೋಗಿದೆ..ಎಂದ...


ಅದುಕ್ಕೆ ಅಲ್ಲುವ್ರ ನಿಮ್ಮನೆಗ್ ಬಂದಿದ್ದು...ಎಂದು ಹೇಳಿ ಮತ್ತೆ ಕೆಂಪನೆ ಹಲ್ಲು ತೋರಿದಳು...


ಸರಿ ಸರಿ...ಸ್ವಲ್ಪ ಅವಳಿಗ್ ತಲೆ ನೋವು ಶೀತ ಅಂತೆ..ರಾಗಿ ವನ್ಕೊಟ್ಟೋಗು...ಎಂದು ರಮೇಶಪ್ಪ...ಕಾಫಿ ಗತಿ ನೋಡಲು ಅಡುಗೆ ಮನೆಗೋಡಿದ....


ಸೌದೆ ಒಲೆ ಹೊಗೆಯಾಡುತಿತ್ತು....ಥು ಹಾಳ್ಗೇಡಿದು....ಇಷ್ಟೊತ್ತಿಗ್ ಕುದ್ದಿರ್ತದೆ ಅಂತ ಮಾಡಿರೇ...ಕೆಟ್ ಕೂತದೆ....ಕೊಳಪೆ ತಗಂಡು ಊದಿ ಊದಿ ಹೊಗೆ ಗಂಟಲಿಗೋಗಿ ಕೆಮ್ಮದ ...


ಈ ಹೆಂಗುಸ್ರು ಕೆಲ್ಸ ಹೆಂಗುಸ್ರಿಗೆ ಸರಿ... ಎಂದು ಗೊನಗುತ್ತ...ಉರಿ ಹೊತ್ತಿಸಿದ ಸ್ವಲ್ಪ ಹೊತ್ತಿಗೆ ಕುದಿ ಬಂತು...ಸೋಸಿ...ಸೀತು ತಗಾ...ಸ್ವಲ್ಪ ಕುಡುದು ಮಲ್ಕ...ತಲೆನೋವು ಕಮ್ಮಿ ಆಗುತ್ತೆ...ಎಂದವನೇ...ಜಾನವಿ ಎಲ್ಲಿ ...ಎಂದ


ಹೊರಗೆಲ್ಲೊ ಆಟ ಆಡ್ತಿರ್ಬೇಕು ನೋಡಿ ಎಂದೊಡನೆ ....ಹೊರಗಿದ ಓಡಿ ಬಂದ ಜಾನು....ಏದುಸಿರು ಬಿಡುತ್ತಾ ಅಪ್ಪ ಅಪ್ಪ....ಮನೆ ಗೇಟಿನೋಳಗೆ   ದನ ನುಗ್ಗಿದವೇ.....ಜಿಮ್ಮಿ ಬೊಗಳಿ ಓಡುಸ್ತಿದೆ ನೀನು ಬಾ....ಎಂದು ಅಪ್ಪನ ಕೈ ಹಿಡಿದು ಎಳೆಯ ತೊಡಗಿದಳು...


ಮಗಳೊಂದಿಗೆ ಓಡಿ.....ತೋಟಕ್ಕೆ ನುಗ್ಗಿದ್ದ ಸುಬ್ಬಕ್ಕನ ಮನೆ ಹಸುಗಳನ್ನ ಓಡಿಸಿ....ಸುಬ್ಬಕ್ಕನ ಮನೆಗೋಗಿ ಹಸ ಕಟ್ಟಾಕಳಿ ಮರ್ರಾ ಎಂದು ಬೈದು ಬಂದ....



ಇತ್ತ ಕಡೆ ಮನೆಗೆ ತಲುಪಿದ್ದ ತಿಮ್ಮಯ್ಯ  .... ಸೋಮಿ ಸೋಮಿ ಎಂದು ಹೆಂಡತಿ ಕರೆಯುತ್ತಾ .......ತಿನ್ನಾಕ್ ಏನಾದ್ರು ತತ್ತಾ ....

ಅಲ್ಲಿ ಜಮೀನ್ ಕಡಿಕೋಗ್ಬೇಕು...ಎಂದವನೆ  ಕೈ ಕಾಲು ಮುಖ ತೊಳೆದು...ನೆಲದಲ್ಲಿ ಕುಳಿತ...

ಇತ್ತ ಸೋಮಿ ರೊಟ್ಟಿ ಕೆಸುವಿನ ಪಲ್ಯ ಹಿಡಿದು ತಂದು ರಮೇಶಪ್ಪನ್ ಮನೇಲೇ ಊಟ ಮಾಡ್ಕ ಬರ್ತೀರ ಅನ್ಕಂಡೆ...ಯಾಕೆ ಸೀತವ್ವ ಮನೆಯಾಗ್ ಇರ್ನಿಲ್ವ....


ಹೇ ಇದ್ರು ಕಾಪಿ ಕೊಟ್ಟು ಒಳಿಕ್ ಹೋಗಿದ್ ನಾನ್ ಹೊಂಟ್ ಮೇಲೆ ಈಚೆ ಕಡಿಕ್ ಬಂದಿದ್ದು....ಯಾಕೊ ಮೈ ಉಸಾರಿಲ್ದಂಗ್ ಕಾಣ್ತಿತ್ತು ಮಖ...ಎಂದು ಮೂರು ರೊಟ್ಟಿ ಮುರಿದು...ಜಮೀನಿಗೆ ಹೊರಟು ನಿಂತ


ಸೋಮಿ ನಾಳೆ ನಾಡಿದ್ರಲ್ಲಿ ಯಜಮಾನ್ರು ಬರ್ಬೋದು...ಹೇಳ್ ಬಂದಿದಿನಿ ಬಂದು ಹಂದಿಗೊಂದ್ ಗತಿ ಕಾಣುಸ್ತಾರೆ ಎಂದ....


ಸಂಜೆ ವೇಳೆಗೆ ಸೀತಮ್ಮನ ತಲೆ ನೋವು ಇಳಿದು....ತೋಟಕ್ಕೆ ಹೊರಟಿದ್ದ ಗಂಡನಿಗೆ ಕಾಫಿ ಕ್ಯಾನ್ ಕೊಟ್ಟಳು...


ಬೆಳಗ್ಗಿನ ವೇಶದಲ್ಲೇ ರಮೇಶಪ್ಪ ತೋಟದ ಕಡೆಗೆ ಹೊರಟರು

 .....ದಾರಿಯಲ್ಲಿ ಗೆಳೆಯ ರಾಜಪ್ಪ ಸಿಕ್ಕಿದ್ದರಿಂದ ಅವನನ್ನು ಜೊತೆಗೆ ತೋಟ ಸುತ್ತಾಕ್ಕೊಂಡು ಬರಾಣ ಬಾರೋ ಎಂದು ಕರೆದು ಜೊತೆಗೆ ಹೊರಟರು ....ರಸ್ತೆಗೆ ಎಡ ಭಾಗಕ್ಕೆ ತೋಟದ ಗೇಟು ಬಿದಿರಿನ ಗಳದಿಂದ ಮಾಡಿದ ಗೇಟು ತೆರೆದು ....ಮಣ್ಣಿನ ರಸ್ತೆಯಲ್ಲೆ ಮುಂದೆ ಸಾಗಿ.....ತೋಟಕ್ಕೆ ಬೇಸಿಗೆಗೆ ನೀರು ಹಾಯಿಸಲು ತೋಡಿಸಿದ್ದ ಕೆರೆ ತುಂಬಾ ನೀರು ಸಮೃದ್ಧವಾಗಿತ್ತು...ಅಲ್ಲೆ ಕೆರೆ ದಡದಲ್ಲಿ ಕುಳಿತು.....ಕಾಫಿ ಕ್ಯಾನಿನಲ್ಲಿ ತಂದಿದ್ದ ಕಾಫಿ ಕುಡಿಯುತ್ತ ಕಾಫಿ..ಮೆಣಸು ಇಳುವರಿ ..ಬೆಲೆ ಬಗೆಗೆ ಸ್ವಲ್ಪ ಮಾತನಾಡುತ್ತ.....

ಸಂಜೆಯ ವೇಳೆ ತೋಟದ ಹಳೇ ಮರಗಳಲ್ಲಿ ಗೂಡು ಕಟ್ಟಿಕೊಂಡ ಹಕ್ಕಿಗಳ ಹಿಂತಿರುಗುವಿಕೆಯ ವಿಹಂಗಮ ನೋಟ ಕಣ್ಮನ ಸೆಳೆಯಿತು....ಕೆಲವು ಬೆಳ್ಳಕ್ಕಿಗಳು ಕೆರೆಯ ನೀರಿನ ದಡದ ಬಗ್ಗಡ ಕೆರೆದು ಮೀನು ಹಿಡಿಯುತಿದ್ದವು....ಕೆಲವು ಮರಕುಟಿಗಗಳು ತಮ್ಮ ದೊಡ್ಡ ಕೊಕ್ಕಿನಿಂದ ಮರವನ್ನು ಕುಟ್ ಕುಟ್ ಕುಟ್ ಎಂದು ದೊಡ್ಡ ದೊಡ್ಡದಾಗಿ ಕೊರೆದು ಮನೆ ಮಾಡಿಕೊಂಡಿದ್ದವು...ತೋಟದ ತುಂಬೆಲ್ಲ ಬಗೆ ಬಗೆಯ ಹಕ್ಕಿಗಳ ಚಿಲಿಪಿಲಿ ಶಬ್ದ ....ಎಲ್ಲ ನೋವನು ಮರೆಸುತಿತ್ತು.....

ತೋಟದ ಗೇಟು ತೆಗೆದಿದ್ದರಿಂದ ಸಂಜೆ ಗೋಧೋಳಿ ಲಗ್ನದಲ್ಲಿ ( ಸಂಜೆಯ ಸಮಯ) ಮನೆಗೆ ಹೋಗುತಿದ್ದ ಪಟೇಲಪ್ಪನ ದನಗಳು ಗೇಟಿನೊಳಗೆ ನುಗ್ಗಿ ಬಾಳೆಗಿಡ ಮೆಯ್ಯುತಿತ್ತು.....ಅತ್ತಿತ್ತ ಕಣ್ಣಾಡಿಸುತ್ತ ರಾಜಪ್ಪನ ಕಣ್ಣಿಗೆ ಬಿದ್ದ ಹಸುಗಳನ್ನು ....ಅಯ್ಯೋ ಇವುಗಳ್ ಮನೆ ಹಾಳಾಗ ಎಂದು ಹಯ್ ಹಯ್ ಎಂದು ...ಗೇಟಿನಿಂದ ಆಚೆಗೆ ಅಟ್ಟಿ ಗೇಟು ಹಾಕಿದರು....ಪಟೇಲರ ಮನೆಯ ಆಳು ಚೆನ್ನ ಹಿಂದೆ ಇದ್ಯಾವುದರ ಅರಿವಿಲ್ಲದೆ ಬೀಡಿ ಸೇದುತ್ತಾ ಬರುತಿದ್ದ ....ಇದನ್ನ ಕಂಡು ರಾಜಪ್ಪ ಲೋ ಚೆನ್ನ ನಿನ್ ಬೀಡಿ ಮನೆ ಹಾಳ್ ಗೆಡ್ವ ಆ ದನ ನೋಡ್ಕಳ...ಎಂದು ಕೂಗಿದರು...


ಅಷ್ಟರಲ್ಲಿ ಗೇಟಿನ ಬಳಿ ಬಂದ ....ರಮೇಶಪ್ಪ...ಒಂದ್ ತಂತಿ ಬೇಲಿ ಬಿಗುಸ್ಬೇಕು ತೋಟದ್ ಸುತ್ತಾ ...ಎಂದು....

   ಲೋ ರಾಜಪ್ಪ ನಾಳೇ ತಿಮ್ಮಯ್ಯ ನ್ ಜಮೀನ್ ಗೆ ಹಂದಿ ನುಗ್ಯವಂತೆ ಸ್ವಲ್ಪ ಹೊಡ್ಕೊಟ್ ಬರಾನಾ....ಬರ್ತೀಯೇನಾ...?..

 ಆ ಹಂದಿ ಹಟ್ಟಕೇ( ಓಡಿಸಲು) ನೀನ್ ಇಲ್ಲಿಂದ ಹೋಗ್ಬೇಕಾ....


ಏ ಹಟ್ಟಕಲ್ವೋ ಮರಾಯ....ಅದುನ್ ಕೊಂದ್ ಸಾಯ್ಗಾಣ್ಸಕೆ....

ಬೇಟೆ ಗಾ....ನಾನ್ ಬರ್ತಿನಿ....ಹಂಗಾರೆ....ಹಂದಿ ಮಾಂಸ ತಿಂದ್ ಸುಮಾರ್ ದಿನ ಆಯ್ತು...ಎಂದು ಬಾಯಿ ಚಪ್ಪರಿಸಿದ ರಾಜಪ್ಪ....

ಹೀಗೆ ನೆಡೆದು ರಮೇಶಪ್ಪನ ಮನೆ ಬಂತು...ರಾಜಪ್ಪ ತನ್ನ ಮನೆ ದಾರಿ ಹಿಡಿದು ಹೊರಟ....ರಮೇಶಪ್ಪನಿಗೆ ಏನೋ ನೆನಪಾದಂತಾಗಿ ....ಲೋ ರಾಜಪ್ಪ

ನಾಳೆ ಸಂಜಿಕ್ ಬರ್ತಾ....ಆ ದೊಡ್ ಟಾರ್ಚ್ ಹಿಡ್ಕಂಡ್ ಬಾ...   ಎಂದ ರಮೇಶಪ್ಪ....

 ಹುಂ ...ಎಂದು ಮನೆಕಡೆ ಹೆಜ್ಜೆ ಹಾಕಿದ ರಾಜಪ್ಪ.


ಮರುದಿನ ಸಂಜೆಯ ಸಮಯ


ರಮೇಶಪ್ಪ ಶೆಡ್ ನಲ್ಲಿ ನಿಲ್ಲಿಸಿದ್ದ ಜೀಪು ಹೊರ ತೆಗೆದು ಕತ್ತಿ ...ಚಾಕು...ಟಾರ್ಚು...ಮಾಂಸಕ್ಕೆ ಒಂದು ಪಾತ್ರೆ ...ತೋಟ ಕೋವಿ...ಈ ತೋಟ ಕೋವಿ ಊರಿಗೆ ಆಗಾಗಾ ನುಗ್ಗುತಿದ್ದ ಆನೆಗಳ ಓಡಿಸೋಕೆ  ಆಗಾಗ ತೋಟಕ್ಕೆ ಚಿರತೆಗಳು ನುಗ್ಗುತಿದ್ದವು....ಕೊಟ್ಟಿಗೆ ಹಸು...ನಾಯಿ ...ಮನುಷ್ಯರು ಬಲಿಯಾದ ಸಂಧರ್ಭಗಳು ಉಂಟು...ಅದಕ್ಕೆ ಜೀವ ರಕ್ಷಣೆಗೆ ಎಂದು ಲೈಸನ್ಸ್ ಪಡೆದು ಇಟ್ಟುಕೊಂಡಿದ್ದ ರಮೇಶಪ್ಪ ಎಲ್ಲವನ್ನ ಜೀಪಿನಲ್ಲಿ ತುಂಬಿಕೊಂಡು  ಬೇಟೆಗೆ ಹೊರಟಾಗಲೆಲ್ಲ ಜಿಮ್ಮಿಯನ್ನು ಜೊತೆ ಕರೆದುಕೊಂಡು ಹೋಗುತಿದ್ದ... ಈ ಬಾರಿಯು ಜಿಮ್ಮಿ ಹಿಂಬದಿಯಿಂದ ಜೀಪು ಹತ್ತಿತು....

ಮನೆ ಕಡೆ ಜಾಗ್ರತೆ ಕಣೇ ಸೀತು...ಎಂದು ಹೇಳಿ ಹೊರಟ..


ಮುಂದಿನ ಬೀದಿ ರಸ್ತೆ ಬಲಕ್ಕೆ ರಾಜಪ್ಪನ ಮನೆ ಅವನು ಹೊರಟು ದಾರಿಯಲ್ಲೇ ನಿಂತಿದ್ದ...ಕೈಯಲ್ಲಿ ದೊಡ್ಧ ಟಾರ್ಚು ಹಿಡಿದಿದ್ದ  .... ಸರಿ ಹತ್ತು...ಎಂದು ಅವನನ್ನು ಹತ್ತಿಸಿಕೊಂಡು.. ಹೊರಟು ...ಸುಮಾರು ಏಳರ ಸಮಯಕ್ಕೆ ತಿಮ್ಮಯ್ಯ ನ ಮನೆ ಬಾಗಿಲು ಬಡಿದರು ಬಾಗಿಲು ತೆಗೆದು ರಮೇಶಪ್ಪನನ್ನು ಕಂಡು....ಬೇಟೆಗೆ ಬಂದಿದ್ದಾರೆಂದು ತಿಳಿದು ಬೇಗ ಬೇಗ ಅಕ್ಕ ಪಕ್ಕದ ಮನೆಯ ಚಿಕ್ಕಣ್ಣ...ಗಿರಿಯಣ್ಣ ನ ಎಬ್ಬಿಸಿ ...ಮೀನು ಹಿಡಿಯೋಕೆ ತಕ್ಕಂಡೋಗೋ ಬಲೆ ...ಹಂದಿ ಹೊಡುದ್ಮೇಲೆ ಬೆಂಕಿ ಹಾಕಿ ಬೇಯ್ಸಕೆ ಪಾತ್ರೆ ...ಮಸಾಲೆ ಪದಾರ್ಥ ಎಲ್ಲವನ್ನ ಬೇಗ ಬೇಗ ನೆ ಸಿದ್ದಪಡಿಸಿಕೊಂಡು ಜಮೀನಿಗೆ ಹೊರಟರು...


ಜಮೀನಿನ  ಮೂರು ಭಾಗಕ್ಕೂ ಮರೆಯಲ್ಲಿ ಒಬ್ಬಬ್ಬರು ನಿಂತರು...ಬೆಳೆ ಕಾಯಲು ಮಾಡಿದ್ದ ಅಟ್ಟಣಿಗೆಯಲ್ಲಿ ರಮೇಶಪ್ಪ ನಿಂತಿದ್ದ.... ಜಿಮ್ಮಿ ಸದ್ದಾದ ಕೂಡಲೆ ಬೊಗಳುತಿತ್ತು....ಜಿಮ್ಮಿಗೆ ಬೇಟೆಗೆ ಹೋಗಿ ಅಭ್ಯಾಸವಾಗಿತ್ತು....ಜಮೀನಿನ ಮೂರು ಭಾಗಕ್ಕೂ ಒಬ್ಬೊಬ್ಬರಂತೆ ಕತ್ತಿ ...ಈಟಿ ಕೊಟ್ಟು ನಿಲ್ಲಿಸಿದ್ದ....ರಮೇಶಪ್ಪ...ಅಟ್ಟಣಿಗೆಗೆ ರಾಜಪ್ಪನನ್ನು ಕಳುಹಿಸಿ ತಾನು ಇಳಿದು ಸದ್ದು ಬಂದ ಜಾಗಕ್ಕೆ ಟಾರ್ಚು ಬೆಳಕು  ಬಿಡಲು ರಾಜಪ್ಪನಿಗೆ ತಿಳಿಸಿ  ತನ್ನ ಕೃಯಲ್ಲೊಂದು ಟಾರ್ಚು ಹಿಡಿದು...ಬಂದೂಕು ಹಿಡಿದು ಕಾಯುತ್ತಾ...ಮರೆಯಲ್ಲಿ ಕುಳಿತ.

 ಸುಮಾರು ಒಂಬತ್ತರ ಸಮಯ ಜಿಮ್ಮಿ ಇದ್ದಕಿದ್ದಂತೆ ಬೊಗಳಲು ಶುರು ಮಾಡಿತು....ಎಚ್ಚೆತ್ತುಕೊಂಡ ರಮೇಶಪ್ಪ....ಬಂದೂಕು ಬಿಗಿಯಾಗಿ ಹಿಡಿದು ಜಿಮ್ಮಿ ಬೊಗಳಿದ ಶಬ್ದದ ಹಿಂದೆಯೇ ಓಡಿದ....ಹಂದಿ..ಎತ್ತ ಓಡಲು ತಿಳಿಯದೆ ಗಾಬರಿಯಿಂದ ಅತ್ತಿಂದಿತ್ತ ಓಡುತಿತ್ತು ಬಂದೂಕಿನ ಗುರಿಗೆ ಸಿಗದೆ..ರಮೇಶಪ್ಪ ಗುಂಡು ಹಾರಿಸಲು ಹರಸಾಹಸ ಪಡುತ್ತಿರುವಾಗಲೇ...ಜಿಮ್ಮಿ ಹಂದಿ ಮೇಲೆರಗಿ ಕುತ್ತಿಗೆಗೆ ಬಾಯಿ ಹಾಕಿತು ಆ ಎರಡು ಸೆಕೆಂಡ್ ನಲ್ಲಿ ರಮೇಶಪ್ಪನ ಬಂದೂಕಿನ ಗುಂಡು ಠಂ ಠಂ ಸದ್ದು ಮಾಡಿತು....ಹಂದಿ ನೆಲಕ್ಕುರುಳಿತು....ಹಂದಿ ನೆಲಕ್ಕುರುಳಿದರೂ ಜಿಮ್ಮಿ ತನ್ನ ಹಿಡಿತ ಸಡಿಲ ಮಾಡದೆ ಬಾಯಿ ಹಾಕಿ ಹಿಡಿದಿತ್ತು...ತಕ್ಷಣ ಚಿಕ್ಕಣ್ಣ ಕೈಯಲ್ಲಿದ್ದ ಬಲೆ ಹಂದಿ ಮೇಲೆ ಹಾಕಿದ ...ಜಿಮ್ಮಿಗೆ ಹಂದಿಯ ಕೋರೆ ತಾಕಿ ಎರಡು ಕಣ್ಣಿಗೂ  ಹೊಟ್ಟೆಗೆ ಬಲವಾದ ಪೆಟ್ಟು  ಬಿದ್ದು ರಕ್ತ ಸೋರುತಿತ್ತು....ಆ ನೋವಲ್ಲು ಅದರ ನಿಷ್ಠೆ ಕಂಡು ರಮೇಶಪ್ಪನಿಗೆ ಸಂತೋಷವಾಯ್ತು.... ತನ್ನ ಹೆಗಲ ಮೇಲಿದ್ದ ಟವಲ್ಲನ್ನೆ ಸುತ್ತಿ ರಕ್ತ ನಿಲ್ಲುವಂತೆ ಮಾಡಿದ ...ತಿಮ್ಮಯ್ಯ ಅದಕ್ಕೆ ಔಷದಿ ನಾನ್ ಮಾಡ್ತಿನಿ ಬುಡಿ ನೀವ್ ಹೋಗಿ ಎಂದು ಸೊಪ್ಪಿನ ರಸ ಅರೆದು ಹಚ್ಚಿ ಜೀಪಿನಲ್ಲಿ ಮಲಗಿಸಿದ...


ಎಲ್ಲರೂ ಸಂತೋಷದಿಂದ ಹಂದಿ ಹೊತ್ತೊಯ್ದು....ಖಾಲಿ ಜಮೀನಿನಲ್ಲಿ  ಒಂದೆಡೆ ಕಲ್ಲು ಜೋಡಿಸಿ ಒಲೆ ಹಾಕಿ ಬೆಂಕಿ ಹಾಕಿದರು... ಕೆಂಡ ಹದ ಗೊಳಿಸಿ....ಸ್ವಲ್ಪ ಮಾಂಸವನ್ನ ಮಸಾಲೆ ಬೆರೆಸಿ ತಿಂದು...ಉಳಿದದ್ದನ್ನ ಬೇಟೆಗೆ ಬಂದವರಿಗೆ ಪಾಲು ಮಾಡಿ....ಹೊರಡುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಯಾಗಿತ್ತು....ಜೀಪು ಹತ್ತಿ ಹೊರಡುವಾಗ

ತಿಮ್ಮಯ್ಯ ಸಂತೋಷದಿಂದ ಹೋಗ್ಬನ್ನಿ ಅಯ್ಯ ಎಂದು ಕಳುಹಿಸಿದ....


ಮರುದಿನ ಬೆಳಗ್ಗೆ ಜಿಮ್ಮಿ ಕಣ್ಣಿಗೆ ಒಂದಷ್ಟು ನಾಟಿ ಮದ್ದು ಮಾಡಿಸಿದ ಪ್ರಯೋಜನವಾಗಲಿಲ್ಲ....ಗಾಯ ಕೀವುಗಟ್ಟಿ ರಂಪವಾಯಿತು... ಕಣ್ಣಿನ ದೃಷ್ಟಿ ಕಳೆದು ಕೊಂಡಿತು...


ಜಿಮ್ಮಿ ಈ ಬೇಟೆ ಆದ ಮೇಲೆ ಊಟ ಬಿಟ್ಟಿತ್ತು....ತಾನೇ ಬೇಟೆಯಾಡಿದ ಹಂದಿ ಮಾಂಸವು ಜಿಮ್ಮಿಯ ಗಂಟಲಲ್ಲಿ ಇಳಿಯಲಿಲ್ಲ....ರಮೇಶಪ್ಪನಿಗೂ ಪ್ರೀತಿಯ ಜಿಮ್ಮಿಗಾದ ಸ್ಥಿತಿಯಿಂದ ತಾನು ಮಾಂಸದ ಊಟ ಬೇಡವೆಂದ ಕೆಲವು ವಾರಗಳಲ್ಲೆ ಜಿಮ್ಮಿ ಸಾವನ್ನಪ್ಪಿತು....ಜಾನವಿ ತನ್ನ ಪ್ರೀತಿಯ ಜಿಮ್ಮಿ ಸಾವನ್ನು ಕಂಡು ಅತ್ತು ಕರೆದು ತಾನು ಊಟ ಬಿಟ್ಟು ಹಠ ಮಾಡಿದಳು... ಮಗಳಿಗೆ ಸಮಾಧಾನ ಹೇಳಿ ಊಟ ಮಾಡಿಸಿದರು...ಅಳುತ್ತಲೇ ಮಲಗಿದಳು ಜಾನು...


ರಮೇಶಪ್ಪನು ಮನಸ್ಸಿನಲ್ಲೇ....ಏನೇನೋ ಆಲೋಚನೆಗಳು ಹುಟ್ಟಿದವು ...ಸತ್ತದ್ದು ಎರಡು ಪ್ರಾಣಿ...ಒಂದು ಹಂದಿ .....ಒಂದು ಸಾಕಿದ ಪ್ರೀತಿಯ ನಾಯಿ....ಒಂದರ ಸಾವಿನಲ್ಲಿ ಸಂಭ್ರಮ ....ಮತ್ತೊಂದರ ಸಾವಿನಲ್ಲಿ ಶೋಕ....ಸಾಕಿದ ಮಾತ್ರಕ್ಕೆ ಶೋಕ .ಸಾಕಲಿಲ್ಲವೆಂಬ ಮಾತ್ರಕ್ಕೆ ಸಂಭ್ರಮ ಹೇಗೆ ಸಾಧ್ಯ ತನ್ನದೆಂಬ ಮೋಹ ಶೋಕಿಸುವಂತೆ ಮಾಡುತ್ತದೆ ಅಲ್ವ... ಅದಕ್ಕೆ ಏಟು ಬಿದ್ದಿದೆ ಎಂದಾದ ಮೇಲು ನಾನು ಮಾಂಸ ಬೇಯಿಸಲು ಅಲ್ಲೇ ಸಮಯ ಕಳೆದೆ ತಪ್ಪೇ ನಾನು ಮಾಡಿದ್ದು ನನ್ನಿಂದಲೇ ಜಿಮ್ಮಿ ಸತ್ತಿದ್ದು ಎಂದೆಲ್ಲ ಆಲೋಚನೆಯಲ್ಲಿ ಮುಳುಗಿದ್ದಾಗ...

ರಮೇಶಪ್ಪನ ಮಗಳು....

ಅಪ್ಪ ಜಿಮ್ಮಿ ಯಾಕ್ ಸತ್ತೋಯ್ತು .....ಎಂಬ ಪ್ರಶ್ನೆಗೆ ರಮೇಶಪ್ಪ....ಜಿಮ್ಮಿಯ ಸಾವಿಗೆ ನಾನೇ ನೇರ ಹೊಣೆ ಎಂದು ಹೇಳುವುದಾದರು ಹೇಗೆ ಮಗಳ ಪ್ರಶ್ನೆಗೆ ಮೌನವಾಗಿದ್ದ... 


ಸ್ವಲ್ಪ ಹೊತ್ತಿನ ನಂತರ ಬೇಟೆಗೆ ಹೋಗಿದ್ದಕ್ಕೆ ಅಲ್ವ ಸತ್ತೋಗಿದ್ದು ಜಿಮ್ಮಿ...ಎಂದಳು....ಆ ಪ್ರಶ್ನೆಗೆ ಹೌದೆಂದು ಉತ್ತರಿಸಿದ....ಜಿಮ್ಮಿ ಮೇಲ್ ಪ್ರೀತಿ ಇದ್ರೆ ಇನ್ಯಾವತ್ತು ಬೇಟೆಗ್ ಹೋಗ್ ಬೇಡ ಎಂದಳು..


ಆ ಹೊತ್ತಿನಿಂದ ರಮೇಶಪ್ಪ...ಬೇಟೆ ಹೋಗೋದು ನಿಲ್ಲಿಸಿದ....


                                         ರಚನೆ

                               ಶ್ಯಾಮ್ ಪ್ರಸಾದ್ ಭಟ್ 




Monday, November 1, 2021

ಜೋಡಿ ಮನೆ ಎಸ್ಟೇಟ್

 



ಜೋರು ಮಳೆ .....ಜೋರು ಶಬ್ಧ ಮ‍ಾಡುತಿದ್ದ ಗುಡುಗು...ಒಬ್ಬರಿಗೊಬ್ಬರ ಮುಖ ಛಕ್ಕನೆ ಕಂಡು ಮರೆಯಾಗುವಂತ ಮಿಂಚು ನಾನು ನನ್ನ ಗೆಳೆಯ ರಾಮು ಒಂದು ದೊಡ್ಡ ಬಂಗಲೆಯೊಳಗೆ ಹೊರ ಬರಲು ದಾರಿ ಗೊತ್ತಾಗದೆ...ಭಯ ಪಡಿಸೋ ಗುಡುಗು ಸಿಡಿಲುಗಳ ಮಧ್ಯೆ ಛಳಿಗೆ ನಡುಗುತಿದ್ದೆವೋ ಭಯದಿ ನಡುಗುತಿದ್ದೆವೋ  ಆ ಗುಡುಗಿಗೆ ಬೆಚ್ಚಿ ನಡುಗುತಿದ್ದೆವೋ ಸ್ಪಷ್ಟವಾಗಿ ಹೇಳಲಾರೆ


ನಾವು ಹೊರಟಾಗ ಇನ್ನೇನು ಕರಿ ಮೋಡ ಕೆಟ್ಟದಾಗಿ ಎಲ್ಲ ಕಡೆಗೂ ಭಯಾನಕ ವೇಗವಾಗಿ ನುಗ್ಗಿ ‍ಆವರಿಸುತಿತ್ತು....

ಮದ್ಯಾಹ್ನ ಬಂದಿದ್ದ ನೆತ್ತಿ ಸುಡುವ ಬಿಸಿಲಿನಿಂದಲೇ ಸಂಜೆ ಜೋರು ಮಳೆ ಸುರಿಯುವ ಭವಿಷ್ಯವನ್ನ ಮೊದಲೇ ಗುರುತಿಸಿದ್ದೆವು.... 

 ಮಲೆನಾಡಲ್ಲಿ ಮಳೆ ಹೀಗೇ ಎಂದು ಹೇಳಲಾಗೋದಿಲ್ಲ ಯಾವಗಂದರೇ ಆವಾಗ ಒಮ್ಮೆಲೆಗೆ ಧೋ ಎಂದು ಸುರಿಯಲು ಮೊದಲಿಟ್ಟು ಬಿಡುತ್ತೆ...ಯಾವುದಕ್ಕೂ ಇರಲಿ ಎಂದು ಛತ್ರಿಯನ್ನ ಇಬ್ಬರೂ ಬೆನ್ನ ಹಿಂದಿನ ಕಾಲರ್ ಗೆ ಸಿಕ್ಕಿಸಿ ಕೊಂಡೆ ಹೊರಟಿದ್ದೆವು...

ಹೀಗೇ ಅಪರಿಚಿತ ಸ್ಥಳಕ್ಕೆ ಹೋಗುವಾಗ ಅದು ಕಾಫಿ ಎಸ್ಟೇಟಿನಂತಹ ಕಾಡು ಪ್ರದೇಶಕ್ಕೆ ಹೋಗುವಾಗ ಕೈಯಲ್ಲಿ ಕಲ್ಲು ...ದೊಣ್ಣೆಯಂತಹ ಅಸ್ತ್ರಗಳು ಅವಶ್ಯ...ಈ ನಾಯಿಗಳು ಎಲ್ಲಿಂದ ಹೇಗೇ ಮೈ ಮೇಲೆ ಎರಗುತ್ತವೆ ಹೇಳಲಸಾದ್ಯ....ಎಸ್ಟೇಟ್ ನೋಡಿಕೊಳ್ಳಲೆಂದೇ ಕೆಲವೊಂದು ಜಾತಿ ನಾಯಿಗಳನ್ನ...ಮನುಷ್ಯರಿಗಿಂತ ದಷ್ಟ ಪುಷ್ಪ ವಾಗಿ ಬೆಳೆಸಿರುತ್ತಾರೆ ...ನಾಯಿಗಳನ್ನ ನೋಡಿ ಎಷ್ಟೋ ಬಾರಿ ಅಂದು ಕೊಂಡದ್ದುಂಟು ಈ ನಾಯಿ ನನಗಿಂತ ದಪ್ಪವಾಗಿದೆ ಎಂದು...ಈ ಛತ್ರಿ ಇರೋದ್ರಿಂದ ದೊಣ್ಣೆ ..ಕಲ್ಲ‍ಾಗಲಿ ರಕ್ಷಣೆಗೆ ಅವಶ್ಯವಿಲ್ಲ....ಒಂದು ವೇಳೆ ನಾಯಿ ಬಂತೆಂದರೆ ಛತ್ರಿ ಬಿಡಿಸಿ ಅದರ ಮೂತಿಗೆ ತಿವಿದೇ ಓಡಿಸಬಹುದಿತ್ತು....ನನ್ನ ಛತ್ರಿ ಮಡಿಸಿ ಮುದುರಿ ಇಡುವ ವಾಟರ್ ಬಾಟಲ್ ಸೈಜಿನಂತದ್ದಲ್ಲ...ಮುದುಕರು ಊರ ಹಿರಿಯರು ಊರುಗೋಲಿನಂತೆ ಬಳಸುತಿದ್ದ ಉದ್ದನೆಯ ಛತ್ರಿ ಅದರ ಮುಂದಿನ ಚೂಪು ಕತ್ತಿಯಂತೆ ಹರಿತ....ನಮ್ಮ ತಾತ ಆ ಚೂಪಿನ ಮೂತಿಯಿಂದಲೇ ನೆಲದಲ್ಲಿ ಅಗೆದು ಗಿಡ ನೆಡುತ್ತಿದ್ದರಂತೆ...


ಆ ಬಂಗಲೆಯ ಕಿಟಕಿ ಒಳಗಿನಿಂದ ಹೊರಗಿನ ಮಳೆ ನೋಡಿದಾಗ ನನ್ನ ಮನಸ್ಸಿನಲ್ಲಿ ಹೀಗೇ ನಾವಿಲ್ಲಿಗೆ ಬಂದ ಬಗೆ ಬಂದು ಬಂಧಿಯಾದ ಬಗೆ ಎಲ್ಲವನ್ನು ನೆನೆಸಿಕೊಳ್ಳಲ‍ಾರಂಭಿಸಿತು ಮನಸ್ಸು ..

ನಾವೇನು ಇದೇ ಮೊದಲ ಬಾರಿ ಹೀಗೇ ಇಂಥ ಸಾಹಸಗಳಿಗೆ ಧುಮುಕಿದವರಲ್ಲ....


ಹಿಂದೊಮ್ಮೆ ಅಂದರೆ ಎರಡು ವರ್ಷದ ಹಿಂದೆ ನಮ್ಮೂರಿಗೆ ಹತ್ತಿರದಲ್ಲಿರುವ ಬೆಟ್ಟದ ಮಲ್ಲಿಕಾರ್ಜುನ ದೇವಾಲಯ ಇರೋ ಬೆಟ್ಟಕ್ಕೆ ಇದೇ ಗೆಳೆಯ ರಾಮು ಜೊತೆಗೆ ಹೋಗೋದು ಎಂದು ತೀರ್ಮಾನವಾಯಿತು

 ನಾನು ಈಗ ಪಿ ಯು ಸಿ ಓದುತಿದ್ದರು ನನಗೆ ಎಂಟನೇ ತರಗತಿಯಲ್ಲಿ ಸರ್ಕಾರದಿಂದ ಕೊಟ್ಟಿದ್ದ ಸೈಕಲ್ ನ್ನು ಚೆನ್ನಾಗಿಟ್ಟುಕೊಂಡಿದ್ದೆ ನಾನು ನನ್ನ ಸೈಕಲ್ಲನ್ನು ರಾಮು  ಅವನು ಹೊಸದಾಗಿ ಕೊಂಡುಕೊಂಡಿದ್ದ ಗೇರ್ ಸೈಕಲ್ ನ್ನ ಏರಿ ಇಬ್ಬರು ಹೊರಟಾಗ ಬೆಳಗ್ಗೆ ಏಳು ಗಂಟೆಯ ಸಮಯ ರಸ್ತೆ ಬೆಟ್ಟದ ಪಾದದವರೆಗೆ ಚೆನ್ನಾಗೇನೋ ಇತ್ತು ....

ಬೆಟ್ಟ ಪ್ರಾರಂಭವಾದೊಡನೆ ರಸ್ತೆ ಏರುಮುಖವಾಗಿದ್ದರಿಂದ ತುಳಿದು ತುಳಿದು ತೊಡೆಯಿಂದ ಕಾಲೆಲ್ಲ  ನೋವು ಬರಲು ಶುರುವಿಟ್ಟಿತು..

 ಸರಿ ಸೈಕಲ್ ತುಳಿದು ಬೆಟ್ಟ ಏರೋಕೆ ಸಾಧ್ಯವೇ ಇಲ್ಲ ಎಂದು ತಿಳಿದ ಮೇಲೆ... ಬೆಟ್ಟಕ್ಕೆ ಏರುವಾಗ ಮದ್ಯದಲ್ಲಿ ಆ ಬೆಟ್ಟದಲ್ಲಿರುವ ದೇವಾಲಯ ಪೂಜೆ ಮಾಡುವ ಪುರೋಹಿತರಾದ ರಾಜು ಭಟ್ಟರ ಮನೆ ಸಿಗುತ್ತದೆ ಅಲ್ಲೇ ಸೈಕಲ್ ನಿಲ್ಲಿಸಿ ಅಲ್ಲಿಂದ ನಂತರ ನೆಡೆದು ಬೆಟ್ಟ ಹತ್ತುವುದೆಂದು ನಿರ್ದಾರವಾಯಿತು ಎಣಸಿದಂತೆ ಪುರೋಹಿತರ ಮನೆ ಬಂತು.....ರಾಜು ಭಟ್ಟರು ಆಗ ತಾನೆ ಪೂಜೆ ಮುಗಿಸಿ ಬೆಟ್ಟ ಇಳಿದು ಮನೆಯತ್ತ ಬರುತಿದ್ದರು  ...ಎಲ್ಲಿಗೆ ಹೊರಟದ್ದು ಮಕ್ಕಳ ಸವಾರಿ ಎಂದರು ನಾವು ದೇವಸ್ಥಾನಕ್ಕೆ ಹೊರಟದ್ದು ಎಂದು ಹೇಳಿದೆವು....ಅದಕ್ಕವರು ಹೆಚ್ಚು ಹೊತ್ತು ಇರಬೇಡಿ ಮಾಣಿ ಆನೆ ಬರ್ತಾವೆ...ಇವತ್ತು  ಆನೆ ಓಡಾಡಿದ ಹೆಜ್ಜೆ  ಇತ್ತು ದೇವಸ್ಥಾನದ ಸುತ್ತ ಎಂದರು ....ಸರಿ ಭಟ್ರೆ ಹೆಚ್ಚು ಹೊತ್ತು ಇರೋದಿಲ್ಲ ಅಂತ ಹೇಳಿ ಸೈಕಲ್ ನಿಲ್ಲಿಸಿ ಹೊರಟೆವು ...

ಇಬ್ಬನಿ  ಮಂಜು ತುಂಬಿಕೊಂಡ ರಸ್ತೆ ....ಟಾರು ಹಾಕಿದ್ದಾದರು ವಿಪರೀತ ಮಳೆ ಬೀಳೋ ಕಾರಣ ರಸ್ತೆ ಕಿತ್ತು ಹೋಗಿ ಜಲ್ಲಿ ಮಾತ್ರ ಉಳಿದಿತ್ತು....ಸ್ವಲ್ಪ ದೂರ ಹೋದಂತೆ ಮೂರು ಮಣ್ಣಿನ ರಸ್ತೆ ಸಿಕ್ಕಿತು...ಅದರಲ್ಲಿ ಮದ್ಯದ್ದು ದೇವಸ್ಥಾನಕ್ಕೆ ಹೋಗುತ್ತೆ...ಇನ್ನೆರಡು ನೇರ ಪರಶುರಾಮರ ಗುಡ್ಡಕ್ಕೆ ದಾರಿ ತೋರಿಸುತ್ತೆ....ನಾವು ಮೊದಲು ದೇವಸ್ಥಾನಕ್ಕೆ ಹೋಗಿ ದೇವರನ್ನು ಕಂಡು ನಂತರ ಗುಡ್ಡ ಹತ್ತುವುದೆಂದು ನಿರ್ಧಾರ ಮಾಡಿ ದೇವಾಲಯದ ಹಾದಿ ಹಿಡಿದು ಹೊರಟೆವು ...ಸುಮಾರು ಸಾವಿರ ವರ್ಷದ ಇತಿಹಾಸವಂತೆ ಯಾವುದೋ ರಾಜ ಕಟ್ಟಿಸಿದ್ದಂತೆ....ಕಲ್ಲಿನ ದೇವಾಲಯ ಸುತ್ತ ಆವರಣ ಮಳೆ ಇಬ್ಬನಿ ಬಿದ್ದು ಪಾಚಿಗಟ್ಟಿದೆ...ದೇವಾಲಯದ ಗೋಪುರದ ಮೇಲೆ ಗಿಡಗಳು ಬೆಳೆದಿವೆ....

ರಾಜು ಭಟ್ಟರು ಆರು ಗಂಟೆಗೆ ಬಂದು ಪೂಜೆ ಮುಗಿಸಿ ಹೋಗಿದ್ದಾರೆ ...ದೀಪದ ಬೆಳಕಲ್ಲಿ ಕಪ್ಪು ಶಿವಲಿಂಗ ಸ್ಪಷ್ಟವಾಗಿ ಕಾಣುತಿಲ್ಲವಾದರು ಬಿಳಿಯ ವಿಭೂತಿ ಕಂಡಿತು ಕೈ ಮುಗಿದು ಸೆಕೆಂಡ್ ಪಿ ಯು ಸಿ ಒಂದು ಪಾಸು ಮಾಡಿಸಿ ಬಿಡು ದೇವರೇ ಎಂದು ಕೇಳಿಕೊಂಡೆ...ರಾಮು ಅಷ್ಟರಲ್ಲಿ ಗುಡಿಯನ್ನು ಸುತ್ತು ಬಂದು ಬಾರೋ ಹೊತ್ತಾಗುತ್ತೆ ...ಈ ಮಳೆ ಬೇರೆ ಯಾವಾಗ ಶುರುವಾಗುತ್ತೋ ಹೇಳೋಕಾಗಲ್ಲ....ನಮಗೆ ಬೆಟ್ಟದ ತುದಿಗೆ ಹೋಗೋಕೆ ಬಹು ಮುಖ್ಯ ಕಾರಣ ಅಲ್ಲಿ ಸಿಗೋ ಅಪರೂಪದ ಹಣ್ಣು ಚೊಟ್ಟೆ ಹಣ್ಣು ತಿನ್ನೋಕೆ...ಹಾಗೇ ಇಬ್ಬನಿ ತುಂಬಿ ಹಾಲ್ಗಡಲಂತೆ ಕಾಣುವ ಬೆಟ್ಟವನ್ನ ಸವಿಯೋಕೆ....ಪರಶುರಾಮ ಕ್ಷತ್ರಿಯರ ನಾಶಕ್ಕೆಂದು ಸಂಚರಿಸುವಾಗ ಇಲ್ಲಿ ವಿಶ್ರಾಂತಿ ಪಡೆದಿದ್ದನಂತೆ..ಅದಕ್ಕೆ ಈ ಬೆಟ್ಟವನ್ನ ಪರಶುರಾಮ ಬೆಟ್ಟ ಅನ್ನೋದು....

    ಬೆಟ್ಟ ಎಷ್ಟು ಸುಂದರವಾಗಿದೆ ಎಂದರೆ ಹಚ್ಚ ಹಸಿರಿನ ಬಟ್ಟೆ ಹೊದ್ದು ಕಂಗೊಳಿಸುತ್ತ .. ಮುತ್ತಿನ ಬಣ್ಣದ ಇಬ್ಬನಿ ಅಪರೂಪದ ಹೂ ಗಳು ಹಸಿರಿನ  ಬಟ್ಟೆ ಮೇಲೆ ಜೋಡಿಸಿದಂತೆ ನೋಡಲು ಏನೋ ಮೈ ರೋಮಾಂಚನಗೊಳಿಸೋ ಸೌಂದರ್ಯ ...ಈ ಬೆಟ್ಟದ ವಿಶೇಷತೆ ಏನೆಂದರೆ ಇದು ಬೆಟ್ಟಗಳ ಸರಣಿ ಒಂದು ಬೆಟ್ಟ ಹತ್ತಿದಂತೆ ಮತ್ತೆ ಅದಕ್ಕಿಂತ ಎತ್ತರವಾದ ಮತ್ತೊಂದು ಬೆಟ್ಟ ಕಾಣಸಿಗುತ್ತದೆ....ಅದನ್ನು ಹತ್ತಿ ಮುಗಿಸಿದೆವೆಂಬಂತೆ ಪಾತಾಳ

 ಅದನ್ನು ಇಳಿದು ಮುಂದೆ ಸಾಗಿದರೆ ಮತ್ತೊಂದು ಹೆಸರಿನಿಂದ ಕರೆಯಲ್ಪಡುವ ದೈತ್ಯಗಾತ್ರದ ಬೆಟ್ಟ....ಹೀಗೇ...ನಾವು ಹತ್ತಲು ಪ್ರಾರಂಭಿಸಿ ಒಂದು ಚಿಕ್ಕ ಬೆಟ್ಟವನ್ನು ಹತ್ತಿ ಮುಗಿಸಿದೆ...ನಾನು ತುಂಬಾ ಸುಸ್ತಾಗಿ ಹೋಗಿದ್ದೆ..ಆದರೆ ರಾಮು ಸುಸ್ತಾದಂತೆ ಕಾಣಲಿಲ್ಲ...ಅವನಿಗೆ ಚೊಟ್ಟೆ ಹಣ್ಣು ತಿನ್ನೋ ಅವಸರ....ಅಲ್ಲಿ ಮೇಲಿರೋ ದೈತ್ಯ ಗಾತ್ರದ ಬಂಡೆ ಮೇಲೆ ಕೂರುವ ಬಯಕೆ...

ಅವನೋ ಕೂಗಿ ಕೊಳ್ಳುತ್ತ ಬಾರೋ...ಇಷ್ಟೇನಾ ನೀನ್ ಹತ್ತೋಕಾಗೋದು  ಎಂದು ಮೂದಲಿಸುತ್ತ ನಗುತ್ತಿದ್ದ ...ನಾನು ಅಲ್ಲೆ ಬಿದ್ದಿದ್ದ ಕೋಲು ತೆಗೆದು ಕೊಂಡು ಊರುಗೋಲಾಗಿಸಿ ಹತ್ತ ತೊಡಗಿದೆ ಇಪ್ಪತ್ತು ನಿಮಿಷದಲ್ಲಿ ಬೆಟ್ಟದ ತುದಿ ಹತ್ತಿ ಕುಣಿದು ಸಂಭ್ರಮಿಸಿದೆವು... ಅಲ್ಲೇ ಇದ್ದ ಬಂಡೆ ಮೇಲೆ ಮಲಗಿ ವಿಶ್ರಮಿಸುತಿದ್ದೆ  ...ರಾಮು ಚೊಟ್ಟೆ ಹಣ್ಣು ಕೊಯ್ದು ತರಲು ಹೋಗಿದ್ದವ ಬಂದ ಇಬ್ಬರು ಹಂಚಿ ತಿಂದೆವು ....ಸ್ವಲ್ಪ ಹೊತ್ತು ಕಾಲ ಕಳೆದು ಇಳಿಯೋಣ ಎಂದು ಅಲ್ಲೇ ಬಂಡೆ ಮೇಲೆ ಮಲಗಿದ್ದೆವು....

ಜೋರು ಮಳೆ ಒಮ್ಮೆಲೆ ಸುರಿಯಲು ಪ್ರಾರಂಭಿಸಿತು...ಮೂರ್ನಾಲ್ಕು ದೊಡ್ಡ ಬಂಡೆಗಳ ನಡುವೆ ಮಳೆಯಿಂದ ಆಶ್ರಯ ಪಡೆಯುವಷ್ಟು ಜಾಗವಿತ್ತು...ಅಲ್ಲೇ ಸ್ವಲ್ಪ ಹೊತ್ತು ನಿಂತು ಮಳೆ ನಿಲ್ಲುವವರೆಗೂ ನಿಂತೆವು ....ಮಳೆ ನಿಂತ ಮೇಲೆ ಮಂಜು ಆವರಿಸಿತು ಮುಸುಕು ಮುಚ್ಚಿದ ವಾತಾವರಣ ದೂರದ ದೃಶ್ಯಗಳೇನು ಕಾಣಿಸುತ್ತಿಲ್ಲ....ಈಗ ಬೆಟ್ಟ ಇಳಿಯೋದು ತುಂಬಾ ಅಪಾಯ ಮಳೆಗೆ ನೆಲ ಮತ್ತಷ್ಟು ಹಸಿಯಾಗಿರುತ್ತೇ ...ಮಂಜು ಮುಸುಕಿರೋದ್ರಿಂದ ಮುಂದಿನ ದಾರಿಯೂ ಕಾಣೋದಿಲ್ಲ... ನಾವು ಬೆಟ್ಟದ ಮೇಲೆ ಬಂದಾಗಲೇ ಒಂಬತ್ತು ಗಂಟೆ ಆಗಿತ್ತು...ಈಗ ಸಮಯ ಎಷ್ಟಾಗಿದೆಯೋ ಮಳೆ ನೀರು ವಾಚ್ ಒಳಗೆ ಹೋಗಿ ಸಮಯ ಕಾಣಿಸುತಿಲ್ಲ....ಅಯ್ಯೋ ದೇವ್ರೇ...ಇದೆಂಥಾ ಸ್ಥಿತಿ...ಎಂದು ಇಬ್ಬರು ದಿಕ್ಕು ತೋಚದಂತಾಗಿ ಕುಳಿತಿದ್ದೆವು....ಸುಮಾರು ಗಂಟೆಗಳು ಕಳೆದ ನಂತರ ಹೊಟ್ಟೆ ಹಸಿವು ಕಾಣಿಸಲಾರಂಭಿಸಿತು ...ತಿನ್ನೋಕೆ ಚೊಟ್ಟೆ ಹಣ್ಣು ಬಿಟ್ಟರೆ ಮತ್ತೇನಿಲ್ಲ...

 ಕೆಳಗಿನ ಬೆಟ್ಟದ ಬುಡದಿಂದ ಯಾರೋ ಕಿರುಚುತಿದ್ದಂತೆ ಕೇಳಿಸುತಿತ್ತು ವಿಪರೀತ ಗಾಳಿಯಾದ್ದರಿಂದ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ....

ಯರೋ ಇಲ್ಲೇ ಸುತ್ತ ಮುತ್ತಲಲ್ಲೇ ಇದ್ದಾರೆ  ಅವರ ಸಹಾಯ ಪಡೆದು ಮನೆ ಸೇರಿಕೊಳ್ಳುವ ಎಂದು ಕಂಡಷ್ಟು ದಾರಿಯಲ್ಲೇ ಬೆಟ್ಟ ಇಳಿಯಲು ಪ್ರಾರಂಭಿಸಿದೆವು....ರಾಮು ಸರ ಸರನೆ ಇಳಿಯುತಿದ್ದ ..ನಾನು ಅವನ ಹಿಂದೆ ಇಳಿಯುತ್ತಿದ್ದೆ ...ಹಾಕಿದ್ದ ಹವಾಯಿ ಚಪ್ಪಲಿ ಉಂಗುರ ಕಿತ್ತು ಕಾಲಿನ ಹಿಡಿತ ತಪ್ಪಿ ಕೆಳಗೆ ಉರುಳಿ ಬಿದ್ದೆ ಕೆಳಗೆ ಇಳಿಜಾರಿದ್ದರಿಂದ ಉರುಳಿಕೊಂಡೆ ಬಿದ್ದೆ ಮುಟ್ಟಿದರೆ ಮುನಿ ಸೊಪ್ಪಿನ ಮುಳ್ಳುಗಳು ಮೈಯೆಲ್ಲ ಗಾಯ ಮಾಡಿ ತರಚಿದ್ದವು.... ಏಳಲು ಆಗದೆ ಗೋಳಾಡುತ್ತಿರುವಾಗ ಮಾಣಿ.....ಮಾಣಿ....ಎದ್ದೇಳು...ಎಂದು ಕೈ ಹಿಡಿದು ಎಬ್ಬಿಸಿದವರು ರಾಜು ಭಟ್ಟರು ...ಬಿದ್ದ ರಭಸಕ್ಕೆ ನನ್ನ ಮೈ ಕಣ್ಣು ಎಲ್ಲ ಕೆಸರಾಗಿತ್ತು... ಸ್ವಲ್ಪ ಸುಧಾರಿಸಿಕೊಂಡ ಮೇಲೆ....ಬಂದವರು ...ನನ್ನ ಎತ್ತಿದವರು ರಾಜು ಭಟ್ಟರು ಎಂಬುದು ಗೊತ್ತಾಯಿತು...ರಾಮು ...ರಾಮು ...ಎಲ್ಲಿ ಹೋದ ಎಂದೆ....ಅವ ಬೆಟ್ಟ ಇಳಿತಾ ಇದಾನೇ...ಬರ್ತಾನೆ ಸುಧಾರುಸ್ಕೋ ಎಂದರು ಭಟ್ಟರು....ಸ್ವಲ್ಪ ಹೊತ್ತಿಗೆ  ಬೆಟ್ಟ ಇಳಿದ ರಾಮು ಬಂದು ಜಾಸ್ತಿ ಪೆಟ್ಟಾಯ್ತೆನೋ ಎಂದು ಕೈ ಕಾಲು ಗಳ   ನೋಡಿದ...

 ಹೇ ಏನು ಆಗಿಲ್ಲ ನಡೀ ಹೋಗೋಣ ಅಂತ ಎದ್ದು ನಿಂತೆ.. ನನಗೆ ಆಗ ಗಾಯಗಳಾಗಿದ್ದು ದೊಡ್ಡವೇನು ಅನ್ನಿಸಲಿಲ್ಲ ಮನೆಗೆ ಹೋದಾಗ ಹಾಕಿದ ಟಿಂಚರ್ ಗೆ ಉರಿ ಬಂದು ಕುಣಿದಾಡುವಂತಾಗಿತ್ತು... ಅಲ್ಲಿಂದ ರಾಜು ಭಟ್ಟರೊಂದಿಗೆ ಬೆಟ್ಟ ಇಳಿದು ಅವರ ಮನೆಯಲ್ಲಿ ಕಾಫಿ ಕುಡಿದು ರಾಮು ಸೈಕಲ್ಲಿನಲ್ಲೆ ಹಿಂದಿನ ಸೀಟಿನಲ್ಲಿ ಕುಳಿತು ನನ್ನ ಸೈಕಲನ್ನ  ಮುಂದಿನ ವಾರ ತಕ್ಕೊಂಡು ಹೋಗೋದಾಗಿ ಅಲ್ಲಿಯವರೆಗೂ ಅಲ್ಲೇ ಇರಲಿ ಎಂದು  ಭಟ್ಟರಿಗೆ ಹೇಳಿ ರಾಮು ಸೈಕಲ್ಲಿನಲ್ಲೇ ಮನೆ ಸೇರಿದೆ...


ಇದಿಷ್ಟು ಆದರೂ ನಮ್ಮ ಸಾಹಸ ...ಕುತೂಹಲಗಳು ತಣಿದಿರಲಿಲ್ಲ... ಗಾಯವೆಲ್ಲ ವಾಸಿ ಆಗುವಷ್ಟರಲ್ಲಿ ಪರೀಕ್ಷೆ ಬಂತು....ಕೊನೆಯ ಪರೀಕ್ಷೆ ದಿನ 

‌ಬಸ್ ಸ್ಟಾಪ್ ನಿಂದ ನಮ್ಮೂರಿಗೆ  ಇಬ್ಬರೂ ಸೈಕಲ್ ತಂದಿರಲಿಲ್ಲ ಹಾಗಾಗಿ ಇಬ್ಬರು ನೆಡೆದೇ ಹೊರಟೆವು...ನಮ್ಮೂರಿನ ರಸ್ತೆ ಡಾಂಬರು ಕಂಡು ಸುಮಾರು ಹತ್ತು ವರ್ಷಗಳೇ ಕಳೆದಿತ್ತು ವಿಪರೀತ ಮಳೆಯಿಂದ ರಸ್ತೆ ಮಂಡಿಯುದ್ದ ಗುಂಡಿ ಕಂಡಿದ್ದವು...ಆದರೂ ಆ ರಸ್ತೆಯಲ್ಲಿ ನೆಡೆದು ಬರುವ ಮಜವೇ ಬೇರೆ...ರಸ್ತೆಯ ಎರಡು ಬದಿಯಲ್ಲೂ ಕಾಫಿ ತೋಟ ಹಲಸಿನಹಣ್ಣು ಸಿಗುವ ಕಾಲಕ್ಕೆ ತೋಟಕ್ಕೆ ನುಗ್ಗಿ ಹಲಸಿನಹಣ್ಣನ್ನು ಕಿತ್ತು ತಂದು ತಿಂದು ಬರುವುದು...ರಸ್ತೆಯುದ್ದಕ್ಕೂ ಅಲ್ಲಲ್ಲಿ ಇರುವ ಮಾವಿನ ಮರಕ್ಕೆ ಮಾವು ಸಿಗೋ ಕಾಲಕ್ಕೆ ಕಲ್ಲು ಬೀಸಿ ಮಾವಿನಹಣ್ಣ ನ್ನು ಸವಿಯುತಿದ್ದೆವು....

ಇವತ್ತು ಕೂಡ ಪರೀಕ್ಷೆ ಮುಗಿದ ಸಂಭ್ರಮ ಹಾಗೇ ತೋಟದಲ್ಲಿ ಕಿತ್ತಲೆ ಹಣ್ಣುಗಳು ತುಂಬಿ ತುಳುಕುತಿದ್ದವು...ಕಿತ್ತಲೆ ಪಾರಕ್ಕಿದ್ದ ಮುದುಕ ನಮ್ಮೂರಿನವರೇ ತೋಟ ನುಗ್ಗುವ ಸಾಹಸ ಮಾಡಲಿಲ್ಲವಾದರು ಕೇಳಿದ್ದಕ್ಕೆ ನಾಲ್ಕು ಕಿತ್ತಲೆ ಸಿಕ್ಕಿತು ತಿನ್ನುತ್ತ....ಹರಟುತ್ತ ಬರುವಾಗ ಜೋಡಿ ಮನೆ ಎಸ್ಟೇಟ್ ಗೆ ದಾರಿ ಎಂಬ ಬೋರ್ಡು ಕಾಣಿಸಿತು...ನಾವು ಚಿಕ್ಕವರಿಂದಾಗಿಂದಲು ಆ ಎಸ್ಟೇಟ್ ದಾರಿ ಕಂಡಿದ್ದೆವೇ ಹೊರತು ಒಳಗೆ ಹೋಗುವ ದೈರ್ಯ ಮಾಡಿರಲಿಲ್ಲ....ಅಲ್ಲಿ ಕೆಲಸಕ್ಕೆ ಹೋಗೋ ಅನೇಕರು ಹೇಳಿದ ಕಿವಿ ನಿಮಿರಿಸುವ ಎಸ್ಟೇಟ್ ಬಗೆಗಿನ ಕಥೆಗಳಷ್ಟೇ ಕೇಳಿದ್ದೆವು .....

ಬಲಕ್ಕೆ ಹೋಗುವ ರಸ್ತೆಯಲ್ಲಿ ಹೋದರೆ ನಮ್ಮ ಊರಿಗೆ ಹೋಗೋ ರಸ್ತೆ ....ಎಡಕ್ಕೆ ಹೋದರೆ ಜೋಡಿಮನೆ ಎಸ್ಟೇಟ್ ಬಂಗಲೆಗೆ ಹೋಗುವ ರಸ್ತೆ....

ಆ ಎರಡು ರಸ್ತೆ ಕೂಡುವ ಮದ್ಯದಲ್ಲಿ ಒಂದು ಆಲದ ಮರದ ಕಟ್ಟೇ ಇದೆ ‍ಅಲ್ಲೇ ಸ್ವಲ್ಪ ಹೊತ್ತು ಕುಳಿತೆವು ....ರಾಮು ಇದ್ದಕ್ಕಿದ್ದಂತೆ ನನ್ನ ಕರೆದು ... ಲೋ ಶಿವು ಈ ಎಸ್ಟೇಟ್ ಒಳಗೆ ಒಂದ್ ಸಲಾನು ನೋಡೇ ಇಲ್ವಲ್ಲೋ .....
ನನಗೆ ಅಮ್ಮ  ಹೇಳಿದ್ದು ನೆನಪಾಯ್ತು....ರಾಮು ಈ ಎಸ್ಟೇಟ್ ನಲ್ಲಿ ಈಗ ಯಾರು ಇಲ್ವಂತೆ ಎಲ್ಲಾ ಬೆಂಗಳೂರಲ್ಲಿ ಇದಾರಂತೆ ತೋಟ ನೋಡ್ಕೊಳ್ಕೋಕೆ ಮ್ಯಾನೇಜರ್ ನೇಮಕ ಮಾಡಿದಾರಂತೆ ಅಮ್ಮ ಹೇಳಿದ್ರು......ಎಂದೆ...
    ಅದಕ್ಕವನು ಲೋ ಶಿವು ಹಾಗಾದ್ರೆ ಇನ್ನು ಒಳ್ಳೇದೇ ಆಯ್ತಲ್ಲೋ ಈ ಮ್ಯಾನೇಜರ್ ಯಾವಾಗ್ಲೂ ಇಲ್ಲೇ ಇರಲ್ಲ...ನಮ್ ಅಪ್ಪ ಹೇಳ್ತಿದ್ರು ಎಸ್ಟೇಟ್ ಒಳಗಿರೋ ಬಂಗಲೇ ರಾಜರ ಕಾಲದ್ದಂತೆ ....ಈ ಎಸ್ಟೇಟ್ ನ ರಾಜರಿಂದ ಎಸ್ಟೇಟ್ ಓನರ್ ಶೆಟ್ರು ಕೊಂಡುಕೊಂಡ್ರಂತೆ...ಆ ಬಂಗಲೆ ಹೇಗಿದೆ ಅಂತ ಒಂದ್ಸಲಾ ಆದ್ರು ನೋಡ್ಬೇಕು ಕಣೋ ಬಾರೋ ಹೋಗೋಣ ....ಎಂದ
ಇವಾಗ ಮದ್ಯಾಹ್ನ ಊಟ ಮಾಡ್ಕೊಂಡ್ ಹೊರಟು ಬಂದ್ರೆ ಆಯ್ತು ಬಾ ಮೊದ್ಲು ಮನೆಗೆ ಹೋಗೋಣ....ಎಂದು ಇಬ್ಬರು ಮನೆಗೆ ಹೊರಟೆವು...
ಊಟ ಮುಗಿಸಿ....ಅಮ್ಮನಿಗೆ  ಬಂಗಲೆಗೆ ಹೊರಟ ವಿಷಯ ಹೇಳಿದರೆ ಬೇಡವೆನ್ನುತ್ತಾರೆಂದು ಹೇಳಲಿಲ್ಲ...ಗೋಡೆಯ ಗೂಟಕ್ಕೆ ನೇತು ಹಾಕಿದ್ದ ಛತ್ರಿ ತೆಗೆದುಕೊಂಡು ಹೊರಟೆ ....ಎಲ್ಲಿಗೋ... ಎಂದರು ಅಮ್ಮ.. ರಾಮು ಮನೆಗೆ ಎಂದು ಹೊರಟೆ....ಆಗಲೇ ಊಟ ಮುಗಿಸಿ...ಛತ್ರಿಯೊಂದಿಗೆ ಟಾರ್ಚ್ ಕೂಡ ತಂದಿದ್ದ ರಾಮು .....ಟಾರ್ಚ್ ಎಂತಕೋ ಮರಾಯ ಅಂದ್ರೆ ಬಂಗಲೇ ಬೀಗ ಹಾಕಿರುತ್ತೆ ಅಲ್ವ ಒಳಗೆ ಹೋಗೊಕೆ ಆಗುತ್ತೋ ಇಲ್ವೋ...ಕಿಟಕಿ ಇಂದ ಬೆಳಕು ಬಿಟ್ರೆ ಒಳಗೇನೇನಿದೆ ಅಂತ ಕಾಣುತ್ತಲ್ಲ ಅದ್ಕೆ.....ಎಂದ...

ಸರಿ ನಡೀ ಮಾರಾಯ ಆದ್ರೆ ಅಲ್ಲಿಂದ ಬೇಗ ಹೊರ್ಡ್ಬೇಕು ಮಳೆ ಬರೋ ಹಾಗಿದೆ....ಎಂದೆ

ಎಸ್ಟೇಟ್ ಬೋರ್ಡು ಇರುವ ರಸ್ತೆಯಲ್ಲಿ ಹೋದೆವು ....ಎಸ್ಟೇಟ್ ಗೆ ಹೋಗುವ ರಸ್ತೆಯಲ್ಲಿ ಇದೇ ಮೊದಲ ಬಾರಿ ಹೋಗುತ್ತಿರೋದು....ಯಾರಾದರು ಎಲ್ಲಿಗೆ ಹೊಗ್ತಿದ್ದೀರಾ ಅಂತ ಗದರಿಸಿದರೆ...ಎಸ್ಟೇಟ್ ಕಾಯೋಕೇ ಅಂತಾನೇ ದೊಡ್ಡ ದೊಡ್ಡ ನಾಯಿಗಳಿದ್ದಾವಂತೆ ಅವೆಲ್ಲಾದರು ಬಂದರೆ ಏನು ಗತಿ....ಹಾಗೇ ತೋಟದಲ್ಲಿ ಜಿಂಕೆಗಳು ಬರ್ತಾವಂತೆ....ಹೀಗೆ ನಾನು ರಾಮು ಮಾತಾಡುತ್ತ ದಾರಿ ಸಾಗಿತು....ಎಸ್ಟೇಟ್ ಪ್ರಾರಂಭಕ್ಕೂ ಮುನ್ನ ದೊಡ್ಡ ಗೇಟು ಬೀಗ ಜಡಿದಿತ್ತು....ನಾವು ಗೇಟು ಹತ್ತಿ ನೆಗೆದೆವು...ಸ್ವಲ್ಪ ದೂರ ನೆಡೆಯುತಿದ್ದಂತೆ ಮತ್ತೊಂದು ದೊಡ್ಡ ಗೇಟ್ ರಸ್ತೆಯ ಎಡಕ್ಕೆ ಸಿಕ್ಕಿತು....ಆ ಗೇಟಿನಿಂದ ಇಣುಕಿದಾಗ ಕಂಡದ್ದು ನಾವು ಕುತೂಹಲದಿಂದ ನೋಡಬೇಕೆಂದು ಬಂದ  ಒಂದು ದೊಡ್ಡ  ಬಂಗಲೆ...ರಾಮು ಕೂಡ ನಾನು ನೋಡ್ತಿನಿ ಈ ಕಡೆ ಬಾರೋ ಶಿವು ಅಂತ ನನ್ನ ತಳ್ಳಿ ಅವನು ಗೇಟಿನಿಂದ ಇಣುಕಿ ಬಂಗಲೆ ಕಣ್ತುಂಬಿಕೊಂಡ....


ಸರಿ ನೊಡಿದ್ದಾಯ್ತಲ್ಲ ನಡಿ ರಾಮು ಹೋಗೋಣ ಎಂದೆ ...ಲೋ ಶಿವು ಇಲ್ಲಿವರ್ಗೂ ಬಂದಿದಿವಿ ಒಳಗೆ ಏನಿದೆ ಅಂತ ನೋಡ್ಕೊಂಡೆ ಹೋಗೋಣ ಕಣೋ ಹೇಗಿದ್ರು ಈಗ ಯಾರೂ ವಾಸ ಇಲ್ಚಲ್ಲ ಈ ಬಂಗಲೆನಲ್ಲಿ ಯಾರು ಕೇಳೊಲ್ಲ....ಬಾರೊ ಬ‍ಾರೋ ಅಂತ ಅಂಗಲಾಚ ತೊಡಗಿದ .....
ಸರಿ ನಡೀ ಮಾರಾಯ ಎಂದು ಗೇಟು ಹತ್ತಿ ಬಂಗಲೆ ಆವರಣಕ್ಕೆ ಬಂದೆವು .....
ಅಬ್ಬಾ ಅಬ್ಬಾ ....ಎಷ್ಟು ದೊಡ್ಡ ಬಂಗಲೆ....ರಾಜನ ಕಾಲದ್ದಂತೆ ಆ ಮೇಲಿನ ಅಂತಸ್ತಿನಲ್ಲಿರೋ ಸೂರ್ಯನ ಚಿತ್ರ ನೋಡು ಶಿವು ಎಂದ ರಾಮು....ಹೊರಗೆ ಮುಖ್ಯ ದ್ವಾರದ ಎರಡು ಭಾಗಕ್ಕೂ ಸಿಂಹದ ಮುಖವಿರುವ ಪ್ರಾಣಿ ಗೊಂಬೆ  ನಿಂತಿವೆ... ಬಹಳಾ ಹಿಂದಿನ  ಕಾಲದ ಹತ್ತು ಅಡಿಗೂ ಮೀರಿದ ದೊಡ್ಡ ಬಾಗಿಲು ...ಅಬ್ಬಾ ಎಂದು ಆಶ್ಚರ್ಯ ದಿಂದ ಅದನ್ನೇ ನೋಡುತ್ತಾ ನಿಂತೆವು....
ಬೌ ....ಬೌ .... ಎಂದು ನಾಯಿ ಬೊಗಳಿದ ಶಬ್ಥವಾಯ್ತು...
ಯಾರೋ ಬಂದ್ರು ಅಂತ ಕಾಣುತ್ತೆ....ನಡಿಯೋ ಎಲ್ಲಾದರು ಅವುತ್ಕೊಂಡು ಕೂರೋಣ....ಎಂದ ರಾಮು ಸರಿ ಎಂದು ಬಂಗಲೆಯ ಆಸು ಪಾಸು ಓಡಾಡಿ  ಚಿಲಕವಾಕಿದ್ದ ಒಂದು ಹಿಂದಿನ ಬಾಗಿಲು ತೆಗೆದು ಒಳ ಹೊಕ್ಕೆವು....ಒಳ ಹೊಕ್ಕ ಕೂಡಲೇ ಕಪ್ಪಗಾಗಿದ್ದ ಧೋ ಎಂದು ಮಳೆ ಶುರುವಿಟ್ಟಿತು...
ಬೊಗಳುತಿದ್ದ ನಾಯಿ ಶಬ್ದವು ನಿಂತಿತು...

ಒಳ ಹೊಕ್ಕ ಕೂಡಲೆ ಬಾಗಿಲನ್ನ ಗಾಬರಿಯಿಂದ ಮುಚ್ಚಿದೆವು....ಮುಂದೆ ಹೆಜ್ಜೆ ಇಡೋಕು ಕಾಣದಂತಹ ಕತ್ತಲೆ...ರಾಮು ತಾನು ತಂದಿದ್ದ ಟಾರ್ಚ್ ಆನ್ ಮಾಡಿದ ...ಆ ಟಾರ್ಚ್ ನ ಬೆಳಕನ್ನ ಸುತ್ತಲು ಹಾಯಿಸುತ್ತ ಬಂಗಲೆಯ ಭವ್ಯತೆಯನ್ನ ಕಣ್ತುಂಬಿಕೊಂಡೆವು ...ಚಿತ್ತಾರಗಳಿಂದ ಕೂಡಿದ ದೊಡ್ಡ ದೊಡ್ಡ ಕಂಬಗಳು....ಗೋಡೆಯ ಮೇಲೆ ಜಿಂಕೆಯ ತಲೆಯಾಕಾರದ ಗೊಂಬೆ ಕೊಂಬುಗಳು ....ಆಗಿನ ಕಾಲದ ಕುರ್ಚಿ ...ಟೇಬಲ್ಲುಗಳು....ಮೇಲಿನ ಮಹಡಿಗೆ ಹೋಗುವ ಮೆಟ್ಟಿಲು ....ಇದಕ್ಕು ಮೊದಲು ಅಂತಸ್ತಿನ ಮನೆಗಳನ್ನೇ ನೋಡದ ನಮಗೆ ಮೇಲೆ ಹೋಗುವ ಬಯಕೆಯಾಯಿತು....ಮೆಟ್ಟಿಲ ಮೇಲೆ ಟಾರ್ಚಿನ ಬೆಳಕು ಚೆಲ್ಲುತ್ತಾ ಮೇಲೆ ಹೊರಟೆವು ಮರದಿಂದ ಮಾಡಿದ ಮೆಟ್ಟಿಲುಗಳು...ಹತ್ತಿ ಮೇಲೆ ಬಂದ ನಮಗೆ ಒಂದು ದೊಡ್ಡ ಕೊಠಡಿ ಸಿಕ್ಕಿತು...ಅದರಲ್ಲಿ ವಿಶಾಲವಾದ ಮಂಚ ...ಒಂದು ಕುರ್ಚಿ ....ಚಿಕ್ಕದಾದ ಟೇಬಲ್ಲು ಕಾಣಿಸಿತು...ಎಲ್ಲಾ ಧೂಳಿಡಿದು ಜೇಡರ ಬಲೆ ಕಟ್ಟಿತ್ತು....ಟಾರ್ಚ್ ನಿಂದ ಆಚೆ ಈಚೆ ಬೆಳಕು ಹಾಯಿಸುವಾಗ ಕರೆಂಟಿನ ಸ್ವಿಚ್ ಸಿಕ್ಕಿತು ಅದನ್ನ ಆನ್ ಮಾಡಿದ ಕೂಡಲೆ ರೂಮಿನ ತುಂಬೆಲ್ಲ ಬೆಳಕು ಆ ಬೆಳಕಿಗೆ ಇಲಿಗಳೆಲ್ಲ ಶಬ್ಧ ಮಾಡುತ್ತ ಅತ್ತಿಂದಿತ್ತ ಇತ್ತಿಂದತ್ತ ಒಡಲು ಶುರು ಮಾಡಿದವು ತಕ್ಷಣ ಕ್ಕೆ ನಮಗೆ ಗಾಬರಿಯಾದರು ಆ ನಂತರ ಇಲಿಯೆಂದು ಸಾವರಿಸಿಕೊಂಡೆವು.....ಹಾಗೇ ನಾನು ಎಲ್ಲಾ ವಸ್ತುಗಳನ್ನ ಮುಟ್ಟಿ ನೋಡುತಿದ್ದಾಗ ಟೇಬಲ್ಲಿನ ಮೇಲಿದ್ದ ಪುಸ್ತಕವೊಂದು ಅದರ ಮೇಲಿನ ದಪ್ಪನೆಯ ವಿವಿಧ ಚಿತ್ರಗಳಿಂದ ಗಮನ ಸೆಳೆಯಿತು...ಅದರ ಒಳ ಪುಟಗಳನ್ನ ತೆಗೆದೊಡನೆ....ಪೇಜಿನ ತುದಿಯೆಲ್ಲ ಗೆದ್ದಲು ಹುಳವೋ ಎಂಥದೋ ತಿಂದಿದ್ದವು ಆದರೆ ಅದರಲ್ಲಿನ ಅಕ್ಷರ ಸ್ಪಷ್ಟವಾಗಿ ಕಾಣುತಿದ್ದವು...ಆ ಪುಸ್ತಕ ತೆರೆದಂತೆ ಅದರಲ್ಲಿ ಒಂದೆರಡು ಪುಟ ಕೆಳಗೆ ಬಿತ್ತು...

" ಗೆಳೆಯ ಚೆಲುವರಾಯ ಶೆಟ್ಟಿಗೆ  ನಿನ್ನ ಗೆಳೆಯ ರಂಗಾಶೆಟ್ಟಿ ಮಾಡುವ ನಮಸ್ಕಾರಗಳು...
ನಾನು ಯಾವ ಬಾಯಿಂದ ನಿನಗೆ ಕ್ಷಮೆ ಕೇಳ ಬೇಕೋ ನನಗೆ ತಿಳಿಯುತ್ತಿಲ್ಲ ನಿನ್ನ ಎದುರಿಗೆ ಮುಖಕೊಟ್ಟು ನಿಲ್ಲಲು ನಾನು ಅಸಹಾಯಕನಾಗಿದ್ದೇನೆ ಅದಕ್ಕೇ ಈ ಪತ್ರದಲ್ಲಿ ನೆಡೆದ ವಿಷಯವೆಲ್ಲ ತಿಳಿಸಿ ಕ್ಷಮೆ ಬೇಡುತಿದ್ದೇನೆ.......ನಾನು ನೀನು ಬಾಲ್ಯದಿಂದ ಗೆಳೆಯರು ಒಂದೇ ಊರು ಉಡುಪಿಯಲ್ಲಿ ಹುಟ್ಟಿದೆವು ಒಂದೇ ಶಾಲೆಯಲ್ಲಿ ಓದಿದೆವು...ಕೊನೆಗೆ ಇಬ್ಬರೂ ಅಪ್ಪ ಮಾಡುತಿದ್ದ  ಮೀನು ಹಿಡಿಯುವರಿಂದ ಮೀನು ಖರೀದಿಸಿ ದೇಶದ ಎಲ್ಲಾ ರಾಜ್ಯಗಳಿಗೂ ಕಳಿಸೋ ದೊಡ್ಡ ಕಂಟ್ರಾಕ್ಟ್ ಗಳು ಸಿಗೋಕೆ ಪ್ರಾರಂಭವಾದ ಮೇಲೆ ನಮ್ಮ ಸ್ಥಿತಿ ಮೊದಲಿಗಿಂತ ಇನ್ನು ಉತ್ತಮವಾಯ್ತು...ನಮ್ಮ ಬಿಸಿನೆಸ್ ನ್ನು ಇನ್ನು ವಿಸ್ತರಿಸಿದರೆ ಇನ್ನು ಹೆಚ್ಚು ಲಾಭ ಬರುತ್ತೆಂದು ನಿನ್ನ ತಲೆ ಕೆಡಿಸಿ ನಾನೇ....ವಿದೇಶಕ್ಕೆ ಮೀನು ಕಳಿಸುವ ದೊಡ್ಡ ಕಂಟ್ರಾಕ್ಟ್  ಅದಕ್ಕೆ ಇಬ್ಬರ ಸಾಕಷ್ಟು ಹಣ ಖರ್ಚುಮಾಡಿ ಶುರುಮಾಡಿದೆವು ...ಅದರಲ್ಲಿ ದಿನೇ ದಿನೇ ಹೆಚ್ಚುತಿದ್ದ ಲಾಭದಲ್ಲಿ ನಿನಗೂ ಅರ್ಧ ಪಾಲು ಕೊಡಲು ಮನಸ್ಸು ಒಪ್ಪಲಿಲ್ಲ...ಆ ಪೂರ್ತಿ ಲಾಭ ನಾನೇ ತೆಗೆದು ಕೊಂಡರೆ ನಾನೇ ಶ್ರೀಮಂತ ನಾಗ ಬಹುದೆಂಬ ದುರಾಸೆಯಿಂದ ನಿನಗೆ ಕಾಂಟ್ರಾಕ್ಟ್ ಪೇಪರುಗಳಲ್ಲಿ ಮೋಸದ ರುಜು ಹಾಕಿಸಿ ನಿನಗೆ ತಿಳಿಯದಂತೆ ಎಲ್ಲಾ ಲಾಭವನ್ನ ಒಬ್ಬನೇ ತೆಗೆದುಕೊಂಡು ಬಿಸಿನೆಸ್ ನಲ್ಲಿ ನಿನ್ನ ಪಾಲುದಾರಿಕೆಯ ಆಸ್ತಿಯನ್ನು ನಾನೇ ಮೋಸದಿಂದ ಮಾರಿ ಬಂದ ಹಣದಿಂದ ಸಕಲೇಶಪುರಕ್ಕೆ ಬಂದು ದೊಡ್ಡ ಎಸ್ಟೇಟು ಖರೀದಿಸಿದೆ....ಯಾರೋ ರಾಜವಂಶಸ್ಥರಂತೆ ಮಾರಿ ಫಾರಿನ್ ಗೆ ಹೋಗುವುದರಲ್ಲಿದ್ದರು ಅವರಿಂದ ಈ ಬಂಗಲೆ ...ಎಸ್ಟೇಟ್ ಎಲ್ಲಾ ಖರೀದಿಸಿದೆ...ಇಲ್ಲಿಗೆ ಬಂದ ಮೊದ ಮೊದಲ ದಿನಗಳು ನನ್ನ ಒಳಗಿನ ದುರಹಂಕಾರ ನೆಮ್ಮದಿ ಎಂದು ತೋರಿತಾದರು....ಕಳೆದ ವರ್ಷ ಮಳೆಗಾಲದಲ್ಲಿ ಹೆಂಡತಿ ಮಕ್ಕಳು ಸಿಟಿಯಿಂದ ಎಸ್ಟೇಟ್ ಗೆ ಕಾರಿನಲ್ಲಿ ಬರುವಾಗ ರಸ್ತೆಯಲ್ಲಿ ಮರ ಕರೆಂಟ್ ಕಂಬದ ಮೇಲೆ ಬಿದ್ದು  ವಿದ್ಯುತ್  ತಂತಿಗಳು ರಸ್ತೆಯಲ್ಲೇ ತೂಗುತಿದ್ದದನ್ನ ಗೊತ್ತಾಗದೇ ಕಾರು ಬರುವಾಗ ಕಾರಿಗೆ ತಾಗಿ ಬೆಂಕಿ ಹೊತ್ತಿಕೊಂಡು ಮಗ ....ಹೆಂಡತಿ ಕಾರಿನೊಳಗೆ ಸುಟ್ಟು ಹೋದರು...ಇದಾದ ಮೇಲೆ...ನಾನು ಸಂಪಾದಿಸಿದ್ದನ್ನ ತಿನ್ನೋಕೆ ಹೆಂಡತಿ ಮಕ್ಕಳೇ ಇಲ್ಲವಾದ ಮೇಲೆ ಇನ್ನೆಲ್ಲಿಯ ನೆಮ್ಮದಿ ....ಜೀವನದಲ್ಲಿ ಒಂಟಿ ಆಗಿ ಹೋದೇ.........ನೆಡೆದ ವಿಷಯ ತಿಳಿಸಿದರೆ ನೀನೇನೋ ಕ್ಷಮಿಸ್ತೀಯಾ ನನಗೆ ನಿನ್ನ ಮುಂದೆ ಬರಲು ಯಾವ ಮುಖವಿಲ್ಲ....ದಯಮಾಡಿ ನನ್ನನ್ನು ಕ್ಷಮಿಸು ಗೆಳೆಯ ಲಾಯರ್ ನನ್ನು ಕರೆಸಿ ನಿನ್ನ ಹೆಸರಿಗೆ ವಿಲ್ ಮಾಡಿಸಿದ್ದೇನೆ ....ಅದು ಸ್ವಲ್ಪದಿನ ಲಾಯರ್ ಮುಖಾಂತರ ನಿನ್ನ ಕೈ ಸೇರುತ್ತೆ....ಸಾದ್ಯವಾದರೆ ಕ್ಷಮಿಸು ಇಂತಿನಿನ್ನ ಗೆಳೆಯ ರಂಗಾಶೆಟ್ಟಿ...."

ಅಷ್ಟ ರಲ್ಲಿ ರಾತ್ರಿ ಏಳರ ಸಮಯ ಪತ್ರ ಓದಿ ಮುಗಿಸಿದ ಶಿವುಗೆ ...ರಾಮು ಲೋ ಲೇಟ್ ಆಗಿದೆ ಹೊರಡೋಣ ಬಾರೋ ಎಂದು ಮೆಟ್ಟಿಲಿಳಿದು ಬಾಗಿಲ ಬಳಿ ಬಂದು ಬಾಗಿಲು ತೆಗೆಯಲು ಪ್ರಯತ್ನಿಸಿ ಆಗದೇ ಬಂಗಲೇ ಒಳಗೆ ಹೆದರುತ್ತ...ಕುಳಿತಿದ್ದೆವು....ಬರುವಾಗ ಬಾಗಿಲು ತೆಗೆಯಲು ಸುಲಭವಾಗಿ ಬಂತು ...ಈಗ ಯಾಕೆ ತೆಗೆಯಲಾಗುತ್ತಿಲ್ಲ ಎಂದು ಗಾಬರಿಯಾಯ್ತು....ಈ ಮನೆಯಲ್ಲಿ ದೆವ್ವ ಇದೆ ಈ ಮನೆ ಓನರ್ ನೇಣು ಹಾಕಿಕೊಂಡು ಸತ್ತಿದ್ನಂತೆ ಅವನೇ ಈ ರಂಗಾಶೆಟ್ಟಿ ಅವನ ಪೇಪರ್ ಓದಿದ್ದಕ್ಕೆ ಏನಾದರು ಸೇಡುತೀರಿಸಿಕೊಳ್ಳೋಕೆ ಬಾಗಿಲು ತೆಗೆಯೋಕೆ ಬಿಡ್ತಿಲ್ವ ಅನೇಕ ಆಲೋಚನೆಗಳು ಮನಸ್ಸಿನಲ್ಲಿ.....
ಆದರೆ ವಾಸ್ತವವಾಗಿ ಆಗಿರುವುದೇನೆಂದರೆ  ರಾತ್ರಿಯ ವಾಚ್ ಮ್ಯಾನ್  ಬಂಗಲೆಯ ಹಿಂಬಾಗದ ಬಾಗಿಲು ತೆರೆದಿರುವುದನ್ನ ನೋಡಿ ಬಾಗಿಲು ಎಳೆದು ಚಿಲಕ ಹಾಕಿಕೊಂಡು ಹೋಗಿದ್ದಾನೆ... ನಾವು ಬಾಗಿಲು ತೆಗೆಯುವ ಎಲ್ಲಾ ಪ್ರಯತ್ನ ಮಾಡಿ ಸಾಧ್ಯ ವಾಗದೇ ಇದ್ದಾಗ  ಬಾಗಿಲು ಬಡಿಯ ತೊಡಗಿದೆವು ಯಾರಾದ್ರು ಇದ್ರೆ ಕಾಪಾಡಿ ....ಯಾರಾದ್ರು ಇದ್ರೆ ಕಾಪಾಡಿ ಎಂದು ಚೀರುತ್ತ.... ಗೇಟಿನ ಹೊರಗಿದ್ದ ವಾಚ್ ಮ್ಯಾನ್ ಗೆ ನಮ್ಮ ಧ್ವನಿ ಕೇಳಿಸಿ ಓಡಿ ಬಂದು ಬಾಗಿಲು ತೆಗೆದು ...ಚೆನ್ನಾಗಿ ಬೈದು ಮನೆಯವರೆಗೂ ಬಂದು ಕಳುಹಿಸಿ ಹೋದ....


                                              ರಚನೆ 

                                  ಶ್ಯಾಮ್ ಪ್ರಸಾದ್ ಭಟ್ 





Saturday, October 23, 2021

ಭಾವಯಾನ

 


ಬೆಳಗ್ಗೆ...ಬೇಗ ಎದ್ದು ಶಾಲೆಗೆ ಹೊರಡ ಬೇಕಿದ್ದ ಲಕ್ಷ್ಮಿ ಯಾಕೋ....ಇನ್ನು ಎದ್ದಿರಲಿಲ್ಲ...ಹಾಸಿಗೆಯಲ್ಲಿ ಹೊರಳಾಡಿ ಕೊರಗುತಿದ್ದಳು...

ಅಷ್ಟೊತ್ತಿಗಾಗಲೇ ಅವರ ಅಮ್ಮ....

ಲಕ್ಕಿ....ಲಕ್ಕಿ ....ಹೊತ್ತು ನೋಡಲ್ಲಿ.....ಶಾಲೆಗ್ ಹೋಗಲ್ವ ಮರಿ......ಬೇಗ ಎದ್ದೇಳು... ಬೇಗ.....ಎನ್ನುತ್ತಲೇ....ಹತ್ತಿರ ಬಂದವರೆ..ತಟ್ಟಿ ಎಬ್ಬಿಸಲು ಹೋದರು .....

ಮೈ ಬಿಸಿ ಇದ್ದಂತೆ ಕಂಡಿತು ಕೂಡಲೆ....ಲಕ್ಕಿ ಎದ್ದೇಳು ಮರಿ ಎಂದು ಕುತ್ತಿಗೆ ಬಾಗಕ್ಕೆ ..ಹಣೆ ಗೆ ಕೈ ಇಟ್ಟು ನೋಡಿ....ಅಯ್ಯೋ ಏನೇ ಇದು ಪುಟ್ಟಕ್ಕ....ಜ್ವರ ಇಷ್ಟೊಂದು ಬೆಂದ್ ಹೋಗ್ತಿದಿಯಲೇ...

ಎನ್ನುತ್ತಾ ರೂಮಿಂದ ಗೊಣಗುತ್ತಲೇ....ಛತ್ರಿ ತಕ್ಕೊಂಡ್ ಹೋಗ್ ಅಂದ್ರೇ ಕೇಳಲ್ಲ....ತಗೋಂಡ್ ಹೋದ್ರೆ ಎಲ್ಲಿ ಬೇಕ್ ಅಲ್ಲೇ ಮರ್ತ್ಕೊಂಡ್ ಬಿಟ್ ಬರೋದ್....ನೋಡಿಲ್ಲಿ ಈಗ ಜ್ವರ....ಎಲ್ಲಾ ನನ್ ಕರ್ಮ....ಎಂದು ತಲೆ ಚೆಚ್ಚೆಕೊಳ್ಳುತ್ತ...ರೂಮಿಂದ ಹೊರ ಬಂದು....ಇನ್ನೇನು ಸೀದೋಗುತಿದ್ದ ರೊಟ್ಟಿ ಯನ್ನ.....ಓಡಿ ಹೋಗಿ ಮಗುಚಿದರು..


ಅದಾಗ ಮಳೆಗಾಲ....ಮಲೆನಾಡಲ್ಲಿ ಮಳೆಗಾಲದಲ್ಲಿ ಕೇಳಬೇಕೆ...ಬಿಡುವಿಲ್ಲದಂತೆ ಸುರಿಯುತ್ತದೆ....

ಬಿಡುವು ಕೊಟ್ಟಾಗ ಕೆಲಸ ಮಾಡಿಕೊಳ್ಳಬೇಕಷ್ಟೆ....

ಶಾಲೆ ಗಳು ಪ್ರಾರಂಭ ಆಗೋದು ಈ ಮಳೆಗಾಲದ ಸಮಯದಲ್ಲೇ....

ಲಕ್ಷ್ಮಿ  8 ನೇ ತರಗತಿ ಓದುತಿದ್ದ ಹುಡುಗಿ...ಹೈಸ್ಕೂಲ್ ಗೆ

ಕೆಂಚನಹಳ್ಳಿ....ಯಿಂದ ....ಮಾವಿನ ಕೊಪ್ಪಲಿನ ವರೆಗೂ ನೆಡೆದು ಸಾಗಬೇಕಿತ್ತು.. ಪ್ರಾಥಮಿಕ ಶಾಲೆ ಕೆಂಚನಹಳ್ಳಿಯಲ್ಲೇ....ಇದೆ.


ಎರಡು ವರ್ಷದಿಂದ ಹೀಗೊಂದು ಸುದ್ದಿ ಊರಿನಲ್ಲಿ ಹಬ್ಬಿತ್ತು ....

ಮಕ್ಕಳು ಕಳ್ರು....ಊರೋಳಗ್ ಬಂದಿದರಾಂತೆ....

ಕೆಂಪು ಕಾರಲ್ಲೇ ಬರ್ತಾರಂತೆ....

ಈ ಚಾಕಲೇಟ್ ....ಐಸ್ ಕ್ರೀಮ್ ಲಿ ಮೂರ್ಚೆ ಹೋಗೋ ಔಷಧಿ ಹಾಕಿ ಎತ್ಕಂಡ್ ಹೋಗ್ತಾರಂತೆ...ಕಿಡ್ನಿ ...ಹೃದಯ ಮಾರ್ಕೋತರಂತೆ.....


ಈ ಸುದ್ದಿ ಗೆ ಬೆದರಿದ ಎಷ್ಟೋ ಕುಟುಂಬ ಗಳು ತಮ್ಮ ತಮ್ಮ ಮಕ್ಕಳನ್ನ .. ಹೆಣ್ಣು ಮಕ್ಕಳನ್ನು ಹೈಸ್ಕೂಲ್ ಮೆಟ್ಟಿಲನ್ನೇ ಹತ್ತಿಸಲಿಲ್ಲ....ಗಂಡು ಮಕ್ಕಳನ್ನ ಕಳಿಸೋಕೆ ಭಯವೇನೊ ಇದ್ದರು ಗಂಡು ಕೂಸಲ್ಲವೇ ಗಟ್ಟಿಯಾಗಿರ್ತದೆ ...ಹೇಗಾದರು ಅನಾಹುತ ತಪ್ಪಿಸಿ ಕೊಳ್ತದೆ ಅನ್ನೋ ದೈರ್ಯದಲ್ಲಿ ಕಳುಹಿಸುತಿದ್ದರು...


ಆದರೆ ಲಕ್ಷ್ಮಿ ಅಪ್ಪ ಅಮ್ಮ ರಮೇಶಪ್ಪನದು ...ವಿಶಾಲಾಕ್ಷಮ್ಮ ನದು ಬಲು ಗಟ್ಟಿ ಮನಸ್ಸು....ಯಾರ್ ಎತ್ಕಂಡ್ ಹೋಗ್ತಾರೆ....ಎಲ್ಲೋ ಒಂದೆರಡ್ ಕಡೆ ಆಯ್ತು ಅಂತ ಎಲ್ಲಾ ಕಡೆ ಆಗುತ್ತಾ....

ಆ ಕಾರಣ ಕೊಟ್ಟು ಮಕ್ಳು ಓದದ್ನ ತಪ್ಪಿಸ್ ಬಾರ್ದು ನಾವೇ ದೈರ್ಯಗೆಟ್ಟರೆ ಹೆಂಗೆ.....ಎಂದು ಪ್ರಶ್ನೆ ಮಾಡಿ ನಿಲ್ಲೋ ವರ್ಚಸ್ಸು..

ಊರಿನವರು ಭಯ ಪಡಲು ಕಾರಣವಿತ್ತು...

   ಆಗಾಗಾ ಊರಿನಲ್ಲಿ ಕೆಂಪು ಕಾರುಗಳು ಓಡಾಡುತಿದ್ದವು....


ಹೀಗೇ ಒಂದು ದಿನ.....


ಊರಿಗೆ ಆಗಾಗಾ ಬೇಸಿಗೆಯಲ್ಲಿ ಬರುತಿದ್ದ....ಏಸ್ ಕ್ರೀಂ

ರಂಗಣ್ಣ ಒಮ್ಮೆ ಲಕ್ಷ್ಮಿ ಮನೆಯ ಪಕ್ಕದ ಮನೆಯ ತನ್ವಿತ 

3 ವರ್ಷದ ಹುಡುಗಿ....

ರಂಗಣ್ಣ ನ ಐಸ್ ಕ್ರೀಂ  ಸೈಕಲ್ ಟ್ರಿಣ್.... ಟ್ರೀಣ್ ... ಪಾಂಕು ....ಪಾಂಕು ಎಂದು ಶಬ್ಧ ಮಾಡಿದೊಡನೆ...ಓಡಿ ಬಂದು ಚಿಕ್ಕವಳಿದ್ದಾಗಿನಿಂದ ಐಕೀಮು ಐಕೀಮು ಎಂದು ಕುಣಿಯುತಿದ್ದಳು... ಮಕ್ಕಳಿಲ್ಲದ ರಂಗಣ್ಣ ನಿಗೂ ತನ್ವಿತಾಳನ್ನ ಕಂಡರೆ ಎಲ್ಲಿಲ್ಲದ...ಪ್ರೀತಿ


ಒಂದು ಬೇಸಿಗೆಯ ಮಧ್ಯಾಹ್ನ ತನ್ವಿತ ತನ್ನ ಮನೆ ಮುಂದಿನ  ಮಣ್ಣಿನ ರಾಶಿಯಲ್ಲಿ ಆಡುತಿದ್ದಳು....

 

ರಂಗಣ್ಣ ಅದೇ ಸಮಯಕ್ಕೆ...ತನ್ನ ಐಸ್ ಕ್ರೀಂ ಹೊತ್ತುತಂದ ಸೈಕಲ್ ಸದ್ದು ಮಾಡುತ್ತ....ಬಂದ...


    ಸದ್ದು ಕೇಳಿದೊಡನೆ....ರಂಗಣ್ಣನ ಬಳಿಗೆ ಓಡಿದಳು....

      ರಂಗು ಮಾಮ....ರಂಗು ಮಾಮ....ಐಸ್ ಕ್ರೀಮು...ಎಂದು ಕುಣಿಯುತಿತ್ತು...


ಅಪ್ಪ ಎಲ್ಲಿ ಹೋದ್ರು ಪುಟ್ಟಿ...ಎಂದು ಕೇಳುತ್ತಾ...

ಐಸ್ ಕ್ರೀಂ ತುಂಬಿ ಕೊಟ್ಟ .....

ಅಪ್ಪ....ಕೆಲಸಕ್ಕೆ ಹೋಗಿದೆ....

ಅಮ್ಮ...ಒಳಗಿದೆ...ಎಂದವಳೇ...ಐಸ್ ಕ್ರೀಂ ಸವಿಯುತ್ತ ಕುಣಿದಾಡುತಿತ್ತು....


ಇದಾದ ಅರ್ಧ ಗಂಟೆ ನಂತರ 


ತನ್ವಿತಾಳ ಅಮ್ಮ ದಾಕ್ಷಾಯಿಣಿ ..... ತನ್ವಿತಾ .... ತನ್ವಿತಾ....

ಎಲ್ಲಿದಿಯಾ ಪುಟ್ಟಿ...ಎಂದು ಕೂಗಿದರು ... ತನ್ವಿತಾ ಎಲ್ಲೂ ಕಾಣಲಿಲ್ಲ....ಗಾಬರಿಗೊಂಡ ಅಮ್ಮ....ಅಕ್ಕ ..ಪಕ್ಕದ ಮನೆಗೆ ಹೋಗಿರಬಹುದೆಂದು ಎಲ್ಲಾ ಕಡೆ ವಿಚಾರಿಸಿದರು.

  ಸಮೀಪದಲ್ಲೇ ಇದ್ದ ಅಂಗನವಾಡಿ ಕಡೆಯೂ ಹೋಗಿ ಬಂದರು....

 ಮೂರು ರಸ್ತೆ ಕೂಡುವ ಸರ್ಕಲ್ ಬಳಿಯೂ ಹೋಗಿ ಬಂದರು. ಇವರ ಗಾಬರಿ ಕಂಡು ....ಸರ್ಕಲ್ ನಲ್ಲೇ ಇರುವ ಅಂಗಡಿಯ ರಾಮಣ್ಣ ನ ಬಳಿ ಬಂದರು ....ಏನಾಯ್ತಮ್ಮ....ಯಾಕ್ ಹೀಗ್ ಗಾಬರಿ ಆಗಿದ್ದೀರಿ....

   ರಾಮಣ್ಣ  ಮಗಳು ಕಾಣಿಸ್ತಿಲ್ಲ....ಚಾಕಲೇಟು ಅದು ಇದು ಅಂತ ಏನಾದ್ರು ತಗೋಳಕ್ ಬಂದಿದ್ಲಾ....


ಇಲ್ಲ ಪುಟ್ಟಿ ಸರ್ಕಲ್ ವರ್ಗೂ ಒಬ್ಳೇ ಬರಲ್ಲ....ಯಾವತ್ತೂ ಬಂದೂ ಇಲ್ಲ....

ರಾಮಣ್ಣ ನ ಪತ್ನಿ ಓಡಿ ಬಂದು ವಿಷಯ ತಿಳಿದು....ಅಯ್ಯೋ ಎಲ್ಲೋಯ್ತಪ್ಪ ಈ ಪುಟ್ಟಕ್ಕ.......

 ಆಗ್ಲಿಂದಾ ಯಾವ್ದೋ ಕೆಂಪ್ ಕಾರು ಬೇರೆ ಮ್ಯಾಕೆ - ಕೆಳಿಕೆ ಓಡಾಡ್ತಿತ್ತು ಎಂದ ರಾಮಣ್ಣ  ಅಂಗಡಿಯಿಂದ ಅಂಗಳಕ್ಕೆ ಬಂದು ತಲೆ ಮೇಲೆ ಕೈ ಹೊತ್ತು.....ಎಲ್ಲೋಯ್ತಪ್ಪ ಈ ಮಗ...ಏನಾಯ್ತಪ್ಪ ಮಗೀಗೇ..ಎಂದು ಮನದಲ್ಲೇ ನೊಂದು ಗುನುಗಿದ.


ಕೆಂಪು ಕಾರು ಎಂದೊಡನೆ ತನ್ವಿತಾಳ ಅಮ್ಮ ದಾಕ್ಷಾಯಿಣಿ  ಮತ್ತಷ್ಟು ಗಾಬರಿಗೊಂಡರು....ಸರಸರನೆ ಮನೆಗೆ ಓಡಿ ...ಲ್ಯಾಂಡ್ ಲೈನ್ ನಿಂದ ಗಂಡನಿಗೆ ಫೋನ್ ಮಾಡಿದರು...

ಗಂಡನಿಗೆ ವಿಷಯ ತಿಳಿಸಿದಾಗ .....ಬೇಗ ಬರುವುದಾಗಿ ತಿಳಿಸಿದರು.


 ಮನಸ್ಸು ತಡೆಯದೇ ತಾಯಿ ಹೃದಯ ನನ್ ಮಗ ಎಲ್ಲೋಯ್ತೋ ಕಾಣುಸ್ತಿಲ್ವಲಪ್ಪ....ಅಯ್ಯೋ ದೇವ್ರೇ.....ಎಂದು ಬೀದಿಯ ಬದಿಯಲ್ಲಿ ಅರಚಿಕೊಳ್ಳುತಿದ್ದಳು...


ಎದುರು ಮನೆಯ ಸೀತಮ್ಮಜ್ಜಿ...ನಿದ್ದೆ ಹೋಗಿದ್ದು ...ಗಲಾಟೆ ಕೇಳಿಸಿ ಎಚ್ಚರ ಗೊಂಡು..ಹೊರಬಂತು..


 ಏನಾಯ್ತೇ.. ??


  ಅಜ್ಜಿ ನನ್ ಮಗು ಕಾಣುಸ್ತಿಲ್ಲ ಕಣಜ್ಜಿ....ಎಲ್ ಹೋಯ್ತೋ ಏನೋ....ಅಯ್ಯೋ...ದೇವ್ರೇ...ಎಂದು ಅಳಲು ಶುರು ಮಾಡಿದಳು...


ಸುಮ್ಕಿರೇ....ಅತ್ರೆ  ಮಗ ಬರುತ್ತಾ....ಹುಡ್ಕನ ಸುಮ್ಕಿರು....


ನಿನ್ ಗಂಡ ಬರ್ನಿಲ್ವ....?? ಎಂದೊಡನೆ...

 ರಸ್ತೆಯಲ್ಲಿ ಎಂ ಎ ಟಿ ಗಾಡಿ ಶಬ್ದವಾಯಿತು...


ಬಂದವನೆ..... ಏನಾಯ್ತೇ....ಎಲ್ ಹೊದ್ಲೇ ಪಾಪು..ಎಂದಾಗ....

 ನೆಡೆದದ್ದನೆಲ್ಲ...ದಾಕ್ಷಾಯಿಣಿ ಗಂಡನಿಗೆ ಹೇಳಿದಳು...


ರಂಗು ಅಣ್ಣ...ನ ಐಸ್ ಕ್ರೀಂ ಎಂದೊಡನೆ ...ದಾಕ್ಷಾಯಿಣಿ ಗಂಡ ಹೀಗೆಂದ


ದಾಕ್ಷಿ ನೆನಪಿದಿಯಾ !!

 ಹಿಂದೆ ಒಂದ್ಸಲ...

ರಂಗಣ್ಣ ಯಾವ ಜಲ್ಮದ ಶಾಪನೋ ನಂಗ್ ಮಕ್ಳಿಲ್ಲ.. ನಿಮ್ಮ ಪುಟ್ಟಿ ನ ನಂಗ್ ಕೊಡಿ ಸ್ವಾಮಿ ಸಾಕೋತಿನಿ  ಎಂದು ...ಅಯ್ಯೋ ಈ ಮುದ್ದು ಕಂದಮ್ಮ ನಾ ನೀವ್ ಕೊಡಿ ಅಂದ್ರೇ ಕೊಟ್ ಬಿಡ್ತೀರಾ.........ಹೋಗ್ಲಿ ಮನೆಗಾದ್ರು ಕರ್ಕೊಂಡ್ ಹೋಗಿ ನಮ್ಮನೆಯವ್ಳ್ ಜೊತೆ ಒಂದ್ ದಿನ ಆಟ ಆಡ್ಕೊಂಡ್ ಬರ್ತಾ ..ನಾಳೆ ವಾಪಾಸ್ ಕರ್ಕೊಂಡ್ ಬರ್ತಿನಿ ಎಂದಾಗ...


ನೀನು ಇಲ್ಲ ಕಳ್ಸಲ್ಲ.... ಎಂದಿದ್ದೆ....

 

ಸರಿ ಬಿಡಿ ಮಕ್ಳಿಲ್ಲದ ನಂಗೆ....ನಿಮ್ ಮಗಳಲ್ಲಿ ಮಕ್ಕಳ ಪ್ರೀತಿ ಕಾಣ್ತಿದಿನಿ....ಚೆನ್ನಾಗಿರು ಮಗಳೆ ಎಂದು ತನ್ವಿತಾಳಾ ಕೆನ್ನೆ ಸವರಿ....ಬೇಸರದಿಂದ ಹೋಗಿದ್ದ....


ಆ ನೆನಪಾಗಿ ...ಅದರಲ್ಲು ಸ್ವಲ್ಪ ಸಮಯದ ಮೊದಲು ರಂಗಣ್ಣ ನ ಐಸ್ ಕ್ರೀಂ ಗಾಡಿ ಬಂದು ಹೋದದ್ದರ ಬಗೆಗೆ ಅಕ್ಕ ಪಕ್ಕದ ಮನೆಯವರು ನೀಡಿದ ಮಾಹಿತಿ ಮೇರೆಗೆ ....ತಲೆಗೆ ಥಟ್ ಎಂದು ಏನೋ ಹೊಳೆದವನಂತೆ ...ತನ್ನ ಹೆಂಡತಿಗೆ

ಸರಿ ಮನೆ ಬಾಗಿಲಿಗೆ ಬೀಗ ಹಾಕಿ ಬ‍ಾ ...ಹಾಗೇ ಪಾಪು ದು ಒಂದು ಫೋಟೋ ನು ತಗೋ.


 ಸರಿ ರೀ...ಎಂದು ಒಳಗೆ ಹೋಗಿ ಹತ್ತು ನಿಮಿಷದೊಳಗೆ ಮನೆ ಬಾಗಿಲಿಗೆ ಬೀಗ ಜಡಿದು ಓಡುತ್ತಾ ಬಂದು ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಳು..


ರಂಗಣ್ಣ ನ ಮನೆ ಬೀದಿ ಚೆನ್ನಾಗಿ ಪರಿಚಯವಿದ್ದರಿಂದ ಅರ್ಧ ಗಂಟೆಯಲ್ಲಿ ರಂಗಣ್ಣ ನ ಮನೆಗೆ ತಲುಪಿದ್ದ....


ತನ್ವಿತಾ ...ರಂಗಣ್ಣ ಹಾಗೂ ಅವರ ಪತ್ನಿಯೊಡನೆ ಆಡುತ್ತ ನಲಿಯುತಿದ್ದದನ್ನು ರಂಗಣ್ಣನ ಮನೆಯ ಗೇಟಿನ ಬಳಿಯಿಂದಲೇ ಕಾಣಿಸಿತು ....

ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.. 

    ಆ ದೃಶ್ಯ  ಎಷ್ಟು ನೆಮ್ಮದಿ ನೀಡಿತ್ತೆಂದರೆ ತಕ್ಷಣಕ್ಕೆ ಒಳಗೆ ಹೋಗದೆ ...ಅಲ್ಲೇ ನಿಂತು ರಂಗಣ್ಣ  ಆವನ ಹೆಂಡತಿ ಶಾಂತಮ್ಮ ತನ್ವಿತಾಳೊಂದಿಗೆ ತಾವು ಮಗುವಾಗಿ ಆಡುತ್ತಿರೋದು ಕಂಡು ತನ್ವಿತಾಳ ಅಪ್ಪ  ಸದಾನಂದ ನಿಗೆ ತನ್ನ ತಂದೆ ತಾಯಿ ಬದುಕಿದ್ದರೆ ಮೊಮ್ಮಗಳೊಂದಿಗೆ ಹೀಗೇ ಆಟ ಆಡ್ತಿದ್ರು ಎಂದು ನೆನೆಸಿಕೊಂಡು ಕಣ್ಣಂಚಲಿ ಬಂದ ನೀರನ್ನು ವರೆಸಿಕೊಂಡ....ನಡಿ ದಾಕ್ಷು ಎಂದು ಗೇಟು ತೆಗೆದು ಒಳ ಹೋದರು ....ರಂಗಣ್ಣ ದಂಪತಿಗೆ ಇತ್ತ ಪರಿವೇ ಇಲ್ಲ...ಮಗುವಿನೊಂದಿಗೆ ಆಟದಲ್ಲೇ ಮಗ್ನರಾಗಿದ್ದರು...

ಸ್ವಲ್ಪ ಹೊತ್ತಿನ ನಂತರ ಸದಾನಂದ ನೇ...ರಂಗಣ್ಣ  ಎಂದಾಗ....ರಂಗ ಗಾಬರಿಯಿಂದ ಹಿಂದೆ ತಿರುಗಿ ನೋಡಿದರೆ  ತನ್ವಿತಾಳ ಅಪ್ಪ ಸದಾನಂದ ....ತಪ್ಪಿತಸ್ಥ ಭಾವದಿಂದ  ಸದಾನಂದನ  ಕಾಲು ಹಿಡಿಯಲು ಹೋದಾಗ ಸದಾನಂದ ...ಅಯ್ಯೋ ನೀವು ನನ್ನ ತಂದೆ ವಯಸ್ಸಿನವರು ಹೀಗೆ ಮಾಡೋದು ಸರಿ ಅಲ್ಲ....ಯಾಕ್ ಹೀಗ್ ಮಾಡ್ದೆ ರಂಗಣ್ಣ ಮಗು ನ ಹೇಳ್ದೇ ಕೇಳ್ದೇ ಹೀಗೆ ಕರ್ಕೊಂಡು ಬಂದಿದಿಯಲ್ಲ ತಪ್ಪಲ್ವ..

  

ತಪ್ಪೆ  ಸದಾನಂದು ...ನಂದು ತಪ್ಪೆ...

ನನ್ನ ಕರ್ಮ .... ಆ ದೇವರು ನಂಗೆ ಮಕ್ಳು ಕೊಡ್ನಿಲ್ಲ...ನಿನ್ ಮಗು ನೋಡಿ ನನಗೆ ಮಕ್ಕಳಿಲ್ಲ  ಅನ್ನೋ ಬೇಜಾರ್ ಕಳಿತಿದ್ದೇ...ಅಷ್ಟು ಪ್ರೀತಿ ಆ ಮಗೀನ ಕಂಡ್ರೆ...ಅದ್ನೆ ದಿನಾ ‍ಮನೆಗೆ ಬಂದಾಗ ನನ್ ಹೆಂಡತಿಗೆ ಹೇಳ್ತಿದ್ದೆ ನಾನೇನೋ ಊರೂ ರು ಸುತ್ತೋನು ನನ್ನ ಸುತ್ತ ಮಕ್ಕಳೇ ಸುತ್ತಾಡ್ತಾವೆ...ಆದರೆ ನನ್ ಹೆಂಡತಿಗೆ ಮಕ್ಳಂದ್ರೆ ಆಸೆ ಮಗುನಾ ನೋಡ್ಬೇಕು ಅಂದ್ಲು ...ಕೇಳಿದ್ರೆ ನೀವು ಕಳ್ಸಕಿಲ್ಲ ಅಂದ್ರಿ....ಮಗು ನಾ ಒಂದು ಸ್ವಲ್ಪ ಹೊತ್ತು ಮನೆಗೆ ಕರ್ಕೊಂಡ್ ಬಂದು ಆಟ ಅಡಿ ಕಳ್ಸಣ ಅಂತ ಕರ್ಕೊಂಡ್ ಬಂದೆ....ತಪ್ಪಾಯ್ತು ಸದಾನಂದಪ್ಪ....ತಪ್ಪಾತು....😪


ಅವರ ದೈನ್ಯತೆ ಗೆ ಮರುಗಿದ ಸದಾನಂದ...ಸಂಜೆವರೆಗೂ ಅವರ ಮನೆಯಲ್ಲೇ ಇದ್ದು ಸಂಜೆ ಹೊರಟರು...

ಹೊರಡುವಾಗ ನಿಮ್ಮ ಮನೆಗೆ ಮಗು ಕಳ್ಸಲ್ಲ ಎಂದಿದ್ದ ದಾಕ್ಷಾಯಿಣಿ ....ರಂಗಣ್ಣ  ನೀವು ಇನ್ಮೇಲೆ ಮಗುನ ಮನೆಗೆ ಕರ್ಕೋಂಡು ಹೋಗ್ಬೇಕು ಅನ್ಸುದ್ರೆ ನಮಗೆಲ್ಲ ಹೇಳ್ಬಿಟ್ಟೇ ಕರ್ಕೋಂಡ್ ಹೋಗಿ...ಎಂದು ಹೊರಟಳು..


ಈ ಘಟನೆಯಾದ ಮೇಲೆ ರಂಗಣ್ಣ ನ ಮೇಲೆ ಪ್ರೀತಿ ವಿಶ್ವಾಸ ಮೂಡಿತ್ತು.... ಆದರೂ ಮಗು ಕಾಣೆಯಾದ ದಿನದ ತಾಯಿ ತಂದೆಯ ಪರದಾಟವನ್ನು ...ವೇದನೆಯನ್ನು ಅಕ್ಕ ಪಕ್ಕದವರು ಕಣ್ಣಾರೆ ಕಂಡವರಾಗಿದ್ದರು... ಹಾಗಾಗಿ ಸಹಜವಾದ ಭಯದ ಪೊರೆಯೊಂದು ಮನಸ್ಸಲ್ಲಿ ಅಚ್ಚೊತ್ತಿತ್ತು...ಆ ಭಯವೇ ಕೆಂಪು ಕಾರ್ ಕಳ್ಳರ ಬಗೆಗೆ ಭಯ ಹುಟ್ಟಿಸಿತ್ತು..🚛


ಲಕ್ಷ್ಮಿಗೆ ಶುಂಠಿ ಕಶಾಯ ಕುಡಿದ ಮೇಲೆ ಸ್ವಲ್ಪ ತಲೆ ನೋವು ಕಡಿಮೆ ಎನಿಸಿತಾದರು ಜ್ವರ ಬಿಟ್ಟಿರಲಿಲ್ಲ..

ಬಚ್ಚಲಿಗೆ ಹೋಗಿ ಶೌಚ ಮುಗಿಸಿ..ಸ್ನಾನ ಮಾಡ್ಬೇಡ ಕಣೇ  ಜ್ವರ ಹೆಚ್ಚಾದಿತು ಅಂದಿದ್ದರು ಅಮ್ಮ..... ಅದಕ್ಕೆ ಲಕ್ಷ್ಮಿ  ಮುಖ ತೊಳೆದು ಬಂದು ಮನೆ ಮುಂದಿನ ಜಗಲಿಯಲ್ಲಿ ಕುಳಿತಿದ್ದಳು...

ಹಳೇ ಕಾಲದ ಕಂಬದ ಮನೆ ಮುಂದೆ ವಿಶಾಲವಾದ ಜಗಲಿ ನಾಲ್ಕು ಕಂಬ ಸೂರನ್ನು ಹೊತ್ತು ನಿಂತಿವೆ ಗೋಡೆಗೆ ರಾಮ ಕೃಷ್ಣ  ಹನುಮಂತನ ಫೋಟೋಗಳನ್ನು ತೂಗು ಹಾಕಿದೆ...ಅಪ್ಪ ಅಲ್ಲೇ ಕುರ್ಚಿ ಮೇಲೆ ಕುಳಿತು ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ನಲ್ಲಿ ಯಾವುದೋ ದಿನಾಂಕಕ್ಕೆ ಗುರುತಿಗೆ ಸುರುಳಿ ಸುತ್ತುತಿದ್ದಾರೆ....

ಲಕ್ಷ್ಮಿ ಸಣ್ಣಗೆ ಪಿರಿ ಪಿರಿ ಎಂದು ಬರುತಿದ್ದ ತುಂತೂರು ಮಳೆಯನ್ನ ಜಗಲಿ ಮೇಲೆ ಕೂತು ನೋಡುತ್ತಾ ಕುಳಿತಿದ್ದಳು...ಮನೆಯಿಂದ ಸ್ವಲ್ಪ ದೂರವೇ ಮನೆ ಗೇಟು....

ಇಲ್ಲಿಂದ ನೋಡಿದರೆ ರಸ್ತೆಯಲ್ಲಿ ಹೋಗುವವರು ಕಾಣುತ್ತಾರೆ....ಕೆಲವೊಮ್ಮೆ ಅಪ್ಪ ರಸ್ತೆಯಲ್ಲಿ ಹೋಗೋರನ್ನ ಕೂಗಿ ಕರೆದು ಮಾತಾಡ್ಸ್ತಿರ್ತಾರೆ....ಯಾರೋ ಪ್ಲಾಸ್ಟಿಕ್‌ ಗುಪ್ಪೆಯನ್ನ ಹೊದ್ದು  ಗೇಟು ತೆಗೆದು ನಮ್ಮ ಮನೆಯ ಕಡೆಗೆ ಬರುತಿದ್ದಾರೆ ಮುಖ ಪ್ಲಾಸ್ಟಿಕ್‌ ಗುಪ್ಪೆಯಲ್ಲಿ ಮರೆಯಾಗಿದೆ ....ಹತ್ತಿರ ಬಂದಂತೆ ಅದು ನನ್ನ ಗೆಳತಿ ಸೌಮ್ಯ ಎಂದು ಗುರುತಿಸಿ ..

ನೀನ್ಯಾಕೆ ಈ ಮಳೆಯಲ್ಲಿ ಬರೋಕೋದೆ....ಬಾ ಬಾ....ಎಂದು ಒಳಗೆ ಕರೆದೊಯ್ದಳು...ತಲೆ ವರೆಸಿಕೊಳ್ಳಲು ಟವಲ್ ಕೊಟ್ಟು ...ಮಾತಿಗೆ ಕುಳಿತರು..

  

ಯಾಕೆ ಸ್ಕೂಲ್ ಗೆ  ಹೋಗಿಲ್ವ ಎಂದಳು ಲಕ್ಷ್ಮಿ ...

ಸೌಮ್ಯ ಇನ್ನೆಲ್ಲಿ ಸ್ಕೂಲ್ ನಮ್ಮಪ್ಪ ಅಮ್ಮಂದು ಒಂದೇ ಗೋಳು ನೆನ್ನೆ ಅದೇ ನಾವು ಸ್ಕೂಲ್ ಗೆ ಹೋಗೋ ದಾರಿಯಲ್ಲಿ ಸುಶೀಲನ ಮನೆ ಇದ್ಯಲ್ಲ ಅಲ್ಲಿಗೆ ಯಾರೋ ನಾಲ್ಕು ಜನ ಸುಶೀಲನ ಅಕ್ಕ ನ ಪಾಪು ನ ಎತ್ಕೊಂಡು ಹೋದ್ರಂತೆ ಅದಕ್ಕೆ ಅಪ್ಪ ಸ್ಕೂಲ್ ಗೆ ಹೋಗೋದು ಬೇಡ ....ಏನೂ ಬೇಡ ಮನೇಲೇ ನಮ್ ಕಣ್ ಮುಂದೆನೇ ಇರು ....ಅಂತಿದ್ದಾರೆ...ಏನ್ ಮಾಡೋದೇ ...ನಾನ್ ಇನ್ ಮುಂದೆ ಸ್ಕೂಲಿಗೆ ಹೋಗೋದು ಕನಸೇನೋ ಅನ್ನುಸ್ತಿದೆ...ಎಂದು ಕಣ್ಣಲ್ಲಿ ಕಣ್ಣೀರು ಜಿನುಗಿತು...


ಲಕ್ಷ್ಮಿ ಮತ್ತು ಸೌಮ್ಯ ಬಾಲ್ಯದಿಂದ ಗೆಳತಿಯರು ಒಟ್ಟಿಗೆ ಅಡುಗೆ ಗುಡುಗೆ ..ಕಣ್ಣಾ ಮುಚ್ಚಾಲೆ...ಕುಂಟೇ ಬಿಲ್ಲೆ ಆಡಿ ಬೆಳೆದವರು ...ಒಟ್ಟಿಗೆ ಶಾಲೆಗೆ ಸೇರಿ ಒಟ್ಟಿಗೆ ಏಳನೇ ತರಗತಿವರೇಗೂ ಓದಿದವರು ....

ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಹಿಸಿ ಕೊಂಡದ್ದೇ ಇಲ್ಲ ಆದರೆ ಧಿಡೀರನೇ ಶಾಲೆ ಬಿಡಿಸೋ ಆಲೋಚನೆ ಲಕ್ಷ್ಮಿ ಗೆ ಸೌಮ್ಯ ಳಿಗೆ ಒಂಟಿಯಾಗುವ ಭಾವನೆ ತೋರಿತು...

ಲಕ್ಷ್ಮಿ ತನ್ನ ಅಪ್ಪನಿಗೆ ಹೇಳಿ ಸೌಮ್ಯಾಳ ಅಪ್ಪನೊಂದಿಗೆ ಮಾತನಾಡುವಂತೆ ಹೇಳಿದಳಾದರು ...ಮನಸ್ಸಿನಲ್ಲಿ ಒಂಟಿ ಆದಂತೆ ಭಾವನೆ ಬಂದು ಕೂತಿತ್ತು..

   ಸ್ವಲ್ಪ ಸಮಯಕ್ಕೆ ಆಲೋಚನೆಯನ್ನು ಬೇರೆಡೆಗೆ ಹೊರಳಿಸಿ.. ಲಕ್ಷ್ಮೀ ಗೆ ಜ್ವರ ಹೇಗಿದೇ ಎಂದು ವಿಚಾರಿಸಿ ಇಬ್ಬರು ಮಾತನಾಡುತ್ತ ಕುಳಿತರು...

ಸೌಮ್ಯ ಲೇ ನಿಂಗ್ ನೆನಪಿದ್ಯಾ ? ನಮ್  ಸ್ಕೂಲ್ ಹಿಂದೆ ಒಂದು ಮರ ಇತ್ತಲ್ಲ ನೆಲ್ಲಿ ಕಾಯಿದ್ದು ಅದರಲ್ಲಿ ನೆಲ್ಲಿ ಕಾಯಿ ಕೀಳೋಕೆ ನಾವು ಪಡ್ತಿದ್ದ ಕಷ್ಟ ಒನ್ನೊಂದಲ್ಲ ನನ್ನ ಹೆಗಲ ಮೇಲೆ ನಿನ್ನ ಕೂರುಸ್ಕೊಂಡು ನಾನು ಭಾರ ತಡಿಲಾರದೆ ನಿನ್ನ ಕೆಳಗೆ ಬೀಳ್ಸಿದ್ನಲ್ಲ.....ಎಂದು ಹೇಳಿಕೊಳ್ಳುತ್ತ ನಕ್ಕರು...

ನಗುವಿನಲ್ಲಿ ಸಂತೋಷದ ಭಾವವಿರಲಿಲ್ಲ...


ಮಳೆ ನಿಂತಂತೆ ತೋರಿತು ....ಸೌಮ್ಯ ಹೊತ್ತಾಗುತ್ತೆ ಹೋಗ್ತೀನಿ ಎಂದು ಹೊರಟು  ನಿಂತಳು...ಸರಿ ಎಂದು ಲಕ್ಷ್ಮೀ ಸೌಮ್ಯಾಳನ್ನ ಬೀಳ್ಕೊಟ್ಟಳು...


ಸುಮಾರು ಹದಿನೈದು ವರ್ಷಗಳ ನಂತರ


ಅಮ್ಮಾ ...ಅಮ್ಮಾ....

ಏನೇ...ಕಂದಮ್ಮ ...ಎಂದು ತನ್ನ ಮಗುವಿನ ಹತ್ತಿರ ಬಂದಳು ಸೌಮ್ಯ..

ಅಮ್ಮ‍ಾ...ಲಕ್ಷ್ಮೀ ಆಂಟಿ ಮಗಳು ಸುಗುಣ ಬಂದಿದಾಳೆ.. ಆಟ ಆಡೋಕೆ ಹೋಗ್ತೀನಮ್ಮಾ...ಎಂದು ಅಂಗಲಾಚಿದಳು......ಸರಿ ಹೋಗ್ ಬಾ ... ಲಕ್ಷ್ಮೀ ಆಂಟಿ ನ ಮನೆಗೆ ಕರಿ....

ಖುಷಿಯಿಂದ ಓಡುತ್ತಾನೆ ಆಯ್ತಮ್ಮಾ ....ಎಂದು ಉತ್ತರಿಸಿದಳು...


ಇತ್ತ ಎಂದಿನಂತೆ ಮನೆ ಜಗಲಿಯಲ್ಲಿ ಕುಳಿತು ಬೀಡಿ ಕಟ್ಟಲು  ಅಣಿಗೊಳಿಸುತ್ತಾ ಬೀಡಿ ಎಲೆಯನ್ನು ನೀರಿಗೆ ಅದ್ದಿ ತೆಗೆದಳು...ಬೀಡಿ ಎಲೆ ಕತ್ತರಿಸಲು ಕತ್ತರಿ.....ಅಳತೆಗೆ ಎಲೆ ಕತ್ತರಿಸಲು ಆಯತಾಕಾರದ ತಗಡಿನ ಪೀಸ್ ತೆಗೆದು ಕೊಂಡಳು...

ಬೀಡಿ ಒಳಗೆ ತುಂಬುವ ಹೊಗೆ ಸೊಪ್ಪನ್ನು ಜೊತೆಯಲ್ಲಿರಿಸಿಕೊಂಡು  ಜಗಲಿ ಮೇಲೆ ಕೂತು ಬೀಡಿ ಎಲೆ ಕತ್ತರಿಸಿ ಅದರೊಳಗೆ ಹೊಗೆ ಸೊಪ್ಪಿನ ಪುಡಿ ತುಂಬಿ ಎರಡು ಕೈ ಸಹಾಯದಿಂದ ಸುರುಳಿ ಸುತ್ತಿ ಬೀಡಿಯ ಎರಡು ತುದಿಯನ್ನ ಚಿಮುಟದಂತಹ ಕಡ್ಡಿಯಿಂದ ಮಡಿಸಿ ಹೊಗೆಸೊಪ್ಪು ಉದುರದಂತೆ ಮಾಡಿ ಸುತ್ತಿದ ಬೀಡಿ ಎಲೆ ಸುರುಳಿಗೆ  ಕೆಂಪು ನೂಲು ಸುತ್ತಿದಳು..ಹೀಗೇ ಹತ್ತು ಬೀಡಿ ಕಟ್ಟುವಷ್ಟರಲ್ಲಿ ಆಲೋಚನೆ ಲಕ್ಷ್ಮಿ ಕಡೆಗೆ ಹರಿಯಿತು 

 ...ಲಕ್ಕಿ ಬಂದಿದಾಳಂತೆ...ನಮ್ ಮನೆಗೆ  ಬರ್ತಾ ಳೋ ಇಲ್ವೋ...ಈಗ ಹೇಗಿರ್ಬೋದು ಡುಮ್ಮಿ ಆಗಿರ್ತಾಳೆ...ಸುಮಾರು ಐದು ವರ್ಷ ಕಳೀತು ಅವಳನ್ನ ನೋಡಿ...

ಕೆಲಸ ಸಿಗ್ತು ಸ್ಕೂಲ್ ಟೀಚರ್ ಆಗಿದ್ದೀನಿ ಎಂದು ಹೇಳಿ ಸಿಹಿ ತಿನಿಸಿದ್ದಳು.... ಆಗ ಸಣ್ಣ ಕೆ ಸುಂದರವಾಗಿ ಕಾಣ್ತಿದ್ದಳು ...ನನಗೂ ಆಗ ಮದುವೆ ಆದ ಹೊಸ ದಿನಗಳು ...ಸಿಹಿಗೆ ಎಂದು ಅವಳು ಕೊಟ್ಟ ಕೊಬ್ಬರಿ ಮಿಠಾಯಿಯನ್ನೇ ಅರ್ಧ ಮುರಿದು ತಿನಿಸಿ ನನ್ನ ಸಂತೋಷವನ್ನೂ ಹಂಚಿಕೊಂಡೆ....ನಾನು ಶಾಲೆಗೆ ಹೋಗಿದ್ದರೆ ನನ್ನ ಸ್ಕೂಲು ಅರ್ಧಕ್ಕೆ ನಿಲ್ಲದೇ ಹೋಗಿದ್ದರೆ.. ಎಂದು ಹಿಂದಿನ ದಿನಗಳನ್ನೆಲ್ಲ ನೆನಪಿಸಿಕೊಳ್ಳುತ್ತ  ....

ಅಂದು ಸೌಮ್ಯ ..ಲಕ್ಷ್ಮಿ ಗೆ ಜ್ವರ ವಿಚಾರಿಸಿ ಮನೆಗೆ ವಾಪಸ್ಸಾದಾಗಿನಿಂದ ಮನೆಯಲ್ಲಿ ನೆಡೆದ ಘಟನೆಯನ್ನ ನೆನಪಿಸಿಕೊಂಡಳು...

ಮಳೆ ನಿಂತು ಮನೆಗೆ ಹೋದ ಮೇಲೆ ಸೌಮ್ಯಾಳ ಮನೆಯಲ್ಲಿ ಅಪ್ಪ ಜಗುಲಿಯಲ್ಲೇ ಕುರ್ಚಿ ಮೇಲೆ ಕುಳಿತಿದ್ದರು....ಈ ಮಳೆಲಿ ಎಲ್ಲಿ ಹೋಗಿದ್ದೆ ಪುಟ್ಟಕ್ಕ ..ಮೊದಲೇ ಕಳ್ಳರ ಕಾಟ ಆ ಸುಶೀಲನ ಮನೆ ಸಣ್ಣ ಮಗುನ ಎತ್ಕೊಂಡ್ ಹೋಗಿ ಅದೇನ್ ಮಾಡುದ್ರೋ ದೇವರೇ ಬಲ್ಲ...ಒಬ್ಬೊಬ್ಳೆ ಹೋಗ್ಬೇಡ ಪುಟ್ಟಿ...


ಲಕ್ಷ್ಮಿ ಮನೆಗೆ ಹೋಗಿದ್ದೆ  ಅಪ್ಪ ಲಕ್ಷ್ಮಿ ಶಾಲೆಗೆ  ಹೋಗಿದ್ದಾಳೋ ಇಲ್ವೋ ನೋಡ್ಕೋ ಬರೋಕೆ....

ಸೌಮ್ಯಾಳ ತಂದೆ ಸ್ವಲ್ಪ ಸಿಟ್ಟಿನಿಂದ ನಾನು ಬೆಳಗ್ಗೆ ಹೇಳಿದ್ದೇನು...?

 ಈ ಸ್ಕೂಲು ಗೀಲು ಎಲ್ಲ ಸಾಕ್ ಮಾಡು ನೀನ್ ಓದಿ ನಮ್ಮನ್ನೆಲ್ಲ ಸಾಕೋದೇನಿಲ್ಲ....ಎಷ್ಟು ಓದಿದ್ರು ಗಂಡನ ಮನೆ ಸೇರಿದ್ಮೇಲೆ ಪಾತ್ರೆ ತೊಳಿಯೋದೆ ಮಿಕ್ಕೋದು....ಆ ಸುಪ್ಪತ್ತಿಗೆಗೆ ಎಂತಕೆ ಬೇಕು ಓದು..ಸುಮ್ಮನೆ ಹೇಳಿದ್ ಕೇಳು ...ಎಂದು ಒಳಗೆ ನಡೆದರು...

ಇತ್ತ ಲಕ್ಷ್ಮೀ  ಮದ್ಯಾಹ್ನ ಊಟದ ಸಮಯದಲ್ಲಿ ಅಪ್ಪ ಅಮ್ಮ ನೊಂದಿಗೆ ಸೌಮ್ಯ ಹೇಳಿದ ಸುಶೀಲನ ಅಕ್ಕನ ಮಗುವನ್ನ ಕಳ್ಳರು ಎತ್ಕೊಂಡು ಹೋದ ವಿಷಯವನ್ನ ಮಾತನಾಡಿದಳು ...ಲಕ್ಷ್ಮೀ ಅಪ್ಪ ನಿಗೆ ಆ ವಿಷಯವೇನೋ ತಿಳಿದಿತ್ತು ಆದರೆ ಮನೆಯವರಿಗೆ ತಿಳಿಸಿದರೆ ಗಾಬರಿ ಆಗ ಬಹುದೆಂದು ಮಗಳ ಮುಂದೆ ಮಾತನಾಡಿರಲಿಲ್ಲ....ಈಗ ಮಗಳೇ ವಿಷಯ ಪ್ರಸ್ತಾಪಿಸಿದ ಮೇಲೆ ಅಪ್ಪ ಮಾತನ್ನೆತ್ತಿದರು....ಹೌದು ಮಗಳೇ ಸ್ಕೂಲಿಗೆ ಹೋಗುವಾಗ ಜಾಗ್ರತೆ ಇರಬೇಕು...ಯಾರು ಏನೇ ತಿಂಡಿ ತಿನ್ನೋಕೆ ಕೊಟ್ರು ತಿನ್ಬಾರ್ದು...ಎಂದು ಹೇಳಿ.....

ತಟ್ಟೆಯಲ್ಲಿದ್ದ ಅನ್ನವನ್ನ ತುತ್ತು ಕಲಸಿ ಬಾಯಿಗಿಟ್ಟರು..


ಅಪ್ಪ ನಾನು ಶಾಲೆಗೆ ಹೋಗೋಕೆ  ಬೇಡ ಅಂತಿರೇನೋ ಅಂತ ಭಯ ಪಟ್ಕೊಂಡಿದ್ದೆ....ನನ್ ಫ್ರೆಂಡ್ ಸೌಮ್ಯಾ ಮನೇಲಿ ಅವಳು ಸ್ಕೂಲಿಗೆ ಹೋಗೋದು ಬೇಡ ಮನೇಲೇ ಇರು ಅಂದ್ರಂತೆ ಅವ್ರ್ ಅಪ್ಪ ಅಮ್ಮ....ನಂಗೂ ಹಾಗೇ ಹೇಳ್ತೀರೇನೋ ಅಂತ ಭಯ ಪಟ್ಕೊಂಡಿದ್ದೇ.....ಈಗ ನೆಮ್ಮದಿ ಆಯ್ತು...ಜ್ವರ ವಿದ್ದದರಿಂದ ಅಮ್ಮನ ಒತ್ತಾಯಕ್ಕೆ ಗಂಜಿ ಕುಡಿದು ಮೇಲೆದ್ದಳು....ಮನಸ್ಸಿನಲ್ಲಿ ಶಾಲೆಗೆ ಹೋಗಬಹುದೆಂಬ ಸಂತಸವಿದ್ದರು ಜೊತೆಗಾತಿ ಸೌಮ್ಯ ಶಾಲೆಗೆ ಬರೋದಿಲ್ಲ ಎಂಬ ಬೇಸರ ಹೆಚ್ಚಿತ್ತು...ನಾನು ಅವರಪ್ಪನೊಂದಿಗೆ ಮಾತನಾಡಿ ಸೌಮ್ಯಾಳನ್ನ ಸ್ಕೂಲಿಗೆ ಕಳಿಸುವಂತೆ ಕೇಳೋಣವೆಂದರೆ ವಯಸ್ಸಿನಲ್ಲಿ ಚಿಕ್ಕವಳು....ಎಂದೆಲ್ಲ ಯೋಚಿಸುತ್ತ ಮಲಗಿದ್ದಾಗ ನಿದ್ದೆ ಆವರಿಸಿತು..

ಇತ್ತ ಸೌಮ್ಯ ಅಮ್ಮ ಅಡುಗೆ ಮನೆಯಲ್ಲಿ ಸಾಂಬಾರಿಗೆ ತಯಾರಿ ನೆಡೆಸುತಿದ್ದಳು...ತರಕಾರಿ ಹೆಚ್ಚಲು ಇಳಿಗೆ ಮಣೆ ಮೇಲೆ ಕುಳಿತು...ಶಾಲೆಯ ದಿನಗಳನ್ನ ನೆನೆಸಿಕೊಳ್ಳುತ್ತ...ತರಕಾರಿ ಹೆಚ್ಚುತಿದ್ದಳು...ತರಕಾರಿ ಹೆಚ್ಚುವಾಗ ಆಲೋಚನೆ ತಪ್ಪಿ ಕೈ ಕುಯ್ದುಕೊಂಡಳು..

ಬೆರಳಿಗೆ ಚಿಕ್ಕದಾಗಿ ಪೆಟ್ಟಾಯಿತು ....ಅಮ್ಮಾ ಎಂದು ಅರಚಿದಳು ....ಅಮ್ಕ‍‍ಾ ಗಾಬರಿಯಿಂದ ಇದೇನ್ ಮಾಡ್ಕೊಂಡ್ಯೇ...ಸೌಮ್ಯ...ಎಂದು ಅರಿಶಿಣ ಪುಡಿಯನನ್ನು ಗಾಯಕ್ಕೆ ಮೆತ್ತಿ ಒತ್ತಿ ಹಿಡಿಯುವಂತೆ ಹೇಳಿದರು...ಹಾಗೇ ಬೆರಳು ಒತ್ತಿ ಹಿಡಿದು  ಚೇರನ್ನು ಒರಗಿ ಕೂತಿದ್ಹಳು...ಆಯಾಸಕ್ಕೋ ಬೇಸರಕ್ಕೋ ಸುಸ್ತೆನಿಸಿ ಅಲ್ಲೇ ಚೇರ್ ಒರಗಿ ನಿದ್ರೆ ಹೋದಳು....


ಆ ದಿನ ರಾತ್ರಿ ಊಟಕ್ಕೆ ಕುಳಿತಾಗ ಸೌಮ್ಯಾಳ  ಅಪ್ಪ ಇನ್ನು ಸೌಮ್ಯ ಸ್ಕೂಲಿಗೆ ಹೋಗೋದು ಬೇಡ ನಿನಗೆ ಅಡುಗೆ ...ಬೀಡಿ ಕಟ್ಟೋಕೆ ಸಹಾಯ ಮಾಡ್ಕೊಂಡು ಮನೇಲೇ ಇರ್ಲಿ ಎಂದವರೆ...ಯಾರಿಗೂ ಮಾತಿಗೆ ಅವಕಾಶ ನೀಡದೆ ಊಟ ಮುಗಿಸಿ ಎದ್ದರು....

ಮರುದಿನ ಸೌಮ್ಯಾಳ ಅಪ್ಪ ಎಷ್ಟು ಹೊತ್ತಾದರು ಎದ್ದಿರಲಿಲ್ಲ ....ಸೌಮ್ಯ ಅಪ್ಪಾ ..ಅಪ್ಪಾ...ಏಳಿಸಲು ಯತ್ನಿಸಿದರು ಅಲುಗಾಡಲಿಲ್ಲ ಮಾತಾಡಲಿಲ್ಲ...ರಾತ್ರಿ ಎದೆನೋವು ಹೆಚ್ಚಾಗಿ ಬೆಳಗ್ಗೆ  ಆಗುವಷ್ಟರಲ್ಲಿ ಕಣ್ಮುಚ್ಚಿದ್ದರು ....

ಸೌಮ್ಯಾಳ ಮನೆಗೆ ಧಿಡೀರ್ ಎಂದು ಬಂದೆರಗಿದ ದುಃಖ ಮರೆಯುವುದರಲ್ಲೇ ಒಂದು ತಿಂಗಳು ಕಳೆದಿತ್ತು....  

 ಲಕ್ಷ್ಮೀ ಧೀಡೀರನೇ ಸೌಮ್ಯಾ ಮನೆಗೆ ಬಂದು ನಾವು ಟೌನ್ ನಲ್ಲಿ ಬಾಡಿಗೆ ಮನೆಗೆ ಹೊಗ್ತಿದಿವಿ ಕಣೇ...ಎಂದಳು...

ಆಸರೆಗೆ ಇದ್ದ ಸುಖ ದುಃಖ ಹೇಳಿಕೊಳ್ಳಲು ಇದ್ದ ಒಂದು ಜೀವವು ದೂರ ಹೋದರೆ ನಾನು ಒಬ್ಬಂಟಿಯೇ ಎಂದು ತಕ್ಷಣದ ಯೋಚನೆ ಬಂದು ಮಂಕು ಕವಿಯಿತು...

ಯಾಕೆ ಎಲ್ಲಿಗೆ ಹೋಗ್ತೀರಾ?? ಯಾಕ್ ಹೋಗ್ತೀರಾ?? ಎಂದಾಗಾ..?

 ಲಕ್ಷ್ಮೀ ಹೀಗೆಂದಳು ನಮ್ಮೂರು ಮೊದಲೇ ಕಾಫಿ ತೋಟದ ಕಣಿವೆ....

ಕೆಂಚನ ಹಳ್ಳಿಯಿಂದ ಮಾವಿನ ಕೊಪ್ಪಲಿನ ವರೆಗೂ ಒಂದು ಮನೆಯೂ ಇಲ್ಲ...ಆ ರಸ್ತೆಯಲ್ಲಿ ಜನರು ಓಡಾಡೋದು ಕಡಿಮೆ ನಾನು ನೀನು ಇಬ್ಬರೂ ನಮ್ಮೂರಿಂದ ಹೋಗ್ತಿದ್ವಿ ಈಗ ನೀನು ಕೂಡ ಬರೋದಿಲ್ಲ...ಹುಡುಗರು ಸೈಕಲ್ ಹತ್ತಿ ಬೇಗ ಹೋಗಿ ಬಿಡ್ತಾರೆ ನಾನೊಬ್ಬಳೇ ಹೋಗೋಕೆ ಎಷ್ಟು ಭಯ ಆಗುತ್ತೆ ಗೊತ್ತಾ...?

ಅದಕ್ಕೆ ಅಪ್ಪ...ನನ್ನ ಓದು ಮುಗಿಯೋ ವರೆಗೂ ಮೂಡಿಗೆರೆಯಲ್ಲಿ ಬಾಡಿಗೆ ಮನೆ ಮಾಡೋಣ ಅಂದಿದ್ದಾರೆ. ಅದಕ್ಕೆ ಹೋಗ್ತಾ ಇದಿವಿ...ಹೋಗುಕು ಮೊದಲು ನಿಂಗ್ ಹೇಳಿ ಹೋಗೋಕೆ ಬಂದೆ...ಎಂದಳು


ಸೌಮ್ಯಾಳ ಕಣ್ಣಂಚಲ್ಲಿ ನೀರು...ಈ ಘಟನೆಗಳೆಲ್ಲ ಘಟಿಸಿ ಎಷ್ಟೋ ವರುಷಗಳೇ ಕಳೆದಿವೆ..ಈಗ ಕಣ್ಣಂಚಲಿ ನೀರು ತಂದು ಬೀಡಿ ಎಲೆಯನು ನೆನೆಸಿವೆ...ಕಣ್ಣೊರೆಸಿಕೊಂಡು  ಮತ್ತಷ್ಟು ಧೀರ್ಘ ಆಲೋಚನೆಯಲ್ಲಿ ಮನಸ್ಸು ಮುಳುಗಿತು...

ಜೊತೆಯಾಗಿದ್ದ ಲಕ್ಷ್ಮೀಯು ಹೋದ ಮೇಲೆ...ನನಗೆ ಇನ್ಯಾರು ಜೊತೆ...ನನ್ನ ನೋವು ನಲಿವುಗಳಿಗೆ ಸ್ಪಂದಿಸುವರ್ಯಾರು...ಒಬ್ಬಂಟಿಯಾಗಿ ಹೋಗಿದ್ದೆ ಅಂದು...ಇತ್ತ ಕಡೆ ಮನೆಗೆ ಆಧಾರವಾಗಿದ್ದ ಅಪ್ಪ ತೀರಿಕೊಂಡರು....

ಅತ್ತ ಕಡೆ ನನ್ನ ಓದು ಅರ್ಧಕ್ಕೆ ನಿಂತಿತು...ಅಮ್ಮ ಒಬ್ಬಂಟಿ ಹೆಂಗಸು ಮನೆಯನ್ನ ಹೇಗೆ ಸಾಗಿಸಿಯಾಳು ನಾನು ಅವಳಿಗೆ ಜೊತೆಯಾಗದೆ ಹೋಗಿದ್ದರೆ ಅವಳು ಈ ಸಂಸಾರದ ನೊಗವನ್ನ ಹೇಗೆ ಸಾಗಿಸುತಿದ್ದಳು....ಆದರೂ ಅಮ್ಮ ನನ್ನನ್ನ ಶಾಲೆಗೆ ಕಳಿಸ ಬಹುದಿತ್ತು ದುಡಿಯೋದು ಯಾರಿಗಾಗಿ ನಮ್ಮಿಬ್ಬರಿಗಾಗಿ ನನಗೆ ಮದ್ಯಾಹ್ನದ ಬಿಸಿ ಊಟ ಅಲ್ಲೇ ಆಗುತಿತ್ತು ಬೆಳಗ್ಗೆ ಉಪವಾಸ ಮಾಡಿಯಾದರು ದಿನಕ್ಕೆ ಎರಡು ಹೊತ್ತಿನಂತೆ ತಿಂದಾದರು ಶಾಲೆ ಓದುತಿದ್ದೆ ..ಅಮ್ಮ ನನ್ನನ್ನ ಬೇಳಗ್ಗೆ ಬೆಳಗ್ಗೆಯೇ ಹಸಿವಿನಿಂದ ಹೋಗಲು ಬಿಡುತಿದ್ದಳೇ ಬೆಳೆವ ಹುಡುಗಿ ಎಂದು ತನಗಿದ್ದ ಎರಡು ತುತ್ತನ್ನು ಸೇರಿಯೇ ತಿನಿಸುತಿದ್ದಳು ಅಷ್ಟು ಪ್ರೀತಿ ಅಮ್ಮನಿಗೆ ನಾನೆಂದರೆ ....

ಅಷ್ಟು ಪ್ರೀತಿ ಇದ್ದವಳು ಮಗಳು ಶಾಲೆ ಕಲಿತು ಮುಂದೆ ದೊಡ್ಡ ಆಫೀಸರ್ ಆಗಲಿ ಅನ್ನೋ ‌ಆಸೆ ಯಾಕಿರಲಿಲ್ಲ ಅಮ್ಮನಿಗೆ

 ....ಅವಳಾದರು ಏನು ಮಾಡಿಯಾಳು ಕಲ್ಲಿನಂಥ ಅಪ್ಪನ ಗುಂಡಿಗೆಯೇ ಈ ಕಳ್ಳರ ವಿಷಯಕ್ಕೆ ನಡುಗಿರುವಾಗ ಅಮ್ಮ ಇನ್ನು ಮೃದು ಸ್ವಭಾವದವಳು ಅವಳು ಇನ್ನೂ ಹೆದರುತ್ತಾಳೆ...ಲಕ್ಷ್ಮೀ ನನ್ನ ಓದಿನ ಬಗ್ಗೆ ನನ್ನನ್ನೂ ಟೌನ್ ಗೆ ಕರೆದುಕೊಂಡು ಹೋಗುವ ಬಗ್ಗೆ ಅವಳ ‌ಅಪ್ಪನೊಂದಿಗೆ ಮಾತನಾಡ ಬಹುದಿತ್ತು....‍ಅಯ್ಯೋ... ನಮ್ಮ ಮನೆಯವರಿಗೆ ಇಲ್ಲದ ಕಾಳಜಿ ಅವರಿಗೆ ಇರಬೇಕಿತ್ತು ಎನ್ನುವುದು ನನ್ನ ಮೂರ್ಖತನ....

ನನ್ನಮ್ಮನಿಗೆ ನನ್ನ ಕಂಡರೆ ಅಷ್ಟು  ಪ್ರೀತಿ ಇತ್ತು ಆದರೆ ಅಷ್ಟು ಬೇಗ ಮದುವೆ ಮಾಡೋ ಅಗತ್ಯ ಏನಿತ್ತು....ಅವನ್ಯಾರೋ ಮಂಗಳೂರಿನ ಮಾವನಂತೆ ಅಪ್ಪ ಸತ್ತ ಎರಡು ವರ್ಷಕ್ಕೆ ಬಂದ ಅಮ್ಮನೊಂದಿಗೆ ಮಂಗಳೂರಿನ ಭಾಷೆಯಲ್ಲಿ ಎಂಥಾ ಮರಾಯಿತಿ ನಿನ್ನ ಮಗಳನ್ನ ಮದುವೆ ಮಾಡುದಿಲ್ವೇನೇ...ದಿನ ದಿನಕ್ಕೆ ಮಗು ಬೆಳೀತಿದೆ ಬೆಳೆದ ಮಗಳು ಮನೆಯಲ್ಲೇ ಇಟ್ಟುಕೊಂಡ್ರೆ ಮಡಿಲಿನಲ್ಲಿ ಕೆಂಡ ಇಟ್ಟು ಕೊಂಡಂತೆ ತಿಳೀತಾ...

ನನಗೆ ಒಬ್ಬ ಗೊತ್ತು ನಮ್ಮವನೇ ಲಾಯಕ್ಕಾದ ಜೋಡಿ ಅವನದು ಸೌಮ್ಯಾ ದು ......ಎಂಥಾ ಮದುವೆ ಮಾತು ಕತೆ ಮಾಡೋದಾ? ಎಂದ...

ಅಮ್ಮನೋ  ನೀವು ದೊಡ್ಡವರು ನೀವು ಹೇಳಿದಂತೆ ಆಗ್ಲೀ ಎಂದು ಬಿಟ್ಟಳು ಆ ವಯ್ಯನಿಗೋ ಒಪ್ಪಿಗೆಯೇ ಸಿಕ್ಕಿದಂತೆ ಅದರ ಮುಂದಿನ ಮೂರು ತಿಂದಳಲ್ಲಿ ವರ ನ ಸಮೇತಾ ಮನೆಗೆ ಬಂದರು...ನನ್ನನ್ನ ಒಪ್ಪಿಗೆ ಕೇಳಿದಂತೆ ಕೇಳಿದರಷ್ಟೇ....ಒಳ್ಳೆಯದು ಕೆಟ್ಟದ್ದು ಆ ಮಗುಗೆ ಏನು ಗೊತ್ತಾಗುತ್ತೆ ಅಂಥ ಅವರೆ ತೀರ್ಮಾನ ಮಾಡಿ ಬಿಟ್ಟರು..."ಒಪ್ಪಿಗೆ ಕೊಡೋಕೇ ನಾನು ಮಗು ವಾಗಿದ್ದೆ ಅದರೆ ಮದುವೆ ಆಗೋಕೆ ಬೆಳೆದು ನಿಂತ ಮರವಾಗಿದ್ದೆ."..

ದೂರದ ಮಂಗಳೂರಿಂದ ಬಂದಿದಾರೆ ಮತ್ತೆ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗೋದು ಸರಿ ಕಾಣ್ಸೋಲ್ಲ ಅಂತ ಅಂದೇ ಶಾಸ್ತ್ರ ಕ್ಕೆ ತಾಂಬೂಲ ಬದಲಿಸಿ ...ಉಪ್ಪಿಟ್ಟು ಕಾಫಿ ತಿಂದು ಹೊರಟರು...ಅದಾದ ಒಂದು ತಿಂಗಳಲ್ಲಿ ಮದುವೆ ನಮ್ಮೂರಿನ ಆಂಜನೇಯನ ಗುಡಿಯಲ್ಲಿ...

 ಮದುವೆ ಆಗಿ ಒಂದು ಎರಡು ತಿಂಗಳು ಅಷ್ಟೇ ನನ್ನ ಬದುಕು ನೆಮ್ಮದಿ ಕಂಡದ್ದು ಅಷ್ಟರೊಳಗೆ ನನ್ನ ಗಂಡನ ರೂಪಿನೊಂದಿಗೆ ಗುಣವು ಬಯಲ‍ಾಗುತ್ತಾ ಬಂತು...ದಿನಾ ರಾತ್ರಿ ಕುಡಿದು ತೂರಾಡುತ್ತಾ ಎಷ್ಟೋ ಗಂಟೆಗೆ ಬರುವುದು....ಎಲೆ ಅಡಿಕೆ ಜಗಿದು ಎಲ್ಲೆಂದರಲ್ಲಿ ಉಗುಳಿ ಮನೆ ರಂಪ ಗೊಳಿಸುತಿದ್ದುದು...ಬೆಳಗ್ಗೆ ಮಾತ್ರ ಅವನಷ್ಟು ಸಭ್ಯ ಯಾರು ಇಲ್ಲ ಅನ್ನುವಂತೆ ಅಂತ ನಡತೆ....ಕೆಲಸಕ್ಕೆಂದು ಹೋಗೋದು ಇಸ್ಪೀಟು ...ಕುಡಿತಗಳಲ್ಲೇ ಮೈ ಮರೆತು ಎಷ್ಟೋ ಗಂಟೆಗೆ ಮನೆ ಸೇರೋದು.... ಒಂದು ವರ್ಷ ಕಳೆವಷ್ಟರಲ್ಲಿ ನಾನು ಅರೋ ...ಏಳೋ ತಿಂಗಳ ಗರ್ಭಿಣಿ ಇನ್ನೆರಡು ತಿಂಗಳಲ್ಲಿ ಕೂಸು ಕೈಗೆ ಬರುವುದರಲ್ಲಿತ್ತು ಬರುವ ಮಗುವಿನ ಕನಸಲ್ಲಿ ಇಷ್ಟವಿಲ್ಲದ ಗಂಡನೊಂದಿಗಿನ ಬದುಕು ಹೇಗೋ ತಳ್ಳುತಿದ್ದೆ...ಆ ರಾತ್ರಿ ವಿಪರೀತ ಹೊಟ್ಟೆ ನೋವು ಎಂದು ಕಿರುಚಿದರು ಮನೆಯಲ್ಲಿ ಯಾರು ಇಲ್ಲ...ಹೆರಿಗೆ ಗೆ ಅಮ್ಮನ ಮನೆಗೆ ಹೋಗುತ್ತೇನೆಂದರು ಕಳುಹಿಸಲಿಲ್ಲ ಈ ಗಂಡಸು....ನೋವು ಎಂದರು ಗಮನಿಸೋ ಹುಳುವು ಇಲ್ಲ ಈ ಮನೆಯಲ್ಲಿ....ಈ ಇವನ ದುರ್ಬುದ್ದಿ ಕಂಡೇ ಏನೋ ಅವನ ತಂದೆ ತಾಯಿ ಇವನಿಗಿಂತ ಮುಂಚೆ ಕಣ್ಮುಚ್ಚಿದ್ದು..

ಅಯ್ಯೋ ಅಮ್ಮ ಎಂಬ ಕಿರುಚಾಟ ಕೇಳಿ ಪಕ್ಕದ ಮನೆಯ ಅಜ್ಜಿ ಬಂದು ಹೆರಿಗೆ ಮಾಡಿಸಿತು...ಇಲ್ಲದಿದ್ದರೆ...ನನ್ನ ಬದುಕೇನಾಗುತಿತ್ತೋ...

ಇತ್ತ ನನ್ನ ಮಗು ಹುಟ್ಟಿತು...ಅತ್ತ ಕುಡಿದ ಮತ್ತಿನಲ್ಲಿ ಯರೊಂದಿಗೋ ಜಗಳಕ್ಕೆ ಹೋಗಿ ತಳ್ಳಾಟದಲ್ಲಿ ಕೆಳಕ್ಕೆ ಬಿದ್ದು ತಲೆ ಕಲ್ಲಿಗೆ ಬಡಿದು ಅವರು ಸತ್ತರು ..."ಒಂದೇ ದಿನ ವಿದವೆ ಎಂಬ ತಾಯಿ ಎಂಬ ಪಟ್ಟ ಸಿಕ್ಕವು."..ಎಂದು ಕಣ್ಣೀರಿಟ್ಟಳು ... 

ನನ್ನ ಮಗಳ ಬದುಕು ತನ್ನಂತೆ ಆಗ ಬಾರದು ಅವಳನ್ನ ಓದಿಸಿ ದೊಡ್ಡ ಆಫೀಸರ್ ಮಾಡ್ಸೇ ಮಾಡುಸ್ತೀನಿ....ಅಷ್ಟರಲ್ಲಿ ಆಟ ಮುಗಿಸಿ ಲಕ್ಷ್ಮೀ ಆಂಟಿಯೊಂದಿಗೆ ಮನೆಗೆ ಬಂದ ಮಗು ಅಮ್ಮನ ಕಣ್ಣೀರು ನೋಡಿ ಕಣ್ಣೋರೆಸಿತು....ಅಮ್ಮಾ ಲಕ್ಷ್ಮೀ ಆಂಟಿ ಬಂದಿದಾರೆ ಬಾ.....ಎಂದು ಕೈ ಹಿಡಿದು ಎಳೆಯಿತು....


ರಚನೆ 

ಶ್ಯಾಮ್ ಪ್ರಸಾದ್ ಭಟ್



 




Saturday, July 31, 2021

ಸಮರ ಅಮರ ಭಾಗ ೨

 ಇಂದು ರಾಮುವಿನ ಹುಟ್ಟುಹಬ್ಬ ಆದರೆ ಮನೆಯಲ್ಲಿ ಸಂಭ್ರಮವಿಲ್ಲ..

ಶಾಂತ ಇನ್ನು ಎದ್ದಿಲ್ಲ....ಹಾಸಿಗೆಯಲ್ಲೇ ಮಲಗಿ ಅತ್ತು ಅತ್ತು ದಿಂಬು ಒದ್ದೆಯಾಗಿತ್ತು..

ಅಜ್ಜಿ ಜೊತೆ ಮಲಗಿದ್ದ ರಾಮು ಅಮ್ಮ... ಅಮ್ಮ.. ಎಂದು ಅಮ್ಮನಿದ್ದ  ರೂಮಿಗೆ ಬಂದು ..

ಅಮ್ಮ ಇವತ್ತು ನನ್ ಬರ್ತಡೇ ಅಂತೇ ಹೌದೇನಮ್ಮ....

ಶಾಂತಗೆ ಇನ್ನು ದುಃಖ ಉಮ್ಮಳಿಸಿ ಬಂತು ಎದ್ದು ಮಗನನ್ನು ತಬ್ಬಿ ಅತ್ತಳು.... ಹೌದು ಕಂದಮ್ಮ..

ಅಮ್ಮನ ದುಃಖದ ಕಾರಣ ತಿಳಿಯದ ಮಗು ಪಿಳಿ ಪಿಳಿ ಕಣ್ಣು ಬಿಟ್ಟು ಅಮ್ಮನನ್ನೇ ದಿಟ್ಟಿಸಿನೋಡಿತು...ಅಜ್ಜಿಯ ಹತ್ತಿರ ಓಡಿತು ...

ಅಜ್ಜಿ ಸ್ನಾನ ಮುಗಿಸಿ ..ಅಳಿಯನ ಫೋಟೋವನ್ನ ಒದ್ದೆ ಬಟ್ಟೆಯಲ್ಲಿ ವರೆಸಿ ...ಹಣಿಗೆ ಕುಂಕುಮ ಇಟ್ಟು...ತಂದಿದ್ದ ಹೊಸ ಹಾರ ಹಾಕಿ...ಊದುಬತ್ತಿ ಹಚ್ಚುತಿದ್ದರು...

ಅಲ್ಲಿಗೆ ಬಂದ ರಾಮು ಅಜ್ಜಿ ಅಪ್ಪನ ಫೋಟೋಗೆ ಯಾಕ್ ಪೂಜೆ ಮಾಡ್ತಿದಿಯ‍ಾ ಇವತ್ತು ಅಪ್ಪನ ಬರ್ತಡೇ ನಾ ಅಂತ ಕೇಳಿದ ರಾಮುಗೆ ಉತ್ತರ ಹೇಳುವುದೇನು.....ನಿನ್ನ ಅಪ್ಪ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಉದಾತ್ತ ವಿಷಯ ಮಗುವಿಗೆ ಹೇಳಿದರೆ ತಿಳಿದೀತೇ..

ಶಾಂತಳು ಹಾಸಿಗೆಯಿಂದೆದ್ದು ಸ್ನಾನ ಮುಗಿಸಿ ಗಂಡನಿಗೆ ದೀಪ ಹಚ್ಚಿ ಊದುಬತ್ತಿ ಬೆಳಗಿದಳು...

ಕಣ್ಣಂಚಿನ ನೀರಲ್ಲಿ ದೀಪದ ಬೆಳಕು ಮಿಂಚಿ ಮರೆಯಾಯಿತು..

ಅವರು ತೀರಿಕೊಂಡು ಮೂರು ವರ್ಷವಾಯಿತು..ಕಳೆದ ಎರಡು ವರ್ಷ ಮಗು ಮಾತು ಕಲಿಯುತಿದ್ದರಿಂದ ಅದರ ಪ್ರಶ್ನೆ ಕುತೂಹಲ ಕೆರಳಿರಲಿಲ್ಲ...ಈಗ ಮಾತು ಮೂಡಿ ವಾಕ್ಯಮಾಡಿ ಪ್ರಶ್ನೆ ಕೇಳುತ್ತಾನೆ ಏನು ಉತ್ತರ ಹೇಳಲಿ...

ಅವರು ಅಲ್ಲಿ ಉಸಿರು ಬಿಟ್ಟರು ....ಇಲ್ಲಿ ಇವನು ಉಸಿರಾಡಿದ ಅವರೇ ಹುಟ್ಟಿದರು ಅನ್ನೋ ಸಂಭ್ರಮ ಪಡಲೋ...ಅವರಿಲ್ಲದ ಜಗತ್ತಲ್ಲಿ ಯಾರು ಇದ್ದರೇನು ಎಂದು ದುಃಖ ಪಡಲೋ...ತಾಯ್ತನ ಕೊಟ್ಟು ಕರುಳಕುಡಿ ಅನ್ನೋ ಸಂಬಂಧ ಇಟ್ಟು ಈ ಜಗತ್ತಿಗೂ ನನಗೂ ಬಂಧ ಬೆಸೆದು ಕಟ್ಟಿ ಹಾಕಿದ್ದಾನೆ ಭಗವಂತ ...ನಾನು ಈ ಕೊಂಡಿ ಕಳಚಿಕೊಳ್ಳಲಾರೆ...

ಹೀಗೇ ಅವಳ ಆಲೋಚನೆ ಎಲ್ಲೆಲ್ಲೋ ಸುಳಿದಾಡಿ ಗಂಡನ ಫೋಟೋ ದಿಟ್ಟಿಸುತ್ತ ಆರ್ಮಿ ಯುನಿಫಾರಂ ಧರಿಸಿ ನಗು ಮುಖದಲ್ಲಿದ್ದ ತನ್ನ ಗಂಡನನ್ನು ನೆನೆದು ದುಃಖ ಉಮ್ಮಳಿಸಿ...ಬಾಯಿಗೆ ಸೀರೆ ಸೆರಗು ಹಿಡಿದು ಕೊಂಡು ಹೊರ ಜಗಲಿಗೆ ಬಂದು ಕೂತಳು 

ಹಿಂದಿನಿಂದ ಬಂದ ರಾಮು  ಅಮ್ಮ...ಕೇಕ್ ತರ್ತಾರಾ ತಾತಾ...

ಸೆರಗಿನಿಂದ ಕಣ್ಣೊರೆಸಿಕೊಂಡು ...ಹುಂ ಕಣೋ ತರ್ತಾರೆ...ಎಂದಳು..

ಆ ದಿನ ಪೂರ್ತಿ ಮಗನ ಹುಟ್ಟುಹಬ್ಬದ ಸಂಭ್ರಮಕ್ಕಿಂತ ಗಂಡನ ನೆನಪುಗಳೇ ಕಾಡಿ ಕಂಗೆಡಿಸದವು...

   ಸಂಜೆ ವೇಳೆಗೆ ತಾತಾ ತಂದ ಬರ್ತಡೇ ಕೇಕ್ ಕಟ್ ಮಾಡಿಸಿ ಅಕ್ಕ ಪಕ್ಕದ ಮನೆಯವರ ಸಮಕ್ಷಮದಲ್ಲಿ ಸಂಭ್ರಮಪಟ್ಟರು ದುಃಖ ಸಂತೋಷಗಳ ಮಿಶ್ರಣ ಭಾವದಲ್ಲಿ..

 ರಾಮು ದಿನದಿಂದ ದಿನಕ್ಕೆ ಬೆಳೆಯುತಿದ್ದಾನೆ ಒಳ್ಳೆ ಶಾಲೆಗೆ ಸೇರಿಸಿ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದರೆ

ಒಂದು ಒಳ್ಳೆ ಕೆಲಸ ಅಂತ ಆಗ್ಬಿಟ್ರೆ ...ಅವರ ಸಾವಿಗೆ ಬಂದಿದ್ದ ಎಷ್ಟೋ ಜನ ಅವರು ಬಾರ್ಡರ್ ನಲ್ಲಿ ವೈರಿಗಳ ಮೋಸದ ಗುಂಡಿಗೆ ಬಲಿಯಾದಾಗ ಅವರ ಜೊತೆಯವರೇ ತಮ್ಮ ಗೆಳೆಯನ ದೇಹವನ್ನ ಪೆಟ್ಟಿಗೆಯಲ್ಲಿರಿಸಿ ತಂದರು.

 ರಾಷ್ಟ್ರ ದ್ವಜ  ಹೊದ್ದು ಬಂದ ಅವರ ದೇಹವನ್ನ ನಾನು ತಬ್ಬಿ ಬಿಕ್ಕಳಿಸಿ ಅತ್ತರೂ ಅವರು ಎದ್ದೇಳಲಿಲ್ಲ...ಪ್ರೀತಿಯಿಂದ ಶಾಂತು ಎನ್ನಲಿಲ್ಲ...ಬಂಗಾರದಂತ ಮಗ ಅವನ ರೂಪದಲ್ಲೇ ಹುಟ್ಟಿದಾನೆ ಅವನನ್ನು ಸೈನ್ಯಕ್ಕೆ ಸೇರಿಸಿ ಬಿಡು ಅಂದಿದ್ದರು ಅಕ್ಕ ಪಕ್ಕದವರು ...

ನಿಮ್ ಮಕ್ಕಳು ಚೆನ್ನಾಗಿ ನಿಮ್ ಕಣ್ಣಮುಂದೇನೆ ದುಡಿತಾ ಇರ್ಬೇಕು ನಾನು ನನ್ನ ಮಗನ್ನ ನನ್ನ ಗಂಡ ಹೋದ್ ಜಾಗಕ್ಕೆ ಕಳುಸ್ಬೇಕಾ ಹೋಗಿ ...ಹೋಗಿ ...

ಅಂತ ದುಃಖದಲ್ಲಿ ಬೈದು ಕಳಿಸಿದ್ದೆ....

ಹೌದಲ್ವ...!! ಎಷ್ಟು ಜನಕ್ಕೆ ದೇಶ ಸೇವೆ ಮಾಡೋ ಭಾಗ್ಯ ಸಿಗುತ್ತೆ ನನ್ನ ಗಂಡ ಪುಣ್ಯವಂತ ನನ್ನ ಮಗನಿಗೂ ಆ ಪುಣ್ಯ ಸಿಗಲಿ ಸೈನ್ಯಕ್ಕೆ ಕಳುಸ್ತೀನಿ..‍ಅಂತ ಅವಳಲ್ಲಿ ಯೋಚನೆ ಬಂತಾದರು ....ಮತ್ತೇ ಪೆಟ್ಟಿಗೆಯಲ್ಲಿ ಹೊತ್ತು ತಂದ ತನ್ನ ಗಂಡನ ಮುಖ ನೆನಪಾಗಿ ಇಲ್ಲ ಇಲ್ಲ...ನನ್ ಕಣ್ಣು ಮುಂದೇನೆ ಇರ್ಲಿ ಇವನು...ನಾನು ಮತ್ತೆ ಅದೇ ಸಂಧರ್ಭನ ಎದುರಿಸೋ ಗಟ್ಟಿತನ ನಂಗಿಲ್ಲ..ಎಂದು ಕೊಂಡು ಎದ್ದಳು..

ರಾಮುವಿಗೆ ಈಗ ಆರು ವರ್ಷ ಮೂಡಿಗೆರೆಯಲ್ಲೇ ಶಾಲೆಗೆ ಸೇರಿಸಿದಳು...

ಅಜ್ಜಿ ತಾತನ ...ಅಮ್ಮನ ಅಕ್ಕರೆಯಲ್ಲಿ ...ವರ್ಷಗಳು ದಿನಗಳಂತೆ ಕಳೆದವು....

ರಾಮುವಿಗೆ ಓದಿನ ಕಡೆ ಗಮನ ಕಡಿಮೆಯೇ..

 ಹೈಸ್ಕೂಲಿನ ಕೊನೆ ವರ್ಷ ಹತ್ತನೇ ತರಗತಿ ಹತ್ತಿದರೆ ಕಾಲೇಜಿನ ಮೆಟ್ಟಿಲು ಹತ್ತಬಹುದು ಅಂತ ಕಷ್ಟ ಬಿದ್ದು ಓದಿ ಜಸ್ಟ್ ಪಾಸ್ ಆದ ಈಗ ರಾಮುವಿನ ಮುಖದಲ್ಲಿ ಆಗ ತಾನೇ ಚಿಗುರು ಮೀಸೆ ಮೂಡುತಿತ್ತು...

ಕಾಲೇಜಿಗೆ ಹಾಸನಕ್ಕೆ  ಸೇರ್ಕೋತಿನಿ ಅಂತ ಹಠ ಮಾಡಿ  ಹಾಸ್ಟೆಲ್ ಸೇರಿ ಕಾಲೇಜು ಓದು ಆರಂಭವಾಯ್ತು ...

ಇತ್ತ ಕಡೆ ಮನೆಯವರಲ್ಲಿ ರಾಮುವಿನ ಮೇಲೆ ಹೊಸ ಹೊಸ ಕನಸುಗಳನ್ನ ಹೆಣೆಯುತ್ತ ಮನೆಯಲ್ಲಿ  ಶಾಂತ ರಾಮು ಓದು ಮುಗಿದ ಮೇಲೆ...ಒಂದು ಕೆಲಸ .. ಮದುವೆ ಅಂತ ಆಗ್ಬಿಟ್ರೆ ನನ್ನ ಜವಾಬ್ದಾರಿ ಮುಗಿಯುತ್ತೆ ಎಂದೆಲ್ಲ...ಯೋಜನೆ ರೂಪಿಸುತಿದ್ದಳು..

ಇತ್ತ ಕಡೆ ಸಹವಾಸ ಸರಿ ಇಲ್ಲದೆ...ರಾಮು ಸಿಗರೇಟು ....ಕುಡಿತ ಮೈಗೆ ಅಂಟಿಸಿಕೊಂಡಿದ್ದ...ರಜಾ ದಿನಕ್ಕೆ ಮನೆಗೆ ಬಂದಾಗ ಮಗನ ಪ್ಯಾಂಟನ್ನು ತೊಳಿವಾಗ ಜೋಬಿನಲ್ಲಿ ಸಿಗರೇಟ್ ಪ್ಯಾಕ್ ನೋಡಿ ಬೆಚ್ಚಿ ಬಿದ್ದಿದ್ದಳು ಶಾಂತ...

ರಾಮು ಕರೆದು ವಿಚಾರಿಸಿದಾಗ ಅದು ನಂದಲ್ಲ...ಏನೋ ಒಂದು ಸುಳ್ಳು ಹೇಳಿ ನುಸುಳಿಕೊಂಡಿದ್ದ...

    ಇನ್ನೊಂದು ವಾರದಲ್ಲಿ ಅವನ ಬರ್ತಡೇ ....ಮಗನಿಗೆ ಹದಿನೇಳು ತುಂಬುತ್ತೇ...ಅನ್ನೋ ಸಂತೋಷದಲ್ಲಿ ಆ ದಿನಕ್ಕೆ ಸಿಹಿ ತಿಂಡಿಗಳನ್ನ ಮಾಡಬೇಕು ಅನ್ನೋ ಯೋಜನೆ ಹಾಕಿದ್ದಳು....ಆ ದಿನ ಆಡಿದಂತೆ ಬಂತು ಗಂಡನಿಗೆ ದೀಪ ಹಚ್ಚಿಟ್ಟು .. ಮಗನಿಗೆ ಇಷ್ಟವಾಗುತ್ತೆ ಅಂತ ಕೊಬ್ಬರಿ ಮಿಠಾಯಿ ಪಾಯಸ ಮಾಡಿದ್ದಳು ...

 ಅವತ್ತು ಬೆಳಗ್ಗೆ ಸ್ನೇಹಿತರಿಗೆ ಪಾರ್ಟಿ ಕೊಡುಸ್ಬೇಕು ಅಂತ ಐನೂರು ರೂಪಾಯನ್ನ ತಾತನಿಂದ ಕೇಳಿ ತಗೊಂಡು ಹೋದವನು ಸಂಜೆ  ಏಳು ಸರಿದರು ಬಂದಿಲ್ಲ...ತಾತಾ ಕೇಕ್ ಎಲ್ಲಾ ತಂದು ಅವನ ಬರುವಿಕೆಗೆ ಕಾಯುತ್ತಾ ಇದ್ದರಾದರು ...ಗಂಟೆ ಒಂಬತ್ತು ಬಡಿದಾಗ ಬಂದ ತೂರಾಡುತ್ತ ....ಬಾಗಿಲು ಹಿಡಿದು ದೂಡಿ ರೂಮಿಗೆ ಹೋದ ..

ಇದೇನು ತನ್ನ ಮಗನ ಅವಸ್ಥೆ ಎಂದು ಗಾಬರಿಯಾಗಿ ಅವನಿದ್ದ ರೂಮಿಗೆ ಹೋಗಿ ಅವನನ್ನ ಎಳೆದು ಕರೆತಂದಳು ಏನೋ ಕುಡಿಯೋದು ಯಾವಾಗ್ಲೋ ಶುರು ಮಾಡ್ಕೊಂಡೆ ....ಅಯ್ಯೋ ಅಯ್ಯೋ ದೇವರೇ....ಎಂದು ದುಃಖದಿಂದ ಅತ್ತಳು

ಎಂಥಾ ಅಪ್ಪನಿಗೆ ಎಂಥಾ ಮಗ ....ಓದ್ತಿದಾನೆ ಮಗ ಅಂತ ಕಳಿಸಿ ನೆಮ್ಮದಿಯಾಗಿದ್ದೆ...ನೀನು ಚಟ ಕಲ್ತ್ಕೊಂಡು ಬಂದಿದಿಯಲ್ಲೋ ....ಎಂದು ಬೈದು...ಮಗ ಅಪ್ಪನಂತೆ ಅಗ್ತಾನೆ...ಅಂತ ಆಸೆ ಪಟ್ಟೆ...ಆದರೆ ನೀನು ಛೇ....ಎಂಥಾ ಅಪ್ಪನಿಗೆ ಎಂಥಾ ಮಗ...

ಅಮ್ಮನ ಮಾತೆಲ್ಲ ಕೇಳಿಸಿಕೊಂಡು ಕೋಪದಲ್ಲಿ ಕುಡಿದ ಮತ್ತಲ್ಲಿ ನಾನು ಎಲ್ಲರು ತರಾ ಬರ್ತಡೇ ಮಾಡ್ಕೋ ಬೇಕು ಅಂತ....ನನ್ನ ಬರ್ತಡೇ ಅಂತ ಖುಷಿ ಈ ಮನೆಲಿ ಎಲ್ಲಿರುತ್ತೆ ಅದ್ಕೆ ಫ್ರೆಂಡ್ಸ ಜೊತೆ ಹೋಗಿದ್ದೆ ಸ್ವಲ್ಪ ಜಾಸ್ತೀನೆ ಕುಡುದೆ ತಪ್ಪಾ.....

 ಅಪ್ಪನಂತಾಗ್ಲಿಲ್ಲ...ಅಪ್ಪನಂತಾಗ್ಲಿಲ್ಲ....ನಾನು ಫೋಟೋ ಆಗ್ಬೇಕಿತ್ತಾ ಅಪ್ಪನ ತರಾ...?..

ಹೋ..ದೇಶ ಸೇವೆ ....ಸೈನಿಕ ಅನ್ನುಸ್ಕೋ ಬೇಕಿತ್ತಾ? ದೇಶ ಸೇವೆ ಮಾಡ್ಬೇಕಿತ್ತಾ...? ಸಂಬಳ ಕೊಡ್ತಾರೆ ಸೇರ್ಕೊಂಡ್ರು ...ದೇಶ ಸೇವೆ ಅಂತ ಸೇರ್ಕೊಂಡ್ರಾ..? ಹೀಗೆಲ್ಲ..ಮನಸ್ಸಿಗೆ ಬಂದ ...ಬಾಯಿಗೆ ಬಂದ ಮಾತೆಲ್ಲ ಆಡಿ ರೂಮಿಗೆ ಹೋಗಿ ಧಡಾರನೇ ಬಾಗಿಲು ಮುಚ್ಚಿ ಮಲಗಿದ...

ಶಾಂತಾಳಿಗೆ ಮಗನ ವರ್ತನೆ ಮಾತು ಮತ್ತಷ್ಟು ದುಃಖ ಹೆಚ್ಚಾಯಿತು....

ತನ್ನ ಗಂಡನಂತೆ ನೂರಾರು ಜನ ದೇಶದ ಗಡಿ ಭಾಗದಲ್ಲಿ ಛಳಿ ...ಗಾಳಿ .ಮಳೆ ಲೆಕ್ಕಿಸದೆ ದೇಶ ಕಾಯೋದು ಕೇವಲ ದುಡ್ಡಿಗೋಸ್ಕರನಾ....ತನ್ನ ತಂದೆಯ ವೃತ್ತಿ ಮೇಲೆ ಮಗನಿಂದ ಅದೆಷ್ಟು ಅಗೌರವದ ಮಾತು....

ದುಡ್ಡು ಸಿಗುತ್ತೆ ಅಂತ ಪ್ರಾಣ ಕೂಡ ಲೆಕ್ಕಿಸದೇ ದೇಶ ಕಾಯೋಕಾಗುತ್ತಾ...ಪ್ರಾಣಕ್ಕಿಂತ ದೊಡ್ಡದೇ ಈ ದುಡ್ಡು?

 ನನ್ನ ಗಂಡನ ಬಲಿದಾನವನ್ನ ದೇಶದವರೆಲ್ಲ ಕೊಂಡಾಡಿದ್ದರು ವೀರ ಸ್ವರ್ಗ ಸೇರ್ತಾರೆ....ತಾಯಿ ಭಾರತಿ ಸೇವೆ ಮಾಡೋದು ಮಹಾ ಭಾಗ್ಯ ಅಂತೆಲ್ಲ...ಅದನ್ನ ದುಡ್ಡಿನಲ್ಲಿ ಅಳೆದು ಬಿಟ್ಟನಲ್ಲ...ಅವರದೇ ರಕ್ತದ ಮಗ....


                                          ರಚನೆ 

                              ಶ್ಯಾಮ್ ಪ್ರಸಾದ್ ಭಟ್ 



Tuesday, July 27, 2021

ಹಳೆಯದೆ...ಹೊಸಬರಿಗೆ ಹೊಸತು

 


ನಮ್ಮ ಬದುಕೆಲ್ಲ ಹಾಸಿಗೆ ಹಿಡಿದಿದೆ..ಖಾಯಿಲೆ ಅಂತಲ್ಲ...ಕೆಲಸವಿಲ್ಲ ಅಂತ..

ಕೆಲಸ ಇಲ್ಲ ಅಂದ್ರೆ ಕೆಲಸ ಇಲ್ಲ ಅಂತ ಅಲ್ಲ ಕೆಲಸ ಇದೆ ಆದರೆ ಇಷ್ಟ ಪಟ್ಟ ಕೆಲಸ ಇಲ್ಲ ಅಂತ....ಅಂದರೆ ಬೇರೆ ಕೆಲಸ ಇಷ್ಟ ಇಲ್ಲ ಅಂತಲ್ಲ...ಅದರೆ ಅದನ್ನ ಮಾಡೋಕೆ ಮೈ ...ಮನಸ್ಸು ಬಗ್ಗೊಲ್ಲ ಅಂತ.. ನಮ್ಮದನ್ನ ಬಿಡು ಕೆಲಸ ಇಲ್ಲ ಅಂತ ಹೇಳೋದೇ ಕೆಲಸ...ನಿನ್ನದ್ ಹೇಳು ಹೊಸ ಕೆಲಸ ಹೊಸತನ ಹೇಗಿದೆ...?.

ಎಲ್ಲಾ ಹೊಸತನವು ಹೊಸತರಲ್ಲಿ ಹೊಸತೆ...ಹೊಸ ಮನೆ ...ಹೊಸ ಹೆಂಡತಿ...ಹೊಸ ಗಾಡಿ...ಎಲ್ಲವೂ ಹೊಸತರಲ್ಲಿ ಹೊಸತೇ...ಹಳೆಯದಾಗ್ತಾ ಮನೆ ಬಣ್ಣ ಮಾಸುತ್ತೆ...ಹೆಂಡತಿ ಮಾತು ಕಿರಿ ಕಿರಿ.ಅನ್ಸುತ್ತೆ...

ಗಾಡಿ ಸ್ಟಾರ್ಟ್ ಆಗಲ್ಲ  ಅನ್ನುತ್ತೆ...ದೇಹ ವಯಸ್ಸಾಯ್ತು ಅನ್ನುತ್ತೆ....ಕಾಲು ಕೋಲು ಬೇಕು ಅನ್ನುತ್ತೆ..ಎಲ್ಲಾ...ಹೀಗೇನೆ..

Friday, March 26, 2021

ದೀಣೆಯ ನೆನಪು




ಚೊಟ್ಟೆ ಹಣ್ಣು  

                                    ನೇರಳೆ ಹಣ್ಣು
                                        

ದೀಣೆಯ ನೆನಪು...

ನಮ್ಮೂರು ಮೊದಲೇ ಕಾಫಿ ಕಾಡು
 ... ಆಗ ಜಮೀನು ಇದ್ದವರು ಕೂಡ ಕಾಫಿ ತೋಟ ಮಾಡಲು ತುಂಬಾ ಹಣ ಬೇಕಾದ್ದರಿಂದ ಕಾಫಿ ತೋಟ ಮಾಡಲು ಸಾದ್ಯವಾಗದೆ ...ಹಾಗೆ ಪಾಳು ಬಿಟ್ಟಿರುತಿದ್ದರು...

ನಮ್ಮ ಮನೆಯ ಹಿಂಬಾಗ......ಸ್ವಲ್ಪ ಎತ್ತರದ ಜಾಗ....ಬಹಳಾ... ಹಿಂದೆ ನಾವು ಈಗ ಮನೆ ಮಾಡಿ ವಾಸವಿರುವ ಸ್ಥಳವೆಲ್ಲ ಕಾಡು ಪ್ರದೇಶ....ಆದರೆ ಮನೆಗಳಾದಂತೆ....ಕಾಡು ಮಾಯವಾಗಿ ನಾಡಾಯಿತು....

ಆದರೆ ನಮ್ಮ ಮನೆಯ ಹಿಂಬದಿ ಇದ್ದ ಕಾಡು ಹಾಗೇ ಇತ್ತು....ನಾವು ಅದಕ್ಕೆ ದೀಣೆ ಎಂದು ಕರೆಯುತಿದ್ದೆವು....ಅಲ್ಲಿ ಹಲವು ಹಣ್ಣಿನ ಮರಗಳು....ಕಾಡು ಜಾತಿಯ ಮರಗಳು....ಕುರುಚಲು ಗಿಡಗಳಿಂದ ತುಂಬಿ ಹೋಗಿತ್ತು ....ಹಕ್ಕಿಗಳ ವಾಸಸ್ಥಾನವಾಗಿತ್ತು....ಹಾಗೇ ಅಲ್ಲಿ ಕಾಡು ಕೋಳಿಗಳು ಬರುತ್ತಿದ್ದರಿಂದ ...ಅಕ್ಕ ಪಕ್ಕದವರು ....ಜಮೀನಿನ ಒಡೆಯರು ಎಲ್ಲಾ ಕಾಡು ಕೋಳಿ ಹಿಡಿಯಲು ಬಲೆ ಹೆಣೆದು ....ಸ್ವಲ್ಪ ಅಕ್ಕಿ ಚೆಲ್ಲಿ ಬಂದಿರುತಿದ್ದರು....
.
ನಮ್ಮ ಊರಿಗೆ ಆಗ ಶೌಚಾಲಯ ಇನ್ನು ದಾಳಿ ಇಟ್ಟಿರಲಿಲ್ಲ....ಅಕ್ಕ ಪಕ್ಕದ ಮನೆ....ನಮ್ಮ ಮನೆ...ಯ
ಬೆಳಗಿನ ಶೌಚದ ಸ್ಥಳ ಅದೇ ಆಗಿತ್ತು....

ನಾನು ಗೆಳೆಯರೊಡನೆ...ಹಣ್ಣು ಕೀಳಲು ಹೋದಾಗ....ಆಗಾಗಾ ಪಕ್ಕದ ಮನೆಯವರೊಡನೆ.... ..ಕಾಡುಕೋಳಿಗೆ ಬಲೆ ಹೆಣೆಯುವುದನ್ನು ನೋಡಲೆಂದೇ    ಹೋಗುತಿದ್ದೆ...

ನಮಗೆ ಬೇಸಿಗೆ ರಜೆಯಲ್ಲಿ ನಾವು ದೀಣೆ ಗೆ ಹೋಗುವುದೆಂದರೆ ಶಿಕಾರಿಗೆ ಹೋದ ಅನುಭವವೇ....ಸರಿ......ಪಕ್ಕದ ಮನೆಯ ಗೆಳೆಯ ಆಗಾಗಾ ದೀಣೆಯಲ್ಲಿ  ಬಲೆ ಹೆಣೆದು ....ಕಾಡು ಕೋಳಿ ಬೇಟೆಯಾಡುತಿದ್ದರು..
ಸೆರೆಸಿಕ್ಕ ಕೋಳಿಯು....ಮೊಟ್ಟೆ ಇಟ್ಟರೆ... ಇತರ ಕೋಳಿಗಳೊಡನೆ...ಕಾವು ಕೊಡಿಸಿ ಮರಿ ಮಾಡಿಸಿ ...ಸಾಕು ಕೊಳಿಗಳ ಮಧ್ಯೆ ಬೆಳೆಸುತಿದ್ದರು...

ಒಂದು ದಿನ ಬೆಳಗ್ಗೆ...ನಾನು ದೀಣೆಗೆ ಶೌಚಕ್ಕೆಂದು ಹೋದಾಗ....ಗೆಳೆಯ ನನಗಿಂತ ಮೊದಲೇ ಬಂದು ಶೌಚ ಮುಗಿಸಿ ಕಾಡು ಕೋಳಿಗೆ ಬಲೆ ಹೆಣೆಯುತಿದ್ದ....ಅದನ್ನು ಕಂಡ ನಾನು ನೋಡುತ್ತಾ....ಅಲ್ಲೇ ಕುಳಿತು....ವಾಪಸ್ಸಾಗುವಾಗ....
ಒಂದು ಪಕ್ಷಿಯ ಧ್ವನಿ ಕೇಳುತಿತ್ತು.......ನೋಡಿದರೆ....ಹಕ್ಕಿಯ ಗೂಡಿನಲ್ಲಿದ್ದ ಮರಿಯೊಂದು ಕೆಳಗೆ ಬಿದ್ದು...ಅಳುತಿತ್ತು....ಅದನ್ನು ನೋಡಿದ ಗೆಳೆಯ...ಕೂಡಲೆ...ಅದನ್ನು ...
ಜೋಪಾನವಾಗಿ ಎತ್ತಿ....ಗೂಡು ಸೇರಿಸಿದ....

""ವಿಶೇಷವೆಂದರೆ ಒಂದು ಪಕ್ಷಿಯ ಪ್ರಾಣ ತೆಗೆಯಲು...ಬಲೆ ಹೆಣೆದು ಬಂದ ಗೆಳೆಯ ಮತ್ತೊಂದು ಪಕ್ಷಿಯ ಪ್ರಾಣ ಉಳಿಸಿದ್ದ.... ""

ನಾನು ಶಾಲೆ ಮುಗಿಸಿ ಬಂದ ಕೂಡಲೆ
ಬ್ಯಾಗನ್ನು....ಬಿಸಾಡಿ....

 ಗೆಳೆಯನ ಮನೆಗೆ ಓಡಿದೆ...

ಇಬ್ಬರು ಒಟ್ಟಿಗೆ ಸಂಜೆ ವೇಳೆ ಬೇಟೆ ಬಿದ್ದಿದೆಯ ಎಂದು ನೋಡಿ ಬರಲು ಹೋದಾಗ...ಒಂದು ಕಾಡು ಕೋಳಿ ಮರಿ ಸೆರೆ ಬಿದ್ದಿತ್ತು... ಗೆಳೆಯ ಅದನ್ನು ಎತ್ತಿಕೊಂಡು ಅವರ ಮನೆಯ ಸಾಕು ಕೋಳಿಗಳ ಗುಂಪಿಗೆ ಬೆಳೆಯಲು ಬಿಟ್ಟರು...

ನಾನು ಮರುದಿನ ಬೆಳಗ್ಗೆ  ಶೌಚಕ್ಕೆಂದು ....ಕುರುಚಲು ಗಿಡಗಳ ಮಧ್ಯೆ ಹೋದಾಗ...ಬೇರೊಬ್ಬರು ಕಾಡು ಕೋಳಿಗೆ  ಹೆಣೆದ ಬಲೆಗೆ ಕಾಲು ಸಿಕ್ಕಿಕೊಂಡ ಅನುಭವ...ಕಣ್ಣ...ಮುಂದೆ ಇನ್ನೂ ಹಸಿರಾಗಿವೆ....

ಬೇಸಿಗೆಯಲ್ಲಿ....ಗೆಳೆಯರೊಡನೆ...ದೀಣೆಗೆ ಹೋಗಿ   ಹಣ್ಣುಗಳ ಬೇಟೆಯಾಡಿ ಹಂಚಿ ತಿಂದು ....ವಾಪಸ್ಸಾಗುತಿದ್ದೆವು....

ಅಲ್ಲಿ  ಬಗೆ ಬಗೆಯ ಮರಗಳು....ನೇರಳೆ...ಸೀಬೆ....ಈಗ ಅಪರೂಪವಾಗಿರುವ ಚೊಟ್ಟೆ ಹಣ್ಣು..ದೊರೆಯುತಿತ್ತು

ಹಾಗೆಯೇ...ಹಲಸಿನಹಣ್ಣು..ಜ್ಯೂಸ್ ಹಣ್ಣು ...ಸಿಗುತಿತ್ತು...ಗೆಳೆಯರೊಡನೆ ಹೋದಾಗ ನಮಗೆ ಬೇಸಿಗೆ ರಜೆ ಸಿಗುತಿದ್ದದ್ದ ..... ಸಮಯದಲ್ಲಿ...ಈ ಹಣ್ಣುಗಳು ಹೇರಳವಾಗಿ ದೊರೆಯುತಿದ್ದವು....ನೇರಳೆ ಮರ ಹತ್ತಿ....ಗೊಂಚಲನ್ನೇ ಮುರಿದು ...ಹಣ್ಣನ್ನು...ಕಿತ್ತಾಡಿ ತಿನ್ನುತಿದ್ದೆವು....ಹಲಸಿನಹಣ್ಣನ್ನು...ಹಂಚಿ ಸವಿಯುತಿದ್ದೆವು....

ಆದರೆ ಈಗ ...ನಾಲ್ಕು  ವರ್ಷ ಗಳ ಹಿಂದೆ ....ಕಾಡು ಮರಗಳನ್ನೆಲ್ಲ ದೈತ್ಯ ಜೆ.ಸಿ.ಬಿ...ದ್ವಂಸ ಗೊಳಿಸಿ ...ಕಾಫಿ ಗಿಡಗಳನ್ನು ನೆಟ್ಟು....ಮುಳ್ಳಿನ ಬೇಲಿಯನ್ನು....ತಮ್ಮ....ತೋಟದ ಸುತ್ತ...ಹಾಕಿದ ಮೇಲೆ...ನಮಗೂ ಆ ಸ್ಥಳಕ್ಕೂ...ಸಂಪರ್ಕ ಸಂಬಂಧವೇ ಇಲ್ಲದಂತಾಗಿದೆ...

ನಾನು ರಜೆಗೆಂದು ನೆನ್ನೆ ಮನೆಗೆ ಬಂದೆ....ನನ್ನ ಚಿಕ್ಕಮ್ಮನ ಮನೆಗೆ ಹೋದಾಗ....ತಿನ್ನಲು ಬಟ್ಟಲು ತುಂಬ  ನೇರಳೆ ಕೊಟ್ಟರು....ಎಲ್ಲಿಂದ ತಂದಿರಿ....ಎಂದಾಗ.....
ಮಾರುಕಟ್ಟೆಯಿಂದ ಎಂದಾಗ ......ಒಂದು ಕ್ಷಣ....ಈ ನೆನಪುಗಳೆಲ್ಲ....ತೇಲಿ ಬಂದವು....

ಕಾಡಿನಲ್ಲಿ ಸುತ್ತಾಡಿ ಕಿತ್ತಾಡಿ ತಿಂದ ಅನುಭವ ಕಲಿಸಿದ ಪಾಠ....

ಅಪ್ಪನ ಬೈಕ್ ಏರಿ ...ಮಾರುಕಟ್ಟೆಗೆ ಹೋಗಿ ಕೇಳಿದಷ್ಟು ಬೆಲೆ ತೆತ್ತು....ತಂದದ್ದರಲ್ಲಿ....ಸಿಕ್ಕೀತೆ....

                  ಅನುಭವ ಕಥನ.
                       ರಚನೆ
          ಶ್ಯಾಮ್ ಪ್ರಸಾದ್ ಭಟ್






ಕಿಲಾಡಿ ತಾತ....

ಇಂದು ನಾನು ಹೇಳ ಬೇಕಿರುವುದು ಒಬ್ಬ ಕಿಲಾಡಿ ಅಜ್ಜನ ಬಗೆಗೆ...
ಮುಂಗಾರು ಪ್ರಾರಂಭವಾದದ್ದರಿಂದ ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಎಡೆ ಬಿಡದೆ ಸುರಿವ ಮಳೆ.....

ಕೊಡೆ ಇಲ್ಲದೆ ಎಲ್ಲಿಗೂ ಹೊರಡೋಕೆ ಆಗಲ್ಲ ಅಂತ ಹಿಂದಿನ ದಿನವೇ ಮನೆಗೆ ಫೋನ್ ಮಾಡಿದಾಗ ತಿಳಿದಿತ್ತು....

ಆದರೆ ಮುಂಗಾರು ನನ್ನೂರು ಇಷ್ಟವೆಂದೋ ಏನೋ..... ಅಲ್ಲೇ ....ಜಾಂಡ ಊರಿತ್ತು
ಇನ್ನೂ ಮೈಸೂರಿಗೆ ಬಂದಿರಲಿಲ್ಲ....
ಬರುವ ಮುನ್ಸೂಚನೆಯನ್ನ ಆಗಾಗಾ ತುಂತೂರು ರಾಯಭಾರಿಗಳನ್ನ ಕಳುಹಿಸಿ ತಿಳಿಸುತಿತ್ತು ಇನ್ನು ಬಂದಿರಲಿಲ್ಲ......

ಶುಕ್ರವಾರ ಬೆಳಗ್ಗೆ ಸ್ವಲ್ಪ ಸೋಮಾರಿತನದಿಂದಲೇ....ತಡವಾಗಿ ಎದ್ದು ....ಮನೆಯಲ್ಲಿ ಎರಡು ದಿನದ ಮಟ್ಟಿಗೆ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡು ....ಸ್ನಾನಕ್ಕೆ ಹೋಗೋಣ
ಅಂತ ಹೊರಟೆ.....ಅ‍ಷ್ಟರಲ್ಲಾಗಲೇ 8 ಗಂಟೆ ಸರಿದಿತ್ತು....

ಬೆಳಗ್ಗಿನ ತರಗತಿಗೆ ಬೇಗ ಹೊರಡಬೇಕಿದ್ದರಿಂದ ಹಾಸ್ಟೆಲ್ ಕೊಠಡಿಯ ಸಹವಾಸಿ ರೋಹಿತ್ ಆಗಲೇ ಕೆಳಗಿನ ಉಪಹಾರ ಮಂದಿರದಿಂದ ತಿಂಡಿ ಮುಗಿಸಿ ಮೇಲೆ ಬಂದ....

ಭಟ್ರೇ ನಿಮಗಿಷ್ಟವಾದ ತಿಂಡಿ ಮಾಡಿದಾರೆ ಹೋಗಿ ಎಂದ .....

   ವಿದ್ಯಾರ್ಥಿ ನಿಲಯದ  ಊಟ ತಿಂಡಿ ಬಗೆಗೆ ವಿದ್ಯಾರ್ಥಿ ನಿಲಯದ ವಾಸಿಗಳಿಗೆ ಗೊತ್ತಿರುತ್ತದೆ......ಚನ್ನಾಗಿ ಮಾಡಿದರೆ ತುಸು ಹೆಚ್ಚು ಹಾಕಿಸಿಕೊಂಡಾರು ಎಂದೇ....ಉಪ್ಪು ಇದ್ದರೆ ಖಾರ ಇರೊಲ್ಲ....ಖಾರ ಇದ್ದರೆ ಉಪ್ಪು ಇರೋಲ್ಲ.......
ಯಾವ್ದಪ್ಪ ಅದು ನನಗಿಷ್ಟವಾದ ತಿಂಡಿ ಎಂದೆ ಪುಳಿಯೋಗರೆ ಎಂದ.....
ಪುಳಿಯೋಗರೆ ಅಲ್ಲ ಕಣೋ ಅದು ಹುಳಿಯೋಗರೆ ಎಂದು ತಮಾಷೆ ಮಾಡಿ ನಕ್ಕೆವು....ಹಾಗೇ ಇಡ್ಲಿ ಗೆ ಡೆಡ್ಲಿ ಎನ್ನುತ್ತೇವೆ.
ಹಾಸ್ಟೆಲ್ ಪುಳಿಯೋಗರೆ ತಿಂದು ತಿಂದು ಕೆಲವೋಮ್ಮೆ ಮನೆಗೆ ಹೋದಾಗ ಅಮ್ಮ ಪುಳಿಯೋಗರೆ ಮಾಡ್ಲೇನೋ ಎಂದಾಗ .....ಅಮ್ಮ ಬೇಡ್ವೇ ಬೇಡ ಅಂದದ್ದು ಉಂಟು....

ಎಲ್ಲಾ ತಯಾರಿ ಮಾಡಿಕೊಂಡು  ಹೊರಗೆ ತಿಂಡಿ ಮಾಡಿಕೊಂಡರಾಯ್ತೆಂದು ಕೊಂಡು ಹೊರಟೆ...
ತ್ರಿವೇಣಿ ವೃತ್ತದ ಬದಿಯಲ್ಲೇ ಇರುವ ವಿಷ್ಣು ಭವನದಲ್ಲಿ ತಿಂಡಿ ಮುಗಿಸಿ ಹೊರಟೆ....

ಮೈಸೂರು ಚಿಕ್ಕಮಗಳೂರು  ಬಸ್ಸು ಹತ್ತಿ ಕುಳಿತಾಗ ಸುಮಾರು 11:00 ರ ಸಮಯ...ಬೇಲೂರಿಗೆ ಸರಿ ಸುಮಾರು 4 : 00 ರ ಸುಮಾರಿಗೆ ತಂದಿಳಿಸಿದ ...

ಅಲ್ಲಿಂದ ಮುಂದಕ್ಕೆ....ಬೇಲೂರಿನಿಂದ ಮೂಡಿಗೆರೆ ಕಡೆಗೆ ಹೋಗುವ ಬಸ್ಸು ಹತ್ತಿ ಹೋಗ ಬೇಕಿತ್ತು...ಮಳೆ ಎಡೆಬಿಡದೆ ಸುರಿಯುತ್ತಿತ್ತು..
ಬಸ್ಸು ಹತ್ತಿ ಕಿಟಕಿ ಬಳಿಯ ಸೀಟು ಹಿಡಿದು ಕುಳಿತೆ...
   ಬಸ್ಸು ಹೊರಡೋದು ಸ್ವಲ್ಪ ತಡವಾಗುತ್ತದೆ ಎಂದು ತಿಳಿಯಿತು....
ಮುಂದಿನ ಸೀಟಿನಲ್ಲಿ....ತಾಯಿ ತನ್ನ ಮಗುವಿಗೆ ಬೈಯುತಿದ್ದದ್ದು ಹೀಗೆ...
ಹಾಳಾದೋನು ಮಳೆಲ್ ‍ಆಟ ಆಡೋಕ್ ಹೋಗ್ಬೇಡ ಅಂದ್ರು ಹೋಗೋದು ....ನೋಡೀಗ ಶೀತ ಜ್ವರ ಬಂದಿದೆ ....ಒಂದ್ ವಾರ ಸ್ಕೂಲಿಗೆ ರಜಾ ಬ ಆಯ್ತು....

ಈ ಮಾತನ್ನು ಕೇಳಿ ಬಾಲ್ಯದಲ್ಲಿ ನಾವು ಆಡುತಿದ್ದ   ಮಳೆ ನೀರಿನಲ್ಲಿ ಪೇಪರ್ ದೋಣಿ ಮಾಡಿ ಬಿಡುತಿದ್ದದ್ದು....ಗಾಳಿಗೆ ಬಿದ್ದ ಜೀರಿಗೆ ಮಾವಿನ ಹಣ್ಣನ್ನು ಸೀಬೇಹಣ್ಣನ್ನು  ಹೆಕ್ಕಿ ತಂದು ಸವಿದದ್ದು...ಜ್ವರ ಬಂದು ಮಲಗಿದ್ದು....ಎಲ್ಲವು ರಪ್ಪನೆ ಕಣ್ಮುಂದೆ ಬಂದಂತಾಯಿತು...
ನದಿ ದಡದಲ್ಲಿರುವ ದೇವಾಲಯಗಳಲ್ಲಿ ಯಾವ ಪಾಪ ಗಳಿದ್ದರು ರೋಗ ರುಜಿನ ವಿದ್ದರು ಮಿಂದೆದ್ದರೆ ವಾಸಿಯಾಗುವುದೆಂದು ನಂಬಿಕೆ...
ಗಂಗಾ ಯಮುನ ಗೋದಾವರಿ ಸರಸ್ವತಿ ನರ್ಮದ ಸಿಂಧೂ ಕಾವೇರಿ ಈ ಎಲ್ಲಾ ಪುಣ್ಯ ನದಿಗಳ ನೀರನ್ನು ಹೀರಿಕೊಂಡು ಮೋಡವಾಗಿ ಸುರಿವ ಮಳೆ ಇನ್ನೆಷ್ಟು...ಪವಿತ್ರ ಪುಣ್ಯ...ಎಂಬೆಲ್ಲ ಆಲೋಚನೆಗಳಲ್ಲಿ ಮುಳುಗಿರುವಾಗ
ಬಸ್ಸು ಜೋರು ಶಬ್ದ ಮಾಡಿ ಹೊರಟಿತು....
ಬೇಲೂರು ಟೌನ್ ಮುಗಿಯುತಿದ್ದಂತೆ ಕಂಡಕ್ಟರ್ ಟಿಕೆಟ್ ಹರಿಯಲು ಶುರು ಮಾಡಿದ....
ನನ್ನ ಪಕ್ಕದಲ್ಲಿ...ಒಬ್ಬ ಅಜ್ಜ ಕುಳಿತಿದದ್ದರು...
ಕಂಡಕ್ಟರ್ ಟಿಕೇಟ್ ಎಂದಾಗ.....ನಾನು ಟಿಕೇಟ್ ತೆಗೆದು ಕೊಂಡೆ....ಪಕ್ಕದಲ್ಲಿದ್ದ ಅಜ್ಜ ಮುಂದೆ ಬರುವ ಬಳ್ಳೂರಿನಲ್ಲಿ ಇಳಿಯುವವರು..  ..ಒಂದ್ ಬಳ್ಳೂರಿಗ್ ಕೊಡಪ್ಪ ಅಂತ ನೂರರ ನೋಟನ್ನು ಕೊಟ್ಟರು ....ಕಂಡಕ್ಟರ್ ಟಿಕೇಟ್ ಹರಿದು ಉಳಿದ 80 ರೂ ಪಾಯಿ ಚಿಲ್ಲರೆ ಯನ್ನು ಕೊಟ್ಟುರು ಅದರಲ್ಲಿ 50 ರ ನೋಟು ಒಂದು ಮೂರು ಹತ್ತು ರೂಪಾಯಿ ನೋಟುಗಳು....
ಆ ಹತ್ತರ ನೋಟುಗಳಲ್ಲಿ ಒಂದು ಭಾಗಶಃ ಹರಿದಿತ್ತು....ಅದನ್ನು ನಾನೂ ಗಮನಿಸಿದೆ....
ಅಜ್ಜ ರೀ ಕಂಡಕ್ಟರೇ....ಇದು ಹರ್ದೋಗಿದೆ ಬೇರೇ ನೋಟ್ ಕೊಡಿ ಎಂದಾಗ
ಇರೋದ್ ಅದೇ ನಿಮಿಗ್ ಕೊಡೋಕ್ ಹೊಸ ಪ್ರಿಂಟ್ ಮಾಡ್ಲಾ....20 ರುಪಾಯಿ ಟಿಕೇಟ್ ಗೆ ನೂರ್ ರುಪಾಯಿ ಕೊಟ್ಟು....ನಿಮ್ದೇ ಮಾತು....ಇಲ್ಲ 20 ರುಪಾಯಿ ಕೊಡಿ..ಎಂದ...
ಅಜ್ಜನ ಬಳಿ ಇಪ್ಪತ್ತು ರುಪಾಯಿ ಚಿಲ್ಲರೆ ಇದ್ದಿದ್ದರೆ ಅವರ್ಯಾಕೆ ನೂರರ ನೋಟು ಕೊಡುತಿದ್ದರು....
ಈ ಕಂಡಕ್ಟರ್ಗಳು ಹೀಗೇ ಹರಿದ ನೋಟುಗಳನ್ನು ಹೀಗೆ ಸಾಗಿಸಿ ಬಿಡ್ತಾರೆ.....
ಅಜ್ಜ ಸುಮ್ಮನಿರಲಿಲ್ಲ....ತಕ್ಷಣ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ತನ್ನ ಊರಿನವನೇ ಆದ ಒಬ್ಬನನ್ನು ಕೂಗಿ...ಅವನ ಬಳಿ ಇದ್ದ 10 ರ ಒಳ್ಳೆ ನೋಟಿಗೆ ಬದಲಿಗೆ ಕಂಡಕ್ಟರ್ ಕೊಟ್ಟ ಹರಿದ  ನೋಟು ಕೊಟ್ಟು ....ತಗೋ ಇದನ್ನೇ ಕೊಡು ಟಿಕೆಟ್ಗೆ ಅಂತ ಹೇಳಿದರು....
ಇದನ್ನೆಲ್ಲ....ಗಮನಿಸುತಿದ್ದ ಕಂಡಕ್ಟರ್ ಪೆಚ್ಚಾದ....
ಹಿಂಬದಿ ಸೀಟಿನ ಅಜ್ಜನ ಗುರುತಿನವ ಹಾಗೇಯೇ ಮಾಡಿದ....
ಈಗ ಕಂಡಕ್ಟರ್ಗೆ ಏನೂ ಹೊಳೆಯಲಿಲ್ಲ...ಬೇರೆ ನೋಟು ಕೊಡಿ ಅಂತ ಹೇಳಲಾಗೊಲ್ಲ....ಏಕೆಂದರೆ ತಾನೇ ಬೇರೆಯವರಿಗೆ ಕೊಟ್ಟ ನೋಟಿದು....
ಮರು ಮಾತಾಡದೆ ಟಿಕೇಟ್ ಹರಿದು ...ಮುಂದೆ ಸಾಗಿದ....
ಬುದ್ದಿವಂತಿಕೆಯಿಂದ ಎಂತಹ ಸಂದರ್ಭವನ್ನು ನಮಗೆ ಅನುಕೂಲವಾಗುವಂತೆ ಮಾಡಿಕೊಳ್ಳಬಹುದೆಂಬ ಸಂದೇಶ ಸದ್ದಿಲ್ಲದೆ....ಸಾರಿತ್ತು...
ಮುಂದೆ ನನ್ನ ಸ್ಟಾಪ್ ಬಂದಾಗ ಇಳಿದು ....
ನನ್ನ ಮನೆಗೆ
   ಬಸ್ ಇಳಿವ ಸ್ಟಾಪ್ ನಿಂದ 2 ಕಿ ಮೀ
ನೆಡೆದು ಅಥವಾ ಆಟೋದಲ್ಲಿ ಸಾಗಬೇಕು....
ಮಳೆ ಕಾರಣ....ಆಶ್ರಯಕ್ಕೆಂದು ಹತ್ತಿರದ ಹೊಟೆಲ್ ನಲ್ಲಿ ನಿಂತು ಬಿಸಿ ಬಿಸಿ ಕಾಫಿ.....ಜೊತೆಗೆ ಬಜ್ಜಿ ಸವಿದೆ....ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ ತಿನ್ನುವ ಮಜವೇ ಬೇರೆ...
ಸ್ವಲ್ಪ ಸಮಯದ ನಂತರ ಮಳೆ ಕಡಿಮೆಯಾಯಿತು ಮನೆಗೆ ಆಟೋ ಹಿಡಿದು....ಹೊರಟೆ....
                             ರಚನೆ
                  ಶ್ಯಾಮ್ ಪ್ರಸಾದ್ ಭಟ್



ಜೀವ ನದಿ



ತೊಡರುಗಳ ನಡುವೆ ಜನಿಸಿದ ಪುಟ್ಟ ನದಿ
ಪಯಣದಿ ಸ್ನೇಹಿತರ ಕೂಡುತ್ತ
ತನ್ನ ಒಗ್ಗಟ್ಟಿನ ವಿಸ್ತಾರವ ಹಿಗ್ಗಿಸುತ್ತ
ಶರಧಿ ಕಾಣುವ ತವಕದಿ ಸಾಗಿದಳು ಭರದಿ

ಕಾಡು ನಾಡಿನ ಜೀವಿಗಳ ಜೀವನಾಡಿ
ಜೀವ ತುಂಬುವ ಜೀವ ನದಿ

ವರ್ಷ ಋುತುವಿನಲಿ ಪುಟ್ಟ ಹನಿಯಾಗಿ
ಭುವಿಗೆ ಬರುವೆ.....
ಭುವಿಯ ಗೆಳೆಯರ ಕೂಡಿ
ಭೋರ್ಗರೆದು ಹರಿವೆ.....

ವರ್ಷ ಋುತುವಿನಲಿ ರೌದ್ರ ರೂಪವ ತಾಳುವೆ
ಮಾನವ ಪಾಪ ಕೂಪಗಳ ಕೊಚ್ಚಿ ತೊಳೆವೆ
ಮುಂಜಾವು ಸಂಧ್ಯಾ ಕಾಲದಿ ಚಿನ್ನದ ರೂಪದಿ ಹೊಳೆವೆ
ನಿನ್ನ ಮಡಿಲ ತೀರದಿ ಮಲಗಿ ನನ್ನೇ ನಾ ಮರೆವೆ...

ನಿನ ಮುಂದೆ ನಾನಲ್ಲ ಶೂರ
ಬದುಕಿದ ಇತಿಹಾಸವುಂಟೆ ನೀರ ಕುಡಿಯದ ವೀರ..

                               ರಚನೆ   
                  ಶ್ಯಾಮ್ ಪ್ರಸಾದ್ ಭಟ್


ಪೋಸ್ಟ್     ಪೋಸ್ಟ್ 

 ನನ್ನ ಗೆಳೆಯನಿಗೊಂದು ಪುಸ್ತಕ ಕಳುಹಿಸುವ ಸಲುವಾಗಿ ಪೋಸ್ಟ್ ಆಫೀಸಿಗೆ ಹೋಗಿದ್ದೆ....


  ಆಫೀಸಿನ ಹೊರಬ‌ಾಗಿಲಲ್ಲಿ....ಕೆಂಪನೆ ಪೋಸ್ಟ್  ಡಬ್ಬವೊಂದು ಕಾಣಿಸಿತು...


ಅದನ್ನು ಕಂಡಾಗಲೆಲ್ಲ...ನನ್ನ ಬಾಲ್ಯದ ನೆನಪಿಗೆ ಜಾರುತ್ತೇನೆ..


ಒಂದು ಪ್ರಸಂಗವನ್ನು ನಾನು ಹೇಳಲೇ ಬೇಕು...


ನಾನು ಆಗ ಆರನೇ ತರಗತಿ ಓದುತಿದ್ದ ಸಮಯ....ನಮಗೆ ಕನ್ನಡ ಮೇಷ್ಟ್ರು ಪತ್ರ ಬರೆಯುವ ಮಾದರಿ ವಿಧಾನಗಳನ್ನು ಹೇಳಿಕೊಡುತಿದ್ದರು ....


ವ್ಯವಹಾರಿಕ ಪತ್ರ ಬರೆಯುವ ವಿಧಾನ ಹಾಗೂ ..ವೈಯಕ್ತಿಕ  ಪತ್ರ ಬರೆಯುವ ಭಿನ್ನ ಭಿನ್ನ ವಿಧಾನವನ್ನು ಹೇಳಿಕೊಟ್ಟರು.....

ಹಾಗೆಯೇ ಎಲ್ಲರೂ ತಮ್ಮ  ಪ್ತೀತಿ ಪಾತ್ರರಿಗೆ.. ಬಂಧುಗಳಿಗೆ ಪತ್ರ ಬರೆದು ಅಂಚೆಯ ಉಪಯೋಗ ಪಡೆಯ ಬೇಕೆಂದು ಹೇಳಿದರು ....


ನನಗೋ ಹುಡುಗಾಟ ...ಕುತೂಹಲದ ಬುದ್ದಿ ಸರಿ ಇವತ್ತು ಸಂಜೆಯೇ ಮನೆಗೆ ಹೋದವನೇ ಅಪ್ಪನಿಗೆ ಕಾಟ ಹಾಕ ಹಠ ಹಿಡಿದು ಚೀಕನಹಳ್ಳಿ ಪೋಸ್ಟ್ ಆಫಿಸಿಗೆ ಹೋದೆವು ....ಬಾಗಿಲು ಬೀಗ ಜಡಿದಿತ್ತು...


ಅಲ್ಲೆ ಪಕ್ಕದಲ್ಲೆ ಪೋಸ್ಟ್ ಮಾಸ್ಟರ್ ನಾರಾಯಣಣ್ಣ ನ ಮನೆ ....ಪರಿಚಯ ಇದ್ದದದರಿಂದ ಒಂದು ಅಂಚೆ ಕಾರ್ಡು ಪಡೆದು ....ಮನೆಗೆ ಬಂದೆವು ...


ರಾತ್ರಿ ಅಮ್ಮ ...ಅಪ್ಪನನ್ನು ಒಟ್ಟಿಗೆ ಕರೆದು ....ಸೀಮೇ ಎಣ್ಣೆ ದೀಪದ ಸುತ್ತ ಕುಳಿತು ....ಅಜ್ಜಿ ಮನೆಗೆ ...ಅಂದರೆ ನನ್ನ  ‍ಅಮ್ಮನ ಅಮ್ಮ ನ ಮನೆಗೆ ಪತ್ರ ಬರೆಯೋದೆಂದು ನಿರ್ಧಾರವಾಯಿತು ....


ಸರಿ ನಾನು ನನ್ನ ಕಾಗೇ ಕಾಲು ..ಗೂಬೇ ಕಾಲು ಅಕ್ಷರದಲ್ಲಿ ....ಒಂದಷ್ಟು ಗೀಚಿದೆ ...‍ಅಜ್ಜಿ ...ಚನ್ನಾಗಿದಿರಾ ಮಾವ ...ಚಿಕ್ಕಮ್ಮ ಹೇಗಿದ್ದಾರೆ ಎಲ್ಲವೂ ಆಯಿತು ಆಂಗಳದಲ್ಲಿರುವ ಇಟ್ಟಿಗೆಗಳು ಹಾಗೇ ಇರಲಿ ರಜೆಗೆ ಬಂದಾಗ ಮನೆ ಮಾಡಿ ಗಣಪತಿ ಕೂರ್ಸೋಕೆ ಬೇಕು .. ಹಾಗೇ ಹೀಗೆ ಒಂದಷ್ಟು ಮಾತು ಬರೆದೆ..ಅಮ್ಮನ ಮಾತು  ಒಂದಷ್ಟು ಪುಟ ತುಂಬಿತು...


ಸರಿ ಎಂದು ಮಡಿಸಿ ಕವರ್ ನೊಳಗೆ ಹಾಕಿ ಅದರ ಮೇಲೆ ತಲುಪಿಸಬೇಕಾದ ವಿಳಾಸ ಹಾಗೂ ನಮ್ಮ ವಿಳಾಸ ಎಲ್ಲಾ ಬರೆದು ....ಮುಂದಿನ ದಿನ ಪೋಸ್ಟ್ ಮಾಡಲು ಅಪ್ಪನ ಬಳಿ ಕೊಟ್ಟು  ...ನಾನು ಶಾಲೆಗೆ ಹೊರಟೆ....


ಆಗ ನಮ್ಮನೆಯಲ್ಲಿ ಫೋನ್ ಇರಲಿಲ್ಲ....ಮಾತನಾಡಬೇಕಾದರೆ ಅಂಗಡಿಯಲ್ಲಿಟ್ಟಿದ್ದ ಹಳದಿ ಬಣ್ಣದ ಕಾಯನ್ ಬೂತ್ ಗೆ ಹೋಗಬೇಕಿತ್ತು...


...ಇಷ್ಟಾದ ಮೇಲೆ ಶಾಲೆಯಿಂದ ಮನೆಗೆ ಬಂದವನೆ ಪೋಸ್ಟ್ ಮಾಡಿದೆಯ ....ಆ ಡಬ್ಬಿ ಒಳಗೆ ಕವರ್ ಹಾಕಿರುವ ಬಗ್ಗೆ  ಖಚಿತ ಪಡಿಸಿಕೊಂಡೆ ...


     ಕೆಲ ದಿನಗಳು ಕಳೆದ ಮೇಲೆ ...

ಪರೀಕ್ಷೆಯು ಮುಗಿಯಿತು ...ಪರೀಕ್ಷೆ ಗೆ ಪತ್ರ ಬರೆಯುವ ಬಗ್ಗೆ ಗೆಳಯನಿಗೆ ಒಂದು ಪತ್ರ ಬರೆಯಿರಿ ಎಂಬ ಪ್ರಶ್ನೆ ಗೆ ನಾನು ಬರೆದ ಪತ್ರ ನೆನೆದು ...ಪರೀಕ್ಷೆ ಮುಗಿಸಿದೆ...


ಪರೀಕ್ಷೆ ಮುಗಿದ ಮೇಲೆ ನಮ್ಮ ಕೆಲಸ ದಾರಿ ಕಾಯುವುದು ಮಾವ ಬಂದು ನಮ್ಮನ್ನೆಲ್ಲ ಅಜ್ಜಿ ಮನೆಗೆ ಕರೆದು ಕೊಂಡು ಹೋಗುವುದು ...ಬೇಸಿಗೆ ರಜೆ ಮುಗಿಯುವ ವರೆಗೂ ನಮ್ಮ ಠಿಕಾಣಿ ಅಲ್ಲೆ...


ಪತ್ರದ ಕುರಿತು ವಿಚಾರಿಸಿದೆ....ಬಂದಿಲ್ಲ...ಎಂಬ ಉತ್ತರ ಮಾವನಿಂದ ಹೊರಬಿತ್ತು....ನನ್ನ ಅಪ್ಪನನ್ನೇ ದೂರಿಕೊಂಡು ಸರಿಯಾಗಿ ಪೋಸ್ಟ್ ಮಾಡಿಲ್ಲ ಅದಕ್ಕೆ ಬಂದಿಲ್ಲ....ಎಂದು ಕೊಂಡು ಅಜ್ಜಿ ಮನೆಗೆ ಹೋದೆ...

ಅಲ್ಲಿಯ ಗೆಳೆಯರೊಂದಿ ಆಟದಲ್ಲಿ ಕಾಲ ಕಳೆದು ಕೆಲ ದಿನಗಳು ಕಳೆಯಿತು....

 ನಮ್ಮ ಅಜ್ಜಿಗೆ ವಯಸ್ಕರ ಪೆನ್ಷನ್ ಪೋಸ್ಟ್ ಆಫೀಸಿಗೆ  ಬರುತಿತ್ತು ....ಹಾಗಾಗಿ ತಟ್ಟೇಕೆರೆ ಪೋಸ್ಟ್ ಆಫೀಸಿಗೆ ಹೋಗಿ ಮನೆಗೆ ಬರುವಾಗ ...ಒಂದು ಕಾರ್ಡ್ ನ್ನು ತಂದು ನನ್ನ ಕೈಗೆ ಕೊಟ್ಟು ಓದಲು ಹೇಳಿದರು ....


ವಿಪರ್ಯಾಸ ಅಂದರೆ ಇದೇ ಅಲ್ಲವೇ .....ನಾನು ಬರೆದ ಕ್ಷೇಮ ಸಮಾಚಾರದ ಕಾರ್ಡು ನನ್ನ ಕೈಯಲ್ಲಿತ್ತು...ಅಯ್ಯೋ ದೇವ್ರೇ ....ಎಂದುಕೊಂಡು ಓದಲು ನಾಚಿಕೊಳ್ಳುತ್ತ...


.ಆ ಕಾರ್ಡ್ ನ್ನು ಅಲ್ಲೇ ಇಟ್ಟು ಗೆಳೆಯರೊಂದಿಗೆ ಆಡಲು ಓಡಿದೆ....

ಇದು ನನ್ನ ಪೋಸ್ಟ್ ಆಫೀಸಿನ ಹಳೇ ಸಂಬಂಧದ ಮಾತು.


ಆದರು ಈ ಕೆಂಪು ಪೆಟ್ಟಿಗೆ ಸಾಮಾನ್ಯ ವೆಂದು ತಿಳಿಯ ಬೇಡಿ ....ಸ್ವಾತಂತ್ರ್ಯ ಹೋರಾಟಗಾರರ ಪತ್ರಗಳು ಸಂಚರಿಸಿದ ಪೆಟ್ಟಿಗೆ ....ಎಷ್ಟೋ ಸುಖ : ದುಃಖ ಗಳ ಪತ್ರಗಳನ್ನು ತನ್ನೊಡಲಲ್ಲಿ ಹೊತ್ತು....ಸಂಬಂಧಪಟ್ಟವರಿಗೆ ತಲುಪಿಸಿದ ಪೆಟ್ಟಿಗೆ ..

ಎಷ್ಟೋ ಪ್ರೇಮಿಗಳಿಗೆ ಪ್ರೇಮ ಕಥೆಗಳಿಗೆ ಲವ್ ಗುರು ಎನಿಸಿಕೊಂಡ ಪೆಟ್ಟಿಗೆ ....ಇಂದು ಮೊಬೈಲ್ ಗಳು ಸಾಕಷ್ಟು ಸಂಪರ್ಕ ಮಾಧ್ಯಮಗಳು ಬಂದರು ತನ್ನ ಕರ್ತವ್ಯ ನಿಷ್ಠೆ ಬಿಟ್ಟುಕೊಡದ  ಅನಿವಾರ್ಯ ವಾಗಿರುವ ಪೆಟ್ಟಿಗೆ ..

ಪೋಸ್ಟ್ ಆಫೀಸನ್ನು ....ಪೋಸ್ಟ್ ಬಾಕ್ಸನ್ನು ಬಳಸಿ..ಉಳಿಸಿ...

ತಾತನಿಗೆ ಮುಪ್ಪಾದರು ...ತಾತನ ಅನುಭವದ ಕಥೆಗಳಿಗೆ ಮುಪ್ಪಿಲ್ಲ

                                      ಇಂತಿ ನಿಮ್ಮ ಪ್ರೀತಿ ಪಾತ್ರ 

                                      ಶ್ಯಾಮ್ ಪ್ರಸಾದ್ ಭಟ್