ಅವ್ವಾರೇ.....ಅವ್ವಾರೇ....
ಸೀತಮ್ಮ ಒಳಗಿನಿಂದ ಹೊರಬಂದವಳೇ....
ಯಾರಪ್ಪ ನೀವು ? ..... ಯಾರು ಬೇಕಿತ್ತು....?
ಅವ್ವಾ.... ಯಜಮಾನ್ರಿಲ್ವೇನವ್ವ...!
ಇದಾರೇ...ತೋಟ ಸುತ್ಕೊಂಡ್ ಬರೋಕೆ ಹೋಗಿದಾರೆ...
ಯಾಕೆ? ಏನಾದ್ರು ಹೇಳೋದಿತ್ತ?..
ಅಷ್ಟರಲ್ಲಿ.....ಜಿಮ್ಮಿ...ಮನೆಗೆ ಬಂತು...ಸೀತಮ್ಮನ ಕಾಲು ನೆಕ್ಕುತ್ತ....ಮನೆಗೆ ಬಂದಿದ್ದ ಅಪರಿಚಿತರನ್ನು ಕಂಡು ಬೊಗಳಲು ಶುರು ಮಾಡಿತು....
ಬೌ .....ಬೌ....ಬೌ...
ಸೀತಮ್ಮ ತಕ್ಷಣ ಎಚ್ಚೆತ್ತು.....ಜಿಮ್ಮಿ ಸುಮ್ನಿರು....ನಡೀ ಗೂಡಿಗೆ....ಎಂದೊಡನೆ ....ದೈತ್ಯಾಕಾರದ ಜಾತಿ ನಾಯಿ ಜಿಮ್ಮಿ....ಬೊಗಳುವುದನ್ನು ನಿಲ್ಲಿಸಿ ಗೂಡಿನೊಳಗೆ ಹೋಗಿ ಮಲಗಿತು....
ತಿಮ್ಮ ಮನಸ್ಸಿನಲ್ಲೇ ಅಂದುಕೊಂಡ ಎಷ್ಟಾದರು ದೊಡ್ಮನೆ ನಾಯಿ ...ದೊಡ್ಮನೆ ನಾಯಿನೇ....ಹೆಂಗ್ ಮಾತ್ ಕೇಳುತ್ತೇ....ಹೆಂಗ್ ಮಾತ್ ಕಲ್ಸವ್ರೆ....ನಮ್ಮನೇ ಕರಿಯಾನು ಇದಾನೆ....ಹೇಳಿದ್ ಒಂದ್ ಮಾತು ಕೇಳಲ್ಲ...ಕೂರು ಅಂದ್ರೆ ನಿಲ್ತಾನೆ...ನಿಲ್ಲು ಅಂದ್ರೆ ಓಡ್ತಾನೆ....ಓಡು ಅಂದ್ರೆ ಮಲಗ್ತಾನೆ....ಎಂದು ಮನದಲ್ಲೇ ಅಂದು ಕೊಂಡ...
ಸೀತಮ್ಮ ಮನೆಗೆ ಬಂದ ತಿಮ್ಮನಿಗೆ...ಹೀಗೆಂದರು.
ಇರಪ್ಪಾ ನಮ್ಮನೇ ಜಿಮ್ಮಿ ಬಂತು ಅಂದ್ರೆ ಅವ್ರು ಹಿಂದೆ ಬರ್ತಿರ್ತಾರೆ ಅಂತ....ಇನ್ನೇನು ಸ್ವಲ್ಪ ಹೊತ್ತಲ್ಲೇ ಬರ್ತಾರೆ....
ಮಂಡಿವರೆಗಿನ ಬೂಟು ....ತಲೆಗೆ ವೃತ್ತಾಕಾರದ ಟೊಪ್ಪಿ ...ಬಾಯಲ್ಲಿ ಸಿಗರೇಟು...ದಪ್ಪ ಮೀಸೆ ಕೋಲು ಮುಖದ ವ್ಯಕ್ತಿ ತಿಮ್ಮನನ್ನು ಕಂಡು ಸಿಗರೇಟನ್ನು ಹಲ್ಲಿನಿಂದ ಕಚ್ಚಿ ಹಿಡಿದು ನಗುತ್ತ ....ಏನೋ ತಿಮ್ಮಯ್ಯ ನಮ್ಮನೇವರ್ಗೂ ಪಾದ ಬೆಳ್ಸಿದೀಯ...ಏನ್ ಸಮಾಚಾರ ಎಂದರು ....
ತಿಮ್ಮ ಯಜಮಾನ್ರನ್ನ ನೋಡಿದೊಡನೆ ತನ್ನ ಮುವತ್ತೆರಡು ಹಲ್ಲು ಬಿಡುತ್ತ.....ಏನೂ ಇಲ್ಲ ಯಜಮಾನ್ರೇ....ಹೀಗೇ ಒಂದಲ್ಲ ಒಂದು ಸಮಸ್ಯೆ ಬೆನ್ ಹಿಡ್ಕಂಡಾಗ ನಿಮ್ಮತ್ರುಕ್ ಬರ್ದೆ ಇನ್ನೇಲ್ ಹೋಗ್ತಾನೆ ಈ ಬಡ ತಿಮ್ಮ...
ಏನು ನೀನು ಬಡವನೇನೋ...ಅರೇಳೆಕ್ರೆ ಜಮೀನು ಒಡೆಯ....
ಎಲ್ಲಾ ಇಂದ್ರಮ್ಮನ ಕೃಪೆ ಎಂದ ತಿಮ್ಮ..
ಏನೇ..ಸೀತು..
ತಿಮ್ಮಂಗೆ ಒಂದು ಲೋಟ ಕಾಫಿ ನಂಗೂ ಒಂದ್ ಲೋಟ ತಗೋ ಬಾ...ಎಂದು ಬಾಲ್ಕನಿಯಲ್ಲಿ ಇದ್ದ ಕುಶಾನಿನ ಕುರ್ಚಿಯ ಮೇಲೆ ಕುಳಿತು ತಮ್ಮ ಮಂಡಿವರೆಗಿನ ಬೂಟ್ಸ್ ಬಿಚ್ಚಿದರು...ಹೆಬ್ಬೆರಳಿನ ಸಂದಿಯಲಿ ರಕ್ತ... ಒಂದೇ ಸಮನೆ ರಕ್ತ ಸುರಿಯುತಿತ್ತು....ಈ ಮಳೆಗಾಲ ಬಂತು ಅಂದ್ರೆ ಸಾಕು ಕಣಾ ತಿಮ್ಮ....ಈ ಹಾಳಾದ್ ಜಿಗಣೆ ಎಲ್ಲಿರ್ತಾವೋ ನಮ್ ರಕ್ತ ಹೀರಾಕೆ...
ಏನೇ....ಸೀತು.... ಹಂಗೆ ಒಂದ್ ನಿಂಬೇ ಹುಳಿ ತಗಾ ಬಾ....ಹಾಳಾದ್ ಜಿಗಣೆ
ಬೂಟ್ಸನ್ನು ಕೊಡವಿದರು ಅದರಿಂದ ಹೊರಬಿದ್ದ ಜಿಗಣೆ ಕಂಡು ಈ ಹಾಳಾದ್ ಜಿಗಣೆ ನೋಡಿಲ್ಲಿ ರಕ್ತ ಕುಡುದು ಹೊಟ್ಟೆ ತುಂಬುಸ್ಕಂಡ್ ಹೆಂಗ್ ಬಿದ್ಕಂಡದೆ....
ಅಪ್ಪನಿಗೆ ನಿಂಬೆ ಹುಳಿ ತಂದು ಕೊಟ್ಟ ಮಗಳು ಜಾನವಿ
ಅಪ್ಪ ಜಿಗಣೆ ಮೇಲೆ ಹುಳಿ ಹಿಂಡುತಿದ್ದದನ್ನ...ಅದು ಒದ್ದಾಡುತಿದ್ದದನ್ನ ಕೌತುಕದ ಭಾವದಿಂದ ನೋಡುತಿದ್ದಳು...
ಜಾನವಿ ಇನ್ನು ಆರನೇ ತರಗತಿ ಓದುತಿದ್ದ ಹುಡುಗಿ ಈ ದಿನದ ಹಿಂದಿನ ದಿನ ಜಾನವಿಗೆ ತಮ್ಮ ಸೈನ್ಸ್ ಟೀಚರ್ ಹೇಳಿಕೊಟ್ಟ ಬ್ಲಡ್ ಗ್ರೂಪ್ ಗಳ ಬಗೆಗಿನ ಪಾಠ ತಲೆಗೆ ತಟ್ಟನೆ ಏನೋ ಹೊಳೆದಂತವಳಾಗಿ...
ಅಪ್ಪ ನನ್ ಬ್ಲಡ್ ಗ್ರೂಪ್ O + positive ಅಂತ ಹೇಳಿದ್ದೆ....ನಿಂದ್ಯಾವ್ದಪ್ಪ....?
ನಂದೂ O positive ಮಗಳೇ....
ಅಪ್ಪಾ....!!
ಈ ಜಿಗಣೆ ಎಲ್ಲಾರ್ ರಕ್ತ ನೂ ಕುಡಿಯುತ್ತಲ್ಲ....
ಈ ಜಿಗಣೆದು ಯಾವ್ ಬ್ಲಡ್ ಗ್ರೂಪ್ ಅಪ್ಪ...?
ಉತ್ತರ ತಿಳಿಯದೇ ತಬ್ಬಿಬ್ಬಾಗಿ....
ಹೇ ನಿಂದೊಂದ್ ಪ್ರಶ್ನೆ ನಂಗ್ ಕೆಲ್ಸ ಇದೆ ಹೋಗು ಆಟ ಆಡ್ಕೋ ಹೋಗು....ಮರಿ.. ಎಂದು ಗಂಭೀರದಿಂದ ಉತ್ತರಿಸಿ....
ಮತೇ ಏನ್ ತಿಮ್ಮಯ್ಯ ಬಂದ ಸಮಾಚಾರ...ಎಂದು ತನ್ನ ದೃಷ್ಟಿಯನ್ನ ತಿಮ್ಮನ ಮೇಲೆ ಹಾಯಿಸಿದ
ತಿಮ್ಮ ಯಜಮಾನರನ್ನ ನೋಡಿ ಹೊಸದೇನಿದೇ ಅಯ್ಯ ಅದೇ ಹಳೇ...ವಿಷಯ ನೇ...ನಿಮ್ಮಿಂದ ಮಾತ್ರ ಆಗೋದು...
ಹೋ .... ಏನ್ ಜಮೀನಿಗೆ ಹಂದಿ ನುಗ್ಗಿದವಾ?..
ಹು...ಯಜಮಾನ್ರೇ....ಈ ಹಾಳಾದ್ ಹಂದಿ ಮುಂಡೆಗಂಡುಂದು....ರಾತ್ರೋ ರಾತ್ರಿ ನುಗ್ಗಿ... ಹಾಕಿರಾ ಎಲ್ಲಾ ಫಸಲು ನನ್ನ ಕೈಗೇ ಬರೋ ಅಷ್ಟರಲ್ಲಿ ಅದು ಕಾಲಲ್ಲಿ ತುಳ್ದಾಕ್ತಾ ಐತೇ....ಏನ್ ಮಾಡದು...
ಹೋ ಹಾಗಾ ಸಮಾಚಾರ ಏನಾರು ಮಾಡನ ತಗಾ...
ಆಷ್ಟರಲ್ಲಿ ಸೀತಮ್ಮ ಕಾಫಿ ತಂದಳು
ಸೀತಮ್ಮ ತಂದ ಕಾಫಿ ಲೋಟವನ್ನ ತಿಮ್ಮನಿಗೆ ಕೊಟ್ಟು ಕುಡಿಯಲು ಹೇಳುತ್ತಾ...
ಮತೇ.... ಮಗಳ್ ಮದುವೇ ಏನ್ ಮಾಡುದ್ಯೋ...
ಅದ್ಯಾವ್ದೋ ಗಂಡು ಗೊತ್ತಾಗಿದೆ ಅಂತಿದ್ದೆ...
ಅಯ್ಯೋ ಅಂತಿದ್ದೆ...ಆಗಾ..
ಆ ಪಾಪಿ ಮುಂಡೇ ಗಂಡನ್ ನಿಜವಾದ್ ಬಣ್ಣ ಗೊತ್ತಾದ್ಮೇಲು ಮಗಳು ಕೊಡಕಾಯ್ತದ....
ಅವುನ್ಗೇ ಈಗಾಗಲೇ ಮದುವೆ ಆಗಿತ್ತಂತೆ ಅದ್ನ ಮುಚ್ಚಿಟ್ಟು ನಂಗಿರೋ ಒಬ್ಳೆ ಮಗುಳ್ನ ಮದ್ವೆ ಆದ್ರೆ ಆಸ್ತಿ ಎಲ್ಲಾ ತನ್ನೆಸ್ರುಗಾಯ್ತದೇ ಅಂತ ಐಡಿರಿಯಾ ಮಾಡಿದ್ನಂತೆ....
ಹೋ ಹೋ ಹಾಗಾ ಸಮಾಚಾರ....ಭಾಳ ಎಚ್ಚರಿಕೆಯಿಂದ ಇರಬೇಕು ಕಣಾ ತಿಮ್ಮಯ್ಯ
... ಈಗಿನ ಕಾಲದಲ್ಲಿ ಒಳ್ಳೆವ್ನಾರು ಕೆಟ್ಟವನಾರು...ಮುಖನೋಡಿ ಹೇಳಕಾಗುತ್ತ ಹೇಳು...
ಹು ಕಣ್ರ ಅಯ್ಯ ಯಾವ್ ಹುತ್ತದಾಗೇ ಯಾವ ಹಾವಿರ್ತದೇ ತಿಳಿಯಾಕಿಲ್ಲ...
ಸರಿ ಯಜಮಾನ್ರೆ...ಹೊತ್ತು ನೆತ್ತಿಮ್ಯಾಗ್ ಬರೋ ಅಷ್ಟರಲ್ಲಿ ಊರ್ ಸೇರ್ಕತಿನಿ.... ಎಂದ ತಿಮ್ಮಯ್ಯ
ಅದಕ್ಕೆ ರಮೇಶಪ್ಪ ನಿಮ್ಮೂರಿಗ್ ಹೋಗೋ ದಾರಿ ಲೀ ಕಾಡಿನ ಮರಾನೇ ತುಂಬೋಗಿದವೇ....ಬಿಸಿಲು ಬಂದು ನಿನ್ ನೆತ್ತಿ ಸುಡಾಕೆ ಮದ್ಯಾಹ್ನ ಆಗ್ಬೇಕು..
ಬಾಯ್ ಮಾತಿಗ್ ಹೇಳ್ದೆ ಕಣೇಳಿ
ಬೆಳಗ್ಗೆ ಜಿಂಕೆ ಹಿಂಡು ದಾರಿಲೇ ನಿತಿದ್ವು ಅಂತೀನಿ .. ನನ್ ನೋಡಿದ್ ಕೂಡ್ಲೆ ಓಟ ಕಿತ್ವು .....ಸರಿ ಅಯ್ಯಾ...ನನ್ ಹಂದಿ ಬಗ್ಗೆ ಸ್ವಲ್ಪ ಇಚಾರ ಮಾಡಿ ಎಂದ ತಿಮ್ಮಯ್ಯ ..
ರಮೇಶಪ್ಪ ನಗುತ್ತ ಅದು ನಿನ್ ಹಂದಿಯಲ್ಲ ಕಣೋ ಕಾಡು ಹಂದಿ...ಅದು ನಮ್ ಕೈನಾಗ್ ಸಿಕ್ ಮೇಲೆ ನಮ್ಮದೇ ಅಲ್ಲುವ್ರ ನೆನುಸ್ಕಂಡ್ರೆ ಬಾಯಿ ನೀರ್ ಸುರುಸ್ತದೆ.. ಎಂದು ನಗುತ್ತಾ...ಬತ್ತೀನಿ....ಬುದ್ದಿ...ಬತ್ತಿನಿ ಕಣ್ರವ್ವ...
ಇಬ್ಬರಿಗೂ ಕೈ ಮುಗಿದು ಹೊರಟ ತಿಮ್ಮಯ್ಯ...
ರಮೇಶಪ್ಪನು ನಗುತ್ತಾ....ಸೀತು...ಸೀತು...ಬಿಸಿ ನೀರು ಕಾದಿದಿಯೇನೇ...ಎಂದು ಮನೆ ಒಳ ನಡೆದ...
ಇತ್ತ ತಿಮ್ಮಯ್ಯ ನೆತ್ತಿ ಮೇಲೆ ಸೂರ್ಯ ಬಂದು ನೆತ್ತಿ ಸುಡೋ ಮೊದ್ಲು ಮನೆ ಸೇರ್ಕಂಬುಡ್ಬೇಕು ...ಈ ಕಾಡು ದಾರೀಲಿ ಸೂರ್ಯ ನೆಲಕ್ಕೆ ತಾಕಕ್ಕಿಲ್ಲಂದ್ರು....ಈ ಕಾಟಿ (ಕಾಡು ಕೋಣ)...ಎಲ್ಲಾ ದಾರಿ ಲೇ ನಿಂತಿರ್ತಾವೆ.. ಅಪ್ಪಿ ತಪ್ಪಿ ಅವುಗಳ್ ಕೈಗೆ ಸಿಕ್ಕಾಕಂಡ್ರೆ...ನನ್ ಕಥೆ ಮುಗುಸ್ತವೆ....ಎಂದು ಗುನಗುತ್ತ ಬೇಗ ಬೇಗ ಹೆಜ್ಜೆ ಇಟ್ಟು ನೆಡೆಯುತ್ತಿದ್ದ...
ಇತ್ತ ಕಡೆ ರಮೇಶಪ್ಪ ಸ್ನಾನ ಮುಗಿಸಿ...ಸೀತಾ ಸೀತಾ ಎಂದು ಹೆಂಡತಿಯನ್ನು ಕರೆದ ....ನಾನ್ ರೂಮಲ್ಲಿದಿನಿ ರೀ ಎಂದಳು...
ರೂಮಿನ ಬಳಿ ಬಂದು ....ಯಾಕೇ ಸೀತು ಮಲಿಕೊಂಡಿದಿಯಾ...ಯಾಕ್ ಏನಾಯ್ತು..?.
ಬೆಳಗ್ಗೆಯಿಂದ ತಲೆ ಸಿಡಿತಾ ಇದೆ...ಶೀತಾ ..ತಲೆನೋವು..ಆಗ್ತಾ ಇಲ್ಲ...ಎಂದಳು
ಸರಿ ಸರಿ ಮಲ್ಕೊ ಒಂದ್ಸಲ್ಪ ಶುಂಠಿ ಜಜ್ಜಿ ಕಾಫಿ ಮಾಡ್ತಿನಿ ಕುಡಿವಂತೆ...ಎಂದು ಅಡುಗೆ ಮನೆಗೆ ಹೋದ ರಮೇಶಪ್ಪ...
ಶುಂಠಿ ಜಜ್ಜಿ ..ಜೀರಿಗೆ ಮೆಣಸು ಪುಡಿ ಮಾಡಿ ನೀರಿಗೆ ಬೆರಸಿ ಸ್ವಲ್ಪ ಬೆಲ್ಲ ಹಾಕಿ ಕುದಿಯಲು ಇಟ್ಟ...
ಹೊರಗಿನಿಂದ
ಸೀತವ್ವರೇ....ಸೀತವ್ವರೇ...
ಒಳಗಿನಿಂದ ರಮೇಶಪ್ಪ....ಯಾರು ..... ಬಂದೇ ..ಬಂದೇ..
ಹೊರ ಬಂದವನೇ ....ಊರಿನ ಸೇಸಿಯನ್ನು ಕಂಡು.....ಏನ್ ಸೇಸಿ(ಶೇಷಮ್ಮ) ಸಮಾಚಾರ....ಎಂದ
ಸೇಸಿ ಸೀತಮ್ಮರು ಇಲ್ವಾ ರಮೇಸಪ್ಪ....ಎಂದಳು
ಯಾಕ್ ನಂತವನೇ ಹೇಳು ಏನ್ ವಿಷ್ಯ ಎಂದ....
ಮತ್ತೆ ......ಸೀತಮ್ಮರಿಲ್ವ....ಎಂದಳು ಸೇಸಿ
ನಿಮ್ಮ ಸೀತಮ್ಮ....ಶೀತ ಆಗಿ ಮಲಿಕೊಂಡವ್ರೆ...ಅದೇನ್ ನಂತಾವನೇ ಹೇಳು...
ಸ್ವಲ್ಪ ಎಲೆ ಅಡಿಕೆ ಬೇಕಿತ್ತು....ಎಂದು ತನ್ನ ಎಲೆ ಅಡಿಕೆ ತಿಂದು ತಿಂದು ಕೆಂಪುಗಟ್ಟಿದ್ದ ಹಲ್ಲು ಬಿಟ್ಟು ನಕ್ಕಳು...
ಅಯ್ಯೋ ಅದ್ನೇಳಕೆ ನಿಮ್ ಸೀತಮ್ಮನೇ ಬೇಕಿತ್ತಾ...ಹಿಂದೆ ಹಿತ್ತಲಲ್ಲಿ ಎಲೆ ಬೀಳಿದೆ ಕಿತ್ಕ ಹೋಗು...
ಮತೇ ಅಡ್ಕೆ...ಎಂದಳು ಸೇಸಿ...
ಅಂಗಳದಲ್ಲಿ ಒಂದೆರಡು ಉಂಡೆ ಅಡ್ಕೆ ತಕಂಡೋಗು...ಅಡ್ಕೆ ರೇಟ್ ಗಗನಕ್ಕೋಗಿದೆ..ಎಂದ...
ಅದುಕ್ಕೆ ಅಲ್ಲುವ್ರ ನಿಮ್ಮನೆಗ್ ಬಂದಿದ್ದು...ಎಂದು ಹೇಳಿ ಮತ್ತೆ ಕೆಂಪನೆ ಹಲ್ಲು ತೋರಿದಳು...
ಸರಿ ಸರಿ...ಸ್ವಲ್ಪ ಅವಳಿಗ್ ತಲೆ ನೋವು ಶೀತ ಅಂತೆ..ರಾಗಿ ವನ್ಕೊಟ್ಟೋಗು...ಎಂದು ರಮೇಶಪ್ಪ...ಕಾಫಿ ಗತಿ ನೋಡಲು ಅಡುಗೆ ಮನೆಗೋಡಿದ....
ಸೌದೆ ಒಲೆ ಹೊಗೆಯಾಡುತಿತ್ತು....ಥು ಹಾಳ್ಗೇಡಿದು....ಇಷ್ಟೊತ್ತಿಗ್ ಕುದ್ದಿರ್ತದೆ ಅಂತ ಮಾಡಿರೇ...ಕೆಟ್ ಕೂತದೆ....ಕೊಳಪೆ ತಗಂಡು ಊದಿ ಊದಿ ಹೊಗೆ ಗಂಟಲಿಗೋಗಿ ಕೆಮ್ಮದ ...
ಈ ಹೆಂಗುಸ್ರು ಕೆಲ್ಸ ಹೆಂಗುಸ್ರಿಗೆ ಸರಿ... ಎಂದು ಗೊನಗುತ್ತ...ಉರಿ ಹೊತ್ತಿಸಿದ ಸ್ವಲ್ಪ ಹೊತ್ತಿಗೆ ಕುದಿ ಬಂತು...ಸೋಸಿ...ಸೀತು ತಗಾ...ಸ್ವಲ್ಪ ಕುಡುದು ಮಲ್ಕ...ತಲೆನೋವು ಕಮ್ಮಿ ಆಗುತ್ತೆ...ಎಂದವನೇ...ಜಾನವಿ ಎಲ್ಲಿ ...ಎಂದ
ಹೊರಗೆಲ್ಲೊ ಆಟ ಆಡ್ತಿರ್ಬೇಕು ನೋಡಿ ಎಂದೊಡನೆ ....ಹೊರಗಿದ ಓಡಿ ಬಂದ ಜಾನು....ಏದುಸಿರು ಬಿಡುತ್ತಾ ಅಪ್ಪ ಅಪ್ಪ....ಮನೆ ಗೇಟಿನೋಳಗೆ ದನ ನುಗ್ಗಿದವೇ.....ಜಿಮ್ಮಿ ಬೊಗಳಿ ಓಡುಸ್ತಿದೆ ನೀನು ಬಾ....ಎಂದು ಅಪ್ಪನ ಕೈ ಹಿಡಿದು ಎಳೆಯ ತೊಡಗಿದಳು...
ಮಗಳೊಂದಿಗೆ ಓಡಿ.....ತೋಟಕ್ಕೆ ನುಗ್ಗಿದ್ದ ಸುಬ್ಬಕ್ಕನ ಮನೆ ಹಸುಗಳನ್ನ ಓಡಿಸಿ....ಸುಬ್ಬಕ್ಕನ ಮನೆಗೋಗಿ ಹಸ ಕಟ್ಟಾಕಳಿ ಮರ್ರಾ ಎಂದು ಬೈದು ಬಂದ....
ಇತ್ತ ಕಡೆ ಮನೆಗೆ ತಲುಪಿದ್ದ ತಿಮ್ಮಯ್ಯ .... ಸೋಮಿ ಸೋಮಿ ಎಂದು ಹೆಂಡತಿ ಕರೆಯುತ್ತಾ .......ತಿನ್ನಾಕ್ ಏನಾದ್ರು ತತ್ತಾ ....
ಅಲ್ಲಿ ಜಮೀನ್ ಕಡಿಕೋಗ್ಬೇಕು...ಎಂದವನೆ ಕೈ ಕಾಲು ಮುಖ ತೊಳೆದು...ನೆಲದಲ್ಲಿ ಕುಳಿತ...
ಇತ್ತ ಸೋಮಿ ರೊಟ್ಟಿ ಕೆಸುವಿನ ಪಲ್ಯ ಹಿಡಿದು ತಂದು ರಮೇಶಪ್ಪನ್ ಮನೇಲೇ ಊಟ ಮಾಡ್ಕ ಬರ್ತೀರ ಅನ್ಕಂಡೆ...ಯಾಕೆ ಸೀತವ್ವ ಮನೆಯಾಗ್ ಇರ್ನಿಲ್ವ....
ಹೇ ಇದ್ರು ಕಾಪಿ ಕೊಟ್ಟು ಒಳಿಕ್ ಹೋಗಿದ್ ನಾನ್ ಹೊಂಟ್ ಮೇಲೆ ಈಚೆ ಕಡಿಕ್ ಬಂದಿದ್ದು....ಯಾಕೊ ಮೈ ಉಸಾರಿಲ್ದಂಗ್ ಕಾಣ್ತಿತ್ತು ಮಖ...ಎಂದು ಮೂರು ರೊಟ್ಟಿ ಮುರಿದು...ಜಮೀನಿಗೆ ಹೊರಟು ನಿಂತ
ಸೋಮಿ ನಾಳೆ ನಾಡಿದ್ರಲ್ಲಿ ಯಜಮಾನ್ರು ಬರ್ಬೋದು...ಹೇಳ್ ಬಂದಿದಿನಿ ಬಂದು ಹಂದಿಗೊಂದ್ ಗತಿ ಕಾಣುಸ್ತಾರೆ ಎಂದ....
ಸಂಜೆ ವೇಳೆಗೆ ಸೀತಮ್ಮನ ತಲೆ ನೋವು ಇಳಿದು....ತೋಟಕ್ಕೆ ಹೊರಟಿದ್ದ ಗಂಡನಿಗೆ ಕಾಫಿ ಕ್ಯಾನ್ ಕೊಟ್ಟಳು...
ಬೆಳಗ್ಗಿನ ವೇಶದಲ್ಲೇ ರಮೇಶಪ್ಪ ತೋಟದ ಕಡೆಗೆ ಹೊರಟರು
.....ದಾರಿಯಲ್ಲಿ ಗೆಳೆಯ ರಾಜಪ್ಪ ಸಿಕ್ಕಿದ್ದರಿಂದ ಅವನನ್ನು ಜೊತೆಗೆ ತೋಟ ಸುತ್ತಾಕ್ಕೊಂಡು ಬರಾಣ ಬಾರೋ ಎಂದು ಕರೆದು ಜೊತೆಗೆ ಹೊರಟರು ....ರಸ್ತೆಗೆ ಎಡ ಭಾಗಕ್ಕೆ ತೋಟದ ಗೇಟು ಬಿದಿರಿನ ಗಳದಿಂದ ಮಾಡಿದ ಗೇಟು ತೆರೆದು ....ಮಣ್ಣಿನ ರಸ್ತೆಯಲ್ಲೆ ಮುಂದೆ ಸಾಗಿ.....ತೋಟಕ್ಕೆ ಬೇಸಿಗೆಗೆ ನೀರು ಹಾಯಿಸಲು ತೋಡಿಸಿದ್ದ ಕೆರೆ ತುಂಬಾ ನೀರು ಸಮೃದ್ಧವಾಗಿತ್ತು...ಅಲ್ಲೆ ಕೆರೆ ದಡದಲ್ಲಿ ಕುಳಿತು.....ಕಾಫಿ ಕ್ಯಾನಿನಲ್ಲಿ ತಂದಿದ್ದ ಕಾಫಿ ಕುಡಿಯುತ್ತ ಕಾಫಿ..ಮೆಣಸು ಇಳುವರಿ ..ಬೆಲೆ ಬಗೆಗೆ ಸ್ವಲ್ಪ ಮಾತನಾಡುತ್ತ.....
ಸಂಜೆಯ ವೇಳೆ ತೋಟದ ಹಳೇ ಮರಗಳಲ್ಲಿ ಗೂಡು ಕಟ್ಟಿಕೊಂಡ ಹಕ್ಕಿಗಳ ಹಿಂತಿರುಗುವಿಕೆಯ ವಿಹಂಗಮ ನೋಟ ಕಣ್ಮನ ಸೆಳೆಯಿತು....ಕೆಲವು ಬೆಳ್ಳಕ್ಕಿಗಳು ಕೆರೆಯ ನೀರಿನ ದಡದ ಬಗ್ಗಡ ಕೆರೆದು ಮೀನು ಹಿಡಿಯುತಿದ್ದವು....ಕೆಲವು ಮರಕುಟಿಗಗಳು ತಮ್ಮ ದೊಡ್ಡ ಕೊಕ್ಕಿನಿಂದ ಮರವನ್ನು ಕುಟ್ ಕುಟ್ ಕುಟ್ ಎಂದು ದೊಡ್ಡ ದೊಡ್ಡದಾಗಿ ಕೊರೆದು ಮನೆ ಮಾಡಿಕೊಂಡಿದ್ದವು...ತೋಟದ ತುಂಬೆಲ್ಲ ಬಗೆ ಬಗೆಯ ಹಕ್ಕಿಗಳ ಚಿಲಿಪಿಲಿ ಶಬ್ದ ....ಎಲ್ಲ ನೋವನು ಮರೆಸುತಿತ್ತು.....
ತೋಟದ ಗೇಟು ತೆಗೆದಿದ್ದರಿಂದ ಸಂಜೆ ಗೋಧೋಳಿ ಲಗ್ನದಲ್ಲಿ ( ಸಂಜೆಯ ಸಮಯ) ಮನೆಗೆ ಹೋಗುತಿದ್ದ ಪಟೇಲಪ್ಪನ ದನಗಳು ಗೇಟಿನೊಳಗೆ ನುಗ್ಗಿ ಬಾಳೆಗಿಡ ಮೆಯ್ಯುತಿತ್ತು.....ಅತ್ತಿತ್ತ ಕಣ್ಣಾಡಿಸುತ್ತ ರಾಜಪ್ಪನ ಕಣ್ಣಿಗೆ ಬಿದ್ದ ಹಸುಗಳನ್ನು ....ಅಯ್ಯೋ ಇವುಗಳ್ ಮನೆ ಹಾಳಾಗ ಎಂದು ಹಯ್ ಹಯ್ ಎಂದು ...ಗೇಟಿನಿಂದ ಆಚೆಗೆ ಅಟ್ಟಿ ಗೇಟು ಹಾಕಿದರು....ಪಟೇಲರ ಮನೆಯ ಆಳು ಚೆನ್ನ ಹಿಂದೆ ಇದ್ಯಾವುದರ ಅರಿವಿಲ್ಲದೆ ಬೀಡಿ ಸೇದುತ್ತಾ ಬರುತಿದ್ದ ....ಇದನ್ನ ಕಂಡು ರಾಜಪ್ಪ ಲೋ ಚೆನ್ನ ನಿನ್ ಬೀಡಿ ಮನೆ ಹಾಳ್ ಗೆಡ್ವ ಆ ದನ ನೋಡ್ಕಳ...ಎಂದು ಕೂಗಿದರು...
ಅಷ್ಟರಲ್ಲಿ ಗೇಟಿನ ಬಳಿ ಬಂದ ....ರಮೇಶಪ್ಪ...ಒಂದ್ ತಂತಿ ಬೇಲಿ ಬಿಗುಸ್ಬೇಕು ತೋಟದ್ ಸುತ್ತಾ ...ಎಂದು....
ಲೋ ರಾಜಪ್ಪ ನಾಳೇ ತಿಮ್ಮಯ್ಯ ನ್ ಜಮೀನ್ ಗೆ ಹಂದಿ ನುಗ್ಯವಂತೆ ಸ್ವಲ್ಪ ಹೊಡ್ಕೊಟ್ ಬರಾನಾ....ಬರ್ತೀಯೇನಾ...?..
ಆ ಹಂದಿ ಹಟ್ಟಕೇ( ಓಡಿಸಲು) ನೀನ್ ಇಲ್ಲಿಂದ ಹೋಗ್ಬೇಕಾ....
ಏ ಹಟ್ಟಕಲ್ವೋ ಮರಾಯ....ಅದುನ್ ಕೊಂದ್ ಸಾಯ್ಗಾಣ್ಸಕೆ....
ಬೇಟೆ ಗಾ....ನಾನ್ ಬರ್ತಿನಿ....ಹಂಗಾರೆ....ಹಂದಿ ಮಾಂಸ ತಿಂದ್ ಸುಮಾರ್ ದಿನ ಆಯ್ತು...ಎಂದು ಬಾಯಿ ಚಪ್ಪರಿಸಿದ ರಾಜಪ್ಪ....
ಹೀಗೆ ನೆಡೆದು ರಮೇಶಪ್ಪನ ಮನೆ ಬಂತು...ರಾಜಪ್ಪ ತನ್ನ ಮನೆ ದಾರಿ ಹಿಡಿದು ಹೊರಟ....ರಮೇಶಪ್ಪನಿಗೆ ಏನೋ ನೆನಪಾದಂತಾಗಿ ....ಲೋ ರಾಜಪ್ಪ
ನಾಳೆ ಸಂಜಿಕ್ ಬರ್ತಾ....ಆ ದೊಡ್ ಟಾರ್ಚ್ ಹಿಡ್ಕಂಡ್ ಬಾ... ಎಂದ ರಮೇಶಪ್ಪ....
ಹುಂ ...ಎಂದು ಮನೆಕಡೆ ಹೆಜ್ಜೆ ಹಾಕಿದ ರಾಜಪ್ಪ.
ಮರುದಿನ ಸಂಜೆಯ ಸಮಯ
ರಮೇಶಪ್ಪ ಶೆಡ್ ನಲ್ಲಿ ನಿಲ್ಲಿಸಿದ್ದ ಜೀಪು ಹೊರ ತೆಗೆದು ಕತ್ತಿ ...ಚಾಕು...ಟಾರ್ಚು...ಮಾಂಸಕ್ಕೆ ಒಂದು ಪಾತ್ರೆ ...ತೋಟ ಕೋವಿ...ಈ ತೋಟ ಕೋವಿ ಊರಿಗೆ ಆಗಾಗಾ ನುಗ್ಗುತಿದ್ದ ಆನೆಗಳ ಓಡಿಸೋಕೆ ಆಗಾಗ ತೋಟಕ್ಕೆ ಚಿರತೆಗಳು ನುಗ್ಗುತಿದ್ದವು....ಕೊಟ್ಟಿಗೆ ಹಸು...ನಾಯಿ ...ಮನುಷ್ಯರು ಬಲಿಯಾದ ಸಂಧರ್ಭಗಳು ಉಂಟು...ಅದಕ್ಕೆ ಜೀವ ರಕ್ಷಣೆಗೆ ಎಂದು ಲೈಸನ್ಸ್ ಪಡೆದು ಇಟ್ಟುಕೊಂಡಿದ್ದ ರಮೇಶಪ್ಪ ಎಲ್ಲವನ್ನ ಜೀಪಿನಲ್ಲಿ ತುಂಬಿಕೊಂಡು ಬೇಟೆಗೆ ಹೊರಟಾಗಲೆಲ್ಲ ಜಿಮ್ಮಿಯನ್ನು ಜೊತೆ ಕರೆದುಕೊಂಡು ಹೋಗುತಿದ್ದ... ಈ ಬಾರಿಯು ಜಿಮ್ಮಿ ಹಿಂಬದಿಯಿಂದ ಜೀಪು ಹತ್ತಿತು....
ಮನೆ ಕಡೆ ಜಾಗ್ರತೆ ಕಣೇ ಸೀತು...ಎಂದು ಹೇಳಿ ಹೊರಟ..
ಮುಂದಿನ ಬೀದಿ ರಸ್ತೆ ಬಲಕ್ಕೆ ರಾಜಪ್ಪನ ಮನೆ ಅವನು ಹೊರಟು ದಾರಿಯಲ್ಲೇ ನಿಂತಿದ್ದ...ಕೈಯಲ್ಲಿ ದೊಡ್ಧ ಟಾರ್ಚು ಹಿಡಿದಿದ್ದ .... ಸರಿ ಹತ್ತು...ಎಂದು ಅವನನ್ನು ಹತ್ತಿಸಿಕೊಂಡು.. ಹೊರಟು ...ಸುಮಾರು ಏಳರ ಸಮಯಕ್ಕೆ ತಿಮ್ಮಯ್ಯ ನ ಮನೆ ಬಾಗಿಲು ಬಡಿದರು ಬಾಗಿಲು ತೆಗೆದು ರಮೇಶಪ್ಪನನ್ನು ಕಂಡು....ಬೇಟೆಗೆ ಬಂದಿದ್ದಾರೆಂದು ತಿಳಿದು ಬೇಗ ಬೇಗ ಅಕ್ಕ ಪಕ್ಕದ ಮನೆಯ ಚಿಕ್ಕಣ್ಣ...ಗಿರಿಯಣ್ಣ ನ ಎಬ್ಬಿಸಿ ...ಮೀನು ಹಿಡಿಯೋಕೆ ತಕ್ಕಂಡೋಗೋ ಬಲೆ ...ಹಂದಿ ಹೊಡುದ್ಮೇಲೆ ಬೆಂಕಿ ಹಾಕಿ ಬೇಯ್ಸಕೆ ಪಾತ್ರೆ ...ಮಸಾಲೆ ಪದಾರ್ಥ ಎಲ್ಲವನ್ನ ಬೇಗ ಬೇಗ ನೆ ಸಿದ್ದಪಡಿಸಿಕೊಂಡು ಜಮೀನಿಗೆ ಹೊರಟರು...
ಜಮೀನಿನ ಮೂರು ಭಾಗಕ್ಕೂ ಮರೆಯಲ್ಲಿ ಒಬ್ಬಬ್ಬರು ನಿಂತರು...ಬೆಳೆ ಕಾಯಲು ಮಾಡಿದ್ದ ಅಟ್ಟಣಿಗೆಯಲ್ಲಿ ರಮೇಶಪ್ಪ ನಿಂತಿದ್ದ.... ಜಿಮ್ಮಿ ಸದ್ದಾದ ಕೂಡಲೆ ಬೊಗಳುತಿತ್ತು....ಜಿಮ್ಮಿಗೆ ಬೇಟೆಗೆ ಹೋಗಿ ಅಭ್ಯಾಸವಾಗಿತ್ತು....ಜಮೀನಿನ ಮೂರು ಭಾಗಕ್ಕೂ ಒಬ್ಬೊಬ್ಬರಂತೆ ಕತ್ತಿ ...ಈಟಿ ಕೊಟ್ಟು ನಿಲ್ಲಿಸಿದ್ದ....ರಮೇಶಪ್ಪ...ಅಟ್ಟಣಿಗೆಗೆ ರಾಜಪ್ಪನನ್ನು ಕಳುಹಿಸಿ ತಾನು ಇಳಿದು ಸದ್ದು ಬಂದ ಜಾಗಕ್ಕೆ ಟಾರ್ಚು ಬೆಳಕು ಬಿಡಲು ರಾಜಪ್ಪನಿಗೆ ತಿಳಿಸಿ ತನ್ನ ಕೃಯಲ್ಲೊಂದು ಟಾರ್ಚು ಹಿಡಿದು...ಬಂದೂಕು ಹಿಡಿದು ಕಾಯುತ್ತಾ...ಮರೆಯಲ್ಲಿ ಕುಳಿತ.
ಸುಮಾರು ಒಂಬತ್ತರ ಸಮಯ ಜಿಮ್ಮಿ ಇದ್ದಕಿದ್ದಂತೆ ಬೊಗಳಲು ಶುರು ಮಾಡಿತು....ಎಚ್ಚೆತ್ತುಕೊಂಡ ರಮೇಶಪ್ಪ....ಬಂದೂಕು ಬಿಗಿಯಾಗಿ ಹಿಡಿದು ಜಿಮ್ಮಿ ಬೊಗಳಿದ ಶಬ್ದದ ಹಿಂದೆಯೇ ಓಡಿದ....ಹಂದಿ..ಎತ್ತ ಓಡಲು ತಿಳಿಯದೆ ಗಾಬರಿಯಿಂದ ಅತ್ತಿಂದಿತ್ತ ಓಡುತಿತ್ತು ಬಂದೂಕಿನ ಗುರಿಗೆ ಸಿಗದೆ..ರಮೇಶಪ್ಪ ಗುಂಡು ಹಾರಿಸಲು ಹರಸಾಹಸ ಪಡುತ್ತಿರುವಾಗಲೇ...ಜಿಮ್ಮಿ ಹಂದಿ ಮೇಲೆರಗಿ ಕುತ್ತಿಗೆಗೆ ಬಾಯಿ ಹಾಕಿತು ಆ ಎರಡು ಸೆಕೆಂಡ್ ನಲ್ಲಿ ರಮೇಶಪ್ಪನ ಬಂದೂಕಿನ ಗುಂಡು ಠಂ ಠಂ ಸದ್ದು ಮಾಡಿತು....ಹಂದಿ ನೆಲಕ್ಕುರುಳಿತು....ಹಂದಿ ನೆಲಕ್ಕುರುಳಿದರೂ ಜಿಮ್ಮಿ ತನ್ನ ಹಿಡಿತ ಸಡಿಲ ಮಾಡದೆ ಬಾಯಿ ಹಾಕಿ ಹಿಡಿದಿತ್ತು...ತಕ್ಷಣ ಚಿಕ್ಕಣ್ಣ ಕೈಯಲ್ಲಿದ್ದ ಬಲೆ ಹಂದಿ ಮೇಲೆ ಹಾಕಿದ ...ಜಿಮ್ಮಿಗೆ ಹಂದಿಯ ಕೋರೆ ತಾಕಿ ಎರಡು ಕಣ್ಣಿಗೂ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಸೋರುತಿತ್ತು....ಆ ನೋವಲ್ಲು ಅದರ ನಿಷ್ಠೆ ಕಂಡು ರಮೇಶಪ್ಪನಿಗೆ ಸಂತೋಷವಾಯ್ತು.... ತನ್ನ ಹೆಗಲ ಮೇಲಿದ್ದ ಟವಲ್ಲನ್ನೆ ಸುತ್ತಿ ರಕ್ತ ನಿಲ್ಲುವಂತೆ ಮಾಡಿದ ...ತಿಮ್ಮಯ್ಯ ಅದಕ್ಕೆ ಔಷದಿ ನಾನ್ ಮಾಡ್ತಿನಿ ಬುಡಿ ನೀವ್ ಹೋಗಿ ಎಂದು ಸೊಪ್ಪಿನ ರಸ ಅರೆದು ಹಚ್ಚಿ ಜೀಪಿನಲ್ಲಿ ಮಲಗಿಸಿದ...
ಎಲ್ಲರೂ ಸಂತೋಷದಿಂದ ಹಂದಿ ಹೊತ್ತೊಯ್ದು....ಖಾಲಿ ಜಮೀನಿನಲ್ಲಿ ಒಂದೆಡೆ ಕಲ್ಲು ಜೋಡಿಸಿ ಒಲೆ ಹಾಕಿ ಬೆಂಕಿ ಹಾಕಿದರು... ಕೆಂಡ ಹದ ಗೊಳಿಸಿ....ಸ್ವಲ್ಪ ಮಾಂಸವನ್ನ ಮಸಾಲೆ ಬೆರೆಸಿ ತಿಂದು...ಉಳಿದದ್ದನ್ನ ಬೇಟೆಗೆ ಬಂದವರಿಗೆ ಪಾಲು ಮಾಡಿ....ಹೊರಡುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಯಾಗಿತ್ತು....ಜೀಪು ಹತ್ತಿ ಹೊರಡುವಾಗ
ತಿಮ್ಮಯ್ಯ ಸಂತೋಷದಿಂದ ಹೋಗ್ಬನ್ನಿ ಅಯ್ಯ ಎಂದು ಕಳುಹಿಸಿದ....
ಮರುದಿನ ಬೆಳಗ್ಗೆ ಜಿಮ್ಮಿ ಕಣ್ಣಿಗೆ ಒಂದಷ್ಟು ನಾಟಿ ಮದ್ದು ಮಾಡಿಸಿದ ಪ್ರಯೋಜನವಾಗಲಿಲ್ಲ....ಗಾಯ ಕೀವುಗಟ್ಟಿ ರಂಪವಾಯಿತು... ಕಣ್ಣಿನ ದೃಷ್ಟಿ ಕಳೆದು ಕೊಂಡಿತು...
ಜಿಮ್ಮಿ ಈ ಬೇಟೆ ಆದ ಮೇಲೆ ಊಟ ಬಿಟ್ಟಿತ್ತು....ತಾನೇ ಬೇಟೆಯಾಡಿದ ಹಂದಿ ಮಾಂಸವು ಜಿಮ್ಮಿಯ ಗಂಟಲಲ್ಲಿ ಇಳಿಯಲಿಲ್ಲ....ರಮೇಶಪ್ಪನಿಗೂ ಪ್ರೀತಿಯ ಜಿಮ್ಮಿಗಾದ ಸ್ಥಿತಿಯಿಂದ ತಾನು ಮಾಂಸದ ಊಟ ಬೇಡವೆಂದ ಕೆಲವು ವಾರಗಳಲ್ಲೆ ಜಿಮ್ಮಿ ಸಾವನ್ನಪ್ಪಿತು....ಜಾನವಿ ತನ್ನ ಪ್ರೀತಿಯ ಜಿಮ್ಮಿ ಸಾವನ್ನು ಕಂಡು ಅತ್ತು ಕರೆದು ತಾನು ಊಟ ಬಿಟ್ಟು ಹಠ ಮಾಡಿದಳು... ಮಗಳಿಗೆ ಸಮಾಧಾನ ಹೇಳಿ ಊಟ ಮಾಡಿಸಿದರು...ಅಳುತ್ತಲೇ ಮಲಗಿದಳು ಜಾನು...
ರಮೇಶಪ್ಪನು ಮನಸ್ಸಿನಲ್ಲೇ....ಏನೇನೋ ಆಲೋಚನೆಗಳು ಹುಟ್ಟಿದವು ...ಸತ್ತದ್ದು ಎರಡು ಪ್ರಾಣಿ...ಒಂದು ಹಂದಿ .....ಒಂದು ಸಾಕಿದ ಪ್ರೀತಿಯ ನಾಯಿ....ಒಂದರ ಸಾವಿನಲ್ಲಿ ಸಂಭ್ರಮ ....ಮತ್ತೊಂದರ ಸಾವಿನಲ್ಲಿ ಶೋಕ....ಸಾಕಿದ ಮಾತ್ರಕ್ಕೆ ಶೋಕ .ಸಾಕಲಿಲ್ಲವೆಂಬ ಮಾತ್ರಕ್ಕೆ ಸಂಭ್ರಮ ಹೇಗೆ ಸಾಧ್ಯ ತನ್ನದೆಂಬ ಮೋಹ ಶೋಕಿಸುವಂತೆ ಮಾಡುತ್ತದೆ ಅಲ್ವ... ಅದಕ್ಕೆ ಏಟು ಬಿದ್ದಿದೆ ಎಂದಾದ ಮೇಲು ನಾನು ಮಾಂಸ ಬೇಯಿಸಲು ಅಲ್ಲೇ ಸಮಯ ಕಳೆದೆ ತಪ್ಪೇ ನಾನು ಮಾಡಿದ್ದು ನನ್ನಿಂದಲೇ ಜಿಮ್ಮಿ ಸತ್ತಿದ್ದು ಎಂದೆಲ್ಲ ಆಲೋಚನೆಯಲ್ಲಿ ಮುಳುಗಿದ್ದಾಗ...
ರಮೇಶಪ್ಪನ ಮಗಳು....
ಅಪ್ಪ ಜಿಮ್ಮಿ ಯಾಕ್ ಸತ್ತೋಯ್ತು .....ಎಂಬ ಪ್ರಶ್ನೆಗೆ ರಮೇಶಪ್ಪ....ಜಿಮ್ಮಿಯ ಸಾವಿಗೆ ನಾನೇ ನೇರ ಹೊಣೆ ಎಂದು ಹೇಳುವುದಾದರು ಹೇಗೆ ಮಗಳ ಪ್ರಶ್ನೆಗೆ ಮೌನವಾಗಿದ್ದ...
ಸ್ವಲ್ಪ ಹೊತ್ತಿನ ನಂತರ ಬೇಟೆಗೆ ಹೋಗಿದ್ದಕ್ಕೆ ಅಲ್ವ ಸತ್ತೋಗಿದ್ದು ಜಿಮ್ಮಿ...ಎಂದಳು....ಆ ಪ್ರಶ್ನೆಗೆ ಹೌದೆಂದು ಉತ್ತರಿಸಿದ....ಜಿಮ್ಮಿ ಮೇಲ್ ಪ್ರೀತಿ ಇದ್ರೆ ಇನ್ಯಾವತ್ತು ಬೇಟೆಗ್ ಹೋಗ್ ಬೇಡ ಎಂದಳು..
ಆ ಹೊತ್ತಿನಿಂದ ರಮೇಶಪ್ಪ...ಬೇಟೆ ಹೋಗೋದು ನಿಲ್ಲಿಸಿದ....
ರಚನೆ
ಶ್ಯಾಮ್ ಪ್ರಸಾದ್ ಭಟ್
Nice story Shyam
ReplyDeleteಧನ್ಯವಾದಗಳು ಗೆಳೆಯ...
Deleteಸಹಾಯ ಮಾಡುವ ಗುಣ
ReplyDeleteಹಂದಿ ಹಿಡಿದು ಅದನ್ನು ತಿನ್ನುವ ಪರಿ - [ನೀವು ಸಸ್ಯಹಾರಿ ಆದರೂ) ಅದನ್ನು ವರ್ಣಿಸಿರುವ ಪರಿ ) ಗಂಡ - ಹೆಂಡತಿಯ ಅನ್ಯೂನ್ಯತೆಯ ಸಂಬಂಧದ ಜೊತೆಗೆ ಜನವಿಗಿದ್ದ ರಕ್ತದ ಗುಂಪಿನ ಬಗ್ಗೆ ಆಸಕ್ತಿ
ಜಿಮ್ಮಿಯ ನಿಶ್ಕಲ್ಮಶ ಗುಣ
ಹಳ್ಳ ಸೊಗಡಿನ ಪ್ರಕೃತಿಯ ಸುಂದರತೆ
ಹಳ್ಳಿಯ ಜನರಿಗೆ ಸರಿ ಹೋಗುವಂತಹ ನಾಮಧೇಯಗಳು
ಜಿಮ್ಮಿಯ ಕೊನೆ ಕ್ಷಣಗಳು
ಅದರ ಮೇಲಿನ ಮನೆಯವರ ಬಾಂಧವ್ಯ
ಸಾಕು _ ಸಾಕದೇ ಇರುವ ಪ್ರಾಣಿಗಳ ನಡುವಿನ ಬಂಧ
ಇಷ್ಟೇಲ್ಲ ವರ್ಣನೆ ನಿಮ್ಮಿಂದ ಅಷ್ಟೆ ಸಾಧ್ಯ ಸೀನಿಯರ್ ಒಂದು ಅತ್ಯುತ್ತಮ ಕಥೆ ವರ್ಣನೆ ಧನ್ಯವಾದಗಳು. ನಿಮಗೆ ಇಷ್ಟೊಂದು ಭಾವಪೂರ್ಣ ತುಂಬಿದ ಕಥೆ ಕೊಟ್ಟಿದ್ದಿರೆ
ಧನ್ಯವಾದಗಳು 🙏
Deleteಶ್ಯಾಂ ಪ್ರಸಾದ್ ಅವರೇ ತುಂಬಾನೇ ಚೆನ್ನಾಗಿ ವಿವರಣೆ ಮಾಡಿದ್ದೀರಿ.... ನಿಮ್ಮ ಈ ಸತ್ಕಾರ್ಯ ಹೀಗೆ ಮುಂದುವರೆಯಲಿ....
ReplyDeleteಧನ್ಯವಾದಗಳು 🙏
DeleteNice 🥰
ReplyDeleteTHANK U....🙏
Deleteವಿಚಾರ ಮಾಡಬೇಕಾದ ಕಥೆ.....😔
ReplyDeleteಹೌದು....
Deleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ🙏