Wednesday, October 31, 2018

ಕನ್ನಡ




ಕನ್ನಡ ಎಂದರೆ....ನನಗಿಟ್ಟ..ಹೆಸರು..ನಾನಾಡೋ ಉಸಿರು...ಮೊದಲು ತೊದಲಿ ನುಡಿದ ನುಡಿ...ನಾನು ಕನಸು ಕಾಣುವ ನುಡಿ...ನಾನು ಮಾತನಾಡುವ ನುಡಿ....ನನ್ನ ನಗಿಸುವ...ಅಳಿಸುವ...ಕಣ್ಣೊರೆಸುವ ನುಡಿ....
ಪರದೇಶದಾಗ ಪರದೇಶಿಯಾಗಿ ಸುತ್ತುವಾಗ...ಯಾವ ನುಡಿ ಕೇಳಿದರ ರಕ್ತ ಬಿಸಿಯಾಗಿ ನಾಡಿ ಮಿಡಿತ ಜೋರಾಗಿ ಬಡಿವಂತೆ ಮಾಡುವುದೇ...ಕನ್ನಡ

ಒಮ್ಮೊಮ್ಮೆ ಇಂದಿನ ಸ್ಥಿತಿಯ ಕಂಡು ಚಿಂತೆ ಮಾಡುವುದು ಉಂಟು....ಹಿಂದಿನ ವೈಭವವ ಕಂಡು ಆಶ್ಚರ್ಯಗೊಂಡದ್ದು ಉಂಟು....

ಬರೆಯಲು ಬಳಪ...ಪೆನ್ನು ...ಪೆನ್ಸೀಲು...ಹಾಳೆ...ಹೀಗೆ ಬರೆದದ್ದ ಪ್ರಕಟ ಮಾಡಲು ಹಲವಾರು ಅವಕಾಶಗಳಿರುವ ಇಂದಿನ ವಾಸ್ತವಿಕ ಸಮಾಜಕ್ಕೂ..
.ಹಿಂದೆ...ಆಶ್ರಯಕ್ಕಾಗಿ ಅಲೆದಾಡಿ ರಾಜನೀಡಿದ ಆಶ್ರಯದ ಕೃತಘ್ನತೆಗಾಗಿ ಒಲ್ಲದ ಮನಸಲಿ ಅವನು ಅಸಮರ್ಥನಾದರು ಸಮರ್ಥ ನೆಂದು ಬಿಂಬಿಸಿ ಬರೆದು....
ಸಮರ್ಥ ರಾಜರ ಇತಿಹಾಸ ಉಳಿಸಿ ಎಳೆಯರ ಬೆಳವಣಿಗೆ ಮಾರ್ಗ ಮಾಡಿಕೊಟ್ಟ ಅದೆಷ್ಟೋ ಕವಿಗಳು ...

ಬರೆಯಲು ಈಗಿರುವ ಅನುಕೂಲವಿರದಿದ್ದರು ತಾಳೆ ಮರದ ಗರಿಯೋ....ಯಾವುದೋ ಮರದ ಎಲೆಯಲ್ಲಿಯೋ ಅವರ ಮೇರು ಪಾಂಡಿತ್ಯ ಅನಾವರಗೊಳ್ಳಿತಿತ್ತು...

ಪಾಂಡಿತ್ಯ ವೆಂದರೆ ಎಂತಹುದು ಕೇವಲ ಗದ್ಯದಂತ ಪದ್ಯ ಬರೆಯುವುದಲ್ಲ....
ಬರೆವ ಪದ್ಯಗಳಿಗೆ...ಕಾವ್ಯ ಗಳಿಗೆ. ....ತಮಗೆ ತಾವೇ ಷಟ್ಪದಿಯ ....ಸಾಂಗತ್ಯದ ...ಛಂದಸ್ಸಿನ ಚೌಕಟ್ಟುಗಳನ್ನು ವಿಧಿಸಿಕೊಂಡು ಅದೇ ಚೌಕಟ್ಟಿನೊಳಗೆ ಬರೆದು ಬಿರುದು ಪಡೆಯುತಿದ್ದರು....

ಈಗ ನಾವು ಗಮನಿಸಿದರೆ ಎರಡಕ್ಷರ ಗೀಚಿದೊಡನೆ...ಅದಕ್ಕೆ ದಕ್ಕಬಹುದಾದ ಬಹುಮಾನದ ಚಿಂತೆ...ಅದನ್ನು ಪ್ರಸಂಶಿಸಬೇಕೆನುವ ಬಿಗುಮಾನತೆಯ ಅಂಶ ಕೆಲವರಲ್ಲಿ ..."ಪುಸ್ತಕದೀ ತಾನ್ ಓದಿ ಮಸ್ತಕಕೆ ಇಳಿಸಿದರೇ ಮತ್ತೆ ಪುಸ್ತಕ ಬರೆಯಲು ಅನುವಾಗುವುದು ತಮ್ಮ"

ಹೀಗೆ ನನ್ನ ಸ್ನೇಹಿತ ಕವನ ಬರೆದಿದಿನಿ ನೋಡೋ ಅಂತ ತಂದು ಕೊಟ್ಟ ಸರಿ ಎಂದು ತೆಗೆದು ಕೊಂಡರೆ ನಾಲ್ಕು ‍ ಪುಟ ....ಅಶ್ಚರ್ಯ ಆಯ್ತು ಕಥೆ ಏನೋ ಅಂದೇ ....ಅಲ್ಲಲೇ ಕವಿತೆ..ಅಂದ
ಹುಮ್ ಸರಿ ಕಾವ್ಯವಸ್ತು ಏನು ಅಂದೇ..
ಅದಕ್ಕೆ ಅವನು ಕಾವ್ಯವಸ್ತು "ಕಾವ್ಯ" ನ ಅಂದ....
ಅರ್ಥ ಆಗ್ಲಿಲ್ಲ ಮೊದಲು ಗದ್ಯಕವಿತೆ ಓದಿದ ಮೇಲೆ ತಿಳಿತು ಕಾವ್ಯವಸ್ತು ಅವನ "ಗೆಳತಿ ಕಾವ್ಯ" ‍ಅಂತ....

ಅವನಿಗೆ ಸಲಹೆ ಕೊಡಬೇಕು ನಾನು ಹೇಗ್ ಕೊಡೊದು ಅಂತ ಯೋಚನೆ ಮಾಡಿ ಕವನದ ರೂಪದಲ್ಲಿಯೇ ಕೊಡೋಣ ಅಂತ ಅವನನ್ನ ತಿದ್ದೋಕೆ ಒಂದ್ ಕವನ ಬರೆದೆ ಅದೇ ಇದು
 ಅದಕ್ಕೆ ಶೀರ್ಷಿಕೆ ಏನಿಡೋದು ಅಂತ ಯೋಚನೆ ಮಾಡಿ...ಅವನನ್ನು ಕವಿ ಅಂದರೆ ಸಂತೋಷಪಡ್ತಾನೆ ಅಂತ "ಯುವ ಕವಿಗೆ ಮನವಿ" ಅಂತ ಶಿರ್ಷಿಕೆ ಕೊಟ್ಟು ಬರೆದೆ...

ಪ್ರಾಸವಿರದ ಕವಿತೆ ಓದಲು ತ್ರಾಸ
ಗದ್ಯದಂತಿದ್ದರೆ ಸಿಗುವುದೇ ರಸ
ಕಾವ್ಯ ಸಂದೇಶ ಸರಳವಾಗಿರಲಿ
ಕವಿ ದ್ವಂದ್ವ ಓದುಗನ ತಲುಪದಿರಲಿ

ವಿಷಯದ ಅರಿವಿರಲಿ
ಅತಿಷಯವಾಗದಿರಲಿ
ಕಾವ್ಯದ ವಸ್ತುವಿನಲಿ
ಕವಿಯ  ಸ್ಲಷ್ಟತೆ ಇರಲಿ

ಮೇಧಾವಿತನ ತೋರಿಸುವ ಭರದಿ
ದಾಟದಿರಲಿ ಕಾವ್ಯ ಶರಧಿಯ ಪರಿಧಿ
ಕಾವ್ಯ  ಕ್ಲಿಷ್ಟಮಾಡಿ ಪಡೆಯದಿರು ಮೆದುಳ ಬಲಿ
ಸರಳ ಕಾವ್ಯವೇನೆಂಬುದ ಕುಮಾರವ್ಯಾಸನ ಕಾವ್ಯದಿಂದ ಕಲಿ...

ಬರೆಯುವ ಮುನ್ನ ಚೆನ್ನಾಗಿ ಓದು
ಬರೆದದ್ದು ಅಚ್ಚಾಗುವ ಮುನ್ನ ಬರೆದದ್ದ ಓದು ಗೆಳೆಯ..

ಇಂದು ಬರೆಯುವವರ ಸಂಖ್ಯೆ ಕಡಿಮೆ ಇದೇ ..ಕಾರಣ -ಓದುವವರ ಸಂಖ್ಯೆ ಕಡಿಮೆಯಾಗಿದೆ...

ದಯಮಾಡಿ ಕನ್ನಡ ಪುಸ್ತಕ ...ಬೇರೆಯಾವುದೇ ಭಾಷೆಯ ಪುಸ್ತಕ  ಓದಿದರು ಸರಿಯೇ...ಬೇರೆ ಭಾಷೆಯಲಿ ಓದಿ ಗ್ರಹಿಸಿದ್ದನ್ನ ಕನ್ನಡದಲ್ಲು ಬರೆದು ಸೀಮಿತವಾಗಿರುವ ಭಾಷೆಯ ವ್ಯಾಪ್ತಿ ವ್ಯಾಪಕವಾಗಲಿ.....ತಮಿಳು ..ತೆಲುಗು ವಿಶ್ವ ವ್ಯಾಪಕವಾಗಿವೆ..ಮಾತನಾಡಲು ಸಾದ್ಯವಿಲ್ಲವೆಂದರು...ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೊಂಡು ಭಾಷೆಯ ಅರಿವು ಮೂಡಿಸುತ್ತಿವೆ....ಕನ್ನಡವು ಆ ಸಾಲಿನಲ್ಲಿ ಮುಂಚುಣಿಯಾಗಬೇಕೆಂಬ ಆಸೆ ಇದೆ...  ಹಾಗೆಯೇ ಕನ್ನಡ ವಿಶ್ವ ವ್ಯಾಪಕವಾಗಲೆಂಬ ಬಯಕೆ

ಕನ್ನಡ ರಾಜ್ಯೋತ್ಸವ ಆಚರಣೆ ಸೀಮಿತವಾಗದೆ....ಸಂಕಲ್ಪದ ದಿನವಾಗಲಿ ....

                 ಇಂತಿ ನಿಮ್ಮ ವಿಶ್ವಾಸಿ
               ಶ್ಯಾಮ್ ಪ್ರಸಾದ್ ಭಟ್

Friday, October 5, 2018

ಬೀದಿ ಬದುಕ ಹಾದಿ



ಬೀದಿ  ಬದಿಯ ಮಗುವು ನಾನು
ಕೇಳುವರಿಲ್ಲ ನನ್ನ ಅಳಲು ಏನು

ನನ್ನ ಮನೆ ರಸ್ತೆ ಬದಿಯ ಗುಡಾರ
ಅಲ್ಲೇ ನಮ್ಮ ತಾತ್ಕಾಲಿಕ ಬಿಡಾರ
ನಾ ಜನಿಸಿದ್ದು ದೊಡ್ಡ ಸಿಮೆಂಟ್ ಕೊಳವೆ ಒಳಗೆ
ಅಂದೇ ನಡುಗಿದ್ದೆ ಮಳೆ ಚಳಿಗಾಳಿಗೆ

ಅಪ್ಪ ಅಮ್ಮ ಹೋಗುವರು ರಸ್ತೆಗೆ ಹಾಕಲು ಟಾರು
ಜೊತೆಯಲಿಲ್ಲ ನನ್ನ ಜೋಪಾನ ಮಾಡೋರ್ಯಾರು
ತಿರುಗಿದರು ಊರಿಂದ ಊರು
ಹಗಲೆಲ್ಲ ಬೆವರು ಸುರಿಸಿ ದುಡಿದರು

ನನ್ನ ಜೊತೆಗಾರರ ಜೊತೆಯೇ ಆಟ
ಯಾವ ಶಾಲೆಯಲ್ಲು ಕಲಿಯಲಿಲ್ಲ ಪಾಠ
ತಿಳಿದಿಲ್ಲ ಬಂದು ಬಳಗ ಯಾರು
ಕಷ್ಟ ಬಂದಾಗ ಕಾಯಬೇಕು ನಾನು ನಂಬಿರೋ ದ್ಯಾವ್ರು

ಆಡಿ ಕೂಡಿ ಬೆಳೆದೆ ದಿವಸ
ಅಪ್ಪನ ಜೊತೆ ಕಲಿತೆ ಕೆಲಸ
ಗುಂಡಿ ರಸ್ತೆಗೆ ಹಾಕುವೆ ಟಾರು
ನನ್ನ ಬಡತನ ಗಡಿಪಾರು ಮಾಡೋರು ಯಾರು?
   
               ರಚನೆ
    ಶ್ಯಾಮ್ ಪ್ರಸಾದ್ ಭಟ್

Tuesday, October 2, 2018

ನಗರ ವಾಸಿ


ತಾಳಲಾರದೆ ಹಳ್ಳಿಯ ಬಡತನದ ಬಿಸಿ
ನಗರ ವಾಸಿಯೆಂದು ನಾನಾದೆ ನಗರವಾಸಿ
ಹಳ್ಳಿಯಲ್ಲಿ ನಾನೆಲ್ಲರಿಗು ಚಿರಪರಿಚಿತ
ನಗರದಲ್ಲಿ ಪರಿಚಿತನಿಗು ನಾ  ಅಪರಿಚಿತ

ನಗರದಿ ಸಾಲದೇ ಸಂಬಳ ಮಲಗಿಹೆ ಹಸಿವಿನಿಂದ
ಹಳ್ಳಿಯಲ್ಲಾದರೆ ಹಸಿವ ನೀಗಿಸುತಿದ್ದೆ ಹಲಸಿನಿಂದ
ಎಷ್ಟೇ ತಿಂದರು ಸಂಪಾದಿಸಿದ ಸ್ವತ್ತಿನಿಂದ
ಸಿಗುವುದೇ ಅಮ್ಮನ ಕೈ ತುತ್ತಿನಾನಂದ

ಹಳ್ಳಿಯ ಸ್ನೇಹ ಸಂಬಂಧ
ಮರ ಬಳ್ಳಿಯ ಬಂಧ
ನಗರದ ಹೊಸತನದ ಆನಂದ
ಸಂಬಂಧ ಸಮಾಧಿಗೆ ಹಚ್ಚಿಟ್ಟ ಗಂಧ

                            ರಚನೆ
               ಶ್ಯಾಮ್ ಪ್ರಸಾದ್ ಭಟ್ 

ಅಳಿವು - ಉಳಿವು



ಕ್ಷಣ ಕ್ಷಣ ನಗು-ನೋವನು ಉಣಿಸಿ
ಜೀವಕೆ ಜೀವನ ತಿಳಿಸಿ ಕಲಿಸಿ
ಕುಗ್ಗಲು ಹೊಸ ಉತ್ಸಾಹವ ತುಂಬಿಸಿ
ನಗುವೆ ಜೀವವ ನಗಿಸಿ - ಅಳಿಸಿ

ಜೀವನಕೆ ಬೇಕಾದ್ದನ್ನು ಒದಗಿಸಿ
ಜೀವಕೆ ಜೀವನವ ಅಳಿಸಿ
ನಿನಗೆ ಬೇಕಾದ್ದಂತೆ ಆಡಿಸಿ
ಅಪಾಯದಿ ಪೊರೆವೆ ರಕ್ಷಿಸಿ

ನೋವಲಿ ನಗುವನು ಸ್ಮರಿಸಿ
ನಗುವಲಿ ನೋವನು ನೆನೆಸಿ
ನಗು ಅಳು ಬಾಳಲಿ ಬೆರೆಸಿ

ನಾ ಸುಮ್ಮನೆ ಅಲೆದೆ ಸುಖವನ್ನೆ ಅರಸಿ
ಎಲ್ಲ ಸಹಿಸುವ ಸಹನೆ ನೀಡು ನೀ
ನನ್ನ ಹರಸಿ

                         ರಚನೆ
            ಶ್ಯಾಮ್ ಪ್ರಸಾದ್ ಭಟ್

Saturday, September 29, 2018

ಮದ್ಯಮ ಮಾಧ್ಯಮ


ನಾನೊಬ್ಬ ಜಗಕೆ ಮದ್ಯಮ ಮಾಧ್ಯಮ
ಒಬ್ಬನ ಭಾವನೆಗಳ ಜಗಕೆ ತಿಳಿಸೋದು  ನನ್ನ ಉದ್ಯಮ

ನೆರವಾಗಿಹೆ ಅನೇಕ ಅಕ್ರಮ ಎಸಗಲು
ನಾ ಮಾಡಿಹೆ ಅನೇಕ ಅಕ್ರಮಗಳ ಬಯಲು
ನನ್ನ ಹೆಸರು ಸಾಮಾಜಿಕ ಮಾದ್ಯಮ
ನನದು ಜಗದು ಜನರ ಒಂದೆಡೆ ಸೇರಿಸೋ ಉದ್ಯಮ

ದೂರದ ಸಂಬಂಧಿಗಳ ಹತ್ತಿರ ಸೇರಿಸಿದೆ
ಸುತ್ತಲ ಹತ್ತಿರ ಸಂಬಂಧಗಳ ದೂರ ಸರಿಸಿದೆ
ಒಬ್ಬಂಟಿಗೀಗ ನಾನೇ ಸಂಬಂಧಿ
ಸಂಬಂಧಗಳ ನಡುವೆ ನನದೇ ಇಬ್ಬಂದಿ

ನನ್ನಿಂದ ದೂರ ಸರಿದರು ಮನೆ ಮಂದಿ
ನನ್ನಿಂದೆ ಬಿದ್ದು ಜನರಾಗಿಹರು ಕುರಿ ಮಂದಿ
ಎಲ್ಲರ ಸೆಳೆಯುವೆ ಬೀಸಿ ಮಾಯಾಜಾಲ
ನನ್ನ ಹೆಸರು ಅಂತರ್ಜಾಲ

             ರಚನೆ
ಶ್ಯಾಮ್ ಪ್ರಸಾದ್ ಭಟ್

Sunday, September 23, 2018

ಬದುಕು ರಸಾಯಣ



ಭ್ರೂಣದ ಗೋಡೆಯೊಡೆದು ಆಚೆ ಬಂದೆ
ವಿಕಾರ ಜಗದ ಮುಂದೆ ಬೆತ್ತಲೆಯಾಗಿ ನಿಂದೆ
ಸಂಬಂಧ ಸಂಕೋಲೆಯ ಕೊಂಡಿಯಾದೆ
ಕೊಂಡಿಗಳ ಸರಪಳಿಯಲಿ ಬಂಧಿಯಾದೆ

ಬಾಲ್ಯದಿಂದೆವ್ವನ ಆಟ-ಪಾಠದಲಿ ಕಳೆದೆ
ಬೇಕು ಬೇಡಗಳ ತಿಳಿಯುತ ಬೆಳೆದೆ
ತುಳಿದೆ ಏಳು ಹೆಜ್ಜೆಗಳ ಪವಿತ್ರ ಬಂಧನ
ನಾನಾದೆ ಪತ್ನಿ ಹಣೆಯಲಿ ಪವಿತ್ರ ಚಂದನ

ಸಾಗಿತು ಬದುಕೆಂಬ ಗಂಡಾಗುಂಡಿ
ಒಂದೇ ವರ್ಷದಿ ಸೇರಿತು ಸರಪಳಿಗೆ ಮತ್ತೊಂದು ಕೊಂಡಿ
ಹೀಗೆ ಸಾಗಿಹುದು ಬದುಕ ಬಂಡಿ
ಸತ್ತಾಗ ನನದೆನುವುದು ಆರಡಿಯ ಗುಂಡಿ

ಬೆತ್ತಲೆಯಾಗಿ ಬಂದೆ
ಬೆತ್ತಲೆಯಾಗಿ ಹೋದೆ
ಸಡುವೆ ಸಹಿಸಬೇಕು ಸರಪಳಿಯ ನಿಂದೆ
ಉಕ್ಕನ್ನಾಗಿಸುತ ನಿನ್ನಯ ಎದೆ
                   
                   ರಚನೆ
      ಶ್ಯಾಮ್ ಪ್ರಸಾದ್ ಭಟ್

Friday, September 21, 2018

ಪುಷ್ಪ ನಮನ



ಕೆಸರಲ್ಲೆ ಕೊಸರಾಡಿ ಅರಳಿದವಳು ನಾನು
ಕೆಸರ ಮೊಸರ ಕಡೆದು ತೆಗೆದ ಬೆಣ್ಣೆ ನಾನು
ಭಾರತಾಂಬೆಯ ಮುಡಿಯ ಅಲಂಕರಿಸಿಹೆ ನಾನು

ಸೀತೆಯ ಮುಖಕೆ ನನ್ನಂದದ ಹೋಲಿಕೆ
ಬೀಳದವರಿಲ್ಲ ನನ್ನ  ಮೋಹದ ಜಾಲಕೆ
ಊರಿಲ್ಲ ಬೇರಿಲ್ಲದೆ ಜನಿಸಿದವಳು ಕೆರೆಯಲ್ಲಿ
ನಿತ್ಯ ವಿಹರಿಸುವೆನು ನನ್ನೆಲೆಯ ತೆಪ್ಪದಲಿ

ನನಗೂ ಸ್ಥಾನವುಂಟು ಸೃಷ್ಟಿಪಾಲನ ದೃಷ್ಟಿಯಲಿ
ಸ್ಥಾನವಿಟ್ಟು ಪೊರೆದಿಹನು ಶ್ರೀ ಹರಿಯ ನಾಭಿಯಲಿ
ಜಗದಾಂಬೆ ಶ್ರೀ ಲಕ್ಷ್ಮಿಯ ಮುಡಿಯಲಿ

ಹುಟ್ಟು  ಕೆಸರಲ್ಲಾದರೇನು
ಭಗವಂತನ ಪರಮ ಪದವ ಅಲಂಕರಿಪ ಸೇವೆ ಹಿರಿದಲ್ಲವೇನು...

                         ರಚನೆ
           ಶ್ಯಾಮ್ ಪ್ರಸಾದ್ ಭಟ್
                     ಮೂಡಿಗೆರೆ  

Thursday, September 20, 2018

ಪ್ರಣಯ ಪಯಣ


ಮನದ ಮಾಳಿಗೆಯಲಿ ಅಡಗಿ ಕುಳಿತ ಅರಗಿಣಿ
ನನ ಮುಂದಿನ ಬಾಳ-ಬದುಕಿನ ಸಹಚಾರಿಣಿ
ನಂದಿ ಬೆಟ್ಟಕೆ ಹತ್ತಿ ನಿನ ಹೆಸರ ಕೂಗುವ ಆಸೆ
ಚಲಿಸುವ ಮೋಡಗಳ ಚದುರಿಸಿ ಚುಂಬಿಸುವಾಸೆ

ಆಸೆಗಳೊಂದಿಗೆ ಚಿಗುರಿಹುದು ನನ ಮೀಸೆ
ಆದರೆ ತಂದೆ ತಾಯಿಗೆ ನಾನಿನ್ನೂ ಕೂಸೆ
ಮದುವೆಯಾಗುವ ಆಸೆಯ ಅಹವಾಲು ಕಳಿಸಿದೆ
ಮನದಿ ಅಡಗಿದ ಮಡದಿಯ ವಿಷಯ ತಿಳಿಸಿದೆ

ಮನಸ್ಸುಗಳು ಒಪ್ಪಿ ನೆಡೆಯಿತು ಮಂತ್ರ ಮಾಂಗಲ್ಯ
ಅಳತೆಗೋಲಿಗೆ ನಿಲುಕುವುದೇ ಅವರ ವಾಂಚಲ್ಯ
ವರ್ಷವಾಗಲು ಬಂದ ಮನೆಗೊಬ್ಬ ಕೂಸು
ನಗು ಮೊಗದಿ ತಣಿಸುತಿಹನು ನಮ್ಮ ಮನಸು

ಹೀಗೆ ಸಾಗಿಹುದು ಬದುಕ ಬಂಡಿ
ನಂಬಿಕೆಯ ತತ್ವದಡಿ ಬದುಕು ಜಟಕಾಬಂಡಿ

                            ರಚನೆ
                    ಶ್ಯಾಮ್ ಪ್ರಸಾದ್ ಭಟ್
                       ಮೂಡಿಗೆರೆ

Monday, September 17, 2018

ಮುಪ್ಪು


ಜೀವನದ ಮಜಲುಗಳ ಕಂಡ ಮುದುಕ
ಉಲ್ಲಾಸಗೊಳ್ಳುತಿದ್ದ ನೆನೆದು ತಾರುಣ್ಯದ ಬದುಕ
ಅನುಭವದ ಬುತ್ತಿ ಬಿಚ್ಚಿ ಉಣಿಸುತಿದ್ದ ಮೊಮ್ಮಗನಿಗೆ
ತಾನೂ ಲೀನನಾಗಿ ವಿಹರಿಸುತಿದ್ದ ಅರೆಗಳಿಗೆ

ಅಂದಿತ್ತು ದೈತ್ಯ ಮರಗಳನ್ನು ಉರುಳಿಸುವ ಮೈಕಟ್ಟು
ಇಂದು ನೆಡೆಯಲಾಗುತ್ತಿಲ್ಲ ಬಿದಿರಿನ ಕಟ್ಟಿಗೆಯ ಬಿಟ್ಟು
ವಿಧಿ ಹಿಡಿದಿಹನು ನಮ್ಮೆಲ್ಲರ ಜುಟ್ಟು
ಅನುಭವಿಸಲೇ ಬೇಕು ಅವನು ಕೊಡುವ ಪೆಟ್ಟು

ಮೊಮ್ಮಗನು ಬಯಸುವನು ತಾತನ ಸಂಗವನು
ಬೇಡವೆನ್ನುವರಾರು ಕಳೆತ ಮಾವಿನ ಸಿಹಿಯನು
ಮೊಮ್ಮಗನು ಜಗದ ವಿಕಾರ ಕಾಣದ ಈಚಲು
ತಾತನು ಜಗದ ವಿಕಾರಗಳಿಗೆ ಮೈಯೊಡ್ಡಿದ ಹಣ್ಣಿನ ಗೊಂಚಲು

ಸಿಹಿಯ ನೀಡುವರು ಈ ಈರ್ವರು
ಮೊಮ್ಮಗನು ಆರಂಭದ ಅರೆಗಳಿಗೆ
ತಾತನು ಜೀವನದ ಕೊನೆ ಘಳಿಗೆ
ತಲೆಗೊಡಲೆ ಬೇಕು ಎಲ್ಲರು ಕಾಲದ ಉರುಳಿಗೆ.....
   
                        ✍ರಚನೆ
                 ಶ್ಯಾಮ್ ಪ್ರಸಾದ್ ಭಟ್

ಸಾಕ್ಷಿ



ಅಂತರಾಳದ ಮುಂಗುರುಳು
ಮುಗುಳು ನಗುತಿಹುದು
ನನ್ನೀ ಅಟ್ಟಹಾಸವ ಕಂಡು
ನಾ ನೀಡಿದ ಎಲ್ಲ ನೋವ ಉಂಡು

ಗುಣದಿ ಅದು ವಿಶಾಲ ಶರಧಿ
ವಿಸ್ತರಿಸಿ ಬೆಳೆದಿಹುದು ತನ್ನೆಲ್ಲ ಪರಿಧಿ
ನನ್ನ ಹೃದಯಂತರಾಳದಿ ಅಡಗಿದ ಪಕ್ಷಿ
ನನ್ನೆಲ್ಲ ಸರಿ ತಪ್ಪುಗಳಿಗೆ ಮೂಕ ಸಾಕ್ಷಿ

ಎಲ್ಲದಕು ಕಾರಣವು ನೀನೇ
'ನಾನು' ಎಂದೆ ಅದ ತಿಳಿಯದೇನೇ
ನಿನಗುಂಟು ಕಟುಕನ ಕುಟುಕುವ ಶಕ್ತಿ
ಯೋಗ್ಯನಿಗೆ ಸರಿದಾರಿ ತೋರುವ ಯುಕ್ತಿ

ನೀನು ನನ್ನಲ್ಲಿ ಶಾಶ್ವತವಲ್ಲ
ಬಂದು ಹೋಗಲು ಯಾವ ಅಶ್ವ ಪಥವು ಇಲ್ಲ
ನೀ ಕಲ್ಪನೆಗೆ ನಿಲುಕದ ಅಂತರಂಗದ ಸಾಕ್ಷಿ
ಸಾಕ್ಷಾತ್ಕಾರದ ಸಾಕ್ಷಿ ಆತ್ಮಸಾಕ್ಷಿ

                       ರಚನೆ
           ಶ್ಯಾಮ್ ಪ್ರಸಾದ್ ಭಟ್

Wednesday, September 12, 2018

ಪ್ರಕೃತಿ



ಪ್ರಕೃತಿ ನಿನ್ನ ವರ್ಣಿಸಿ ಬರೆಯಲೇ ಒಂದು ಕೃತಿ
ನಿನ್ನ ಮಡಿಲಲ್ಲಿ ತೂಗಿದೆ ಕೇಳದೆ ಜಾತಿ
ಅನಾಥರು ನಂಬಿಹರು ನೀನೇ ಎನ್ನ ಮಾತೆ
 ತಿನ್ನುತ್ತಾ ಬೆಳೆದಿರು ನೀನೇ ಕೊಟ್ಟ ಜೋಳದ ಮ್ಯಾತೆ

ಅಳುವ ಕಂದನಿಗೆ ಚಂದಿರನ ಚೆಂಡಾಗಿ ನೀಡಿದೆ
 ಅತ್ತು ಮಲಗಿದ ಕಂದನಿಗೆ ತಂಪು ತಂಗಾಳಿ ಬೀಸಿ ತೂಗಿದೆ
ನಾ ನಿನ್ನ ಮರೆಯಲೆಂತು ಮಾತೆ
 ನಾ ಬೆಳೆದು ನಿನ್ನ ಕತ್ತರಿಸಿ ಮನೆ ಕಟ್ಟಿ ಒಳ ಕೂತೆ

ನಿನ್ನ ಕುರಿತು ಶಾಲೆಯಲ್ಲಿ ಮಾಡಿದೆ ಭಾಷಣ
ನಿನ್ನ ಚಿತ್ರ ಬರೆದು ಪಡೆದ ಹೆಸರ ಕಲಾ ವಿಭೂಷಣ
 ಮುದಿಯಾದ ನಿನ್ನ ಉರುಳಿಸಿ
ನಗುವೇ ಗಿಡ ನೆಟ್ಟು ಹೂವ ಅರಳಿಸಿ
                     ರಚನೆ     
             ಶ್ಯಾಮ್ ಪ್ರಸಾದ್ ಭಟ್