Friday, March 26, 2021

ದೀಣೆಯ ನೆನಪು




ಚೊಟ್ಟೆ ಹಣ್ಣು  

                                    ನೇರಳೆ ಹಣ್ಣು
                                        

ದೀಣೆಯ ನೆನಪು...

ನಮ್ಮೂರು ಮೊದಲೇ ಕಾಫಿ ಕಾಡು
 ... ಆಗ ಜಮೀನು ಇದ್ದವರು ಕೂಡ ಕಾಫಿ ತೋಟ ಮಾಡಲು ತುಂಬಾ ಹಣ ಬೇಕಾದ್ದರಿಂದ ಕಾಫಿ ತೋಟ ಮಾಡಲು ಸಾದ್ಯವಾಗದೆ ...ಹಾಗೆ ಪಾಳು ಬಿಟ್ಟಿರುತಿದ್ದರು...

ನಮ್ಮ ಮನೆಯ ಹಿಂಬಾಗ......ಸ್ವಲ್ಪ ಎತ್ತರದ ಜಾಗ....ಬಹಳಾ... ಹಿಂದೆ ನಾವು ಈಗ ಮನೆ ಮಾಡಿ ವಾಸವಿರುವ ಸ್ಥಳವೆಲ್ಲ ಕಾಡು ಪ್ರದೇಶ....ಆದರೆ ಮನೆಗಳಾದಂತೆ....ಕಾಡು ಮಾಯವಾಗಿ ನಾಡಾಯಿತು....

ಆದರೆ ನಮ್ಮ ಮನೆಯ ಹಿಂಬದಿ ಇದ್ದ ಕಾಡು ಹಾಗೇ ಇತ್ತು....ನಾವು ಅದಕ್ಕೆ ದೀಣೆ ಎಂದು ಕರೆಯುತಿದ್ದೆವು....ಅಲ್ಲಿ ಹಲವು ಹಣ್ಣಿನ ಮರಗಳು....ಕಾಡು ಜಾತಿಯ ಮರಗಳು....ಕುರುಚಲು ಗಿಡಗಳಿಂದ ತುಂಬಿ ಹೋಗಿತ್ತು ....ಹಕ್ಕಿಗಳ ವಾಸಸ್ಥಾನವಾಗಿತ್ತು....ಹಾಗೇ ಅಲ್ಲಿ ಕಾಡು ಕೋಳಿಗಳು ಬರುತ್ತಿದ್ದರಿಂದ ...ಅಕ್ಕ ಪಕ್ಕದವರು ....ಜಮೀನಿನ ಒಡೆಯರು ಎಲ್ಲಾ ಕಾಡು ಕೋಳಿ ಹಿಡಿಯಲು ಬಲೆ ಹೆಣೆದು ....ಸ್ವಲ್ಪ ಅಕ್ಕಿ ಚೆಲ್ಲಿ ಬಂದಿರುತಿದ್ದರು....
.
ನಮ್ಮ ಊರಿಗೆ ಆಗ ಶೌಚಾಲಯ ಇನ್ನು ದಾಳಿ ಇಟ್ಟಿರಲಿಲ್ಲ....ಅಕ್ಕ ಪಕ್ಕದ ಮನೆ....ನಮ್ಮ ಮನೆ...ಯ
ಬೆಳಗಿನ ಶೌಚದ ಸ್ಥಳ ಅದೇ ಆಗಿತ್ತು....

ನಾನು ಗೆಳೆಯರೊಡನೆ...ಹಣ್ಣು ಕೀಳಲು ಹೋದಾಗ....ಆಗಾಗಾ ಪಕ್ಕದ ಮನೆಯವರೊಡನೆ.... ..ಕಾಡುಕೋಳಿಗೆ ಬಲೆ ಹೆಣೆಯುವುದನ್ನು ನೋಡಲೆಂದೇ    ಹೋಗುತಿದ್ದೆ...

ನಮಗೆ ಬೇಸಿಗೆ ರಜೆಯಲ್ಲಿ ನಾವು ದೀಣೆ ಗೆ ಹೋಗುವುದೆಂದರೆ ಶಿಕಾರಿಗೆ ಹೋದ ಅನುಭವವೇ....ಸರಿ......ಪಕ್ಕದ ಮನೆಯ ಗೆಳೆಯ ಆಗಾಗಾ ದೀಣೆಯಲ್ಲಿ  ಬಲೆ ಹೆಣೆದು ....ಕಾಡು ಕೋಳಿ ಬೇಟೆಯಾಡುತಿದ್ದರು..
ಸೆರೆಸಿಕ್ಕ ಕೋಳಿಯು....ಮೊಟ್ಟೆ ಇಟ್ಟರೆ... ಇತರ ಕೋಳಿಗಳೊಡನೆ...ಕಾವು ಕೊಡಿಸಿ ಮರಿ ಮಾಡಿಸಿ ...ಸಾಕು ಕೊಳಿಗಳ ಮಧ್ಯೆ ಬೆಳೆಸುತಿದ್ದರು...

ಒಂದು ದಿನ ಬೆಳಗ್ಗೆ...ನಾನು ದೀಣೆಗೆ ಶೌಚಕ್ಕೆಂದು ಹೋದಾಗ....ಗೆಳೆಯ ನನಗಿಂತ ಮೊದಲೇ ಬಂದು ಶೌಚ ಮುಗಿಸಿ ಕಾಡು ಕೋಳಿಗೆ ಬಲೆ ಹೆಣೆಯುತಿದ್ದ....ಅದನ್ನು ಕಂಡ ನಾನು ನೋಡುತ್ತಾ....ಅಲ್ಲೇ ಕುಳಿತು....ವಾಪಸ್ಸಾಗುವಾಗ....
ಒಂದು ಪಕ್ಷಿಯ ಧ್ವನಿ ಕೇಳುತಿತ್ತು.......ನೋಡಿದರೆ....ಹಕ್ಕಿಯ ಗೂಡಿನಲ್ಲಿದ್ದ ಮರಿಯೊಂದು ಕೆಳಗೆ ಬಿದ್ದು...ಅಳುತಿತ್ತು....ಅದನ್ನು ನೋಡಿದ ಗೆಳೆಯ...ಕೂಡಲೆ...ಅದನ್ನು ...
ಜೋಪಾನವಾಗಿ ಎತ್ತಿ....ಗೂಡು ಸೇರಿಸಿದ....

""ವಿಶೇಷವೆಂದರೆ ಒಂದು ಪಕ್ಷಿಯ ಪ್ರಾಣ ತೆಗೆಯಲು...ಬಲೆ ಹೆಣೆದು ಬಂದ ಗೆಳೆಯ ಮತ್ತೊಂದು ಪಕ್ಷಿಯ ಪ್ರಾಣ ಉಳಿಸಿದ್ದ.... ""

ನಾನು ಶಾಲೆ ಮುಗಿಸಿ ಬಂದ ಕೂಡಲೆ
ಬ್ಯಾಗನ್ನು....ಬಿಸಾಡಿ....

 ಗೆಳೆಯನ ಮನೆಗೆ ಓಡಿದೆ...

ಇಬ್ಬರು ಒಟ್ಟಿಗೆ ಸಂಜೆ ವೇಳೆ ಬೇಟೆ ಬಿದ್ದಿದೆಯ ಎಂದು ನೋಡಿ ಬರಲು ಹೋದಾಗ...ಒಂದು ಕಾಡು ಕೋಳಿ ಮರಿ ಸೆರೆ ಬಿದ್ದಿತ್ತು... ಗೆಳೆಯ ಅದನ್ನು ಎತ್ತಿಕೊಂಡು ಅವರ ಮನೆಯ ಸಾಕು ಕೋಳಿಗಳ ಗುಂಪಿಗೆ ಬೆಳೆಯಲು ಬಿಟ್ಟರು...

ನಾನು ಮರುದಿನ ಬೆಳಗ್ಗೆ  ಶೌಚಕ್ಕೆಂದು ....ಕುರುಚಲು ಗಿಡಗಳ ಮಧ್ಯೆ ಹೋದಾಗ...ಬೇರೊಬ್ಬರು ಕಾಡು ಕೋಳಿಗೆ  ಹೆಣೆದ ಬಲೆಗೆ ಕಾಲು ಸಿಕ್ಕಿಕೊಂಡ ಅನುಭವ...ಕಣ್ಣ...ಮುಂದೆ ಇನ್ನೂ ಹಸಿರಾಗಿವೆ....

ಬೇಸಿಗೆಯಲ್ಲಿ....ಗೆಳೆಯರೊಡನೆ...ದೀಣೆಗೆ ಹೋಗಿ   ಹಣ್ಣುಗಳ ಬೇಟೆಯಾಡಿ ಹಂಚಿ ತಿಂದು ....ವಾಪಸ್ಸಾಗುತಿದ್ದೆವು....

ಅಲ್ಲಿ  ಬಗೆ ಬಗೆಯ ಮರಗಳು....ನೇರಳೆ...ಸೀಬೆ....ಈಗ ಅಪರೂಪವಾಗಿರುವ ಚೊಟ್ಟೆ ಹಣ್ಣು..ದೊರೆಯುತಿತ್ತು

ಹಾಗೆಯೇ...ಹಲಸಿನಹಣ್ಣು..ಜ್ಯೂಸ್ ಹಣ್ಣು ...ಸಿಗುತಿತ್ತು...ಗೆಳೆಯರೊಡನೆ ಹೋದಾಗ ನಮಗೆ ಬೇಸಿಗೆ ರಜೆ ಸಿಗುತಿದ್ದದ್ದ ..... ಸಮಯದಲ್ಲಿ...ಈ ಹಣ್ಣುಗಳು ಹೇರಳವಾಗಿ ದೊರೆಯುತಿದ್ದವು....ನೇರಳೆ ಮರ ಹತ್ತಿ....ಗೊಂಚಲನ್ನೇ ಮುರಿದು ...ಹಣ್ಣನ್ನು...ಕಿತ್ತಾಡಿ ತಿನ್ನುತಿದ್ದೆವು....ಹಲಸಿನಹಣ್ಣನ್ನು...ಹಂಚಿ ಸವಿಯುತಿದ್ದೆವು....

ಆದರೆ ಈಗ ...ನಾಲ್ಕು  ವರ್ಷ ಗಳ ಹಿಂದೆ ....ಕಾಡು ಮರಗಳನ್ನೆಲ್ಲ ದೈತ್ಯ ಜೆ.ಸಿ.ಬಿ...ದ್ವಂಸ ಗೊಳಿಸಿ ...ಕಾಫಿ ಗಿಡಗಳನ್ನು ನೆಟ್ಟು....ಮುಳ್ಳಿನ ಬೇಲಿಯನ್ನು....ತಮ್ಮ....ತೋಟದ ಸುತ್ತ...ಹಾಕಿದ ಮೇಲೆ...ನಮಗೂ ಆ ಸ್ಥಳಕ್ಕೂ...ಸಂಪರ್ಕ ಸಂಬಂಧವೇ ಇಲ್ಲದಂತಾಗಿದೆ...

ನಾನು ರಜೆಗೆಂದು ನೆನ್ನೆ ಮನೆಗೆ ಬಂದೆ....ನನ್ನ ಚಿಕ್ಕಮ್ಮನ ಮನೆಗೆ ಹೋದಾಗ....ತಿನ್ನಲು ಬಟ್ಟಲು ತುಂಬ  ನೇರಳೆ ಕೊಟ್ಟರು....ಎಲ್ಲಿಂದ ತಂದಿರಿ....ಎಂದಾಗ.....
ಮಾರುಕಟ್ಟೆಯಿಂದ ಎಂದಾಗ ......ಒಂದು ಕ್ಷಣ....ಈ ನೆನಪುಗಳೆಲ್ಲ....ತೇಲಿ ಬಂದವು....

ಕಾಡಿನಲ್ಲಿ ಸುತ್ತಾಡಿ ಕಿತ್ತಾಡಿ ತಿಂದ ಅನುಭವ ಕಲಿಸಿದ ಪಾಠ....

ಅಪ್ಪನ ಬೈಕ್ ಏರಿ ...ಮಾರುಕಟ್ಟೆಗೆ ಹೋಗಿ ಕೇಳಿದಷ್ಟು ಬೆಲೆ ತೆತ್ತು....ತಂದದ್ದರಲ್ಲಿ....ಸಿಕ್ಕೀತೆ....

                  ಅನುಭವ ಕಥನ.
                       ರಚನೆ
          ಶ್ಯಾಮ್ ಪ್ರಸಾದ್ ಭಟ್






ಕಿಲಾಡಿ ತಾತ....

ಇಂದು ನಾನು ಹೇಳ ಬೇಕಿರುವುದು ಒಬ್ಬ ಕಿಲಾಡಿ ಅಜ್ಜನ ಬಗೆಗೆ...
ಮುಂಗಾರು ಪ್ರಾರಂಭವಾದದ್ದರಿಂದ ಚಿಕ್ಕಮಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಎಡೆ ಬಿಡದೆ ಸುರಿವ ಮಳೆ.....

ಕೊಡೆ ಇಲ್ಲದೆ ಎಲ್ಲಿಗೂ ಹೊರಡೋಕೆ ಆಗಲ್ಲ ಅಂತ ಹಿಂದಿನ ದಿನವೇ ಮನೆಗೆ ಫೋನ್ ಮಾಡಿದಾಗ ತಿಳಿದಿತ್ತು....

ಆದರೆ ಮುಂಗಾರು ನನ್ನೂರು ಇಷ್ಟವೆಂದೋ ಏನೋ..... ಅಲ್ಲೇ ....ಜಾಂಡ ಊರಿತ್ತು
ಇನ್ನೂ ಮೈಸೂರಿಗೆ ಬಂದಿರಲಿಲ್ಲ....
ಬರುವ ಮುನ್ಸೂಚನೆಯನ್ನ ಆಗಾಗಾ ತುಂತೂರು ರಾಯಭಾರಿಗಳನ್ನ ಕಳುಹಿಸಿ ತಿಳಿಸುತಿತ್ತು ಇನ್ನು ಬಂದಿರಲಿಲ್ಲ......

ಶುಕ್ರವಾರ ಬೆಳಗ್ಗೆ ಸ್ವಲ್ಪ ಸೋಮಾರಿತನದಿಂದಲೇ....ತಡವಾಗಿ ಎದ್ದು ....ಮನೆಯಲ್ಲಿ ಎರಡು ದಿನದ ಮಟ್ಟಿಗೆ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡು ....ಸ್ನಾನಕ್ಕೆ ಹೋಗೋಣ
ಅಂತ ಹೊರಟೆ.....ಅ‍ಷ್ಟರಲ್ಲಾಗಲೇ 8 ಗಂಟೆ ಸರಿದಿತ್ತು....

ಬೆಳಗ್ಗಿನ ತರಗತಿಗೆ ಬೇಗ ಹೊರಡಬೇಕಿದ್ದರಿಂದ ಹಾಸ್ಟೆಲ್ ಕೊಠಡಿಯ ಸಹವಾಸಿ ರೋಹಿತ್ ಆಗಲೇ ಕೆಳಗಿನ ಉಪಹಾರ ಮಂದಿರದಿಂದ ತಿಂಡಿ ಮುಗಿಸಿ ಮೇಲೆ ಬಂದ....

ಭಟ್ರೇ ನಿಮಗಿಷ್ಟವಾದ ತಿಂಡಿ ಮಾಡಿದಾರೆ ಹೋಗಿ ಎಂದ .....

   ವಿದ್ಯಾರ್ಥಿ ನಿಲಯದ  ಊಟ ತಿಂಡಿ ಬಗೆಗೆ ವಿದ್ಯಾರ್ಥಿ ನಿಲಯದ ವಾಸಿಗಳಿಗೆ ಗೊತ್ತಿರುತ್ತದೆ......ಚನ್ನಾಗಿ ಮಾಡಿದರೆ ತುಸು ಹೆಚ್ಚು ಹಾಕಿಸಿಕೊಂಡಾರು ಎಂದೇ....ಉಪ್ಪು ಇದ್ದರೆ ಖಾರ ಇರೊಲ್ಲ....ಖಾರ ಇದ್ದರೆ ಉಪ್ಪು ಇರೋಲ್ಲ.......
ಯಾವ್ದಪ್ಪ ಅದು ನನಗಿಷ್ಟವಾದ ತಿಂಡಿ ಎಂದೆ ಪುಳಿಯೋಗರೆ ಎಂದ.....
ಪುಳಿಯೋಗರೆ ಅಲ್ಲ ಕಣೋ ಅದು ಹುಳಿಯೋಗರೆ ಎಂದು ತಮಾಷೆ ಮಾಡಿ ನಕ್ಕೆವು....ಹಾಗೇ ಇಡ್ಲಿ ಗೆ ಡೆಡ್ಲಿ ಎನ್ನುತ್ತೇವೆ.
ಹಾಸ್ಟೆಲ್ ಪುಳಿಯೋಗರೆ ತಿಂದು ತಿಂದು ಕೆಲವೋಮ್ಮೆ ಮನೆಗೆ ಹೋದಾಗ ಅಮ್ಮ ಪುಳಿಯೋಗರೆ ಮಾಡ್ಲೇನೋ ಎಂದಾಗ .....ಅಮ್ಮ ಬೇಡ್ವೇ ಬೇಡ ಅಂದದ್ದು ಉಂಟು....

ಎಲ್ಲಾ ತಯಾರಿ ಮಾಡಿಕೊಂಡು  ಹೊರಗೆ ತಿಂಡಿ ಮಾಡಿಕೊಂಡರಾಯ್ತೆಂದು ಕೊಂಡು ಹೊರಟೆ...
ತ್ರಿವೇಣಿ ವೃತ್ತದ ಬದಿಯಲ್ಲೇ ಇರುವ ವಿಷ್ಣು ಭವನದಲ್ಲಿ ತಿಂಡಿ ಮುಗಿಸಿ ಹೊರಟೆ....

ಮೈಸೂರು ಚಿಕ್ಕಮಗಳೂರು  ಬಸ್ಸು ಹತ್ತಿ ಕುಳಿತಾಗ ಸುಮಾರು 11:00 ರ ಸಮಯ...ಬೇಲೂರಿಗೆ ಸರಿ ಸುಮಾರು 4 : 00 ರ ಸುಮಾರಿಗೆ ತಂದಿಳಿಸಿದ ...

ಅಲ್ಲಿಂದ ಮುಂದಕ್ಕೆ....ಬೇಲೂರಿನಿಂದ ಮೂಡಿಗೆರೆ ಕಡೆಗೆ ಹೋಗುವ ಬಸ್ಸು ಹತ್ತಿ ಹೋಗ ಬೇಕಿತ್ತು...ಮಳೆ ಎಡೆಬಿಡದೆ ಸುರಿಯುತ್ತಿತ್ತು..
ಬಸ್ಸು ಹತ್ತಿ ಕಿಟಕಿ ಬಳಿಯ ಸೀಟು ಹಿಡಿದು ಕುಳಿತೆ...
   ಬಸ್ಸು ಹೊರಡೋದು ಸ್ವಲ್ಪ ತಡವಾಗುತ್ತದೆ ಎಂದು ತಿಳಿಯಿತು....
ಮುಂದಿನ ಸೀಟಿನಲ್ಲಿ....ತಾಯಿ ತನ್ನ ಮಗುವಿಗೆ ಬೈಯುತಿದ್ದದ್ದು ಹೀಗೆ...
ಹಾಳಾದೋನು ಮಳೆಲ್ ‍ಆಟ ಆಡೋಕ್ ಹೋಗ್ಬೇಡ ಅಂದ್ರು ಹೋಗೋದು ....ನೋಡೀಗ ಶೀತ ಜ್ವರ ಬಂದಿದೆ ....ಒಂದ್ ವಾರ ಸ್ಕೂಲಿಗೆ ರಜಾ ಬ ಆಯ್ತು....

ಈ ಮಾತನ್ನು ಕೇಳಿ ಬಾಲ್ಯದಲ್ಲಿ ನಾವು ಆಡುತಿದ್ದ   ಮಳೆ ನೀರಿನಲ್ಲಿ ಪೇಪರ್ ದೋಣಿ ಮಾಡಿ ಬಿಡುತಿದ್ದದ್ದು....ಗಾಳಿಗೆ ಬಿದ್ದ ಜೀರಿಗೆ ಮಾವಿನ ಹಣ್ಣನ್ನು ಸೀಬೇಹಣ್ಣನ್ನು  ಹೆಕ್ಕಿ ತಂದು ಸವಿದದ್ದು...ಜ್ವರ ಬಂದು ಮಲಗಿದ್ದು....ಎಲ್ಲವು ರಪ್ಪನೆ ಕಣ್ಮುಂದೆ ಬಂದಂತಾಯಿತು...
ನದಿ ದಡದಲ್ಲಿರುವ ದೇವಾಲಯಗಳಲ್ಲಿ ಯಾವ ಪಾಪ ಗಳಿದ್ದರು ರೋಗ ರುಜಿನ ವಿದ್ದರು ಮಿಂದೆದ್ದರೆ ವಾಸಿಯಾಗುವುದೆಂದು ನಂಬಿಕೆ...
ಗಂಗಾ ಯಮುನ ಗೋದಾವರಿ ಸರಸ್ವತಿ ನರ್ಮದ ಸಿಂಧೂ ಕಾವೇರಿ ಈ ಎಲ್ಲಾ ಪುಣ್ಯ ನದಿಗಳ ನೀರನ್ನು ಹೀರಿಕೊಂಡು ಮೋಡವಾಗಿ ಸುರಿವ ಮಳೆ ಇನ್ನೆಷ್ಟು...ಪವಿತ್ರ ಪುಣ್ಯ...ಎಂಬೆಲ್ಲ ಆಲೋಚನೆಗಳಲ್ಲಿ ಮುಳುಗಿರುವಾಗ
ಬಸ್ಸು ಜೋರು ಶಬ್ದ ಮಾಡಿ ಹೊರಟಿತು....
ಬೇಲೂರು ಟೌನ್ ಮುಗಿಯುತಿದ್ದಂತೆ ಕಂಡಕ್ಟರ್ ಟಿಕೆಟ್ ಹರಿಯಲು ಶುರು ಮಾಡಿದ....
ನನ್ನ ಪಕ್ಕದಲ್ಲಿ...ಒಬ್ಬ ಅಜ್ಜ ಕುಳಿತಿದದ್ದರು...
ಕಂಡಕ್ಟರ್ ಟಿಕೇಟ್ ಎಂದಾಗ.....ನಾನು ಟಿಕೇಟ್ ತೆಗೆದು ಕೊಂಡೆ....ಪಕ್ಕದಲ್ಲಿದ್ದ ಅಜ್ಜ ಮುಂದೆ ಬರುವ ಬಳ್ಳೂರಿನಲ್ಲಿ ಇಳಿಯುವವರು..  ..ಒಂದ್ ಬಳ್ಳೂರಿಗ್ ಕೊಡಪ್ಪ ಅಂತ ನೂರರ ನೋಟನ್ನು ಕೊಟ್ಟರು ....ಕಂಡಕ್ಟರ್ ಟಿಕೇಟ್ ಹರಿದು ಉಳಿದ 80 ರೂ ಪಾಯಿ ಚಿಲ್ಲರೆ ಯನ್ನು ಕೊಟ್ಟುರು ಅದರಲ್ಲಿ 50 ರ ನೋಟು ಒಂದು ಮೂರು ಹತ್ತು ರೂಪಾಯಿ ನೋಟುಗಳು....
ಆ ಹತ್ತರ ನೋಟುಗಳಲ್ಲಿ ಒಂದು ಭಾಗಶಃ ಹರಿದಿತ್ತು....ಅದನ್ನು ನಾನೂ ಗಮನಿಸಿದೆ....
ಅಜ್ಜ ರೀ ಕಂಡಕ್ಟರೇ....ಇದು ಹರ್ದೋಗಿದೆ ಬೇರೇ ನೋಟ್ ಕೊಡಿ ಎಂದಾಗ
ಇರೋದ್ ಅದೇ ನಿಮಿಗ್ ಕೊಡೋಕ್ ಹೊಸ ಪ್ರಿಂಟ್ ಮಾಡ್ಲಾ....20 ರುಪಾಯಿ ಟಿಕೇಟ್ ಗೆ ನೂರ್ ರುಪಾಯಿ ಕೊಟ್ಟು....ನಿಮ್ದೇ ಮಾತು....ಇಲ್ಲ 20 ರುಪಾಯಿ ಕೊಡಿ..ಎಂದ...
ಅಜ್ಜನ ಬಳಿ ಇಪ್ಪತ್ತು ರುಪಾಯಿ ಚಿಲ್ಲರೆ ಇದ್ದಿದ್ದರೆ ಅವರ್ಯಾಕೆ ನೂರರ ನೋಟು ಕೊಡುತಿದ್ದರು....
ಈ ಕಂಡಕ್ಟರ್ಗಳು ಹೀಗೇ ಹರಿದ ನೋಟುಗಳನ್ನು ಹೀಗೆ ಸಾಗಿಸಿ ಬಿಡ್ತಾರೆ.....
ಅಜ್ಜ ಸುಮ್ಮನಿರಲಿಲ್ಲ....ತಕ್ಷಣ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ತನ್ನ ಊರಿನವನೇ ಆದ ಒಬ್ಬನನ್ನು ಕೂಗಿ...ಅವನ ಬಳಿ ಇದ್ದ 10 ರ ಒಳ್ಳೆ ನೋಟಿಗೆ ಬದಲಿಗೆ ಕಂಡಕ್ಟರ್ ಕೊಟ್ಟ ಹರಿದ  ನೋಟು ಕೊಟ್ಟು ....ತಗೋ ಇದನ್ನೇ ಕೊಡು ಟಿಕೆಟ್ಗೆ ಅಂತ ಹೇಳಿದರು....
ಇದನ್ನೆಲ್ಲ....ಗಮನಿಸುತಿದ್ದ ಕಂಡಕ್ಟರ್ ಪೆಚ್ಚಾದ....
ಹಿಂಬದಿ ಸೀಟಿನ ಅಜ್ಜನ ಗುರುತಿನವ ಹಾಗೇಯೇ ಮಾಡಿದ....
ಈಗ ಕಂಡಕ್ಟರ್ಗೆ ಏನೂ ಹೊಳೆಯಲಿಲ್ಲ...ಬೇರೆ ನೋಟು ಕೊಡಿ ಅಂತ ಹೇಳಲಾಗೊಲ್ಲ....ಏಕೆಂದರೆ ತಾನೇ ಬೇರೆಯವರಿಗೆ ಕೊಟ್ಟ ನೋಟಿದು....
ಮರು ಮಾತಾಡದೆ ಟಿಕೇಟ್ ಹರಿದು ...ಮುಂದೆ ಸಾಗಿದ....
ಬುದ್ದಿವಂತಿಕೆಯಿಂದ ಎಂತಹ ಸಂದರ್ಭವನ್ನು ನಮಗೆ ಅನುಕೂಲವಾಗುವಂತೆ ಮಾಡಿಕೊಳ್ಳಬಹುದೆಂಬ ಸಂದೇಶ ಸದ್ದಿಲ್ಲದೆ....ಸಾರಿತ್ತು...
ಮುಂದೆ ನನ್ನ ಸ್ಟಾಪ್ ಬಂದಾಗ ಇಳಿದು ....
ನನ್ನ ಮನೆಗೆ
   ಬಸ್ ಇಳಿವ ಸ್ಟಾಪ್ ನಿಂದ 2 ಕಿ ಮೀ
ನೆಡೆದು ಅಥವಾ ಆಟೋದಲ್ಲಿ ಸಾಗಬೇಕು....
ಮಳೆ ಕಾರಣ....ಆಶ್ರಯಕ್ಕೆಂದು ಹತ್ತಿರದ ಹೊಟೆಲ್ ನಲ್ಲಿ ನಿಂತು ಬಿಸಿ ಬಿಸಿ ಕಾಫಿ.....ಜೊತೆಗೆ ಬಜ್ಜಿ ಸವಿದೆ....ಮಳೆಗಾಲದಲ್ಲಿ ಬಿಸಿ ಬಿಸಿ ಬಜ್ಜಿ ತಿನ್ನುವ ಮಜವೇ ಬೇರೆ...
ಸ್ವಲ್ಪ ಸಮಯದ ನಂತರ ಮಳೆ ಕಡಿಮೆಯಾಯಿತು ಮನೆಗೆ ಆಟೋ ಹಿಡಿದು....ಹೊರಟೆ....
                             ರಚನೆ
                  ಶ್ಯಾಮ್ ಪ್ರಸಾದ್ ಭಟ್



ಜೀವ ನದಿ



ತೊಡರುಗಳ ನಡುವೆ ಜನಿಸಿದ ಪುಟ್ಟ ನದಿ
ಪಯಣದಿ ಸ್ನೇಹಿತರ ಕೂಡುತ್ತ
ತನ್ನ ಒಗ್ಗಟ್ಟಿನ ವಿಸ್ತಾರವ ಹಿಗ್ಗಿಸುತ್ತ
ಶರಧಿ ಕಾಣುವ ತವಕದಿ ಸಾಗಿದಳು ಭರದಿ

ಕಾಡು ನಾಡಿನ ಜೀವಿಗಳ ಜೀವನಾಡಿ
ಜೀವ ತುಂಬುವ ಜೀವ ನದಿ

ವರ್ಷ ಋುತುವಿನಲಿ ಪುಟ್ಟ ಹನಿಯಾಗಿ
ಭುವಿಗೆ ಬರುವೆ.....
ಭುವಿಯ ಗೆಳೆಯರ ಕೂಡಿ
ಭೋರ್ಗರೆದು ಹರಿವೆ.....

ವರ್ಷ ಋುತುವಿನಲಿ ರೌದ್ರ ರೂಪವ ತಾಳುವೆ
ಮಾನವ ಪಾಪ ಕೂಪಗಳ ಕೊಚ್ಚಿ ತೊಳೆವೆ
ಮುಂಜಾವು ಸಂಧ್ಯಾ ಕಾಲದಿ ಚಿನ್ನದ ರೂಪದಿ ಹೊಳೆವೆ
ನಿನ್ನ ಮಡಿಲ ತೀರದಿ ಮಲಗಿ ನನ್ನೇ ನಾ ಮರೆವೆ...

ನಿನ ಮುಂದೆ ನಾನಲ್ಲ ಶೂರ
ಬದುಕಿದ ಇತಿಹಾಸವುಂಟೆ ನೀರ ಕುಡಿಯದ ವೀರ..

                               ರಚನೆ   
                  ಶ್ಯಾಮ್ ಪ್ರಸಾದ್ ಭಟ್


ಪೋಸ್ಟ್     ಪೋಸ್ಟ್ 

 ನನ್ನ ಗೆಳೆಯನಿಗೊಂದು ಪುಸ್ತಕ ಕಳುಹಿಸುವ ಸಲುವಾಗಿ ಪೋಸ್ಟ್ ಆಫೀಸಿಗೆ ಹೋಗಿದ್ದೆ....


  ಆಫೀಸಿನ ಹೊರಬ‌ಾಗಿಲಲ್ಲಿ....ಕೆಂಪನೆ ಪೋಸ್ಟ್  ಡಬ್ಬವೊಂದು ಕಾಣಿಸಿತು...


ಅದನ್ನು ಕಂಡಾಗಲೆಲ್ಲ...ನನ್ನ ಬಾಲ್ಯದ ನೆನಪಿಗೆ ಜಾರುತ್ತೇನೆ..


ಒಂದು ಪ್ರಸಂಗವನ್ನು ನಾನು ಹೇಳಲೇ ಬೇಕು...


ನಾನು ಆಗ ಆರನೇ ತರಗತಿ ಓದುತಿದ್ದ ಸಮಯ....ನಮಗೆ ಕನ್ನಡ ಮೇಷ್ಟ್ರು ಪತ್ರ ಬರೆಯುವ ಮಾದರಿ ವಿಧಾನಗಳನ್ನು ಹೇಳಿಕೊಡುತಿದ್ದರು ....


ವ್ಯವಹಾರಿಕ ಪತ್ರ ಬರೆಯುವ ವಿಧಾನ ಹಾಗೂ ..ವೈಯಕ್ತಿಕ  ಪತ್ರ ಬರೆಯುವ ಭಿನ್ನ ಭಿನ್ನ ವಿಧಾನವನ್ನು ಹೇಳಿಕೊಟ್ಟರು.....

ಹಾಗೆಯೇ ಎಲ್ಲರೂ ತಮ್ಮ  ಪ್ತೀತಿ ಪಾತ್ರರಿಗೆ.. ಬಂಧುಗಳಿಗೆ ಪತ್ರ ಬರೆದು ಅಂಚೆಯ ಉಪಯೋಗ ಪಡೆಯ ಬೇಕೆಂದು ಹೇಳಿದರು ....


ನನಗೋ ಹುಡುಗಾಟ ...ಕುತೂಹಲದ ಬುದ್ದಿ ಸರಿ ಇವತ್ತು ಸಂಜೆಯೇ ಮನೆಗೆ ಹೋದವನೇ ಅಪ್ಪನಿಗೆ ಕಾಟ ಹಾಕ ಹಠ ಹಿಡಿದು ಚೀಕನಹಳ್ಳಿ ಪೋಸ್ಟ್ ಆಫಿಸಿಗೆ ಹೋದೆವು ....ಬಾಗಿಲು ಬೀಗ ಜಡಿದಿತ್ತು...


ಅಲ್ಲೆ ಪಕ್ಕದಲ್ಲೆ ಪೋಸ್ಟ್ ಮಾಸ್ಟರ್ ನಾರಾಯಣಣ್ಣ ನ ಮನೆ ....ಪರಿಚಯ ಇದ್ದದದರಿಂದ ಒಂದು ಅಂಚೆ ಕಾರ್ಡು ಪಡೆದು ....ಮನೆಗೆ ಬಂದೆವು ...


ರಾತ್ರಿ ಅಮ್ಮ ...ಅಪ್ಪನನ್ನು ಒಟ್ಟಿಗೆ ಕರೆದು ....ಸೀಮೇ ಎಣ್ಣೆ ದೀಪದ ಸುತ್ತ ಕುಳಿತು ....ಅಜ್ಜಿ ಮನೆಗೆ ...ಅಂದರೆ ನನ್ನ  ‍ಅಮ್ಮನ ಅಮ್ಮ ನ ಮನೆಗೆ ಪತ್ರ ಬರೆಯೋದೆಂದು ನಿರ್ಧಾರವಾಯಿತು ....


ಸರಿ ನಾನು ನನ್ನ ಕಾಗೇ ಕಾಲು ..ಗೂಬೇ ಕಾಲು ಅಕ್ಷರದಲ್ಲಿ ....ಒಂದಷ್ಟು ಗೀಚಿದೆ ...‍ಅಜ್ಜಿ ...ಚನ್ನಾಗಿದಿರಾ ಮಾವ ...ಚಿಕ್ಕಮ್ಮ ಹೇಗಿದ್ದಾರೆ ಎಲ್ಲವೂ ಆಯಿತು ಆಂಗಳದಲ್ಲಿರುವ ಇಟ್ಟಿಗೆಗಳು ಹಾಗೇ ಇರಲಿ ರಜೆಗೆ ಬಂದಾಗ ಮನೆ ಮಾಡಿ ಗಣಪತಿ ಕೂರ್ಸೋಕೆ ಬೇಕು .. ಹಾಗೇ ಹೀಗೆ ಒಂದಷ್ಟು ಮಾತು ಬರೆದೆ..ಅಮ್ಮನ ಮಾತು  ಒಂದಷ್ಟು ಪುಟ ತುಂಬಿತು...


ಸರಿ ಎಂದು ಮಡಿಸಿ ಕವರ್ ನೊಳಗೆ ಹಾಕಿ ಅದರ ಮೇಲೆ ತಲುಪಿಸಬೇಕಾದ ವಿಳಾಸ ಹಾಗೂ ನಮ್ಮ ವಿಳಾಸ ಎಲ್ಲಾ ಬರೆದು ....ಮುಂದಿನ ದಿನ ಪೋಸ್ಟ್ ಮಾಡಲು ಅಪ್ಪನ ಬಳಿ ಕೊಟ್ಟು  ...ನಾನು ಶಾಲೆಗೆ ಹೊರಟೆ....


ಆಗ ನಮ್ಮನೆಯಲ್ಲಿ ಫೋನ್ ಇರಲಿಲ್ಲ....ಮಾತನಾಡಬೇಕಾದರೆ ಅಂಗಡಿಯಲ್ಲಿಟ್ಟಿದ್ದ ಹಳದಿ ಬಣ್ಣದ ಕಾಯನ್ ಬೂತ್ ಗೆ ಹೋಗಬೇಕಿತ್ತು...


...ಇಷ್ಟಾದ ಮೇಲೆ ಶಾಲೆಯಿಂದ ಮನೆಗೆ ಬಂದವನೆ ಪೋಸ್ಟ್ ಮಾಡಿದೆಯ ....ಆ ಡಬ್ಬಿ ಒಳಗೆ ಕವರ್ ಹಾಕಿರುವ ಬಗ್ಗೆ  ಖಚಿತ ಪಡಿಸಿಕೊಂಡೆ ...


     ಕೆಲ ದಿನಗಳು ಕಳೆದ ಮೇಲೆ ...

ಪರೀಕ್ಷೆಯು ಮುಗಿಯಿತು ...ಪರೀಕ್ಷೆ ಗೆ ಪತ್ರ ಬರೆಯುವ ಬಗ್ಗೆ ಗೆಳಯನಿಗೆ ಒಂದು ಪತ್ರ ಬರೆಯಿರಿ ಎಂಬ ಪ್ರಶ್ನೆ ಗೆ ನಾನು ಬರೆದ ಪತ್ರ ನೆನೆದು ...ಪರೀಕ್ಷೆ ಮುಗಿಸಿದೆ...


ಪರೀಕ್ಷೆ ಮುಗಿದ ಮೇಲೆ ನಮ್ಮ ಕೆಲಸ ದಾರಿ ಕಾಯುವುದು ಮಾವ ಬಂದು ನಮ್ಮನ್ನೆಲ್ಲ ಅಜ್ಜಿ ಮನೆಗೆ ಕರೆದು ಕೊಂಡು ಹೋಗುವುದು ...ಬೇಸಿಗೆ ರಜೆ ಮುಗಿಯುವ ವರೆಗೂ ನಮ್ಮ ಠಿಕಾಣಿ ಅಲ್ಲೆ...


ಪತ್ರದ ಕುರಿತು ವಿಚಾರಿಸಿದೆ....ಬಂದಿಲ್ಲ...ಎಂಬ ಉತ್ತರ ಮಾವನಿಂದ ಹೊರಬಿತ್ತು....ನನ್ನ ಅಪ್ಪನನ್ನೇ ದೂರಿಕೊಂಡು ಸರಿಯಾಗಿ ಪೋಸ್ಟ್ ಮಾಡಿಲ್ಲ ಅದಕ್ಕೆ ಬಂದಿಲ್ಲ....ಎಂದು ಕೊಂಡು ಅಜ್ಜಿ ಮನೆಗೆ ಹೋದೆ...

ಅಲ್ಲಿಯ ಗೆಳೆಯರೊಂದಿ ಆಟದಲ್ಲಿ ಕಾಲ ಕಳೆದು ಕೆಲ ದಿನಗಳು ಕಳೆಯಿತು....

 ನಮ್ಮ ಅಜ್ಜಿಗೆ ವಯಸ್ಕರ ಪೆನ್ಷನ್ ಪೋಸ್ಟ್ ಆಫೀಸಿಗೆ  ಬರುತಿತ್ತು ....ಹಾಗಾಗಿ ತಟ್ಟೇಕೆರೆ ಪೋಸ್ಟ್ ಆಫೀಸಿಗೆ ಹೋಗಿ ಮನೆಗೆ ಬರುವಾಗ ...ಒಂದು ಕಾರ್ಡ್ ನ್ನು ತಂದು ನನ್ನ ಕೈಗೆ ಕೊಟ್ಟು ಓದಲು ಹೇಳಿದರು ....


ವಿಪರ್ಯಾಸ ಅಂದರೆ ಇದೇ ಅಲ್ಲವೇ .....ನಾನು ಬರೆದ ಕ್ಷೇಮ ಸಮಾಚಾರದ ಕಾರ್ಡು ನನ್ನ ಕೈಯಲ್ಲಿತ್ತು...ಅಯ್ಯೋ ದೇವ್ರೇ ....ಎಂದುಕೊಂಡು ಓದಲು ನಾಚಿಕೊಳ್ಳುತ್ತ...


.ಆ ಕಾರ್ಡ್ ನ್ನು ಅಲ್ಲೇ ಇಟ್ಟು ಗೆಳೆಯರೊಂದಿಗೆ ಆಡಲು ಓಡಿದೆ....

ಇದು ನನ್ನ ಪೋಸ್ಟ್ ಆಫೀಸಿನ ಹಳೇ ಸಂಬಂಧದ ಮಾತು.


ಆದರು ಈ ಕೆಂಪು ಪೆಟ್ಟಿಗೆ ಸಾಮಾನ್ಯ ವೆಂದು ತಿಳಿಯ ಬೇಡಿ ....ಸ್ವಾತಂತ್ರ್ಯ ಹೋರಾಟಗಾರರ ಪತ್ರಗಳು ಸಂಚರಿಸಿದ ಪೆಟ್ಟಿಗೆ ....ಎಷ್ಟೋ ಸುಖ : ದುಃಖ ಗಳ ಪತ್ರಗಳನ್ನು ತನ್ನೊಡಲಲ್ಲಿ ಹೊತ್ತು....ಸಂಬಂಧಪಟ್ಟವರಿಗೆ ತಲುಪಿಸಿದ ಪೆಟ್ಟಿಗೆ ..

ಎಷ್ಟೋ ಪ್ರೇಮಿಗಳಿಗೆ ಪ್ರೇಮ ಕಥೆಗಳಿಗೆ ಲವ್ ಗುರು ಎನಿಸಿಕೊಂಡ ಪೆಟ್ಟಿಗೆ ....ಇಂದು ಮೊಬೈಲ್ ಗಳು ಸಾಕಷ್ಟು ಸಂಪರ್ಕ ಮಾಧ್ಯಮಗಳು ಬಂದರು ತನ್ನ ಕರ್ತವ್ಯ ನಿಷ್ಠೆ ಬಿಟ್ಟುಕೊಡದ  ಅನಿವಾರ್ಯ ವಾಗಿರುವ ಪೆಟ್ಟಿಗೆ ..

ಪೋಸ್ಟ್ ಆಫೀಸನ್ನು ....ಪೋಸ್ಟ್ ಬಾಕ್ಸನ್ನು ಬಳಸಿ..ಉಳಿಸಿ...

ತಾತನಿಗೆ ಮುಪ್ಪಾದರು ...ತಾತನ ಅನುಭವದ ಕಥೆಗಳಿಗೆ ಮುಪ್ಪಿಲ್ಲ

                                      ಇಂತಿ ನಿಮ್ಮ ಪ್ರೀತಿ ಪಾತ್ರ 

                                      ಶ್ಯಾಮ್ ಪ್ರಸಾದ್ ಭಟ್