Saturday, September 29, 2018

ಮದ್ಯಮ ಮಾಧ್ಯಮ


ನಾನೊಬ್ಬ ಜಗಕೆ ಮದ್ಯಮ ಮಾಧ್ಯಮ
ಒಬ್ಬನ ಭಾವನೆಗಳ ಜಗಕೆ ತಿಳಿಸೋದು  ನನ್ನ ಉದ್ಯಮ

ನೆರವಾಗಿಹೆ ಅನೇಕ ಅಕ್ರಮ ಎಸಗಲು
ನಾ ಮಾಡಿಹೆ ಅನೇಕ ಅಕ್ರಮಗಳ ಬಯಲು
ನನ್ನ ಹೆಸರು ಸಾಮಾಜಿಕ ಮಾದ್ಯಮ
ನನದು ಜಗದು ಜನರ ಒಂದೆಡೆ ಸೇರಿಸೋ ಉದ್ಯಮ

ದೂರದ ಸಂಬಂಧಿಗಳ ಹತ್ತಿರ ಸೇರಿಸಿದೆ
ಸುತ್ತಲ ಹತ್ತಿರ ಸಂಬಂಧಗಳ ದೂರ ಸರಿಸಿದೆ
ಒಬ್ಬಂಟಿಗೀಗ ನಾನೇ ಸಂಬಂಧಿ
ಸಂಬಂಧಗಳ ನಡುವೆ ನನದೇ ಇಬ್ಬಂದಿ

ನನ್ನಿಂದ ದೂರ ಸರಿದರು ಮನೆ ಮಂದಿ
ನನ್ನಿಂದೆ ಬಿದ್ದು ಜನರಾಗಿಹರು ಕುರಿ ಮಂದಿ
ಎಲ್ಲರ ಸೆಳೆಯುವೆ ಬೀಸಿ ಮಾಯಾಜಾಲ
ನನ್ನ ಹೆಸರು ಅಂತರ್ಜಾಲ

             ರಚನೆ
ಶ್ಯಾಮ್ ಪ್ರಸಾದ್ ಭಟ್

Sunday, September 23, 2018

ಬದುಕು ರಸಾಯಣ



ಭ್ರೂಣದ ಗೋಡೆಯೊಡೆದು ಆಚೆ ಬಂದೆ
ವಿಕಾರ ಜಗದ ಮುಂದೆ ಬೆತ್ತಲೆಯಾಗಿ ನಿಂದೆ
ಸಂಬಂಧ ಸಂಕೋಲೆಯ ಕೊಂಡಿಯಾದೆ
ಕೊಂಡಿಗಳ ಸರಪಳಿಯಲಿ ಬಂಧಿಯಾದೆ

ಬಾಲ್ಯದಿಂದೆವ್ವನ ಆಟ-ಪಾಠದಲಿ ಕಳೆದೆ
ಬೇಕು ಬೇಡಗಳ ತಿಳಿಯುತ ಬೆಳೆದೆ
ತುಳಿದೆ ಏಳು ಹೆಜ್ಜೆಗಳ ಪವಿತ್ರ ಬಂಧನ
ನಾನಾದೆ ಪತ್ನಿ ಹಣೆಯಲಿ ಪವಿತ್ರ ಚಂದನ

ಸಾಗಿತು ಬದುಕೆಂಬ ಗಂಡಾಗುಂಡಿ
ಒಂದೇ ವರ್ಷದಿ ಸೇರಿತು ಸರಪಳಿಗೆ ಮತ್ತೊಂದು ಕೊಂಡಿ
ಹೀಗೆ ಸಾಗಿಹುದು ಬದುಕ ಬಂಡಿ
ಸತ್ತಾಗ ನನದೆನುವುದು ಆರಡಿಯ ಗುಂಡಿ

ಬೆತ್ತಲೆಯಾಗಿ ಬಂದೆ
ಬೆತ್ತಲೆಯಾಗಿ ಹೋದೆ
ಸಡುವೆ ಸಹಿಸಬೇಕು ಸರಪಳಿಯ ನಿಂದೆ
ಉಕ್ಕನ್ನಾಗಿಸುತ ನಿನ್ನಯ ಎದೆ
                   
                   ರಚನೆ
      ಶ್ಯಾಮ್ ಪ್ರಸಾದ್ ಭಟ್

Friday, September 21, 2018

ಪುಷ್ಪ ನಮನ



ಕೆಸರಲ್ಲೆ ಕೊಸರಾಡಿ ಅರಳಿದವಳು ನಾನು
ಕೆಸರ ಮೊಸರ ಕಡೆದು ತೆಗೆದ ಬೆಣ್ಣೆ ನಾನು
ಭಾರತಾಂಬೆಯ ಮುಡಿಯ ಅಲಂಕರಿಸಿಹೆ ನಾನು

ಸೀತೆಯ ಮುಖಕೆ ನನ್ನಂದದ ಹೋಲಿಕೆ
ಬೀಳದವರಿಲ್ಲ ನನ್ನ  ಮೋಹದ ಜಾಲಕೆ
ಊರಿಲ್ಲ ಬೇರಿಲ್ಲದೆ ಜನಿಸಿದವಳು ಕೆರೆಯಲ್ಲಿ
ನಿತ್ಯ ವಿಹರಿಸುವೆನು ನನ್ನೆಲೆಯ ತೆಪ್ಪದಲಿ

ನನಗೂ ಸ್ಥಾನವುಂಟು ಸೃಷ್ಟಿಪಾಲನ ದೃಷ್ಟಿಯಲಿ
ಸ್ಥಾನವಿಟ್ಟು ಪೊರೆದಿಹನು ಶ್ರೀ ಹರಿಯ ನಾಭಿಯಲಿ
ಜಗದಾಂಬೆ ಶ್ರೀ ಲಕ್ಷ್ಮಿಯ ಮುಡಿಯಲಿ

ಹುಟ್ಟು  ಕೆಸರಲ್ಲಾದರೇನು
ಭಗವಂತನ ಪರಮ ಪದವ ಅಲಂಕರಿಪ ಸೇವೆ ಹಿರಿದಲ್ಲವೇನು...

                         ರಚನೆ
           ಶ್ಯಾಮ್ ಪ್ರಸಾದ್ ಭಟ್
                     ಮೂಡಿಗೆರೆ  

Thursday, September 20, 2018

ಪ್ರಣಯ ಪಯಣ


ಮನದ ಮಾಳಿಗೆಯಲಿ ಅಡಗಿ ಕುಳಿತ ಅರಗಿಣಿ
ನನ ಮುಂದಿನ ಬಾಳ-ಬದುಕಿನ ಸಹಚಾರಿಣಿ
ನಂದಿ ಬೆಟ್ಟಕೆ ಹತ್ತಿ ನಿನ ಹೆಸರ ಕೂಗುವ ಆಸೆ
ಚಲಿಸುವ ಮೋಡಗಳ ಚದುರಿಸಿ ಚುಂಬಿಸುವಾಸೆ

ಆಸೆಗಳೊಂದಿಗೆ ಚಿಗುರಿಹುದು ನನ ಮೀಸೆ
ಆದರೆ ತಂದೆ ತಾಯಿಗೆ ನಾನಿನ್ನೂ ಕೂಸೆ
ಮದುವೆಯಾಗುವ ಆಸೆಯ ಅಹವಾಲು ಕಳಿಸಿದೆ
ಮನದಿ ಅಡಗಿದ ಮಡದಿಯ ವಿಷಯ ತಿಳಿಸಿದೆ

ಮನಸ್ಸುಗಳು ಒಪ್ಪಿ ನೆಡೆಯಿತು ಮಂತ್ರ ಮಾಂಗಲ್ಯ
ಅಳತೆಗೋಲಿಗೆ ನಿಲುಕುವುದೇ ಅವರ ವಾಂಚಲ್ಯ
ವರ್ಷವಾಗಲು ಬಂದ ಮನೆಗೊಬ್ಬ ಕೂಸು
ನಗು ಮೊಗದಿ ತಣಿಸುತಿಹನು ನಮ್ಮ ಮನಸು

ಹೀಗೆ ಸಾಗಿಹುದು ಬದುಕ ಬಂಡಿ
ನಂಬಿಕೆಯ ತತ್ವದಡಿ ಬದುಕು ಜಟಕಾಬಂಡಿ

                            ರಚನೆ
                    ಶ್ಯಾಮ್ ಪ್ರಸಾದ್ ಭಟ್
                       ಮೂಡಿಗೆರೆ

Monday, September 17, 2018

ಮುಪ್ಪು


ಜೀವನದ ಮಜಲುಗಳ ಕಂಡ ಮುದುಕ
ಉಲ್ಲಾಸಗೊಳ್ಳುತಿದ್ದ ನೆನೆದು ತಾರುಣ್ಯದ ಬದುಕ
ಅನುಭವದ ಬುತ್ತಿ ಬಿಚ್ಚಿ ಉಣಿಸುತಿದ್ದ ಮೊಮ್ಮಗನಿಗೆ
ತಾನೂ ಲೀನನಾಗಿ ವಿಹರಿಸುತಿದ್ದ ಅರೆಗಳಿಗೆ

ಅಂದಿತ್ತು ದೈತ್ಯ ಮರಗಳನ್ನು ಉರುಳಿಸುವ ಮೈಕಟ್ಟು
ಇಂದು ನೆಡೆಯಲಾಗುತ್ತಿಲ್ಲ ಬಿದಿರಿನ ಕಟ್ಟಿಗೆಯ ಬಿಟ್ಟು
ವಿಧಿ ಹಿಡಿದಿಹನು ನಮ್ಮೆಲ್ಲರ ಜುಟ್ಟು
ಅನುಭವಿಸಲೇ ಬೇಕು ಅವನು ಕೊಡುವ ಪೆಟ್ಟು

ಮೊಮ್ಮಗನು ಬಯಸುವನು ತಾತನ ಸಂಗವನು
ಬೇಡವೆನ್ನುವರಾರು ಕಳೆತ ಮಾವಿನ ಸಿಹಿಯನು
ಮೊಮ್ಮಗನು ಜಗದ ವಿಕಾರ ಕಾಣದ ಈಚಲು
ತಾತನು ಜಗದ ವಿಕಾರಗಳಿಗೆ ಮೈಯೊಡ್ಡಿದ ಹಣ್ಣಿನ ಗೊಂಚಲು

ಸಿಹಿಯ ನೀಡುವರು ಈ ಈರ್ವರು
ಮೊಮ್ಮಗನು ಆರಂಭದ ಅರೆಗಳಿಗೆ
ತಾತನು ಜೀವನದ ಕೊನೆ ಘಳಿಗೆ
ತಲೆಗೊಡಲೆ ಬೇಕು ಎಲ್ಲರು ಕಾಲದ ಉರುಳಿಗೆ.....
   
                        ✍ರಚನೆ
                 ಶ್ಯಾಮ್ ಪ್ರಸಾದ್ ಭಟ್

ಸಾಕ್ಷಿ



ಅಂತರಾಳದ ಮುಂಗುರುಳು
ಮುಗುಳು ನಗುತಿಹುದು
ನನ್ನೀ ಅಟ್ಟಹಾಸವ ಕಂಡು
ನಾ ನೀಡಿದ ಎಲ್ಲ ನೋವ ಉಂಡು

ಗುಣದಿ ಅದು ವಿಶಾಲ ಶರಧಿ
ವಿಸ್ತರಿಸಿ ಬೆಳೆದಿಹುದು ತನ್ನೆಲ್ಲ ಪರಿಧಿ
ನನ್ನ ಹೃದಯಂತರಾಳದಿ ಅಡಗಿದ ಪಕ್ಷಿ
ನನ್ನೆಲ್ಲ ಸರಿ ತಪ್ಪುಗಳಿಗೆ ಮೂಕ ಸಾಕ್ಷಿ

ಎಲ್ಲದಕು ಕಾರಣವು ನೀನೇ
'ನಾನು' ಎಂದೆ ಅದ ತಿಳಿಯದೇನೇ
ನಿನಗುಂಟು ಕಟುಕನ ಕುಟುಕುವ ಶಕ್ತಿ
ಯೋಗ್ಯನಿಗೆ ಸರಿದಾರಿ ತೋರುವ ಯುಕ್ತಿ

ನೀನು ನನ್ನಲ್ಲಿ ಶಾಶ್ವತವಲ್ಲ
ಬಂದು ಹೋಗಲು ಯಾವ ಅಶ್ವ ಪಥವು ಇಲ್ಲ
ನೀ ಕಲ್ಪನೆಗೆ ನಿಲುಕದ ಅಂತರಂಗದ ಸಾಕ್ಷಿ
ಸಾಕ್ಷಾತ್ಕಾರದ ಸಾಕ್ಷಿ ಆತ್ಮಸಾಕ್ಷಿ

                       ರಚನೆ
           ಶ್ಯಾಮ್ ಪ್ರಸಾದ್ ಭಟ್

Wednesday, September 12, 2018

ಪ್ರಕೃತಿ



ಪ್ರಕೃತಿ ನಿನ್ನ ವರ್ಣಿಸಿ ಬರೆಯಲೇ ಒಂದು ಕೃತಿ
ನಿನ್ನ ಮಡಿಲಲ್ಲಿ ತೂಗಿದೆ ಕೇಳದೆ ಜಾತಿ
ಅನಾಥರು ನಂಬಿಹರು ನೀನೇ ಎನ್ನ ಮಾತೆ
 ತಿನ್ನುತ್ತಾ ಬೆಳೆದಿರು ನೀನೇ ಕೊಟ್ಟ ಜೋಳದ ಮ್ಯಾತೆ

ಅಳುವ ಕಂದನಿಗೆ ಚಂದಿರನ ಚೆಂಡಾಗಿ ನೀಡಿದೆ
 ಅತ್ತು ಮಲಗಿದ ಕಂದನಿಗೆ ತಂಪು ತಂಗಾಳಿ ಬೀಸಿ ತೂಗಿದೆ
ನಾ ನಿನ್ನ ಮರೆಯಲೆಂತು ಮಾತೆ
 ನಾ ಬೆಳೆದು ನಿನ್ನ ಕತ್ತರಿಸಿ ಮನೆ ಕಟ್ಟಿ ಒಳ ಕೂತೆ

ನಿನ್ನ ಕುರಿತು ಶಾಲೆಯಲ್ಲಿ ಮಾಡಿದೆ ಭಾಷಣ
ನಿನ್ನ ಚಿತ್ರ ಬರೆದು ಪಡೆದ ಹೆಸರ ಕಲಾ ವಿಭೂಷಣ
 ಮುದಿಯಾದ ನಿನ್ನ ಉರುಳಿಸಿ
ನಗುವೇ ಗಿಡ ನೆಟ್ಟು ಹೂವ ಅರಳಿಸಿ
                     ರಚನೆ     
             ಶ್ಯಾಮ್ ಪ್ರಸಾದ್ ಭಟ್