ಅಮ್ಮಾ ......ಇವತ್ತು ರಾತ್ರಿ ಊಟಕ್ಕೆ ನಾನು ಬರೋದಿಲ್ಲ ಫ್ರೆಂಡ್ ಮನೇಲಿ ಮಹಾಲಯ ಹಬ್ಬ ಹಿರಿಯರಿಗೆ ಎಡೆ ಇಡ್ತಾರಂತೆ ಊಟ ಅಲ್ಲೇ ಆಗುತ್ತೆ ....ಎಂದು ಹೇಳಿ ಹೊರಟನು .....ಅಮ್ಮ ಒಳಗಿನಿಂದ ಹೊರ ಬಂದು ಅಲ್ಲಾ ಕಣ್ಲಾ ಮಗಾ ಅಲ್ಲೇ ಮನಿಕತಿಯಾ ಮನೆಗ್ ಬತ್ತೀಯ...??
ಬತ್ತೀನಿ ಕಣಮ್ಮೋ ಬಾಗ್ಲು ತಗಿದಂಗೆ ಮನಿಕಬುಟ್ಟಿಯಾ ಸರಿ ಬಾ ಎಚ್ಚರಿಕೆ ಇರ್ತೀನಿ ಹುಸಾರು ಅಮಾಸೆ ಟೇಮು ದೆವ್ಗಳ್ ಕಾಟ ಬಿರ್ನೆ ಒಲ್ಟು ಬಂದ್ ಬುಡು ಮಗಾ...
ಸರಿ ಕಣಮ್ಮ .....ಎಂದು ಬೈಕು ಹತ್ತಿ ಹೊರಟನು
ಗೆಳೆಯನ ಮನೆಯಲ್ಲಿ ವರ್ಷಕೊಮ್ಮೆ ಮಾಡುವ ಹಿರಿಯರ ಹಬ್ಬಕ್ಕೆ ಭರ್ಜರಿ ತಯಾರಿ ನೆಡೆದಿತ್ತು ...ನಾನ್ ವೆಜ್ ಊಟ ಸತೀಶನನ್ನು ಬಾಗಿಲಿನಿಂದಲೇ ಸ್ವಾಗತಿಸಿತು ಎಡೆ ಪೂಜೆ ಗೆ ತಾತನಿಗೆ ಪ್ರಿಯವಾದ ಎಲ್ಲಾ ಖಾದ್ಯಗಳನ್ನು ಮಾಡಲಾಗಿತ್ತು ...ಬೀಡಿ ಬೆಂಕಿಪೊಟ್ನ ಕೂಡ ಇಡಲಾಗಿತ್ತು( ತಾತ ಬೀಡಿ ಸೇದಿ ಸೇದಿ ದಮ್ಮು ಕಟ್ಟಿ ಸತ್ತದ್ದು ಎಂಬುದನ್ನು ನೆನಪಿಸಲೋ ಏನೋ) ಎಲ್ಲವನ್ನು ನೈವೇದ್ಯ ಕೊಟ್ಟ ಮೇಲೆ ಸತೀಶ ಗೆಳೆಯನಿಗೆ ಏನೋ ರಮೇಶ ತೀರ್ಥ ತರ್ಸಿಲ್ವೇನ್ಲಾ ಎಂದ ....
ತೀರ್ಥ ಇಲ್ದೇ ಹಬ್ಬ ಮಾಡಾರ ಎಂದ ಕೂಡಲೇ...ಸತೀಶನ ನಾಲಿಗೆ ಚುರುಕಾಯಿತು ...ಸತೀಶ ನೀನು ಟೆರೇಸ್ ಮ್ಯಾಕೆ ಹೋಗು ನಾನು ಎಲ್ಲಾ ತತ್ತೀನಿ ಎಂದ ರಮೇಶ...
ಸರಿ ಎಂದು ಟೆರೇಸ್ ಮೇಲೆ ಹೋದ ಸತೀಶ ಬಾಡಿನ (ಮಾಂಸದ) ರುಚಿ ಸವಿಯಲು ಎಣ್ಣೆ ಗಂಟಲಿಗಿಳಿಸಲು ಕಾತುರನಾಗಿ ಅತ್ತಿಂದಿತ್ತ ಇತ್ತಿಂದ ಅತ್ತ ಓಡಾಡಲು ಶುರು ಮಾಡಿದ ಅಂತು ಅವನು ಬಯಸಿದ ಸಮಯ ಬಂದೇ ಬಿಡ್ತು ಇಬ್ಬರು ಒಂದೊಂದು ಲೋಟಕ್ಕೆ ಸಾರಾಯಿ ಸುರಿದು ಕೊಂಡು ಸಂಬಂಧಿಕರನ್ನು ದೂರುತ್ತಾ....ಕುಡಿಯ ತೊಡಗಿದರು ...ಮಾತು ಬೈಗುಳಕ್ಕೆ ಸಂಬಂಧಿಕರಷ್ಟೇ ಅಲ್ಲದೇ ಸತೀಶನ ಎದೆಗೆ ಚೂರಿ ಇಟ್ಟು ಹೋಗಿದ್ದ ಹಳೆಯ ಗೆಳತಿ ನೆನಪು ಇನ್ನೂ ನಾಲ್ಕು ಪೆಗ್ಗು ಏರಿಸಲು ಪ್ರೇರೇಪಿಸಿತು ಅವಳಿಗೂ ಹಿಗ್ಗಾ ಮುಗ್ಗಾ ಬಯ್ಯುತ್ತಾ ....ಪೆಗ್ಗುಗಳು ಲೆಕ್ಕವಿಲ್ಲದಂತೆ ಹೊಟ್ಟೆ ಸೇರಿತು .........ಎಚ್ಚೆತ್ತವನಂತಾಗಿ ಸರಿ ಕಣ್ಲಾ ಹೊಂಡ್ತಿನಿ ಅಮ್ಮ ಕಾಯ್ತಾ ಇರ್ತಾಳೆ ಎಂದು ಎದ್ದು ನಿಂತ ....ನಿಂತವನೇ ನಿಲ್ಲಲಾರದೇ ಗೋಡೆ ಹಿಡಿದ ಕುಡಿತ ಹಿಡಿತ ತಪ್ಪಿಸಿತ್ತು ...ತೂರಾಡುತ್ತಾ ಮೆಟ್ಟಿಲಿಳಿಯ ತೊಡಗಿದ ...ಗೆಳೆಯ ರಮೇಶ ಸತೀಶನಿಗೆ ಮಗಾ ಗಾಡಿ ಓಡ್ಸಕಾಗಕಿಲ್ಲ ಇವತ್ತು ಇಲ್ಲೇ ಮನಿಕೋ ಬೆಳಿಗ್ಗೆ ಒಳ್ಡುವಂತೆ ಎಂದಾಗ ಸತೀಶನ ಪೌರುಷಕ್ಕೆ ಪೆಟ್ಟು ಬಿದ್ದಂತೆ ನಾನು ಯಾರು ಗೊತ್ತಲ್ಲ ಸಿಂಹ ಎಂತೆಂಥ ಗಾಡಿನೋ ಓಡ್ಸಿದಿನಿ ಈ ಜುಜುಬಿ ಬೈಕು ಎಂದು ಬೈಕು ಹತ್ತಿದ ....ಕಿಕ್ಕರ್ ಹೊಡೆಯಲು ಹರಸಾಹಸ ಪಟ್ಟು ಬೈಕ್ ಸ್ಟಾರ್ಟ್ ಮಾಡಿ ಸರಿ ಕಣ್ಲಾ ಹೋಯ್ತೀನಿ ಎಂದು ಗೆಳೆಯನಿಗೆ ತಿಳಿಸಿ ಅರೆ ಬರೆ ಕಣ್ಣು ಬಿಟ್ಟುಕೊಂಡೆ ಹಳ್ಳಿ ರಸ್ತೆ ಯನ್ನು ಬೈಕು ದಾಟಿಸಿದ ... ಹಳ್ಳಿ ರಸ್ತೆಯಿಂದ ಸಿಟಿ ರಸ್ತೆಗೆ ಬಂದವನಿಗೆ ಒಮ್ಮೆಲೆ ಬೇರೆ ಗಾಡಿಗಳ ಲೈಟುಗಳು ಇವನ ಕಣ್ಣು ಮಂಜು ಮಾಡುತಿದ್ದವು ತುಂಬಾ ತಡವಾದ್ದರಿಂದ ವಾಹನಗಳು ಸ್ಪೀಡ್ ಲಿಮಿಟ್ ಮೀರಿದ್ದವು ಎದುರಿಗೆ ಬಂದ ಕಾರೊಂದು ತನ್ನ ಎಲ್ ಇ ಡಿ ಲೈಟನ್ನು ಡಿಮ್ ಅಂಡ್ ಡಿಪ್ ಮಾಡಲಿಲ್ಲ ಸತೀಶನಿಗೆ ಕಣ್ಣಿಗೆ ಕತ್ತಲೆ ಕವಿದಂತಾಗಿ ಬೇಕನ್ನು ರಸ್ತೆ ಮಧ್ಯಕ್ಕೆ ನುಗ್ಗಿಸಿದ ದೊಡ್ಡ ಶಬ್ಧವಷ್ಟೇ ಸತೀಶನ ಕಿವಿಯಲ್ಲಿ ಗುಯ್ಯ ಗುಟ್ಟಿತು ಮುಂದೆ ಏನಾಯಿತು ಎಂಬುದು ಅವನಿಗೆ ತಿಳಿಯದಂತೆ ಪ್ರಜ್ಞೆ ತಪ್ಪಿ ಹೋಯ್ತು ....ಎದುರಿಗೆ ಬಂದು ಗುದ್ದಿದ ಕಾರಿನವನು ಜೋರಾಗಿ ಬ್ರೇಕು ಒತ್ತದರು ಪ್ರಯೋಜನವಾಗಲಿಲ್ಲ ರಸ್ತೆ ಗೆ ಬಿದ್ದಿದ್ದವನ ಕಿವಿ ಮೂಗಿನಲ್ಲಿ ರಕ್ತ ಸ್ರಾವ ಕಂಡು ಗಾಬರಿಯಾದ ತಕ್ಷಣ ಕಾರು ತೆಗೆದುಕೊಂಡು ಹೋಗಿಬಿಡೋಣ ಎಂದು ಕೊಂಡ ಹೊಸ ಕಾನೋನಿನ ಬಗೆಗೆ ಹಿಟ್ ಅಂಡ ರನ್ ಹತ್ತು ಲಕ್ಷ ದಂಡ...ಜೈಲು ಶಿಕ್ಷೆ ನೆನಪಾಗಿ ರಸ್ತೆಯಲ್ಲಿ ಬಿದ್ದಿದ್ದ ಸತೀಶನ ಬಳಿ ಬಂದು ನೋಡಿದ ಸತೀಶನಿಗೆ ಪ್ರಜ್ಞೆ ಇರಲಿಲ್ಲ ಉಸಿರಾಡುತ್ತಿದ್ದ ತನ್ನ ಕಾರಿನಲ್ಲೆ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಿ ಸತೀಶನ ಮೊಬೈಲಿನಿಂದ ಇತ್ತೀಚಿನ ಕರೆಪಟ್ಟಿ ತೆಗೆದು ಸತೀಶನ ಗೆಳೆಯನಿಗೆ ಕರೆ ಮಾಡಿದ....
ಮರುದಿನ
ಸತೀಶನಿಗೆ ದೂರದಲ್ಲೇಲ್ಲೋ ಅಮ್ಮ ಕೂಗುತ್ತಾ ಅಳುತ್ತಿರುವ ಶಬ್ಧ ಕೇಳಿತು ಈ ಮುಂಡೆ ಮಗಂಗೆ ಹೇಳ್ದೇ ಬೇಡ ಕಣ್ಲಾ ಅಮಾಸೆ ದೆವ್ಗಳ ಕಾಟ ಅಂತ ಗಿಣಿಗೆ ಹೇಳ್ದಂಗೆ ಹೇಳ್ದೆ ಎಂದು ತಾನು ಇಲ್ಲಿಯವರೆಗೂ ಕಂಡೇ ಇರದ ದೆವ್ವವನ್ನು ದೂರುತ್ತಾ ತನ್ನ ಮಗನ ಸಾರಾಯಿ ಚಟದಿಂದಾದ ದುರಂತವನ್ನು ಕಾಣದ ದೆವ್ವದ ತಲೆ ಮೇಲೆ ಆರೋಪ ಹೊರಿಸಿದಳು ....ಈಗ ದೇವರ ಸರದಿ ದೇವರೇ ನಿಂಗ್ ಕಣ್ಣಿಲ್ವ ನನ್ ಮಗೀನಾ ಹಿಂಗ್ ಮಾಡಿ ಕೂರ್ಸಿದ್ದೀಯಲ್ಲಾ ಎಂದು ದೇವರನ್ನೂ ದೂರಿದಳು ಅಷ್ಟೋತ್ತಿಗಾಗಲೇ ಕಣ್ಣು ಬಿಟ್ಟು ಸತೀಶ ಅಮ್ಮಾ...... ಎಂದ ....ಎಲ್ಲರೂ ಸತೀಶನಿಗೆ ಪ್ರಜ್ಞೆ ಬಂದಿದ್ದರಿಂದ ಸಂತಸಗೊಂಡರು ....
ತಮ್ಮ ಸ್ವಯಂ ಕೃತ ತಪ್ಪುಗಳಿಗೆ ಇಲ್ಲಿಯವರೆಗೂ ಯಾರೂ ಕಂಡಿರದ ದೆವ್ವದ ಮೇಲೋ....ದೇವರ ಮೇಲೋ ಆರೋಪ ಹೊರಿಸದೇ ಜಾಗರೂಕರಾಗಿರಿ ಅಮಾವಾಸ್ಯೆ ಕತ್ತಲು ನಿಮ್ಮ ಬದುಕನ್ನು ಕತ್ತಲಾಗಿಸಲು ಬಂದಿತೆಂದರೆ ಹುಣ್ಣಿಮೆಯ ಬೆಳಕು ನಿಮ್ಮ ಬದುಕಿಗೆ ಆಶಾ ಜ್ಯೋತಿಯಾಗಬೇಕು ಆದರೆ ಅಮಾವಾಸ್ಯೆ ದೂರಿದವರಷ್ಥೇ ಸಿಗುತ್ತಾರೆ ಹುಣ್ಣಿಮೆ ಚಂದಿರನ ಹೊಗಳಿದವರಾರು ಸಿಗುವುದಿಲ್ಲ....ಅಮಾವಾಸ್ಯೆ ಹುಣ್ಣಿಮೆಗಳು ಖಗೋಳ ವಿಜ್ಣಾನ ವಿಸ್ಮಯ ಅದು ಯಾವುದೇ ಅನಿಷ್ಠವಲ್ಲ.....
ಜಾಗರೂಕರಾಗಿ ಜಾಗೃತರಾಗಿ
ರಚನೆ
ಶ್ಯಾಮ್ ಪ್ರಸಾದ್ ಭಟ್