Monday, November 1, 2021

ಜೋಡಿ ಮನೆ ಎಸ್ಟೇಟ್

 



ಜೋರು ಮಳೆ .....ಜೋರು ಶಬ್ಧ ಮ‍ಾಡುತಿದ್ದ ಗುಡುಗು...ಒಬ್ಬರಿಗೊಬ್ಬರ ಮುಖ ಛಕ್ಕನೆ ಕಂಡು ಮರೆಯಾಗುವಂತ ಮಿಂಚು ನಾನು ನನ್ನ ಗೆಳೆಯ ರಾಮು ಒಂದು ದೊಡ್ಡ ಬಂಗಲೆಯೊಳಗೆ ಹೊರ ಬರಲು ದಾರಿ ಗೊತ್ತಾಗದೆ...ಭಯ ಪಡಿಸೋ ಗುಡುಗು ಸಿಡಿಲುಗಳ ಮಧ್ಯೆ ಛಳಿಗೆ ನಡುಗುತಿದ್ದೆವೋ ಭಯದಿ ನಡುಗುತಿದ್ದೆವೋ  ಆ ಗುಡುಗಿಗೆ ಬೆಚ್ಚಿ ನಡುಗುತಿದ್ದೆವೋ ಸ್ಪಷ್ಟವಾಗಿ ಹೇಳಲಾರೆ


ನಾವು ಹೊರಟಾಗ ಇನ್ನೇನು ಕರಿ ಮೋಡ ಕೆಟ್ಟದಾಗಿ ಎಲ್ಲ ಕಡೆಗೂ ಭಯಾನಕ ವೇಗವಾಗಿ ನುಗ್ಗಿ ‍ಆವರಿಸುತಿತ್ತು....

ಮದ್ಯಾಹ್ನ ಬಂದಿದ್ದ ನೆತ್ತಿ ಸುಡುವ ಬಿಸಿಲಿನಿಂದಲೇ ಸಂಜೆ ಜೋರು ಮಳೆ ಸುರಿಯುವ ಭವಿಷ್ಯವನ್ನ ಮೊದಲೇ ಗುರುತಿಸಿದ್ದೆವು.... 

 ಮಲೆನಾಡಲ್ಲಿ ಮಳೆ ಹೀಗೇ ಎಂದು ಹೇಳಲಾಗೋದಿಲ್ಲ ಯಾವಗಂದರೇ ಆವಾಗ ಒಮ್ಮೆಲೆಗೆ ಧೋ ಎಂದು ಸುರಿಯಲು ಮೊದಲಿಟ್ಟು ಬಿಡುತ್ತೆ...ಯಾವುದಕ್ಕೂ ಇರಲಿ ಎಂದು ಛತ್ರಿಯನ್ನ ಇಬ್ಬರೂ ಬೆನ್ನ ಹಿಂದಿನ ಕಾಲರ್ ಗೆ ಸಿಕ್ಕಿಸಿ ಕೊಂಡೆ ಹೊರಟಿದ್ದೆವು...

ಹೀಗೇ ಅಪರಿಚಿತ ಸ್ಥಳಕ್ಕೆ ಹೋಗುವಾಗ ಅದು ಕಾಫಿ ಎಸ್ಟೇಟಿನಂತಹ ಕಾಡು ಪ್ರದೇಶಕ್ಕೆ ಹೋಗುವಾಗ ಕೈಯಲ್ಲಿ ಕಲ್ಲು ...ದೊಣ್ಣೆಯಂತಹ ಅಸ್ತ್ರಗಳು ಅವಶ್ಯ...ಈ ನಾಯಿಗಳು ಎಲ್ಲಿಂದ ಹೇಗೇ ಮೈ ಮೇಲೆ ಎರಗುತ್ತವೆ ಹೇಳಲಸಾದ್ಯ....ಎಸ್ಟೇಟ್ ನೋಡಿಕೊಳ್ಳಲೆಂದೇ ಕೆಲವೊಂದು ಜಾತಿ ನಾಯಿಗಳನ್ನ...ಮನುಷ್ಯರಿಗಿಂತ ದಷ್ಟ ಪುಷ್ಪ ವಾಗಿ ಬೆಳೆಸಿರುತ್ತಾರೆ ...ನಾಯಿಗಳನ್ನ ನೋಡಿ ಎಷ್ಟೋ ಬಾರಿ ಅಂದು ಕೊಂಡದ್ದುಂಟು ಈ ನಾಯಿ ನನಗಿಂತ ದಪ್ಪವಾಗಿದೆ ಎಂದು...ಈ ಛತ್ರಿ ಇರೋದ್ರಿಂದ ದೊಣ್ಣೆ ..ಕಲ್ಲ‍ಾಗಲಿ ರಕ್ಷಣೆಗೆ ಅವಶ್ಯವಿಲ್ಲ....ಒಂದು ವೇಳೆ ನಾಯಿ ಬಂತೆಂದರೆ ಛತ್ರಿ ಬಿಡಿಸಿ ಅದರ ಮೂತಿಗೆ ತಿವಿದೇ ಓಡಿಸಬಹುದಿತ್ತು....ನನ್ನ ಛತ್ರಿ ಮಡಿಸಿ ಮುದುರಿ ಇಡುವ ವಾಟರ್ ಬಾಟಲ್ ಸೈಜಿನಂತದ್ದಲ್ಲ...ಮುದುಕರು ಊರ ಹಿರಿಯರು ಊರುಗೋಲಿನಂತೆ ಬಳಸುತಿದ್ದ ಉದ್ದನೆಯ ಛತ್ರಿ ಅದರ ಮುಂದಿನ ಚೂಪು ಕತ್ತಿಯಂತೆ ಹರಿತ....ನಮ್ಮ ತಾತ ಆ ಚೂಪಿನ ಮೂತಿಯಿಂದಲೇ ನೆಲದಲ್ಲಿ ಅಗೆದು ಗಿಡ ನೆಡುತ್ತಿದ್ದರಂತೆ...


ಆ ಬಂಗಲೆಯ ಕಿಟಕಿ ಒಳಗಿನಿಂದ ಹೊರಗಿನ ಮಳೆ ನೋಡಿದಾಗ ನನ್ನ ಮನಸ್ಸಿನಲ್ಲಿ ಹೀಗೇ ನಾವಿಲ್ಲಿಗೆ ಬಂದ ಬಗೆ ಬಂದು ಬಂಧಿಯಾದ ಬಗೆ ಎಲ್ಲವನ್ನು ನೆನೆಸಿಕೊಳ್ಳಲ‍ಾರಂಭಿಸಿತು ಮನಸ್ಸು ..

ನಾವೇನು ಇದೇ ಮೊದಲ ಬಾರಿ ಹೀಗೇ ಇಂಥ ಸಾಹಸಗಳಿಗೆ ಧುಮುಕಿದವರಲ್ಲ....


ಹಿಂದೊಮ್ಮೆ ಅಂದರೆ ಎರಡು ವರ್ಷದ ಹಿಂದೆ ನಮ್ಮೂರಿಗೆ ಹತ್ತಿರದಲ್ಲಿರುವ ಬೆಟ್ಟದ ಮಲ್ಲಿಕಾರ್ಜುನ ದೇವಾಲಯ ಇರೋ ಬೆಟ್ಟಕ್ಕೆ ಇದೇ ಗೆಳೆಯ ರಾಮು ಜೊತೆಗೆ ಹೋಗೋದು ಎಂದು ತೀರ್ಮಾನವಾಯಿತು

 ನಾನು ಈಗ ಪಿ ಯು ಸಿ ಓದುತಿದ್ದರು ನನಗೆ ಎಂಟನೇ ತರಗತಿಯಲ್ಲಿ ಸರ್ಕಾರದಿಂದ ಕೊಟ್ಟಿದ್ದ ಸೈಕಲ್ ನ್ನು ಚೆನ್ನಾಗಿಟ್ಟುಕೊಂಡಿದ್ದೆ ನಾನು ನನ್ನ ಸೈಕಲ್ಲನ್ನು ರಾಮು  ಅವನು ಹೊಸದಾಗಿ ಕೊಂಡುಕೊಂಡಿದ್ದ ಗೇರ್ ಸೈಕಲ್ ನ್ನ ಏರಿ ಇಬ್ಬರು ಹೊರಟಾಗ ಬೆಳಗ್ಗೆ ಏಳು ಗಂಟೆಯ ಸಮಯ ರಸ್ತೆ ಬೆಟ್ಟದ ಪಾದದವರೆಗೆ ಚೆನ್ನಾಗೇನೋ ಇತ್ತು ....

ಬೆಟ್ಟ ಪ್ರಾರಂಭವಾದೊಡನೆ ರಸ್ತೆ ಏರುಮುಖವಾಗಿದ್ದರಿಂದ ತುಳಿದು ತುಳಿದು ತೊಡೆಯಿಂದ ಕಾಲೆಲ್ಲ  ನೋವು ಬರಲು ಶುರುವಿಟ್ಟಿತು..

 ಸರಿ ಸೈಕಲ್ ತುಳಿದು ಬೆಟ್ಟ ಏರೋಕೆ ಸಾಧ್ಯವೇ ಇಲ್ಲ ಎಂದು ತಿಳಿದ ಮೇಲೆ... ಬೆಟ್ಟಕ್ಕೆ ಏರುವಾಗ ಮದ್ಯದಲ್ಲಿ ಆ ಬೆಟ್ಟದಲ್ಲಿರುವ ದೇವಾಲಯ ಪೂಜೆ ಮಾಡುವ ಪುರೋಹಿತರಾದ ರಾಜು ಭಟ್ಟರ ಮನೆ ಸಿಗುತ್ತದೆ ಅಲ್ಲೇ ಸೈಕಲ್ ನಿಲ್ಲಿಸಿ ಅಲ್ಲಿಂದ ನಂತರ ನೆಡೆದು ಬೆಟ್ಟ ಹತ್ತುವುದೆಂದು ನಿರ್ದಾರವಾಯಿತು ಎಣಸಿದಂತೆ ಪುರೋಹಿತರ ಮನೆ ಬಂತು.....ರಾಜು ಭಟ್ಟರು ಆಗ ತಾನೆ ಪೂಜೆ ಮುಗಿಸಿ ಬೆಟ್ಟ ಇಳಿದು ಮನೆಯತ್ತ ಬರುತಿದ್ದರು  ...ಎಲ್ಲಿಗೆ ಹೊರಟದ್ದು ಮಕ್ಕಳ ಸವಾರಿ ಎಂದರು ನಾವು ದೇವಸ್ಥಾನಕ್ಕೆ ಹೊರಟದ್ದು ಎಂದು ಹೇಳಿದೆವು....ಅದಕ್ಕವರು ಹೆಚ್ಚು ಹೊತ್ತು ಇರಬೇಡಿ ಮಾಣಿ ಆನೆ ಬರ್ತಾವೆ...ಇವತ್ತು  ಆನೆ ಓಡಾಡಿದ ಹೆಜ್ಜೆ  ಇತ್ತು ದೇವಸ್ಥಾನದ ಸುತ್ತ ಎಂದರು ....ಸರಿ ಭಟ್ರೆ ಹೆಚ್ಚು ಹೊತ್ತು ಇರೋದಿಲ್ಲ ಅಂತ ಹೇಳಿ ಸೈಕಲ್ ನಿಲ್ಲಿಸಿ ಹೊರಟೆವು ...

ಇಬ್ಬನಿ  ಮಂಜು ತುಂಬಿಕೊಂಡ ರಸ್ತೆ ....ಟಾರು ಹಾಕಿದ್ದಾದರು ವಿಪರೀತ ಮಳೆ ಬೀಳೋ ಕಾರಣ ರಸ್ತೆ ಕಿತ್ತು ಹೋಗಿ ಜಲ್ಲಿ ಮಾತ್ರ ಉಳಿದಿತ್ತು....ಸ್ವಲ್ಪ ದೂರ ಹೋದಂತೆ ಮೂರು ಮಣ್ಣಿನ ರಸ್ತೆ ಸಿಕ್ಕಿತು...ಅದರಲ್ಲಿ ಮದ್ಯದ್ದು ದೇವಸ್ಥಾನಕ್ಕೆ ಹೋಗುತ್ತೆ...ಇನ್ನೆರಡು ನೇರ ಪರಶುರಾಮರ ಗುಡ್ಡಕ್ಕೆ ದಾರಿ ತೋರಿಸುತ್ತೆ....ನಾವು ಮೊದಲು ದೇವಸ್ಥಾನಕ್ಕೆ ಹೋಗಿ ದೇವರನ್ನು ಕಂಡು ನಂತರ ಗುಡ್ಡ ಹತ್ತುವುದೆಂದು ನಿರ್ಧಾರ ಮಾಡಿ ದೇವಾಲಯದ ಹಾದಿ ಹಿಡಿದು ಹೊರಟೆವು ...ಸುಮಾರು ಸಾವಿರ ವರ್ಷದ ಇತಿಹಾಸವಂತೆ ಯಾವುದೋ ರಾಜ ಕಟ್ಟಿಸಿದ್ದಂತೆ....ಕಲ್ಲಿನ ದೇವಾಲಯ ಸುತ್ತ ಆವರಣ ಮಳೆ ಇಬ್ಬನಿ ಬಿದ್ದು ಪಾಚಿಗಟ್ಟಿದೆ...ದೇವಾಲಯದ ಗೋಪುರದ ಮೇಲೆ ಗಿಡಗಳು ಬೆಳೆದಿವೆ....

ರಾಜು ಭಟ್ಟರು ಆರು ಗಂಟೆಗೆ ಬಂದು ಪೂಜೆ ಮುಗಿಸಿ ಹೋಗಿದ್ದಾರೆ ...ದೀಪದ ಬೆಳಕಲ್ಲಿ ಕಪ್ಪು ಶಿವಲಿಂಗ ಸ್ಪಷ್ಟವಾಗಿ ಕಾಣುತಿಲ್ಲವಾದರು ಬಿಳಿಯ ವಿಭೂತಿ ಕಂಡಿತು ಕೈ ಮುಗಿದು ಸೆಕೆಂಡ್ ಪಿ ಯು ಸಿ ಒಂದು ಪಾಸು ಮಾಡಿಸಿ ಬಿಡು ದೇವರೇ ಎಂದು ಕೇಳಿಕೊಂಡೆ...ರಾಮು ಅಷ್ಟರಲ್ಲಿ ಗುಡಿಯನ್ನು ಸುತ್ತು ಬಂದು ಬಾರೋ ಹೊತ್ತಾಗುತ್ತೆ ...ಈ ಮಳೆ ಬೇರೆ ಯಾವಾಗ ಶುರುವಾಗುತ್ತೋ ಹೇಳೋಕಾಗಲ್ಲ....ನಮಗೆ ಬೆಟ್ಟದ ತುದಿಗೆ ಹೋಗೋಕೆ ಬಹು ಮುಖ್ಯ ಕಾರಣ ಅಲ್ಲಿ ಸಿಗೋ ಅಪರೂಪದ ಹಣ್ಣು ಚೊಟ್ಟೆ ಹಣ್ಣು ತಿನ್ನೋಕೆ...ಹಾಗೇ ಇಬ್ಬನಿ ತುಂಬಿ ಹಾಲ್ಗಡಲಂತೆ ಕಾಣುವ ಬೆಟ್ಟವನ್ನ ಸವಿಯೋಕೆ....ಪರಶುರಾಮ ಕ್ಷತ್ರಿಯರ ನಾಶಕ್ಕೆಂದು ಸಂಚರಿಸುವಾಗ ಇಲ್ಲಿ ವಿಶ್ರಾಂತಿ ಪಡೆದಿದ್ದನಂತೆ..ಅದಕ್ಕೆ ಈ ಬೆಟ್ಟವನ್ನ ಪರಶುರಾಮ ಬೆಟ್ಟ ಅನ್ನೋದು....

    ಬೆಟ್ಟ ಎಷ್ಟು ಸುಂದರವಾಗಿದೆ ಎಂದರೆ ಹಚ್ಚ ಹಸಿರಿನ ಬಟ್ಟೆ ಹೊದ್ದು ಕಂಗೊಳಿಸುತ್ತ .. ಮುತ್ತಿನ ಬಣ್ಣದ ಇಬ್ಬನಿ ಅಪರೂಪದ ಹೂ ಗಳು ಹಸಿರಿನ  ಬಟ್ಟೆ ಮೇಲೆ ಜೋಡಿಸಿದಂತೆ ನೋಡಲು ಏನೋ ಮೈ ರೋಮಾಂಚನಗೊಳಿಸೋ ಸೌಂದರ್ಯ ...ಈ ಬೆಟ್ಟದ ವಿಶೇಷತೆ ಏನೆಂದರೆ ಇದು ಬೆಟ್ಟಗಳ ಸರಣಿ ಒಂದು ಬೆಟ್ಟ ಹತ್ತಿದಂತೆ ಮತ್ತೆ ಅದಕ್ಕಿಂತ ಎತ್ತರವಾದ ಮತ್ತೊಂದು ಬೆಟ್ಟ ಕಾಣಸಿಗುತ್ತದೆ....ಅದನ್ನು ಹತ್ತಿ ಮುಗಿಸಿದೆವೆಂಬಂತೆ ಪಾತಾಳ

 ಅದನ್ನು ಇಳಿದು ಮುಂದೆ ಸಾಗಿದರೆ ಮತ್ತೊಂದು ಹೆಸರಿನಿಂದ ಕರೆಯಲ್ಪಡುವ ದೈತ್ಯಗಾತ್ರದ ಬೆಟ್ಟ....ಹೀಗೇ...ನಾವು ಹತ್ತಲು ಪ್ರಾರಂಭಿಸಿ ಒಂದು ಚಿಕ್ಕ ಬೆಟ್ಟವನ್ನು ಹತ್ತಿ ಮುಗಿಸಿದೆ...ನಾನು ತುಂಬಾ ಸುಸ್ತಾಗಿ ಹೋಗಿದ್ದೆ..ಆದರೆ ರಾಮು ಸುಸ್ತಾದಂತೆ ಕಾಣಲಿಲ್ಲ...ಅವನಿಗೆ ಚೊಟ್ಟೆ ಹಣ್ಣು ತಿನ್ನೋ ಅವಸರ....ಅಲ್ಲಿ ಮೇಲಿರೋ ದೈತ್ಯ ಗಾತ್ರದ ಬಂಡೆ ಮೇಲೆ ಕೂರುವ ಬಯಕೆ...

ಅವನೋ ಕೂಗಿ ಕೊಳ್ಳುತ್ತ ಬಾರೋ...ಇಷ್ಟೇನಾ ನೀನ್ ಹತ್ತೋಕಾಗೋದು  ಎಂದು ಮೂದಲಿಸುತ್ತ ನಗುತ್ತಿದ್ದ ...ನಾನು ಅಲ್ಲೆ ಬಿದ್ದಿದ್ದ ಕೋಲು ತೆಗೆದು ಕೊಂಡು ಊರುಗೋಲಾಗಿಸಿ ಹತ್ತ ತೊಡಗಿದೆ ಇಪ್ಪತ್ತು ನಿಮಿಷದಲ್ಲಿ ಬೆಟ್ಟದ ತುದಿ ಹತ್ತಿ ಕುಣಿದು ಸಂಭ್ರಮಿಸಿದೆವು... ಅಲ್ಲೇ ಇದ್ದ ಬಂಡೆ ಮೇಲೆ ಮಲಗಿ ವಿಶ್ರಮಿಸುತಿದ್ದೆ  ...ರಾಮು ಚೊಟ್ಟೆ ಹಣ್ಣು ಕೊಯ್ದು ತರಲು ಹೋಗಿದ್ದವ ಬಂದ ಇಬ್ಬರು ಹಂಚಿ ತಿಂದೆವು ....ಸ್ವಲ್ಪ ಹೊತ್ತು ಕಾಲ ಕಳೆದು ಇಳಿಯೋಣ ಎಂದು ಅಲ್ಲೇ ಬಂಡೆ ಮೇಲೆ ಮಲಗಿದ್ದೆವು....

ಜೋರು ಮಳೆ ಒಮ್ಮೆಲೆ ಸುರಿಯಲು ಪ್ರಾರಂಭಿಸಿತು...ಮೂರ್ನಾಲ್ಕು ದೊಡ್ಡ ಬಂಡೆಗಳ ನಡುವೆ ಮಳೆಯಿಂದ ಆಶ್ರಯ ಪಡೆಯುವಷ್ಟು ಜಾಗವಿತ್ತು...ಅಲ್ಲೇ ಸ್ವಲ್ಪ ಹೊತ್ತು ನಿಂತು ಮಳೆ ನಿಲ್ಲುವವರೆಗೂ ನಿಂತೆವು ....ಮಳೆ ನಿಂತ ಮೇಲೆ ಮಂಜು ಆವರಿಸಿತು ಮುಸುಕು ಮುಚ್ಚಿದ ವಾತಾವರಣ ದೂರದ ದೃಶ್ಯಗಳೇನು ಕಾಣಿಸುತ್ತಿಲ್ಲ....ಈಗ ಬೆಟ್ಟ ಇಳಿಯೋದು ತುಂಬಾ ಅಪಾಯ ಮಳೆಗೆ ನೆಲ ಮತ್ತಷ್ಟು ಹಸಿಯಾಗಿರುತ್ತೇ ...ಮಂಜು ಮುಸುಕಿರೋದ್ರಿಂದ ಮುಂದಿನ ದಾರಿಯೂ ಕಾಣೋದಿಲ್ಲ... ನಾವು ಬೆಟ್ಟದ ಮೇಲೆ ಬಂದಾಗಲೇ ಒಂಬತ್ತು ಗಂಟೆ ಆಗಿತ್ತು...ಈಗ ಸಮಯ ಎಷ್ಟಾಗಿದೆಯೋ ಮಳೆ ನೀರು ವಾಚ್ ಒಳಗೆ ಹೋಗಿ ಸಮಯ ಕಾಣಿಸುತಿಲ್ಲ....ಅಯ್ಯೋ ದೇವ್ರೇ...ಇದೆಂಥಾ ಸ್ಥಿತಿ...ಎಂದು ಇಬ್ಬರು ದಿಕ್ಕು ತೋಚದಂತಾಗಿ ಕುಳಿತಿದ್ದೆವು....ಸುಮಾರು ಗಂಟೆಗಳು ಕಳೆದ ನಂತರ ಹೊಟ್ಟೆ ಹಸಿವು ಕಾಣಿಸಲಾರಂಭಿಸಿತು ...ತಿನ್ನೋಕೆ ಚೊಟ್ಟೆ ಹಣ್ಣು ಬಿಟ್ಟರೆ ಮತ್ತೇನಿಲ್ಲ...

 ಕೆಳಗಿನ ಬೆಟ್ಟದ ಬುಡದಿಂದ ಯಾರೋ ಕಿರುಚುತಿದ್ದಂತೆ ಕೇಳಿಸುತಿತ್ತು ವಿಪರೀತ ಗಾಳಿಯಾದ್ದರಿಂದ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ....

ಯರೋ ಇಲ್ಲೇ ಸುತ್ತ ಮುತ್ತಲಲ್ಲೇ ಇದ್ದಾರೆ  ಅವರ ಸಹಾಯ ಪಡೆದು ಮನೆ ಸೇರಿಕೊಳ್ಳುವ ಎಂದು ಕಂಡಷ್ಟು ದಾರಿಯಲ್ಲೇ ಬೆಟ್ಟ ಇಳಿಯಲು ಪ್ರಾರಂಭಿಸಿದೆವು....ರಾಮು ಸರ ಸರನೆ ಇಳಿಯುತಿದ್ದ ..ನಾನು ಅವನ ಹಿಂದೆ ಇಳಿಯುತ್ತಿದ್ದೆ ...ಹಾಕಿದ್ದ ಹವಾಯಿ ಚಪ್ಪಲಿ ಉಂಗುರ ಕಿತ್ತು ಕಾಲಿನ ಹಿಡಿತ ತಪ್ಪಿ ಕೆಳಗೆ ಉರುಳಿ ಬಿದ್ದೆ ಕೆಳಗೆ ಇಳಿಜಾರಿದ್ದರಿಂದ ಉರುಳಿಕೊಂಡೆ ಬಿದ್ದೆ ಮುಟ್ಟಿದರೆ ಮುನಿ ಸೊಪ್ಪಿನ ಮುಳ್ಳುಗಳು ಮೈಯೆಲ್ಲ ಗಾಯ ಮಾಡಿ ತರಚಿದ್ದವು.... ಏಳಲು ಆಗದೆ ಗೋಳಾಡುತ್ತಿರುವಾಗ ಮಾಣಿ.....ಮಾಣಿ....ಎದ್ದೇಳು...ಎಂದು ಕೈ ಹಿಡಿದು ಎಬ್ಬಿಸಿದವರು ರಾಜು ಭಟ್ಟರು ...ಬಿದ್ದ ರಭಸಕ್ಕೆ ನನ್ನ ಮೈ ಕಣ್ಣು ಎಲ್ಲ ಕೆಸರಾಗಿತ್ತು... ಸ್ವಲ್ಪ ಸುಧಾರಿಸಿಕೊಂಡ ಮೇಲೆ....ಬಂದವರು ...ನನ್ನ ಎತ್ತಿದವರು ರಾಜು ಭಟ್ಟರು ಎಂಬುದು ಗೊತ್ತಾಯಿತು...ರಾಮು ...ರಾಮು ...ಎಲ್ಲಿ ಹೋದ ಎಂದೆ....ಅವ ಬೆಟ್ಟ ಇಳಿತಾ ಇದಾನೇ...ಬರ್ತಾನೆ ಸುಧಾರುಸ್ಕೋ ಎಂದರು ಭಟ್ಟರು....ಸ್ವಲ್ಪ ಹೊತ್ತಿಗೆ  ಬೆಟ್ಟ ಇಳಿದ ರಾಮು ಬಂದು ಜಾಸ್ತಿ ಪೆಟ್ಟಾಯ್ತೆನೋ ಎಂದು ಕೈ ಕಾಲು ಗಳ   ನೋಡಿದ...

 ಹೇ ಏನು ಆಗಿಲ್ಲ ನಡೀ ಹೋಗೋಣ ಅಂತ ಎದ್ದು ನಿಂತೆ.. ನನಗೆ ಆಗ ಗಾಯಗಳಾಗಿದ್ದು ದೊಡ್ಡವೇನು ಅನ್ನಿಸಲಿಲ್ಲ ಮನೆಗೆ ಹೋದಾಗ ಹಾಕಿದ ಟಿಂಚರ್ ಗೆ ಉರಿ ಬಂದು ಕುಣಿದಾಡುವಂತಾಗಿತ್ತು... ಅಲ್ಲಿಂದ ರಾಜು ಭಟ್ಟರೊಂದಿಗೆ ಬೆಟ್ಟ ಇಳಿದು ಅವರ ಮನೆಯಲ್ಲಿ ಕಾಫಿ ಕುಡಿದು ರಾಮು ಸೈಕಲ್ಲಿನಲ್ಲೆ ಹಿಂದಿನ ಸೀಟಿನಲ್ಲಿ ಕುಳಿತು ನನ್ನ ಸೈಕಲನ್ನ  ಮುಂದಿನ ವಾರ ತಕ್ಕೊಂಡು ಹೋಗೋದಾಗಿ ಅಲ್ಲಿಯವರೆಗೂ ಅಲ್ಲೇ ಇರಲಿ ಎಂದು  ಭಟ್ಟರಿಗೆ ಹೇಳಿ ರಾಮು ಸೈಕಲ್ಲಿನಲ್ಲೇ ಮನೆ ಸೇರಿದೆ...


ಇದಿಷ್ಟು ಆದರೂ ನಮ್ಮ ಸಾಹಸ ...ಕುತೂಹಲಗಳು ತಣಿದಿರಲಿಲ್ಲ... ಗಾಯವೆಲ್ಲ ವಾಸಿ ಆಗುವಷ್ಟರಲ್ಲಿ ಪರೀಕ್ಷೆ ಬಂತು....ಕೊನೆಯ ಪರೀಕ್ಷೆ ದಿನ 

‌ಬಸ್ ಸ್ಟಾಪ್ ನಿಂದ ನಮ್ಮೂರಿಗೆ  ಇಬ್ಬರೂ ಸೈಕಲ್ ತಂದಿರಲಿಲ್ಲ ಹಾಗಾಗಿ ಇಬ್ಬರು ನೆಡೆದೇ ಹೊರಟೆವು...ನಮ್ಮೂರಿನ ರಸ್ತೆ ಡಾಂಬರು ಕಂಡು ಸುಮಾರು ಹತ್ತು ವರ್ಷಗಳೇ ಕಳೆದಿತ್ತು ವಿಪರೀತ ಮಳೆಯಿಂದ ರಸ್ತೆ ಮಂಡಿಯುದ್ದ ಗುಂಡಿ ಕಂಡಿದ್ದವು...ಆದರೂ ಆ ರಸ್ತೆಯಲ್ಲಿ ನೆಡೆದು ಬರುವ ಮಜವೇ ಬೇರೆ...ರಸ್ತೆಯ ಎರಡು ಬದಿಯಲ್ಲೂ ಕಾಫಿ ತೋಟ ಹಲಸಿನಹಣ್ಣು ಸಿಗುವ ಕಾಲಕ್ಕೆ ತೋಟಕ್ಕೆ ನುಗ್ಗಿ ಹಲಸಿನಹಣ್ಣನ್ನು ಕಿತ್ತು ತಂದು ತಿಂದು ಬರುವುದು...ರಸ್ತೆಯುದ್ದಕ್ಕೂ ಅಲ್ಲಲ್ಲಿ ಇರುವ ಮಾವಿನ ಮರಕ್ಕೆ ಮಾವು ಸಿಗೋ ಕಾಲಕ್ಕೆ ಕಲ್ಲು ಬೀಸಿ ಮಾವಿನಹಣ್ಣ ನ್ನು ಸವಿಯುತಿದ್ದೆವು....

ಇವತ್ತು ಕೂಡ ಪರೀಕ್ಷೆ ಮುಗಿದ ಸಂಭ್ರಮ ಹಾಗೇ ತೋಟದಲ್ಲಿ ಕಿತ್ತಲೆ ಹಣ್ಣುಗಳು ತುಂಬಿ ತುಳುಕುತಿದ್ದವು...ಕಿತ್ತಲೆ ಪಾರಕ್ಕಿದ್ದ ಮುದುಕ ನಮ್ಮೂರಿನವರೇ ತೋಟ ನುಗ್ಗುವ ಸಾಹಸ ಮಾಡಲಿಲ್ಲವಾದರು ಕೇಳಿದ್ದಕ್ಕೆ ನಾಲ್ಕು ಕಿತ್ತಲೆ ಸಿಕ್ಕಿತು ತಿನ್ನುತ್ತ....ಹರಟುತ್ತ ಬರುವಾಗ ಜೋಡಿ ಮನೆ ಎಸ್ಟೇಟ್ ಗೆ ದಾರಿ ಎಂಬ ಬೋರ್ಡು ಕಾಣಿಸಿತು...ನಾವು ಚಿಕ್ಕವರಿಂದಾಗಿಂದಲು ಆ ಎಸ್ಟೇಟ್ ದಾರಿ ಕಂಡಿದ್ದೆವೇ ಹೊರತು ಒಳಗೆ ಹೋಗುವ ದೈರ್ಯ ಮಾಡಿರಲಿಲ್ಲ....ಅಲ್ಲಿ ಕೆಲಸಕ್ಕೆ ಹೋಗೋ ಅನೇಕರು ಹೇಳಿದ ಕಿವಿ ನಿಮಿರಿಸುವ ಎಸ್ಟೇಟ್ ಬಗೆಗಿನ ಕಥೆಗಳಷ್ಟೇ ಕೇಳಿದ್ದೆವು .....

ಬಲಕ್ಕೆ ಹೋಗುವ ರಸ್ತೆಯಲ್ಲಿ ಹೋದರೆ ನಮ್ಮ ಊರಿಗೆ ಹೋಗೋ ರಸ್ತೆ ....ಎಡಕ್ಕೆ ಹೋದರೆ ಜೋಡಿಮನೆ ಎಸ್ಟೇಟ್ ಬಂಗಲೆಗೆ ಹೋಗುವ ರಸ್ತೆ....

ಆ ಎರಡು ರಸ್ತೆ ಕೂಡುವ ಮದ್ಯದಲ್ಲಿ ಒಂದು ಆಲದ ಮರದ ಕಟ್ಟೇ ಇದೆ ‍ಅಲ್ಲೇ ಸ್ವಲ್ಪ ಹೊತ್ತು ಕುಳಿತೆವು ....ರಾಮು ಇದ್ದಕ್ಕಿದ್ದಂತೆ ನನ್ನ ಕರೆದು ... ಲೋ ಶಿವು ಈ ಎಸ್ಟೇಟ್ ಒಳಗೆ ಒಂದ್ ಸಲಾನು ನೋಡೇ ಇಲ್ವಲ್ಲೋ .....
ನನಗೆ ಅಮ್ಮ  ಹೇಳಿದ್ದು ನೆನಪಾಯ್ತು....ರಾಮು ಈ ಎಸ್ಟೇಟ್ ನಲ್ಲಿ ಈಗ ಯಾರು ಇಲ್ವಂತೆ ಎಲ್ಲಾ ಬೆಂಗಳೂರಲ್ಲಿ ಇದಾರಂತೆ ತೋಟ ನೋಡ್ಕೊಳ್ಕೋಕೆ ಮ್ಯಾನೇಜರ್ ನೇಮಕ ಮಾಡಿದಾರಂತೆ ಅಮ್ಮ ಹೇಳಿದ್ರು......ಎಂದೆ...
    ಅದಕ್ಕವನು ಲೋ ಶಿವು ಹಾಗಾದ್ರೆ ಇನ್ನು ಒಳ್ಳೇದೇ ಆಯ್ತಲ್ಲೋ ಈ ಮ್ಯಾನೇಜರ್ ಯಾವಾಗ್ಲೂ ಇಲ್ಲೇ ಇರಲ್ಲ...ನಮ್ ಅಪ್ಪ ಹೇಳ್ತಿದ್ರು ಎಸ್ಟೇಟ್ ಒಳಗಿರೋ ಬಂಗಲೇ ರಾಜರ ಕಾಲದ್ದಂತೆ ....ಈ ಎಸ್ಟೇಟ್ ನ ರಾಜರಿಂದ ಎಸ್ಟೇಟ್ ಓನರ್ ಶೆಟ್ರು ಕೊಂಡುಕೊಂಡ್ರಂತೆ...ಆ ಬಂಗಲೆ ಹೇಗಿದೆ ಅಂತ ಒಂದ್ಸಲಾ ಆದ್ರು ನೋಡ್ಬೇಕು ಕಣೋ ಬಾರೋ ಹೋಗೋಣ ....ಎಂದ
ಇವಾಗ ಮದ್ಯಾಹ್ನ ಊಟ ಮಾಡ್ಕೊಂಡ್ ಹೊರಟು ಬಂದ್ರೆ ಆಯ್ತು ಬಾ ಮೊದ್ಲು ಮನೆಗೆ ಹೋಗೋಣ....ಎಂದು ಇಬ್ಬರು ಮನೆಗೆ ಹೊರಟೆವು...
ಊಟ ಮುಗಿಸಿ....ಅಮ್ಮನಿಗೆ  ಬಂಗಲೆಗೆ ಹೊರಟ ವಿಷಯ ಹೇಳಿದರೆ ಬೇಡವೆನ್ನುತ್ತಾರೆಂದು ಹೇಳಲಿಲ್ಲ...ಗೋಡೆಯ ಗೂಟಕ್ಕೆ ನೇತು ಹಾಕಿದ್ದ ಛತ್ರಿ ತೆಗೆದುಕೊಂಡು ಹೊರಟೆ ....ಎಲ್ಲಿಗೋ... ಎಂದರು ಅಮ್ಮ.. ರಾಮು ಮನೆಗೆ ಎಂದು ಹೊರಟೆ....ಆಗಲೇ ಊಟ ಮುಗಿಸಿ...ಛತ್ರಿಯೊಂದಿಗೆ ಟಾರ್ಚ್ ಕೂಡ ತಂದಿದ್ದ ರಾಮು .....ಟಾರ್ಚ್ ಎಂತಕೋ ಮರಾಯ ಅಂದ್ರೆ ಬಂಗಲೇ ಬೀಗ ಹಾಕಿರುತ್ತೆ ಅಲ್ವ ಒಳಗೆ ಹೋಗೊಕೆ ಆಗುತ್ತೋ ಇಲ್ವೋ...ಕಿಟಕಿ ಇಂದ ಬೆಳಕು ಬಿಟ್ರೆ ಒಳಗೇನೇನಿದೆ ಅಂತ ಕಾಣುತ್ತಲ್ಲ ಅದ್ಕೆ.....ಎಂದ...

ಸರಿ ನಡೀ ಮಾರಾಯ ಆದ್ರೆ ಅಲ್ಲಿಂದ ಬೇಗ ಹೊರ್ಡ್ಬೇಕು ಮಳೆ ಬರೋ ಹಾಗಿದೆ....ಎಂದೆ

ಎಸ್ಟೇಟ್ ಬೋರ್ಡು ಇರುವ ರಸ್ತೆಯಲ್ಲಿ ಹೋದೆವು ....ಎಸ್ಟೇಟ್ ಗೆ ಹೋಗುವ ರಸ್ತೆಯಲ್ಲಿ ಇದೇ ಮೊದಲ ಬಾರಿ ಹೋಗುತ್ತಿರೋದು....ಯಾರಾದರು ಎಲ್ಲಿಗೆ ಹೊಗ್ತಿದ್ದೀರಾ ಅಂತ ಗದರಿಸಿದರೆ...ಎಸ್ಟೇಟ್ ಕಾಯೋಕೇ ಅಂತಾನೇ ದೊಡ್ಡ ದೊಡ್ಡ ನಾಯಿಗಳಿದ್ದಾವಂತೆ ಅವೆಲ್ಲಾದರು ಬಂದರೆ ಏನು ಗತಿ....ಹಾಗೇ ತೋಟದಲ್ಲಿ ಜಿಂಕೆಗಳು ಬರ್ತಾವಂತೆ....ಹೀಗೆ ನಾನು ರಾಮು ಮಾತಾಡುತ್ತ ದಾರಿ ಸಾಗಿತು....ಎಸ್ಟೇಟ್ ಪ್ರಾರಂಭಕ್ಕೂ ಮುನ್ನ ದೊಡ್ಡ ಗೇಟು ಬೀಗ ಜಡಿದಿತ್ತು....ನಾವು ಗೇಟು ಹತ್ತಿ ನೆಗೆದೆವು...ಸ್ವಲ್ಪ ದೂರ ನೆಡೆಯುತಿದ್ದಂತೆ ಮತ್ತೊಂದು ದೊಡ್ಡ ಗೇಟ್ ರಸ್ತೆಯ ಎಡಕ್ಕೆ ಸಿಕ್ಕಿತು....ಆ ಗೇಟಿನಿಂದ ಇಣುಕಿದಾಗ ಕಂಡದ್ದು ನಾವು ಕುತೂಹಲದಿಂದ ನೋಡಬೇಕೆಂದು ಬಂದ  ಒಂದು ದೊಡ್ಡ  ಬಂಗಲೆ...ರಾಮು ಕೂಡ ನಾನು ನೋಡ್ತಿನಿ ಈ ಕಡೆ ಬಾರೋ ಶಿವು ಅಂತ ನನ್ನ ತಳ್ಳಿ ಅವನು ಗೇಟಿನಿಂದ ಇಣುಕಿ ಬಂಗಲೆ ಕಣ್ತುಂಬಿಕೊಂಡ....


ಸರಿ ನೊಡಿದ್ದಾಯ್ತಲ್ಲ ನಡಿ ರಾಮು ಹೋಗೋಣ ಎಂದೆ ...ಲೋ ಶಿವು ಇಲ್ಲಿವರ್ಗೂ ಬಂದಿದಿವಿ ಒಳಗೆ ಏನಿದೆ ಅಂತ ನೋಡ್ಕೊಂಡೆ ಹೋಗೋಣ ಕಣೋ ಹೇಗಿದ್ರು ಈಗ ಯಾರೂ ವಾಸ ಇಲ್ಚಲ್ಲ ಈ ಬಂಗಲೆನಲ್ಲಿ ಯಾರು ಕೇಳೊಲ್ಲ....ಬಾರೊ ಬ‍ಾರೋ ಅಂತ ಅಂಗಲಾಚ ತೊಡಗಿದ .....
ಸರಿ ನಡೀ ಮಾರಾಯ ಎಂದು ಗೇಟು ಹತ್ತಿ ಬಂಗಲೆ ಆವರಣಕ್ಕೆ ಬಂದೆವು .....
ಅಬ್ಬಾ ಅಬ್ಬಾ ....ಎಷ್ಟು ದೊಡ್ಡ ಬಂಗಲೆ....ರಾಜನ ಕಾಲದ್ದಂತೆ ಆ ಮೇಲಿನ ಅಂತಸ್ತಿನಲ್ಲಿರೋ ಸೂರ್ಯನ ಚಿತ್ರ ನೋಡು ಶಿವು ಎಂದ ರಾಮು....ಹೊರಗೆ ಮುಖ್ಯ ದ್ವಾರದ ಎರಡು ಭಾಗಕ್ಕೂ ಸಿಂಹದ ಮುಖವಿರುವ ಪ್ರಾಣಿ ಗೊಂಬೆ  ನಿಂತಿವೆ... ಬಹಳಾ ಹಿಂದಿನ  ಕಾಲದ ಹತ್ತು ಅಡಿಗೂ ಮೀರಿದ ದೊಡ್ಡ ಬಾಗಿಲು ...ಅಬ್ಬಾ ಎಂದು ಆಶ್ಚರ್ಯ ದಿಂದ ಅದನ್ನೇ ನೋಡುತ್ತಾ ನಿಂತೆವು....
ಬೌ ....ಬೌ .... ಎಂದು ನಾಯಿ ಬೊಗಳಿದ ಶಬ್ಥವಾಯ್ತು...
ಯಾರೋ ಬಂದ್ರು ಅಂತ ಕಾಣುತ್ತೆ....ನಡಿಯೋ ಎಲ್ಲಾದರು ಅವುತ್ಕೊಂಡು ಕೂರೋಣ....ಎಂದ ರಾಮು ಸರಿ ಎಂದು ಬಂಗಲೆಯ ಆಸು ಪಾಸು ಓಡಾಡಿ  ಚಿಲಕವಾಕಿದ್ದ ಒಂದು ಹಿಂದಿನ ಬಾಗಿಲು ತೆಗೆದು ಒಳ ಹೊಕ್ಕೆವು....ಒಳ ಹೊಕ್ಕ ಕೂಡಲೇ ಕಪ್ಪಗಾಗಿದ್ದ ಧೋ ಎಂದು ಮಳೆ ಶುರುವಿಟ್ಟಿತು...
ಬೊಗಳುತಿದ್ದ ನಾಯಿ ಶಬ್ದವು ನಿಂತಿತು...

ಒಳ ಹೊಕ್ಕ ಕೂಡಲೆ ಬಾಗಿಲನ್ನ ಗಾಬರಿಯಿಂದ ಮುಚ್ಚಿದೆವು....ಮುಂದೆ ಹೆಜ್ಜೆ ಇಡೋಕು ಕಾಣದಂತಹ ಕತ್ತಲೆ...ರಾಮು ತಾನು ತಂದಿದ್ದ ಟಾರ್ಚ್ ಆನ್ ಮಾಡಿದ ...ಆ ಟಾರ್ಚ್ ನ ಬೆಳಕನ್ನ ಸುತ್ತಲು ಹಾಯಿಸುತ್ತ ಬಂಗಲೆಯ ಭವ್ಯತೆಯನ್ನ ಕಣ್ತುಂಬಿಕೊಂಡೆವು ...ಚಿತ್ತಾರಗಳಿಂದ ಕೂಡಿದ ದೊಡ್ಡ ದೊಡ್ಡ ಕಂಬಗಳು....ಗೋಡೆಯ ಮೇಲೆ ಜಿಂಕೆಯ ತಲೆಯಾಕಾರದ ಗೊಂಬೆ ಕೊಂಬುಗಳು ....ಆಗಿನ ಕಾಲದ ಕುರ್ಚಿ ...ಟೇಬಲ್ಲುಗಳು....ಮೇಲಿನ ಮಹಡಿಗೆ ಹೋಗುವ ಮೆಟ್ಟಿಲು ....ಇದಕ್ಕು ಮೊದಲು ಅಂತಸ್ತಿನ ಮನೆಗಳನ್ನೇ ನೋಡದ ನಮಗೆ ಮೇಲೆ ಹೋಗುವ ಬಯಕೆಯಾಯಿತು....ಮೆಟ್ಟಿಲ ಮೇಲೆ ಟಾರ್ಚಿನ ಬೆಳಕು ಚೆಲ್ಲುತ್ತಾ ಮೇಲೆ ಹೊರಟೆವು ಮರದಿಂದ ಮಾಡಿದ ಮೆಟ್ಟಿಲುಗಳು...ಹತ್ತಿ ಮೇಲೆ ಬಂದ ನಮಗೆ ಒಂದು ದೊಡ್ಡ ಕೊಠಡಿ ಸಿಕ್ಕಿತು...ಅದರಲ್ಲಿ ವಿಶಾಲವಾದ ಮಂಚ ...ಒಂದು ಕುರ್ಚಿ ....ಚಿಕ್ಕದಾದ ಟೇಬಲ್ಲು ಕಾಣಿಸಿತು...ಎಲ್ಲಾ ಧೂಳಿಡಿದು ಜೇಡರ ಬಲೆ ಕಟ್ಟಿತ್ತು....ಟಾರ್ಚ್ ನಿಂದ ಆಚೆ ಈಚೆ ಬೆಳಕು ಹಾಯಿಸುವಾಗ ಕರೆಂಟಿನ ಸ್ವಿಚ್ ಸಿಕ್ಕಿತು ಅದನ್ನ ಆನ್ ಮಾಡಿದ ಕೂಡಲೆ ರೂಮಿನ ತುಂಬೆಲ್ಲ ಬೆಳಕು ಆ ಬೆಳಕಿಗೆ ಇಲಿಗಳೆಲ್ಲ ಶಬ್ಧ ಮಾಡುತ್ತ ಅತ್ತಿಂದಿತ್ತ ಇತ್ತಿಂದತ್ತ ಒಡಲು ಶುರು ಮಾಡಿದವು ತಕ್ಷಣ ಕ್ಕೆ ನಮಗೆ ಗಾಬರಿಯಾದರು ಆ ನಂತರ ಇಲಿಯೆಂದು ಸಾವರಿಸಿಕೊಂಡೆವು.....ಹಾಗೇ ನಾನು ಎಲ್ಲಾ ವಸ್ತುಗಳನ್ನ ಮುಟ್ಟಿ ನೋಡುತಿದ್ದಾಗ ಟೇಬಲ್ಲಿನ ಮೇಲಿದ್ದ ಪುಸ್ತಕವೊಂದು ಅದರ ಮೇಲಿನ ದಪ್ಪನೆಯ ವಿವಿಧ ಚಿತ್ರಗಳಿಂದ ಗಮನ ಸೆಳೆಯಿತು...ಅದರ ಒಳ ಪುಟಗಳನ್ನ ತೆಗೆದೊಡನೆ....ಪೇಜಿನ ತುದಿಯೆಲ್ಲ ಗೆದ್ದಲು ಹುಳವೋ ಎಂಥದೋ ತಿಂದಿದ್ದವು ಆದರೆ ಅದರಲ್ಲಿನ ಅಕ್ಷರ ಸ್ಪಷ್ಟವಾಗಿ ಕಾಣುತಿದ್ದವು...ಆ ಪುಸ್ತಕ ತೆರೆದಂತೆ ಅದರಲ್ಲಿ ಒಂದೆರಡು ಪುಟ ಕೆಳಗೆ ಬಿತ್ತು...

" ಗೆಳೆಯ ಚೆಲುವರಾಯ ಶೆಟ್ಟಿಗೆ  ನಿನ್ನ ಗೆಳೆಯ ರಂಗಾಶೆಟ್ಟಿ ಮಾಡುವ ನಮಸ್ಕಾರಗಳು...
ನಾನು ಯಾವ ಬಾಯಿಂದ ನಿನಗೆ ಕ್ಷಮೆ ಕೇಳ ಬೇಕೋ ನನಗೆ ತಿಳಿಯುತ್ತಿಲ್ಲ ನಿನ್ನ ಎದುರಿಗೆ ಮುಖಕೊಟ್ಟು ನಿಲ್ಲಲು ನಾನು ಅಸಹಾಯಕನಾಗಿದ್ದೇನೆ ಅದಕ್ಕೇ ಈ ಪತ್ರದಲ್ಲಿ ನೆಡೆದ ವಿಷಯವೆಲ್ಲ ತಿಳಿಸಿ ಕ್ಷಮೆ ಬೇಡುತಿದ್ದೇನೆ.......ನಾನು ನೀನು ಬಾಲ್ಯದಿಂದ ಗೆಳೆಯರು ಒಂದೇ ಊರು ಉಡುಪಿಯಲ್ಲಿ ಹುಟ್ಟಿದೆವು ಒಂದೇ ಶಾಲೆಯಲ್ಲಿ ಓದಿದೆವು...ಕೊನೆಗೆ ಇಬ್ಬರೂ ಅಪ್ಪ ಮಾಡುತಿದ್ದ  ಮೀನು ಹಿಡಿಯುವರಿಂದ ಮೀನು ಖರೀದಿಸಿ ದೇಶದ ಎಲ್ಲಾ ರಾಜ್ಯಗಳಿಗೂ ಕಳಿಸೋ ದೊಡ್ಡ ಕಂಟ್ರಾಕ್ಟ್ ಗಳು ಸಿಗೋಕೆ ಪ್ರಾರಂಭವಾದ ಮೇಲೆ ನಮ್ಮ ಸ್ಥಿತಿ ಮೊದಲಿಗಿಂತ ಇನ್ನು ಉತ್ತಮವಾಯ್ತು...ನಮ್ಮ ಬಿಸಿನೆಸ್ ನ್ನು ಇನ್ನು ವಿಸ್ತರಿಸಿದರೆ ಇನ್ನು ಹೆಚ್ಚು ಲಾಭ ಬರುತ್ತೆಂದು ನಿನ್ನ ತಲೆ ಕೆಡಿಸಿ ನಾನೇ....ವಿದೇಶಕ್ಕೆ ಮೀನು ಕಳಿಸುವ ದೊಡ್ಡ ಕಂಟ್ರಾಕ್ಟ್  ಅದಕ್ಕೆ ಇಬ್ಬರ ಸಾಕಷ್ಟು ಹಣ ಖರ್ಚುಮಾಡಿ ಶುರುಮಾಡಿದೆವು ...ಅದರಲ್ಲಿ ದಿನೇ ದಿನೇ ಹೆಚ್ಚುತಿದ್ದ ಲಾಭದಲ್ಲಿ ನಿನಗೂ ಅರ್ಧ ಪಾಲು ಕೊಡಲು ಮನಸ್ಸು ಒಪ್ಪಲಿಲ್ಲ...ಆ ಪೂರ್ತಿ ಲಾಭ ನಾನೇ ತೆಗೆದು ಕೊಂಡರೆ ನಾನೇ ಶ್ರೀಮಂತ ನಾಗ ಬಹುದೆಂಬ ದುರಾಸೆಯಿಂದ ನಿನಗೆ ಕಾಂಟ್ರಾಕ್ಟ್ ಪೇಪರುಗಳಲ್ಲಿ ಮೋಸದ ರುಜು ಹಾಕಿಸಿ ನಿನಗೆ ತಿಳಿಯದಂತೆ ಎಲ್ಲಾ ಲಾಭವನ್ನ ಒಬ್ಬನೇ ತೆಗೆದುಕೊಂಡು ಬಿಸಿನೆಸ್ ನಲ್ಲಿ ನಿನ್ನ ಪಾಲುದಾರಿಕೆಯ ಆಸ್ತಿಯನ್ನು ನಾನೇ ಮೋಸದಿಂದ ಮಾರಿ ಬಂದ ಹಣದಿಂದ ಸಕಲೇಶಪುರಕ್ಕೆ ಬಂದು ದೊಡ್ಡ ಎಸ್ಟೇಟು ಖರೀದಿಸಿದೆ....ಯಾರೋ ರಾಜವಂಶಸ್ಥರಂತೆ ಮಾರಿ ಫಾರಿನ್ ಗೆ ಹೋಗುವುದರಲ್ಲಿದ್ದರು ಅವರಿಂದ ಈ ಬಂಗಲೆ ...ಎಸ್ಟೇಟ್ ಎಲ್ಲಾ ಖರೀದಿಸಿದೆ...ಇಲ್ಲಿಗೆ ಬಂದ ಮೊದ ಮೊದಲ ದಿನಗಳು ನನ್ನ ಒಳಗಿನ ದುರಹಂಕಾರ ನೆಮ್ಮದಿ ಎಂದು ತೋರಿತಾದರು....ಕಳೆದ ವರ್ಷ ಮಳೆಗಾಲದಲ್ಲಿ ಹೆಂಡತಿ ಮಕ್ಕಳು ಸಿಟಿಯಿಂದ ಎಸ್ಟೇಟ್ ಗೆ ಕಾರಿನಲ್ಲಿ ಬರುವಾಗ ರಸ್ತೆಯಲ್ಲಿ ಮರ ಕರೆಂಟ್ ಕಂಬದ ಮೇಲೆ ಬಿದ್ದು  ವಿದ್ಯುತ್  ತಂತಿಗಳು ರಸ್ತೆಯಲ್ಲೇ ತೂಗುತಿದ್ದದನ್ನ ಗೊತ್ತಾಗದೇ ಕಾರು ಬರುವಾಗ ಕಾರಿಗೆ ತಾಗಿ ಬೆಂಕಿ ಹೊತ್ತಿಕೊಂಡು ಮಗ ....ಹೆಂಡತಿ ಕಾರಿನೊಳಗೆ ಸುಟ್ಟು ಹೋದರು...ಇದಾದ ಮೇಲೆ...ನಾನು ಸಂಪಾದಿಸಿದ್ದನ್ನ ತಿನ್ನೋಕೆ ಹೆಂಡತಿ ಮಕ್ಕಳೇ ಇಲ್ಲವಾದ ಮೇಲೆ ಇನ್ನೆಲ್ಲಿಯ ನೆಮ್ಮದಿ ....ಜೀವನದಲ್ಲಿ ಒಂಟಿ ಆಗಿ ಹೋದೇ.........ನೆಡೆದ ವಿಷಯ ತಿಳಿಸಿದರೆ ನೀನೇನೋ ಕ್ಷಮಿಸ್ತೀಯಾ ನನಗೆ ನಿನ್ನ ಮುಂದೆ ಬರಲು ಯಾವ ಮುಖವಿಲ್ಲ....ದಯಮಾಡಿ ನನ್ನನ್ನು ಕ್ಷಮಿಸು ಗೆಳೆಯ ಲಾಯರ್ ನನ್ನು ಕರೆಸಿ ನಿನ್ನ ಹೆಸರಿಗೆ ವಿಲ್ ಮಾಡಿಸಿದ್ದೇನೆ ....ಅದು ಸ್ವಲ್ಪದಿನ ಲಾಯರ್ ಮುಖಾಂತರ ನಿನ್ನ ಕೈ ಸೇರುತ್ತೆ....ಸಾದ್ಯವಾದರೆ ಕ್ಷಮಿಸು ಇಂತಿನಿನ್ನ ಗೆಳೆಯ ರಂಗಾಶೆಟ್ಟಿ...."

ಅಷ್ಟ ರಲ್ಲಿ ರಾತ್ರಿ ಏಳರ ಸಮಯ ಪತ್ರ ಓದಿ ಮುಗಿಸಿದ ಶಿವುಗೆ ...ರಾಮು ಲೋ ಲೇಟ್ ಆಗಿದೆ ಹೊರಡೋಣ ಬಾರೋ ಎಂದು ಮೆಟ್ಟಿಲಿಳಿದು ಬಾಗಿಲ ಬಳಿ ಬಂದು ಬಾಗಿಲು ತೆಗೆಯಲು ಪ್ರಯತ್ನಿಸಿ ಆಗದೇ ಬಂಗಲೇ ಒಳಗೆ ಹೆದರುತ್ತ...ಕುಳಿತಿದ್ದೆವು....ಬರುವಾಗ ಬಾಗಿಲು ತೆಗೆಯಲು ಸುಲಭವಾಗಿ ಬಂತು ...ಈಗ ಯಾಕೆ ತೆಗೆಯಲಾಗುತ್ತಿಲ್ಲ ಎಂದು ಗಾಬರಿಯಾಯ್ತು....ಈ ಮನೆಯಲ್ಲಿ ದೆವ್ವ ಇದೆ ಈ ಮನೆ ಓನರ್ ನೇಣು ಹಾಕಿಕೊಂಡು ಸತ್ತಿದ್ನಂತೆ ಅವನೇ ಈ ರಂಗಾಶೆಟ್ಟಿ ಅವನ ಪೇಪರ್ ಓದಿದ್ದಕ್ಕೆ ಏನಾದರು ಸೇಡುತೀರಿಸಿಕೊಳ್ಳೋಕೆ ಬಾಗಿಲು ತೆಗೆಯೋಕೆ ಬಿಡ್ತಿಲ್ವ ಅನೇಕ ಆಲೋಚನೆಗಳು ಮನಸ್ಸಿನಲ್ಲಿ.....
ಆದರೆ ವಾಸ್ತವವಾಗಿ ಆಗಿರುವುದೇನೆಂದರೆ  ರಾತ್ರಿಯ ವಾಚ್ ಮ್ಯಾನ್  ಬಂಗಲೆಯ ಹಿಂಬಾಗದ ಬಾಗಿಲು ತೆರೆದಿರುವುದನ್ನ ನೋಡಿ ಬಾಗಿಲು ಎಳೆದು ಚಿಲಕ ಹಾಕಿಕೊಂಡು ಹೋಗಿದ್ದಾನೆ... ನಾವು ಬಾಗಿಲು ತೆಗೆಯುವ ಎಲ್ಲಾ ಪ್ರಯತ್ನ ಮಾಡಿ ಸಾಧ್ಯ ವಾಗದೇ ಇದ್ದಾಗ  ಬಾಗಿಲು ಬಡಿಯ ತೊಡಗಿದೆವು ಯಾರಾದ್ರು ಇದ್ರೆ ಕಾಪಾಡಿ ....ಯಾರಾದ್ರು ಇದ್ರೆ ಕಾಪಾಡಿ ಎಂದು ಚೀರುತ್ತ.... ಗೇಟಿನ ಹೊರಗಿದ್ದ ವಾಚ್ ಮ್ಯಾನ್ ಗೆ ನಮ್ಮ ಧ್ವನಿ ಕೇಳಿಸಿ ಓಡಿ ಬಂದು ಬಾಗಿಲು ತೆಗೆದು ...ಚೆನ್ನಾಗಿ ಬೈದು ಮನೆಯವರೆಗೂ ಬಂದು ಕಳುಹಿಸಿ ಹೋದ....


                                              ರಚನೆ 

                                  ಶ್ಯಾಮ್ ಪ್ರಸಾದ್ ಭಟ್