ಬೆಳಗ್ಗೆ...ಬೇಗ ಎದ್ದು ಶಾಲೆಗೆ ಹೊರಡ ಬೇಕಿದ್ದ ಲಕ್ಷ್ಮಿ ಯಾಕೋ....ಇನ್ನು ಎದ್ದಿರಲಿಲ್ಲ...ಹಾಸಿಗೆಯಲ್ಲಿ ಹೊರಳಾಡಿ ಕೊರಗುತಿದ್ದಳು...
ಅಷ್ಟೊತ್ತಿಗಾಗಲೇ ಅವರ ಅಮ್ಮ....
ಲಕ್ಕಿ....ಲಕ್ಕಿ ....ಹೊತ್ತು ನೋಡಲ್ಲಿ.....ಶಾಲೆಗ್ ಹೋಗಲ್ವ ಮರಿ......ಬೇಗ ಎದ್ದೇಳು... ಬೇಗ.....ಎನ್ನುತ್ತಲೇ....ಹತ್ತಿರ ಬಂದವರೆ..ತಟ್ಟಿ ಎಬ್ಬಿಸಲು ಹೋದರು .....
ಮೈ ಬಿಸಿ ಇದ್ದಂತೆ ಕಂಡಿತು ಕೂಡಲೆ....ಲಕ್ಕಿ ಎದ್ದೇಳು ಮರಿ ಎಂದು ಕುತ್ತಿಗೆ ಬಾಗಕ್ಕೆ ..ಹಣೆ ಗೆ ಕೈ ಇಟ್ಟು ನೋಡಿ....ಅಯ್ಯೋ ಏನೇ ಇದು ಪುಟ್ಟಕ್ಕ....ಜ್ವರ ಇಷ್ಟೊಂದು ಬೆಂದ್ ಹೋಗ್ತಿದಿಯಲೇ...
ಎನ್ನುತ್ತಾ ರೂಮಿಂದ ಗೊಣಗುತ್ತಲೇ....ಛತ್ರಿ ತಕ್ಕೊಂಡ್ ಹೋಗ್ ಅಂದ್ರೇ ಕೇಳಲ್ಲ....ತಗೋಂಡ್ ಹೋದ್ರೆ ಎಲ್ಲಿ ಬೇಕ್ ಅಲ್ಲೇ ಮರ್ತ್ಕೊಂಡ್ ಬಿಟ್ ಬರೋದ್....ನೋಡಿಲ್ಲಿ ಈಗ ಜ್ವರ....ಎಲ್ಲಾ ನನ್ ಕರ್ಮ....ಎಂದು ತಲೆ ಚೆಚ್ಚೆಕೊಳ್ಳುತ್ತ...ರೂಮಿಂದ ಹೊರ ಬಂದು....ಇನ್ನೇನು ಸೀದೋಗುತಿದ್ದ ರೊಟ್ಟಿ ಯನ್ನ.....ಓಡಿ ಹೋಗಿ ಮಗುಚಿದರು..
ಅದಾಗ ಮಳೆಗಾಲ....ಮಲೆನಾಡಲ್ಲಿ ಮಳೆಗಾಲದಲ್ಲಿ ಕೇಳಬೇಕೆ...ಬಿಡುವಿಲ್ಲದಂತೆ ಸುರಿಯುತ್ತದೆ....
ಬಿಡುವು ಕೊಟ್ಟಾಗ ಕೆಲಸ ಮಾಡಿಕೊಳ್ಳಬೇಕಷ್ಟೆ....
ಶಾಲೆ ಗಳು ಪ್ರಾರಂಭ ಆಗೋದು ಈ ಮಳೆಗಾಲದ ಸಮಯದಲ್ಲೇ....
ಲಕ್ಷ್ಮಿ 8 ನೇ ತರಗತಿ ಓದುತಿದ್ದ ಹುಡುಗಿ...ಹೈಸ್ಕೂಲ್ ಗೆ
ಕೆಂಚನಹಳ್ಳಿ....ಯಿಂದ ....ಮಾವಿನ ಕೊಪ್ಪಲಿನ ವರೆಗೂ ನೆಡೆದು ಸಾಗಬೇಕಿತ್ತು.. ಪ್ರಾಥಮಿಕ ಶಾಲೆ ಕೆಂಚನಹಳ್ಳಿಯಲ್ಲೇ....ಇದೆ.
ಎರಡು ವರ್ಷದಿಂದ ಹೀಗೊಂದು ಸುದ್ದಿ ಊರಿನಲ್ಲಿ ಹಬ್ಬಿತ್ತು ....
ಮಕ್ಕಳು ಕಳ್ರು....ಊರೋಳಗ್ ಬಂದಿದರಾಂತೆ....
ಕೆಂಪು ಕಾರಲ್ಲೇ ಬರ್ತಾರಂತೆ....
ಈ ಚಾಕಲೇಟ್ ....ಐಸ್ ಕ್ರೀಮ್ ಲಿ ಮೂರ್ಚೆ ಹೋಗೋ ಔಷಧಿ ಹಾಕಿ ಎತ್ಕಂಡ್ ಹೋಗ್ತಾರಂತೆ...ಕಿಡ್ನಿ ...ಹೃದಯ ಮಾರ್ಕೋತರಂತೆ.....
ಈ ಸುದ್ದಿ ಗೆ ಬೆದರಿದ ಎಷ್ಟೋ ಕುಟುಂಬ ಗಳು ತಮ್ಮ ತಮ್ಮ ಮಕ್ಕಳನ್ನ .. ಹೆಣ್ಣು ಮಕ್ಕಳನ್ನು ಹೈಸ್ಕೂಲ್ ಮೆಟ್ಟಿಲನ್ನೇ ಹತ್ತಿಸಲಿಲ್ಲ....ಗಂಡು ಮಕ್ಕಳನ್ನ ಕಳಿಸೋಕೆ ಭಯವೇನೊ ಇದ್ದರು ಗಂಡು ಕೂಸಲ್ಲವೇ ಗಟ್ಟಿಯಾಗಿರ್ತದೆ ...ಹೇಗಾದರು ಅನಾಹುತ ತಪ್ಪಿಸಿ ಕೊಳ್ತದೆ ಅನ್ನೋ ದೈರ್ಯದಲ್ಲಿ ಕಳುಹಿಸುತಿದ್ದರು...
ಆದರೆ ಲಕ್ಷ್ಮಿ ಅಪ್ಪ ಅಮ್ಮ ರಮೇಶಪ್ಪನದು ...ವಿಶಾಲಾಕ್ಷಮ್ಮ ನದು ಬಲು ಗಟ್ಟಿ ಮನಸ್ಸು....ಯಾರ್ ಎತ್ಕಂಡ್ ಹೋಗ್ತಾರೆ....ಎಲ್ಲೋ ಒಂದೆರಡ್ ಕಡೆ ಆಯ್ತು ಅಂತ ಎಲ್ಲಾ ಕಡೆ ಆಗುತ್ತಾ....
ಆ ಕಾರಣ ಕೊಟ್ಟು ಮಕ್ಳು ಓದದ್ನ ತಪ್ಪಿಸ್ ಬಾರ್ದು ನಾವೇ ದೈರ್ಯಗೆಟ್ಟರೆ ಹೆಂಗೆ.....ಎಂದು ಪ್ರಶ್ನೆ ಮಾಡಿ ನಿಲ್ಲೋ ವರ್ಚಸ್ಸು..
ಊರಿನವರು ಭಯ ಪಡಲು ಕಾರಣವಿತ್ತು...
ಆಗಾಗಾ ಊರಿನಲ್ಲಿ ಕೆಂಪು ಕಾರುಗಳು ಓಡಾಡುತಿದ್ದವು....
ಹೀಗೇ ಒಂದು ದಿನ.....
ಊರಿಗೆ ಆಗಾಗಾ ಬೇಸಿಗೆಯಲ್ಲಿ ಬರುತಿದ್ದ....ಏಸ್ ಕ್ರೀಂ
ರಂಗಣ್ಣ ಒಮ್ಮೆ ಲಕ್ಷ್ಮಿ ಮನೆಯ ಪಕ್ಕದ ಮನೆಯ ತನ್ವಿತ
3 ವರ್ಷದ ಹುಡುಗಿ....
ರಂಗಣ್ಣ ನ ಐಸ್ ಕ್ರೀಂ ಸೈಕಲ್ ಟ್ರಿಣ್.... ಟ್ರೀಣ್ ... ಪಾಂಕು ....ಪಾಂಕು ಎಂದು ಶಬ್ಧ ಮಾಡಿದೊಡನೆ...ಓಡಿ ಬಂದು ಚಿಕ್ಕವಳಿದ್ದಾಗಿನಿಂದ ಐಕೀಮು ಐಕೀಮು ಎಂದು ಕುಣಿಯುತಿದ್ದಳು... ಮಕ್ಕಳಿಲ್ಲದ ರಂಗಣ್ಣ ನಿಗೂ ತನ್ವಿತಾಳನ್ನ ಕಂಡರೆ ಎಲ್ಲಿಲ್ಲದ...ಪ್ರೀತಿ
ಒಂದು ಬೇಸಿಗೆಯ ಮಧ್ಯಾಹ್ನ ತನ್ವಿತ ತನ್ನ ಮನೆ ಮುಂದಿನ ಮಣ್ಣಿನ ರಾಶಿಯಲ್ಲಿ ಆಡುತಿದ್ದಳು....
ರಂಗಣ್ಣ ಅದೇ ಸಮಯಕ್ಕೆ...ತನ್ನ ಐಸ್ ಕ್ರೀಂ ಹೊತ್ತುತಂದ ಸೈಕಲ್ ಸದ್ದು ಮಾಡುತ್ತ....ಬಂದ...
ಸದ್ದು ಕೇಳಿದೊಡನೆ....ರಂಗಣ್ಣನ ಬಳಿಗೆ ಓಡಿದಳು....
ರಂಗು ಮಾಮ....ರಂಗು ಮಾಮ....ಐಸ್ ಕ್ರೀಮು...ಎಂದು ಕುಣಿಯುತಿತ್ತು...
ಅಪ್ಪ ಎಲ್ಲಿ ಹೋದ್ರು ಪುಟ್ಟಿ...ಎಂದು ಕೇಳುತ್ತಾ...
ಐಸ್ ಕ್ರೀಂ ತುಂಬಿ ಕೊಟ್ಟ .....
ಅಪ್ಪ....ಕೆಲಸಕ್ಕೆ ಹೋಗಿದೆ....
ಅಮ್ಮ...ಒಳಗಿದೆ...ಎಂದವಳೇ...ಐಸ್ ಕ್ರೀಂ ಸವಿಯುತ್ತ ಕುಣಿದಾಡುತಿತ್ತು....
ಇದಾದ ಅರ್ಧ ಗಂಟೆ ನಂತರ
ತನ್ವಿತಾಳ ಅಮ್ಮ ದಾಕ್ಷಾಯಿಣಿ ..... ತನ್ವಿತಾ .... ತನ್ವಿತಾ....
ಎಲ್ಲಿದಿಯಾ ಪುಟ್ಟಿ...ಎಂದು ಕೂಗಿದರು ... ತನ್ವಿತಾ ಎಲ್ಲೂ ಕಾಣಲಿಲ್ಲ....ಗಾಬರಿಗೊಂಡ ಅಮ್ಮ....ಅಕ್ಕ ..ಪಕ್ಕದ ಮನೆಗೆ ಹೋಗಿರಬಹುದೆಂದು ಎಲ್ಲಾ ಕಡೆ ವಿಚಾರಿಸಿದರು.
ಸಮೀಪದಲ್ಲೇ ಇದ್ದ ಅಂಗನವಾಡಿ ಕಡೆಯೂ ಹೋಗಿ ಬಂದರು....
ಮೂರು ರಸ್ತೆ ಕೂಡುವ ಸರ್ಕಲ್ ಬಳಿಯೂ ಹೋಗಿ ಬಂದರು. ಇವರ ಗಾಬರಿ ಕಂಡು ....ಸರ್ಕಲ್ ನಲ್ಲೇ ಇರುವ ಅಂಗಡಿಯ ರಾಮಣ್ಣ ನ ಬಳಿ ಬಂದರು ....ಏನಾಯ್ತಮ್ಮ....ಯಾಕ್ ಹೀಗ್ ಗಾಬರಿ ಆಗಿದ್ದೀರಿ....
ರಾಮಣ್ಣ ಮಗಳು ಕಾಣಿಸ್ತಿಲ್ಲ....ಚಾಕಲೇಟು ಅದು ಇದು ಅಂತ ಏನಾದ್ರು ತಗೋಳಕ್ ಬಂದಿದ್ಲಾ....
ಇಲ್ಲ ಪುಟ್ಟಿ ಸರ್ಕಲ್ ವರ್ಗೂ ಒಬ್ಳೇ ಬರಲ್ಲ....ಯಾವತ್ತೂ ಬಂದೂ ಇಲ್ಲ....
ರಾಮಣ್ಣ ನ ಪತ್ನಿ ಓಡಿ ಬಂದು ವಿಷಯ ತಿಳಿದು....ಅಯ್ಯೋ ಎಲ್ಲೋಯ್ತಪ್ಪ ಈ ಪುಟ್ಟಕ್ಕ.......
ಆಗ್ಲಿಂದಾ ಯಾವ್ದೋ ಕೆಂಪ್ ಕಾರು ಬೇರೆ ಮ್ಯಾಕೆ - ಕೆಳಿಕೆ ಓಡಾಡ್ತಿತ್ತು ಎಂದ ರಾಮಣ್ಣ ಅಂಗಡಿಯಿಂದ ಅಂಗಳಕ್ಕೆ ಬಂದು ತಲೆ ಮೇಲೆ ಕೈ ಹೊತ್ತು.....ಎಲ್ಲೋಯ್ತಪ್ಪ ಈ ಮಗ...ಏನಾಯ್ತಪ್ಪ ಮಗೀಗೇ..ಎಂದು ಮನದಲ್ಲೇ ನೊಂದು ಗುನುಗಿದ.
ಕೆಂಪು ಕಾರು ಎಂದೊಡನೆ ತನ್ವಿತಾಳ ಅಮ್ಮ ದಾಕ್ಷಾಯಿಣಿ ಮತ್ತಷ್ಟು ಗಾಬರಿಗೊಂಡರು....ಸರಸರನೆ ಮನೆಗೆ ಓಡಿ ...ಲ್ಯಾಂಡ್ ಲೈನ್ ನಿಂದ ಗಂಡನಿಗೆ ಫೋನ್ ಮಾಡಿದರು...
ಗಂಡನಿಗೆ ವಿಷಯ ತಿಳಿಸಿದಾಗ .....ಬೇಗ ಬರುವುದಾಗಿ ತಿಳಿಸಿದರು.
ಮನಸ್ಸು ತಡೆಯದೇ ತಾಯಿ ಹೃದಯ ನನ್ ಮಗ ಎಲ್ಲೋಯ್ತೋ ಕಾಣುಸ್ತಿಲ್ವಲಪ್ಪ....ಅಯ್ಯೋ ದೇವ್ರೇ.....ಎಂದು ಬೀದಿಯ ಬದಿಯಲ್ಲಿ ಅರಚಿಕೊಳ್ಳುತಿದ್ದಳು...
ಎದುರು ಮನೆಯ ಸೀತಮ್ಮಜ್ಜಿ...ನಿದ್ದೆ ಹೋಗಿದ್ದು ...ಗಲಾಟೆ ಕೇಳಿಸಿ ಎಚ್ಚರ ಗೊಂಡು..ಹೊರಬಂತು..
ಏನಾಯ್ತೇ.. ??
ಅಜ್ಜಿ ನನ್ ಮಗು ಕಾಣುಸ್ತಿಲ್ಲ ಕಣಜ್ಜಿ....ಎಲ್ ಹೋಯ್ತೋ ಏನೋ....ಅಯ್ಯೋ...ದೇವ್ರೇ...ಎಂದು ಅಳಲು ಶುರು ಮಾಡಿದಳು...
ಸುಮ್ಕಿರೇ....ಅತ್ರೆ ಮಗ ಬರುತ್ತಾ....ಹುಡ್ಕನ ಸುಮ್ಕಿರು....
ನಿನ್ ಗಂಡ ಬರ್ನಿಲ್ವ....?? ಎಂದೊಡನೆ...
ರಸ್ತೆಯಲ್ಲಿ ಎಂ ಎ ಟಿ ಗಾಡಿ ಶಬ್ದವಾಯಿತು...
ಬಂದವನೆ..... ಏನಾಯ್ತೇ....ಎಲ್ ಹೊದ್ಲೇ ಪಾಪು..ಎಂದಾಗ....
ನೆಡೆದದ್ದನೆಲ್ಲ...ದಾಕ್ಷಾಯಿಣಿ ಗಂಡನಿಗೆ ಹೇಳಿದಳು...
ರಂಗು ಅಣ್ಣ...ನ ಐಸ್ ಕ್ರೀಂ ಎಂದೊಡನೆ ...ದಾಕ್ಷಾಯಿಣಿ ಗಂಡ ಹೀಗೆಂದ
ದಾಕ್ಷಿ ನೆನಪಿದಿಯಾ !!
ಹಿಂದೆ ಒಂದ್ಸಲ...
ರಂಗಣ್ಣ ಯಾವ ಜಲ್ಮದ ಶಾಪನೋ ನಂಗ್ ಮಕ್ಳಿಲ್ಲ.. ನಿಮ್ಮ ಪುಟ್ಟಿ ನ ನಂಗ್ ಕೊಡಿ ಸ್ವಾಮಿ ಸಾಕೋತಿನಿ ಎಂದು ...ಅಯ್ಯೋ ಈ ಮುದ್ದು ಕಂದಮ್ಮ ನಾ ನೀವ್ ಕೊಡಿ ಅಂದ್ರೇ ಕೊಟ್ ಬಿಡ್ತೀರಾ.........ಹೋಗ್ಲಿ ಮನೆಗಾದ್ರು ಕರ್ಕೊಂಡ್ ಹೋಗಿ ನಮ್ಮನೆಯವ್ಳ್ ಜೊತೆ ಒಂದ್ ದಿನ ಆಟ ಆಡ್ಕೊಂಡ್ ಬರ್ತಾ ..ನಾಳೆ ವಾಪಾಸ್ ಕರ್ಕೊಂಡ್ ಬರ್ತಿನಿ ಎಂದಾಗ...
ನೀನು ಇಲ್ಲ ಕಳ್ಸಲ್ಲ.... ಎಂದಿದ್ದೆ....
ಸರಿ ಬಿಡಿ ಮಕ್ಳಿಲ್ಲದ ನಂಗೆ....ನಿಮ್ ಮಗಳಲ್ಲಿ ಮಕ್ಕಳ ಪ್ರೀತಿ ಕಾಣ್ತಿದಿನಿ....ಚೆನ್ನಾಗಿರು ಮಗಳೆ ಎಂದು ತನ್ವಿತಾಳಾ ಕೆನ್ನೆ ಸವರಿ....ಬೇಸರದಿಂದ ಹೋಗಿದ್ದ....
ಆ ನೆನಪಾಗಿ ...ಅದರಲ್ಲು ಸ್ವಲ್ಪ ಸಮಯದ ಮೊದಲು ರಂಗಣ್ಣ ನ ಐಸ್ ಕ್ರೀಂ ಗಾಡಿ ಬಂದು ಹೋದದ್ದರ ಬಗೆಗೆ ಅಕ್ಕ ಪಕ್ಕದ ಮನೆಯವರು ನೀಡಿದ ಮಾಹಿತಿ ಮೇರೆಗೆ ....ತಲೆಗೆ ಥಟ್ ಎಂದು ಏನೋ ಹೊಳೆದವನಂತೆ ...ತನ್ನ ಹೆಂಡತಿಗೆ
ಸರಿ ಮನೆ ಬಾಗಿಲಿಗೆ ಬೀಗ ಹಾಕಿ ಬಾ ...ಹಾಗೇ ಪಾಪು ದು ಒಂದು ಫೋಟೋ ನು ತಗೋ.
ಸರಿ ರೀ...ಎಂದು ಒಳಗೆ ಹೋಗಿ ಹತ್ತು ನಿಮಿಷದೊಳಗೆ ಮನೆ ಬಾಗಿಲಿಗೆ ಬೀಗ ಜಡಿದು ಓಡುತ್ತಾ ಬಂದು ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಳು..
ರಂಗಣ್ಣ ನ ಮನೆ ಬೀದಿ ಚೆನ್ನಾಗಿ ಪರಿಚಯವಿದ್ದರಿಂದ ಅರ್ಧ ಗಂಟೆಯಲ್ಲಿ ರಂಗಣ್ಣ ನ ಮನೆಗೆ ತಲುಪಿದ್ದ....
ತನ್ವಿತಾ ...ರಂಗಣ್ಣ ಹಾಗೂ ಅವರ ಪತ್ನಿಯೊಡನೆ ಆಡುತ್ತ ನಲಿಯುತಿದ್ದದನ್ನು ರಂಗಣ್ಣನ ಮನೆಯ ಗೇಟಿನ ಬಳಿಯಿಂದಲೇ ಕಾಣಿಸಿತು ....
ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು..
ಆ ದೃಶ್ಯ ಎಷ್ಟು ನೆಮ್ಮದಿ ನೀಡಿತ್ತೆಂದರೆ ತಕ್ಷಣಕ್ಕೆ ಒಳಗೆ ಹೋಗದೆ ...ಅಲ್ಲೇ ನಿಂತು ರಂಗಣ್ಣ ಆವನ ಹೆಂಡತಿ ಶಾಂತಮ್ಮ ತನ್ವಿತಾಳೊಂದಿಗೆ ತಾವು ಮಗುವಾಗಿ ಆಡುತ್ತಿರೋದು ಕಂಡು ತನ್ವಿತಾಳ ಅಪ್ಪ ಸದಾನಂದ ನಿಗೆ ತನ್ನ ತಂದೆ ತಾಯಿ ಬದುಕಿದ್ದರೆ ಮೊಮ್ಮಗಳೊಂದಿಗೆ ಹೀಗೇ ಆಟ ಆಡ್ತಿದ್ರು ಎಂದು ನೆನೆಸಿಕೊಂಡು ಕಣ್ಣಂಚಲಿ ಬಂದ ನೀರನ್ನು ವರೆಸಿಕೊಂಡ....ನಡಿ ದಾಕ್ಷು ಎಂದು ಗೇಟು ತೆಗೆದು ಒಳ ಹೋದರು ....ರಂಗಣ್ಣ ದಂಪತಿಗೆ ಇತ್ತ ಪರಿವೇ ಇಲ್ಲ...ಮಗುವಿನೊಂದಿಗೆ ಆಟದಲ್ಲೇ ಮಗ್ನರಾಗಿದ್ದರು...
ಸ್ವಲ್ಪ ಹೊತ್ತಿನ ನಂತರ ಸದಾನಂದ ನೇ...ರಂಗಣ್ಣ ಎಂದಾಗ....ರಂಗ ಗಾಬರಿಯಿಂದ ಹಿಂದೆ ತಿರುಗಿ ನೋಡಿದರೆ ತನ್ವಿತಾಳ ಅಪ್ಪ ಸದಾನಂದ ....ತಪ್ಪಿತಸ್ಥ ಭಾವದಿಂದ ಸದಾನಂದನ ಕಾಲು ಹಿಡಿಯಲು ಹೋದಾಗ ಸದಾನಂದ ...ಅಯ್ಯೋ ನೀವು ನನ್ನ ತಂದೆ ವಯಸ್ಸಿನವರು ಹೀಗೆ ಮಾಡೋದು ಸರಿ ಅಲ್ಲ....ಯಾಕ್ ಹೀಗ್ ಮಾಡ್ದೆ ರಂಗಣ್ಣ ಮಗು ನ ಹೇಳ್ದೇ ಕೇಳ್ದೇ ಹೀಗೆ ಕರ್ಕೊಂಡು ಬಂದಿದಿಯಲ್ಲ ತಪ್ಪಲ್ವ..
ತಪ್ಪೆ ಸದಾನಂದು ...ನಂದು ತಪ್ಪೆ...
ನನ್ನ ಕರ್ಮ .... ಆ ದೇವರು ನಂಗೆ ಮಕ್ಳು ಕೊಡ್ನಿಲ್ಲ...ನಿನ್ ಮಗು ನೋಡಿ ನನಗೆ ಮಕ್ಕಳಿಲ್ಲ ಅನ್ನೋ ಬೇಜಾರ್ ಕಳಿತಿದ್ದೇ...ಅಷ್ಟು ಪ್ರೀತಿ ಆ ಮಗೀನ ಕಂಡ್ರೆ...ಅದ್ನೆ ದಿನಾ ಮನೆಗೆ ಬಂದಾಗ ನನ್ ಹೆಂಡತಿಗೆ ಹೇಳ್ತಿದ್ದೆ ನಾನೇನೋ ಊರೂ ರು ಸುತ್ತೋನು ನನ್ನ ಸುತ್ತ ಮಕ್ಕಳೇ ಸುತ್ತಾಡ್ತಾವೆ...ಆದರೆ ನನ್ ಹೆಂಡತಿಗೆ ಮಕ್ಳಂದ್ರೆ ಆಸೆ ಮಗುನಾ ನೋಡ್ಬೇಕು ಅಂದ್ಲು ...ಕೇಳಿದ್ರೆ ನೀವು ಕಳ್ಸಕಿಲ್ಲ ಅಂದ್ರಿ....ಮಗು ನಾ ಒಂದು ಸ್ವಲ್ಪ ಹೊತ್ತು ಮನೆಗೆ ಕರ್ಕೊಂಡ್ ಬಂದು ಆಟ ಅಡಿ ಕಳ್ಸಣ ಅಂತ ಕರ್ಕೊಂಡ್ ಬಂದೆ....ತಪ್ಪಾಯ್ತು ಸದಾನಂದಪ್ಪ....ತಪ್ಪಾತು....😪
ಅವರ ದೈನ್ಯತೆ ಗೆ ಮರುಗಿದ ಸದಾನಂದ...ಸಂಜೆವರೆಗೂ ಅವರ ಮನೆಯಲ್ಲೇ ಇದ್ದು ಸಂಜೆ ಹೊರಟರು...
ಹೊರಡುವಾಗ ನಿಮ್ಮ ಮನೆಗೆ ಮಗು ಕಳ್ಸಲ್ಲ ಎಂದಿದ್ದ ದಾಕ್ಷಾಯಿಣಿ ....ರಂಗಣ್ಣ ನೀವು ಇನ್ಮೇಲೆ ಮಗುನ ಮನೆಗೆ ಕರ್ಕೋಂಡು ಹೋಗ್ಬೇಕು ಅನ್ಸುದ್ರೆ ನಮಗೆಲ್ಲ ಹೇಳ್ಬಿಟ್ಟೇ ಕರ್ಕೋಂಡ್ ಹೋಗಿ...ಎಂದು ಹೊರಟಳು..
ಈ ಘಟನೆಯಾದ ಮೇಲೆ ರಂಗಣ್ಣ ನ ಮೇಲೆ ಪ್ರೀತಿ ವಿಶ್ವಾಸ ಮೂಡಿತ್ತು.... ಆದರೂ ಮಗು ಕಾಣೆಯಾದ ದಿನದ ತಾಯಿ ತಂದೆಯ ಪರದಾಟವನ್ನು ...ವೇದನೆಯನ್ನು ಅಕ್ಕ ಪಕ್ಕದವರು ಕಣ್ಣಾರೆ ಕಂಡವರಾಗಿದ್ದರು... ಹಾಗಾಗಿ ಸಹಜವಾದ ಭಯದ ಪೊರೆಯೊಂದು ಮನಸ್ಸಲ್ಲಿ ಅಚ್ಚೊತ್ತಿತ್ತು...ಆ ಭಯವೇ ಕೆಂಪು ಕಾರ್ ಕಳ್ಳರ ಬಗೆಗೆ ಭಯ ಹುಟ್ಟಿಸಿತ್ತು..🚛
ಲಕ್ಷ್ಮಿಗೆ ಶುಂಠಿ ಕಶಾಯ ಕುಡಿದ ಮೇಲೆ ಸ್ವಲ್ಪ ತಲೆ ನೋವು ಕಡಿಮೆ ಎನಿಸಿತಾದರು ಜ್ವರ ಬಿಟ್ಟಿರಲಿಲ್ಲ..
ಬಚ್ಚಲಿಗೆ ಹೋಗಿ ಶೌಚ ಮುಗಿಸಿ..ಸ್ನಾನ ಮಾಡ್ಬೇಡ ಕಣೇ ಜ್ವರ ಹೆಚ್ಚಾದಿತು ಅಂದಿದ್ದರು ಅಮ್ಮ..... ಅದಕ್ಕೆ ಲಕ್ಷ್ಮಿ ಮುಖ ತೊಳೆದು ಬಂದು ಮನೆ ಮುಂದಿನ ಜಗಲಿಯಲ್ಲಿ ಕುಳಿತಿದ್ದಳು...
ಹಳೇ ಕಾಲದ ಕಂಬದ ಮನೆ ಮುಂದೆ ವಿಶಾಲವಾದ ಜಗಲಿ ನಾಲ್ಕು ಕಂಬ ಸೂರನ್ನು ಹೊತ್ತು ನಿಂತಿವೆ ಗೋಡೆಗೆ ರಾಮ ಕೃಷ್ಣ ಹನುಮಂತನ ಫೋಟೋಗಳನ್ನು ತೂಗು ಹಾಕಿದೆ...ಅಪ್ಪ ಅಲ್ಲೇ ಕುರ್ಚಿ ಮೇಲೆ ಕುಳಿತು ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್ ನಲ್ಲಿ ಯಾವುದೋ ದಿನಾಂಕಕ್ಕೆ ಗುರುತಿಗೆ ಸುರುಳಿ ಸುತ್ತುತಿದ್ದಾರೆ....
ಲಕ್ಷ್ಮಿ ಸಣ್ಣಗೆ ಪಿರಿ ಪಿರಿ ಎಂದು ಬರುತಿದ್ದ ತುಂತೂರು ಮಳೆಯನ್ನ ಜಗಲಿ ಮೇಲೆ ಕೂತು ನೋಡುತ್ತಾ ಕುಳಿತಿದ್ದಳು...ಮನೆಯಿಂದ ಸ್ವಲ್ಪ ದೂರವೇ ಮನೆ ಗೇಟು....
ಇಲ್ಲಿಂದ ನೋಡಿದರೆ ರಸ್ತೆಯಲ್ಲಿ ಹೋಗುವವರು ಕಾಣುತ್ತಾರೆ....ಕೆಲವೊಮ್ಮೆ ಅಪ್ಪ ರಸ್ತೆಯಲ್ಲಿ ಹೋಗೋರನ್ನ ಕೂಗಿ ಕರೆದು ಮಾತಾಡ್ಸ್ತಿರ್ತಾರೆ....ಯಾರೋ ಪ್ಲಾಸ್ಟಿಕ್ ಗುಪ್ಪೆಯನ್ನ ಹೊದ್ದು ಗೇಟು ತೆಗೆದು ನಮ್ಮ ಮನೆಯ ಕಡೆಗೆ ಬರುತಿದ್ದಾರೆ ಮುಖ ಪ್ಲಾಸ್ಟಿಕ್ ಗುಪ್ಪೆಯಲ್ಲಿ ಮರೆಯಾಗಿದೆ ....ಹತ್ತಿರ ಬಂದಂತೆ ಅದು ನನ್ನ ಗೆಳತಿ ಸೌಮ್ಯ ಎಂದು ಗುರುತಿಸಿ ..
ನೀನ್ಯಾಕೆ ಈ ಮಳೆಯಲ್ಲಿ ಬರೋಕೋದೆ....ಬಾ ಬಾ....ಎಂದು ಒಳಗೆ ಕರೆದೊಯ್ದಳು...ತಲೆ ವರೆಸಿಕೊಳ್ಳಲು ಟವಲ್ ಕೊಟ್ಟು ...ಮಾತಿಗೆ ಕುಳಿತರು..
ಯಾಕೆ ಸ್ಕೂಲ್ ಗೆ ಹೋಗಿಲ್ವ ಎಂದಳು ಲಕ್ಷ್ಮಿ ...
ಸೌಮ್ಯ ಇನ್ನೆಲ್ಲಿ ಸ್ಕೂಲ್ ನಮ್ಮಪ್ಪ ಅಮ್ಮಂದು ಒಂದೇ ಗೋಳು ನೆನ್ನೆ ಅದೇ ನಾವು ಸ್ಕೂಲ್ ಗೆ ಹೋಗೋ ದಾರಿಯಲ್ಲಿ ಸುಶೀಲನ ಮನೆ ಇದ್ಯಲ್ಲ ಅಲ್ಲಿಗೆ ಯಾರೋ ನಾಲ್ಕು ಜನ ಸುಶೀಲನ ಅಕ್ಕ ನ ಪಾಪು ನ ಎತ್ಕೊಂಡು ಹೋದ್ರಂತೆ ಅದಕ್ಕೆ ಅಪ್ಪ ಸ್ಕೂಲ್ ಗೆ ಹೋಗೋದು ಬೇಡ ....ಏನೂ ಬೇಡ ಮನೇಲೇ ನಮ್ ಕಣ್ ಮುಂದೆನೇ ಇರು ....ಅಂತಿದ್ದಾರೆ...ಏನ್ ಮಾಡೋದೇ ...ನಾನ್ ಇನ್ ಮುಂದೆ ಸ್ಕೂಲಿಗೆ ಹೋಗೋದು ಕನಸೇನೋ ಅನ್ನುಸ್ತಿದೆ...ಎಂದು ಕಣ್ಣಲ್ಲಿ ಕಣ್ಣೀರು ಜಿನುಗಿತು...
ಲಕ್ಷ್ಮಿ ಮತ್ತು ಸೌಮ್ಯ ಬಾಲ್ಯದಿಂದ ಗೆಳತಿಯರು ಒಟ್ಟಿಗೆ ಅಡುಗೆ ಗುಡುಗೆ ..ಕಣ್ಣಾ ಮುಚ್ಚಾಲೆ...ಕುಂಟೇ ಬಿಲ್ಲೆ ಆಡಿ ಬೆಳೆದವರು ...ಒಟ್ಟಿಗೆ ಶಾಲೆಗೆ ಸೇರಿ ಒಟ್ಟಿಗೆ ಏಳನೇ ತರಗತಿವರೇಗೂ ಓದಿದವರು ....
ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಹಿಸಿ ಕೊಂಡದ್ದೇ ಇಲ್ಲ ಆದರೆ ಧಿಡೀರನೇ ಶಾಲೆ ಬಿಡಿಸೋ ಆಲೋಚನೆ ಲಕ್ಷ್ಮಿ ಗೆ ಸೌಮ್ಯ ಳಿಗೆ ಒಂಟಿಯಾಗುವ ಭಾವನೆ ತೋರಿತು...
ಲಕ್ಷ್ಮಿ ತನ್ನ ಅಪ್ಪನಿಗೆ ಹೇಳಿ ಸೌಮ್ಯಾಳ ಅಪ್ಪನೊಂದಿಗೆ ಮಾತನಾಡುವಂತೆ ಹೇಳಿದಳಾದರು ...ಮನಸ್ಸಿನಲ್ಲಿ ಒಂಟಿ ಆದಂತೆ ಭಾವನೆ ಬಂದು ಕೂತಿತ್ತು..
ಸ್ವಲ್ಪ ಸಮಯಕ್ಕೆ ಆಲೋಚನೆಯನ್ನು ಬೇರೆಡೆಗೆ ಹೊರಳಿಸಿ.. ಲಕ್ಷ್ಮೀ ಗೆ ಜ್ವರ ಹೇಗಿದೇ ಎಂದು ವಿಚಾರಿಸಿ ಇಬ್ಬರು ಮಾತನಾಡುತ್ತ ಕುಳಿತರು...
ಸೌಮ್ಯ ಲೇ ನಿಂಗ್ ನೆನಪಿದ್ಯಾ ? ನಮ್ ಸ್ಕೂಲ್ ಹಿಂದೆ ಒಂದು ಮರ ಇತ್ತಲ್ಲ ನೆಲ್ಲಿ ಕಾಯಿದ್ದು ಅದರಲ್ಲಿ ನೆಲ್ಲಿ ಕಾಯಿ ಕೀಳೋಕೆ ನಾವು ಪಡ್ತಿದ್ದ ಕಷ್ಟ ಒನ್ನೊಂದಲ್ಲ ನನ್ನ ಹೆಗಲ ಮೇಲೆ ನಿನ್ನ ಕೂರುಸ್ಕೊಂಡು ನಾನು ಭಾರ ತಡಿಲಾರದೆ ನಿನ್ನ ಕೆಳಗೆ ಬೀಳ್ಸಿದ್ನಲ್ಲ.....ಎಂದು ಹೇಳಿಕೊಳ್ಳುತ್ತ ನಕ್ಕರು...
ನಗುವಿನಲ್ಲಿ ಸಂತೋಷದ ಭಾವವಿರಲಿಲ್ಲ...
ಮಳೆ ನಿಂತಂತೆ ತೋರಿತು ....ಸೌಮ್ಯ ಹೊತ್ತಾಗುತ್ತೆ ಹೋಗ್ತೀನಿ ಎಂದು ಹೊರಟು ನಿಂತಳು...ಸರಿ ಎಂದು ಲಕ್ಷ್ಮೀ ಸೌಮ್ಯಾಳನ್ನ ಬೀಳ್ಕೊಟ್ಟಳು...
ಸುಮಾರು ಹದಿನೈದು ವರ್ಷಗಳ ನಂತರ
ಅಮ್ಮಾ ...ಅಮ್ಮಾ....
ಏನೇ...ಕಂದಮ್ಮ ...ಎಂದು ತನ್ನ ಮಗುವಿನ ಹತ್ತಿರ ಬಂದಳು ಸೌಮ್ಯ..
ಅಮ್ಮಾ...ಲಕ್ಷ್ಮೀ ಆಂಟಿ ಮಗಳು ಸುಗುಣ ಬಂದಿದಾಳೆ.. ಆಟ ಆಡೋಕೆ ಹೋಗ್ತೀನಮ್ಮಾ...ಎಂದು ಅಂಗಲಾಚಿದಳು......ಸರಿ ಹೋಗ್ ಬಾ ... ಲಕ್ಷ್ಮೀ ಆಂಟಿ ನ ಮನೆಗೆ ಕರಿ....
ಖುಷಿಯಿಂದ ಓಡುತ್ತಾನೆ ಆಯ್ತಮ್ಮಾ ....ಎಂದು ಉತ್ತರಿಸಿದಳು...
ಇತ್ತ ಎಂದಿನಂತೆ ಮನೆ ಜಗಲಿಯಲ್ಲಿ ಕುಳಿತು ಬೀಡಿ ಕಟ್ಟಲು ಅಣಿಗೊಳಿಸುತ್ತಾ ಬೀಡಿ ಎಲೆಯನ್ನು ನೀರಿಗೆ ಅದ್ದಿ ತೆಗೆದಳು...ಬೀಡಿ ಎಲೆ ಕತ್ತರಿಸಲು ಕತ್ತರಿ.....ಅಳತೆಗೆ ಎಲೆ ಕತ್ತರಿಸಲು ಆಯತಾಕಾರದ ತಗಡಿನ ಪೀಸ್ ತೆಗೆದು ಕೊಂಡಳು...
ಬೀಡಿ ಒಳಗೆ ತುಂಬುವ ಹೊಗೆ ಸೊಪ್ಪನ್ನು ಜೊತೆಯಲ್ಲಿರಿಸಿಕೊಂಡು ಜಗಲಿ ಮೇಲೆ ಕೂತು ಬೀಡಿ ಎಲೆ ಕತ್ತರಿಸಿ ಅದರೊಳಗೆ ಹೊಗೆ ಸೊಪ್ಪಿನ ಪುಡಿ ತುಂಬಿ ಎರಡು ಕೈ ಸಹಾಯದಿಂದ ಸುರುಳಿ ಸುತ್ತಿ ಬೀಡಿಯ ಎರಡು ತುದಿಯನ್ನ ಚಿಮುಟದಂತಹ ಕಡ್ಡಿಯಿಂದ ಮಡಿಸಿ ಹೊಗೆಸೊಪ್ಪು ಉದುರದಂತೆ ಮಾಡಿ ಸುತ್ತಿದ ಬೀಡಿ ಎಲೆ ಸುರುಳಿಗೆ ಕೆಂಪು ನೂಲು ಸುತ್ತಿದಳು..ಹೀಗೇ ಹತ್ತು ಬೀಡಿ ಕಟ್ಟುವಷ್ಟರಲ್ಲಿ ಆಲೋಚನೆ ಲಕ್ಷ್ಮಿ ಕಡೆಗೆ ಹರಿಯಿತು
...ಲಕ್ಕಿ ಬಂದಿದಾಳಂತೆ...ನಮ್ ಮನೆಗೆ ಬರ್ತಾ ಳೋ ಇಲ್ವೋ...ಈಗ ಹೇಗಿರ್ಬೋದು ಡುಮ್ಮಿ ಆಗಿರ್ತಾಳೆ...ಸುಮಾರು ಐದು ವರ್ಷ ಕಳೀತು ಅವಳನ್ನ ನೋಡಿ...
ಕೆಲಸ ಸಿಗ್ತು ಸ್ಕೂಲ್ ಟೀಚರ್ ಆಗಿದ್ದೀನಿ ಎಂದು ಹೇಳಿ ಸಿಹಿ ತಿನಿಸಿದ್ದಳು.... ಆಗ ಸಣ್ಣ ಕೆ ಸುಂದರವಾಗಿ ಕಾಣ್ತಿದ್ದಳು ...ನನಗೂ ಆಗ ಮದುವೆ ಆದ ಹೊಸ ದಿನಗಳು ...ಸಿಹಿಗೆ ಎಂದು ಅವಳು ಕೊಟ್ಟ ಕೊಬ್ಬರಿ ಮಿಠಾಯಿಯನ್ನೇ ಅರ್ಧ ಮುರಿದು ತಿನಿಸಿ ನನ್ನ ಸಂತೋಷವನ್ನೂ ಹಂಚಿಕೊಂಡೆ....ನಾನು ಶಾಲೆಗೆ ಹೋಗಿದ್ದರೆ ನನ್ನ ಸ್ಕೂಲು ಅರ್ಧಕ್ಕೆ ನಿಲ್ಲದೇ ಹೋಗಿದ್ದರೆ.. ಎಂದು ಹಿಂದಿನ ದಿನಗಳನ್ನೆಲ್ಲ ನೆನಪಿಸಿಕೊಳ್ಳುತ್ತ ....
ಅಂದು ಸೌಮ್ಯ ..ಲಕ್ಷ್ಮಿ ಗೆ ಜ್ವರ ವಿಚಾರಿಸಿ ಮನೆಗೆ ವಾಪಸ್ಸಾದಾಗಿನಿಂದ ಮನೆಯಲ್ಲಿ ನೆಡೆದ ಘಟನೆಯನ್ನ ನೆನಪಿಸಿಕೊಂಡಳು...
ಮಳೆ ನಿಂತು ಮನೆಗೆ ಹೋದ ಮೇಲೆ ಸೌಮ್ಯಾಳ ಮನೆಯಲ್ಲಿ ಅಪ್ಪ ಜಗುಲಿಯಲ್ಲೇ ಕುರ್ಚಿ ಮೇಲೆ ಕುಳಿತಿದ್ದರು....ಈ ಮಳೆಲಿ ಎಲ್ಲಿ ಹೋಗಿದ್ದೆ ಪುಟ್ಟಕ್ಕ ..ಮೊದಲೇ ಕಳ್ಳರ ಕಾಟ ಆ ಸುಶೀಲನ ಮನೆ ಸಣ್ಣ ಮಗುನ ಎತ್ಕೊಂಡ್ ಹೋಗಿ ಅದೇನ್ ಮಾಡುದ್ರೋ ದೇವರೇ ಬಲ್ಲ...ಒಬ್ಬೊಬ್ಳೆ ಹೋಗ್ಬೇಡ ಪುಟ್ಟಿ...
ಲಕ್ಷ್ಮಿ ಮನೆಗೆ ಹೋಗಿದ್ದೆ ಅಪ್ಪ ಲಕ್ಷ್ಮಿ ಶಾಲೆಗೆ ಹೋಗಿದ್ದಾಳೋ ಇಲ್ವೋ ನೋಡ್ಕೋ ಬರೋಕೆ....
ಸೌಮ್ಯಾಳ ತಂದೆ ಸ್ವಲ್ಪ ಸಿಟ್ಟಿನಿಂದ ನಾನು ಬೆಳಗ್ಗೆ ಹೇಳಿದ್ದೇನು...?
ಈ ಸ್ಕೂಲು ಗೀಲು ಎಲ್ಲ ಸಾಕ್ ಮಾಡು ನೀನ್ ಓದಿ ನಮ್ಮನ್ನೆಲ್ಲ ಸಾಕೋದೇನಿಲ್ಲ....ಎಷ್ಟು ಓದಿದ್ರು ಗಂಡನ ಮನೆ ಸೇರಿದ್ಮೇಲೆ ಪಾತ್ರೆ ತೊಳಿಯೋದೆ ಮಿಕ್ಕೋದು....ಆ ಸುಪ್ಪತ್ತಿಗೆಗೆ ಎಂತಕೆ ಬೇಕು ಓದು..ಸುಮ್ಮನೆ ಹೇಳಿದ್ ಕೇಳು ...ಎಂದು ಒಳಗೆ ನಡೆದರು...
ಇತ್ತ ಲಕ್ಷ್ಮೀ ಮದ್ಯಾಹ್ನ ಊಟದ ಸಮಯದಲ್ಲಿ ಅಪ್ಪ ಅಮ್ಮ ನೊಂದಿಗೆ ಸೌಮ್ಯ ಹೇಳಿದ ಸುಶೀಲನ ಅಕ್ಕನ ಮಗುವನ್ನ ಕಳ್ಳರು ಎತ್ಕೊಂಡು ಹೋದ ವಿಷಯವನ್ನ ಮಾತನಾಡಿದಳು ...ಲಕ್ಷ್ಮೀ ಅಪ್ಪ ನಿಗೆ ಆ ವಿಷಯವೇನೋ ತಿಳಿದಿತ್ತು ಆದರೆ ಮನೆಯವರಿಗೆ ತಿಳಿಸಿದರೆ ಗಾಬರಿ ಆಗ ಬಹುದೆಂದು ಮಗಳ ಮುಂದೆ ಮಾತನಾಡಿರಲಿಲ್ಲ....ಈಗ ಮಗಳೇ ವಿಷಯ ಪ್ರಸ್ತಾಪಿಸಿದ ಮೇಲೆ ಅಪ್ಪ ಮಾತನ್ನೆತ್ತಿದರು....ಹೌದು ಮಗಳೇ ಸ್ಕೂಲಿಗೆ ಹೋಗುವಾಗ ಜಾಗ್ರತೆ ಇರಬೇಕು...ಯಾರು ಏನೇ ತಿಂಡಿ ತಿನ್ನೋಕೆ ಕೊಟ್ರು ತಿನ್ಬಾರ್ದು...ಎಂದು ಹೇಳಿ.....
ತಟ್ಟೆಯಲ್ಲಿದ್ದ ಅನ್ನವನ್ನ ತುತ್ತು ಕಲಸಿ ಬಾಯಿಗಿಟ್ಟರು..
ಅಪ್ಪ ನಾನು ಶಾಲೆಗೆ ಹೋಗೋಕೆ ಬೇಡ ಅಂತಿರೇನೋ ಅಂತ ಭಯ ಪಟ್ಕೊಂಡಿದ್ದೆ....ನನ್ ಫ್ರೆಂಡ್ ಸೌಮ್ಯಾ ಮನೇಲಿ ಅವಳು ಸ್ಕೂಲಿಗೆ ಹೋಗೋದು ಬೇಡ ಮನೇಲೇ ಇರು ಅಂದ್ರಂತೆ ಅವ್ರ್ ಅಪ್ಪ ಅಮ್ಮ....ನಂಗೂ ಹಾಗೇ ಹೇಳ್ತೀರೇನೋ ಅಂತ ಭಯ ಪಟ್ಕೊಂಡಿದ್ದೇ.....ಈಗ ನೆಮ್ಮದಿ ಆಯ್ತು...ಜ್ವರ ವಿದ್ದದರಿಂದ ಅಮ್ಮನ ಒತ್ತಾಯಕ್ಕೆ ಗಂಜಿ ಕುಡಿದು ಮೇಲೆದ್ದಳು....ಮನಸ್ಸಿನಲ್ಲಿ ಶಾಲೆಗೆ ಹೋಗಬಹುದೆಂಬ ಸಂತಸವಿದ್ದರು ಜೊತೆಗಾತಿ ಸೌಮ್ಯ ಶಾಲೆಗೆ ಬರೋದಿಲ್ಲ ಎಂಬ ಬೇಸರ ಹೆಚ್ಚಿತ್ತು...ನಾನು ಅವರಪ್ಪನೊಂದಿಗೆ ಮಾತನಾಡಿ ಸೌಮ್ಯಾಳನ್ನ ಸ್ಕೂಲಿಗೆ ಕಳಿಸುವಂತೆ ಕೇಳೋಣವೆಂದರೆ ವಯಸ್ಸಿನಲ್ಲಿ ಚಿಕ್ಕವಳು....ಎಂದೆಲ್ಲ ಯೋಚಿಸುತ್ತ ಮಲಗಿದ್ದಾಗ ನಿದ್ದೆ ಆವರಿಸಿತು..
ಇತ್ತ ಸೌಮ್ಯ ಅಮ್ಮ ಅಡುಗೆ ಮನೆಯಲ್ಲಿ ಸಾಂಬಾರಿಗೆ ತಯಾರಿ ನೆಡೆಸುತಿದ್ದಳು...ತರಕಾರಿ ಹೆಚ್ಚಲು ಇಳಿಗೆ ಮಣೆ ಮೇಲೆ ಕುಳಿತು...ಶಾಲೆಯ ದಿನಗಳನ್ನ ನೆನೆಸಿಕೊಳ್ಳುತ್ತ...ತರಕಾರಿ ಹೆಚ್ಚುತಿದ್ದಳು...ತರಕಾರಿ ಹೆಚ್ಚುವಾಗ ಆಲೋಚನೆ ತಪ್ಪಿ ಕೈ ಕುಯ್ದುಕೊಂಡಳು..
ಬೆರಳಿಗೆ ಚಿಕ್ಕದಾಗಿ ಪೆಟ್ಟಾಯಿತು ....ಅಮ್ಮಾ ಎಂದು ಅರಚಿದಳು ....ಅಮ್ಕಾ ಗಾಬರಿಯಿಂದ ಇದೇನ್ ಮಾಡ್ಕೊಂಡ್ಯೇ...ಸೌಮ್ಯ...ಎಂದು ಅರಿಶಿಣ ಪುಡಿಯನನ್ನು ಗಾಯಕ್ಕೆ ಮೆತ್ತಿ ಒತ್ತಿ ಹಿಡಿಯುವಂತೆ ಹೇಳಿದರು...ಹಾಗೇ ಬೆರಳು ಒತ್ತಿ ಹಿಡಿದು ಚೇರನ್ನು ಒರಗಿ ಕೂತಿದ್ಹಳು...ಆಯಾಸಕ್ಕೋ ಬೇಸರಕ್ಕೋ ಸುಸ್ತೆನಿಸಿ ಅಲ್ಲೇ ಚೇರ್ ಒರಗಿ ನಿದ್ರೆ ಹೋದಳು....
ಆ ದಿನ ರಾತ್ರಿ ಊಟಕ್ಕೆ ಕುಳಿತಾಗ ಸೌಮ್ಯಾಳ ಅಪ್ಪ ಇನ್ನು ಸೌಮ್ಯ ಸ್ಕೂಲಿಗೆ ಹೋಗೋದು ಬೇಡ ನಿನಗೆ ಅಡುಗೆ ...ಬೀಡಿ ಕಟ್ಟೋಕೆ ಸಹಾಯ ಮಾಡ್ಕೊಂಡು ಮನೇಲೇ ಇರ್ಲಿ ಎಂದವರೆ...ಯಾರಿಗೂ ಮಾತಿಗೆ ಅವಕಾಶ ನೀಡದೆ ಊಟ ಮುಗಿಸಿ ಎದ್ದರು....
ಮರುದಿನ ಸೌಮ್ಯಾಳ ಅಪ್ಪ ಎಷ್ಟು ಹೊತ್ತಾದರು ಎದ್ದಿರಲಿಲ್ಲ ....ಸೌಮ್ಯ ಅಪ್ಪಾ ..ಅಪ್ಪಾ...ಏಳಿಸಲು ಯತ್ನಿಸಿದರು ಅಲುಗಾಡಲಿಲ್ಲ ಮಾತಾಡಲಿಲ್ಲ...ರಾತ್ರಿ ಎದೆನೋವು ಹೆಚ್ಚಾಗಿ ಬೆಳಗ್ಗೆ ಆಗುವಷ್ಟರಲ್ಲಿ ಕಣ್ಮುಚ್ಚಿದ್ದರು ....
ಸೌಮ್ಯಾಳ ಮನೆಗೆ ಧಿಡೀರ್ ಎಂದು ಬಂದೆರಗಿದ ದುಃಖ ಮರೆಯುವುದರಲ್ಲೇ ಒಂದು ತಿಂಗಳು ಕಳೆದಿತ್ತು....
ಲಕ್ಷ್ಮೀ ಧೀಡೀರನೇ ಸೌಮ್ಯಾ ಮನೆಗೆ ಬಂದು ನಾವು ಟೌನ್ ನಲ್ಲಿ ಬಾಡಿಗೆ ಮನೆಗೆ ಹೊಗ್ತಿದಿವಿ ಕಣೇ...ಎಂದಳು...
ಆಸರೆಗೆ ಇದ್ದ ಸುಖ ದುಃಖ ಹೇಳಿಕೊಳ್ಳಲು ಇದ್ದ ಒಂದು ಜೀವವು ದೂರ ಹೋದರೆ ನಾನು ಒಬ್ಬಂಟಿಯೇ ಎಂದು ತಕ್ಷಣದ ಯೋಚನೆ ಬಂದು ಮಂಕು ಕವಿಯಿತು...
ಯಾಕೆ ಎಲ್ಲಿಗೆ ಹೋಗ್ತೀರಾ?? ಯಾಕ್ ಹೋಗ್ತೀರಾ?? ಎಂದಾಗಾ..?
ಲಕ್ಷ್ಮೀ ಹೀಗೆಂದಳು ನಮ್ಮೂರು ಮೊದಲೇ ಕಾಫಿ ತೋಟದ ಕಣಿವೆ....
ಕೆಂಚನ ಹಳ್ಳಿಯಿಂದ ಮಾವಿನ ಕೊಪ್ಪಲಿನ ವರೆಗೂ ಒಂದು ಮನೆಯೂ ಇಲ್ಲ...ಆ ರಸ್ತೆಯಲ್ಲಿ ಜನರು ಓಡಾಡೋದು ಕಡಿಮೆ ನಾನು ನೀನು ಇಬ್ಬರೂ ನಮ್ಮೂರಿಂದ ಹೋಗ್ತಿದ್ವಿ ಈಗ ನೀನು ಕೂಡ ಬರೋದಿಲ್ಲ...ಹುಡುಗರು ಸೈಕಲ್ ಹತ್ತಿ ಬೇಗ ಹೋಗಿ ಬಿಡ್ತಾರೆ ನಾನೊಬ್ಬಳೇ ಹೋಗೋಕೆ ಎಷ್ಟು ಭಯ ಆಗುತ್ತೆ ಗೊತ್ತಾ...?
ಅದಕ್ಕೆ ಅಪ್ಪ...ನನ್ನ ಓದು ಮುಗಿಯೋ ವರೆಗೂ ಮೂಡಿಗೆರೆಯಲ್ಲಿ ಬಾಡಿಗೆ ಮನೆ ಮಾಡೋಣ ಅಂದಿದ್ದಾರೆ. ಅದಕ್ಕೆ ಹೋಗ್ತಾ ಇದಿವಿ...ಹೋಗುಕು ಮೊದಲು ನಿಂಗ್ ಹೇಳಿ ಹೋಗೋಕೆ ಬಂದೆ...ಎಂದಳು
ಸೌಮ್ಯಾಳ ಕಣ್ಣಂಚಲ್ಲಿ ನೀರು...ಈ ಘಟನೆಗಳೆಲ್ಲ ಘಟಿಸಿ ಎಷ್ಟೋ ವರುಷಗಳೇ ಕಳೆದಿವೆ..ಈಗ ಕಣ್ಣಂಚಲಿ ನೀರು ತಂದು ಬೀಡಿ ಎಲೆಯನು ನೆನೆಸಿವೆ...ಕಣ್ಣೊರೆಸಿಕೊಂಡು ಮತ್ತಷ್ಟು ಧೀರ್ಘ ಆಲೋಚನೆಯಲ್ಲಿ ಮನಸ್ಸು ಮುಳುಗಿತು...
ಜೊತೆಯಾಗಿದ್ದ ಲಕ್ಷ್ಮೀಯು ಹೋದ ಮೇಲೆ...ನನಗೆ ಇನ್ಯಾರು ಜೊತೆ...ನನ್ನ ನೋವು ನಲಿವುಗಳಿಗೆ ಸ್ಪಂದಿಸುವರ್ಯಾರು...ಒಬ್ಬಂಟಿಯಾಗಿ ಹೋಗಿದ್ದೆ ಅಂದು...ಇತ್ತ ಕಡೆ ಮನೆಗೆ ಆಧಾರವಾಗಿದ್ದ ಅಪ್ಪ ತೀರಿಕೊಂಡರು....
ಅತ್ತ ಕಡೆ ನನ್ನ ಓದು ಅರ್ಧಕ್ಕೆ ನಿಂತಿತು...ಅಮ್ಮ ಒಬ್ಬಂಟಿ ಹೆಂಗಸು ಮನೆಯನ್ನ ಹೇಗೆ ಸಾಗಿಸಿಯಾಳು ನಾನು ಅವಳಿಗೆ ಜೊತೆಯಾಗದೆ ಹೋಗಿದ್ದರೆ ಅವಳು ಈ ಸಂಸಾರದ ನೊಗವನ್ನ ಹೇಗೆ ಸಾಗಿಸುತಿದ್ದಳು....ಆದರೂ ಅಮ್ಮ ನನ್ನನ್ನ ಶಾಲೆಗೆ ಕಳಿಸ ಬಹುದಿತ್ತು ದುಡಿಯೋದು ಯಾರಿಗಾಗಿ ನಮ್ಮಿಬ್ಬರಿಗಾಗಿ ನನಗೆ ಮದ್ಯಾಹ್ನದ ಬಿಸಿ ಊಟ ಅಲ್ಲೇ ಆಗುತಿತ್ತು ಬೆಳಗ್ಗೆ ಉಪವಾಸ ಮಾಡಿಯಾದರು ದಿನಕ್ಕೆ ಎರಡು ಹೊತ್ತಿನಂತೆ ತಿಂದಾದರು ಶಾಲೆ ಓದುತಿದ್ದೆ ..ಅಮ್ಮ ನನ್ನನ್ನ ಬೇಳಗ್ಗೆ ಬೆಳಗ್ಗೆಯೇ ಹಸಿವಿನಿಂದ ಹೋಗಲು ಬಿಡುತಿದ್ದಳೇ ಬೆಳೆವ ಹುಡುಗಿ ಎಂದು ತನಗಿದ್ದ ಎರಡು ತುತ್ತನ್ನು ಸೇರಿಯೇ ತಿನಿಸುತಿದ್ದಳು ಅಷ್ಟು ಪ್ರೀತಿ ಅಮ್ಮನಿಗೆ ನಾನೆಂದರೆ ....
ಅಷ್ಟು ಪ್ರೀತಿ ಇದ್ದವಳು ಮಗಳು ಶಾಲೆ ಕಲಿತು ಮುಂದೆ ದೊಡ್ಡ ಆಫೀಸರ್ ಆಗಲಿ ಅನ್ನೋ ಆಸೆ ಯಾಕಿರಲಿಲ್ಲ ಅಮ್ಮನಿಗೆ
....ಅವಳಾದರು ಏನು ಮಾಡಿಯಾಳು ಕಲ್ಲಿನಂಥ ಅಪ್ಪನ ಗುಂಡಿಗೆಯೇ ಈ ಕಳ್ಳರ ವಿಷಯಕ್ಕೆ ನಡುಗಿರುವಾಗ ಅಮ್ಮ ಇನ್ನು ಮೃದು ಸ್ವಭಾವದವಳು ಅವಳು ಇನ್ನೂ ಹೆದರುತ್ತಾಳೆ...ಲಕ್ಷ್ಮೀ ನನ್ನ ಓದಿನ ಬಗ್ಗೆ ನನ್ನನ್ನೂ ಟೌನ್ ಗೆ ಕರೆದುಕೊಂಡು ಹೋಗುವ ಬಗ್ಗೆ ಅವಳ ಅಪ್ಪನೊಂದಿಗೆ ಮಾತನಾಡ ಬಹುದಿತ್ತು....ಅಯ್ಯೋ... ನಮ್ಮ ಮನೆಯವರಿಗೆ ಇಲ್ಲದ ಕಾಳಜಿ ಅವರಿಗೆ ಇರಬೇಕಿತ್ತು ಎನ್ನುವುದು ನನ್ನ ಮೂರ್ಖತನ....
ನನ್ನಮ್ಮನಿಗೆ ನನ್ನ ಕಂಡರೆ ಅಷ್ಟು ಪ್ರೀತಿ ಇತ್ತು ಆದರೆ ಅಷ್ಟು ಬೇಗ ಮದುವೆ ಮಾಡೋ ಅಗತ್ಯ ಏನಿತ್ತು....ಅವನ್ಯಾರೋ ಮಂಗಳೂರಿನ ಮಾವನಂತೆ ಅಪ್ಪ ಸತ್ತ ಎರಡು ವರ್ಷಕ್ಕೆ ಬಂದ ಅಮ್ಮನೊಂದಿಗೆ ಮಂಗಳೂರಿನ ಭಾಷೆಯಲ್ಲಿ ಎಂಥಾ ಮರಾಯಿತಿ ನಿನ್ನ ಮಗಳನ್ನ ಮದುವೆ ಮಾಡುದಿಲ್ವೇನೇ...ದಿನ ದಿನಕ್ಕೆ ಮಗು ಬೆಳೀತಿದೆ ಬೆಳೆದ ಮಗಳು ಮನೆಯಲ್ಲೇ ಇಟ್ಟುಕೊಂಡ್ರೆ ಮಡಿಲಿನಲ್ಲಿ ಕೆಂಡ ಇಟ್ಟು ಕೊಂಡಂತೆ ತಿಳೀತಾ...
ನನಗೆ ಒಬ್ಬ ಗೊತ್ತು ನಮ್ಮವನೇ ಲಾಯಕ್ಕಾದ ಜೋಡಿ ಅವನದು ಸೌಮ್ಯಾ ದು ......ಎಂಥಾ ಮದುವೆ ಮಾತು ಕತೆ ಮಾಡೋದಾ? ಎಂದ...
ಅಮ್ಮನೋ ನೀವು ದೊಡ್ಡವರು ನೀವು ಹೇಳಿದಂತೆ ಆಗ್ಲೀ ಎಂದು ಬಿಟ್ಟಳು ಆ ವಯ್ಯನಿಗೋ ಒಪ್ಪಿಗೆಯೇ ಸಿಕ್ಕಿದಂತೆ ಅದರ ಮುಂದಿನ ಮೂರು ತಿಂದಳಲ್ಲಿ ವರ ನ ಸಮೇತಾ ಮನೆಗೆ ಬಂದರು...ನನ್ನನ್ನ ಒಪ್ಪಿಗೆ ಕೇಳಿದಂತೆ ಕೇಳಿದರಷ್ಟೇ....ಒಳ್ಳೆಯದು ಕೆಟ್ಟದ್ದು ಆ ಮಗುಗೆ ಏನು ಗೊತ್ತಾಗುತ್ತೆ ಅಂಥ ಅವರೆ ತೀರ್ಮಾನ ಮಾಡಿ ಬಿಟ್ಟರು..."ಒಪ್ಪಿಗೆ ಕೊಡೋಕೇ ನಾನು ಮಗು ವಾಗಿದ್ದೆ ಅದರೆ ಮದುವೆ ಆಗೋಕೆ ಬೆಳೆದು ನಿಂತ ಮರವಾಗಿದ್ದೆ."..
ದೂರದ ಮಂಗಳೂರಿಂದ ಬಂದಿದಾರೆ ಮತ್ತೆ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗೋದು ಸರಿ ಕಾಣ್ಸೋಲ್ಲ ಅಂತ ಅಂದೇ ಶಾಸ್ತ್ರ ಕ್ಕೆ ತಾಂಬೂಲ ಬದಲಿಸಿ ...ಉಪ್ಪಿಟ್ಟು ಕಾಫಿ ತಿಂದು ಹೊರಟರು...ಅದಾದ ಒಂದು ತಿಂಗಳಲ್ಲಿ ಮದುವೆ ನಮ್ಮೂರಿನ ಆಂಜನೇಯನ ಗುಡಿಯಲ್ಲಿ...
ಮದುವೆ ಆಗಿ ಒಂದು ಎರಡು ತಿಂಗಳು ಅಷ್ಟೇ ನನ್ನ ಬದುಕು ನೆಮ್ಮದಿ ಕಂಡದ್ದು ಅಷ್ಟರೊಳಗೆ ನನ್ನ ಗಂಡನ ರೂಪಿನೊಂದಿಗೆ ಗುಣವು ಬಯಲಾಗುತ್ತಾ ಬಂತು...ದಿನಾ ರಾತ್ರಿ ಕುಡಿದು ತೂರಾಡುತ್ತಾ ಎಷ್ಟೋ ಗಂಟೆಗೆ ಬರುವುದು....ಎಲೆ ಅಡಿಕೆ ಜಗಿದು ಎಲ್ಲೆಂದರಲ್ಲಿ ಉಗುಳಿ ಮನೆ ರಂಪ ಗೊಳಿಸುತಿದ್ದುದು...ಬೆಳಗ್ಗೆ ಮಾತ್ರ ಅವನಷ್ಟು ಸಭ್ಯ ಯಾರು ಇಲ್ಲ ಅನ್ನುವಂತೆ ಅಂತ ನಡತೆ....ಕೆಲಸಕ್ಕೆಂದು ಹೋಗೋದು ಇಸ್ಪೀಟು ...ಕುಡಿತಗಳಲ್ಲೇ ಮೈ ಮರೆತು ಎಷ್ಟೋ ಗಂಟೆಗೆ ಮನೆ ಸೇರೋದು.... ಒಂದು ವರ್ಷ ಕಳೆವಷ್ಟರಲ್ಲಿ ನಾನು ಅರೋ ...ಏಳೋ ತಿಂಗಳ ಗರ್ಭಿಣಿ ಇನ್ನೆರಡು ತಿಂಗಳಲ್ಲಿ ಕೂಸು ಕೈಗೆ ಬರುವುದರಲ್ಲಿತ್ತು ಬರುವ ಮಗುವಿನ ಕನಸಲ್ಲಿ ಇಷ್ಟವಿಲ್ಲದ ಗಂಡನೊಂದಿಗಿನ ಬದುಕು ಹೇಗೋ ತಳ್ಳುತಿದ್ದೆ...ಆ ರಾತ್ರಿ ವಿಪರೀತ ಹೊಟ್ಟೆ ನೋವು ಎಂದು ಕಿರುಚಿದರು ಮನೆಯಲ್ಲಿ ಯಾರು ಇಲ್ಲ...ಹೆರಿಗೆ ಗೆ ಅಮ್ಮನ ಮನೆಗೆ ಹೋಗುತ್ತೇನೆಂದರು ಕಳುಹಿಸಲಿಲ್ಲ ಈ ಗಂಡಸು....ನೋವು ಎಂದರು ಗಮನಿಸೋ ಹುಳುವು ಇಲ್ಲ ಈ ಮನೆಯಲ್ಲಿ....ಈ ಇವನ ದುರ್ಬುದ್ದಿ ಕಂಡೇ ಏನೋ ಅವನ ತಂದೆ ತಾಯಿ ಇವನಿಗಿಂತ ಮುಂಚೆ ಕಣ್ಮುಚ್ಚಿದ್ದು..
ಅಯ್ಯೋ ಅಮ್ಮ ಎಂಬ ಕಿರುಚಾಟ ಕೇಳಿ ಪಕ್ಕದ ಮನೆಯ ಅಜ್ಜಿ ಬಂದು ಹೆರಿಗೆ ಮಾಡಿಸಿತು...ಇಲ್ಲದಿದ್ದರೆ...ನನ್ನ ಬದುಕೇನಾಗುತಿತ್ತೋ...
ಇತ್ತ ನನ್ನ ಮಗು ಹುಟ್ಟಿತು...ಅತ್ತ ಕುಡಿದ ಮತ್ತಿನಲ್ಲಿ ಯರೊಂದಿಗೋ ಜಗಳಕ್ಕೆ ಹೋಗಿ ತಳ್ಳಾಟದಲ್ಲಿ ಕೆಳಕ್ಕೆ ಬಿದ್ದು ತಲೆ ಕಲ್ಲಿಗೆ ಬಡಿದು ಅವರು ಸತ್ತರು ..."ಒಂದೇ ದಿನ ವಿದವೆ ಎಂಬ ತಾಯಿ ಎಂಬ ಪಟ್ಟ ಸಿಕ್ಕವು."..ಎಂದು ಕಣ್ಣೀರಿಟ್ಟಳು ...
ನನ್ನ ಮಗಳ ಬದುಕು ತನ್ನಂತೆ ಆಗ ಬಾರದು ಅವಳನ್ನ ಓದಿಸಿ ದೊಡ್ಡ ಆಫೀಸರ್ ಮಾಡ್ಸೇ ಮಾಡುಸ್ತೀನಿ....ಅಷ್ಟರಲ್ಲಿ ಆಟ ಮುಗಿಸಿ ಲಕ್ಷ್ಮೀ ಆಂಟಿಯೊಂದಿಗೆ ಮನೆಗೆ ಬಂದ ಮಗು ಅಮ್ಮನ ಕಣ್ಣೀರು ನೋಡಿ ಕಣ್ಣೋರೆಸಿತು....ಅಮ್ಮಾ ಲಕ್ಷ್ಮೀ ಆಂಟಿ ಬಂದಿದಾರೆ ಬಾ.....ಎಂದು ಕೈ ಹಿಡಿದು ಎಳೆಯಿತು....
ರಚನೆ
ಶ್ಯಾಮ್ ಪ್ರಸಾದ್ ಭಟ್