ಇಂದು ರಾಮುವಿನ ಹುಟ್ಟುಹಬ್ಬ ಆದರೆ ಮನೆಯಲ್ಲಿ ಸಂಭ್ರಮವಿಲ್ಲ..
ಶಾಂತ ಇನ್ನು ಎದ್ದಿಲ್ಲ....ಹಾಸಿಗೆಯಲ್ಲೇ ಮಲಗಿ ಅತ್ತು ಅತ್ತು ದಿಂಬು ಒದ್ದೆಯಾಗಿತ್ತು..
ಅಜ್ಜಿ ಜೊತೆ ಮಲಗಿದ್ದ ರಾಮು ಅಮ್ಮ... ಅಮ್ಮ.. ಎಂದು ಅಮ್ಮನಿದ್ದ ರೂಮಿಗೆ ಬಂದು ..
ಅಮ್ಮ ಇವತ್ತು ನನ್ ಬರ್ತಡೇ ಅಂತೇ ಹೌದೇನಮ್ಮ....
ಶಾಂತಗೆ ಇನ್ನು ದುಃಖ ಉಮ್ಮಳಿಸಿ ಬಂತು ಎದ್ದು ಮಗನನ್ನು ತಬ್ಬಿ ಅತ್ತಳು.... ಹೌದು ಕಂದಮ್ಮ..
ಅಮ್ಮನ ದುಃಖದ ಕಾರಣ ತಿಳಿಯದ ಮಗು ಪಿಳಿ ಪಿಳಿ ಕಣ್ಣು ಬಿಟ್ಟು ಅಮ್ಮನನ್ನೇ ದಿಟ್ಟಿಸಿನೋಡಿತು...ಅಜ್ಜಿಯ ಹತ್ತಿರ ಓಡಿತು ...
ಅಜ್ಜಿ ಸ್ನಾನ ಮುಗಿಸಿ ..ಅಳಿಯನ ಫೋಟೋವನ್ನ ಒದ್ದೆ ಬಟ್ಟೆಯಲ್ಲಿ ವರೆಸಿ ...ಹಣಿಗೆ ಕುಂಕುಮ ಇಟ್ಟು...ತಂದಿದ್ದ ಹೊಸ ಹಾರ ಹಾಕಿ...ಊದುಬತ್ತಿ ಹಚ್ಚುತಿದ್ದರು...
ಅಲ್ಲಿಗೆ ಬಂದ ರಾಮು ಅಜ್ಜಿ ಅಪ್ಪನ ಫೋಟೋಗೆ ಯಾಕ್ ಪೂಜೆ ಮಾಡ್ತಿದಿಯಾ ಇವತ್ತು ಅಪ್ಪನ ಬರ್ತಡೇ ನಾ ಅಂತ ಕೇಳಿದ ರಾಮುಗೆ ಉತ್ತರ ಹೇಳುವುದೇನು.....ನಿನ್ನ ಅಪ್ಪ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಉದಾತ್ತ ವಿಷಯ ಮಗುವಿಗೆ ಹೇಳಿದರೆ ತಿಳಿದೀತೇ..
ಶಾಂತಳು ಹಾಸಿಗೆಯಿಂದೆದ್ದು ಸ್ನಾನ ಮುಗಿಸಿ ಗಂಡನಿಗೆ ದೀಪ ಹಚ್ಚಿ ಊದುಬತ್ತಿ ಬೆಳಗಿದಳು...
ಕಣ್ಣಂಚಿನ ನೀರಲ್ಲಿ ದೀಪದ ಬೆಳಕು ಮಿಂಚಿ ಮರೆಯಾಯಿತು..
ಅವರು ತೀರಿಕೊಂಡು ಮೂರು ವರ್ಷವಾಯಿತು..ಕಳೆದ ಎರಡು ವರ್ಷ ಮಗು ಮಾತು ಕಲಿಯುತಿದ್ದರಿಂದ ಅದರ ಪ್ರಶ್ನೆ ಕುತೂಹಲ ಕೆರಳಿರಲಿಲ್ಲ...ಈಗ ಮಾತು ಮೂಡಿ ವಾಕ್ಯಮಾಡಿ ಪ್ರಶ್ನೆ ಕೇಳುತ್ತಾನೆ ಏನು ಉತ್ತರ ಹೇಳಲಿ...
ಅವರು ಅಲ್ಲಿ ಉಸಿರು ಬಿಟ್ಟರು ....ಇಲ್ಲಿ ಇವನು ಉಸಿರಾಡಿದ ಅವರೇ ಹುಟ್ಟಿದರು ಅನ್ನೋ ಸಂಭ್ರಮ ಪಡಲೋ...ಅವರಿಲ್ಲದ ಜಗತ್ತಲ್ಲಿ ಯಾರು ಇದ್ದರೇನು ಎಂದು ದುಃಖ ಪಡಲೋ...ತಾಯ್ತನ ಕೊಟ್ಟು ಕರುಳಕುಡಿ ಅನ್ನೋ ಸಂಬಂಧ ಇಟ್ಟು ಈ ಜಗತ್ತಿಗೂ ನನಗೂ ಬಂಧ ಬೆಸೆದು ಕಟ್ಟಿ ಹಾಕಿದ್ದಾನೆ ಭಗವಂತ ...ನಾನು ಈ ಕೊಂಡಿ ಕಳಚಿಕೊಳ್ಳಲಾರೆ...
ಹೀಗೇ ಅವಳ ಆಲೋಚನೆ ಎಲ್ಲೆಲ್ಲೋ ಸುಳಿದಾಡಿ ಗಂಡನ ಫೋಟೋ ದಿಟ್ಟಿಸುತ್ತ ಆರ್ಮಿ ಯುನಿಫಾರಂ ಧರಿಸಿ ನಗು ಮುಖದಲ್ಲಿದ್ದ ತನ್ನ ಗಂಡನನ್ನು ನೆನೆದು ದುಃಖ ಉಮ್ಮಳಿಸಿ...ಬಾಯಿಗೆ ಸೀರೆ ಸೆರಗು ಹಿಡಿದು ಕೊಂಡು ಹೊರ ಜಗಲಿಗೆ ಬಂದು ಕೂತಳು
ಹಿಂದಿನಿಂದ ಬಂದ ರಾಮು ಅಮ್ಮ...ಕೇಕ್ ತರ್ತಾರಾ ತಾತಾ...
ಸೆರಗಿನಿಂದ ಕಣ್ಣೊರೆಸಿಕೊಂಡು ...ಹುಂ ಕಣೋ ತರ್ತಾರೆ...ಎಂದಳು..
ಆ ದಿನ ಪೂರ್ತಿ ಮಗನ ಹುಟ್ಟುಹಬ್ಬದ ಸಂಭ್ರಮಕ್ಕಿಂತ ಗಂಡನ ನೆನಪುಗಳೇ ಕಾಡಿ ಕಂಗೆಡಿಸದವು...
ಸಂಜೆ ವೇಳೆಗೆ ತಾತಾ ತಂದ ಬರ್ತಡೇ ಕೇಕ್ ಕಟ್ ಮಾಡಿಸಿ ಅಕ್ಕ ಪಕ್ಕದ ಮನೆಯವರ ಸಮಕ್ಷಮದಲ್ಲಿ ಸಂಭ್ರಮಪಟ್ಟರು ದುಃಖ ಸಂತೋಷಗಳ ಮಿಶ್ರಣ ಭಾವದಲ್ಲಿ..
ರಾಮು ದಿನದಿಂದ ದಿನಕ್ಕೆ ಬೆಳೆಯುತಿದ್ದಾನೆ ಒಳ್ಳೆ ಶಾಲೆಗೆ ಸೇರಿಸಿ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದರೆ
ಒಂದು ಒಳ್ಳೆ ಕೆಲಸ ಅಂತ ಆಗ್ಬಿಟ್ರೆ ...ಅವರ ಸಾವಿಗೆ ಬಂದಿದ್ದ ಎಷ್ಟೋ ಜನ ಅವರು ಬಾರ್ಡರ್ ನಲ್ಲಿ ವೈರಿಗಳ ಮೋಸದ ಗುಂಡಿಗೆ ಬಲಿಯಾದಾಗ ಅವರ ಜೊತೆಯವರೇ ತಮ್ಮ ಗೆಳೆಯನ ದೇಹವನ್ನ ಪೆಟ್ಟಿಗೆಯಲ್ಲಿರಿಸಿ ತಂದರು.
ರಾಷ್ಟ್ರ ದ್ವಜ ಹೊದ್ದು ಬಂದ ಅವರ ದೇಹವನ್ನ ನಾನು ತಬ್ಬಿ ಬಿಕ್ಕಳಿಸಿ ಅತ್ತರೂ ಅವರು ಎದ್ದೇಳಲಿಲ್ಲ...ಪ್ರೀತಿಯಿಂದ ಶಾಂತು ಎನ್ನಲಿಲ್ಲ...ಬಂಗಾರದಂತ ಮಗ ಅವನ ರೂಪದಲ್ಲೇ ಹುಟ್ಟಿದಾನೆ ಅವನನ್ನು ಸೈನ್ಯಕ್ಕೆ ಸೇರಿಸಿ ಬಿಡು ಅಂದಿದ್ದರು ಅಕ್ಕ ಪಕ್ಕದವರು ...
ನಿಮ್ ಮಕ್ಕಳು ಚೆನ್ನಾಗಿ ನಿಮ್ ಕಣ್ಣಮುಂದೇನೆ ದುಡಿತಾ ಇರ್ಬೇಕು ನಾನು ನನ್ನ ಮಗನ್ನ ನನ್ನ ಗಂಡ ಹೋದ್ ಜಾಗಕ್ಕೆ ಕಳುಸ್ಬೇಕಾ ಹೋಗಿ ...ಹೋಗಿ ...
ಅಂತ ದುಃಖದಲ್ಲಿ ಬೈದು ಕಳಿಸಿದ್ದೆ....
ಹೌದಲ್ವ...!! ಎಷ್ಟು ಜನಕ್ಕೆ ದೇಶ ಸೇವೆ ಮಾಡೋ ಭಾಗ್ಯ ಸಿಗುತ್ತೆ ನನ್ನ ಗಂಡ ಪುಣ್ಯವಂತ ನನ್ನ ಮಗನಿಗೂ ಆ ಪುಣ್ಯ ಸಿಗಲಿ ಸೈನ್ಯಕ್ಕೆ ಕಳುಸ್ತೀನಿ..ಅಂತ ಅವಳಲ್ಲಿ ಯೋಚನೆ ಬಂತಾದರು ....ಮತ್ತೇ ಪೆಟ್ಟಿಗೆಯಲ್ಲಿ ಹೊತ್ತು ತಂದ ತನ್ನ ಗಂಡನ ಮುಖ ನೆನಪಾಗಿ ಇಲ್ಲ ಇಲ್ಲ...ನನ್ ಕಣ್ಣು ಮುಂದೇನೆ ಇರ್ಲಿ ಇವನು...ನಾನು ಮತ್ತೆ ಅದೇ ಸಂಧರ್ಭನ ಎದುರಿಸೋ ಗಟ್ಟಿತನ ನಂಗಿಲ್ಲ..ಎಂದು ಕೊಂಡು ಎದ್ದಳು..
ರಾಮುವಿಗೆ ಈಗ ಆರು ವರ್ಷ ಮೂಡಿಗೆರೆಯಲ್ಲೇ ಶಾಲೆಗೆ ಸೇರಿಸಿದಳು...
ಅಜ್ಜಿ ತಾತನ ...ಅಮ್ಮನ ಅಕ್ಕರೆಯಲ್ಲಿ ...ವರ್ಷಗಳು ದಿನಗಳಂತೆ ಕಳೆದವು....
ರಾಮುವಿಗೆ ಓದಿನ ಕಡೆ ಗಮನ ಕಡಿಮೆಯೇ..
ಹೈಸ್ಕೂಲಿನ ಕೊನೆ ವರ್ಷ ಹತ್ತನೇ ತರಗತಿ ಹತ್ತಿದರೆ ಕಾಲೇಜಿನ ಮೆಟ್ಟಿಲು ಹತ್ತಬಹುದು ಅಂತ ಕಷ್ಟ ಬಿದ್ದು ಓದಿ ಜಸ್ಟ್ ಪಾಸ್ ಆದ ಈಗ ರಾಮುವಿನ ಮುಖದಲ್ಲಿ ಆಗ ತಾನೇ ಚಿಗುರು ಮೀಸೆ ಮೂಡುತಿತ್ತು...
ಕಾಲೇಜಿಗೆ ಹಾಸನಕ್ಕೆ ಸೇರ್ಕೋತಿನಿ ಅಂತ ಹಠ ಮಾಡಿ ಹಾಸ್ಟೆಲ್ ಸೇರಿ ಕಾಲೇಜು ಓದು ಆರಂಭವಾಯ್ತು ...
ಇತ್ತ ಕಡೆ ಮನೆಯವರಲ್ಲಿ ರಾಮುವಿನ ಮೇಲೆ ಹೊಸ ಹೊಸ ಕನಸುಗಳನ್ನ ಹೆಣೆಯುತ್ತ ಮನೆಯಲ್ಲಿ ಶಾಂತ ರಾಮು ಓದು ಮುಗಿದ ಮೇಲೆ...ಒಂದು ಕೆಲಸ .. ಮದುವೆ ಅಂತ ಆಗ್ಬಿಟ್ರೆ ನನ್ನ ಜವಾಬ್ದಾರಿ ಮುಗಿಯುತ್ತೆ ಎಂದೆಲ್ಲ...ಯೋಜನೆ ರೂಪಿಸುತಿದ್ದಳು..
ಇತ್ತ ಕಡೆ ಸಹವಾಸ ಸರಿ ಇಲ್ಲದೆ...ರಾಮು ಸಿಗರೇಟು ....ಕುಡಿತ ಮೈಗೆ ಅಂಟಿಸಿಕೊಂಡಿದ್ದ...ರಜಾ ದಿನಕ್ಕೆ ಮನೆಗೆ ಬಂದಾಗ ಮಗನ ಪ್ಯಾಂಟನ್ನು ತೊಳಿವಾಗ ಜೋಬಿನಲ್ಲಿ ಸಿಗರೇಟ್ ಪ್ಯಾಕ್ ನೋಡಿ ಬೆಚ್ಚಿ ಬಿದ್ದಿದ್ದಳು ಶಾಂತ...
ರಾಮು ಕರೆದು ವಿಚಾರಿಸಿದಾಗ ಅದು ನಂದಲ್ಲ...ಏನೋ ಒಂದು ಸುಳ್ಳು ಹೇಳಿ ನುಸುಳಿಕೊಂಡಿದ್ದ...
ಇನ್ನೊಂದು ವಾರದಲ್ಲಿ ಅವನ ಬರ್ತಡೇ ....ಮಗನಿಗೆ ಹದಿನೇಳು ತುಂಬುತ್ತೇ...ಅನ್ನೋ ಸಂತೋಷದಲ್ಲಿ ಆ ದಿನಕ್ಕೆ ಸಿಹಿ ತಿಂಡಿಗಳನ್ನ ಮಾಡಬೇಕು ಅನ್ನೋ ಯೋಜನೆ ಹಾಕಿದ್ದಳು....ಆ ದಿನ ಆಡಿದಂತೆ ಬಂತು ಗಂಡನಿಗೆ ದೀಪ ಹಚ್ಚಿಟ್ಟು .. ಮಗನಿಗೆ ಇಷ್ಟವಾಗುತ್ತೆ ಅಂತ ಕೊಬ್ಬರಿ ಮಿಠಾಯಿ ಪಾಯಸ ಮಾಡಿದ್ದಳು ...
ಅವತ್ತು ಬೆಳಗ್ಗೆ ಸ್ನೇಹಿತರಿಗೆ ಪಾರ್ಟಿ ಕೊಡುಸ್ಬೇಕು ಅಂತ ಐನೂರು ರೂಪಾಯನ್ನ ತಾತನಿಂದ ಕೇಳಿ ತಗೊಂಡು ಹೋದವನು ಸಂಜೆ ಏಳು ಸರಿದರು ಬಂದಿಲ್ಲ...ತಾತಾ ಕೇಕ್ ಎಲ್ಲಾ ತಂದು ಅವನ ಬರುವಿಕೆಗೆ ಕಾಯುತ್ತಾ ಇದ್ದರಾದರು ...ಗಂಟೆ ಒಂಬತ್ತು ಬಡಿದಾಗ ಬಂದ ತೂರಾಡುತ್ತ ....ಬಾಗಿಲು ಹಿಡಿದು ದೂಡಿ ರೂಮಿಗೆ ಹೋದ ..
ಇದೇನು ತನ್ನ ಮಗನ ಅವಸ್ಥೆ ಎಂದು ಗಾಬರಿಯಾಗಿ ಅವನಿದ್ದ ರೂಮಿಗೆ ಹೋಗಿ ಅವನನ್ನ ಎಳೆದು ಕರೆತಂದಳು ಏನೋ ಕುಡಿಯೋದು ಯಾವಾಗ್ಲೋ ಶುರು ಮಾಡ್ಕೊಂಡೆ ....ಅಯ್ಯೋ ಅಯ್ಯೋ ದೇವರೇ....ಎಂದು ದುಃಖದಿಂದ ಅತ್ತಳು
ಎಂಥಾ ಅಪ್ಪನಿಗೆ ಎಂಥಾ ಮಗ ....ಓದ್ತಿದಾನೆ ಮಗ ಅಂತ ಕಳಿಸಿ ನೆಮ್ಮದಿಯಾಗಿದ್ದೆ...ನೀನು ಚಟ ಕಲ್ತ್ಕೊಂಡು ಬಂದಿದಿಯಲ್ಲೋ ....ಎಂದು ಬೈದು...ಮಗ ಅಪ್ಪನಂತೆ ಅಗ್ತಾನೆ...ಅಂತ ಆಸೆ ಪಟ್ಟೆ...ಆದರೆ ನೀನು ಛೇ....ಎಂಥಾ ಅಪ್ಪನಿಗೆ ಎಂಥಾ ಮಗ...
ಅಮ್ಮನ ಮಾತೆಲ್ಲ ಕೇಳಿಸಿಕೊಂಡು ಕೋಪದಲ್ಲಿ ಕುಡಿದ ಮತ್ತಲ್ಲಿ ನಾನು ಎಲ್ಲರು ತರಾ ಬರ್ತಡೇ ಮಾಡ್ಕೋ ಬೇಕು ಅಂತ....ನನ್ನ ಬರ್ತಡೇ ಅಂತ ಖುಷಿ ಈ ಮನೆಲಿ ಎಲ್ಲಿರುತ್ತೆ ಅದ್ಕೆ ಫ್ರೆಂಡ್ಸ ಜೊತೆ ಹೋಗಿದ್ದೆ ಸ್ವಲ್ಪ ಜಾಸ್ತೀನೆ ಕುಡುದೆ ತಪ್ಪಾ.....
ಅಪ್ಪನಂತಾಗ್ಲಿಲ್ಲ...ಅಪ್ಪನಂತಾಗ್ಲಿಲ್ಲ....ನಾನು ಫೋಟೋ ಆಗ್ಬೇಕಿತ್ತಾ ಅಪ್ಪನ ತರಾ...?..
ಹೋ..ದೇಶ ಸೇವೆ ....ಸೈನಿಕ ಅನ್ನುಸ್ಕೋ ಬೇಕಿತ್ತಾ? ದೇಶ ಸೇವೆ ಮಾಡ್ಬೇಕಿತ್ತಾ...? ಸಂಬಳ ಕೊಡ್ತಾರೆ ಸೇರ್ಕೊಂಡ್ರು ...ದೇಶ ಸೇವೆ ಅಂತ ಸೇರ್ಕೊಂಡ್ರಾ..? ಹೀಗೆಲ್ಲ..ಮನಸ್ಸಿಗೆ ಬಂದ ...ಬಾಯಿಗೆ ಬಂದ ಮಾತೆಲ್ಲ ಆಡಿ ರೂಮಿಗೆ ಹೋಗಿ ಧಡಾರನೇ ಬಾಗಿಲು ಮುಚ್ಚಿ ಮಲಗಿದ...
ಶಾಂತಾಳಿಗೆ ಮಗನ ವರ್ತನೆ ಮಾತು ಮತ್ತಷ್ಟು ದುಃಖ ಹೆಚ್ಚಾಯಿತು....
ತನ್ನ ಗಂಡನಂತೆ ನೂರಾರು ಜನ ದೇಶದ ಗಡಿ ಭಾಗದಲ್ಲಿ ಛಳಿ ...ಗಾಳಿ .ಮಳೆ ಲೆಕ್ಕಿಸದೆ ದೇಶ ಕಾಯೋದು ಕೇವಲ ದುಡ್ಡಿಗೋಸ್ಕರನಾ....ತನ್ನ ತಂದೆಯ ವೃತ್ತಿ ಮೇಲೆ ಮಗನಿಂದ ಅದೆಷ್ಟು ಅಗೌರವದ ಮಾತು....
ದುಡ್ಡು ಸಿಗುತ್ತೆ ಅಂತ ಪ್ರಾಣ ಕೂಡ ಲೆಕ್ಕಿಸದೇ ದೇಶ ಕಾಯೋಕಾಗುತ್ತಾ...ಪ್ರಾಣಕ್ಕಿಂತ ದೊಡ್ಡದೇ ಈ ದುಡ್ಡು?
ನನ್ನ ಗಂಡನ ಬಲಿದಾನವನ್ನ ದೇಶದವರೆಲ್ಲ ಕೊಂಡಾಡಿದ್ದರು ವೀರ ಸ್ವರ್ಗ ಸೇರ್ತಾರೆ....ತಾಯಿ ಭಾರತಿ ಸೇವೆ ಮಾಡೋದು ಮಹಾ ಭಾಗ್ಯ ಅಂತೆಲ್ಲ...ಅದನ್ನ ದುಡ್ಡಿನಲ್ಲಿ ಅಳೆದು ಬಿಟ್ಟನಲ್ಲ...ಅವರದೇ ರಕ್ತದ ಮಗ....
ರಚನೆ
ಶ್ಯಾಮ್ ಪ್ರಸಾದ್ ಭಟ್